ಕವಲೇದುರ್ಗ – ತೀರ್ಥಹಳ್ಳಿ

0Shares

ಕವಲೇದುರ್ಗ ತೀರ್ಥಹಳ್ಳಿ ತಾಲ್ಲೂಕಿನ ಹಸಿರು ಸಿರಿಯಿಂದ ಸಮೃದ್ಧವಾದ ಮೋಹಕ ತಾಣ. ತೀರ್ಥಹಳ್ಳಿಯಿಂದ ೧೮ ಕಿ.ಮೀ ಹಾಗೂ ಶಿವಮೊಗ್ಗದಿಂದ ಸುಮಾರು ೮೦ ಕಿ.ಮೀ ದೂರದಲ್ಲಿದೆ. ತೀರ್ಥಹಳ್ಳಿ – ಸಾಲೂರು ಮಾರ್ಗವಾಗಿ ದಟ್ಟ ಕಾಡುಗಳಿಂದ ಕೂಡಿದ ಸಹ್ಯಾದ್ರಿ ಶ್ರೇಣಿಯ ಮಡಿಲಲ್ಲಿ ಸಾಗಿದಾಗ ಈ ದುರ್ಗ ಎದುರಾಗುತ್ತದೆ. ಇದೊಂದು ಪೌರಾಣಿಕ ಮತ್ತು ಐತಿಹಾಸಿಕ ಮಹತ್ವದ ನೈಸರ್ಗಿಕ ಸುಂದರ ತಾಣ. ಇಲ್ಲಿ ೯ನೇ ಶತಮಾನದ ಕೋಟೆ ಇದೆ.

ಕವಲೇದುರ್ಗ ಕೋಟೆ ಶಿವಮೊಗ್ಗ

ಕವಲೇದುರ್ಗ ಇತಿಹಾಸ:

ಕರ್ನಾಟಕದ ಇತಿಹಾಸದಲ್ಲಿ ನಾಗರಖಂಡ ಬನವಾಸಿ ನಾಡೆಂದು ಖ್ಯಾತಿಗೊಂಡಿದ್ದ ಮಲೆನಾಡು ಪ್ರದೇಶದ ಕವಲೇದುರ್ಗ ಒಂದು ಐತಿಹಾಸಿಕ ತಾಣ. ಮಲ್ಲವ ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಕವಲೇದುರ್ಗ, ಭುವನಗಿರಿ ದುರ್ಗ ಸಂಸ್ಥಾನವಾಗಿ ಮಾರ್ಪಟ್ಟ ಹಿನ್ನಲೆಯ ಹಿಂದೆ ಯುದ್ಧ ನಡೆದಿದೆ. ಮಲ್ಲವರು ಮೊದಲು ಸಾಗರದ ಸಮೀಪ ಇರುವ ಕೆಳದಿ ಎಂಬಲ್ಲಿ ರಾಜ್ಯ ಸ್ಥಾಪಿಸಿ ಇಕ್ಕೇರಿ, ಬಿದನೂರಿನಲ್ಲಿ(ನಗರ) ಕೋಟೆಕೊತ್ತಲ ನಿರ್ಮಿಸಿ ರಾಜ್ಯಭಾರ ಮಾಡುತ್ತಿದ್ದರು. ಆಗ ಕವಲೇದುರ್ಗದ ಗಿರಿಪ್ರದೇಶ ತೊಲೆತಮ್ಮ ಮತ್ತು ಮುಂಡಿಗೆತಮ್ಮ ಎಂಬ ಪಾಳೆಗಾರ ಸಹೋದರರ ಸ್ವಾಧೀನದಲ್ಲಿತ್ತು. ಈ ಸಹೋದರರನ್ನು ಸೋಲಿಸಿದ ಮಲ್ಲವರು ಕವಲೇದುರ್ಗ ಕೋಟೆಯನ್ನು ವಶಕ್ಕೆ ಪಡೆದು ಭುವನಗಿರಿ ದುರ್ಗ ಎಂದು ಹೆಸರಿಟ್ಟು ಆಳ್ವಿಕೆ ನಡೆಸಿದರು. ಮಲ್ಲವ ವಂಶದಲ್ಲಿ ಪ್ರಖ್ಯಾತರಾದವರೆಂದರೆ, ಶಿವಪ್ಪ ನಾಯಕ, ರಾಣಿ ಚೆನ್ನಮ್ಮಾಜಿ ಮತ್ತು ರಾಣಿ ವೀರಮ್ಮಾಜಿ. ಛತ್ರಪತಿ ಶಿವಾಜಿ ಮಹಾಹಾರಾಜರ ಮಗನಾದ ರಾಜಾರಾಮನಿಗೆ ಆಶ್ರಯ ನೀಡಿದ್ದು ಕವಲೇದುರ್ಗ ಸಂಸ್ಥಾನ ಎಂಬುದು ಇತಿಹಾಸ ಪುಟದಲ್ಲಿ ದಾಖಲಾಗಿದೆ. ಇದೇ ವಿಷಯವಾಗಿ ಮೊಘಲ್ ದೊರೆ ಔರಂಗಜೇಬನೊಂದಿಗೆ ಯುದ್ಧಮಾಡಿ ಗೆದ್ದ ಕೀರ್ತಿ ರಾಣಿ ಚೆನ್ನಮ್ಮಾಜಿಯವರಿಗೆ ಸಂದಿದೆ. ೧೮ನೇ ಶತಮಾನದಲ್ಲಿ ಮೈಸೂರು ರಾಜ ಹೈದರಾಲಿ ಹಾಗೂ ಟಿಪ್ಪೂ ಸುಲ್ತಾನರ ದಾಳಿಗೆ ಗುರಿಯಾಗಿ ಕವಲೇದುರ್ಗ ಸಾಕಷ್ಟು ನಾಶವಾಯಿತು.

