ಬದರಿ ಕ್ಷೇತ್ರ ಮಹಾತ್ಮೆ

0Shares

ವಿಶೇಷ ವಿಷಯಗಳು:

ಬದರಿಯು ಅತ್ಯುನ್ನತ ಕ್ಷೇತ್ರ. ಬದರಿಯಷ್ಟು ಎತ್ತರದಲ್ಲಿ ಬೇರಾವ ವೈಷ್ಣವಕ್ಷೇತ್ರವೂ ಇಲ್ಲದಿರುವುದು ಇದರ ಹಿರಿಮೆಗೆ ಪ್ರತ್ಯಕ್ಷ ಸಾಕ್ಷಿ. ಬದರಿಯು ಅತ್ಯುನ್ನತ ಕ್ಷೇತ್ರವಾದುದರಿಂದಲೇ ಕ್ಷೇತ್ರಸ್ವಾಮಿಯಾದ ಶ್ರೀಮನ್ನಾರಾಯಣನೇ ಸರ್ವೋತ್ತಮನೆಂಬುವುದು ಸಿದ್ಧವಾಗುವುದು. ಇಲ್ಲಿ ಹರಿಯು ಸರ್ವಶ್ರೇಷ್ಠ ನದಿ ಗಂಗೆ ಮೂಲತಃ ನಾರಾಯಣನ ಪಾದೋದಕವು. ಪ್ರಾಚೀನ ಯುಗಗಳಲ್ಲಿ ಧ್ರುವ, ಪೃಥು, ಪ್ರಿಯವ್ರತ ಮೊದಲಾದ ಸಕಲ ರಾಜರುಗಳೂ, ನಾರದಾದಿಮುನಿಗಳೂ, ಬ್ರಹ್ಮಾದಿದೇವತೆಗಳೂ ಬಹಳವಾಗಿ ಸೇವಿಸಿದ ಕ್ಷೇತ್ರ ಎಂಬುದು ಇದರ ಅಸಾಧಾರಣ ವೈಶಿಷ್ಟ್ಯ.

ಬದರಿ

ಶ್ರೀಹರಿಯು ಇಲ್ಲಿ ನಾಲ್ಕು ರೂಪಗಳಲ್ಲಿ ನೆಲೆಸಿರುತ್ತಾನೆ. ಮೊದಲನೆಯದಾಗಿ ಚತುರ್ಮುಖ ಬ್ರಹ್ಮ ದೇವರು ನಡೆಸಿದ ಯಜ್ಞ ಕುಂಡದಿಂದ ಶ್ರೀಹರಿಯು ಹಯಗ್ರೀವ ರೂಪದಲ್ಲಿ ಅವತರಿಸುತ್ತಾನೆ. ಅವನ ಶ್ವಾಸದ ಮೂಲಕ ಚತುರ್ವೇದಗಳು ಹೊಮ್ಮಿದವು. ಆಮೇಲೆ ಯಮಧರ್ಮನ ಮೂಲಕ ನಾರಾಯಣನ ಅವತಾರ. ಆನಂತರ ಶ್ರೀಕೃಷ್ಣನು ಕೈಲಾಸಯಾತ್ರೆಗೆ ಹೋಗುವಾಗ ಇಲ್ಲಿಗೆ ಬಂದು ಘಂಟಾಕರ್ಣ ಮತ್ತು ಕರ್ಣರೆಂಬ ಪಿಶಾಚಿಗಳಿಗೆ ಸದ್ಗತಿಯನ್ನು ನೀಡುವನು. “ನಾನು ಬದರೀಕ್ಷೇತ್ರವನ್ನು ನಿರಂತರ ರಕ್ಷಿಸುವೆನು” ಎಂದು ಶ್ರೀ ಕೃಷ್ಣನು ಹೇಳಿರುವನೆಂದು ಹರಿವಂಶ ಪುರಾಣವು ಹೇಳುತ್ತದೆ. ವೇದವ್ಯಾಸ ದೇವರು ಬದರಿಯಲ್ಲಿ ನೆಲೆಸಿರುವುದು ಸುಪ್ರಸಿದ್ಧ ವಿಚಾರ.

