ಜ್ಯೋತಿಷ್ಯ ನಕ್ಷತ್ರ

ನಕ್ಷತ್ರ ಮತ್ತು ಅದರ ಮಾಹಿತಿ

ನಕ್ಷತ್ರಗಳು ಗ್ರಹಗಳಂತೆ ಸೂರ್ಯ ಮಂಡಲದಲ್ಲಿ ಇಲ್ಲ. ಅಥವಾ ಪ್ರಭಾವ ಬೀರುವಷ್ಟು ಹತ್ತಿರದಲ್ಲೂ ಇಲ್ಲ. ಅನೇಕ ಕೋಟಿ ಕೋಟಿ ಮೈಲಿಗಳ ದೂರದಲ್ಲಿವೆ. ಅವುಗಳಿಂದ ಹೊರಟ ಬೆಳಕು ಭೂಮಿಯನ್ನು ತಲುಪಲು ಅನೇಕ ಕೋಟಿ ವರ್ಷಗಳೇ ಬೇಕು. ಮೂಲಾ ನಕ್ಷತ್ರದಿಂದ ಹೊರಟ ಬೆಳಕು ಭೂಮಿಗೆ ತಲುಪಲು ೩೦ ಕೋಟಿ ವರ್ಷ ಬೇಕು. ಅವು (ಈ ನಕ್ಷತ್ರಗಳು) ಮಾನವನ ಜೀವಿತದ ಮೇಲೆ ಪರಿಣಾಮ ಬೀರುವ ಸಾದ್ಯತೆ ಇಲ್ಲ. ಇಂದಿನ ವಿಜ್ಞಾನದ ಪ್ರಕಾರ ಅವು (ನಕ್ಷತ್ರಗಳು) ನಿರ್ಜೀವ, ಅಗಾಧ ಗಾತ್ರದ ಬೆಂಕಿಯ ಉಂಡೆಗಳು.

ಈ ನಕ್ಷ ತ್ರಗಳು ಒಂದೇ ದೂರದಲ್ಲೂ ಇಲ್ಲ. . ಅವು ಭೂಮಿಯಿಂದ ಕೋಟಿ ಕೋಟಿ ಮೈಲಿ ಗಳ ದೂರದಲ್ಲಿವೆ, ಬೇರೆ ಬೇರೆ ಅಂತರದಲ್ಲಿವೆ. ಈಗ ನೂರೈವತ್ತು ವರ್ಷಗಳ ಹಿಂದೆ ಈ ನಕ್ಷತ್ರಗಳ ವಿವರ, ದೂರ ತಿಳಿಯುವ ಸಾಧನಗಳಿರಲಿಲ್ಲ. ಹಳೆಯ ನಂಬುಗೆಯ ಮೇಲೇ ಫಲ ಜ್ಯೋತಿಷ್ಯ ಭವಿಷ್ಯ ಹೇಳುತ್ತಾರೆ. ಜ್ಯೋತಿಷ್ಯ ಶಾಸ್ರಕ್ಕೆ ಗಣನೆಗೆ ತೆಗೆದುಕೊಳ್ಳುವ ೨೭ ನಕ್ಷತ್ರಗಳ ಮಾತ್ರ ವಿವರ ಮತ್ತು ಮಾಹಿತಿ ಯನ್ನು ನಾವು ಇಲ್ಲಿ ನಿಮಗೆ ನೀಡಿದ್ದೇವೆ.

ಈ ಕೆಳಗಿನ ನಕ್ಷತ್ರ ಗಳು ಬಹಳಷ್ಟು ಸ್ತ್ರೀ ಲಿಂಗ ಪದಗಳು ; ಅವು ಧೀರ್ಘಾಕ್ಷರ ದಿಂದ ಕೊನೆಗೊಳ್ಳಬೇಕು

ಜ್ಯೋತಿಷ್ಯ ಶಾಸ್ತ್ರದ ನಕ್ಷತ್ರಗಳು

  1. ಅಶ್ವಿನಿ
  2. ಭರಣಿ
  3. ಕೃತ್ತಿಕಾ
  4. ರೋಹಿಣಿ
  5. ಮಗಶಿರಾ
  6. ಆರ್ದ್ರಾ
  7. ಪುನರ್ವಸು
  8. ಪುಷ್ಯಾ
  9. ಆಶ್ಲೇಷಾ
  10. ಮಖಾ
  11. ಪುಬ್ಬಾ
  12. ಉತ್ತರಾ
  13. ಹಸ್ತಾ
  14. ಚಿತ್ತಾ
  15. ಸ್ವಾತಿ
  16. ವಿಶಾಖಾ
  17. ಅನೂರಾಧಾ
  18. ಜ್ಯೇಷ್ಠಾ
  19. ಮೂಲಾ
  20. ಪೂರ್ವಾಷಾಢಾ
  21. ಉತ್ತರಾಷಾಢಾ
  22. ಶ್ರವಣಾ
  23. ಧನಿಷ್ಠಾ
  24. ಶತಭಿಷಾ
  25. ಪೂರ್ವಾಭಾದ್ರ
  26. ಉತ್ತರಾಭಾದ್ರ
  27. ರೇವತಿ

ಈ ಜ್ಯೋತಿಷ್ಯಕ್ಕೆ ಗಣನೆಗೆ ತೆಗೆದುಕೊಳ್ಳುವ ೨೭ ನಕ್ಷತ್ರ ಗಳು ಬ್ರಹ್ಮನ ಮಗ ದಕ್ಷನ ಹೆಣ್ಣುಮಕ್ಕಳು. ಅವರನ್ನು ಚಂದ್ರನಿಗೆ ಕೊಟ್ಟು ವಿವಾಹ ಮಾಡಿದ್ದನು. ಚಂದ್ರನು ದಿನಕ್ಕೆ ಒಬ್ಬರಂತೆ ಅಶ್ವಿನಿ ಮೊದಲಾದ ಸತಿ-ನಕ್ಷತ್ರಗಳ ಜೊತೆ ಇರುತ್ತಾನೆ. (ಅವೇ ಚಂದ್ರ ನಕ್ಷತ್ರ.)

ಜ್ಯೋತಿಷ್ಯ ನಕ್ಷತ್ರಗಳ ಅರ್ಥ:

ಆಕಾಶದಲ್ಲಿ ಮಕರ ಮತ್ತು ಕರ್ಕಾಟಕ ಸಂಕ್ರಾತಿ ಮಧ್ಯ ಅವಕ್ಕೆ ಎರಡು ಕಡೆ ಸ್ಪರ್ಶಿಸುವಂತೆ ವೃತ್ತವನ್ನು ರಚಿಸಿದರೆ , ಅದು ಕ್ರಾಂತಿವೃತ್ತ ವೆನಿಸುವುದು. ಅದು ಆಕಾಶದಲ್ಲಿ ೩೬೦ ಡಿಗ್ರಿಯ ಊಹಾ ವೃತ್ತವಾಗುವುದು. ಆ ೩೬೦ ಡಿಗ್ರಿಗಳನ್ನು ೨೭ ಭಾಗ ಮಾಡಿದರೆ ೨೭ ನಕ್ಷತ್ರದ ಸ್ಥಾನಗಳಾಗುತ್ತವೆ. ಅವೇ ಅಶ್ವಿನಿ, ಭರಣಿ, ಮೊದಲಾದ ೨೭ ನಕ್ಷತ್ರ ಸ್ಥಾನಗಳು. ಆ ಹೆಸರಿನ ಒಂದು ನಕ್ಷತ್ರಕ್ಕೆ ಆಕಾಶದಲ್ಲಿ ೧೩.೧/೩ ಡಿಗ್ರಿ ಯಷ್ಟು ಸ್ಥಾನ (ಸ್ಥಳ -ಆ ಸ್ಥಳ ಕ್ಕೆ ನಕ್ಷತ್ರದ ಹೆಸರು). ಆಕಾಶದಲ್ಲಿ ಈ ಹೆಸರಿನ ನಕ್ಷತ್ರಗಳು ಅಳತೆಗೆ ಸರಿಯಾಗಿ ಇಲ್ಲ; ೧೩.೧/೩ ಡಿಗ್ರಿ ಸ್ಥಳ- ಮಧ್ಯದಲ್ಲಿ ಎಲ್ಲಿಯೋ ಒಂದು ಕಡೆ ಬರುವುದು. ಚಂದ್ರನು ಸುಮಾರು ಪ್ರತಿದಿನ ಒಂದು ನಕ್ಷತ್ರ ದಂತೆ ಒಂದು ತಿಂಗಳಲ್ಲಿ (೨೮/೨೯.೫ ದಿನ) ಈ೨೭ ನಕ್ಷತ್ರ ಗಳಲ್ಲಿ ಸಂಚರಿಸುತ್ತಾನೆ. ವ್ಯಕ್ತಿಯ ಜನನ ಕಾಲದಲ್ಲಿ ಚಂದ್ರನು ಯಾವ ನಕ್ಷತ್ರದಲ್ಲಿರುತ್ತಾನೋ ಅದು ಆ ವ್ಯಕ್ತಿಯ ನಕ್ಷತ್ರವಾಗುತ್ತದೆ (ಚಂದ್ರ ನಕ್ಷತ್ರ- ನಿತ್ಯ ನಕ್ಷತ್ರ -ಎಂದು ಹೆಸರು)

