ಅಮಾವಾಸ್ಯೆ (ಕುಹು) ಎಂದರೆ ಚಾಂದ್ರಮಾಸದಲ್ಲಿ ಒಮ್ಮೆ ಚಂದ್ರನು ಕಾಣಿಸದಿರುವ ದಿನ. ಪ್ರತಿ ತಿಂಗಳು ಚಂದ್ರನು ಆಕಾಶದಲ್ಲಿ ಒಂದು ಬಾರಿ ಪೂರ್ಣ ಚಂದ್ರನಾಗಿ ಕಾಣಿಸುತ್ತಾನೆ. ಚಂದ್ರನ ಪರಿಭ್ರಮಣೆಯ (ಚಂದ್ರ ಭೂಮಿಯು ಸುತ್ತ ಸುತ್ತುವದು) ಕಾರಣದಿಂದ ಚಂದ್ರನು ಭೂಮಿಯ ವಿವಿಧ ಸ್ಥಾನಗಳಲ್ಲಿ ಇರುತ್ತಾನೆ. ಆದ್ದರಿಂದ ಸೂರ್ಯನ ಬೆಳಕು ಚಂದ್ರನ ಮೇಲೆ ಬೀಳುವ ಭಾಗದ ಗೋಚರಿಕೆಯ ಪ್ರಮಾಣದಲ್ಲಿ ಏರುಪೇರಾಗುತ್ತದೆ. ಹಾಗಾಗಿ ಚಂದ್ರನು ವಿವಿಧ ಆಕಾರದಲ್ಲಿ ಕಾಣಿಸುತ್ತಾನೆ. ಇದನ್ನೇ ಚಂದ್ರಬಿಂಬ ಎನ್ನುವರು.
ಚಂದ್ರ ಭೂಮಿಯ ಸುತ್ತ ಸುತ್ತುವಾಗ ಸೂರ್ಯನಿಗೆ ಕೆಲವೊಮ್ಮೆ ಹತ್ತಿರವಾಗಿ ಕೆಲವೊಮ್ಮೆ ದೂರವಾಗಿ ಇರುತ್ತಾನೆ. ಚಂದ್ರ ಭೂಮಿಯ ಸುತ್ತ ಸುತ್ತುವಾಗ ಸೂರ್ಯನಿಗೆ ಕೆಲವೊಮ್ಮೆ ಹತ್ತಿರವಾಗಿ ಕೆಲವೊಮ್ಮೆ ದೂರವಾಗಿ ಇರುತ್ತಾನೆ. ಚಂದ್ರ ಸೂರ್ಯನ ಹತ್ತಿರವಾದಾಗ ಚಂದ್ರನ ಬದಿ ಭೂಮಿಗೆ ಕಾಣುವದಿಲ್ಲ. ಸೂರ್ಯನೊಂದಿಗೆ ಚಂದ್ರನ ಸಂಯೋಗಕ್ಕೆ ಅಮಾವಾಸ್ಯೆ ಎನ್ನುವುದು. ಪ್ರಾಚೀನ ಭಾರತೀಯ ಪಂಚಾಂಗಗಳು ೩೦ ಚಾಂದ್ರಹಂತಗಳನ್ನು ಬಳಸುತ್ತಿದ್ದವು. ಇವನ್ನು ತಿಥಿಗಳೆಂದು ಕರೆಯಲಾಗುತ್ತದೆ. ಯುತಿಯ ಮೊದಲಿನ ಸೂರ್ಯ ಮತ್ತು ಚಂದ್ರರ ನಡುವಿನ ಕೋನೀಯ ದೂರದ ೧೨ ಕೋನಮಾನಗಳೊಳಗೆ ಚಂದ್ರನು ಇರುವಾಗ ಅಮಾವಾಸ್ಯೆ ತಿಥಿಯು ಸಂಭವಿಸುತ್ತದೆ.
ಸಂಸ್ಕೃತದಲ್ಲಿ, ಅಮಾ ಎಂದರೆ ಒಟ್ಟಿಗೆ ಮತ್ತು ವಾಸ್ಯ ಎಂದರೆ ಸಹಜೀವನ ನಡೆಸುವುದು ಎಂದು. ಭಾರತೀಯ ಉಪಖಂಡದ ಬಹುತೇಕ ಭಾಗಗಳಲ್ಲಿ ಹಿಂದೂ ಚಾಂದ್ರಮಾನ ಪಂಚಾಂಗವನ್ನು ಬಳಸಲಾಗುತ್ತದೆ. ಚಾಂದ್ರಮಾನ ಮಾಸವು ಹುಣ್ಣಿಮೆಯ ಅಥವಾ ಪೂರ್ಣಿಮಾದಿಂದ ಆರಂಭವಾಗುತ್ತದೆ, ಆದ್ದರಿಂದ ಅಮಾವಾಸ್ಯೆ ಯಾವಾಗಲೂ ತಿಂಗಳ ಮಧ್ಯದಲ್ಲಿ ಬೀಳುತ್ತದೆ. ಆದಾಗ್ಯೂ, ಕೆಲವು ಪ್ರದೇಶಗಳಲ್ಲಿ ಅಮಾಂತಮಾನ ಪಂಚಾಂಗವನ್ನು ಬಳಸಲಾಗುತ್ತದೆ. ಕೃಷ್ಣ ಪಕ್ಷದಲ್ಲಿ ಹುಣ್ಣಿಮೆಯಿಂದ ಅಮಾವಾಸ್ಯೆಗೆ ಚಂದ್ರನ ಆಕಾರ ಬದಲಾಗುತ್ತದೆ ಶುಕ್ಲ ಪಕ್ಷವನ್ನು ಪ್ರಕಾಶಮಾನವಾದ ಅರ್ಧಭಾಗವೆಂದು ಕರೆಯಲಾಗುತ್ತದೆ. ಆದ್ದರಿಂದ ಅದೇ ಅಮಾವಾಸ್ಯೆಯಂದು ದೇಶದ ಎಲ್ಲಾ ಕಡೆ ಅದೇ ಉತ್ಸವ ಇರುವುದನ್ನು ಕಾಣಬಹುದು.