ಬದರಿ ಕ್ಷೇತ್ರ

ಧರ್ಮಪುತ್ರತ್ವೇನ ಅವತರಿಸಿದ ಶ್ರೀನಾರಾಯಣನು ನರನೊಂದಿಗೆ ಲೋಕಶಿಕ್ಷಣಕ್ಕಾಗಿ ತಪಸ್ಸು ಮಾಡಿದ ಸ್ಥಳ. ಇಂದ್ರಪ್ರೇಷಿತರಾದ ಕಾಮಾದಿಗಳು ಪರಾಜಿತರಾದ ಸ್ಥಳ. ಊರ್ವಶಿಯು ಶ್ರೀನಾರಾಯಣನಿಂದ ಜನ್ಮತಳೆದ ಸ್ಥಳ. ಭೀಮಸೇನಾದಿ ಪಾಂಡವರು ಅವತರಿಸಿದ ಸ್ಥಳ. ಪಾಂಡವರು ಬಾಲ್ಯವನ್ನು ಕಳೆದುದಲ್ಲದೇ ತಮ್ಮ ತೀರ್ಥ ಯಾತ್ರೆಯ ಕಾಲದಲ್ಲೂ, ಮಹಾಪ್ರಸ್ಥಾನದ ಕಾಲದಲ್ಲೂ ಸಂದರ್ಶಿಸಿದ ಸ್ಥಳ. ಹೀಗೆ ಹಲವು ಹಿರಿಮೆ ಬದರೀಕ್ಷೇತ್ರೆಕ್ಕೆ.

ತಾಪತ್ರಯಗಳ ನಿವಾರಣೆಗೆ ಬದರಿಗೆ ಮಿಗಿಲಾಗಿ ಕ್ಷೇತ್ರವಿಲ್ಲ. ಅಲಕನಂದಾ ನದಿಯ ಜಲಕ್ಕೆ ಸಮನಾದ ತೀರ್ಥವಿಲ್ಲ ಎಂದು ಶ್ರೀಮದಾಚಾರ್ಯರು ಸಾರಿದ್ದಾರೆ ಎಂದು ಮಧ್ವವಿಜಯ ಹೇಳುತ್ತದೆ. ಶ್ರೀಮದಾಚಾರ್ಯರು ತಮ್ಮ ಸಂಚಾರಕ್ರಮದಲ್ಲಿ ಹಲವಾರು ಬಾರಿ ಇಲ್ಲಿಗೆ ಬಂದು ಸಾಧನೆಯನ್ನು ಮಾಡಿರುತ್ತಾರೆ. ಆಚಾರ್ಯರು ತಮ್ಮ ಮೊದಲ ಬದರೀ ಸಂದರ್ಶನ ಸಮಯದಲ್ಲಿ ಗೀತಾಭಾಷ್ಯವನ್ನು ಶ್ರೀಮನ್ನಾರಾಯಣನಿಗೆ ಸಮರ್ಪಿಸಿದ್ದು, ಪಾಠ ಹೇಳಿದ್ದು, 48 ದಿನಗಳ ಕಾಲ ಕಾಷ್ಠಮೌನ ವ್ರತವನ್ನು , ಉಪವಾಸವನ್ನು ಆಚರಿಸಿದ್ದು, ಶಿಷ್ಯರಿಗೆ ಸಂದೇಶವಿತ್ತು ತೆರಳಿದ್ದು, ಶ್ರೀವ್ಯಾಸನಾರಾಯಣರನ್ನು ಸಂದರ್ಶಿಸಿ ಉತ್ತರ ಬದರಿಯಿಂದ ಮರಳುತ್ತಲೇ ಬ್ರಹ್ಮಸೂತ್ರಭಾಷ್ಯವನ್ನು ರಚಿಸಿದ್ದು, ಶ್ರೀಸತ್ಯತೀರ್ಥರು ಬ್ರಹ್ಮಸೂತ್ರಭಾಷ್ಯದ ಪ್ರಥಮ ಪ್ರತಿಯನ್ನು ಲೇಖನ ಮಾಡಿದ್ದು, ಈ ಪವಿತ್ರ ಸ್ಥಳದಲ್ಲಿ ಎಂದು ಮಧ್ವವಿಜಯ ಮೊದಲಾದ ಹಲವು ಗ್ರಂಥಗಳಲ್ಲಿ ವರ್ಣಿತವಾಗಿದೆ.

