ಗೀತಾ ಜಯಂತಿ ಹಿನ್ನೆಲೆ ಮತ್ತು ಪ್ರಾಮುಖ್ಯತೆ

0Shares

ಗೀತಾ ಜಯಂತಿ, ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಯ ಜನ್ಮದಿನ. ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದ ದಿನವನ್ನು ಗೀತಾ ಜಯಂತಿ ಎಂದು ಆಚರಿಸಲ್ಪಡುತ್ತದೆ. ಮಾರ್ಗಶಿರ ಮಾಸದ ಶುಕ್ಲ ದಶಮಿ ಮತ್ತು ಏಕಾದಶಿ ಸೇರಿದ ದಿನದಂದು ಶ್ರೀ ಕೃಷ್ಣ ಅರ್ಜುನನಿಗೆ ಭಗವದ್ಗೀತೆಯನ್ನು ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ (ಇಂದಿನ ಹರಿಯಾಣ ರಾಜ್ಯ) ಬೋಧಿಸಿದನೆಂಬ ನಂಬಿಕೆಯಿದೆ. ಆದ್ದರಿಂದ ಈ ದಿನವನ್ನು ಗೀತಾ ಜಯಂತಿಯಾಗಿ ಆಚರಣೆ ಮಾಡಲಾಗುವುದು. ಒಂದೇ ದಿನ ಮೋಕ್ಷದ ಏಕಾದಶಿ ವ್ರತವನ್ನು ಮತ್ತು ಗೀತಾ ಜಯಂತಿಯನ್ನು ಆಚರಿಸಲಾಗುವುದು.

ಗೀತಾ ಜಯಂತಿ

ಹಿನ್ನೆಲೆ:

ಮಹಾಭಾರತ ಭಗವದ್ಗೀತೆಯ ಪ್ರವಚನವು ಕುರುಕ್ಷೇತ್ರ ಯುದ್ಧ ಪ್ರಾರಂಭವಾಗುವ ಮುನ್ನವೇ ನಡೆಯಿತು. ಇದಕ್ಕೆ ಮುಂಚಿನ ಸಂಕ್ಷಿಪ್ತ ಇತಿಹಾಸ ಇದು:

ಪಾಂಡವರು ಮತ್ತು ಕೌರವರ ನಡುವೆ ಸಾಮರಸ್ಯಕ್ಕಾಗಿ ನಡೆದ ಹಲವಾರು ಪ್ರಯತ್ನಗಳು ವಿಫಲವಾದ ನಂತರ, ಯುದ್ಧವು ಅನಿವಾರ್ಯವಾಗಿತ್ತು. ಶುದ್ಧ ಸಹಾನುಭೂತಿ, ಅವರ ಭಕ್ತ ಮತ್ತು ಉತ್ತಮ ಸ್ನೇಹಿತ ಅರ್ಜುನನ ಮೇಲಿನ ಪ್ರಾಮಾಣಿಕ ಪ್ರೀತಿಯಿಂದ, ಶ್ರೀಕೃಷ್ಣನು ಯುದ್ಧದ ಸಮಯದಲ್ಲಿ ಅರ್ಜುನನ ಸಾರಥಿಯಾಗಲು ನಿರ್ಧರಿಸಿದನು. ಅಂತಿಮವಾಗಿ ಯುದ್ಧದ ದಿನ, ಎರಡೂ ಸೈನ್ಯಗಳು ಯುದ್ಧಭೂಮಿಯಲ್ಲಿ ಮುಖಾಮುಖಿಯಾಗಿ ನೆರೆದವು. ಯುದ್ಧ ಪ್ರಾರಂಭವಾಗುತ್ತಿದ್ದಂತೆಯೇ, ಅರ್ಜುನನು ಭಗವಾನ್ ಕೃಷ್ಣನಲ್ಲಿ, ರಥವನ್ನು ಯುದ್ಧಭೂಮಿಯ ಮಧ್ಯದವರೆಗೆ, ಎರಡೂ ಸೇನೆಗಳ ನಡುವೆ ನಿಲ್ಲಿಸುವಂತೆಯೂ, ಎದುರಾಳಿ ಸೈನ್ಯಗಳತ್ತ ನೋಡುವಂತೆಯೂ ಕೇಳುತ್ತಾನೆ. ಬಾಲ್ಯದಿಂದಲೂ ತುಂಬಾ ಪ್ರೀತಿಯಿಂದ ತನ್ನನ್ನು ಬೆಳೆಸಿದ ಅಜ್ಜ ಭೀಷ್ಮ ಮತ್ತು ತಾನು ಮಹಾನ್ ಬಿಲ್ಲುಗಾರನಾಗಲು ಕಾರಣಕರ್ತರಾದ ತನ್ನ ಗುರುಗಳಾದ ದ್ರೋಣಾಚಾರ್ಯರನ್ನು ನೋಡಿದ ಅರ್ಜುನನ ಹೃದಯ ಕರಗಲು ಆರಂಭಿಸಿತು. ಅವನ ದೇಹವು ನಡುಗಲು ಪ್ರಾರಂಭಿಸಿತು ಮತ್ತು ಅವನ ಮನಸ್ಸು ಗೊಂದಲಕ್ಕೊಳಗಾಯಿತು. ಓರ್ವ ಕ್ಷತ್ರಿಯ (ಯೋಧ) ನಾಗಿ ತನ್ನ ಕರ್ತವ್ಯವನ್ನು ನಿರ್ವಹಿಸಲು ಅವನಿಗೆ ಸಾಧ್ಯವಾಗಲಿಲ್ಲ. ಈ ಮುಖಾಮುಖಿಯಲ್ಲಿ ಅವನು ತನ್ನ ಸಂಬಂಧಿಕರು, ಸ್ನೇಹಿತರು ಮತ್ತು ಪೂಜ್ಯ ವ್ಯಕ್ತಿಗಳನ್ನು ಕೊಲ್ಲಬೇಕು ಎಂಬ ಆಲೋಚನೆಯಿಂದ ಅವನು ಮತ್ತಷ್ಟು ದುರ್ಬಲ ಮತ್ತು ಅನಾರೋಗ್ಯಕ್ಕೆ ಒಳಗಾಗುತ್ತಾನೆ. ಅರ್ಜುನನು ತುಂಬಾ ನಿರಾಶೆಗೊಂಡಿದ್ದರಿಂದ, ತನ್ನ ಸ್ನೇಹಿತ ಕೃಷ್ಣನಿಗೆ ತನ್ನ ಮನಸ್ಸಿನಲ್ಲಿ ಆಗುತ್ಯಿರುವ ಬದಲಾವಣೆಯ ಬಗ್ಗೆ ತಿಳಿಸಿದನು ಮತ್ತು ಸಲಹೆಗಾಗಿ ಶ್ರೀ ಕೃಷ್ಣನ ಕಡೆಗೆ ತಿರುಗಿದನು. ಆಗ ಆತ್ಮದ ಅಮರತ್ವದ ಬಗ್ಗೆ ಪ್ರಸ್ತಾಪಿಸುತ್ತ ಕೃಷ್ಣ ‘ಗೀತೋಪದೇಶ’ವನ್ನು ಆರಂಭಿಸುತ್ತಾನೆ. ಇದರ ನಂತರ ನಾಲ್ಕು ಯೋಗಮಾರ್ಗಗಳಾದ ಭಕ್ತಿ, ಕರ್ಮ, ಧ್ಯಾನ ಮತ್ತು ಜ್ಞಾನ ಮಾರ್ಗಗಳನ್ನು ವಿವರಿಸುತ್ತಾನೆ. ಅವರಿಬ್ಬರ ನಡುವೆ ನಡೆದ ಸಂಭಾಷಣೆ, ಶ್ರೀಕೃಷ್ಣನ ಸಲಹೆ, ಅರ್ಜುನನಿಗೆ ಸಿಕ್ಕ ಸಂದೇಶಗಳು ಮತ್ತು ಬೋಧನೆಗಳು, ಇವೆಲ್ಲವನ್ನೂ ಈಗ ಭಗವದ್ಗೀತೆ ಎಂದು ಕರೆಯಲಾಗುತ್ತದೆ.

ಭಗವದ್ಗೀತೆಯು ಹದಿನೆಂಟು ಅಧ್ಯಾಯಗಳಿಂದ ಕೂಡಿದ್ದರೂ, ಶ್ರೀಕೃಷ್ಣನ ಉಪದೇಶ, ಎರಡನೆಯ ಅಧ್ಯಾಯದ ಹನ್ನೊಂದನೇ ಶ್ಲೋಕದಿಂದ ಆರಂಭವಾಗಿದೆ. ಮುಂದೆ ಅದೇ ಅಧ್ಯಾಯದ ಐವತ್ಮೂರನೇ ಶ್ಲೋಕದವರೆಗೆ, ಎಂದರೆ ನಲವತ್ಮೂರು ಶ್ಲೋಕಗಳಲ್ಲಿ ಅರ್ಜುನನಿಗೆ ಹೇಳಬೇಕಾದುದನ್ನೆಲ್ಲಾ ಹೇಳಿಯಾಯಿತು. ಆದರೆ ಸಂದೇಹ ನಿವಾರಣೆಗಾಗಿ, ಅವನ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ಉಳಿದ ಆರುನೂರು ಶ್ಲೋಕಗಳು ಬಂದಿವೆ. ಅರ್ಜುನನ ವಿಷಾದದ ಸಂದರ್ಭದ ಶ್ಲೋಕಗಳೂ ಸೇರಿ ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳಲ್ಲಿ ಒಟ್ಟು ಏಳು ನೂರು ಶ್ಲೋಕಗಳಾಗತ್ತವೆ.

