ಶ್ರೀ ಮಹಿಷಮರ್ದಿನೀ ದೇವಸ್ಥಾನ – ನೀಲಾವರ

1Shares

ಉಡುಪಿ ಜಿಲ್ಲೆಯ ನೀಲಾವರದ ಸೀತಾ ನದಿಯ ತೀರದಲ್ಲಿರುವ ಮಹಾನ್ ಕಾರ್ಣಿಕ ಪುಣ್ಯ ಕ್ಷೇತ್ರವೇ ಶ್ರೀ ಮಹಿಷಮರ್ದಿನೀ ದೇವಸ್ಥಾನ. ಉಡುಪಿ ಜಿಲ್ಲೆಯ ಪುರಾತನ ದೇವಾಲಯಗಳಲ್ಲಿ ಈ ದೇವಾಲಯವು ಒಂದು.  ಈ ದೇವಸ್ಥಾನವು ೧೦ನೇ ಶತಮಾನದಷ್ಟು ಹಳೆಯದಾಗಿದೆ. ಶಕ್ತಿ ಕ್ಷೇತ್ರವಾದ ನೀಲಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನವು ಇಂದು ಕಾರಣೀಕತೆಯನ್ನು ತೋರುತ್ತಿರುವ ಶಕ್ತಿ ಕೇಂದ್ರವಾಗಿದೆ. ಈ ದೇವಾಲಯವು ಉಡುಪಿಯಿಂದ 21 km ಹಾಗೂ ಬ್ರಹ್ಮಾವರದಿಂದ 6 km ದೂರದಲ್ಲಿದೆ. ಶ್ರೀ ಕ್ಷೇತ್ರವು ಇಂದಿನ ದಿನಗಳಲ್ಲಿ ಜೀರ್ಣೋದ್ದಾರ ಹಾಗೂ ಹಲವಾರು ಅಭಿವೃದ್ದಿ ಕಾರ್ಯಗಳ ಮೂಲಕ ಉನ್ನತ ಮಟ್ಟದಲ್ಲಿ ಉನ್ನತಿಯನ್ನು ಕಾಣುತ್ತಿದೆ.

ಶ್ರೀ ಮಹಿಷಮರ್ದಿನೀ ದೇವಸ್ಥಾನ ನೀಲಾವರ

ಸ್ಥಳ ಪುರಾಣ:

ಧರಣೀ ದೇವಿಯ ವಜ್ರಕೀರೀಟದಂತ ಹಿಮಾಲಯ ಪರ್ವತ ಶ್ರೇಣಿಗೆ ಅಲಂಕಾರ ಪ್ರಾಯವಾದ ರಜತಾದ್ರಿಯಲ್ಲಿ ಶಿವಪಾರ್ವತಿಯರು ನೆಲೆನಿಂತಿದ್ದರು. ಆ ಸಮಯದಲ್ಲಿ ನಾಗಲೋಕದ ಒಂದು ಬಾಗಕ್ಕೆ ಅಧಿಕಾರಿಯೂ ಮಹಾಶೇಷನ ಮಿತ್ರನೂ ಆದ ಶಂಖಚೂಡನು ನಾಗಲೋಕವನ್ನು ಆಳುತಿದ್ದನು. ಶಂಖಚೂಡನಿಗೆ ಹಲವು ವರ್ಷಗಳ ಕಾಲ ಮಕ್ಕಳಾಗದೇ ಶಿವನ ಕುರಿತು ಘೋರ ತಪವನ್ನು ಮಾಡಿ ಮೊರೆಹೋದಾಗ ಶಿವಾನುಗ್ರಹದಿಂದ ಐದು ಮಂದಿ ಹೆಣ್ಣುಮಕ್ಕಳಾಗುತ್ತಾರೆ. ಶಿವನ ಅನುಗ್ರಹದಿಂದ ಹುಟ್ಟಿದ ಈ ಮಕ್ಕಳನ್ನು ಮುದ್ದಿನಿಂದ ಸಾಕಿ ಅವರಿಗೆ ದೇವರತಿ, ನಾಗರತಿ, ಚಾರುರತಿ, ಮಂದರತಿ, ನೀಲರತಿ ಎಂದು ನಾಮಕರಣ ಮಾಡುತ್ತಾನೆ. ಶಿವ ಪುತ್ರನಾಗಿರುವ ಸುಬ್ರಮಣ್ಯ ಸ್ವಾಮಿಯೊಂದಿಗೆ ತನ್ನ ಐವರು ಪುತ್ರಿಯರ ವಿವಾಹವನ್ನು ಮಾಡಬೇಕು ಎಂಬ ಆಸೆಯನ್ನು ಶಂಕಚೂಡನು ಹೊಂದಿರುತ್ತಾನೆ. ಆದರೆ ಮಕ್ಕಳು ಪ್ರಾಯಕ್ಕೆ ಬರುವುದಕ್ಕೂ ಮೊದಲೇ ಶಂಕಚೂಡನು ಹೃದಯಾಘಾತದಿಂದ ನಿಧನ ಹೊಂದುತ್ತಾನೆ. ಹೆಣ್ಣು ಮಕ್ಕಳೇ ಮುಂದೆ ನಿಂತು ತಂದೆಯ ಅಂತ್ಯ ಸಂಸ್ಕಾರ ಮಾಡಿ ಹಿರಿಯಳಾದ ದೇವರತಿ ನಾಡಿನ ಅರಸಿಯಾಗುತ್ತಾಳೆ. ಐವರು ಹೆಣ್ಣುಮಕ್ಕಳು ಪ್ರೌಢವಸ್ಥೆಯನ್ನು ತಲುಪಿದ ನಂತರ ತನ್ನ ತಂದೆಯ ಆಸೆಯಂತೆಯೇ ಸುಬ್ರಮಣ್ಯ ಸ್ವಾಮಿಯನ್ನು ವರಿಸುವ ಆಸೆಯಿಂದ ಕೈಲಾಸಕ್ಕೆ ಬರುತ್ತಾರೆ.