ಬದರಿಯಲ್ಲಿ ಪರಸ್ಪರ ಎದುರಿನಲ್ಲಿ ನಾರಾಯಣಪರ್ವತ ಮತ್ತು ನರಪರ್ವತವೆಂಬ ಎರಡು ಪರ್ವತಗಳಿವೆ. ಬದರಿನಾರಾಯಣನ ಆಲಯವಿರುವ ಸ್ಥಳ ನಾರಾಯಣಪರ್ವತ, ಎದುರಿನದು ನರಪರ್ವತ.‌ ನಾರಾಯಣಪರ್ವತದ ಬುಡದಲ್ಲಿ ಭೋರ್ಗರೆಯುತ್ತ ಹರಿಯುವ ಅಲಕನಂದೆಯ ತೀರದಲ್ಲಿ ಶ್ರೀಮನ್ನಾರಾಯಣದೇವರ ಧ್ಯಾನಮಗ್ನ ಸುಂದರ ಮೂರ್ತಿ ಇದೆ. ಅಲಕನಂದೆಯು ಇಲ್ಲಿ ಸ್ಪರ್ಶಿಸಲೂ ಅಸಾಧ್ಯವೆನ್ನುವಷ್ಟು ತಂಪು, ಇದರ ತೀರದಲ್ಲೇ ತಪ್ತಕುಂಡ ಇರುವುದು ವಿಶೇಷ. ಆಳ, ವೇಗ ಮತ್ತು ಶೀತದಿಂದಾಗಿ ಇಲ್ಲಿ ನದೀಸ್ನಾನ ಸಾಮಾನ್ಯರಿಗೆ ಸುಲಭಸಾಧ್ಯವಲ್ಲ.

See also  ವೈಕುಂಠ ಏಕಾದಶಿ ಹಿನ್ನೆಲೆಯ ಮಹತ್ವ

ನಾರಾಯಣ ಪರ್ವತದ ಬಲಭಾಗದಲ್ಲಿರುವ ಊರ್ವಶೀಪರ್ವತದಿಂದ ಋಷಿಗಂಗಾ ಎಂಬ ಚಿಕ್ಕದೊಂದು ನದಿ ಹರಿದು ಅಲಕನಂದೆಯನ್ನು ಸೇರುತ್ತದೆ. ಈ ಪರ್ವತದಲ್ಲಿ ಋಷಿಗಂಗಾ ತೀರದಲ್ಲಿ ನಾರಾಯಣನ ಎಡ ತೊಡೆಯ ಮೇಲೆ ಊರ್ವಶಿಯು ಕುಳಿತಿರುವ ವಿಗ್ರಹವಿರುವ ಚಿಕ್ಕ ಗುಡಿ ಇದೆ.
ಬದರಿಯಿಂದ 3 ಕಿಮೀ ದೂರದಲ್ಲಿರುವ ಕೇಶವಪ್ರಯಾಗದ ಬಳಿಯ ಬೆಟ್ಟದಲ್ಲಿರುವ ‘ಗಣೇಶಗುಹಾ‘ ಗಣೇಶನು ಮಹಾಭಾರತವನ್ನು ಬರೆದ ಸ್ಥಳ ಎನ್ನಲಾಗುತ್ತದೆ. ಇಲ್ಲಿಂದ ಕೆಲವು ಅಡಿಗಳಷ್ಟು ಎತ್ತರದಲ್ಲಿ ಪರ್ವತದಲ್ಲಿರುವ “ವ್ಯಾಸಗುಹೆ“ಯನ್ನು ವ್ಯಾಸಾಶ್ರಮವೆಂದು ಕರೆಯುವರು. ಇಲ್ಲಿಂದ ಮೇಲೆ 10 ಕಿಮೀ ದೂರದಲ್ಲಿ ಮುಚುಕುಂದ ಮಲಗಿದ್ದ, ಕಾಲಯವನನು ಭಸ್ಮವಾದ, ಮುಚುಕುಂದನಿಗೆ ಶ್ರೀಕೃಷ್ಣ ದರ್ಶನವಾದ ಮುಚುಕುಂದ ಗುಹೆ ಇದೆ. ಕೇಶವಪ್ರಯಾಗಕ್ಕೆ ಒಂದು ಕಿಮೀ ಹಿಂದೆ ಸರಸ್ವತೀ ನದಿಯು ಪರ್ವತದಿಂದ ನೂರಾರು ಅಡಿಗಳಷ್ಟು ಕೆಳಕ್ಕೆ ಧುಮುಕುವ ರುದ್ರರಮಣೀಯ ದೃಶ್ಯ ಕಾಣಬಹುದು. ಇದೇ ಸ್ಥಳದಲ್ಲಿ ಭೀಮಸೇನ ದೇವರು ಮಹಾಪ್ರಸ್ಥಾನಕಾಲದಲ್ಲಿ ಒಂದು ಪರ್ವತ ಶಿಖರವನ್ನು ಮುರಿದಿಟ್ಟು ಸೇತುವೆಯಾಗಿ ನಿಲ್ಲಿಸಿರುವ “ಭೀಮಸೇತು” ಕಾಣಬಹುದು‌. ಜಗತ್ತಿನ ಯಾವುದೇ ಪ್ರಸಿದ್ಧ ಜಲಪಾತಕ್ಕೂ ಇಂತಹ ಏಕಶಿಲಾ ಸೇತುವೆ ಇರುವುದಿಲ್ಲ. ಇದು ಭೀಮಸೇನ ದೇವರ ಅಗಾಧ ಬಲ ಹಾಗೂ ಜ್ಞಾನಗಳಿಗೆ ಪ್ರತ್ಯಕ್ಷ ಸಾಕ್ಷಿ. ಇಲ್ಲಿನ ಜನಪದರು ಈ ಕಥೆಯನ್ನು ಅತ್ಯಂತ ಶ್ರದ್ಧೆಯಿಂದ ಇಂದಿಗೂ ಹೇಳುತ್ತಾರೆ. ಬದರಿಗಿಂತ 20 ಕಿಮೀ ಮುಂಚಿತವಾಗಿ ಕಿಂದಮ ಋಷಿಯಿಂದ ಶಾಪ ಪಡೆದ ನಂತರ ಪಾಂಡುರಾಜನು ವಾಸಿಸುತ್ತಿದ್ದ ಪಾಂಡುಕೇಶ್ವರ ಎಂಬ ಸ್ಥಳವಿದೆ.

ಬದರಿಯಲ್ಲಿ ಅಲಕನಂದಾ ಸ್ನಾನಘಟ್ಟದ ಬಳಿ ಬ್ರಹ್ಮಕಪಾಲ, ಗರುಡಶಿಲಾ, ನಾರದಶಿಲಾ ಮುಂತಾದ ಸ್ಥಳಗಳಿವೆ. ಬ್ರಹ್ಮಕಪಾಲದಲ್ಲಿ ಸಮರ್ಪಿಸುವ ಪಿಂಡದಿಂದ ಪಿತೃಗಳಿಗೆ ಸದ್ಗತಿಯಾಗುವುದು ಎಂಬ ಕಾರಣ ಗಯಾ ವಿಷ್ಣುಪಾದ ಶ್ರಾದ್ಧದಂತೆ ಇಲ್ಲಿಯ ಶ್ರಾದ್ಧಕ್ಕೂ ತುಂಬಾ ಮಹತ್ವವನ್ನು ಶಾಸ್ತ್ರ ವಿಧಿಸಿದೆ.

ವಿಶಾಲ ಬದರಿ ಮತ್ತು ಉತ್ತರ ಬದರಿ – ಇವರೆಡು ಪ್ರಸಿದ್ಧವಾದವುಗಳು. ವಿಶಾಲ ಬದರಿಯೇ ನಾರಾಯಣಾಶ್ರಮ. ಶ್ರೀ ವೇದವ್ಯಾಸದೇವರು ಸಾಕ್ಷಾತ್ತಾಗಿ ನೆಲೆಸಿರುವ ಉತ್ತರಬದರಿಯು ಅತೀ ಶ್ರೇಷ್ಠವಾದುದು. ನರಾಗಮ್ಯವಾದ ಈ ಬದರಿಯನ್ನು ಶ್ರೀಮದಾಚಾರ್ಯರು ಎರಡು ಬಾರಿ ಸಂದರ್ಶಿಸಿ ಅಲ್ಲಿ ಶ್ರೀ ನಾರಾಯಣದೇವರಿಂದಲೂ ಸಮೀಪದ ನಾರಾಯಣಾಶ್ರಮದಲ್ಲಿ ಶ್ರೀ ವೇದವ್ಯಾಸರಿಂದಲೂ ವಿಶೇಷವಾಗಿ ಅನುಗ್ರಹೀತರಾದ ವಿವರ ಮದ್ವವಿಜಯದಲ್ಲಿದೆ. ಅಲ್ಲದೆ ಅವರು ಇಲ್ಲಿ ನೆಲೆಸಿರುವರೆಂದೂ ದೇವಮಾನದ ನೂರು ವರ್ಷಗಳ ಅನಂತರ ಅವರು ತಮ್ಮ ಮೂಲರೂಪದೊಂದಿಗೆ ಐಕ್ಯ ಹೊಂದುವರೆಂದೂ ತೀರ್ಥಪ್ರಬಂಧ ಕರ್ತೃ ಶ್ರೀರಾಜರು ತಮ್ಮ ಸರಸಭಾರತೀವಿಲಾಸದಲ್ಲಿ ತಿಳಿಸಿರುವರು.

ಬದರಿ ನಾರಾಯಣ:

ನಾರಾಯಣನು ಬದರಿಕಾಶ್ರಮದ ಅಧಿದೇವತೆ. ಅವನ ಹಿರಿಮೆಯನ್ನೂ , ಅವನಿಂದ ಬೇಡಿಕೊಳ್ಳಬೇಕಾದ ವಿಷಯಗಳನ್ನೂ 42ನೇ ಶ್ಲೋಕದಲ್ಲಿ ರಾಜರು ಹೃದಯಂಗಮವಾಗಿ ವರ್ಣಿಸಿರುವರು — ತನ್ನ ತಂದೆಯಲ್ಲಿ ಆದರವನ್ನು ಹುಟ್ಟಿಸುವುದು ಸತ್ಪುತ್ರನ ಸ್ವಭಾವ. ಆದ್ದರಿಂದ ಧರ್ಮಪುತ್ರನಾದ ನಾರಾಯಣನು ನಮಗೆ ಧರ್ಮದಲ್ಲಿ ಆದರವನ್ನು ಹುಟ್ಟಿಸಲಿ. ಯೋಗಾಭ್ಯಾಸ ನಿರತನಾದ ಅವನು ತನ್ನನ್ನು ಧ್ಯಾನಿಸುವ ಯೋಗಸಂಪತ್ತನ್ನು ಕರುಣಿಸಲಿ. ಕಾಮಾದಿಗಳ ಗರ್ವವನ್ನು ಅಡಗಿಸಿದ ಅವನು ನಮಗೆ ಕಾಮಾದಿಜಯವನ್ನು ಅನುಗ್ರಹಿಸಲಿ. ಉನ್ನತ ಪರ್ವತದಲ್ಲಿ ನೆಲೆಸಿರುವ ಅವನು ನಮಗೆ ಉನ್ನತ ಪದವಿಯನ್ನು ಕೊಡಲಿ. ತಮ್ಮನ್ನು ವಂಚಿಸಲು ಬಂದ ಅಪ್ಸರೆಯರು ತನಗ ಪುತ್ರಿಯರಿದ್ದಂತೆ ಎಂದು ತೋರಿಸಲು ಊರ್ವಶಿಯನ್ನು ಸೃಷ್ಟಿ ಮಾಡಿದ ಅವನು ನಮಗೆ ಸ್ತ್ರೀಜನರಲ್ಲಿ ಇವರು ನನ್ನ ಪುತ್ರಿಯರು ಎಂಬ ನಿರ್ಮಲಭಾವವನ್ನು ಕೊಡಲಿ. ಅನಂತಗುಣಪೂರ್ಣನಾದ ಅವನು ನಮಗೂ ಯಥಾಯೋಗ್ಯವಾಗಿ ಜ್ಞಾನಾನಂದಾದಿ ಸದ್ಗುಣಗಳನ್ನು ಕರುಣಿಸಲಿ. ನಾರಾಯಣರೂಪದ ಹಿರಿಮೆಯನ್ನು ಭಾಗವತಾದಿ ಗ್ರಂಥಗಳ ಹಿನ್ನೆಲೆಯಲ್ಲಿ ಅವನಿಂದ ನಾವು ಬೇಡಬೇಕಾದುದನ್ನು ಸಹ ತಿಳಿಸಿಕೊಡುವ ಅಪೂರ್ವ ಶ್ಲೋಕವಿದು.

