ನವರಾತ್ರಿ ವಿಧಗಳು ಮತ್ತು ಅದರ ಮಹತ್ವ

9Shares

ನವರಾತ್ರಿ ಈ ಶಬ್ದ ಕೇಳಿದರೆ ಸಾಕು ಮನಸ್ಸಿನಲ್ಲಿ ಉಲ್ಲಾಸ ಮೂಡುತ್ತದೆ. ಚೈತನ್ಯ ಗರಿಗೆದರುತ್ತದೆ. ಹೌದು, ಇದು ಉಪಾಸಕರಿಗೆ ಉಪಾಸನೆ ಮಾಡಲು ಅತ್ಯಂತ ಪ್ರಶಸ್ತವಾದ ಕಾಲ. ದೇವಿಯ ಅನುಗ್ರಹದ ಜತೆ ದೇಹದ ಸ್ಥಿರತೆ ಕಾಪಾಡಲು ಈ ಕಾಲ ಅತ್ಯಂತ ಉಪಯುಕ್ತವಾಗಿದೆ. ಅನಾದಿ ಕಾಲದಿಂದ ಬಂದಿರುವ ಸಂಪ್ರದಾಯಗಳಲ್ಲಿ ಅನೇಕ ವಿಶೇಷಗಳನ್ನು ಕಾಣಬಹುದು. ದೀಪಾವಳಿ, ಯುಗಾದಿ, ಹೋಳಿ, ನಾಗರ ಪಂಚಮಿ, ವಿನಾಯಕ ಚತುರ್ಥಿ ಮತ್ತಿತರ ಹಬ್ಬಗಳನ್ನು ವರ್ಷದಲ್ಲಿ ಒಮ್ಮೆ ಮಾತ್ರ ಆಚರಿಸುತ್ತೇವೆ. ಆದರೆ ನವರಾತ್ರಿಯನ್ನು ಮಾತ್ರ ಎರಡು ಬಾರಿ ಆಚರಿಸುತ್ತೇವೆ. (ವಿಶೇಷವೆಂದರೆ ಪುರಾತನ ಕಾಲದಲ್ಲಿ ಈ ಹಬ್ಬವನ್ನು ಐದು ನವರಾತ್ರಿಗಳಾಗಿ ಆಚರಿಸುತ್ತಿದ್ದರು. ಕಾಲಕ್ರಮೇಣ ಈಗ ಎರಡು ಬಾರಿ ಆಚರಣೆಗೆ ಮಾತ್ರ ಸೀಮಿತಗೊಂಡಿದೆ).
ಸದ್ಯ ಈಗ ಆಚರಿಸುತ್ತಿರುವ ನವರಾತ್ರಿಗಳು ವಸಂತ ನವರಾತ್ರಿ ಮತ್ತು ಶರನ್ನವರಾತ್ರಿ. ವಸಂತ ನವರಾತ್ರಿ ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದರೂ, ದಕ್ಷಿಣ ಭಾರತದಲ್ಲಿಯೂ ಇದರ ಆಚರಣೆ ನಡೆಯುತ್ತದೆ. ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರದೇವರಿಗೆ ಈ ನವಮಿ ಮೀಸಲಾಗಿದ್ದು, ರಾಮದೇವರ ಜನ್ಮದಿನಾಚರಣೆ ರೂಪವಾಗಿ ಆಚರಿಸಲಾಗುತ್ತದೆ. ಹಾಗೆಯೇ ಶರನ್ನವರಾತ್ರಿಯನ್ನು ದೇಶದೆಲ್ಲೆಡೆ ಸಡಗರ ಸಂಭ್ರಮದಿಂದ ದೇವಿ ಆರಾಧನೆ ರೂಪದಲ್ಲಿ ಆಚರಿಸಲಾಗುತ್ತದೆ.