See also  ಬದರಿ ಕ್ಷೇತ್ರ ಮಹಾತ್ಮೆ

ಗೀತಾ ಜಯಂತಿಯ ಪ್ರಾಮುಖ್ಯತೆ:

ಗೀತಾ ಜಯಂತಿಯ ಪ್ರಾಮುಖ್ಯತೆ: ಹಿಂದೂ ಧರ್ಮದಲ್ಲಿ ಭಗವದ್ಗೀತೆಯನ್ನು ಪವಿತ್ರ ಗ್ರಂಥವೆಂದು ಪರಿಗಣಿಸಲಾಗಿದೆ. ಜೀವನದ ಸಾರವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿರುವ ಈ ಗ್ರಂಥದಲ್ಲಿ 18 ಅಧ್ಯಾಯಗಳಿದ್ದು, ವ್ಯಕ್ತಿಯ ಜೀವನದ ಸಂಪೂರ್ಣ ಸಾರಾಂಶವನ್ನು ಹೇಳಲಾಗಿದೆ. ಜೊತೆಗೆ ಧಾರ್ಮಿಕ, ಕರ್ಮ, ಸಾಂಸ್ಕೃತಿಕ ಮತ್ತು ಪ್ರಾಯೋಗಿಕ ಜ್ಞಾನವನ್ನೂ ಇದರಲ್ಲಿ ನೀಡಲಾಗಿದೆ. ಈ ಪುಸ್ತಕವನ್ನು ಅಧ್ಯಯನ ಮತ್ತು ಅನುಸರಿಸುವುದರಿಂದ, ವ್ಯಕ್ತಿಯ ಜೀವನದ ದಿಕ್ಕು ಮತ್ತು ಸ್ಥಿತಿ ಎರಡನ್ನೂ ಬದಲಾಗಬಹುದು. ಇಂತಹ ಪವಿತ್ರ ಗ್ರಂಥ ಹುಟ್ಟಿಕೊಂಡ ದಿನವೇ ಈ ಗೀತಾ ಜಯಂತಿ.

ಭಾರತೀಯ ತತ್ವಶಾಸ್ತ್ರದ ಅತ್ಯಂತ ಮಹತ್ವದ ಸಂಖ್ಯೆ ಹದಿನೆಂಟು . ಇದು ತತ್ವಶಾಸ್ತ್ರದ ಎಲ್ಲಾ ರಹಸ್ಯಗಳನ್ನು ತನ್ನ ಬಸಿರಿನಲ್ಲಿ ಬಚ್ಚಿಟ್ಟುಕೊಂಡಿರುವ ಸಂಖ್ಯೆ. ಮಹಾಭಾರತದಲ್ಲಿ ಕೂಡಾ ಈ ಸಂಖ್ಯಾ ಚಮತ್ಕಾರವನ್ನು ಕಾಣಬಹುದು. ಮಹಾಭಾರತದಲ್ಲಿ ಒಟ್ಟು ಹದಿನೆಂಟು ಪರ್ವಗಳಿವೆ. ಮಹಾಭಾರತದ ಸಾರವಾದ ಗೀತೆಯಲ್ಲಿ ಹದಿನೆಂಟು ಅಧ್ಯಾಯಗಳಿವೆ. ಮಹಾಭಾರತ ಯುದ್ಧ ನಡೆದಿದ್ದು ಹದಿನೆಂಟು ದಿನ. ಯುದ್ಧದಲ್ಲಿ ಪಾಲ್ಗೊಂಡಿದ್ದು ಹದಿನೆಂಟು ಅಕ್ಷೋಹಿಣಿ ಸೈನ್ಯ. ಹೀಗೆ ಹದಿನೆಂಟರ ನಂಟು ಎಲ್ಲೆಡೆ ಕಾಣಸಿಗುತ್ತದೆ.

ಗೀತೆಯ ಎಲ್ಲಾ 700 ಶ್ಲೋಕಗಳನ್ನು ದಿನವಿಡೀ ಜಪಿಸುವುದರಿಂದ ದೇಹ ಹಾಗೂ ಮನಸ್ಸಿಗೆ ಬಹಳಷ್ಟು ಲಾಭವಾಗುತ್ತದೆ. ಇದು ಏಕಾದಶಿ ದಿನವಾದ್ದರಿಂದ ಭಕ್ತರು ಈ ದಿನ ಉಪವಾಸ ಮಾಡುತ್ತಾರೆ. ಈ ದಿನ ಭಜನೆ ಮತ್ತು ಪೂಜೆಗಳು ನಡೆಯುತ್ತವೆ. ಈ ಉತ್ಸವವನ್ನು ಭವ್ಯವಾಗಿ ಆಚರಿಸುವ ಸ್ಥಳಗಳಲ್ಲಿ, ಗೀತಾ ಓದುವ ಆಸಕ್ತಿಯನ್ನು ಉತ್ತೇಜಿಸುವ ಸಲುವಾಗಿ, ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಸ್ಟೇಜ್ ಪ್ಲೇ ಮತ್ತು ಗೀತಾ ಪಠಣ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಯೋಗಿಗಳು, ಸನ್ಯಾಸಿನಿಯರು ಮತ್ತು ವಿದ್ವಾಂಸರು ಈ ಪವಿತ್ರ ಗ್ರಂಥದ ಚರ್ಚೆಗಳನ್ನು ನಡೆಸುತ್ತಾರೆ.

0Shares

Leave a Reply

error: Content is protected !!