ಮಕರ ಸಂಕ್ರಾಂತಿ ಏನಿದರ ಮಹತ್ವ?

0Shares

ಮಕರ ಸಂಕ್ರಾಂತಿ ಆಚರಿಸುವ ಹಿಂದಿರುವ ಮಹತ್ವ:

ಭೂಲೋಕದ ಪ್ರತ್ಯಕ್ಷ ದೇವರು ಎಂದರೆ ಸೂರ್ಯ ಭಗವಾನ್. ಈತನನ್ನು ಜಾತಿ, ಮತ ಭೇದವಿಲ್ಲದೆ ಪ್ರಪಂಚದ ಎಲ್ಲ ಜನರು ಆರಾಧಿಸುತ್ತಾರೆ. ಈ ಸೂರ್ಯ ನಮಗೆ ಬೆಳಕು ನೀಡುವುದಲ್ಲದೆ ಬದುಕನ್ನು ನೀಡುವನು ಹಾಗೂ ಈ ಜಗತ್ತಿನ ಅಂಧಕಾರವನ್ನು ಹೋಗಲಾಡಿಸುವನು. ಈತನು ಜ್ಞಾನದ ಸಂಕೇತವಾಗಿದ್ದಾನೆ. ಭಾಸ್ಕರ ಇಲ್ಲದೆ ಇದ್ದರೆ ಜಗತ್ತಿನ ಸಕಲ ಚಟುವಟಿಕೆಗಳು ನಿಂತು ಹೋಗುತ್ತದೆ.

ಒಂದು ವರ್ಷದಲ್ಲಿ (ಸಂವತ್ಸರ) 12 ಮಾಸಗಳು ಅವುಗಳನ್ನು ಎರಡು ಭಾಗ ಮಾಡಿರುವರು. ಉತ್ತರಾಯಣ ಹಾಗೂ ದಕ್ಷಿಣಾಯನ. ಸೂರ್ಯ ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವ ದಿನವನ್ನು ಸಂಕ್ರಾಂತಿ ಎಂದು ಕರೆಯುತ್ತಾರೆ. ಸೂರ್ಯ ಗ್ರಹವು ಒಂದು ರಾಶಿಯಲ್ಲಿ ಒಂದು ತಿಂಗಳ ಕಾಲ ಇರುತ್ತಾನೆ. ಸೂರ್ಯ, ಧನಸ್ಸು ರಾಶಿಯಿಂದ ಮಕರ ರಾಶಿಗೆ ಸೇರುವ ಸಮಯವನ್ನು ಮಕರ ಸಂಕ್ರಾಂತಿ ಎನ್ನುತ್ತಾರೆ.

ಮಕರ ಸಂಕ್ರಾಂತಿ

ಪ್ರತಿ ವರ್ಷ ಜನವರಿ 14 ಅಥವಾ 15ರಂದು ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೂ ಆನಂತರ ಆತನ ಪಥವು ಉತ್ತರಾಭಿಮುಖವಾಗಿ ಚಲಿಸಲು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಬೆಳಕು ಹೆಚ್ಚು ಇರುತ್ತದೆ. 6 ತಿಂಗಳು ಕಾಲ ಉತ್ತರಾಯಣ ನಂತರ ಅಂದರೆ ಜೂನ್ 15ರ ನಂತರ ದಕ್ಷಿಣಾಯನ ಪ್ರಾರಂಭ ಆಗುತ್ತದೆ.

ಪುರಾಣ ಮತ್ತು ಜ್ಯೋತಿಷ್ಯದ ಪ್ರಕಾರ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದು ನಂಬಿಕೆಯಿದೆ. ಈ ಸಮಯದಲ್ಲಿ ಸತ್ತವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯೂ ಇದೆ. ಶ್ರೀಕೃಷ್ಣನು ಗೀತೆಯಲ್ಲಿ ಆಯಣದಲ್ಲಿ ಉತ್ತರಾಯಣ ಅತಿ ಶ್ರೇಷ್ಠ ಎಂದು ಹೇಳಿರುವನು. ಭೀಷ್ಮ ಪಿತಾಮಹನು ಬಾಣಗಳ ಮಂಚದ ಮೇಲೆ ಮಲಗಿ ಯಮ ಯಾತನೆಯನ್ನು ಅನುಭವಿಸುತ್ತಿದ್ದರೂ ದಕ್ಷಿಣಾಯನದಲ್ಲಿ ತನ್ನ ದೇಹವನ್ನು ತ್ಯಜಿಸಲು ಒಪ್ಪದೆ ಉತ್ತರಾಯಣದ ಪುಣ್ಯಕಾಲದ ಅಷ್ಟಮಿ ದಿನ ಸಾವನ್ನು ಬರ ಮಾಡಿಕೊಳ್ಳುತ್ತಾನೆ.

