ಉಡುಪಿ ಜಿಲ್ಲೆಯ ಪುರಾತನ ದೇವಸ್ಥಾನಗಳಲ್ಲಿ ಉಂಡಾರುನಲ್ಲಿರುವ ಶ್ರೀ ವಿಷ್ಣುಮೂರ್ತಿ ದೇವಸ್ಥಾನವು ಒಂದು. ಶ್ರೀ ವಿಷ್ಣುಮೂರ್ತಿ ದೇವಸ್ಥಾನವು ಇನ್ನಂಜೆ ಗ್ರಾಮದಲ್ಲಿದೆ. ಈ ದೇವಾಲಯವು ಉಡುಪಿಯಿಂದ 13 km ಹಾಗೂ ಕಾಪುವಿನಿಂದ 3 km ದೂರದಲ್ಲಿದೆ. ಈ ದೇವಾಲಯವು ಇಂದಿನ ದಿನಗಳಲ್ಲಿ ಜೀರ್ಣೋದ್ದಾರ ಹಾಗೂ ಹಲವಾರು ಅಭಿವೃದ್ದಿ ಕಾರ್ಯಗಳ ಮೂಲಕ ಉನ್ನತ ಮಟ್ಟದಲ್ಲಿ ಉನ್ನತಿಯನ್ನು ಕಾಣುತ್ತಿದೆ.
Page Contents
ಇತಿಹಾಸ:
ಸುಮಾರು ೭೦೦ ವರ್ಷಗಳ ಹಿಂದೆ ಈ ದೇವಾಲಯದಲ್ಲಿ ಒಂದು ಪವಾಡ ನಡೆದಿತ್ತು. ಅಂದು ಆಷಾಢ ಅಮಾವಾಸ್ಯೆಯಂದು ದೇವಸ್ಥಾನದ ಅರ್ಚಕರು ಕೆಲಸದ ನಿಮಿತ್ತ ದೂರದ ಊರಿಗೆ ಹೋಗಿರುತ್ತಾರೆ. ಹೋದವರು ಮಧ್ಯಾಹ್ನ ಆದರೂ ಮನೆಗೆ ಬಂದಿರಲಿಲ್ಲ. ಇಲ್ಲಿ ನಿತ್ಯ ಪೂಜೆಯ ಅರ್ಚಕರ ಮನೆಯವರು ದೇವರ ಪೂಜೆಯು ಆಗದೆ ಊಟ ಮಾಡುವಂತಿರಲಿಲ್ಲ. ಈ ಕಾರಣಕ್ಕಾಗಿ ಅರ್ಚಕರ ಮನೆಯವರು ಕಾಯುತ್ತಿದ್ದಾಗ, ಅರ್ಚಕರ ಬಾಲ ವಟುವಿಗೆ (ಮಾಣಿಗೆ) ಕಾದು ಕಾದು ತುಂಬಾ ಹಸಿವಾಗ ತೊಡಗಿತು. ಆಗ ತನ್ನ ತಾಯಿಯ ಬಳಿ ಬಂದು ತಾನು ಹೋಗಿ ದೇವರಿಗೆ ಪೂಜೆ ಮಾಡಿ ಬರುವೆ ಎಂದು ಹೇಳುತ್ತಾನೆ. ಆಗ ತಾಯಿ ಮಗನಲ್ಲಿ ಹೇಳುತ್ತಾಳೆ : ದೇವರಿಗೆ ಪೂಜೆ ಮಾಡುವುದು ಅಷ್ಟು ಸುಲಭವಿಲ್ಲ, ಪೂಜೆಯೊಟ್ಟಿಗೆ, ನೈವೇದ್ಯ ಮಾಡಿ ದೇವರಿಗೆ ಉಣಿಸಬೇಕು. ಅದೆಲ್ಲ ನಿನ್ನಿಂದ ಆಗದು (ದೇವರೆಗು ಪೂಜೆ ಅಂಪುಣ ಆತು ಸುಲಭ ಇದ್ದಿ, ದೇವೆರೆಗು ಪೂಜೆದೊಟ್ಟು, ನೈವೇದ್ಯ ಅಂತುತು ಉಂಪೋವೊಡು, ಅವ್ವು ಪೂರಾ ನಿನಟ ಆಪುರಿ). ಸ್ವಲ್ಪ ತಡೆದು ಕೋ ಇನ್ನೇನು ನಿನ್ನ ಅಪ್ಪ ಬಂದು ಪೂಜೆ ಮುಗಿಸುವರು ಎಂದು ಸಮಾಧಾನ ಪಡಿಸುತ್ತಾಳೆ.