Page Contents
ಚಂದ್ರನ ಗುರುತ್ವಾಕರ್ಷಣೆಯ ಪ್ರಭಾವ:
ಸೂರ್ಯನ ಹಾಗೆ, ಚಂದ್ರನ ಗುರುತ್ವಾಕರ್ಷಣೆಯ ಪ್ರಭಾವವೂ ಪೃಥ್ವಿಯ ಮೇಲಾಗುತ್ತದೆ. ಹುಣ್ಣಿಮೆ ಮತ್ತು ಅಮಾವಾಸ್ಯೆಗೆ ಈ ಪ್ರಭಾವವು ಹೆಚ್ಚಿರುತ್ತದೆ. ಆದುದರಿಂದ ಈ ದಿನಗಳಲ್ಲಿ ಪೃಥ್ವಿಯ ಮೇಲಿರುವ ಪಂಚ ತತ್ತ್ವಗಳು (ಪೃಥ್ವಿ ತತ್ತ್ವ, ಆಪ ತತ್ತ್ವ, ತೇಜ ತತ್ತ್ವ, ವಾಯು ತತ್ತ್ವ ಮತ್ತು ಆಕಾಶ ತತ್ತ್ವ) ಚಂದ್ರನತ್ತ ಆಕರ್ಷಿಸಲ್ಪಡುತ್ತವೆ. ಇದರಿಂದಾಗಿ, ವಾಯುಮಂಡಲದಲ್ಲಿ ಒಂದು ರೀತಿಯ ಸೂಕ್ಷ್ಮ ಸ್ತರದ ಒತ್ತಡ ನಿರ್ಮಾಣವಾಗುತ್ತದೆ. ಸ್ಥೂಲದಲ್ಲಿ ನೋಡುವುದಾದರೆ ನೀರಿನ ಸೂಕ್ಷ್ಮ ಕಣಗಳು ವಾಯುಮಂಡಲದ ಈ ಸೂಕ್ಷ್ಮ ಒತ್ತಡದ ಪ್ರದೇಶವನ್ನು ಸೇರುತ್ತವೆ. ಇದೇ ರೀತಿ ಬಹುತಾಂಶ ಕೆಟ್ಟ ಶಕ್ತಿಗಳು ಸೂಕ್ಷ್ಮವಾಗಿರುವುದರಿಂದ ಈ ಒತ್ತಡದ ಪ್ರದೇಶದಲ್ಲಿ ಸೆಳೆಯಲ್ಪಡುತ್ತವೆ. ಈ ರೀತಿ ಹೆಚ್ಚಿನ ಸಂಖ್ಯೆಯಲ್ಲಿ ಕೆಟ್ಟ ಶಕ್ತಿಗಳು ಒಂದು ಕಡೆ ಸೇರುವುದರಿಂದ ಅವು ಹೆಚ್ಚಿನ ಪ್ರಮಾಣದಲ್ಲಿ ಕೆಟ್ಟ ಪ್ರಭಾವಗಳನ್ನು ಮನುಷ್ಯರ ಮೇಲೆ ಬೀರುತ್ತವೆ. ಈ ಪ್ರಕ್ರಿಯೆಯು ಹುಣ್ಣಿಮೆ ಅಥವಾ ಅಮಾವಾಸ್ಯೆಗೆ 2 ದಿನ ಮುಂಚೆ ಪ್ರಾರಂಭವಾಗಿ 2 ದಿನ ನಂತರ ಕೊನೆಗೊಳ್ಳುತ್ತದೆ.
ಅಮಾವಾಸ್ಯೆ ಚಂದ್ರನ ಪ್ರಭಾವ:
ಆಮಾವಾಸ್ಯೆಯಂದು ಚಂದ್ರನ ಮೇಲೆ ಸೂರ್ಯನ ಪ್ರಕಾಶವು ಬೀಳುವುದಿಲ್ಲ. ಕತ್ತೆಲೆಯಿದ್ದಾಗ ರಜ ತಮ ಪ್ರಧಾನ ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗುತ್ತವೆ. ಆದುದರಿಂದ ಅಮಾವಾಸ್ಯೆಗೆ ಚಂದ್ರನಿಂದ ಸೂಕ್ಷ್ಮ ರಜ ತಮ ಸ್ಪಂದನಗಳು ಭೂಮಿಯತ್ತ ಪ್ರಕ್ಷೇಪಿಸಲ್ಪಡುತ್ತವೆ.
ಮನುಷ್ಯರ ಮೇಲಾಗುವ ಅಮಾವಾಸ್ಯೆ ಚಂದ್ರನ ಪರಿಣಾಮ:
ಅಮಾವಾಸ್ಯೆಯಂದು ರಜ ತಮವನ್ನು ಪ್ರಕ್ಷೇಪಿಸುವ ಕೆಟ್ಟ ಶಕ್ತಿಗಳು, ಮಾಂತ್ರಿಕರು ಮತ್ತು ತಾಮಸಿಕ ವೃತ್ತಿಯವರಿಗೆ ಅವರ ಕೆಟ್ಟ ಕೃತ್ಯಗಳನ್ನು ಮಾಡಲು ಪ್ರೇರಣೆ ಮತ್ತು ಕಪ್ಪು ಶಕ್ತಿಯು ಸುಲಭವಾಗಿ ಸಿಗುತ್ತದೆ. ಕೆಟ್ಟ ಶಕ್ತಿಗಳಿಗೆ ಪೂರಕವಾಗಿರುವ ಈ ದಿನವನ್ನು ಶುಭ ಕಾರ್ಯಗಳನ್ನು ಮಾಡಲು ‘ಅಶುಭ’ ಎಂದು ಪರಿಗಣಿಸಲಾಗುತ್ತದೆ. ಅಮಾವಾಸ್ಯೆಯಂದು ಚಂದ್ರನ ರಜ ತಮ ಪ್ರಧಾನ ಸ್ಪಂದನಗಳ ಪ್ರಭಾವವು ಮನಸ್ಸಿನ ಮೇಲಾಗುವುದರಿಂದ ಮನಸ್ಸಿನಲ್ಲಿ ಕೆಟ್ಟ ಅಥವಾ ನಕಾರಾತ್ಮಕ ವಿಚಾರಗಳ ಪ್ರಮಾಣವು ಹೆಚ್ಚಾಗುತ್ತದೆ. ಉದಾಹರಣೆಗೆ, ತೀವ್ರ ನಕಾರಾತ್ಮಕ ವಿಚಾರಗಳು, ಆತ್ಮಹತ್ಯೆಯ ವಿಚಾರಗಳು ಇತ್ಯಾದಿ. ದಿನದಲ್ಲಿ ಸೂರ್ಯನಿಂದ ಪ್ರಕ್ಷೇಪಿಸುವ ತೇಜ ತತ್ತ್ವದಿಂದ ರಜ ತಮದ ಸ್ಪಂದನಗಳ ಮೇಲೆ ನಿಯಂತ್ರವಿರುತ್ತದೆ ಆದರೆ ಅಮಾವಾಸ್ಯೆಯ ರಾತ್ರಿ ಈ ತೇಜ ತತ್ತ್ವ ಇಲ್ಲದಿರುವುದರಿಂದ ಕೆಟ್ಟ ಶಕ್ತಿಗಳು ಮನುಷ್ಯರಿಗೆ ಆದಷ್ಟು ಹೆಚ್ಚು ತೊಂದರೆಯನ್ನು ಕೊಡುತ್ತವೆ.
ಅಮಾವಾಸ್ಯೆಗೆ ಮನುಷ್ಯರಿಗೆ ಆಗುವ ಆಧ್ಯಾತ್ಮಿಕ ತೊಂದರೆ ಹುಣ್ಣಿಮೆಯ ತುಲನೆಯಲ್ಲಿ ಹೆಚ್ಚಿರುತ್ತದೆ. ಹುಣ್ಣಿಮೆಗೆ ಆಗುವ ತೊಂದರೆ ಸ್ಥೂಲದೇಹಕ್ಕೆ ಹೆಚ್ಚು ಸಂಬಂಧಪಟ್ಟರೆ, ಅಮಾವಾಸ್ಯೆಯಂದು ಮನಸ್ಸಿನ ಮೇಲೆ ಹೆಚ್ಚಿರುತ್ತದೆ. ಆದುದರಿಂದ ಅಮಾವಾಸ್ಯೆಯಿಂದ ಆಗುವ ತೊಂದರೆ ಸುಲಭವಾಗಿ ತಿಳಿಯುವುದಿಲ್ಲ. ತೊಂದರೆ ತಿಳಿಯದೆ ಹೋಗುವುದರಿಂದ ಈ ತೊಂದರೆಯನ್ನು ದೂರಗೊಳಿಸಲು ಏನು ಪ್ರಯತ್ನಗಳು ಆಗುವುದಿಲ್ಲ, ಹೀಗಾಗಿ ಅಮಾವಾಸ್ಯೆಯಂದು ಆಗುವ ತೊಂದರೆಯು ಹೆಚ್ಚು ಅಪಾಯಕಾರಿಯಾಗಿರುತ್ತದೆ.
ಈ ತೊಂದರೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಸಲು – ಹುಣ್ಣಿಮೆ ಮತ್ತು ಅಮಾವಾಸ್ಯೆಯ ಚಂದ್ರನಿಂದ ಮನುಷ್ಯರ ಮೇಲಾಗುವ ಪ್ರಭಾವವು ಸೂಕ್ಷ್ಮ ಮತ್ತು ಆಧ್ಯಾತ್ಮಿಕ ಸ್ತರದ್ದಾಗಿದೆ. ಆದುದರಿಂದ ಈ ತೊಂದರೆಗಳಿಂದ ರಕ್ಷಿಸಿಕೊಳ್ಳಲು ಆಧ್ಯಾತ್ಮಿಕ ಉಪಾಯಗಳನ್ನು ಮತ್ತು ಆಧ್ಯಾತ್ಮಿಕ ಸಾಧನೆಯನ್ನು ಮಾಡಬೇಕಾಗುತ್ತದೆ.