ನವರಾತ್ರಿ ವಿಧಗಳು ಮಹತ್ವ

ಸಾಮಾನ್ಯವಾಗಿ ಶ್ರೀದುರ್ಗಾದೇವಿಯೂ ಕ್ರೋಧ ಹಾಗೂ ರೌದ್ರ ರೂಪದಲ್ಲಿ ಇರುತ್ತಾಳೆಂದು ಜನರ ನಂಬಿಕೆ. ಆದರೆ ನವರಾತ್ರಿ ವೇಳೆ ಆಕೆಯು ಸಾತ್ವಿಕ ರೂಪತಾಳಿ ನಮ್ಮನ್ನು ಅನುಗ್ರಹಿಸಲೆಂದು ಪೂಜಿಸುವುದು ವಾಡಿಕೆಯಾಗಿದೆ. ಈ ಎರಡೂ ನವರಾತ್ರಿಗಳ ಆಚರಣೆಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುವುದಾದರೇ, ಈ ಹಬ್ಬ ಆಚರಿಸುವ ಎರಡು ತಿಂಗಳು(ಮಾಸ)ಗಳು ಋತು ಬದಲಾವಣೆಯ ತಿಂಗಳಾಗಿವೆ. ವಸಂತ ನವರಾತ್ರಿಯು ಚೈತ್ರಮಾಸದ ಆರಂಭದಲ್ಲಿ ಬರುತ್ತದೆ. ಇದು ಬೇಸಿಗೆ ಆರಂಭದ ವೇಳೆಯಾಗಿದ್ದು, ಆರಂಭದಲ್ಲಿ ಹದವಾದ ಶುಷ್ಕ ವಾತಾವರಣವಿದ್ದರೂ ದಿನಗಳೆದಂತೆ ತಾಪಮಾನ ಏರುತ್ತದೆ. ಇದೇ ರೀತಿ ಶರನ್ನವರಾತ್ರಿಯು ಆಶ್ವಯುಜ ಮಾಸದ ಆರಂಭದಲ್ಲಿ ಆಚರಿಸಲಾಗುತ್ತದೆ. ಈ ದಿನಗಳು ಹದವಾದ ಮಳೆಗಾಲದಿಂದ ಕೂಡಿದ ಅತ್ತ ಬಿಸಿಯೂ ಇಲ್ಲದ ಇತ್ತ ಪೂರ್ತಿ ಚಳಿಯೂ ಅಲ್ಲದ ಕಾಲವಾಗಿದ್ದು ನಂತರ ಚಳಿ ಏರುತ್ತದೆ. ವಿಶೇಷವೆಂದರೆ ಈ ಎರಡೂ ಕಾಲದಲ್ಲಿ ರೈತರಿಗೆ ಬಿಡುವು. ಚೈತ್ರಮಾಸದಲ್ಲಿ ಆಗ ತಾನೇ ಸುಗ್ಗಿ ಮುಗಿದು ರೈತನಿಗೆ ಬಿಡುವು ದೊರೆತಿರುತ್ತದೆ. ಶರನ್ನವರಾತ್ರಿಯಲ್ಲಿ ಬಿತ್ತನೆ ಮಾಡಿದ ಬೆಳೆ ಹುಲುಸಾಗಿ ಬೆಳೆದಿರುತ್ತದೆ, ಇನ್ನೂ ಕಟಾವು ಸಮಯಬಾರದ ಕಾರಣ ಬಿಡುವಾಗಿರುತ್ತಾನೆ. ಇಂತಹ ಸಮಯದಲ್ಲಿ ಭಗವಂತನ ಆರಾಧನೆಗೆ ಯಾವುದೇ ಅಡ್ಡಿಯಾಗುವುದಿಲ್ಲ. ಜತೆಗೆ ಆಹಾರ ಕ್ರಮವೂ ಹೊಸ ಪದ್ಧತಿಗೆ ಹೊಂದಿಕೊಳ್ಳುವಂತೆ ಮಾಡುತ್ತದೆ. ವಸಂತ ನವರಾತ್ರಿ ಸಮಯದಲ್ಲಿ ಹೊಸದಾಗಿ ಬೆಳೆದ ಧಾನ್ಯಗಳಲ್ಲಿ ಉಷ್ಣಾಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದರ ಸಮತೋಲನಕ್ಕಾಗಿ ಹೆಸರುಬೇಳೆ ಕೋಸಂಬರಿ, ಬೆಲ್ಲ – ನಿಂಬೆ – ಕರಬೂಜ ಹಣ್ಣಿನ ಪಾನಕ, ಬೆಣ್ಣೆ ತೆಗೆದು ನೀರು ಸೇರಿಸಿದ ಮಜ್ಜಿಗೆ ಸೇವಿಸಲಾಗುತ್ತದೆ.(ಕೆಲವರು ಉಪವಾಸ ಆಚರಿಸುತ್ತಾರೆ).
ಹಾಗೆಯೇ ಶರನ್ನವರಾತ್ರಿಯ ನಂತರದ ದಿನಗಳು ಚಳಿಗಾಲವಾಗಿದ್ದು, ಅನ್ನದ ಪದಾರ್ಥಗಳು ಹಾಗೂ ದ್ವಿದಳ ಧಾನ್ಯದ ಪದಾರ್ಥಗಳು ಸರಿಯಾಗಿ ಪಚನವಾಗುವುದಿಲ್ಲ. ಇದರ ಸಮತೋಲನೆಗಾಗಿ ನವರಾತ್ರಿ ವೇಳೆ ಹೆಚ್ಚು ಜನ ಅನ್ನ ಸೇವಿಸದೆ ಉಪವಾಸವಿರುತ್ತಾರೆ. ಈ ಸಮಯದಲ್ಲಿ ಹಾಲು, ಹಣ್ಣು, ಎಳನೀರು, ಅವಲಕ್ಕಿ ತಿಂದು ಕಾಲ ಕಳೆಯುತ್ತಾರೆ. ಉಪ್ಪು, ಸಕ್ಕರೆ ಹೆಚ್ಚಾಗಿ ಸೇವಿಸದ ಕಾರಣ ಮುಂದಿನ ಚಳಿಗಾಲದ ದಿನಗಳ ಆಹಾರ ಹೊಂದಾಣಿಕೆಗೆ ದಾರಿಯಾಗುತ್ತದೆ. ಜತೆಗೆ ಉಪವಾಸ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ದೃಢತೆ ಹೆಚ್ಚುತ್ತದೆ.