ಅಲ್ಲಿ ದ್ವಾರಪಾಲಕನಾಗಿರುವ ನಂದಿಕೇಶನು ಅಕಾಲದಲ್ಲಿ ಶಿವನನ್ನು ನೋಡಬಾರದೆಂದು ಅವರನ್ನು ತಡೆಯುತ್ತಾನೆ. ವಾದ ವಿವಾದಗಳಾಗಿ ಕ್ರೋಧದಿಂದ ನಾಗಕನ್ಯೆಯಯರು ನಂದಿಕೇಶನಿಗೆ ಕೈಲಾಸದಲ್ಲಿ ನೀನಿರಲು ಯೋಗ್ಯನಲ್ಲ, ಭೂಲೋಕದಲ್ಲಿ ರಕ್ಕಸನಾಗಿ ಜನಿಸೆಂದು ಶಪಿಸುತ್ತಾರೆ. ಕೋಪಗೊಂಡ ನಂದಿಯು ನೀವು ಯಾರನ್ನು ನಿರೀಕ್ಷೆ ಇಟ್ಟು ಬಂದಿರೋ, ಅದು ಪಲಿಸದೇ ನೀವು ಭೂಲೋಕದಲ್ಲಿ ಸರ್ಪರೂಪದಲ್ಲಿ ಬೇರೆ ಬೇರೆ ಜಾಗಗಳಲ್ಲಿ ಬಿದ್ದಿರಿ ಎಂದು ಶಪಿಸುತ್ತಾನೆ. ಆಗ ಪ್ರತ್ಯಕ್ಷರಾದ ಶಿವ ಪಾರ್ವತಿಯರು ಯಾರ ಶಾಪವೂ ಹುಸಿಯಾಗದು ಹೆಣ್ಣು ಮಕ್ಕಳಾದ ನಿಮಗೆ ಸುಬ್ರಮಣ್ಯ ಸ್ವಾಮಿಯೊಂದಿಗೆ ಮದುವೆಯಾಗದು. ಆದರೆ ಅವನೊಂದಿಗೆ ಪ್ರತ್ಯ ಪ್ರತ್ಯೇಕವಾಗಿ ಭೂಲೋಕದಲ್ಲಿ ಜನಿಸುವಿರಿ ಎನ್ನುತ್ತಾನೆ. ಪಾರ್ವತಿಯು ನಂದಿಗೆ ಅಭಯನೀಡಿ ಭೋಲೋಕದಲ್ಲಿ ರಕ್ಕಸನಾಗಿ ಹುಟ್ಟಿದ ನಿನಗೆ ನಾನೇ ಮು೦ದೆ ಮೋಕ್ಷ ನೀಡುತ್ತೇನೆ ಎನ್ನುತ್ತಾಳೆ.

See also  ತೀರ್ಥ ಹೇಗೆ ಸ್ವೀಕರಿಸಬೇಕು? ಮೂರು ಬಾರಿ ಯಾಕೆ ಸ್ವೀಕರಿಸಬೇಕು ಗೊತ್ತೇ?

