ಮಧ್ವ ನವಮಿ ಆಚರಣೆ

0Shares

ಮಧ್ವ ನವಮಿ ಮಹಾನ್ ಧಾರ್ಮಿಕ ಸುಧಾರಕ, ದ್ವೈತ ಮತ ಸ್ಥಾಪಕ ಮತ್ತು ಬ್ರಹ್ಮ ಸೂತ್ರಗಳು ಮತ್ತು ಉಪನಿಷತ್ತುಗಳ ವ್ಯಾಖ್ಯಾನಕಾರರಾದ ಮಧ್ವಾಚಾರ್ಯರ ಆರಾಧನೆಯ ಪುಣ್ಯ ದಿನವಾಗಿದೆ. ಇದನ್ನು ಮಾಘ ಮಾಸದ ಶುಕ್ಲ ಪಕ್ಷದ 9 ನೇ (ನವಮಿ ತಿಥಿಯಂದು) ದಿನದಂದು ಆಚರಿಸಲಾಗುತ್ತದೆ.

ಮಧ್ವ ನವಮಿ ಆಚರಣೆ

‘ಪ್ರಥಮೋ ಹನುಮನ್ನಾಮ ದ್ವಿತೀಯೋ ಭೀಮ ಏವಚ ಪೂರ್ಣಪ್ರಜ್ಞ ತೃತೀಯಸ್ತು ಭಗವತ್ಕಾರ್ಯ ಸಾಧಕ’
ಮೊದಲು ತ್ರೇತಾಯುಗದಲ್ಲಿ ಹನುಮಂತನಾಗಿ, ರಾಮಬಂಟನೆನಿಸಿ ನಂತರ ದ್ವಾಪರ ಯುಗದಲ್ಲಿ ಭೀಮಸೇನರಾಗಿ ಈ ಕಲಿಯುಗದಿ ಪೂರ್ಣಪ್ರಜ್ಞರೆನಿಸಿ ವೇದವ್ಯಾಸರ ಸೇವೆ ಮಾಡಿ ಭಗವತ್ಕಾರ್ಯ ಸಾಧನೆಗಳನ್ನು ಮಾಡಿದವರು ಶ್ರೀ ಮಧ್ವಾಚಾರ್ಯರು. ಮಧ್ವಾಚಾರ್ಯರು ೭೯ ವರ್ಷಗಳ ಕಾಲ ಗೋಚರರಾಗಿದ್ದರು. ಅಂದು ಪಿಂಗಳ ಸಂವತ್ಸರ ಮಾಘ ಶುದ್ಧ ನವಮಿ (ಕಲಿ ೪೪೧೮ [ಕ್ರಿ.ಶ.೧೩೧೭]) ಉಡುಪಿಯ ಅನಂತೇಶ್ವರ ಗುಡಿಯಲ್ಲಿ ಬೆಳಗ್ಗೆ ತಮ್ಮ ಶಿಷ್ಯರಿಗೆ ಐತರೇಯ ಉಪನಿಷದ್ ಭಾಷ್ಯವನ್ನು ಬೋಧಿಸುತ್ತಿದ್ದರು, ಉಪನಿಷದ್ ಭಾಷ್ಯ ಮುಗಿಯುತ್ತಿದ್ದಂತೆ ಮುಸಲಧಾರೆಯಂತೆ ಪುಷ್ಪ ವೃಷ್ಟಿಯಾಯಿತು. ಅದು ನಿಂತ ಮೇಲೆ, ಶಿಷ್ಯರು ಆ ಹೂಗಳನ್ನು ಸರಿಸಿ ನೋಡಿದಾಗ ಮಧ್ವ ಗುರುಗಳು ಅಲ್ಲಿ ಕಾಣಿಸಲಿಲ್ಲ! ಅದೃಶ್ಯರಾಗಿದ್ದರು. ಅವರು ಬದರಿಕಾಶ್ರಮವನ್ನು ಪ್ರವೇಶಿಸಿದ ದಿನವೆಂದು ಪರಿಗಣಿಸಲಾಗಿದೆ.  ಈ ದಿನವನ್ನು ಮಧ್ವ ನವಮಿ ಎಂದು ಇಂದಿಗೂ ಆಚರಿಸುತ್ತಾರೆ. ಕಾಲಕ್ರಮೇಣ ಇವರ ತತ್ವವಾದವು ಭಕ್ತಿ ಪಂಥಕ್ಕೂ, ಹರಿದಾಸ ಪಂಥಕ್ಕೂ ದಾರಿಮಾಡಿ ಕೊಟ್ಟಿತು. ಸಂಗೀತದ ಪ್ರೋತ್ಸಾಹಕ್ಕೂ, ಕನ್ನಡದಲ್ಲಿ ದಾಸ ಪಂಥದ ಮಾರ್ಗ ಬೆಳೆಯಲೂ ಇವರ ದರ್ಶನ ಸ್ಪೂರ್ತಿ ನೀಡಿತು.