ಅಮವ್ಯಾಸೆ ಆಚರಣೆಗಳು:
ಅನೇಕ ಹಬ್ಬಗಳನ್ನು ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಇವುಗಳಲ್ಲಿ ದೀಪಾವಳಿಯು ಅತ್ಯಂತ ಪ್ರಸಿದ್ಧವಾಗಿದೆ. ಅನೇಕ ಹಿಂದೂಗಳು ಅಮಾವಾಸ್ಯೆಯಂದು ಉಪವಾಸ ಮಾಡುತ್ತಾರೆ. ಪ್ರತಿ ತಿಂಗಳು, ಪೂರ್ವಜರ ಪೂಜೆಗಾಗಿ ಅಮಾವಾಸ್ಯೆ ದಿನವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಧರ್ಮನಿಷ್ಠ ಜನರು ಪ್ರಯಾಣ ಅಥವಾ ಕೆಲಸ ಮಾಡುವಂತಿಲ್ಲ, ಬದಲಾಗಿ ಅಮಾವಾಸ್ಯೆಗಳ ಕ್ರಿಯಾವಿಧಿಗಳ ಮೇಲೆ ಗಮನಹರಿಸಬೇಕು, ಸಾಮಾನ್ಯವಾಗಿ ಮನೆಯಲ್ಲಿ ಮಧ್ಯಾಹ್ನದ ಹೊತ್ತಿನಲ್ಲಿ. ಪೂರ್ವಜರಿಗೆ ತರ್ಪಣ ನೀಡಲು ವಿಶೇಷವಾಗಿ ಪವಿತ್ರವಾದ ಪಿತೃ ಪಕ್ಷದ ಕೊನೆಯ ದಿನವು ಮಹಾಲಯ ಅಮಾವಾಸ್ಯೆಯಾಗಿದೆ. ವರ್ಷದಲ್ಲಿ, ಈ ದಿನವನ್ನು ಅಪರಕರ್ಮಗಳು ಮತ್ತು ಕ್ರಿಯಾವಿಧಿಗಳನ್ನು ಮಾಡಲು ಅತ್ಯಂತ ಪ್ರಮುಖ ದಿನವೆಂದು ಪರಿಗಣಿಸಲಾಗುತ್ತದೆ.
ವರ್ಷದ ಪ್ರತೀ ತಿಂಗಳು ಒಂದು ಹುಣ್ಣಿಮೆ ಬರುವಂತೆ, ಒಂದು ಅಮಾವಾಸ್ಯೆ ಕೂಡ ಬರುತ್ತದೆ. ವರ್ಷಕ್ಕೆ 12 ಅಮಾವಾಸ್ಯೆಗಳಿವೆ. ಕೆಲವೊಂದು ಅಮಾವಾಸ್ಯೆಗಳು ವರ್ಷಕ್ಕೆ 2 ಬಾರಿ ಬರುತ್ತದೆ.
ವರ್ಷದಲ್ಲಿ ಬರುವ ಅಮಾವಾಸ್ಯೆಗಳು:
- ಸೋಮವತಿ ಅಮಾವಾಸ್ಯೆ: ಸೋಮವಾರದಂದು ಬೀಳುವ ಅಮಾವಾಸ್ಯೆಗೆ ಸೋಮವತಿ ಅಮಾವಾಸ್ಯೆ ಎಂದು ಹೇಳಲಾಗುತ್ತದೆ. ಸೋಮವಾರವು ಭಗವಾನ್ ಶಿವನಿಗೆ ಸಾಮರ್ಪಿಸಿದ ದಿನ. ಹಾಗಾಗಿ, ಈ ದಿನದಂದು ಶಿವಪೂಜೆ ಮತ್ತು ಅಭಿಷೇಕಗಳನ್ನು ಮಾಡುವ ಭಕ್ತರ ಕಷ್ಟಗಳು ನಾಶವಾಗಿ, ಸಂತುಷ್ಟಿಯ ಜೀವನ ಲಭಿಸುತ್ತದೆ. ಪುರಾಣಗಳ ಪ್ರಕಾರ ಈ ದಿನ ಭಕ್ತರು ಅಶ್ವತ್ಥ ವೃಕ್ಷಕ್ಕೆ 108 ಪ್ರದಕ್ಷಿಣೆ ಮಾಡುವುದರಿಂದ, ಈ ದಿನವನ್ನು ಅಶ್ವತ್ಥ ಉಪವಾಸ ಎಂದೂ ಕರೆಯುತ್ತಾರೆ. ಈ ದಿನ ಉಪವಾಸ ಮಾಡುವುದು ಸುಮಂಗಲಿಯರಿಗೆ ಮತ್ತು ಅವರ ಪರಿವಾರಕ್ಕೆ ವಿಶೇಷ ಫಲವನ್ನು ನೀಡುವುದೆಂಬ ನಂಬಿಕೆಯಿದೆ.