ಶಾಪದ ಪರಿಣಾಮವಾಗಿ ಐದು ನಾಗಕನ್ಯೆಯರು ಸಹ ಸರ್ಪಗಳ ರೂಪದಲ್ಲಿ ಭೂಲೋಕದಲ್ಲಿ ಸಹ್ಯಾದ್ರಿಪರ್ವತ ಶ್ರೇಣಿಯಲ್ಲಿ ಹೋಗಿ ಬೀಳುತ್ತಾರೆ. ಆ ಸಮಯದಲ್ಲಿ ಸಹ್ಯಾದ್ರಿ ತಪ್ಪಲಿನಲ್ಲಿ ತಪಸ್ಸನ್ನು ಮಾಡುತ್ತಿದ್ದ ವಾಘ್ರಪಾದನೆಂಬ ಮುನಿಯೊಬ್ಬರಿಗೆ, ಈ ಹಾವುಗಳ ಓಡಾಟದಿಂದ ತೊಂದರೆ ಉಂಟಾಗಿ ಕಾಡ್ಗಿಚ್ಚಿಗೆ ಸಿಲುಕುವಂತೆ ಮತ್ತೆ ಈ ಹಾವುಗಳಿಗೆ ಶಾಪವನ್ನು ನೀಡುತ್ತಾರೆ. ನಂತರ ತಮ್ಮ ತಪೋಶಕ್ತಿಯಿಂದ ಈ ನಾಗಗಳ ವೃತ್ತಾಂತವನ್ನೆಲಾ ತಿಳಿದ ಮುನಿಗಳು, ದೇವವರ್ಮ ಎಂಬ ರಾಜನು ತಮ್ಮನ್ನು ಕಾಡ್ಗಿಚ್ಚಿನಿಂದ ರಕ್ಷಿಸುತ್ತಾನೆ ಎಂದು ಹರಸುತ್ತಾರೆ.

ಆವಂತಿಯ ರಾಜ ದೇವವರ್ಮನು ರತ್ನಾಕ್ಯನೆಂಬವನಿಂದ ದಾಳಿಗೆ ತುತ್ತಾಗಿ ತನ್ನ ರಾಜ್ಯವನ್ನೆಲ್ಲಾ ಕಳೆದುಕೊಂಡು ಸಹ್ಯಾದ್ರಿಯ ಕಾಡುಗಳಲ್ಲಿ ಸಂಚರಿಸುತ್ತಿರುವಾಗ, ಕಾಡ್ಗಿಚ್ಚಿಗೆ ಸಿಲುಕಿ ನರಳುವಂತಹ ಐದು ನಾಗಕನ್ಯೆಯರ ರೋದನವನ್ನು ಕೇಳಿಸಿಕೊಳ್ಳುತ್ತಾನೆ. ನಂತರ ಆ ಸರ್ಪಗಳನ್ನು ಕಾಡ್ಗಿಚ್ಚಿನಿಂದ ಕಾಪಾಡಿ, ಆತನು ಬಟ್ಟೆಯಲ್ಲಿ ಸುತ್ತಿಕೊಂಡು ಮುಂದೆ ಸಾಗುತ್ತಾನೆ. ದೇವವರ್ಮನ ಬಟ್ಟೆಯಲ್ಲಿದ್ದ ದೇವರತಿಯು ಅರಸಮ್ಮನ ಕಾಡು ಎಂಬಲ್ಲಿ ಕಾಣೆಯಾಗುತ್ತಾಳೆ. ಅದೀಗ ಅರ್ಸಮ್ಮನ ಕಾನು ಎಂದು ಪ್ರಸಿದ್ದಿ ಪಡೆದಿದೆ. ನಾಗರತಿ ನಾಗೇರ್ತಿ ಎಂಬಲ್ಲಿ, ಚಾರುರತಿ ಚೋರಾಡಿ ಎಂಬಲ್ಲಿ ಕಾಣೆಯಾಗುತ್ತಾರೆ. ಮಂದಗಮನೆಯಾದ ಮಂದರತಿ ಮಂದರ್ತಿಯಲ್ಲೂ  ಹಾಗೂ ನೀಲರತಿ ಸೀತಾನದಿಯ ತಟ ನೀಲಾವರದಲ್ಲಿ ಕಾಣೆಯಾಗುತ್ತಾರೆ. ಹೀಗೆ ಪಂಚ ನಾಗಕನ್ಯೆಯರು ಪಂಚ ಕ್ಷೇತ್ರಗಳಲ್ಲಿ ನೆಲೆಸುತ್ತಾರೆ. ಕಾಲಾನಂತರದಲ್ಲಿ ಆ ನಾಗ ಕನ್ಯೆಯರು ದೇವವರ್ಮ ರಾಜನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ತಿಳಿಸಿದಂತೆ ದೇವವರ್ಮ ರಾಜನು, ಹೆಮಾದ್ರಿಯ ರಾಜಾದಿತ್ಯನ ಏಕೈಕ ಪುತ್ರಿ ಜಲಜಾಕ್ಷಿಯನ್ನ ಪ್ರಾಣಾಪಾಯದಿಂದ ಬದುಕಿಸಿದ್ದಕ್ಕೆ ಆ ರಾಜನು ರಾಜ್ಯವನ್ನು ಹಾಗೂ ಮಗಳನ್ನು ದಾರೆಯೆರೆಯುತ್ತಾನೆ.

