ಕುರುಕ್ಷೇತ್ರ ಯುದ್ಧ ಸ್ಥಳ ಮತ್ತು ಸೈನ್ಯದ ವಿವರ

0Shares

ಕುರುಕ್ಷೇತ್ರ ಯುದ್ಧ ಸ್ಥಳ ಸೈನ್ಯದ ವಿವರ

ಕುರುಕ್ಷೇತ್ರ ಯುದ್ಧ ಸ್ಥಳ:

ಕುರುಕ್ಷೇತ್ರ ಯುದ್ಧ ನಡೆದ ಸ್ಥಳದ ಹೆಸರು ಸಮಂತಪಂಚಕ ಕ್ಷೇತ್ರ.

ತ್ರೇತಾಯುಗ ಮತ್ತು ದ್ವಾಪರ ಯುಗದ ಸಂಧಿಕಾಲದಲ್ಲಿ ಶಸ್ತ್ರಧಾರಿಗಳಲ್ಲಿ ಶ್ರೇಷ್ಠನಾದ ಪರಶುರಾಮನು ಕ್ಷತ್ರಿಯರ ಮೇಲೆ ಕೋಪದಿಂದ ಹಲವು ಬಾರಿ ಕ್ಷತ್ರಿಯರನ್ನು ಸಂಹಾರ ಮಾಡಿದನು. ತನ್ನ ಭುಜಬಲ, ಪರಾಕ್ರಮಗಳಿಂದ ಕ್ಷತ್ರಿಯರನ್ನು ಧ್ವಂಸ ಮಾಡಿ ಸಮಂತಪಂಚಕ ಕ್ಷೇತ್ರದಲ್ಲಿ ಐದು ರಕ್ತ ಸರೋವರಗಳನ್ನು ನಿರ್ಮಿಸಿದನು.

ಕೋಪಿಷ್ಠನಾಗಿದ್ದ ಪರಶುರಾಮನು ರಕ್ತದಿಂದಲೇ ತನ್ನ ಪಿತೃ ದೇವತೆಗಳಿಗೆ ತರ್ಪಣವನ್ನು ಕೊಟ್ಟನು. ಒಮ್ಮೆ ಋಚೀಕನೇ ಮೊದಲಾದ ಪಿತೃ ದೇವತೆಗಳು ಪರಶುರಾಮನಲ್ಲಿ “ವತ್ಸಾ| ಪರಶುರಾಮ, ನಿನ್ನ ಪರಾಕ್ರಮ ಹಾಗು ನೀನು ನಮ್ಮಲ್ಲಿಟ್ಟಿರುವ ಪೂಜ್ಯ ಭಾವನೆಯನ್ನು ಮೆಚ್ಚಿದ್ದೇವೆ. ನಿನಗೆ ಮಂಗಳವಾಗಲಿ. ನೀನು ಯಾವ ವರವನ್ನು ಅಪೇಕ್ಷಿಸುವೆಯೋ ಆ ವರವನ್ನು ಕೇಳು” ಎಂದರು. ಪರಶುರಾಮನು ಪಿತೃ ದೇವತೆಗಳ ಮುಂದೆ ಕೈಜೋಡಿಸಿ ನಿಂತು “ನಾನು ಕೋಪಾವಿಷ್ಟನಾಗಿ ಕ್ಷತ್ರಿಯರನ್ನು ಕೊಂದುದರಿಂದ ಸಂಭವಿಸಿರುವ ಪಾಪವು ಪರಿಹಾರಗೊಳ್ಳಲಿ. ನಾನು ನಿರ್ಮಿಸಿರುವ ಈ ರಕ್ತ ಸರೋವರಗಳು ಪರಮ ಪಾವನವಾದ ಸರೋವರಗಳೆಂದು ಪ್ರಸಿದ್ಧಿ ಹೊಂದಲಿ” ಎಂದು ಪ್ರಾರ್ಥಿಸಿದನು. ಪಿತೃ ದೇವತೆಗಳು “ತಥಾಸ್ತು” ಎಂದು ಹೇಳಿ ಕ್ಷತ್ರಿಯರನ್ನು ಕ್ಷಮಿಸಿ ಬಿಡಬೇಕು ಮತ್ತು ಅವರನ್ನು ಸಂಹಾರ ಮಾಡಬಾರದೆಂದು ಪರಶುರಾಮನಿಗೆ ಹೇಳಿದರು. ಪಿತೃ ದೇವತೆಗಳ ಮಾತಿನಂತೆ ಪರಶುರಾಮನು ಯುದ್ಧವನ್ನು ನಿಲ್ಲಿಸಿದನು. ಆ ಐದು ಸರೋವರಗಳ ಬಳಿಯಲ್ಲಿದ್ದ ಸ್ಥಳವು ‘ಸಮಂತಪಂಚಕ ಕ್ಷೇತ್ರ‘ ಎಂದು ಪ್ರಸಿದ್ಧಿ ಹೊಂದಿತು.

