ಉಡುಪಿ ಪರ್ಯಾಯ ಉತ್ಸವ

2Shares

ಉಡುಪಿ ಪರ್ಯಾಯ ಉತ್ಸವ ಕರಾವಳಿ ಕರ್ನಾಟಕದ ಉಡುಪಿಯಲ್ಲಿ ನಡೆಯುವ ದ್ವೈವಾರ್ಷಿಕ ಹಬ್ಬವಾಗಿದೆ. ಉಡುಪಿ ಶ್ರೀ ಕೃಷ್ಣ ಮಠದ ನಿರ್ವಹಣೆಯನ್ನು ಉಡುಪಿಯ ಅಷ್ಟ ಮಠಗಳಲ್ಲಿ ಒಂದರಿಂದ ಇನ್ನೊಂದಕ್ಕೆ ಹಸ್ತಾಂತರಿಸುವುದನ್ನು ಪರ್ಯಾಯ ಉತ್ಸವದ ಮೂಲಕ ಆಚರಿಸಲಾಗುತ್ತದೆ.

ಉಡುಪಿ ಪರ್ಯಾಯ ಉತ್ಸವ

ಹಿನ್ನೆಲೆ:

ಉಡುಪಿ ಶ್ರೀಕೃಷ್ಣ ಮಠವನ್ನು ಎಂಟು ಮಠಗಳು ಸರದಿಯಲ್ಲಿ ನಿರ್ವಹಿಸುತ್ತವೆ. ಇವುಗಳನ್ನು ಅಷ್ಟ ಮಠಗಳೆಂದು ಕರೆಯಲಾಗುತ್ತದೆ. ಪುತ್ತಿಗೆ, ಪಲಿಮಾರು, ಅದಮಾರು, ಶೀರೂರು, ಪೇಜಾವರ, ಸೋಧೆ, ಕಾಣಿಯೂರು ಮತ್ತು ಕೃಷ್ಣಾಪುರ ಇವು ಈ ಎಂಟು ಮಠಗಳಾಗಿವೆ. ಪ್ರತಿ ಮಠದ ನೇತೃತ್ವವನ್ನು ಸ್ವಾಮೀಜಿಗಳು ನಿರ್ವಹಿಸುತ್ತಾರೆ. ಪ್ರತಿ ಮಠವು ಎರಡು ವರ್ಷಗಳ ಕಾಲ ಶ್ರೀ ಕೃಷ್ಣ ಮಠದ ಉಸ್ತುವಾರಿ ನಿರ್ವಹಿಸಿ ಪರ್ಯಾಯ ಉತ್ಸವದ ವೇಳೆ ಇನ್ನೊಂದು ಮಠಕ್ಕೆ ಹಸ್ತಾಂತರಿಸುತ್ತಾರೆ.

ಪರ್ಯಾಯ ಉತ್ಸವ:

ಪರ್ಯಾಯ ಉತ್ಸವದ ಆಚರಣೆಗಳು ಮುಂಜಾನೆಯಿಂದಲೇ ಪ್ರಾರಂಭವಾಗುತ್ತವೆ. ದೇವಾಲಯದ ನಿರ್ವಹಣೆಯನ್ನು ವಹಿಸಿಕೊಳ್ಳಲಿರುವ ಮಠದ ಸ್ವಾಮೀಜಿಗಳು ಮಧ್ವಾಚಾರ್ಯರು ನಿರ್ಮಿಸಿರುವ ಕಾಪು ಬಳಿಯ ದಂಡ ತೀರ್ಥದಲ್ಲಿ ಪವಿತ್ರ ಸ್ನಾನ ಮಾಡಿ ಶ್ರೀ ಕೃಷ್ಣನ ಪೂಜೆಗಾಗಿ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಉಡುಪಿಯ ಜೋಡುಕಟ್ಟೆಯಿಂದ ಇವರಿಗೆ ಭವ್ಯವಾಗಿ ಸ್ವಾಗತವನ್ನು ಸಮರ್ಪಿಸುತ್ತಾರೆ. ಈ ಜೋಡುಕಟ್ಟೆಯಲ್ಲಿ ಭಾವಿ ಪರ್ಯಾಯ ಶ್ರೀಗಳು ಪಟ್ಟದ ದೇವರಿಗೆ ಮಂಗಳಾರತಿ ಬೆಳಗಿಸಿ ಪರ್ಯಾಯ ಮೆರವಣಿಗೆ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ಅಲಂಕೃತ ಪಲ್ಲಕ್ಕಿಯಲ್ಲಿ ಕೃಷ್ಣ ಮಠಕ್ಕೆ ಆಗಮಿಸುತ್ತಾರೆ. ಪರ್ಯಾಯ ಶ್ರೀಗಳನ್ನು ಹೊರತು ಪಡಿಸಿ ಇತರ ಯತಿಗಳು ಇವರ ಜೊತೆಗೆ ಅಲಂಕೃತ ಪಲ್ಲಕ್ಕಿಯಲ್ಲಿ ಆಗಮಿಸುತ್ತಾರೆ. ಮತ್ತು ಮೆರವಣಿಗೆಯಲ್ಲಿ ಚಿನ್ನದ ಪಲ್ಲಕ್ಕಿಯಲ್ಲಿ ಭಾವಿ ಪರ್ಯಾಯ ಶ್ರೀಗಳ ಪಟ್ಟದ ದೇವರನ್ನು ಹೊತ್ತು ತರುತ್ತಾರೆ.

ಉಡುಪಿ ಪರ್ಯಾಯ ಪಲ್ಲಕ್ಕಿ

ಉಡುಪಿಯ ರಥಬೀದಿಗೆ ಆಗಮಿಸಿದ ಕೂಡಲೇ ಪಲ್ಲಕ್ಕಿಯಿಂದ ಕೆಳಗಿಳಿದು ನಡೆದುಕೊಂಡು ಬರುತ್ತಾರೆ. ಕನಕನ ಕಿಂಡಿಯಲ್ಲಿ ಶ್ರೀ ಕೃಷ್ಣದೇವರ ದರ್ಶನಮಾಡಿ ನವಗ್ರಹ ದಾನ ನೀಡಿ ಚಂದ್ರಮೌಳೀಶ್ವರ ಮತ್ತು ಅನಂತೇಶ್ವರ ದೇವರ ದರ್ಶನ ಪಡೆದು, ಅನಂತೇಶ್ವರದಲ್ಲಿ ಶ್ರೀ ಮಧ್ವಾಚಾರ್ಯರ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಸಿ ಪ್ರಾರ್ಥನೆಯನ್ನು ಸಲ್ಲಿಸಿ ಶ್ರೀ ಕೃಷ್ಣ ಮಠಕ್ಕೆ ಪ್ರವೇಶಿಸುತ್ತಾರೆ.

Udupi Paryaya 2022 018

Udupi Paryaya 2022 012

ಮಠದ ಮುಂಭಾಗದಲ್ಲಿ ಪರ್ಯಾಯ ಸ್ವೀಕರಿಸುವ ಯತಿಗಳನ್ನು ಪರ್ಯಾಯ ಶ್ರೀಗಳು ಸ್ವಾಗತಿಸುತ್ತಾರೆ. ನಂತರ ಶ್ರೀಕೃಷ್ಣ ದೇವರ ದರ್ಶನ ಪಡೆದು ಭಾವಿ ಪರ್ಯಾಯ ಶ್ರೀಗಳಿಗೆ ಮತ್ತು ಪಟ್ಟದ ದೇವರಿಗೆ ಮಂಗಳಾರತಿ ಬೆಳಗಿ ಚಂದ್ರಶಾಲೆಯಲ್ಲಿ ಪರ್ಯಾಯ ಸ್ವಾಮಿಗಳ ವತಿಯಿಂದ ಮಾಲಿಕೆ ಮಂಗಳಾರತಿ ನಡೆಯುತ್ತದೆ. ಮಧ್ವಾಚಾರ್ಯರ ಸನ್ನಿಧಿಯ ಎದುರು ಪರ್ಯಾಯ ಶ್ರೀಗಳು ಭಾವಿ ಪರ್ಯಾಯ ಶ್ರೀಗಳಿಗೆ ದೇವಾಲಯದ ಕೀಲಿಗಳು, ಅಕ್ಷಯ ಪಾತ್ರೆ ಮತ್ತು ಇತರ ಪೂಜಾ ಸಾಮಗ್ರಿಗಳನ್ನು ನೀಡಿ ಅಧಿಕಾರ ಹಸ್ತಾಂತರಿಸುತ್ತಾರೆ.