ಶ್ರೀ ಮಧ್ವಾಚಾರ್ಯರು ಅದೃಶ್ಯವಾದ ಸ್ಥಳ

ಉಡುಪಿ ಶ್ರೀ ಅನಂತೇಶ್ವರ ದೇವಸ್ಥಾನ – ಶ್ರೀ ಮಧ್ವಾಚಾರ್ಯರು ಅದೃಶ್ಯವಾದ ಸ್ಥಳ

ಶ್ರೀ ಮಧ್ವಾಚಾರ್ಯರ ಸನ್ನಿಧಿ

ಉಡುಪಿಯ ಶ್ರೀ ಅನಂತೇಶ್ವರ ದೇವಸ್ಥಾನ – ಶ್ರೀ ಮಧ್ವಾಚಾರ್ಯರ ಸನ್ನಿಧಿ

ಹರಿ ಸರ್ವೋತ್ತಮ ವಾಯು ಜೀವೋತ್ತಮ

ಮಧ್ವಾಚಾರ್ಯರ ತತ್ತ್ವಶಾಸ್ತ್ರದ ಪ್ರಕಾರ, ಭಗವಾನ್ ವಿಷ್ಣುವು (ಹರಿ) ಪರಮಾತ್ಮನಾಗಿದ್ದು, ತನ್ನ ಪತ್ನಿ ಶ್ರೀ ಲಕ್ಷ್ಮಿಯೊಂದಿಗೆ ವೈಕುಂಠದಲ್ಲಿ ನೆಲೆಸಿದ್ದಾನೆ. ನಾವು ನೋಡುವ ಜಗತ್ತು ನಿಜ ಮತ್ತು ವ್ಯತ್ಯಾಸವು ನಿಜ. ವಿಷ್ಣು ಮಾತ್ರ ಸ್ವತಂತ್ರ ವಾಸ್ತವ. ಎಲ್ಲಾ ಆತ್ಮಗಳು ಮತ್ತು ಪ್ರಪಂಚವು ವಿಷ್ಣುವಿನ ಮೇಲೆ ಅವಲಂಬಿತವಾಗಿದೆ ಮತ್ತು ವಿಷ್ಣುವಿನಿಂದ ಪ್ರತ್ಯೇಕವಾಗಿದೆ. ಭಕ್ತಿಯೊಂದೇ ಮೋಕ್ಷವನ್ನು ಪಡೆಯುವ ಸಾಧನವಾಗಿದೆ.

ಮಧ್ವಾಚಾರ್ಯರ ಬೋಧನೆಗಳ ಕುರಿತು ಬರೆಯುತ್ತಾ ಸ್ವಾಮಿ ಶಿವಾನಂದರು ಹೇಳುತ್ತಾರೆ. “ದ್ಯಾನದ ಮೂಲಕ ತ್ಯಾಗ, ಭಕ್ತಿ ಮತ್ತು ಭಗವಂತನ ಪ್ರತ್ಯಕ್ಷ ಅರಿವು ಮೋಕ್ಷದ ಪ್ರಾಪ್ತಿಗೆ ಕಾರಣವಾಗುತ್ತದೆ. ಆಕಾಂಕ್ಷಿಯು ಭಗವಂತನ ದರ್ಶನವನ್ನು ಹೊಂದಲು ಬಯಸಿದರೆ ವೇದಗಳ ಅಧ್ಯಯನ, ಇಂದ್ರಿಯಗಳ ನಿಯಂತ್ರಣ, ನಿರ್ಲಿಪ್ತತೆ ಮತ್ತು ಪರಿಪೂರ್ಣ ಸ್ವಯಂ ಶರಣಾಗತಿಯೊಂದಿಗೆ ತನ್ನನ್ನು ತಾನು ಸಜ್ಜುಗೊಳಿಸಿಕೊಳ್ಳಬೇಕು. ತತ್ತ್ವಶಾಸ್ತ್ರದ ದ್ವಂದ್ವ ಶಾಲೆಯ ಹೆಸರಾಂತ ಪ್ರತಿಪಾದಕರಾದ ಮಧ್ವಾಚಾರ್ಯರ ಕೆಲವು ಪ್ರಮುಖ ಬೋಧನೆಗಳು ಇವು.”

ಮಧ್ವನವಮಿಯ ಪ್ರಯುಕ್ತ ಉಡುಪಿಯ ಶ್ರೀ ಅನಂತೇಶ್ವರ ದೇವಸ್ಥಾನದ ಶ್ರೀ ಮಧ್ವಾಚಾರ್ಯರ ಸನ್ನಿಧಿಯಲ್ಲಿ ಅಷ್ಟ ಮಠದ ಸ್ವಾಮಿಗಳು ವಿಶೇಷ ಪೂಜೆ ಸಲ್ಲಿಸುತ್ತಾರೆ. ಮತ್ತು ವಿಧಿವಿಧಾನಗಳು ಹಾಗೂ ರಥೋತ್ಸವ ವಿಜೃಂಭಣೆಯಿಂದ ಜರಗುತ್ತದೆ.

ಶ್ರೀ ಮಧ್ವಾಚಾರ್ಯರ ಸನ್ನಿಧಿ ಪೂಜೆ

ಉಡುಪಿಯ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿಯ ಶ್ರೀ ಮಧ್ವಾಚಾರ್ಯರ ಅದೃಶ್ಯವಾದ ಸ್ಥಳದಲ್ಲಿ ಪಲಿಮಾರು ಶ್ರೀಪಾದರಿಂದ ಪೂಜೆ. (30-01-2023)

ಉಡುಪಿಯ ಕುಂಜಾರುಗಿರಿಯ ಪಕ್ಕದ ಪಾಜಕ ಕ್ಷೇತ್ರ ಮಧ್ವಾಚಾರ್ಯರ ಜನ್ಮಸ್ಥಳ. ಈ ಸ್ಥಳದಲ್ಲೇ ಅವರು ವಾಸಿಸಿದ ಮನೆ ಹಾಗೂ ಅವರು ಜಪ ತಪ ಮಾಡಿದ ಜಾಗ ಸ್ನಾನ ಮಾಡಲು ಉಪಯೋಗಿಸಿದ ಬಾವಿ ಕೂಡ ಇದೆ. ಅದೇ ಮನೆಯಲ್ಲಿ ವಾಸ ಮಾಡುತ್ತಿರುವವರಿಂದ ಒಂದು ಲೋಟ ಬಿಸಿ ಹಾಲು ಕುಡಿದಾಗ ಇದೂ ಕೂಡಾ ಈ ಜನ್ಮದ ಸುಕೃತ ಎಂಬ ಭಾವನೆ ಬಂದಿದೆ. ಉಡುಪಿಯಿಂದ ಮಂಗಳೂರಿಗೆ ಬರುವ ಮಾರ್ಗದಲ್ಲಿ ಸಿಗುವ ಕಟಪಾಡಿಯಲ್ಲಿ ಎಡಕ್ಕೆ ತಿರುಗಿದರೆ ಮೊದಲಿಗೆ ಕುರ್ಕಾಲು ಎಂಬ ಗ್ರಾಮ ಸಿಗುತ್ತದೆ. ಅದರ ಪಕ್ಕದ್ದು ಪರಶುರಾಮ ಕ್ಷೇತ್ರ ಕುಂಜಾರುಗಿರಿ. ಅದರ ಪಕ್ಕದಲ್ಲಿ ಮಧ್ವರ ಜನ್ಮಸ್ಥಳ ಪಾಜಕ, ಪಾಜೈ, ಪಡುಪಾಜೈ ಎಲ್ಲವೂ ನಯನ ಮನೋಹರವಾಗಿದೆ.

See also  ಶ್ರೀರಾಮ ನವಮಿ ಹಬ್ಬದ ಮಹತ್ವ ಮತ್ತು ಆಚರಣೆ
0Shares

Leave a Reply

error: Content is protected !!