ನವರಾತ್ರಿ ವಿಧಗಳು ಮತ್ತು ಅದರ ಮಹತ್ವ:

ಒಂದು ವರ್ಷದಲ್ಲಿ ಒಟ್ಟು ಐದು ನವರಾತ್ರಿಗಳು ಬರುತ್ತವೆ:

  1. ವಸಂತ ನವರಾತ್ರಿ
  2. ಗುಪ್ತ ನವರಾತ್ರಿ
  3. ಶರನ್ನವರಾತ್ರಿ
  4. ಪೌಷ ನವರಾತ್ರಿ
  5. ಮಾಘ ನವರಾತ್ರಿ

1). ವಸಂತ ನವರಾತ್ರಿ: ಚೈತ್ರಶುದ್ಧ ಪಾಡ್ಯದಿಂದ ನವಮಿಯವರೆಗೆ. ಶ್ರೀರಾಮನವಮಿ ಬರುವುದರಿಂದ ರಾಮನವರಾತ್ರಿ ಎನ್ನಲಾಗುತ್ತದೆ. ನವ ಶಕ್ತಿಗಳ ಆರಾಧನೆ ನಡೆಯುತ್ತದೆ.

2).ಗುಪ್ತ ನವರಾತ್ರಿ: ಆಷಾಢ ಮಾಸದ ಶುಕ್ಲಪಕ್ಷದ ಪಾಡ್ಯಮಿಯಿಂದ ನವಮಿಯವರೆಗೆ. ಈ ವೇಳೆ ಗಾಯತ್ರಿ ದೇವಿಯ ಜತೆ ನವ ಶಕ್ತಿ ಆರಾಧನೆ ನಡೆಯುತ್ತದೆ.

3). ಶರನ್ನವರಾತ್ರಿ: ಶ್ರೀದುರ್ಗಾದೇವಿಯ ಒಂಭತ್ತು ರೂಪಗಳನ್ನು ಆರಾಧಿಸಲಾಗುತ್ತದೆ.

4). ಪುಷ್ಯಮಾಸದ ಪೌಷ ನವರಾತ್ರಿ ಹಾಗೂ 5). ಮಾಘ ಮಾಸದ ಮಾಘ ನವರಾತ್ರಿ ದೇವಿ ಆರಾಧನೆಗೆ ಪ್ರಶಸ್ತಕಾಲಗಳಾದರೂ ಚಾಲನೆಯಲ್ಲಿಲ್ಲ. ಆದರೆ ಮಾಘಮಾಸದಲ್ಲಿ ಜಗದ್ಗುರು ಶ್ರೀಮಧ್ವಾಚಾರ್ಯರು ಸಶರೀರರಾಗಿ ಬದರೀಕಾಶ್ರಮ ಪ್ರವೇಶಿಸಿದರು. ತದಂಗವಾಗಿ ಪ್ರತಿಪದೆಯಿಂದ ನವಮಿವರೆಗೆ ಮಧ್ವನವಮಿ ಆಚರಿಸಲಾಗುತ್ತಿದೆ.

ಶರನ್ನವರಾತ್ರಿ:

ದುಷ್ಟ ಶಕ್ತಿ ನಿಗ್ರಹಗೊಂಡು ಶಿಷ್ಟರಿಗೆ ಒಳಿತಾಗಲಿ ಎಂದು ಪ್ರಾರ್ಥಿಸಲಾಗುವ ಈ ನವರಾತ್ರಿ ಅನೇಕ ವೈಶಿಷ್ಟ್ಯತೆ ಪಡೆದಿದೆ. ಒಂಭತ್ತು ದಿನಗಳ ಕಾಲ ಶ್ರೀದುರ್ಗಾದೇವಿಯನ್ನು ಪೂಜಿಸಿ ಆಕೆಯನ್ನು ಶರಣು ಹೋಗಲು ಅತ್ಯಂತ ಪ್ರಶಸ್ತಕಾಲ. ಬೇರೆ ದಿನಗಳಿಗಿಂತ ಈ ನವದಿನಗಳಲ್ಲಿ ದೇವಿಯ ಸಾನ್ನಿಧ್ಯ ಅನೇಕ ಪಟ್ಟು ಹೆಚ್ಚಿರುತ್ತದೆ. ದುಷ್ಟ ಶಿಕ್ಷಣೆ, ಶಿಷ್ಟ ರಕ್ಷಣೆ ಮಾಡುವ ದೇವಿಯ ಅನುಗ್ರಹ ಪ್ರಾಪ್ತವಾಗುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ಈ ದಿನಗಳಲ್ಲಿ ಆಸ್ತಿಕರು ಶ್ರದ್ಧಾ ಭಕ್ತಿಯಿಂದ ತಾಯಿಯನ್ನು ಆರಾಧಿಸುತ್ತಾರೆ.

ಈ ನವರಾತ್ರಿಯ ವೈಶಿಷ್ಟ್ಯ ಹಲವಾರು. ಅಜ್ಞಾತವಾಸದಲ್ಲಿದ್ದ ಪಾಂಡವರು ಬನ್ನಿ ಮರಕ್ಕೆ ಕಟ್ಟಿದ್ದ ಅವರ ಆಯುಧಗಳನ್ನು ಶರನ್ನವರಾತ್ರಿಯ ನವಮಿ ದಿನದಂದು ಪೂಜಿಸಿ ಮರಳಿ ಕೈಗೆ ಪಡೆದರು. ಹಾಗೆಯೇ ಶ್ರೀರಾಮಚಂದ್ರಪ್ರಭು ರಾವಣನನ್ನು ವಧಿಸಲೆಂದು ನಾರದರಿಂದ ಉಪದೇಶ ಪಡೆದು ನವರಾತ್ರಿಯನ್ನು ಶ್ರದ್ಧೆಯಿಂದ ಆಚರಿಸಿ, ರಾವಣನನ್ನು ನವರಾತ್ರಿ ಕಾಲದಲ್ಲೇ ವಧಿಸಿದ. ಶ್ರೀದುರ್ಗಾದೇವಿ ಒಂಭತ್ತು ದಿನಗಳ ಕಾಲ ಮಹಿಷಾಸುರ ಎಂಬ ರಕ್ಕಸನ ಜತೆ ಯುದ್ಧಮಾಡಿ ನವರಾತ್ರಿಯ ಮಹಾನವಮಿಯಂದು ಸಂಹರಿಸಿದಳು. ಅಲ್ಲದೇ ಕೌರವರನ್ನು ಕೊಂದ ಪಾಂಡವರು, ನವರಾತ್ರಿಯ ವೇಳೆ ಮರಳಿ ಧರ್ಮಸಾಮ್ರಾಜ್ಯವನ್ನು ಸ್ಥಾಪಿಸಿದರು.