Udupi Paryaya 2022 017

Udupi Paryaya 2022 011

Udupi Paryaya 2022 019

Udupi Paryaya 2022 010

Udupi Paryaya 2022 004

ಅಲ್ಲಿಂದ ಸಿಂಹಾಸನಕ್ಕೆ ಕರೆದುಕೊಂಡು ಬರುತ್ತಾರೆ. ಮೊದಲು ತಮ್ಮ ಪಟ್ಟದ ದೇವರನ್ನು ಪೀಠದಲ್ಲಿಟ್ಟು ನಮಸ್ಕರಿಸಿ, ಶುಭ ಮುಹೂರ್ತದಲ್ಲಿ ಇಲ್ಲಿಯವರೆಗೆ ಪರ್ಯಾಯವನ್ನು ನಡೆಸಿದ ಶ್ರೀಗಳು ಆಗಮಿಸಿದ ಭಾವಿ ಪರ್ಯಾಯ ಶ್ರೀಗಳನ್ನು ಕೈ ಹಿಡಿದು ಈ ಸರ್ವಜ್ಞ ಪೀಠದಲ್ಲಿ ಕುಳ್ಳಿರಿಸುತ್ತಾರೆ. ಈ ಕ್ಷಣದಿಂದ ಅವರು ೨ ವರ್ಷಗಳ ಕಾಲ ಅವರು ಪರ್ಯಾಯ ಶ್ರೀಗಳೆನಿಸಿಕೊಳ್ಳುತ್ತಾರೆ. ಸರ್ವಜ್ಞ ಪೀಠದ ಕಾರ್ಯಕ್ರಮಗಳು ಮುಗಿದ ನಂತರ ಎಲ್ಲ ಯತಿಗಳೂ ಬಡಗುಮಾಳಿಗೆಗೆ ಬರುತ್ತಾರೆ.

See also  ಉಡುಪಿ ಪರ್ಯಾಯ ಉತ್ಸವ - 2022ರ ಕೆಲವು ಚಿತ್ರಗಳು

Udupi Paryaya 2022 023

Udupi Paryaya 2022 021 Udupi Paryaya 2022 022 Udupi Paryaya 2022 009

Udupi Paryaya 2022 023

ಅಲ್ಲಿ ಅಲಂಕರಿಸಲ್ಪಟ್ಟಿರುವ ಗದ್ದುಗೆಯಲ್ಲಿ ಆಸೀನರಾಗುತ್ತಾರೆ. ಎಲ್ಲ ಶ್ರೀಪಾದರಿಗೂ ಪರ್ಯಾಯ ಮಠದಿಂದ ಗಂದಾದ್ಯುಪಚಾರಗಳನ್ನು ಸಲ್ಲಿಸಲಾಗುತ್ತದೆ. ಅಷ್ಟ ಮಠಾಧೀಶರಿಂದ ಪಟ್ಟಕಾಣಿಕೆ ಹಾಗೂ ಮಾಲಿಕೆ ಮಂಗಳಾರತಿ ನಡೆಯುತ್ತದೆ. ಹಿಂದೆ ಶ್ರೀ ವಾದಿರಾಜರ ಕಾಲದಲ್ಲಿ ಇಲ್ಲೇ ಪರ್ಯಾಯ ದರ್ಬಾರ್ ನಡೆಯುತ್ತಿತ್ತು. ಈಗ ರಾಜಾಂಗಣದಲ್ಲಿ ನಡೆಯುತ್ತದೆ. ಆದ ಕಾರಣ ಸಾಂಕೇತಿಕವಾದ ದರ್ಬಾರ್ ಅನ್ನು ಇಲ್ಲಿ ಮಾಡಿ ರಾಜಾಂಗಣಕ್ಕೆ ಬರುತ್ತಾರೆ.