ಕೃತಯುಗದಲ್ಲಿ ಶಿವ ಮತ್ತು ಪಾರ್ವತಿಯರು ವಿವಾಹವಾಗಿದ್ದು ಈ ಉತ್ತರಾಯಣದಲ್ಲಿ, ಬ್ರಹ್ಮ ದೇವನು ಈ ಜಗತ್ತಿನ ಸೃಷ್ಟಿಯನ್ನು ಪ್ರಾರಂಭಿಸಿದ್ದು ಇಂದ್ರನಿಗೆ ಗೌತಮರು ಶಾಪ ವಿಮೋಚನೆ ಮಾಡಿದ್ದು, ನಾರಾಯಣನು ವರಹಾ ಅವತಾರದಿಂದ ಭೂಮಿಯ ಮೇಲೆ ಪಾದ ಸ್ಪರ್ಶ ಮಾಡಿದ್ದು, ಸಮುದ್ರ ಮಥನದಲ್ಲಿ ಮಹಾಲಕ್ಷ್ಮಿ ಅವತರಿಸಿದ್ದು ಹಾಗೂ ಋಷಿ ಮುನಿಗಳು ತಪಸ್ಸಿಗೆ ಆಯ್ಕೆ ಮಾಡಿಕೊಂಡಿದ್ದು ಸಹ ಈ ಉತ್ತರಾಯಣದಲ್ಲಿ. ಈ ಎಲ್ಲ ಕಾರಣಕ್ಕಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿವಾಹ, ನಾಮಕರಣ, ಗೃಹಪ್ರವೇಶಗಳಂತಹ ಶುಭ ಕಾರ್ಯಗಳನ್ನು ಉತ್ತರಾಯಣದಲ್ಲಿ ಮಾಡುತ್ತಾರೆ.

ಸಂಕ್ರಾಂತಿ ಹಬ್ಬ:

ಸಂಕ್ರಾಂತಿ ಹಬ್ಬವನ್ನು ಎಳ್ಳು-ಬೆಲ್ಲದ ಹಬ್ಬ ಎನ್ನುತ್ತಾರೆ. ರೈತರು ತಾವು ಬೆಳೆದ ಬೆಳೆಗಳನ್ನು ರಾಶಿ ರಾಶಿಯಾಗಿ ಹಾಕಿ ಅದಕ್ಕೆ ಪೂಜೆ ಮಾಡುತ್ತಾರೆ. ಈ ಕಾರಣಕ್ಕಾಗಿ ಸುಗ್ಗಿಯ ಹಬ್ಬ ಎನ್ನುತ್ತಾರೆ. ಸಂಕ್ರಾಂತಿಯ ಹಬ್ಬದ ದಿನ ಎಳ್ಳು ದಾನ ಮಾಡಬೇಕು ಎಂಬ ನಿಯಮವಿದೆ. ಎಳ್ಳು ಶನಿ ಗ್ರಹದ ಪ್ರತಿನಿಧಿ ಹಾಗೂ ಆತನ ಧಾನ್ಯವಾಗಿದೆ. (ಶನಿಗ್ರಹ ಎಂದೊಡನೆ ಎಲ್ಲರಿಗೂ ಏನೋ ಒಂದು ರೀತಿ ಭಯ) ಎಳ್ಳನ್ನು ನಾವು ದಾನ ಮಾಡಲು ಹೋದಾಗ ಸಾಮಾನ್ಯವಾಗಿ ಅದನ್ನು ತೆಗೆದುಕೊಳ್ಳಲು ಇಷ್ಟ ಪಡುವುದಿಲ್ಲ. ಕಾರಣ ಅವರ ಪಾಪ ನಾಮ ತೆಗೆದುಕೊಂಡ ಹಾಗೆ ಎಂದು ಹಾಗೂ ದೋಷ ಉಂಟಾಗುವುದು ಎಂದು. ಆದ್ದರಿಂದ ಈ ಕಾರಣದಿಂದ ಎಳ್ಳಿನ ಜತೆಯಲ್ಲಿ ಬೆಲ್ಲ, ಕಡಲೆಬೀಜ, ಕೊಬ್ಬರಿಯನ್ನು ಮಿಶ್ರಣ ಮಾಡಿ ದಾನ ಮಾಡುವ ಪದ್ಧತಿ ಪ್ರಾರಂಭವಾಯಿತು. ಅಲ್ಲದೆ ಆ ಬೆಳೆಗಳು ಆಗ ತಾನೆ ಬೆಳೆದು ಮಾರುಕಟ್ಟೆಗೆ ಬಂದಿರುತ್ತದೆ. ಅವುಗಳನ್ನು ಪೂಜೆ ಮಾಡಿ ದಾನ ಧರ್ಮ ಮಾಡಿದರೆ ಇನ್ನು ಫಲ ಹೆಚ್ಚು ಬರುವುದು ಎಂಬ ನಂಬಿಕೆಯೂ ಇದೆ.