- ಭೌಮವತಿ ಅಮಾವಾಸ್ಯೆ : ಭಮವತಿ ಅಮಾವಾಸ್ಯ ಅಥವಾ ಭೌಮವತಿ ಅಮಾವಾಸ್ಯ , ಮಂಗಳವಾರ ಬರುವ ಅಮಾವಾಸ್ಯೆಗೆ ಈ ಹೆಸರು. ಮೃತ ಪೂರ್ವಜರಿಗೆ ಪ್ರಾರ್ಥನೆ ಸಲ್ಲಿಸಲು ಭಮವತಿ ಅಮಾವಾಸ್ಯವನ್ನು ಬಹಳ ಶುಭವೆಂದು ಪರಿಗಣಿಸಲಾಗಿದೆ. ಈ ದಿನ ಉಪವಾಸ ಆಚರಿಸುವ ಮೂಲಕ, ಸಾಲದ ಬಿಕ್ಕಟ್ಟು ಕೊನೆಗೊಳ್ಳುತ್ತದೆ.
- ಶನಿ ಅಮಾವಾಸ್ಯೆ : ಶನಿ ಅಮಾವಾಸ್ಯೆಯು ವರ್ಷಕ್ಕೆ ಒಂದೆರಡು ಬಾರಿ ಮಾತ್ರ ಸಂಭವಿಸುವ ಅಪರೂಪದ ಸಂಯೋಜನೆಯಾಗಿದೆ ಮತ್ತು ಶನಿ ಗ್ರಹದ ದುರುದ್ದೇಶಪೂರಿತ ಪ್ರಭಾವದಿಂದ ತೊಂದರೆಗೊಳಗಾದ ಎಲ್ಲರಿಗೂ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರರ್ಥ, ಶನಿ ಮಹಾದಶಾ ಪ್ರಭಾವದಲ್ಲಿರುವ ಜನರಿಗೆ ಅಥವಾ ಸಡೇ ಸತಿಯ ಅವಧಿಯಲ್ಲಿ ಹೋಗುವವರಿಗೆ, ಶನಿ ಅಮಾವಾಸ್ಯೆಯು ಶನಿ ದೇವರನ್ನು ಪೂಜಿಸಲು ಮತ್ತು ಸಮಾಧಾನಪಡಿಸಲು ಮತ್ತು ಆತನ ಆಶೀರ್ವಾದವನ್ನು ಬಹುಪಾಲು ಗಳಿಸಲು ಅತ್ಯಂತ ಪ್ರಬಲವಾದ ದಿನವಾಗಿದೆ.
- ಭೀಮನ ಅಮಾವಾಸ್ಯೆ : ಆಷಾಢ ಮಾಸದಲ್ಲಿ ಬರುವ ಕೃಷ್ಣಪಕ್ಷದ ಅಮವಾಸ್ಯೆಯನ್ನು ಭೀಮನ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಭೀಮನ ಅಮಾವಾಸ್ಯೆ ಎಂದರೆ ಹಿಂದು ಮಹಿಳೆಯರ ಪಾಲಿಗೆ ಅತ್ಯಂತ ಪವಿತ್ರ ಹಬ್ಬ. ಈ ಹಬ್ಬಕ್ಕೆ ಜ್ಯೋತಿರ್ಭೀಮೇಶ್ವರ ವ್ರತ ಎಂಬ ಹೆಸರೂ ಇದೆ. ಈ ದಿನ ಆಚರಿಸುವ ಮಡದಿಯು, ತನ್ನ ಪತಿಯ ಆಯುಷ್ಯ ಹೆಚ್ಚಲಿ, ಆತನಿಗೆ ದೇವರು ಆಯುರಾರೋಗ್ಯ ದಯಪಾಲಿಸಲಿ ಎಂದು ಭಕ್ತಿಯಿಂದ ಬೇಡಿ, ಪತಿಯನ್ನು ಪೂಜೆ ಮಾಡುವ ಈ ಹಬ್ಬವನ್ನು ಕರ್ನಾಟಕದಾದ್ಯಂತ ಆಚರಿಸಲಾಗುತ್ತದೆ.