ಅದರೆ ವಟು ಮಾತ್ರ ಪೂಜೆ ಮಾಡಲು ಸ್ನಾನಾದಿ ನಿಯಮಗಳನೆಲ್ಲ ಮಾಡಿಕೊಂಡು ಪೂಜೆಗೆ ತೆರಳಿ, ನೈವೇದ್ಯ ತಯಾರು ಮಾಡಿ, ದಿನಾ ತಂದೆ ಮಾಡುತ್ತಿರುವಂತೆ ದೇವರ ವಿಗ್ರಹಕ್ಕೆ ಅರ್ಘ್ಯಪಾದ್ಯ ಆಚಮನ ಪರಿಕರಗಳಿಂದ ಅಭಿಷೇಕಮಾಡಿ, ಶುದ್ದ ವಸ್ತ್ರ ಉಡಿಸಿ, ಹೂವಿನ ಅಲಂಕಾರಮಾಡಿ, ದೇವರ ಎದುರು ನೈವೇದ್ಯ ಇಟ್ಟು ದೇವರಲ್ಲಿ ಉಣಲು ನಿವೇದನೆ ಮಾಡುತ್ತಾನೆ. ವಾಡಿಕೆಯಂತೆ ತುಳುವಿನಲ್ಲಿ “ಉಣ್ಣೆ ದೇವರೆ” (ಊಟ ಮಾಡಿ ದೇವರೇ) ಎನ್ನುತ್ತಾನೆ. ಅದರೆ ನೈವೇದ್ಯ ಹಾಗೆ ಇರುತ್ತದೆ. ನನ್ನ ಅಪ್ಪ ಹೇಗೆ ಉಣಿಸುತ್ತಿದ್ದಾರೋ ನನಗೆ ಗೊತ್ತಿಲ್ಲ , (ಅಪ್ಪ ಎಂಚ ಉಣ್ಣ್ಪೋಪೆರು ಪಂಣ್ತು ಎಂಕ್ ಗೊತ್ತಿದ್ದಿ” ಬೇಗ ಉಣ್ಣೆ”) ಎಂದು ಪರಿಪರಿಯಾಗಿ ನಿವೇದಿಸಿದರೂ ನೈವೇದ್ಯ ಹಾಗೆ ಇರುತ್ತದೆ. ಮಾಣಿಗೆ ದುಃಖ ಬರುತ್ತದೆ. ಕೊನೆಗೆ ಯೋಚಿಸಿ, ದೇವರಿಗೆ ಪಲ್ಯ ಇಲ್ಲದೆ ಊಟ ಸೇರುತ್ತಿಲ್ಲ ಕಾಣುತ್ತೆ ಎಂದು ಮನೆಗೆ ತೆರಳಿ ತನ್ನ ತಾಯಿಗೆ ತಿಳಿಯದಂತೆ ಮನೆಯಲ್ಲಿ ತಯಾರಿಸಿಟ್ಟ ಉಪ್ಪುನೀರಿನಲ್ಲಿ ಹಾಕಿಟ್ಟ ಮಾವಿನಕಾಯಿ ಚಟ್ನಿ (ಕುಕ್ಕುದ ಚಟ್ನಿ) – ವ್ರತ ಊಟದಲ್ಲಿ ಹುಣಸೆ ಹುಳಿಯ ಬದಲಿಗೆ ಉಪಯೋಗಿಸುವ ಹುಳಿ, ತಂದಿಟ್ಟು ಮತ್ತೆ ದೇವರೇ ಉಣ್ಣೇ (ಊಟ ಮಾಡಿ) ಎಂದು ನಿವೇದಿಸುತ್ತಾ ನಿವೇದಿಸುತ್ತಾ ಅಲ್ಲೇ ನಿದ್ರೆಗೆ ಜಾರುತ್ತಾನೆ.