See also  ಶ್ರೀಹರಿಯ ಈ 16 ಹೆಸರುಗಳನ್ನು ಜಪಿಸಿದರೆ ಅನೇಕ ಪ್ರಯೋಜನಗಳಿವೆ!

ಹಯಗ್ರೀವ ಸ್ತುತಿ:

ರಾಜರು 45ನೇ ಈ ಶ್ಲೋಕದಲ್ಲಿ ಚತುರ್ಮುಖ ಬ್ರಹ್ಮ ದೇವರೇ ಮೊದಲಾದ ಹನ್ನೊಂದು ಸಾಕ್ಷಿಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಕೇಳಿಕೊಳ್ಳುತ್ತಾ ಜಡವಾದ ಕರ್ಮದಿಂದಲೇ ಮೋಕ್ಷವೆಂಬ ಮೀಮಾಂಸಕ ಮತವನ್ನೂ, ಸಗುಣಬ್ರಹ್ಮನಿಂದ ಬೇರೆಯಾದ ನಿರ್ಗುಣ ಬ್ರಹ್ಮ ಮತ್ತೊಬ್ಬನಿರುವನೆಂಬ ಶಿವ, ಸ್ಕಂದ, ಗಣಪತಿ, ಸೂರ್ಯ, ಶಕ್ತಿ ಮೊದಲಾದವರನ್ನೂ ಸರ್ವೋತ್ತಮರೆಂದು ಹೇಳುವ ಶೈವಾದಿ ಮತಗಳನ್ನೂ, ತುಂಬಾ ಪರಿಣಾಮಕಾರಿಯಾಗಿ ನಿರಾಕರಿಸುತ್ತಾ ಶ್ರೀಹರಿಯ ಸರ್ವೋತ್ತಮತ್ವವನ್ನು (ಅನಂತಗುಣಪೂರ್ಣತ್ವವನ್ನೂ ಸಕಲದೋಷದೂರತ್ವವನ್ನೂ) ಸಮರ್ಥಿಸಿರುವರು.

ವಿಷಯಗಳ ಬಗ್ಗೆ ವಿವಾದವೆದ್ದಾಗ ಸಾಕ್ಷಿಗಳನ್ನು ಕರೆಯುವುದು, ಅಂತಹ ಸಾಕ್ಷಿಗಳು ಶ್ರೇಷ್ಠರಾಗಿದ್ದು ವಿಷಮ ಸಂಖ್ಯಾಕರಾಗಿರಬೇಕೆಂದು ಮತ್ತು ಅವರನ್ನು ಪ್ರತ್ಯೇಕವಾಗಿ ಪ್ರಶ್ನಿಸಿ ತಿಳಿದುಕೊಳ್ಳಬೇಕು ಎಂಬುದು ನ್ಯಾಯಪ್ರಾಪ್ತವಾದ ವಿಚಾರ. ಪ್ರಕೃತ ವಿಷ್ಣುಸರ್ವೋತ್ತಮತ್ವದಂತಹ ಅತ್ಯಂತ ಮಹತ್ವದ ವಿಷಯವನ್ನೂ ಇತರ ಮತಗಳ ಅಸಾರತ್ವವನ್ನೂ ಅತ್ಯಂತ ಪ್ರಬಲವಾದ ಹನ್ನೊಂದು ಸಾಕ್ಷಿಗಳನ್ನು ಪ್ರತ್ಯಕ್ಷ ಪ್ರತ್ಯೇಕವಾಗಿ ಕೇಳಿಕೊಳ್ಳುವ ಮೂಲಕ ತುಂಬಾ ಸುಂದರವಾಗಿ ವಿವರಿಸಿದ್ದಾರೆ.

ಇಲ್ಲಿ ಹನ್ನೊಂದು ಸಾಕ್ಷಿಗಳಲ್ಲಿ ಬ್ರಹ್ಮ ದೇವರು ಮತ್ಸ್ಯ, ಹಯಗ್ರೀವಾದಿ ಸಕಲ ಅವತಾರಗಳಲ್ಲಿ ಸ್ವಾತಂತ್ರ್ಯೇಣ ತಮ್ಮಿಂದಾಗದ ತಪೋಹನನ, ಮಧುಕೈಟಭಹನನ, ವೇದಾಹರಣ ಮೊದಲಾದ ಕಾರ್ಯಗಳನ್ನು ಕಂಡವರು. ಜೀವೋತ್ಮರಾದ್ದರಿಂದ ಅವರೇ ಹರಿಸರ್ವೋತ್ತಮತ್ವ ಸಮರ್ಥನೆಗೆ ಮುಖ್ಯ ಸಾಕ್ಷಿ ಎಂದು ಸೂಚಿಸಲು ಇವರನ್ನೇ ಪ್ರಥಮವಾಗಿ ಉಲ್ಲೇಖಿಸುವರು.
ದೇವಸಮೂಹ ಮತ್ತು ಮಂದರಪರ್ವತಗಳು ಕೂರ್ಮಾವತಾರದಲ್ಲಿ ಶ್ರೀ ಹರಿಯ ಮಂದರಾನಯನ, ಮಂದರೋದ್ಧರಣಾದಿ ಕಾರ್ಯಗಳನ್ನು ಕಂಡಿವೆ. ಭೂದೇವಿಯು ಘನೋದಕದಲ್ಲಿ ಮುಳುಗಿದ್ದವಳಾಗಿ ದೈತ್ಯನಿಂದ ಮುಳುಗಿಸಲ್ಪಟ್ಟವಳಾಗಿ, ಶ್ರೀ ಹರಿಯಿಂದ ಉದ್ಧರಿಸಲ್ಪಟ್ಟವಳು.

ಪ್ರಹ್ಲಾದರಾಜರು ನರಸಿಂಹಾವತಾರದಲ್ಲಿ ಇತರ ಯಾರಿಗೂ ಆಗದ ಹಿರಣ್ಯಕಶುಪುವಿನ ಹನನವನ್ನು ಮಾಡಿ ಶ್ರೀಹರಿಯು ಬ್ರಹ್ಮಾದಿ ಸಕಲದೇವತೆಗಳಿಂದ ಸ್ತುತನಾದದ್ದನ್ನು ಪ್ರತ್ಯೇಕ ನೋಡಿದವರು. ಇಂದ್ರದೇವರು ವಾಮನಾವತಾರದಲ್ಲಿ ಶ್ರೀಹರಿಯು ತನಗಾಗಿ ತ್ರಿವಿಕ್ರಮರೂಪದಿಂದ ತ್ರಿಲೋಕವನ್ನು ವ್ಯಾಪಿಸಿದ್ದನ್ನು ನಖಾಗ್ರದಿಂದ ಬ್ರಹ್ಮಾಂಡವನ್ನು ಭೇದಿಸಿದ್ದನ್ನು ಕಂಡವರು.ಬ್ರಾಹ್ಮಣ ಸಮುದಾಯವು ಪರಶುರಾಮಾವತಾರದಲ್ಲಿ ಶ್ರೀಹರಿಯು 21 ಬಾರಿ ದುಷ್ಟಕ್ಷತ್ರಿಯಕುಲವನ್ನು ಸಂಹರಿಸಿ ತಮಗೆ ಸಪ್ತದ್ವೀಪಸಮೇತವಾದ ಭೂಮಿಯನ್ನು ದಾನ ಮಾಡಿದ ಶೌರ್ಯ ಔದಾರ್ಯಾದಿ ಗುಣಗಳನ್ನು ಕಂಡವರು. ಸಮುದ್ರವು ಶ್ರೀರಾಮಾವತಾರದಲ್ಲಿ ತನ್ನಲ್ಲಿದ್ದ ಮ್ಲೇಚ್ಛರನ್ನು ದಹಿಸಿದ್ದು ತನ್ನ ಜಲವನ್ನು ದರ್ಶನಮಾತ್ರೇಣ ಶೋಷಿಸಿದ್ದು ಇತರಾಸಾಧ್ಯವಾದ ಸೇತುನಿರ್ಮಾಣ ರಾಮಣಹನನಾದಿಗಳನ್ನು ಕಂಡಿದೆ.