- ಆಟಿ ಅಮಾವಾಸ್ಯೆ : ಕರಾವಳಿಯಲ್ಲಿ ಆಷಾಢ ಮಾಸದಲ್ಲಿ ಬರುವ ಕೃಷ್ಣಪಕ್ಷದ ಅಮವಾಸ್ಯೆಯನ್ನು ಆಟಿ ಅಮಾವಾಸ್ಯೆ ಎನ್ನುತ್ತಾರೆ. ಸಾಮಾನ್ಯವಾಗಿ ಭೀಮನ ಅಮಾವಾಸ್ಯೆಯೇ ಆಟಿ ಅಮಾವಾಸ್ಯೆಯಾಗಿದೆ. ತುಳುವರಲ್ಲಿ ಒಂದು ವಿಶೇಷ ಸಂಪ್ರದಾಯವಿದೆ. ಸೂರ್ಯೋದಯಕ್ಕೆ ಮೊದಲೇ ಪಾಲೆ ಮರ (ಹಾಲೆ ಮರ) ದ ಸನಿಹ ಹೋಗಿ ಬಿಳಿ ಕಲ್ಲಿನಿಂದ ಜಜ್ಜಿ ಆ ಮರದ ತೊಗಟೆಯನ್ನು ತೆಗೆದು ಬರಬೇಕು. ತೊಗಟೆಯನ್ನು ತೆಗೆಯುವಾಗ ಕಬ್ಬಿಣದ ಕತ್ತಿಯನ್ನು ತಾಗಿಸಬಾರದು. ಅಂದು ಮನೆಮಂದಿಯೆಲ್ಲರೂ ಆರೋಗ್ಯವರ್ಧಕವಾದ ಪಾಲೆಯ ಅತಿ ಕಹಿಯಾದ ರಸವನ್ನು ಕುಡಿಯುತ್ತಾರೆ. ನಂತರ ತೆಂಗಿನ ಕಾಯಿ ತುರಿ ಹಾಕಿದ ಗಂಜಿ ಉಣ್ಣುತ್ತಾರೆ. ವೈಜ್ಞಾನಿಕವಾಗಿ ಈ ಆಚರಣೆಯನ್ನು ಗಮನಿಸಿದರೆ, ಪಾಲೆ ತೊಗಟೆಯ ರಸ ಒಂದು ವರ್ಷದ ಕಾಲ ಯಾವುದೇ ರೋಗ ರುಜಿನಗಳು ದೂರವಾಗುತ್ತದೆ ಎನ್ನುವಂತಹ ನಂಬಿಕೆ ಇದೆ. ಅನ್ಯ ಆಹಾರ ಸೇವನೆಗೆ ಮೂದಲು ಖಾಲಿ ಹೊಟ್ಟೆಗೆ ಸೇವಿಸುವುದು ಅತೀ ಉತ್ತಮವೆಂದು ತಿಳಿವಳಿಕೆ ಇದೆ. ಈ ರೀತಿ ಸೇವಿಸುವುದರಿಂದ ಅನೇಕ ಬಗೆಯ ಔಷಧಿಗಳು ನಮ್ಮ ಶರೀರಕ್ಕೆ ಸೇರಿತು ಎಂಬ ಬಲವಾದ ನಂಬಿಕೆ ಇಲ್ಲಿ ಗಮನೀಯವೆನಿಸುತ್ತದೆ. ಆಟಿ ತಿಂಗಳು ಸ್ವರ್ಗಸ್ಥರಾದವರಿಗೆ ಅನ್ನವಿಡುವ ತಿಂಗಳು. ಅವತ್ತು ರಾತ್ರಿ ತಿಂಡಿ, ಅನ್ನ ಪದಾರ್ಥಗಳನ್ನು ಮಾಡಿ ಅಗಲಿದ ಹಿರಿಯರಿಗೆ ಇಟ್ಟು , ನಂತರ ತಾವು ಊಟ ಮಾಡುತ್ತಾರೆ. ಆಟಿಯಲ್ಲಿ ಮದರಂಗಿ ಚಿಗುರನ್ನು ಯಾರೂ ಮುರಿಯುವುದಿಲ್ಲ. ಯಾಕೆಂದರೆ ಆಟಿಯಲ್ಲಿ ಮದರಂಗಿ ಹಚ್ಚುವ ಸಂಭ್ರವನ್ನು ಯಾರೂ ಆಚರಿಸುವುದಿಲ್ಲ.
- ಹರಿಯಾಲಿ ಅಮಾವಾಸ್ಯೆ : ಶ್ರಾವಣ ಮಾಸದಲ್ಲಿ ಹರಿಯಾಲಿ ಅಮವಾಸ್ಯೆ ಬರುತ್ತದೆ. ಇದನ್ನು ಮಹಾರಾಷ್ಟ್ರದಲ್ಲಿ ಗತಾರಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಇದನ್ನು ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಚುಕ್ಕಲಾ ಮತ್ತು ಒರಿಸ್ಸಾದಲ್ಲಿ ಚಿತ್ಲಗಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ದಿನ ಮುಖ್ಯವಾಗಿ ಸಸ್ಯಗಳನ್ನು ನೆಡಲಾಗುತ್ತದೆ. ಪೂರ್ವಜರ ಶಾಂತಿಗಾಗಿ ಈ ದಿನ ಆಚರಣೆಗಳನ್ನು ನಡೆಸಲಾಗುತ್ತದೆ.
- ಮಹಾಲಯ ಅಮಾವಾಸ್ಯೆ : ಭಾದ್ರಪದ ಮಾಸದಲ್ಲಿ ಬರುವ ಕೃಷ್ಣಪಕ್ಷದ ಅಮವಾಸ್ಯೆಯನ್ನು ಮಹಾಲಯ ಅಮಾವಾಸ್ಯೆಯನ್ನು, ಪಿತೃ ಅಮಾವಾಸ್ಯೆ ಅಥವಾ ಸರ್ವಪಿತೃ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ದಿನ, ಪೂರ್ವಜರಿಗೆ ಆಹಾರವನ್ನು ದಾನ ಮಾಡುವುದು ಮತ್ತು ತರ್ಪಣ ಮಾಡುವುದು ಇತ್ಯಾದಿಗಳಿಂದ ಸಂತೋಷಪಡುತ್ತಾರೆ.