ಎಚ್ಚರವಾಗುವಾಗ ನ್ಯೆವೇದ್ಯ ಮತ್ತು ಕುಕ್ಕುದ ಚಟ್ನಿ ಎಲ್ಲವೂ ಖಾಲಿಯಾಗಿರುತ್ತದೆ. ಮಾಣಿಗೆ ಖುಷಿಯಾಗಿ “ದೇವೆರ್ ಉಂಡೆರ್ (ದೇವರು ಊಟ ಮಾಡಿದರು) ಅಮ್ಮಾ ನನಗೆ ಊಟ ಬಡಿಸು ” ಎಂದು ಓಡೋಡಿ ಬಂದು ತಾಯಿಯ ಬಳಿ ಹೇಳುತ್ತಾನೆ. ಆದರೆ ತಾಯಿ ನಂಬುವುದಿಲ್ಲ. ಅಗಷ್ಟೆ ಮನೆಗೆ ಹಿಂತಿರುಗಿ ಬಂದ ತಂದೆಗೂ ವಿಷಯ ತಿಳಿಯುತ್ತದೆ. ಮಗ ಸುಳ್ಳು ಹೇಳುತ್ತಿದ್ದಾನೆ ಎಂದು ತಂದೆಗೆ ಮಗನ ಮೇಲೆ ಎಲ್ಲಿಲ್ಲದ ಸಿಟ್ಟು ಬರುತ್ತದೆ; ” ಏಯ್ ದೇವರು ಎಂದಾದರೂ ನೈವೇದ್ಯ ಉಣ್ಣುತ್ತಾರೆಯೇ? ಹಸಿವು ಹಸಿವು ಅಂತ ಹೇಳಿ ನೀನೇ ತಿಂದು , ದೇವಾಲಯವನ್ನು ಅಪವಿತ್ರ ಮಾಡಿದ್ದಲ್ಲದೆ ಸುಳ್ಳು ಬೇರೆ ಹೇಳುತ್ತೀಯಾ?” ಎಂದು ಬೆತ್ತ ಹಿಡಿದು ಗದರಿಸುವಾಗ, ದೇವರ ಅಶರೀರವಾಣಿ ಕೇಳಿತಂತೆ ” ಆ ಮಗುವಿಗೆ ಹೊಡೆಯಬೇಡ ; ಅವನ ಮುಗ್ಧ ಭಕ್ತಿಗೆ ಮೆಚ್ಚಿ ನಾನು ಉಣದೆ ಇರಲು ಸಾಧ್ಯವಾಗಲಿಲ್ಲ, ನಾನು ಎಲ್ಲವನ್ನೂ ಉಂಡೆ”. ಹೀಗೆ ಬಾಲವಟುವಿನ ಮುಗ್ದ ಭಕ್ತಿಗೆ ಮೆಚ್ಚಿ ಉಂಡ ದೇವರ ಊರಿಗೆ ವಿಶೇಷಣ ಸೇರಿ “ಉಂಡಾರು” ಎಂಬ ಹೆಸರು ಬಂದಿದೆ.
ದೇವಾಲಯದ ವಾಸ್ತುಶಿಲ್ಪ:
ಇನ್ನಂಜೆ ಗ್ರಾಮದ ಪ್ರಸಿದ್ಧ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಸುಮಾರು 6 ಕೋ. ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿದ್ದು, ಅಪೂರ್ವ ಶಿಲ್ಪಕಲೆ ನಿರ್ಮಿತಿಗಳು ಗಮನಸೆಳೆಯುತ್ತಿವೆ. ಈ ಕ್ಷೇತ್ರವು ಉಡುಪಿ ಶ್ರೀ ಸೋದೆ ಮಠದ ಆಡಳಿತಕ್ಕೆ ಒಳಪಟ್ಟಿದೆ.
ಪ್ರಾಸಾದ:
ಸಮಚತುರಶ್ರೀ ಆಕೃತಿಯ 6 ಕೋಲು 10 ಅಂಗುಲ ವಿಸ್ತಾರದ ವೃಷಭಾಯದಲ್ಲಿ ಪ್ರಾಸಾದವಿದೆ. ಗೋಡೆಯಲ್ಲಿ ಶಿಲೆಯಲ್ಲಿ ನಿರ್ಮಿಸಿದ ಅಪರೂಪದ ಶಾಲಾ – ಕೂಟ – ನಾಸಿಕ ಪಂಜರ ಎಂಬ ಅಲಂಕಾರಗಳಿವೆ. ಪ್ರಾಸಾದವು ದ್ವಿತಲವಾಗಿದ್ದು ತಾಮ್ರದ ಮಾಡನ್ನು ಹೊಂದಿದೆ.