ಅರ್ಜುನನು ಶ್ರೀಕೃಷ್ಣಾವತಾರದಲ್ಲಿ ವಿಶ್ವರೂಪದರ್ಶನಾದಿಗಳಿಂದ ಶ್ರೀಹರಿಯ ಮಾಹಾತ್ಮ್ಯವನ್ನು ಕಂಡವನು. ಶ್ರೀರುದ್ರದೇವರು ತ್ರಿಪುರದಹನಪ್ರಸಂಗ, ಭಸ್ಮಾಸುರವಧಪ್ರಸಂಗ, ಯೋಗಿನೀಪ್ರಸಂಗ ಮೊದಲಾದ ವಿಶಿಷ್ಟ ಸಂದರ್ಭಗಳಲ್ಲಿ, ದುರ್ವಾಸಾದಿ ಅವತಾರಗಳಲ್ಲಿ ಅಂಬರೀಷಪ್ರಸಂಗಾದಿಗಳಲ್ಲೂ ಶ್ರೀಹರಿಯ ಮಾಹಾತ್ಮ್ಯವನ್ನು ಸ್ವತಃ ಕಂಡವರು. ಸದ್ಧರ್ಮವು ಕಲ್ಕ್ಯವತಾರದಿಂದ ಶ್ರೀಹರಿಯ ದುಷ್ಟನಿಗ್ರಹ ಮೂಲಕ ತನ್ನನ್ನು ಪುನಃ ಪ್ರತಿಷ್ಠಾಪನೆ ಮಾಡಿದ್ದನ್ನು ಕಂಡಿದೆ.
ಬುದ್ಧಾವತಾರದಲ್ಲೂ ಅಸುರಮೋಹಕವಾದ ದರ್ಶನವನ್ನು ಪ್ರಚುರಪಡಿಸುವ ಮೂಲಕ ದುಷ್ಟನಿಗ್ರಹಾದಿಗಳನ್ನು ಮಾಡಿದ್ದನ್ನು ನೆನೆಯಬಹುದು.
ಹೀಗೆ ವಿಭನ್ನವಾದ ಹನ್ನೊಂದು ಸಾಕ್ಷಿಗಳು ಶ್ರೀಹರಿಸರ್ವೋತ್ತಮತ್ವಾದಿ ಸಕಲಪ್ರಮೇಯಗಳ ಸ್ಥಾಮನೆಯ ವಿಷಯದಲ್ಲಿ ಮುಖ್ಯ ಸಾಕ್ಷಿಗಳು. ಇತರ ಮತಗಳಿಗೆ ಇಂತಹ ಒಬ್ಬ ಸಾಕ್ಷಿಯೂ ದೊರೆಯುವುದಿಲ್ಲವಾದ್ದರಿಂದ ಅಗ್ರಾಹ್ಯ ಎಂಬ ಭಾವ.

ಪ್ರೀತೋಽಸ್ತು ಕೃಷ್ಣಃಪ್ರಭುಃ

ಶ್ರೀಹರಿಯ ಅಪಾರ ಚರಿತೆಗಳನ್ನು ಶ್ಲೋಕದಲ್ಲಿ ಸಂಗ್ರಾಹ್ಯವಾಗಿ ಸೆರೆಹಿಡಿದು ಶ್ರೀಹರಿಗೆ ಸಮರ್ಪಿಸುತ್ತಾ ಉತ್ತರ ಪ್ರಬಂಧವನ್ನು ಶ್ರೀರಾಜರು ಮುಕ್ತಾಯಗೊಳಿಸಿದ್ದಾರೆ.

See also  ಗೀತಾ ಜಯಂತಿ ಹಿನ್ನೆಲೆ ಮತ್ತು ಪ್ರಾಮುಖ್ಯತೆ

ಉತ್ತರ ಪ್ರಬಂಧದಲ್ಲಿ 20 ಕ್ಷೇತ್ರಗಳನ್ನು 46 ಶ್ಲೋಕಗಳಲ್ಲಿ ವರ್ಣಿಸಿದ್ದಾರೆ.

ಮುಂದಿನ ಸಂಚಾರ ಪೂರ್ವಾಭಿಮುಖವಾಗಿ ಪಯಣಿಸುತ್ತಾ ಅಲ್ಲಿನ ಕ್ಷೇತ್ರಗಳನ್ನು ಪೂರ್ವಪ್ರಬಂಧದಲ್ಲಿ ವರ್ಣಿಸುತ್ತಾರೆ.

0Shares

Leave a Reply

error: Content is protected !!