ತಪ್ತಮುದ್ರಾಧಾರಣೆ

0Shares

ತಪ್ತಮುದ್ರಾಧಾರಣೆ ಆಚರಣೆ ದಿನ : ಗುರುವಾರ, 29 ಜೂನ್ 2023

ವೈಷ್ಣವರಿಗೆ ಆಷಾಡ ಶುದ್ಧ ಏಕಾದಶಿ(ಪ್ರಥಮ ಏಕಾದಶಿ)ಯಂದು ನಡೆಯುವ ತಪ್ತಮುದ್ರಾಧಾರಣೆ ಪರಮ ಪವಿತ್ರವಾದದ್ದು. ಈ ಸಮಯದಲ್ಲಿ ಸೂರ್ಯ ದಕ್ಷಿಣಕ್ಕೆ ವಾಲುತ್ತಾನೆ. ಅಂದರೆ ಭಗವಂತ ಮಲಗಿದಾಗ, ನಾವು ಮಲಗಿ ಆತನನ್ನು ಮರೆಯಬಾರದು. ಆತನ ಚಿಹ್ನೆಯಾದ ಶಂಖ ಮತ್ತು ಚಕ್ರಗಳು ಅಚ್ಚೊತ್ತಿರಬೇಕು ಎಂಬ ಭಾವನೆಯಿಂದಲೆ ಶಯನೈಕಾದಶಿಯಂದು ತಪ್ತಮುದ್ರಾಧಾರಣೆ ಸಂಸ್ಕಾರ ಬೆಳೆದು ಬಂದಿದೆ. ದೇಹ ಸಂಸ್ಕಾರ ನಾನಾ ಬಗೆ. ಜಾತಕರ್ಮ(ಜನನ), ಉಪನಯನ, ಸ್ನಾನಶೌಚಾದಿ, ಶುಚಿಭೋಜನಾದಿ, ಉಪವಾಸಾದಿ, ಸ್ವಯಂ ಶ್ರೀಹರಿಯ ಆಯುಧಗಳ ಮುದ್ರಾಧಾರಣ. ಇದರಿಂದ ಸಂಸ್ಕಾರಗೊಂಡ ದೇಹ ಅಂತಃಸತ್ವವೆಂಬ ಶುದ್ದಿ ಪಡೆದು ಸಾಧನಕ್ಕೆ ಹದಗೊಳ್ಳುತ್ತದೆ.

ತಪ್ತಮುದ್ರಾಧಾರಣೆ

ಈ ದಿನ ತಾಮ್ರದಿಂದ ತಯಾರಿಸಿದ ಶ್ರೀವಿಷ್ಣುವಿನ ಚಿಹ್ನೆಗಳಾದ ಸುದರ್ಶನ(ಚಕ್ರ) ಹಾಗೂ ಪಾಂಚಜನ್ಯ (ಶಂಖ) ಮುದ್ರೆಗಳನ್ನು ಬೆಂಕಿಯಲ್ಲಿ ಕಾಯಿಸಿ ದೇಹದ ಮೇಲೆ ಒತ್ತಲಾಗುತ್ತದೆ. ಇಂದು ಎಲ್ಲ ಮಾಧ್ವ ಮಠಾಧಿಪತಿಗಳು ಈ ಕಾಯಕ ನಡೆಸುತ್ತಾರೆ. ಯತಿಗಳು ಬೆಳಗ್ಗೆ ಸಂಸ್ಥಾನ ಪೂಜೆ ನಡೆಸುತ್ತಾರೆ. ಇದೇ ವೇಳೆ ಶ್ರೀಸುದರ್ಶನ ಹೋಮ ನಡೆಯುತ್ತದೆ, ಪೂರ್ಣಾಹುತಿಯ ನಂತರ ಗುರುಗಳು ತಾಮ್ರದಿಂದ ತಯಾರಿಸಿದ ಮುದ್ರೆಗಳನ್ನು ಅದೇ ಅಗ್ನಿ(ಬೆಂಕಿ)ಯಲ್ಲಿ ಕಾಯಿಸಿ ಸ್ವಯಂ ಮುದ್ರೆ ಹಚ್ಚಿಕೊಳ್ಳುತ್ತಾರೆ. ನಂತರ ಶಿಷ್ಯರಾದಿಯಾಗಿ ಎಲ್ಲರಿಗೂ ಮುದ್ರೆ ಹಾಕುತ್ತಾರೆ. ಈ ಶ್ರೀಹರಿಯ ಲಾಛನಗಳನ್ನು ಭುಜಗಳ ಮೇಲೆ ಧರಿಸಲು ಜಾತಿ ಹಾಗೂ ಮತಗಳ ಹಂಗಿಲ್ಲ, ಶ್ರದ್ಧಾಳುಗಳು ಯಾರೂ ಬೇಕಾದರೂ ಮುದ್ರೆ ಹಾಕಿಸಿಕೊಳ್ಳಬಹುದು.

