ಸಂಕಷ್ಟ ಚತುರ್ಥಿ | ಸಂಕಷ್ಟಿ | ಸಂಕಷ್ಟಹರ ಚತುರ್ಥಿ ಮಹತ್ವ

0Shares

ಸಂಕಷ್ಟ ಚತುರ್ಥಿ ಶ್ರೀ ಗಣೇಶನಿಗೆ ಮೀಸಲಾಗಿರುವ ಒಂದು ಪವಿತ್ರವಾದ ದಿನವಾಗಿದೆ. ಹಿಂದೂ ಪಂಚಾಂಗದ ಪ್ರಕಾರ ಪ್ರತಿ ಕೃಷ್ಣಪಕ್ಷ ಅಥವಾ ಹುಣ್ಣಿಮೆಯ ನಂತರ ಬರುವ ನಾಲ್ಕನೇ ದಿನ ಇದನ್ನು ಆಚರಿಸುತ್ತಾರೆ. ಸಂಕಷ್ಟ ಚತುರ್ಥಿ ಇದನ್ನು ಸಂಕಟಹರ ಚತುರ್ಥಿ ಅಥವಾ ಸಂಕಷ್ಟಿ ಎಂದೂ ಕರೆಯುತ್ತಾರೆ. ಒಂದು ಮಾಸದಲ್ಲಿ ಎರಡು ಚತುರ್ಥಿ ತಿಥಿಗಳಿರುತ್ತವೆ. ಕೃಷ್ಣ ಪಕ್ಷದ ಚತುರ್ಥಿಯನ್ನು ಸಂಕಷ್ಟ ಚತುರ್ಥಿ ಮತ್ತು ಶುಕ್ಲ ಪಕ್ಷದ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ರೀತಿಯಲ್ಲಿ 24 ಚತುರ್ಥಿಗಳು ಮತ್ತು ಪ್ರತಿ ಮೂರು ವರ್ಷಗಳ ನಂತರ ಅಧಿಕ ಮಾಸದಲ್ಲಿ 26 ಚತುರ್ಥಿಗಳು ಬರುತ್ತವೆ. ಪ್ರತಿ ಚತುರ್ಥಿಯ ಮಹಿಮೆ ಮತ್ತು ಪ್ರಾಮುಖ್ಯತೆ ವಿಭಿನ್ನವಾಗಿರುತ್ತದೆ. ಸಂಕಷ್ಟ ಹರ ಚತುರ್ಥಿಯ ಮತ್ತೊಂದು ವಿಶೇಷವೇನೆಂದರೆ ಮಂಗಳವಾರದಂದು ಸಂಕಷ್ಟಹರ ಚತುರ್ಥಿ ಬಂದರೆ ಆ ವ್ರತಕ್ಕೆ ಮತ್ತಷ್ಟು ಹೆಚ್ಚಿನ ಮಹತ್ವವಿದ್ದು, ಅದನ್ನು ಅಂಗಾರಕ (ಮಂಗಳ) ಚತುರ್ಥಿ ಎಂಬ ಹೆಸರಿನಲ್ಲಿ ಆಚರಣೆ ಮಾಡಲಾಗುತ್ತದೆ.

ಸಂಕಷ್ಟ ಚತುರ್ಥಿ ಸಂಕಷ್ಟಿ ಸಂಕಷ್ಟಹರ ಚತುರ್ಥಿ ಮಹತ್ವ

ಸಂಕಷ್ಟ ಚತುರ್ಥಿ | ಸಂಕಷ್ಟಹರ ಚತುರ್ಥಿಯ ಮಹತ್ವ:

ಸಂಕಷ್ಟಹರ ಚತುರ್ಥಿಯ ಆಚರಣೆಗಳಿಗೆ ಸನಾತನ ಧರ್ಮದಲ್ಲಿ ಎರಡು ಪ್ರಮುಖ ಹಿನ್ನೆಲೆಗಳಿವೆ. ಮೊದಲನೆಯದ್ದು ಚತುರ್ಥಿಯ ದಿನದಂದು ಅಂದರೆ ಯಾವ ದಿನ ಸಂಕಷ್ಟಹರ ಚತುರ್ಥಿಯ ಆಚರಣೆ ನಡೆಸಲಾಗುತ್ತದೆಯೋ ಆ ದಿನದಂದು ಗಣೇಶನನ್ನು ಸರ್ವೋಚ್ಛ ದೇವ ಎಂದು ಘೋಷಿಸಲಾಯಿತು ಎಂಬುದು ಒಂದು ನಂಬಿಕೆಯಾದರೆ, ಈ ದಿನದಂದು ಗಣೇಶ ಸ್ವತಃ ಧರೆಗಿಳಿದು ಭಕ್ತರ ಪ್ರಾರ್ಥನೆಗಳನ್ನು ಆಲಿಸುತ್ತಾನೆ, ಆದ್ದರಿಂದ ಚತುರ್ಥಿಯ ದಿನದಂದು ಪ್ರಾರ್ಥಿಸುವವರ ಸಂಕಷ್ಟಗಳು ಸುಲಭವಾಗಿ ಬಗೆಹರಿಯುತ್ತದೆ ಎಂಬುದು ಮತ್ತೊಂದು ನಂಬಿಕೆಯಾಗಿದೆ.