ಶಾಪಗ್ರಸ್ತನಾದ ನಂದಿಯು ಕಿರಾತ ಕನ್ಯೆ ಮತ್ತು ವ್ಯಾಘ್ರಪಾದ ಮುನಿಗಳ ಸಮಾಗಮದಿಂದ ಮಹಿಷಾಖ್ಯನಾಗಿ ಹುಟ್ಟಿ,ದುಷ್ಟನಾಗಿ ಬೆಳೆಯತೊಡಗುತ್ತಾನೆ. ದೇವಿಯಿಂದ ವದಿಸಲ್ಪಟ್ಟುಮೋಕ್ಷ ಪಡೆಯುತ್ತಾನೆ. ದೇವಿಯು ವೀರನಾದ ಮಹಿಷನ ವಧೆಗೆ ಬೊಬ್ಬರ್ಯ, ಕೆಂಡ ಹೈಗುಳಿ, ಕಲ್ಲುಕುಟ್ತಿಗ ದೈವವನ್ನು ಬಳಸಿಕೊಳ್ಳುತ್ತಾಳೆ.

ಈ ನಾಗಕನ್ಯೆಯರು ನೆಲೆಸಿರುವ ಸ್ಥಳಗಳು ಪಂಚನಾಗ ಸ್ಥಳಗಳಾಗಿ ಪ್ರಸಿದ್ದಿಯಾಗಿವೆ. ಈ ಐದು ಸ್ಥಳಗಳಲ್ಲಿ ನೀಲರತಿ ಎಂಬ ನಾಗಕನ್ಯೆಯೂ ಸೇರಿದ ಜಾಗವೇ ನೀಲಾವರ. ಇದೇ ನೀಲಾವರದಲ್ಲಿ ಗಾಲವ ಎಂಬ ಮಹರ್ಷಿಗಳು ತಪಸ್ಸನ್ನು ಮಾಡಿ, ಮಹಿಷಮರ್ದಿನಿ ಅಮ್ಮನವರನ್ನು ಪ್ರತಿಷ್ಠಾಪನೆ ಮಾಡುತ್ತಾರೆ.

ಸೀತಾನದಿಯ ದಡದಲ್ಲಿ ಪಂಚಮಿಕಾನನ ಎಂಬ ನಾಗಬನವಿದೆ. ಇಲ್ಲಿ ಬೃಹದಾಕಾರದ ಹುತ್ತಗಳು ಬೆಳೆದು ನಿಂತಿವೆ. ಇದೇ ಸ್ಥಳದಲ್ಲಿ ನಾಗಕನ್ಯೆಯಾದ ನೀಲರತಿಯು ನೆಲೆಸಿದ್ದಾಳೆ ಎನ್ನಲಾಗುತ್ತದೆ. ಭಕ್ತಾದಿಗಳು ಈ ಪಂಚಮಿಕಾನನಕ್ಕೆ ಮೊದಲು ಭೇಟಿಯನ್ನು ನೀಡಿ ನಂತರ ಮಹಿಷಮರ್ದಿನಿ ಅಮ್ಮನವರ ದರ್ಶನಕ್ಕೆ ತೆರಳುವುದು ಇಲ್ಲಿನ ವಾಡಿಕೆ. ನೀಲಾವರದ ಮಹಿಷಮರ್ದಿನಿ ಅಮ್ಮನವರು ಅಗಾಧ ಶಕ್ತಿಯನ್ನು ಹೊಂದಿದ್ದು, ಬೇಡಿದ ವರವನ್ನು ನೀಡುವ ಕರುಣಾಮಯಿಯಾಗಿದ್ದಾರೆ. ದೇವಿಯು ಚತುರ್ಬಾಹು ಆಗಿದ್ದು ಬಲಗೈಯಲ್ಲಿ ಚಕ್ರ ಹಾಗೂ ಎಡಗೈಯಲ್ಲಿ ಶಂಖವಿದೆ. ಇನ್ನೊಂದು ಎಡಗೈಯಲ್ಲಿ ಮಹಿಷಾಸುರನನ್ನು ಎತ್ತಿ ಹಿಡಿದು ಅವನ ಕುತ್ತಿಗೆಯನ್ನು ಬಲಗೈಯಲ್ಲಿನ ತ್ರಿಶೂಲದಿಂದ ಇರಿಯುತ್ತಿರುವಂತೆ ಮತ್ತು ಬಲಗಾಲಿನಿಂದ ಮಹಿಷಾಸುರನನ್ನು ಮೆಟ್ಟಿ ಹಿಡಿದಂತೆ ಈ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

ಮುಂಭಾಗ ಶ್ರೀ ಮಹಿಷಮರ್ದಿನೀ ದೇವಸ್ಥಾನ ನೀಲಾವರ

ದೇವಸ್ಥಾನ ಮುಂಭಾಗ

ಒಳಾಂಗಣ ಶ್ರೀ ಮಹಿಷಮರ್ದಿನೀ ದೇವಸ್ಥಾನ ನೀಲಾವರ

ಒಳಾಂಗಣ ಶ್ರೀ ಮಹಿಷಮರ್ದಿನೀ ದೇವಸ್ಥಾನ ನೀಲಾವರ

ಈ ದೇವಾಲಯದಲ್ಲಿ ಪರಿವಾರ ಶಕ್ತಿಗಳಾದ ಶ್ರೀ ವೀರಭದ್ರ, ಕಲ್ಲುಕುಟ್ಟಿಗ ಹಾಗೂ ವಿನಾಯಕ ದೇವರು ನೆಲೆಸಿ ನಿಂದಿದ್ದಾರೆ. ಶ್ರೀ ವೀರಭದ್ರ ದೇವರು ಬೆಳೆಯನ್ನು ರಕ್ಷಣೆ ಮಾಡುತ್ತಾ, ಕಲ್ಕುಡನು ಕಳ್ಳತನಕ್ಕೆ ಸಂಬಂದಿಸಿದ ಕಾವಲಿನ ಕಾರ್ಯವನ್ನು ನಡೆಸುತ್ತಾರೆ. ಕಲ್ಕುಡನು ನೆಲೆಸಿದ ಸ್ಥಳವು ಮನೋಹರವಾದ ಚಿಕ್ಕ ಬೆಟ್ಟದಂತ ಪ್ರದೇಶವಾಗಿದೆ. ಇಲ್ಲಿ ಭಕ್ತಾಧಿಗಳು ತಮ್ಮ ಮನದ ಹರಿಕೆಯನ್ನು ಬೇಡಿಕೊಂಡು ಒಂದು ಕಲ್ಲನ್ನು ಹಾಕಿ ಹೋಗುತ್ತಾರೆ. ಆ ಸಂಪ್ರದಾಯ ಇಂದು ಬೆಳೆದು ಇಲ್ಲಿ ಕಲ್ಲಿನ ಗುಡ್ಡವೆ ನಿರ್ಮಾಣ ಆಗಿದೆ.

ಗಾಲವ ತೀರ್ಥ ಶ್ರೀ ಮಹಿಷಮರ್ದಿನೀ ದೇವಸ್ಥಾನ ನೀಲಾವರ

ಗಾಲವ ತೀರ್ಥ

ಶ್ರೀ ಕ್ಷೇತ್ರದಲ್ಲಿ ಅನ್ನದಾನ ಸೇವೆಯು ನಡೆಯುತ್ತದೆ. ದೇವಾಲಯದ ಎಡಭಾಗದಲ್ಲಿ ಸೀತಾ ನದಿಯು ಹರಿಯುತ್ತದೆ. ಶ್ರೀ ಕ್ಷೇತ್ರದಲ್ಲಿ ವಿನಾಯಕ ದೇವರು ಪ್ರದಕ್ಷಿಣಾ ಪಥದ ಆಗ್ನೇಯದ ಮೂಲೆಯಲ್ಲಿ ನಿರ್ಮಾಣ ಮಾಡಲಾಗಿದೆ. ಹಾಗೂ ದೇವಾಲಯದ ಒಳಗಡೆ ಕೆಲವೊಂದು ಲಿಂಗಗಳು ಉದ್ಬವವಾಗಿದೆ. ಹೊರಗಿನ ಪ್ರದಕ್ಷಿಣಾ ಪಥದಲ್ಲಿ ಶ್ರೀ ವೀರಭದ್ರ ಹಾಗೂ ವ್ಯಾಘ್ರಚಾಮುಂಡಿ ಗುಡಿಗಳು ಇವೆ. ಹಾಗೇ ವೀರ ಕಲ್ಕುಡನು ದೇವಾಲಯದ ಮುಂದೆ ಬಲಭಾಗದ ಗುಡ್ಡದಲ್ಲಿ ನೆಲೆಸಿದ್ದಾನೆ.

ಶ್ರೀ ವೀರಭದ್ರ ಶ್ರೀ ಮಹಿಷಮರ್ದಿನೀ ದೇವಸ್ಥಾನ ನೀಲಾವರ

ಶ್ರೀ ವೀರಭದ್ರ

ಸ್ವಾಗತ ಗೋಪುರ ಶ್ರೀ ವೀರ ಕಲ್ಕುಡ ಶ್ರೀ ಮಹಿಷಮರ್ದಿನೀ ದೇವಸ್ಥಾನ ನೀಲಾವರ

ಸ್ವಾಗತ ಗೋಪುರ ಶ್ರೀ ವೀರ ಕಲ್ಕುಡ

ಶ್ರೀ ವೀರ ಕಲ್ಕುಡ ಶ್ರೀ ಮಹಿಷಮರ್ದಿನೀ ದೇವಸ್ಥಾನ ನೀಲಾವರ

ಶ್ರೀ ವೀರ ಕಲ್ಕುಡ

ನೀಲಾವರ ಕ್ಷೇತ್ರದ ಇತಿಹಾಸ:

ಪ್ರಾಚೀನ ದೇವಸ್ಥಾನಗಳಲ್ಲಿ ಒಂದಾದ ನೀಲಾವರ ಅದೆಷ್ಟು ವರ್ಷದ ಇತಿಹಾಸವನ್ನು ಹೊಂದಿದೆ. ಮಹಿಷಮರ್ದಿನಿಯು ಸಹಸ್ರಾರು ಭಕ್ತ ಕುಟುಂಬಗಳ ಕುಲದೇವತೆ ಮಾತ್ರವಲ್ಲ. ಅವರ ಧಾರ್ಮಿಕ ಜೀವನದ ಮೇಲೆ ಅಚ್ಚಳಿಯದ ಪ್ರಭಾವವನ್ನು ಬೀರಿದ್ದಾಳೆ. ಈ ದೇವಸ್ಥಾನದ ಪ್ರಾಚೀನತೆಯನ್ನು ಗುರುತಿಸುವಲ್ಲಿ ಪ್ರತಿಮಾ ಶಾಸ್ತ್ರ ಹಾಗೂ ಇಲ್ಲಿ ದೊರೆಯುವ ಶಾಸನಗಳು ಪ್ರಮುಖ ಆಕರಗಳಾಗಿವೆ.

See also  ದೇವಸ್ಥಾನದಲ್ಲಿ ಮಂಗಳಾರತಿಯ ನಂತರ ಅರ್ಚಕರು ತಲೆಯ ಮೇಲಿಡುವ ಷಡಾರಿ ಅಥವಾ ಶಟಗೋಪದ ಮಹತ್ವ

ಆಳುಪ ರಾಜವಂಶ ಇಲ್ಲಿ ದೀರ್ಘಕಾಲ ಆಳಿದ ರಾಜವಂಶ. ಅವರು ಉದ್ಯಾವರವನ್ನು ತಮ್ಮ ಆಡಳಿತ ಕೇಂದ್ರವನ್ನಾಗಿ ಮಾಡಿಕೊಂಡಾಗ, ನೀಲಾವರದ ದೇವಸ್ಥಾನದ ಬಗ್ಗೆ ಹೆಚ್ಚು ಗಮನ ಹರಿಸಿದರು. ಆಳುಪ ಅರಸ ವೀರಪಾಂಡ್ಯನು 1258ನೇ ಇಸವಿ ಫೆಬ್ರವರಿ 24 ರಂದು ಹೊರಡಿಸಿದ ಶಾಸನ ಈ ಕ್ಷೇತ್ರದ ಬಗ್ಗೆ ತಿಳಿಸುವ ಅತ್ಯಂತ ಪ್ರಾಚೀನ ದಾಖಲೆಯಾಗಿದೆ. “ನೀಲಾವರದ ಗ್ರಾಮ ಸಭೆ” , “ನೀರುವಾರ ಮುನ್ನೂರಕ್ಕೆ” ರಾಜನು ನೀಡಿದ ನಿರ್ದೇಶನವನ್ನು ಈ ಶಾಸನದಲ್ಲಿ ತಿಳಿಸಲಾಗಿದೆ. ಅದರಲ್ಲಿ ಗ್ರಾಮದ ಆದಾಯದಲ್ಲಿ 100 ಗದ್ಯಾಣಗಳನ್ನು ಅರಮನೆಗೂ, ಮೂವತ್ತು ಗದ್ಯಾಣಗಳನ್ನು ಅಧಿಕಾರಿಗೂ ಹಾಗೂ ಉಳಿದ ಮೂವತ್ತು ಗದ್ಯಾಣಗಳನ್ನು ತನ್ನ ವೆಚ್ಚಕ್ಕೆ ವಿನಿಯೋಗಿಸುವಂತೆ ತಿಳಿಸಲಾಗಿದೆ.