ತಪ್ತಮುದ್ರಾಧಾರಣೆ  ಸಣ್ಣ ಹಿನ್ನೆಲೆ:

ಹಿಂದೊಮ್ಮೆ ಇಂದ್ರಾದಿ ದೇವತೆಗಳೆಲ್ಲ ವೃತ್ರಾಸುರನಿಂದ ಸೋತಾಗ ಮಹಾವಿಷ್ಣುವಿನ ಬಳಿ ಹೋಗಿ ಪ್ರಾರ್ಥಿಸಿದಾಗ “ಎಲೈ ದೇವತೆಗಳೇ, ನೀವೆಲ್ಲ ನನ್ನ ಶಂಖ ಚಕ್ರಾದಿ ಲಾಂಛನಗಳನ್ನು ಧರಿಸಿ ದೈತ್ಯರೊಡನೆ ಯುದ್ಧ ಮಾಡಿ ನಿಮಗೆ ವಿಜಯ ಲಭಿಸುತ್ತದೆ” ಎಂದು ಶ್ರೀಹರಿಯು ಅಪ್ಪಣೆಯಿತ್ತನು. ಇಂದ್ರಾದಿಗಳು ಇದರಿಂದ ಕೃತಾರ್ಥರಾದರು. ಅಂದಿನಿಂದ ಕಾಮ, ಕ್ರೋಧದಂತಹ ವೈರಿಗಳ ಜಯಕ್ಕೆ ಮುದ್ರಾಧಾರಣೆ ಅಗತ್ಯ ಎಂಬ ನಿಯಮ ವೈಷ್ಣವರಿಗೆ ಶಾಶ್ವತವಾಯಿತು. ತಪ್ತಮುದ್ರಾಧಾರಣೆಯ ಮಹತ್ವವನ್ನು ಋಗ್, ಯಜುರ್, ಸಾಮ, ಅಥರ್ವ ವೇದಗಳಲ್ಲೂ, ಪದ್ಮ ಮೊದಲಾದ ಪುರಾಣಗಳಲ್ಲೂ, ಮಹಾಭಾರತಾದಿ ಇತಿಹಾಸದಲ್ಲೂ ವರ್ಣಿತವಾಗಿದೆ. ಶ್ರೀಮನ್ ಮಧ್ವಾಚಾರ್ಯರ ಸುದರ್ಶನದ್ವಯ (ತಪ್ತ ಮುದ್ರೆ ಮತ್ತು ಶಾಸ್ತ್ರ) ತಮ್ಮ ಶಿಷ್ಯರಿಗೆ ಅನುಗ್ರಹಿಸಿದ ವಿವರ ಸುಮಧ್ವವಿಜಯದಲ್ಲಿ ಉಕ್ತವಾಗಿದೆ. ಅಂತೆಯೇ ಶ್ರೀವಾದಿರಾಜರ ಚಕ್ರಸ್ತುತಿ, ಶ್ರೀಕೃಷ್ಣಾಚಾರ್ಯರ ಸ್ಮೃತಿ ಮುಕ್ತಾವಳಿ ಹಾಗು ತಪ್ತ ಚಕ್ರ ಭೂಷಣಗಳಲ್ಲಿ ವಿವರವಾಗಿ ತಿಳಿಸಲಾಗಿದೆ.

ತಪ್ತಮುದ್ರಾಧಾರಣೆ ಹಿಂದಿರುವ ವೈಜ್ಞಾನಿಕ ಕಾರಣ:

ಹಿಂದೆ ಆಷಾಢ ಬಂತೆಂದರೆ ಮಳೆಗಾಲ ಜೋರು, ಸದಾ ಎಡೆಬಿಡದೆ ಸುರಿಯುವ ಮಳೆ ಜನರನ್ನು ರೋಗಗಳಿಂದ ಭಾಧಿಸುತ್ತಿತ್ತು. ಮಳೆಯ ಶೀತದಿಂದ ಹಲವಾರು ರೋಗಗಳು ಬರುತ್ತಿದ್ದವು. ಬೆಂಕಿಯಲ್ಲಿ ಕಾಯಿಸಿದ ತಾಮ್ರದ ಲೋಹದಿಂದ ದೇಹದ ಮೇಲೆ ಸೂಕ್ತ ಸ್ಥಳದಲ್ಲಿ ಮುದ್ರೆ ಹಾಕಿಕೊಂಡರೆ ಕೆಲ ರೋಗಗಳನ್ನು ನಿಯಂತ್ರಿಸಬಹುದಿತ್ತು. ಇದಕ್ಕೆ ಉದಾಹರಣೆ ಹಿಂದಿನ ದಿನಗಳಲ್ಲಿ ಗೋವುಗಳಿಗೆ ಕಾಯಿಲೆ ಬಂದರೆ ಬೆಂಕಿಯಲ್ಲಿ ಕಾಯಿಸಿದ ತಾಮ್ರದ ಠಸ್ಸೆಯಿಂದ ಚುಟುಕೆ ಹಾಕಲಾಗುತ್ತಿತ್ತು.

ಅಂದಿನ ಕಾಲಕ್ಕೆ ಸ್ವತಃ ವಿಜ್ಞಾನದ ಆಳವನ್ನು ಅರಿತಿದ್ದ ಸರ್ವಜ್ಞಾಚಾರ್ಯರು (ಶ್ರೀಮಧ್ವಾಚಾರ್ಯರು) ಶ್ರೀಹರಿಯ ಲಾಂಛನಗಳನ್ನು ದೇಹದ ಮೇಲೆ ಧರಿಸುವ ಪದ್ಧತಿಯನ್ನು ಕಡ್ಡಾಯಗೊಳಿಸಿದರು.

ತುಳುನಾಡಿನಲ್ಲಿ ಇಂದಿಗೂ ಮಾಧ್ವರಲ್ಲದೇ ಉಳಿದ ಹಲವಾರು ಮಂದಿ ಮುದ್ರೆ ಹಾಕಿಸಿಕೊಳ್ಳುತ್ತಾರೆ. ಜತೆಗೆ ವಿದೇಶೀಯ ಅನ್ಯ ಮತದವರು ಮುದ್ರಾ ಧಾರಣೆ ಮಾಡಿಸಿಕೊಳ್ಳುತ್ತಾರೆ.

ತಪ್ತಮುದ್ರಾಧಾರಣೆ ಮಾಡುವ ವಿಧಾನ:

ಆಚಾರ್ಯ ಮಧ್ವರು ಹಾಕಿ ಕೊಟ್ಟ ಸತ್ಪರಂಪರೆಯಂತೆ, ಚಾತುರ್ಮಾಸ ಪ್ರಾರಂಭದ ಏಕಾದಶಿಯಂದು ಮಠದ ಪೀಠಾಧಿಪತಿಗಳಿಂದಲೇ ತಪ್ತಮುದ್ರಾಧಾರಣೆಯನ್ನು ಸ್ವೀಕರಿಸಬೇಕು. ಆಷಾಡ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಸುದರ್ಶನ ಹೋಮವನ್ನು ಆಚರಿಸಿ ಶಾಸ್ತ್ರೋಕ್ತ ಕ್ರಮದಲ್ಲಿ ಚಕ್ರಾದಿಗಳನ್ನು ಪೂಜಿಸಿ, ಅಭಿಮಾನಿ ದೇವತೆಗಳನ್ನು ಸ್ಮರಿಸಿ, ತಮೋರಜೋಗುಣಗಳು ನಾಶಪಡಿಸುವಂತೆ ಪ್ರಾರ್ಥಿಸಿ ಏಕಾಗ್ರಚಿತ್ತದಿಂದ ಗಂಡಸರು ಬಲಭುಜಕ್ಕೆ ಚಕ್ರ ಎಡಬುಜಕ್ಕೆ ಶಂಖ, ಮದುವೆಯಾದ ಹೆಂಗಸರು ಬಲಗೈಯಿಗೆ ಚಕ್ರ ಎಡಗೈಯಿಗೆ ಶಂಖ, ಮದುವೆಯಾಗದ ಹೆಂಗಸರು ಬಲಗೈಯಿಗೆ ಚಕ್ರ ಹಾಗು ಚಿಕ್ಕ ಮಕ್ಕಳಿಗೆ ಹೊಟ್ಟೆಯ ಮೇಲೆ ಚಕ್ರವನ್ನು ಮುದ್ರಿಸಬೇಕು.

ವೈಷ್ಣವತ್ವಕ್ಕೆ ದ್ಯೋತಕವಾದ ಅತ್ಯಂತ ಪ್ರಮುಖ ಬಾಹ್ಯಲಕ್ಷಣವೆಂಬುದು ತಪ್ತಮುದ್ರಾಧಾರಣದ ಹಿರಿಮೆ. ಇವರು ವೈಷ್ಣವರೆಂದು ಇತರರು ಗುರುತಿಸುವುದಕ್ಕಿಂತಲೂ ಮುಖ್ಯವಾಗಿ ತಾನು ವಿಷ್ಣು ಭಕ್ತನೆಂದು ಸ್ವಂತಕ್ಕೆ ಮರೆಯದಿರಲೆಂದು ಹುಟ್ಟಿಕೊಂಡ ಈ ಪರಂಪರೆ ನಿಜಕ್ಕೂ ಅರ್ಥಪೂರ್ಣ.

ಚಕ್ರ, ಶಂಖ, ಗದಾ ಮತ್ತು ಪದ್ಮ ಮುದ್ರೆಗಳನ್ನು ಹಾಕಿಕೊಳ್ಳುವಾಗ ಹೇಳುವ ಸ್ತೋತ್ರಗಳು:

ಸುದರ್ಶನ ಮಹಾಜ್ವಾಲ ಕೋಟಿಸೂರ್ಯಸಮಪ್ರಭ |

ಅಜ್ಞಾನಾಂಧಸ್ಯ ಮೇ ನಿತ್ಯಂ ವಿಷ್ನೋರ್ಮಾರ್ಗಂ ಪ್ರದರ್ಶಯ ||

ಪಾಂಚಜನ್ಯ ನಿಜಧ್ವಾನ ಧ್ವಸ್ತಪಾತಕ ಸಂಚಯ |

ತ್ರಾಹಿಮಾಂ ಪಾಪಿನಾಂ ಘೋರಸಂಸಾರಾರ್ಣವ ಪಾತಿನಂ ||

ಬ್ರಹ್ಮಾಂಡ ಭುವನಾರಂಭ ಮೂಲಸ್ಥಂಭೋ ಗದಾಧರ |

ಕೌಮೋದಕೀ ಕರೇ ಯಸ್ಯ ತಂ ನಮಾಮಿ ಗಧಾಧರಂ ||

ಸಂಸಾರಭಯಭೀತಾನಾಂ ಯೋಗಿನಾಂ ಅಭಯಪ್ರದ |

ಪದ್ಮಹಸ್ತೇನ ಯೋ ದೇವೋ ಯೋಗೀಶಂ ತಂ ನಮಾಮ್ಯಹಂ ||

ತಪ್ತಮುದ್ರಾಧಾರಣೆ ನಡೆಯುವ ಕೆಲವು ಸ್ಥಳಗಳು ಮತ್ತು ಸಮಯ:

ಪುತ್ತಿಗೆ ಮಠ ಬಸವನಗುಡಿ – ಬೆಂಗಳೂರು – ಬೆಳಿಗ್ಗೆ 7 ರಿಂದ

ಪೂರ್ಣಪ್ರಜ್ಞಾ ವಿದ್ಯಾಪೀಠ – ಬೆಂಗಳೂರು – ಬೆಳಿಗ್ಗೆ 5 ರಿಂದ ಮಧ್ಯಾಹ್ನ 12ರ ವರೆಗೆ

ಶ್ರೀ ಕೃಷ್ಣ ವಾದಿರಾಜ ಮಂದಿರ
ರಾಯ ರಾಯ ಕಲ್ಯಾಣ ಮಂಟಪ ಆವರಣ
ಪಂಪ ಮಹಾಕವಿ ರಸ್ತೆ ಬಸವನಗುಡಿ – ಬೆಂಗಳೂರು – ಬೆಳಿಗ್ಗೆ 7 ರಿಂದ ಮಧ್ಯಾಹ್ನ 1ರ ವರೆಗೆ

0Shares

Leave a Reply

error: Content is protected !!