ಕವಲೇದುರ್ಗ ಕೋಟೆ ತೀರ್ಥಹಳ್ಳಿ ಶಿವಮೊಗ್ಗ

ಕವಲೇ ದುರ್ಗದ ವಿಶೇಷತೆ

ಹೆಜ್ಜೆ ಮೇಲೆ ಹೆಜ್ಜೆಯಿಟ್ಟರೂ ಸದ್ದು ಪ್ರತಿಧ್ವನಿಸುವಷ್ಟು ಪ್ರಶಾಂತ ಹಾಗೂ ಮೌನದ ಪರಿಸರ ಇಲ್ಲಿನದು. ಹಸಿರನ್ನು ಕಣ್ತುಂಬಿಕೊಳ್ಳುವುದು ಮಾತ್ರವಲ್ಲ- ಇತಿಹಾಸದ ಅರಿವನ್ನು ಮನದುಂಬಿಕೊಳ್ಳಲು ಇಲ್ಲಿ ಸಾಕಷ್ಟು ಅವಕಾಶವಿದೆ. ಇತಿಹಾಸದ ಕುರುಹುಗಳ ಹಿಂದೆ ನಡೆದರೆ, ಈ ದುರ್ಗವನ್ನು ಹಿಂದೊಮ್ಮೆ ಭುವನಗಿರಿ ದುರ್ಗ, ಕೌಲೇದುರ್ಗ ಎಂದು ಕರೆಯುತ್ತಿದ್ದು ದಾಗಿ ತಿಳಿದು ಬರುತ್ತದೆ. ಕವಲೇದುರ್ಗದಲ್ಲಿನ ಆಕರ್ಷಣೆಗಳಲ್ಲಿ ತಿಮ್ಮಣ್ಣನಾಯಕನ ಕೆರೆಯೂ ಒಂದು. ಹದಿನೆಂಟು ಎಕರೆ ವಿಸ್ತೀರ್ಣದ ಈ ಕೆರೆ, ಹಕ್ಕಿಗಳ ಚಿಲಿಪಿಲಿ ಕಲರವದಿಂದ, ಮೀನುಗಳ ಮುಳುಗಾಟ ದಿಂದ, ಬೆಳ್ಳಕ್ಕಿಯ ಹಿಂಡಿನಿಂದ ಗಮನ ಸೆಳೆಯುತ್ತದೆ. ಕೆರೆಯ ಮೇಲಿನಿಂದ ತೇಲಿ ಬರುವ ತಂಗಾಳಿಗೆ ಮೈಯೊಡ್ಡಿ ಜಲಚರಗಳ ದನಿ ಕೇಳಿಸಿಕೊಳ್ಳುವುದು ಹಿತವಾದ ಅನುಭವ. ಕೆಳದಿ ಅರಸರು ನಿರ್ಮಿಸಿದ ವೀರಶೈವ ಮಠ ಕವಲೇದುರ್ಗದಲ್ಲಿದೆ. ಈ ಅರಸರಿಗೆ ಏಳರ ಮೇಲೆ ವಿಶೇಷ ಮಮಕಾರ ಇದ್ದಿರಬೇಕು. ಆ ಕಾರಣದಿಂದಲೇ ಏಳು ಕೆರೆಗಳು ಇಲ್ಲಿವೆ. ಇಷ್ಟುಮಾತ್ರವಲ್ಲ, ಅರಸರು ಆರಾಧಿಸುತ್ತಿದ್ದ ನಾಗದೇವರಿಗೆ ಕೂಡ ಏಳು ಹೆಡೆ! ಮಠದಿಂದ ಸುಮಾರು ಒಂದು ಕಿ.ಮೀ. ಮುಂದೆ ಸಾಗಿದರೆ ಕೋಟೆಯ ಮುಖ್ಯದ್ವಾರ ಎದುರಾಗುತ್ತದೆ. ಮಹಾದ್ವಾರ ಪ್ರವೇಶಿಸಿದಂತೆ ಸುಮಾರು ೫೦-೬೦ ಅಡಿ ಎತ್ತರದ ಗೋಡೆ ನೋಡಬಹುದು.

