ವಿದುರಾಶ್ವತ್ಥ ಕ್ಷೇತ್ರ – ಚಿಕ್ಕಬಳ್ಳಾಪುರ

0Shares

ಕರ್ನಾಟಕದ ಗೌರಿ ಬಿದನೂರು ನಗರದಿಂದ ಸಾಧಾರಣ 9 ಕಿ. ಮಿ ದೂರದಲ್ಲಿ ವಿದುರಾಶ್ವತ್ಥ ಕ್ಷೇತ್ರವಿದೆ. ವಿದುರಾಶ್ವತ್ಥ ನಾರಾಯಣ ಸ್ವಾಮಿ ದೇವಸ್ಥಾನವಿದ್ದು ಇದೊಂದು ಪುಣ್ಯ ಸ್ಥಳವಾಗಿದೆ. ಸ್ಥಳ ಪುರಾಣ ಹೀಗೆ ಹೇಳುತ್ತದೆ. ವಿದುರ ದೃತರಾಷ್ಟ್ರನ ತಮ್ಮ. ಕೌರವರಿಗೆ ರಾಜ್ಯಭಾರ ಮಾಡಲು ಸಹಾಯ ಮಾಡುತ್ತಿದ್ದನಂತೆ. ಕೌರವರ ದುಷ್ಟ ಬುದ್ದಿಗೆ ಬೇಸತ್ತು, ಮೈತ್ರೆಯೀ ಮುನಿಯ ಆಶ್ರಮಕ್ಕೆ ಬಂದನಂತೆ. ಅಲ್ಲಿ ಮುನಿಗಳ ಸೇವೆ ಮಾಡಿ ಕಾಲ ಕಳೆಯುತ್ತಿದ್ದನಂತೆ. ಋಷಿವರ್ಯರು ಆಶ್ರಮದಲ್ಲಿ ಅಶ್ವಥ ಮರ ನೆಟ್ಟು, ಅದನ್ನು ಬೆಳೆಸಬೇಕೆಂದು ತಿಳಿಸಿ ದೇಶ ಪರ್ಯಟನೆಗೆ ಹೊರಟರಂತೆ. ವಿದುರನು ಆಶ್ವತ ಮರವನ್ನು ಮತ್ತು ಆ ಪ್ರದೇಶವನ್ನು ನೋಡಿಕೊಂಡದ್ದರಿಂದ ಈ ಸ್ಥಳ ವಿದುರಾಶ್ವತ್ಥ ಎಂದೇ ಪ್ರಸಿದ್ದವಾಗಿದೆ. ಸ್ವತಃ ಶ್ರೀ ನಾರಾಯಣ ದೇವರೇ ಈ ವೃಕ್ಷ ರೂಪದಲ್ಲಿ ಜನಿಸಿದ್ದಾನೆಂತಲೂ ನಂಬಿಕೆ ಇರುವುದರಿಂದ ಅಶ್ವಥನಾರಾಯಣ ಎಂಬ ಹೆಸರು ಬಂದಿದೆ. ಅಶ್ವಥ ಮರಕ್ಕೆ ಸ್ತ್ರೀ ಪ್ರದಕ್ಷಿಣೆ ಹಾಕುವುದರಿಂದ ಪ್ರಕೃತಿದತ್ತವಾಗಿ ಅವಳಲ್ಲಿನ ದೋಷ ನಿವಾರಣೆ ಯಾಗುವುದೂ ಹೌದು. ಈ ವೃಕ್ಷಕ್ಕೆ ಹಲವಾರು ದೈವಿಕ ಶಕ್ತಿಯಿದೆ. ಹಲವಾರು ತರದಲ್ಲಿ ಮಾನವರ ಉಪಯೋಗಕ್ಕೆ ಬರುವ ಈ ಮರ ಮನುಜ ಕುಲಕ್ಕೆ ದೇವರೇ.

ವಿದುರಾಶ್ವತ್ಥ ಕ್ಷೇತ್ರ

ವಿದುರಾಶ್ವತ್ಥದ ಇನ್ನೊಂದು ವಿಷೇಷ ಎಂದರೆ ಎಲ್ಲೆಲ್ಲಿ ನೋಡಿದರೂ ಕಾಣಬರುವ ಅಶ್ವಥ ಮತ್ತು ಬೇವಿನ ಮರಗಳು ಹಾಗು ಅವುಗಳ ಅಡಿಯಲ್ಲಿ ಗುಂಪು ಗುಂಪಾಗಿ ಹಾಕಿರುವ ನಾಗನ ಕಲ್ಲುಗಳು. ಮಕ್ಕಳಾಗದವರು ನಾಗನಕಲ್ಲು ಪ್ರತಿಷ್ಟಾಪಿಸಿ ಬೇಡಿ ಕೊಂಡಲ್ಲಿ ಮಕ್ಕಳಾಗುವ ನಂಬಿಕೆ ಇರುವುದರಿಂದ ಜನರು ನಾಗಪ್ರತಿಷ್ಟೆ ಮಡುವ ವಾಡಿಕೆ ಹಿಂದೂ ಸಂಪ್ರದಾಯದಲ್ಲಿದೆ. ಅಶ್ವಥ ಮರ ಹಾಗು ಬೇವಿನ ಮರಗಗಳು ಒಂದಕ್ಕೊಂದು ಪಕ್ಕದಲ್ಲಿ ಬೆಳೆಸುವುದೂ ಒಂದು ಸಂಪ್ರದಾಯ. ಅರಳಿ(ಅಶ್ವಥ) ಮರದ ಬಳಿ ಬೇವಿನ ಗಿಡನೆಟ್ಟು ವಿವಾಹ ಮಾಡುವ ಪದ್ದತಿ ಇದೆ. ಬೇವಿನ ಮರ (ಔಷದಿ ಗುಣಗಳನ್ನು ಹೊಂದಿರುವ ಮರವಾಗಿದೆ)ವನ್ನು ಹೆಣ್ಣೆಂದು, ಅಶ್ವಥ ಮರವನ್ನು ಗಂಡೆಂದು ಪರಿಗಣಿಸಲಾಗುತ್ತದೆ. ಜನರು ತಮ್ಮ ಸಂಸಾರಕ್ಕೆ ಸಂಬಂದಗಳು ಸುಲಲಿತವಾಗಿ ನಡೆಸುವಂತೆ ದೇವರನ್ನು ಕೇಳಿಕೊಳ್ಳುವ ಒಂದು ಪರಿ ಇದಾಗಿದೆ ಎಂದರೆ ತಪ್ಪಾಗದೇನೋ? ಈ ಸಂಪ್ರದಾಯದ ವಿಶೇಷತೆಯು ತನ್ನದೇ ಆದ ಮಹತ್ವತೆ ಹೊಂದಿದೆ.

ಸೃಷ್ಟಿಗೆ ಕಾರಣವಾದ ಅರಳಿಮರದ ಪಕ್ಕದಲ್ಲಿ ಆರೋಗ್ಯಕ್ಕೆ ಕಾರಣವಾದ ಬೇವಿನ ಮರವನ್ನು ಬೆಳೆಸುವುದು ಸೃಷ್ಟಿಯಾದದ್ದು ಆರೋಗ್ಯವಾಗಿರಲಿ ಎಂಬ ಮಹತ್ವ ಪೂರ್ಣ ಉದ್ದೇಶದಿಂದ. ಅಶ್ವಥ ಮರ ಹೆಚ್ಚು ಕಾಲ ಜೀವಿಸುವ ಮರವಾದ್ದರಿಂದ ಇದರ ಕೆಳಗೆ ನಾಗರ ಪ್ರತಿಷ್ಟೆ ಮಾಡುವ ಪದ್ದತಿ ಇದೆ ಎನ್ನಬಹುದು. ಹತ್ತು ಹಲವಾರು ಕೌಟುಂಬಿಕ ಕಾರಣಗಳಿಗಾಗಿ ನಾಗರ ಕಲ್ಲಿನ ಪ್ರತಿಷ್ಟೆ ಹಾಗು ನಾಗನಿಗೆ ಸಂಬಂದಿಸಿದ ದೋಷ ನಿವಾರಣೆ ಪೂಜಾ ವಿಧಾನ ಗಳನ್ನೂ ನಾವಿಲ್ಲಿ ಕಾಣುತ್ತೇವೆ. ವಿದುರಾಶ್ವತ್ಥದ ಈ ದೇವಸ್ಥಾನದ ಪ್ರದೇಶ ವಿಶಾಲವಾಗಿದ್ದು ಯಾವಾಗಲು ಜನರಿಂದ ತುಂಬಿರುತ್ತದೆ. ಅಲ್ಲಲ್ಲಿ ನಾಗನ ಕಲ್ಲಿಗೆ ನೀರು , ಹಾಲು, ಅರಶಿನದ ಅಭಿಷೇಕ, ಅವರವರು ಸ್ಥಾಪಿಸಿದ ಕಲ್ಲಿಗೆ ತರಾವರ ಪೂಜಾ, ಹೋಮ, ಹವನ ಹೀಗೆ ಹತ್ತು ಹಲವಾರು ತರದ ಪೂಜಾ ಕ್ರಮಗಳನ್ನೂ ನಾವಿಲ್ಲಿ ನೋಡಬಹುದು. ಹೊಸ ಮದುಮಕ್ಕಳು ಸಹ ಇಲ್ಲಿಗೆ ಬಂದು ಇಲ್ಲಿರುವ ದೇವರುಗಳ ದರ್ಶನ ಪಡೆಯುವ ಪದ್ದತಿ ಸಹ ಇಲ್ಲುಂಟು. ಈ ದೇವಾಲಯದ ಪ್ರದೇಶದಲ್ಲಿ ಇರುವ ಇತರ ದೇವಸ್ಥಾನಗಳೆಂದರೆ, ಪ್ರಧಾನ ದೇವಾಲಯ ಶ್ರೀ ಅಶ್ವಥನಾರಾಯಣ ದೇವಾಲಯ, ಅದರ ಸುತ್ತ ಶ್ರೀ ಚೆನ್ನಕೇಶವ ದೇವಾಲಯ, ಶ್ರೀ ಗಣೇಶ, ಶ್ರೀ ವೀರಾಂಜನೇಯ ಸ್ವಾಮಿ, ಶ್ರೀ ಕಾಶಿ ವಿಶ್ವೇಶ್ವರಸ್ವಾಮಿ ಸನ್ನಿಧಿ ಹಾಗು ನವಗ್ರಹ ದೇವಾಲಯಗಳು. ಪ್ರಧಾನ ದೇವಾಲಯ ಶ್ರೀ ಅಶ್ವಥನಾರಾಯಣ ಮದ್ಯ ಇದ್ದು ಅದರ ಸುತ್ತ ಇತರ ದೇವಾಲಯಗಳಿವೆ. ಜನರು ಶಾಂತಿಯಿಂದ ಪೂಜಾ ವಿಧಾನಗಳನ್ನು ವೀಕ್ಷಿಸಿ ಆನಂದಿಸುತ್ತಾರೆ.