ನಕ್ಷತ್ರ ಪಾದ:

ಈ ೧೩.೧/೩ ಡಿಗ್ರಿಗಳನ್ನು ಪುನಃ ೪ ಭಾಗ (೪ ಪಾದ) ಮಾಡಿದರೆ ಪ್ರತಿ ಭಾಗಕ್ಕೆ ೩.೧/೩ ಡಿಗ್ರಿಯಷ್ಟು(೩ಅಂಶ ೨೦ಕಲೆ) ಸ್ಥಳ (ಆಕಾಶದಲ್ಲಿ) ಬರುವುದು. ಅದು ನಕ್ಷತ್ರದ ಒಂದು ಪಾದ (೩ ೧/೩ಡಿಗ್ರಿ ಸ್ಥಳ) ಪ್ರತಿ ನಕ್ಷತ್ರಕ್ಕೂ ನಾಲ್ಕು ಪಾದಗಳಂತೆ ಅಶ್ವಿನ್ಯಾದಿ ೨೭ ನಕ್ಷತ್ರಗಳನ್ನು (೩೬೦ ಡಿಗ್ರಿಗಳನ್ನು) ೧೦೮ ಭಾಗಮಾಡಿ ಪ್ರತಿ ಭಾಗದಲ್ಲಿ ಜನನ ಕಾಲದಲ್ಲಿದ್ದ ಗ್ರಹಗಳನ್ನು ಗುರುತಿಸಿದರೆ, ಅದು ನವಾಂಶ ಕುಂಡಲಿ. ನಕ್ಷತ್ರದ ಒಂದು ಪಾದಕ್ಕೆ ೩ಅಂಶ ೨೦ಕಲೆಯಾದರೆ , ಚಂದ್ರನು ಒಂದು ಪಾದದಲ್ಲಿ ಸುಮಾರು ೬ ರಿಂದ ೬.೧/೪ ಗಂಟೆಗಳ ಕಾಲ ಇರುತ್ತಾನೆ. ಉದಾಹರಣೆಗೆ ಅಶ್ವಿನಿ ನಕ್ಷತ್ರದ ಮೊದಲ ಪಾದದಲ್ಲಿ ಈ ಆರೂಕಾಲು ಗಂಟೆಗಳ ಮಧ್ಯದಲ್ಲಿ ಒಂದೇ ರೇಖಾಂಶದಲ್ಲಿ ಹುಟ್ಟಿದ ವ್ಯಕ್ತಿಗಳೆಲ್ಲರಿಗೂ ಅಶ್ವಿನಿ ನಕ್ಷತ್ರದ ಒಂದನೇ ಪಾದ.

ಮಳೆಯ ನಕ್ಷತ್ರಗಳು ಅದರ ಮೇಲಿರುವ ಗಾದೆಗಳು:

ಮಳೆಗಾಲವಿರಲಿ, ಚಳಿಗಾಲವಿರಲಿ, ಬೇಸಿಗೆಕಾಲವಾಗಲಿ ಪೂರ್ವಜರು ಆಯಾ ಹವಾಗುಣಕ್ಕೆ ತಕ್ಕಂತೆ ಗಾದೆಗಳನ್ನು ಕಟ್ಟುತ್ತಿದ್ದರು. ಅಷ್ಟೇ ಅಲ್ಲ, ಈಗಲೂ ಸಹ ಹಳ್ಳಿಗಳಲ್ಲಿ ಅಜ್ಜ, ತಾತಂದಿರಿಗೆ ಒಮ್ಮೆ ಮಾತನಾಡಿಸಿದರೆ ಸಾಕು, ತಮ್ಮ ಅನುಭವದ ಬುತ್ತಿಯನ್ನು ತೆರೆದಿಟ್ಟು  ವಿಜ್ಞಾನಿಗಳಂತೆ ಪಟಪಟನೇ ಅವರ ಬಾಯಿಂದ ಮುತ್ತಿನ ಮಣಿಗಳು ಉದುರುತ್ತವೆ.  ತಮ್ಮ ಅನುಭವವೇ ಅವರಿಗೆ ಪಾಠವಾಗಿತ್ತು.. ಅವು ಅಕ್ಷರಶಃ ಸತ್ಯವಾಗಿದೆ. ವಿಜ್ಞಾನಿಗಳನ್ನು ಮೀರಿ ತಮ್ಮ ಅನುಭವದ ಮೇಲೆ ಹಲವಾರು ಗಾದೆ ಮಾತುಗಳನ್ನು ಹೇಳಿದ್ದಾರೆ. ರೈತ ಬಾಂಧವರಿಗೆ ಮೆಲಕು ಹಾಕುವುದಕ್ಕಾಗಿ ಇಲ್ಲಿ ಕೆಲವನ್ನು ತಿಳಿಸಲಾಗಿದೆ.