ಸಮಂತಪಂಚಕ ಎಂದರೆ ಯುದ್ಧದ ಕಾರಣದಿಂದ ಸೇರಿದವರೆಲ್ಲರು ಅಲ್ಲಿಯೇ ಅಂತ್ಯವಾದುದರಿಂದ ಅದು ಸಮಂತ, ಐದು ರಕ್ತ ಸರೋವರಗಳಿಂದ ಕೂಡಿರುವುದರಿಂದ ಪಂಚಕ. ಹೀಗೆ ತ್ರೇತಾಯುಗ ಮತ್ತು ದ್ವಾಪರ ಯುಗದ ಸಂಧಿಕಾಲದಲ್ಲಿ ಸಮಂತಪಂಚಕ ಕ್ಷೇತ್ರ ನಿರ್ಮಾಣವಾಯಿತು. ಈ ಸ್ಥಳವು ಹಳ್ಳ ತಟ್ಟುಗಳಿಲ್ಲದೇ, ಮುಳ್ಳುಗಳು, ವೃಕ್ಷಗಳು, ಬಳ್ಳಿಗಳು, ಕಲ್ಲು ಬಂಡೆಗಳಿಲ್ಲದೇ, ಪುಣ್ಯತಮವೂ ರಮಣೀಯವೂ ಆಗಿತ್ತು. ಇದೇ ಮಹಾಕ್ಷೇತ್ರದಲ್ಲಿ ದ್ವಾಪರ ಮತ್ತು ಕಲಿಯುಗ ಸಂಧಿಕಾಲದಲ್ಲಿ ಕುರು ಪಾಂಡವ ಸೇನೆಗಳ ನಡುವೆ ಮಹಾಯುದ್ಧವಾಯಿತು. ಈ ಯುದ್ಧದ ಕಾರಣದಿಂದ ಈ ಕ್ಷೇತ್ರ ಕುರುಕ್ಷೇತ್ರ ಎಂದು ಪ್ರಸಿದ್ಧಿ ಹೊಂದಿತು.

ಕುರುಕ್ಷೇತ್ರ ಯುದ್ಧ ಸೈನ್ಯದ ವಿವರ:

ಕುರುಕ್ಷೇತ್ರ ಯುದ್ಧ ಸೈನ್ಯದ ವಿವರ

ಕುರುಕ್ಷೇತ್ರ ಯುದ್ಧದಲ್ಲಿ ಹದಿನೆಂಟು ಅಕ್ಷೋಹಿಣಿ ಸೈನ್ಯವು ಭಾಗವಹಿಸಿತ್ತು. ಒಂದು ಅಕ್ಷೋಹಿಣಿ ಸೈನ್ಯದಲ್ಲಿ 21,870 ರಥಗಳು, 21,870 ಆನೆಗಳು, 65,610 ಕುದುರೆಗಳು, 1,09,350 ಕಾಲಾಳು(ಪದಾತಿ)ಗಳು ಇರುತ್ತದೆ. ಹಾಗಾಗಿ ಕುರುಕ್ಷೇತ್ರದಲ್ಲಿ ಹೋರಾಡಲು ಸಿದ್ಧವಾಗಿದ್ದ ಹದಿನೆಂಟು ಅಕ್ಷೋಹಿಣಿ ಸೈನ್ಯದಲ್ಲಿ 3,93,660 ರಥಗಳು, 3,93,660 ಆನೆಗಳು, 11,80,980 ಕುದುರೆಗಳು, 19,68,300 ಕಾಲಾಳು(ಪದಾತಿ)ಗಳು ಇದ್ದವು.

ಈ ಘೋರ ಯುದ್ಧದ ಕೊನೆಯಲ್ಲಿ ಕೇವಲ ಹತ್ತು ಜನ ಮಾತ್ರವೇ ಉಳಿದುಕೊಂಡರು. ಐವರು ಪಾಂಡವರು, ಕೃಷ್ಣ ಮತ್ತು ಸಾತ್ಯಕಿ ಇವರು ಪಾಂಡವರ ಪಕ್ಷದಲ್ಲಿ ಉಳಿದ ಏಳು ಮಂದಿ. ಕೃಪಾಚಾರ್ಯ, ಅಶ್ವತ್ಥಾಮ ಮತ್ತು ಕೃತವರ್ಮರು ಕೌರವರ ಕಡೆಯವರಾಗಿ ಉಳಿದವರು. ಹದಿನೆಂಟು ಅಕ್ಷೋಹಿಣಿ ಸೈನ್ಯವೂ ಈ ಭೀಕರ ಸಮರದಲ್ಲಿ ವಿನಾಶಹೊಂದಿತು.

See also  ಶ್ರೀ ಅನಂತೇಶ್ವರ ದೇವಸ್ಥಾನ - ಉಡುಪಿ

ಬರಹ: ಶ್ರುತಿ ಕುಬೇರ್

0Shares

Leave a Reply

error: Content is protected !!