ವಿದುರಾಶ್ವತ್ಥವು ದಕ್ಷಿಣದ ಜಲಿಯಾನ್ ವಾಲಾ ಬಾಘ್ ಎಂದೂ ಪ್ರಸಿದ್ಧವಾಗಿದೆ. 1938ರಲ್ಲಿ ಹಲವಾರು ಪ್ರತಿಭಟನಾಕಾರರು ಬ್ರಿಟಿಷರ ಗುಂಡೇಟಿಗೆ ಬಲಿಯಾಗಿದ್ದು, ಅಲ್ಲಿಯೇ ಪಕ್ಕದಲ್ಲಿ ಭಾರತದ ಸ್ವಾತಂತ್ರಕ್ಕಾಗಿ ಹೋರಾಡಿದ ಹುತಾತ್ಮರ “ಶಿಲಾ ಸ್ಮಾರಕ” ಹಾಗೂ “ವೀರ ಸೌಧ”ಗಳಿವೆ. ಬೆಂಗಳೂರಿನಿಂದ ಸಾದಾರಣ 120 ಕಿ. ಮಿ. ದೂರವಿದ್ದು, ದೊಡ್ಡಬಳ್ಳಾಪುರ ಮಾರ್ಗವಾಗಿ ಗೌರಿಬಿದನೂರನ್ನು ತಲಪಬಹುದಾಗಿದೆ. ಪ್ರಕೃತಿಪ್ರಿಯರಿಗೂ ಇಷ್ಟವಾಗುವಂತ ಹಾಗು ಹೇರಳವಾಗಿ ಒಳ್ಳೆಯ ಆರೋಗ್ಯಕರ ಗಾಳಿ ಮತ್ತು ಮನಸ್ಸಿಗೆ ಹಿತ ತರುವಂಥ ಒಂದು ಒಳ್ಳೆಯ ಪ್ರೇಕ್ಷಣೀಯ ಸ್ಥಳ ವಿದುರಾಶ್ವತ್ಥ ಎಂದರೆ ತಪ್ಪಾಗದು.

ಮೂಲತೋ ಬ್ರಹ್ಮರೂಪಾಯ, ಮಧ್ಯತೋ ವಿಷ್ಣುರೂಪಿಣಿ

ಅಗ್ರತಃ ಶಿವರುಪಾಯ ವೃಕ್ಷರಾಜಾಯತೇ ನಮಃ.

 

0Shares

Leave a Reply

error: Content is protected !!