ಭೂ ವೈಕುಂಠಪತಿ ಶ್ರೀ ಶ್ರೀನಿವಾಸ ದೇವರ ಬ್ರಹ್ಮರಥೋತ್ಸವ ನಡೆಯುವುದು ಇದೇ ನವರಾತ್ರಿಯಲ್ಲೇ. ವೈಶಾಖ ಮಾಸದ ಪಾಡ್ಯಮಿಯಿಂದ ದಶಮಿಯವರೆಗೆ ಶ್ರೀ ಶ್ರೀನಿವಾಸ ಹಾಗೂ ಪದ್ಮಾವತಿಯರ ವಿವಾಹ ಕಾರ್ಯ ನಡೆಯಿತು. ವೈಶಾಖ ಶುದ್ಧ ದಶಮಿಯಂದು ಶ್ರೀಹರಿ ಶ್ರೀದೇವಿಯನ್ನು ಪಾಣಿಗ್ರಹಣ ಮಾಡಿದ. ನವ ದಂಪತಿ ಆರು ತಿಂಗಳ ಕಾಲ ಪರ್ವತ ಹತ್ತಬಾರದೆಂಬ ನಿಯಮದ ಪ್ರಕಾರ ಶ್ರೀನಿವಾಸ ಹಾಗೂ ಪದ್ಮಾವತಿಯರು ಶ್ರೀನಿವಾಸ ಮಂಗಾಪುರದಲ್ಲಿ ವಾಸವಾಗಿದ್ದರು. ಆರು ತಿಂಗಳ ನಂತರ ತಿರುಮಲೆಗೆ ಬಂದ ದಂಪತಿಯನ್ನು ಬ್ರಹ್ಮದೇವರು ಶಮಿ(ಬನ್ನಿ)ಯಿಂದ ತಯಾರಿಸಿದ ರಥದಲ್ಲಿ ಕೂರಿಸಿ ರಥೋತ್ಸವ ಮಾಡಿದ್ದರು. ಇಂದಿಗೂ ನವರಾತ್ರಿ ವೇಳೆಯೇ ತಿರುಮಲೆಯಲ್ಲಿ ಬ್ರಹ್ಮರಥೋತ್ಸವ ನಡೆಯುತ್ತದೆ.
ಶರನ್ನವರಾತ್ರಿ ಬರುವ ಆಶ್ವಯುಜ ಮಾಸಕ್ಕೆ ಪದ್ಮನಾಭರೂಪಿ ಪರಮಾತ್ಮನು ನಿಯಾಮಕನಾಗಿದ್ದಾನೆ. ಹಾಗಾಗಿ ಈ ನವರಾತ್ರಿಯಲ್ಲಿ ಶ್ರೀನಿವಾಸ ಕಲ್ಯಾಣ, ಭಾಗವತಾದಿ ಗ್ರಂಥಗಳ ಪಾರಾಯಣ ಮತ್ತು ಶ್ರವಣ ಮಾಡಬೇಕು. ಇದರ ಜತೆ ಈ ಒಂಭತ್ತು ದಿನಗಳ ಕಾಲ ದೇವಿಯ ನಾನಾ ರೂಪಗಳನ್ನು ಸ್ಮರಿಸಿ ಪೂಜಿಸಬೇಕು ಎನ್ನುತ್ತದೆ ಮಾರ್ಕಂಡೇಯ ಪುರಾಣ. ಮೊದಲ ದಿನ ಶೈಲಪುತ್ರಿ, 2ನೇಯ ದಿನ ಬ್ರಹ್ಮಚಾರಿಣಿ, 3ನೇಯ ದಿನ ಚಂದ್ರಘಂಟಾ, 4ನೇಯ ದಿನ ಕೂಷ್ಮಾಂಡ, 5ನೇಯ ದಿನ ಸ್ಕಂಧ ಮಾತಾ, 6ನೇಯ ದಿನ ಕಾತ್ಯಾಯನಿ, 7ನೇಯ ದಿನ ಕಾಳರಾತ್ರಿ, 8ನೇಯ ದಿನ ಮಹಾಗೌರಿ ಹಾಗೂ 9ನೇಯ ದಿನ ಸಿದ್ಧಿದಾತ್ರಿ ರೂಪದಲ್ಲಿ ದೇವಿಯನ್ನು ಪೂಜಿಸಬೇಕು. ಈ ಮೂಲಕ ಈ ದೇವಿಯರ ಅಂತರ್ಗತಳಾದ ಶ್ರೀ ಭೂ ದುರ್ಗಾ ಸ್ವರೂಪಿಣಿಯಾದ ಮಹಾಲಕ್ಷ್ಮಿಯನ್ನು ವಿಶೇಷವಾಗಿ ಅರ್ಚಿಸಬೇಕು. ಇದರ ಜತೆ ನವರಾತ್ರಿ ವೇಳೆ ಬ್ರಹ್ಮಾಣಿ, ವೈಷ್ಣವಿ, ಮಾಹೇಶ್ವರಿ, ಇಂದ್ರಾಣಿ, ಕೌಮಾರಿ, ವಾರಾಹಿ ಮತ್ತು ಚಾಮುಂಡಾ ಎಂಬ ಸಪ್ತ ಮಾತೃಕೆಯರ ಆರಾಧನೆ ಮಾಡಬೇಕು. ಮೂಲಾ ನಕ್ಷತ್ರವಿರುವ ದಿನ ಶ್ರೀವೇದವ್ಯಾಸರು ಹಾಗೂ ಶ್ರೀಸರಸ್ವತಿ ದೇವಿಯರ ಪೂಜೆ ಮಾಡಬೇಕು. ನಾಲ್ಕು ದಿನಗಳ ಪರ್ಯಂತ ಸರಸ್ವತಿಗೆ ಪೂಜೆ ಸಲ್ಲಿಸಬೇಕು.

ಬರಹ: ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ, ಆನೇಕಲ್

9Shares

Leave a Reply

error: Content is protected !!