- ಮೌನಿ ಅಮಾವಾಸ್ಯೆ : ಮಾಘ ಮಾಸದಲ್ಲಿ ಬರುವ ಕೃಷ್ಣಪಕ್ಷದ ಅಮಾವಾಸ್ಯೆಯ ದಿನ ವಿಶೇಷವಾಗಿ ಮೌನವಾಗಿದ್ದು, ಋಷಿಮುನಿಗಳಂತೆ ಮೌನ ವ್ರತಾಚರಣೆ ಮಾಡುವುದು ಈ ದಿನದ ವಿಶೇಷ ಪ್ರಾಮುಖ್ಯತೆಯಾಗಿದೆ. ಮಾಘ ಮಾಸದಲ್ಲಿ ಭಗವಾನ್ ಸೂರ್ಯನು ಚಂದ್ರನೊಂದಿಗೆ ಮಕರ ರಾಶಿಯಲ್ಲಿ ಸಾಗುವುದರಿಂದದಲೂ ಜ್ಯೋತಿಷ್ಯಶಾಸ್ತ್ರದಲ್ಲಿ ಈ ಅವಧಿಯನ್ನು ಮೌನಿ ಅಮಾವಾಸ್ಯೆ ಎಂದು ಕರೆಯುತ್ತಾರೆ.
- ದೀಪಾವಳಿ ಅಮಾವಾಸ್ಯೆ : ಕಾರ್ತಿಕ ಮಾಸದ ಕೃಷ್ಣಪಕ್ಷ ಅಮವಾಸ್ಯೆಯನ್ನು ದೀಪಾವಳಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ಅಮಾವಾಸ್ಯೆಯ ಸಮಯದಲ್ಲಿ ದೀಪೋತ್ಸವವನ್ನು ಆಚರಿಸಲಾಗುತ್ತದೆ. ಈ ದಿನ ರಾತ್ರಿ ಅತ್ಯಂತ ಗಾಢವಾಗಿರುತ್ತದೆ ಎಂದು ಹೇಳಲಾಗುತ್ತದೆ. ಮೂಲಭೂತವಾಗಿ ಈ ಅಮಾವಾಸ್ಯೆ ಕಾಳಿಕಾ ದೇವಿಗೆ ಸಂಬಂಧಿಸಿದೆ, ಅದಕ್ಕಾಗಿಯೇ ಆಕೆಯ ಪೂಜೆಗೆ ಹೆಚ್ಚಿನ ಮಹತ್ವವಿದೆ. ಈ ದಿನ ಲಕ್ಷ್ಮಿ ಪೂಜೆಯ ಮಹತ್ವವೂ ಇದೆ. ಇಬ್ಬರೂ ದೇವತೆಗಳು ಈ ದಿನ ಜನಿಸಿದರು ಎಂದು ಹೇಳಲಾಗುತ್ತದೆ.
- ಚಟ್ಟಿ ಅಮಾವಾಸ್ಯೆ : ಕಾರ್ತಿಕ ಮಾಸದ ಕೃಷ್ಣಪಕ್ಷ ಅಮವಾಸ್ಯೆಯನ್ನು ಚಟ್ಟಿ ಅವಮಾಸ್ಯೆ ಎಂದು ಕೂಡ ಕರೆಯುತ್ತಾರೆ. ಈ ಅಮಾವಾಸ್ಯೆಯ ದಿನ ದೇವಾನು ದೇವತೆಗಳು ಭೂಮಿಗೆ ಬಂದು ಮಾನವ ಮಾಡಿದ ಪಾಪ ಕರ್ಮಗಳಿಗೆ ಅನುಗುಣವಾಗಿ ಅವರಿಗೆ ವರ ಮತ್ತು ಶಿಕ್ಷೆಯನ್ನ ಕೊಟ್ಟು ಹೋಗುತ್ತದೆ.
- ಎಳ್ಳಮಾವಾಸ್ಯೆ: ಮಾರ್ಗಶಿರ ಮಾಸದ ಕೃಷ್ಣಪಕ್ಷ ಅಮವಾಸ್ಯೆಯನ್ನು ಎಳ್ಳಮಾವಾಸ್ಯೆ ಅಥವಾ ಎಳ್ಳು ಅಮವ್ಯಾಸೆ ಎಂದು ಕರೆಯಲಾಗುತ್ತದೆ. ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ರೈತರು ಎಳ್ಳಮಾವಾಸ್ಯೆಯನ್ನು ಆಚರಿಸುತ್ತಾರೆ. ಈ ದಿನಕ್ಕೊಂದು ಐತಿಹ್ಯವಿದೆ. ಪಾಂಡವರು ಕುರುಕ್ಷೇತ್ರ ಯುದ್ಧದಲ್ಲಿ ಮಡಿದ ತಮ್ಮ ಬಂಧುಮಿತ್ರರಿಗಾಗಿ ಪಿಂಡ ಪ್ರದಾನ ಮಾಡಿದ ದಿನ ಈ ಎಳ್ಳಮವಾಸ್ಯೆ. ಈ ದಿನ ಮಲೆನಾಡು, ದಕ್ಷಿಣ ಕನ್ನಡ, ಉತ್ತರ ಕರ್ನಾಟಕಗಳಲ್ಲಿ ಒಂದೊಂದು ರೀತಿಯಲ್ಲಿ ಎಳ್ಳಮಾವಾಸ್ಯೆ ಆಚರಿಸಲಾಗುತ್ತದೆ. ದಕ್ಷಿಣ ಕನ್ನಡ, ಮಲೆನಾಡು ಭಾಗಗಳಲ್ಲಿ ಈ ದಿನ ತೀರ್ಥ ಸ್ನಾನವೇ ಪ್ರಮುಖವಾದುದು. ಎಳ್ಳಮಾವಾಸ್ಯೆಯ ದಿನ ತರ್ಪಣ ಬಿಡುವ ಮೊದಲು ದಕ್ಷಿಣ ಕನ್ನಡದ ಜನರು ಸಮುದ್ರದಲ್ಲಿ ಮುಳುಗು ಹಾಕಿದರೆ, ಇತರೆಡೆಯ ಜನರು ನದಿಗಳಲ್ಲಿ ತೀರ್ಥ ಸ್ನಾನ ಮಾಡಿ ಪಿತೃಗಳಲ್ಲಿ ಪ್ರಾರ್ಥಿಸುತ್ತಾರೆ. ಉಡುಪಿ ಜಿಲ್ಲೆಯ ಮಲ್ಪೆಯಲ್ಲಿರುವ ವಡಭಂಡೇಶ್ವರ ದೇವಾಲಯದಲ್ಲಿ ಈ ದಿನ ಬಲರಾಮನನ್ನು ದರ್ಶನ ಮಾಡುವುದರಿಂದ ಬಹಳಷ್ಟು ಒಳಿತಾಗುತ್ತದೆ ಎಂಬ ನಂಬಿಕೆ ಇದೆ.ಉತ್ತರ ಕರ್ನಾಟಕದಲ್ಲಿ ರೈತರು ತಮಗೆ ಉತ್ತಮ ಇಳುವರಿ ಕೊಟ್ಟ ಭೂಮಿ ತಾಯಿಗೆ ಧನ್ಯವಾದ ಹೇಳುವ ದಿನವಾಗಿ ಎಳ್ಳಮಾವಾಸ್ಯೆಯನ್ನು ಆಚರಿಸುತ್ತಾರೆ. ಇಂದು ರೈತರು ತಮ್ಮ ಜಮೀನಿನಲ್ಲಿ ಎಲ್ಲೆಡೆ ಎಳ್ಳು ಹಾಗೂ ಬೆಲ್ಲವನ್ನು ಚಿಮ್ಮುತ್ತಾರೆ. ಈ ಎಳ್ಳು ಹಾಗೂ ಬೆಲ್ಲವು ಜಮೀನಿನಲ್ಲಿರುವ ಹುಳಗಳಿಗೆ ಆಹಾರ ಎಂದೂ ಹೇಳಲಾಗುತ್ತದೆ. ಎರೆಹುಳದಂತವು ಭೂತಾಯಿಯ ಫಲವತ್ತತೆಯನ್ನು ಕಾಪಾಡುತ್ತವೆ. ಅವುಗಳಿಗೆ ಆಹಾರದಂತೆ ಕೂಡಾ ಇದನ್ನು ಚಿಮ್ಮಲಾಗುತ್ತದೆ. ಕೆಲವು ಗದ್ದೆಗಳಲ್ಲಿ ಪಾಂಡವರನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಾರೆ. ಮತ್ತೆ ಕೆಲವೆಡೆ ಹೊಲದಲ್ಲಿ ನಿಂತಿರುವ ಪೈರುಗಳ ಮಧ್ಯೆ ಬನ್ನಿ ಮರಕ್ಕೆ ಪೂಜೆ ಮಾಡಿ ಭೂಮಿ ತಾಯಿಗೆ ಚೆರಗ ಚೆಲ್ಲಾಗುತ್ತದೆ. ನಂತರ ಭಜ್ಜಿ, ಸಜ್ಜೆ,ಜೋಳದ ರೊಟ್ಟಿ,ಅಂಬಲಿ ನಾನಾ ಬಗೆಯ ಅಡುಗೆ ಮಾಡಿ ಅಮಾವಾಸ್ಯೆ ದಿನ ದೊಡ್ಡ ಬುತ್ತಿಯ ಗಂಟು ಕಟ್ಟಿಕೊಂಡು ಕುಟುಂಬದವರೆಲ್ಲರೂ ಎತ್ತಿನ ಬಂಡಿಯಲ್ಲಿ ಕುಳಿತು ಹೊಲಕ್ಕೆ ಹೋಗಿ ಊಟ ಮಾಡುತ್ತಾರೆ.
- ಕುಶಗ್ರಹಣಿ ಅಮಾವಾಸ್ಯೆ : ಕುಶವನ್ನು ಸಂಗ್ರಹಿಸುವುದರಿಂದ ಇದನ್ನು ಕುಶಗ್ರಹಣಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಪುರಾಣ ಗ್ರಂಥಗಳಲ್ಲಿ ಇದನ್ನು ಕುಶೋತ್ಪತಿನಿ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಭಾದ್ರಪದವು ಶ್ರೀ ಕೃಷ್ಣನ ಆರಾಧನೆಯ ತಿಂಗಳು. ಈ ದಿನವನ್ನು ಪಿತೋರಿ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಪಿತೋರಿ ಅಮಾವಾಸ್ಯೆಯಂದು ದುರ್ಗಾ ದೇವಿಯನ್ನು ಪೂಜಿಸಲಾಗುತ್ತದೆ.
No Responses