Udupi Paryaya 2022 014

ಉಡುಪಿ ಪರ್ಯಾಯ ದರ್ಬಾರ್

ರಾಜಾಂಗಣದಲ್ಲಿ ಎಲ್ಲ ಶ್ರೀಕೃಷ್ಣ ಮಠದ ಎಲ್ಲಾ ಶ್ರೀಗಳು ಉಪಸ್ಥಿತರಿರುತ್ತಾರೆ. ಈ ದರ್ಬಾರ್ ನ ಸಭೆಯಲ್ಲಿ ದೇಶದ ಹಾಗೂ ರಾಜ್ಯದ ಆಡಳಿತ ಮುಖಂಡರು ಆಸೀನರಾಗಿರುತ್ತಾರೆ. ಮತ್ತು ಸಭೆಯಲ್ಲಿ ನೆರೆದಿರುವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಪರ್ಯಾಯ ಶ್ರೀಗಳು ತಮ್ಮ ಮುಂದಿನ ಎರಡು ವರ್ಷಗಳ ಯೋಜನೆಯನ್ನು ಮತ್ತು ತಮ್ಮ ಆಡಳಿತ ಮಂಡಳಿಯನ್ನು ಆಸ್ಥಾನ ವಿದ್ವಾಂಸರ ಹೆಸರನ್ನು ಪ್ರಕಟಿಸುತ್ತಾರೆ. ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸಮ್ಮಾನಿಸಲಾಗುತ್ತದೆ. ಈ ಸುಸಂದರ್ಭದಲ್ಲಿ ಶ್ರೀಗಳಿಗೆ ದೇಶದ ವಿವಿಧ ಕ್ಷೇತ್ರಗಳ ಪ್ರಸಾದವನ್ನು ನೀಡಲಾಗುತ್ತದೆ. ಮದ್ಯಾಹ್ನದ ಮಹಾಪೂಜೆಯ ನಂತರ ಭಕ್ತರಿಗಾಗಿ ಮಹಾ ಅನ್ನಸಂತರ್ಪಣೆ ನಡೆಯುತ್ತದೆ. ಸಂಜೆ ಧಾರ್ಮಿಕ ಪ್ರವಚನ, ಸಾಧಕರಿಗೆ ಸಮ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ.

ಆಚರಣೆಗಳು:

ಪರ್ಯಾಯ ಉತ್ಸವ ಸಮಯದಲ್ಲಿ ಉಡುಪಿ ನಗರವು ಅತ್ಯುತ್ತಮವಾಗಿ ಶೃಂಗರಿಸಿಕೊಂಡು ಮದುವಣಗಿತ್ತಿಯಂತೆ ಕಾಣುತ್ತದೆ. ಪರ್ಯಾಯ ಉತ್ಸವ ಅಂಗವಾಗಿ ಹಲವಾರು ಶಾಪಿಂಗ್, ಆಹಾರ ಉತ್ಸವ ಮತ್ತು ಮನರಂಜನಾ ಕಾರ್ಯಕ್ರಮಗಳು ಸಂದರ್ಶಕರಿಗೆ ಲಭ್ಯವಿರುತ್ತವೆ.

2Shares

Leave a Reply

error: Content is protected !!