See also  ಹುಣ್ಣಿಮೆ | ಪೂರ್ಣಿಮೆ

ವೈಜ್ಞಾನಿಕ ರೀತಿಯಲ್ಲಿ ನೋಡಿದಾಗ ಸಂಕ್ರಾಂತಿಯ ಸಮಯದಲ್ಲಿ ಚಳಿ ಹೆಚ್ಚು ಇರುತ್ತದೆ. ಎಳ್ಳು ಸೇವನೆಯಿಂದ ದೇಹದ ಉಷ್ಣತೆ ಹೆಚ್ಚು ಆಗುತ್ತದೆ ಹಾಗೂ ಚರ್ಮದ ಕಾಂತಿಯೂ ಹೆಚ್ಚುತ್ತದೆ. ಈ ಹಬ್ಬವು ಅತ್ಯಂತ ಪ್ರಾಚೀನ ಕಾಲದಿಂದಲೂ ಆಚರಣೆಗೆ ಬಂದಿದೆ. ಜನಪದ ಗೀತೆಯಲ್ಲೂ ಸಂಕ್ರಾಂತಿಯ ಬಗ್ಗೆ ಹೇಳಿದೆ. ಶಿವ ಮತ್ತು ಪಾರ್ವತಿಯರು ಲೋಕ ಸಂಚಾರ ಪ್ರಾರಂಭಿಸುತ್ತಾರಂತೆ. ಈ ಸಂಕ್ರಮಣದ ಕಾಲದ ಗೋಧೂಳಿ ಲಗ್ನಕ್ಕಿಂತ ಹೆಚ್ಚು ಸಮಯ ಈ ಭೂಲೋಕದಲ್ಲಿರುತ್ತಾರೆ ಎಂದು ಪುರಾಣದಲ್ಲಿ ಇದೆ. ಈ ಪುಣ್ಯ ದಿನದಲ್ಲಿ ಹಲವಾರು ದೇವತೆಗಳಿಗೆ ಶಾಪ ವಿಮೋಚನೆ ಉಂಟಾಗಿದೆ. ಉದಾಹರಣೆಗೆ ಇಂದ್ರ ಮತ್ತು ಚಿತ್ರಸೇನ.

ಪ್ರತಿ ವರ್ಷ ಸಂಕ್ರಾಂತಿಯ ಹಬ್ಬದ ದಿನ ಸಂಜೆ ಶಬರಿ ಮಲೆಯಲ್ಲಿ ಅಯ್ಯಪ್ಪ ಸ್ವಾಮಿಯು ಜ್ಯೋತಿ ರೂಪದಲ್ಲಿ ದರ್ಶನ ನೀಡುತ್ತಾನೆ ಎಂಬ ನಂಬಿಕೆ ಇದೆ.

ಗ್ರಾಮೀಣ ಪ್ರದೇಶದಲ್ಲಿ ರೈತರು ಆ ದಿನ ಎತ್ತುಗಳಿಗೆ ಪೂಜೆ ಸಲ್ಲಿಸಿ ಕಿಚ್ಚು ಹಾಯಿಸುತ್ತಾರೆ. ಹೊರ ದೇಶದಲ್ಲೂ ವಿಭಿನ್ನ ರೀತಿಯಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ.

0Shares

Leave a Reply

error: Content is protected !!