ಆಳುಪ ರಾಣಿ ಚಲ್ಲ ಮಹಾದೇವಿಯ ಪ್ರಥಮ ಶಾಸನ ನೀಲಾವರದಲ್ಲಿ ಲಭ್ಯವಾಗಿದೆ. ಅದರಲ್ಲಿ ಕ್ರಿ.ಶ. 1277ರ ಸೆಪ್ಟಂಬರ್ 12ರಂದು ಅರಮನೆಗೆ ಸಲ್ಲುವ 100 ಹೊನ್ನಿನ ಸಿದ್ದಾಯದಲ್ಲಿ ನೀರುವಾರದ ಭಗವತಿಗೆ ದತ್ತಿ ಬಿಟ್ಟ ವಿವರವನ್ನು ನೀಡಲಾಗಿದೆ. ಹೊಯ್ಸಳರಿಗೂ ಆಳುಪರಿಗೂ ವೈವಾಹಿಕ ಸಂಬಂಧ ಏರ್ಪಟ್ಟು, ಹೊಯ್ಸಳ ಮುಮ್ಮಡಿ ಬಲ್ಲಾಳ ಕ್ರಿ.ಶ. 1333ರಲ್ಲಿ ಕರಾವಳಿ ಕರ್ನಾಟಕದ ಈ ಪ್ರದೇಶದಲ್ಲಿ ತನ್ನ ಆಳ್ವಿಕೆಯನ್ನು ಆರಂಭಿಸಿದ. ಒಂದು ವಿಶೇಷವೆಂದರೆ ಹೊಯ್ಸಳರ ಆಳ್ವಿಕೆಯ ಪ್ರಥಮ ಶಾಸನ ದೊರೆಯುವುದು ನೀಲಾವರದಲ್ಲಿ. ಅದು ಸಹ ನೀರುವಾರ ಗ್ರಾಮ ಸಭೆಯು ಕೆಲವು ಭೂಮಿಯ ಮೇಲಿನ ತೆರಿಗೆಯನ್ನು ದುರ್ಗಾಭಗವತಿ ದೇವಾಲಯಕ್ಕೆ ನೀಡಿದ ವಿಷಯವನ್ನು ತಿಳಿಸುತ್ತದೆ. ಹೊಯ್ಸಳರ ಇನ್ನೊಂದು ಶಾಸನವೂ ದುರ್ಗಾಭಗವತಿಗೆ ದಾನ ನೀಡಿದ್ದನ್ನು ತಿಳಿಸುತ್ತದೆ.

ಆಳುಪರ ನಂತರ ಅಧಿಕಾರಕ್ಕೆ ಬಂದ ವಿಜಯನಗರ ಅರಸರ ಕಾಲದಲ್ಲಿಯೂ ನೀಲಾವರ ಒಂದು ಪ್ರಸಿದ್ಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿತ್ತು. ಕೂರಾಡಿಯ ಪ್ರೌಢಶಾಲೆಯ ಸಮೀಪ ದೊರೆತಿರುವ ಶಾಸನ ನೀಲಾವರದ ದೇವಾಲಯಕ್ಕೆ ನೀಡಿದ ದತ್ತಿಯ ಬಗ್ಗೆ ತಿಳಿಸುತ್ತದೆ. ಕ್ರಿ.ಶ 1387ರ ಇಮ್ಮಡಿ ಹರಿಹರನ ನೀಲಾವರದ ಶಾಸನವು ದೇವಾಲಯದ ಜೀರ್ಣೋದ್ದಾರದ ವ್ಯವಸ್ಥೆ ಮಾಡಿದ ಬಗ್ಗೆ ಹಾಗೂ ಅಲ್ಲಿನ ಪೂಜೆಗೆ ದತ್ತಿಬಿಟ್ಟ ವಿಷಯವನ್ನು ತಿಳಿಸುತ್ತದೆ. ಇಮ್ಮಡಿ ಬುಕ್ಕರಾಯ (ರಾಜಕುಮಾರ) ನೀಲಾವರದಲ್ಲಿ ಆಡಳಿತ ತರಬೇತಿ ಪಡೆದ ವಿಷಯವನ್ನು ಈ ಶಾಸನ ತಿಳಿಸುತ್ತದೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಈ ಶಾಸನ ಜೀರ್ಣೋದ್ದಾರದ ಬಗ್ಗೆ ತಿಳಿಸುವುದರಿಂದ ನಾವು ಈ ದೇವಸ್ಥಾನದ ಪ್ರಾಚೀನತೆಯನ್ನು ನಿರ್ಣಯಿಸಬಹುದು. ಕ್ರಿ.ಶ. 1408ರ ಒಂದನೇ ದೇವರಾಯನ ಶಾಸನ ಹಾಗೂ ಕ್ರಿ.ಶ. 1464ರ ಮಲ್ಲಿಕಾರ್ಜುನನ ಶಾಸನವು ದೇವಾಲಯಕ್ಕೆ ನೀಡಿದ ದಾನವನ್ನು ಉಲ್ಲೇಖಿಸುತ್ತದೆ.