ಪಾರಂಪರಿಕ ಇಂಥ ಜ್ಞಾನ ಋತು ನಿಯಮಕ್ಕನುಸಾರ ಬೆಳೆದು ಬಂದಿತ್ತು. ಗತಿಸಿದ ವರ್ಷಗಳ ಅನುಭವವೇ ಇದಕ್ಕೆ ಆಧಾರ. ಇಂತಿಂಥ ಮಳೆ ಇಂಥ ದಿನಗಳಲ್ಲಿ ಬರುತ್ತದೆ ಎಂದು ಗುರುತಿಸಿ ನಮೂದಿಸಿದ ಪಂಚಾಂಗವೇ ರೈತನ ಕೃಷಿ ಕಾರ್ಯದ ವೇಳಾಪಟ್ಟಿಗೆ ಆಧಾರವಾಗಿತ್ತು. ಅದರಂತೆಯೇ ರೈತ ತನ್ನ ಕೃಷಿಕಾರ್ಯ ಮುಂದುವರಿಸುತ್ತಿದ್ದನು. ನಂತರ ರೈತರೇ ತಮ್ಮ ಅನುಭವದ ಮೇಲೆ ಹಲವಾರು ಗಾದೆಮಾತುಗಳನ್ನು ಕಟ್ಟಿದ್ದಾರೆ.

ಮಳೆಯ ನಕ್ಷತ್ರಗಳು (Rain stars):

ಆರಿದ್ರಾ, ಪುನರ್ವಸು, ಪುಷ್ಯ, ಆಶ್ಲೇಷ, ಮಖ, ಪುಬ್ಬ, ಉತ್ತರ, ಹಸ್ತ, ಚಿತ್ತ, ಸ್ವಾತಿ ಹಾಗೂ ವಿಶಾಖ ನಕ್ಷತ್ರಗಳನ್ನು ಮಳೆಯ ನಕ್ಷತ್ರಗಳೆಂದು ಕರೆಯಲಾಗುತ್ತದೆ.ಉಳಿದ ನಕ್ಷತ್ರಗಳಲ್ಲಿ ಮಳೆ ಬರುವ ಸಾಧ್ಯತೆ ತೀರಾ ಕಡಿಮೆ.

ಮಳೆಯ ನಕ್ಷತ್ರಗಳ ಮೇಲಿರುವ ಗಾದೆಗಳು( Rain proverbs):

ಯಾವ ಅಕ್ಷರವೂ ಕಲಿಯದ ಪೂರ್ವಜರ ನೆನಪಿನ ಶಕ್ತಿ, ಮಳೆ ಮುನ್ಸೂಚನೆಗೆ ಕಟ್ಟಿದ ಗಾದೆಗಳು ಇಂದಿಗೂ ಚಿರಪರಿಚಿತ. ಈ ಗಾದೆಗಳನ್ನು ಯಾರು ಬರೆದರೋ ಗೊತ್ತಿಲ್ಲ, ಆದರೂ ಇಂದಿಗೂ ಹಳ್ಳಿಯಲ್ಲಿ ಮಳೆಗಾಲ ಬಂತೆಂದರೆ ಸಾಕು, ತಾವಾಗಿಯೇ ಬಾಯಿಂದ ಹೊರಬರುತ್ತವೆ. ಈಗಲೂ ರೈತಬಾಂಧವರ ಬಾಯಲ್ಲಿ ಈ ಗಾದೆಗಳು ಕೇಳಿಬರುತ್ತದೆ. ತಮ್ಮ ನೆನಪಿಗೋಸ್ಕರ ಕೆಲವು ಗಾದೆಗಳನ್ನು ಇಲ್ಲಿ ನೀಡಲಾಗಿದೆ.