ನಮಸ್ಕಾರ ಮಂಟಪ:
ಚತುರಶ್ರೀ ಆಕಾರದ ನಮಸ್ಕಾರ ಮಂಟಪವು ಕದಂಬ ಹಾಗೂ ಹೊಯ್ಸಳರ ಶೈಲಿಯ ಘಂಟೆಯಾಕಾರದ ನಾಲ್ಕು ಸ್ತಂಭಗಳನ್ನು ಹೊಂದಿದೆ. ಇದನ್ನು ಸ್ಥಳೀಯವಾದ ಕರಿಶಿಲೆಯಲ್ಲಿ (ಸೋಮನಾಥ ಶಿಲೆ) ಕೆತ್ತಲಾಗಿದ್ದು ಇದರಲ್ಲಿ ಪ್ರತಿಬಿಂಬವು ನೇರವಾಗಿ ಹಾಗೂ ತಲೆಕೆಳಗಾಗಿ ಏಕಕಾಲದಲ್ಲಿ ಮೂಡುತ್ತದೆ. ಎಂಟೆಂಟು ಸಣ್ಣ ಕಂಬಗಳನ್ನು ಒಳಗೊಂಡಿರುವ ಸಂಗೀತ ಸ್ತಂಭ (ಹಂಪೆಯ ವಿಜಯ ವಿಠಲ ದೇಗುಲದಂತೆ) ಇಲ್ಲಿದ್ದು, ವೃತ್ತಾಕಾರದಲ್ಲಿವೆ. ನಮಸ್ಕಾರ ಮಂಟಪದ ಮೇಲ್ಭಾಗದ ಮುಚ್ಚಿಗೆಗೆ ಪ್ರಾಚೀನ ಹೊಯ್ಸಳ ಹಾಗೂ ಇತ್ತೀಚಿನ ಕೆಳದಿ ಶೈಲಿಗಳನ್ನು ಅನುಸರಿಸಲಾಗಿದೆ.
ನಕ್ಷತ್ರಾಕಾರದ ಮುಖ್ಯಪ್ರಾಣ ಗುಡಿ:
ಹೊರಸುತ್ತಿನಲ್ಲಿ ಭೂತರಾಜರ ಮಾಡವನ್ನು ಪ್ರಾಚೀನ ಶೈಲಿಯಲ್ಲಿ ರಚಿಸಲಾಗಿದೆ. ದೇವಾಲಯದ ಈಶಾನ್ಯ ಭಾಗದಲ್ಲಿ ಮುಖ್ಯಪ್ರಾಣ ದೇವರ ಗುಡಿಯನ್ನು ನಕ್ಷತ್ರಾಕಾರದಲ್ಲಿ ನಿರ್ಮಿಸಲಾಗಿದೆ. ಬಲಿಮಂಟಪ ಅಗ್ರ ಸಭೆಗಳ ಮೇಲ್ಭಾಗದಲ್ಲಿ ಮುಚ್ಚಿಗೆಯಲ್ಲಿ ದಾರುಶಿಲ್ಪಗಳನ್ನು ರಚಿಸಲಾಗಿದೆ. ಅಷ್ಟದಿಕ್ಪಾಲಕರು – ಕೃಷ್ಣಾವತಾರದ ಲೀಲೆಗಳ ಶಿಲ್ಪಗಳು ಅತ್ಯಾಕರ್ಷಕವಾಗಿ ಮೂಡಿ ಬಂದಿದೆ. ಮಂಟಪದ ಸ್ತಂಭಗಳಲ್ಲಿ ದಶವತಾರದ ಶಿಲ್ಪಗಳಿವೆ. ಮಂಟಪದ ಮಾಡಿಗೆ ತಾಮ್ರ ಹೊದೆಸಿ ಅಲಂಕರಿಸಲಾಗಿದೆ.
ಸುತ್ತುಪೌಳಿ:
ಸುತ್ತುಪೌಳಿಯ ತಳಭಾಗ ಶಿಲಾಮಯವಾಗಿದ್ದು, ಗೋಡೆಯನ್ನು ಕೆಂಪುಕಲ್ಲಿನಿಂದ (ಮುರ) ರಚಿಸಲಾಗಿದೆ. ನೈವೇದ್ಯ ಶಾಲೆ, ಭದ್ರತಾ ಕೊಠಡಿ, ಯಾಗಶಾಲೆ, ಉಗ್ರಾಣಗಳಿವೆ. (ಗಣಪತಿ ಹಾಗೂ ವಿಷ್ಣು ಬಿಂಬಗಳಿಗೆ ಶಿಲಾಮಯ ಗುಡಿಯನ್ನು ರಚಿಸಲಾಗಿದೆ.)
ಮುಂಭಾಗದ ಪೌಳಿ:
ಮುಂಭಾಗದ ಪೌಳಿಯನ್ನು ಮೂರು ನೆಲೆಯಲ್ಲಿ ರೂಪಿಸಲಾಗಿದೆ. ತಳಭಾಗ ಶಿಲಾಮಯವಾಗಿಸಿ ಮುಂಭಾಗದಲ್ಲಿ ಸ್ತಂಭಗಳನ್ನು ನಿಲ್ಲಿಸಲಾಗಿದೆ. ಇದರಲ್ಲಿ ಎರಡು ಸಂಗೀತ ಸ್ತಂಭಗಳನ್ನು ಅಳವಡಿಸಲಾಗಿರುವುದು ವಿಶೇಷ.