ಆದರೆ ಕ್ರಿ.ಶ. 1528ರ ವಿಜಯನಗರದ ಪ್ರಮುಖ ರಾಜ ಕೃಷ್ಣ ದೇವರಾಯನ ಶಾಸನ ತುಂಬಾ ಪ್ರಾಮುಖ್ಯವಾದುದು. ಬಾರಕೂರಿನ ರಾಜ್ಯಪಾಲ ವಿಜಯಣ್ಣ ಒಡೆಯನ ಆಳ್ವಿಕೆಯ ಕಾಲದಲ್ಲಿ ನೀಲಾವರ ಗ್ರಾಮದಲ್ಲಿ ಆಡಳಿತದ ಅತಿರೇಕ ಸಂಭವಿಸಿರಬೇಕು. ಅದಕ್ಕೆ ಪರಿಹಾರವಾಗಿ ದಾನ ನೀಡಿದ್ದನ್ನು ಈ ಶಾಸನ ಉಲ್ಲೇಖಿಸುತ್ತದೆ. ನೀಲಾವರ ಗ್ರಾಮದಿಂದ ಭಂಡಾರಕ್ಕೆ ಬರುವ ತೆರಿಗೆ ಸಿದ್ಧಾಯದಲ್ಲಿ 71/2 ಕಾಟಿ ಗದ್ಯಾಣ (ನಾಣ್ಯ) ಗಳನ್ನು ದುರ್ಗಾದೇವಿಗೆ ನವರಾತ್ರಿಯ ಸಮಯದಲ್ಲಿ ವಿಶೇಷ ಪೂಜೆ ನಡೆಸಲು ದಾನರೂಪವಾಗಿ ನೀಡಲಾಯಿತು. ಹೀಗೆ ಇಲ್ಲಿ ಆಳಿದ ಪ್ರತಿಯೊಂದು ರಾಜವಂಶಗಳ ನಿರಂತರ ಪ್ರೋತ್ಸಾಹ ಹಾಗೂ ಊರ ಮತ್ತು ಪರ ಊರ ಭಕ್ತರ ಪೂರ್ಣ ಬೆಂಬಲದಿಂದ ನೀಲಾವರ ಒಂದು ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಯಿತು.

ಪಂಚಮಿಕಾನು ಶ್ರೀ ಮಹಿಷಮರ್ದಿನೀ ದೇವಸ್ಥಾನ ನೀಲಾವರ

ಪಂಚಮಿಕಾನು

ಪಂಚಮಿಕಾನು ಶ್ರೀ ಮಹಿಷಮರ್ದಿನೀ ದೇವಸ್ಥಾನ ನೀಲಾವರ 1

ಪಂಚಮಿಕಾನು

ಉತ್ಸವ ರಥ ಶ್ರೀ ಮಹಿಷಮರ್ದಿನೀ ದೇವಸ್ಥಾನ ನೀಲಾವರ

ಉತ್ಸವ ರಥ

ಉತ್ಸವ ಮೂರ್ತಿ ಶ್ರೀ ಮಹಿಷಮರ್ದಿನೀ ದೇವಸ್ಥಾನ ನೀಲಾವರ

ಉತ್ಸವ ಮೂರ್ತಿ

“ನೀಲಾವರದೊಡತಿ ಮಹಿಷಮರ್ದಿನಿಯು ನಿಮಗೆಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ”

See also  ಶ್ರೀ ವಿಷ್ಣುಮೂರ್ತಿ ದೇವಸ್ಥಾನ - ಉಂಡಾರು

ದಾರಿಯ ವಿವರ:

ಶ್ರೀ ಕ್ಷೇತ್ರವನ್ನು ತಲುಪಲು ಬ್ರಹ್ಮಾವರದ ಮೂಲಕ ಬ್ರಹ್ಮಾವರ-ಹೆಬ್ರಿ ಸಾಗುವ ದಾರಿಯಲ್ಲಿ ಸಾಗಿದರೆ ಶ್ರೀ ಕ್ಷೇತ್ರದ ಭವ್ಯ ಸ್ವಾಗತ ಗೋಪುರವು ಕಾಣಸಿಗುತ್ತದೆ. ಅಲ್ಲಿಂದ ಸರಿಸುಮಾರು 4 ಕಿ.ಮೀ ಸಾಗಿದರೆ ಶ್ರೀ ಮಾತೆಯ ದೇವಾಲಯವು ಸೀತಾ ನದಿಯ ದಡದಲ್ಲಿ ವಿರಾಜಮಾನವಾಗಿ ಕಾಣಸಿಗುತ್ತದೆ.

ದೇವಾಲಯದ ಸಮಯ:

ಸೋಮವಾರದಿಂದ – ರವಿವಾರವರೆಗೆ

ಬೆಳಿಗ್ಗೆ –  7.30 ರಿಂದ – ಮಧ್ಯಾಹ್ನ – 1.30 ರವರೆಗೆ

ಸಂಜೆ – 4.30 ರಿಂದ  ರಾತ್ರಿ – 8 ರವರೆಗೆ

1Shares

Leave a Reply

error: Content is protected !!