ಅಶ್ವಿನಿ – ಅಶ್ವಿನಿ ಮಳೆ ಬಿದ್ದರೆ ಅರಿಶಿಣಕ್ಕೆ ಮೇಲು, ಅಶ್ವೀನಿ ಸನ್ಯಾಸಿನೀ,

ಭರಣಿ – ಭರಣಿಯಲ್ಲಿ ಮಳೆಯಾದರೆ ಧರಣಿಯೆಲ್ಲಾ ಬೆಳೆ,ಭರಣಿ ಸುರಿದರೆ ಧರಣಿ ಬದುಕೀತು

ಕೃತಿಕಾ – ಕೃತಿಕ ನಕ್ಷತ್ರ ಕಾದರೆ ಗದ್ದೆಗೆ ಒಳ್ಳೆಯದು

ರೋಹಿಣಿ – ರೋಹಿಣಿ ಮಳೆ ಓಣಿಯೆಲ್ಲಾ ಕೆಸರು

ಮೃಗಶಿರ – ಮೃಗಶಿರೆಯಲ್ಲಿ ಮಿಸುಕಾಡದೆ ನೆರೆ ಬಂತು

ಆರ್ದ್ರಾ – ಆರಿದ್ರಾ ಮಳೆ ಆಗದೆ ಗುಡುಗಿದರೆ ಆರು ಮಳೆ ಆಗಲ್ಲ, ಆರಿದ್ರಾ ಮಳೆ ಆರದೆ ಹುಯ್ಯುತ್ತೇ, ಆರಿದ್ರಾ ಇಲ್ಲದಿದ್ದರೆ ದರಿದ್ರ ಖಂಡಿತ, ಅಮ್ಮನ ಮನಸ್ಸು ಬೆಲ್ಲದ ಹಾಗೆ, ಆರಿದ್ರಾ ಹನಿ ಕಲ್ಲಿನ ಹಾಗೆ.

ಆಶ್ಲೇಷ – ತುಂತುರು ಮಳೆಯಿಂದ ತೂಬು ಒಡೆದೀತೆ? ಆಶ್ಲೆ ಮಳೆ ಭೂಮಿ ಹಸ್ರುಗಟ್ಟಂಗೆ ಹುಯ್ತದೆ, ಅಸಲೆ ಮಳೆ ಕೈತುಂಬಾ ಬೆಳೆ, ಅಸಲೆ ಮಳೆ ಬಿದ್ದು ಸಸಿಲೆ(ಸಣ್ಣ ಮೀನು) ಬೆಟ್ಟಕ್ಕೇರಿತು.

ಮಘ – ಮಗೆ ಮಳೆ ಮಗೆ ಗಾತ್ರ ಬೀಳ್ತದೆ, ಬಂದರೆ ಮಗೆ ಹೋದರೆ ಹೊಗೆ, ಬಂದರೆ ಮಘೆ ಇಲ್ಲದಿದ್ದರೆ ಧಗೆ, ಮಘೆ ಮಳೆ ಬಂದಷ್ಟು ಒಳ್ಳೇದು, ಮನೆಮಗ ಉಂಡಷ್ಟು ಒಳ್ಳೇದು.

ಹುಬ್ಬ – ಹುಬ್ಬೆ ಮಳೇಲಿ ಹುಬ್ಬೆತ್ತಕ್ಕೂ ಆಗಲ್ಲ

ಉತ್ತರಾ ಫಲ್ಗುಣಿ – ಉತ್ತರಿ ಮಳೆ ಹುಯ್ದರೆ ಹೆತ್ತಮ್ಮನೂ ಆಗೋಲ್ಲ.

ಹಸ್ತ – ಹಸ್ತ ಇಲ್ದಿದ್ರೆ ಒಕ್ಕಲಿಗ ಹಲ್ಲು ಕಿಸ್ದ.

ಸ್ವಾತಿ –  ಸ್ವಾತಿ ಮಳೆ ಮುತ್ತಿನ ಬೆಳೆ

ವಿಶಾಖ – ವಿಶಾಖ ಮಳೆ ಪಿಶಾಚಿ ಹಿಡಿದ ಹಾಗೆ.

ಅನುರಾಧ – ಅನುರಾಧ ಬಂದರೆ ನಮ್ಮ ರಾಗಿ ನಮ್ಮದು

ಚಿತ್ರಾ – ಚಿತ್ತಾ ಮಳೆ ವಿಚಿತ್ರ ಬೆಳೆ!

ಪೂರ್ವಾಷಾಢ-ಉತ್ತರಾಷಾಢ – ಪೂರ್ವಾಷಾಢ-ಉತ್ತರಾಷಾಢ ಬೇಡವೇ ಬೇಡ.

2 thoughts on “ನಕ್ಷತ್ರ ಮತ್ತು ಅದರ ಮಾಹಿತಿ”

Leave a Reply Cancel reply