ದೇವಸ್ಥಾನದಲ್ಲಿ ಮಂಗಳಾರತಿಯ ನಂತರ ಅರ್ಚಕರು ತಲೆಯ ಮೇಲಿಡುವ ಷಡಾರಿ ಅಥವಾ ಶಟಗೋಪದ ಮಹತ್ವ

0Shares
ಷಡಾರಿ ಶಟಗೋಪ ಮಹತ್ವ
ವೆಂಕಟೇಶ್ವರ, ರಾಮ, ಕೃಷ್ಣ, ಹೀಗೆ ಹೆಚ್ಚಾಗಿ ಮಹಾವಿಷ್ಣುವಿಗೆ ಸಂಬಂಧಿಸಿದ ಮತ್ತು ಆಂಜನೇಯನ ದೇವಸ್ಥಾನಗಳಲ್ಲಿ, ಅರ್ಚಕರು ಮಂಗಳಾರತಿ ತೀರ್ಥ ಕೊಟ್ಟ ಮೇಲೆ ಷಢಾರಿ ಅಥವಾ ಶಟಗೋಪವನ್ನು ಭಕ್ತರ ತಲೆಯ ಮೇಲೆ ಸ್ಪರ್ಶಿಸುತ್ತಾರೆ. ಭಕ್ತರೂ ಸಹ ಅಷ್ಟೇ ಭಕ್ತಿಯಿಂದ ಶಿರಭಾಗಿ ಭಗವಂತನ ಪಾದಕಮಲಗಳ ಸ್ಪರ್ಶವಾದಂಥ ಅನುಭವದಲ್ಲಿ ಸಾರ್ಥಕತೆ ಪಡೆಯುತ್ತಾರೆ.

ಹಾಗಾದರೆ ಶಟಗೋಪ ಎಂದರೇನು? ಈ ಶಟಗೋಪದ ಮಹತ್ವವೇನು, ತಲೆಯ ಮೇಲೆ ಸ್ಪರ್ಶವಾದಾಗ ಭಕ್ತರು ಅಷ್ಟೊಂದು ಭಾವುಕರಾಗುವುದು ಏಕೆ? ಇಂಥ ಪ್ರಶ್ನೆಗಳು ಕೆಲವರ ಮನಸ್ಸಿನಲ್ಲಿ ಇರುತ್ತದೆ. ‘ಶಟಗೋಪ’ಕ್ಕೆ ಶ್ರದ್ಧೆ ಭಕ್ತಿ ಇರಲು ಕಾರಣ ಈ ಷಡಾರಿಯಲ್ಲಿ ಭಗವಂತನ ಪಾದಸ್ಪರ್ಶವಿದೆ. ದೇವಾಲಯ ಅಂದಮೇಲೆ ದೇವರಿಗೆ ಪ್ರತ್ಯೇಕವಾದ ಗರ್ಭಗುಡಿ ಇರುತ್ತದೆ. ಗರ್ಭಗುಡಿಯೊಳಗೆ ಪ್ರವೇಶ ಇರುವುದು ಪ್ರಮುಖವಾಗಿ ಅರ್ಚಕರಿಗೆ ಮಾತ್ರ. ಅನಿವಾರ್ಯ ಸಂದರ್ಭಗಳಲ್ಲಿ ದೇವಸ್ಥಾನಕ್ಕೆ ಸಂಬಂಧಪಟ್ಟ ಕೆಲವರಿಗೆ, ಏಕೆಂದರೆ ದೇವಸ್ಥಾನ ಎನ್ನುವುದು ಶ್ರದ್ಧಾ ಭಕ್ತಿಯ ಕೇಂದ್ರ, ಅಲ್ಲಿ ಭಗವಂತನ ಸಾನ್ನಿಧ್ಯವಿರುತ್ತದೆ. ಗರ್ಭಗುಡಿಯಲ್ಲಿ ಭಗವಂತನನ್ನು ಪ್ರತಿಷ್ಠಾಪನೆ ಮಾಡುವಾಗ ವಿಶೇಷವಾದ ವಿಧಿ ವಿಧಾನಗಳಿಂದ ಪ್ರತಿಷ್ಠಾಪನೆ ಮಾಡಿರುತ್ತಾರೆ. ದೇವಸ್ಥಾನಗಳನ್ನು ನಿರ್ಮಾಣ ಮಾಡುವಾಗ ವಿಶೇಷ ಶಕ್ತಿಗಳಿರುವಂತಹ ಜಾಗವನ್ನೇ ಆಯ್ಕೆ ಮಾಡಿರುತ್ತಾರೆ. ಹಾಗೆ ಗರ್ಭಗುಡಿಯಲ್ಲಿ ಬ್ರಹ್ಮಾಂಡಕ್ಕೆ ಸಂಬಂಧ ಪಟ್ಟ ಆಕರ್ಷಣಾ ಶಕ್ತಿ ಇರುತ್ತದೆ. ಆದ್ದರಿಂದ ಗರ್ಭಗುಡಿ ಒಳಗೆ ಪ್ರವೇಶ ಮಾಡಿ ದೇವರ ವಿಗ್ರಹವನ್ನು ಮುಟ್ಟಿ ಅಭಿಷೇಕ ಪೂಜೆ ಅಲಂಕಾರ ಮಂಗಳಾರತಿ ಹೀಗೆ ಎಲ್ಲವನ್ನು ಮಾಡುವವರು ಶುದ್ಧವಾಗಿರಬೇಕು. ಕ್ರಮವಾದ ರೀತಿಯಲ್ಲಿ ಸ್ನಾನ ಮಡಿ, ನಿತ್ಯ ಆಚರಣೆ, ಆಹಾರ, (ನೀರುಳ್ಳಿ, ಬೆಳ್ಳುಳ್ಳಿ ಸೇರಿದಂತೆ ಕೆಲವು ಪದಾರ್ಥಗಳು ಹಾಗೂ, ಎಂಜಲು -ಮುಸುರೆ- ಮೈಲಿಗೆ ಆಗದಂತೆ ಪ್ರತ್ಯೇಕವಾಗಿ ನಿಗದಿತ ