ಮಳಖೇಡ ಕೋಟೆ – ಗುಲ್ಬರ್ಗ

0Shares

ಮಳಖೇಡ ಕೋಟೆಯು ಗುಲ್ಬರ್ಗ ಜಿಲ್ಲೆಯ ಸೇಡಂ ತಾಲ್ಲೂಕಿನಲ್ಲಿದೆ. ೮-೧೦ ನೆಯ ಶತಮಾನದವರೆಗೆ ರಾಷ್ಟ್ರಕೂಟರ ರಾಜಧಾನಿಯಾಗಿ ಮೆರೆದ ಮಳಖೇಡದಲ್ಲಿ ಇಂದಿಗೆ ಆ ಕಾಲದ ಕೆಲವು ಅವಶೇಷಗಳು ಮಾತ್ರ ಕಂಡುಬರುತ್ತದೆ. ಆದರೆ ಈಗಿರುವ ಕೋಟೆಯು ೧೭ ನೆಯ ಶತಮಾನದಲ್ಲಿ ರಚನೆಗೊಂಡಿದೆ.

ಕಾಗಿನಾ ನದಿಯ ದಂಡೆಯ ಮೇಲಿರುವ ಮಳಖೇಡದ ಕೋಟೆ ೩ ಸುತ್ತಿನ ಕೋಟೆಯಾಗಿದ್ದು ಹೊರಕೋಟೆಯು ಒಳಕೋಟೆಯನ್ನು ಸಂಪೂರ್ಣವಾಗಿ ಸುತ್ತುವರೆದಿಲ್ಲ. ಕಾಗಿನಾ ನದಿಯೇ ಪ್ರಾಕೃತಿಕವಾಗಿ ಕೋಟೆಯ ದಕ್ಷಿಣದಿಂದ ಪಶ್ಚಿಮವಾಗಿ ಹರಿಯುವುದರಿಂದ ಆ ಜಾಗದಲ್ಲಿ ಮತ್ತೆ ಕಂದಕದ ಅವಶ್ಯಕತೆಯಿಲ್ಲ. ಉತ್ತರದಿಂದ ಪೂರ್ವಕ್ಕೆ ಮಾತ್ರ ಕಂದಕವನ್ನು ನಿರ್ಮಿಸಲಾಗಿದೆ. ಹೊರಕೋಟೆಯನ್ನು ದಪ್ಪನಾದ ಕಲ್ಲುಗಳನ್ನು ಆಯತಾಕಾರವಾಗಿ ಕತ್ತರಿಸಿ ನಿರ್ಮಿಸಲಾಗಿದೆ. ಇದಕ್ಕೆ ಪ್ರಮುಖ ದ್ವಾರವಾಗಿ ಪೂರ್ವ ಮತ್ತು ಈಶಾನ್ಯಕ್ಕೆ ದ್ವಾರಗಳಿವೆ. ಪೂರ್ವದಿಕ್ಕಿನ ಬಾಗಿಲು ಇಂದಿಗೆ ಬಿದ್ದು ಹಾಳಾಗಿದೆ. ಇದಕ್ಕೆ ಉತ್ತರದಲ್ಲಿ ಅರ್ಧವೃತ್ತಾಕಾರದ ದೊಡ್ಡ ಕೊತ್ತಳವಿದೆ. ದಕ್ಷಿಣಕ್ಕೆ ಒಂದರ ನಂತರ ಇನ್ನೊಂದು ಎರಡು ಗೋಡೆಯನ್ನು ನಿರ್ಮಿಸಿಲಾಗಿದೆ. ಹೊರಕೋಟೆಯಲ್ಲಿ ಅರ್ಧವೃತ್ತಾಕಾರ ಹಾಗೂ ಚೌಕಾಕಾರದ ಎರಡೂ ರೀತಿಯ ಕೊತ್ತಳಗಳಿವೆ.

ಮಳಖೇಡ ಕೋಟೆ

ಒಳಕೋಟೆಯನ್ನು ಚಿಕ್ಕ ಚಿಕ್ಕ ಕಲ್ಲುಗಳನ್ನು ಕತ್ತರಿಸಿ ನಯಮಾಡಿ ಕಟ್ಟಲಾಗಿದೆ. ಸುಮಾರು ೬ ಮೀ. ಎತ್ತರವಿರುವ ಈ ಕೋಟೆ ಗೋಡೆಯು ಇಂದಿಗೆ ಅಲ್ಲಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಈ ಕೋಟೆಯ ಮಹಾದ್ವಾರವು ಪೂರ್ವ ದಿಕ್ಕಿನಲ್ಲಿದೆ. ಕೋಟೆಯಲ್ಲಿ ಅರ್ಧ ವೃತ್ತಾಕಾರದ ಹಾಗೂ ಚೌಕಾಕಾರದ ಬುರುಜುಗಳಿವೆ. ಇವುಗಳಲ್ಲಿ ಅತ್ಯಂತ ವಿಶಿಷ್ಟವಾದ ಕರ್ನಾಟಕದ ಯಾವ ಕೋಟೆಯಲ್ಲೂ ಇರದ ಒಂದು ರೀತಿಯ ಬುರುಜಿದೆ. ಅದೆಂದರೆ ಪಶ್ಚಿಮ ದಿಕ್ಕಿನಲ್ಲಿ ಕೆಳಗಿನ ಭಾಗದಲ್ಲಿ ಚೌಕಾಕಾರವಾಗಿದ್ದು ಮೇಲೆ ಮೇಲೆ ಬರುತ್ತ ಅದು ಅರ್ಧವೃತ್ತಾಕಾರವಾಗಿ ರೂಪುಗೊಂಡಿದೆ. ಕೋಟೆಯ ಮೇಲ್ಭಾಗದಲ್ಲಿ ಗಾರೆಯಿಂದ ಮಾಡಿದ ಬಂದೂಕು ಕಿಂಡಿಗಳಿವೆ.

ಇದರ ಮಹಾದ್ವಾರದ ಒಳಗೆ ೩ ಬಾಗಿಲುಗಳಿವೆ. ಮೊದಲನೆಯ ಮುಖ್ಯದ್ವಾರವು ಉತ್ತರಾಭಿಮುಖವಾಗಿದೆ. ಈ ಬಾಗಿಲು ಎರಡು ವೃತ್ತಾಕಾರದ ಕೊತ್ತಳಗಳ ನಡುವೆ ನಿರ್ಮಾಣ ಗೊಂಡಿದೆ. ಮುಖ್ಯ ಬಾಗಿಲು ಕಮಾನಿನ ಆಕಾರದಲ್ಲಿದ್ದು ಪಕ್ಕದಲ್ಲಿ ಒಂದು ಚಿಕ್ಕ ಬಾಗಿಲಿದೆ. ಈ ಆವರಣವನ್ನು ದಾಟಿ ಮುನ್ನಡೆದರೆ ಪಶ್ಚಿಮಕ್ಕೆ ಎರಡನೆಯ ಬಾಗಿಲು ಸಿಗುತ್ತದೆ. ಇದೂ ಸಹ ಕಮಾನಿನ ಆಕಾರದಲ್ಲಿದೆ. ಬಾಗಿಲಿನ ಉತ್ತರ ಭಾಗಕ್ಕೆ ಅಷ್ಟಭುಜಾಕೃತಿಯ ಕೊತ್ತಳವಿದೆ. ದಕ್ಷಿಣಕ್ಕೆ ಕೋಟೆ ಗೋಡೆಯಿದೆ. ಇಲ್ಲಿಯೇ ಒಳಭಾಗದಲ್ಲಿ ಕೋಟೆಯನ್ನು ಹತ್ತಲು ಮೆಟ್ಟಿಲುಗಳಿವೆ.

0Shares
See also  ನರಸಿಂಹ ಗಡ - ಗಡಾಯಿಕಲ್ಲು

Leave a Reply

error: Content is protected !!