ಗಣೇಶನನ್ನು ಮೆಚ್ಚಿಸಲು ಚತುರ್ಥಿ ಉಪವಾಸವನ್ನು ಆಚರಿಸಲಾಗುತ್ತದೆ. ಅನೇಕ ಮಹಿಳೆಯರು ತಮ್ಮ ಕುಟುಂಬಗಳ ಕಲ್ಯಾಣಕ್ಕಾಗಿ ಸಂಕಷ್ಟ ಚತುರ್ಥಿಯ ದಿನದಂದು ಉಪವಾಸ ವ್ರತವನ್ನು ಆಚರಿಸುತ್ತಾರೆ. ಬಿಕ್ಕಟ್ಟನ್ನು ಸೋಲಿಸುವ ಚತುರ್ಥಿಯನ್ನು ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಸಂಸ್ಕೃತ ಭಾಷೆಯಲ್ಲಿ ಸಂಕಷ್ಟ ಎಂಬ ಪದದ ಅರ್ಥ ಕಷ್ಟದ ಸಮಯಗಳಿಂದ ಮುಕ್ತಿ ನೀಡುವುದು ಎಂಬುದಾಗಿದೆ. ಶ್ರೀ ಗಣೇಶ ಸಂಕಷ್ಟ ಚತುರ್ಥಿ ದಿನ ಎಲ್ಲಾ ತೊಂದರೆ, ಅಡೆತಡೆ ಮತ್ತು ಸಮಸ್ಯೆಗಳನ್ನು ನಿವಾರಿಸುವನೆಂಬ ನಂಬಿಕೆಯಿಂದ ಈ ವ್ರತವನ್ನು ಆಚರಿಸುತ್ತಾರೆ. ಅಂದು ಜನರು ದಿನಪೂರ್ತಿ ಉಪವಾಸವಿದ್ದು ರಾತ್ರಿ ಚಂದ್ರನನ್ನು ನೋಡಿದ ಮೇಲೆಯೇ ಉಪವಾಸವನ್ನು ಕೊನೆಗೊಳಿಸುತ್ತಾರೆ. ಶ್ರೀ ಗಣೇಶನನ್ನು ಪ್ರತಿ ತಿಂಗಳು ಬೇರೆಬೇರೆ ಹೆಸರಿನಿಂದ ಮತ್ತು ತಾವರೆ ಹೂವಿನ ದಳಗಳಿಂದ ಪೂಜಿಸುತ್ತಾರೆ.

ಗಣೇಶ ಪುರಾಣದ ಪ್ರಕಾರ, ಸಂಕಷ್ಟ ಚತುರ್ಥಿ ಇಂದ ದೊರೆಯುವ ಫಲಗಳು ಹೀಗಿದೆ:

  • ದೇಹವನ್ನು ಶುದ್ಧಗೊಳಿಸುತ್ತದೆ.
  • ಆಸೆಗಳನ್ನು ಈಡೇರಿಸುತ್ತದೆ.
  • ಗಣಪತಿಯು ವಿಘ್ನ ನಿವಾರಕನಾದ್ದರಿಂದ, ಸಂಕಷ್ಟ ಚತುರ್ಥಿಯನ್ನು ಆಚರಿಸುವವರ ಕಷ್ಟಗಳನ್ನು ನಿವಾರಣೆ ಮಾಡುತ್ತಾನೆ.
  • ಮಕ್ಕಳಿಲ್ಲದವರಿಗೆ ಮಕ್ಕಳನ್ನು ಕರುಣಿಸುತ್ತಾನೆ.
  • ಕುಜ ದೋಷದಿಂದ ವಿಮುಕ್ತಿಯನ್ನು ಕೊಡಿಸುತ್ತಾನೆ.
  • ಅಕಾಲ ಮರಣದಿಂದ ವಿಮುಕ್ತಗೊಳಿಸುತ್ತಾನೆ.
  • ಕಳೆದು ಹೋದ ಪದಾರ್ಥಗಳನ್ನು ಕೊಡಿಸುತ್ತಾನೆ.
  • ಯುದ್ಧದಲ್ಲಿ ಗೆಲುವನ್ನು ಕೊಡಿಸುತ್ತಾನೆ.
0Shares

Leave a Reply

error: Content is protected !!