See also  ಗೌರಿತೀರ್ಥ - ನೀರುಗುಳ್ಳೆಗಳ ಕೊಳ

ಕವಲೇದುರ್ಗ ಕೋಟೆ

ಗೋಡೆಯ ಮೇಲೆ ಅಂದಿನ ಕಾಲದ ಚಿತ್ರಕಲೆಯನ್ನು ನೋಡಬಹುದು. ಕಾವಲುಗಾರರು ಉಳಿದುಕೊಳ್ಳಲು ಮಾಡಿದ್ದ ಚೌಕಾಕಾರದ ಕಾವಲುಗಾರ ಕೊಠಡಿ ಹಾಗೂ ಒಳಭಾಗದಲ್ಲಿ ಮುಖ ಮಂಟಪವನ್ನು ಎರಡನೇ ಮಹಾದ್ವಾರ ಹಾಯುವಾಗ ನೋಡಬಹುದು.ಮಂಟಪದ ಎಡಭಾಗದಲ್ಲಿ ನಾಗತೀರ್ಥವೆಂಬ ಕೊಳ ಹಾಗೂ ಸುಮಾರು ೬ ಅಡಿ ಎತ್ತರದ ಏಳು ಹೆಡೆಯ ಏಕಶಿಲಾ ನಾಗರ ಶಿಲ್ಪವನ್ನು ನೋಡಬಹುದು. ಮೂರನೆ ಮಹಾದ್ವಾರ ದ ಬಲಭಾಗದಲ್ಲಿ ನಗಾರಿ ಕಟ್ಟೆಯಿದೆ. ಈ ಪರಿಸರದಲ್ಲಿ ಒಂದು ಸುರಂಗ ಮಾರ್ಗವನ್ನೂ ಕಾಣಬಹುದು. ನಾಲ್ಕನೆಯ ಮಹಾದ್ವಾರ ತಲುಪಲು ಇಳಿಜಾರಿನ ಹಾಸುಗಲ್ಲನ್ನು ದಾಟಬೇ ಕು. ಅಲ್ಲಿಯೂ ಒಂದು ಮುಖ ಮಂಟಪವನ್ನು ನೋಡಬಹುದು. ಕವಲೇದುರ್ಗದಲ್ಲಿ ವಿಶ್ವನಾಥೇಶ್ವರ ದೇವಾಲಯವಿದೆ. ಈ ದೇವಾಲಯದ ಹೊರಭಾಗದಲ್ಲಿ ಅನೇಕ ಕಲಾಕೃತಿಗಳನ್ನು ಕಾಣಬಹುದು. ಕಾಶಿಯಿಂದ ತಂದ ಅಮೃತಶಿಲೆಯ ವಿಶ್ವನಾಥೇಶ್ವರನ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆಯಂತೆ. ಅರಸರ ಕಾಲದಲ್ಲಿ ತುಪ್ಪ ಹಾಗೂ ಎಣ್ಣೆಯನ್ನು ಶೇಖರಿಸಲು ಉಪಯೋಗಿಸುತ್ತಿದ್ದ ಬಾವಿಯನ್ನು ದುರ್ಗದಲ್ಲಿ ನೋಡಬಹುದು. ಇದಕ್ಕೆ ಎಣ್ಣೆ ಹಾಗೂ ತುಪ್ಪದ ಬಾವಿಯೆಂದೇ ಈಗಲೂ ಕರೆಯುತ್ತಾರೆ. ಶಿಸ್ತಿನ ಶಿವಪ್ಪನಾಯಕನ ಕಾಲದ ಏತನೀರಾವರಿ ಪದ್ಧತಿ ಬಳಕೆಯ ಕುರುಹುಗಳು ಕವಲೇದುರ್ಗದಲ್ಲಿ ಈಗಲೂ ಕಾಣಬಹುದು. ದಟ್ಟ ಅರಣ್ಯದ ನಡುವೆ ಸುಮಾರು ಅರ್ಧ ಎಕರೆ ಪ್ರದೇಶದಲ್ಲಿರುವ ಅರಮನೆ ಕಲ್ಲು ಕಂಬಗಳ ಆಸರೆ ಹೊಂದಿದೆ. ಅರಮನೆಗೀಗ ಆಕಾಶವೇ ಛಾವಣಿ. ಕಂಬಗಳು ಮತ್ತು ಮಣ್ಣಿನ ಗೋಡೆಗಳು ಮಾತ್ರ ಉಳಿದಿವೆ.

ಕವಲೇದುರ್ಗ ತೀರ್ಥಹಳ್ಳಿ

0Shares

Leave a Reply

error: Content is protected !!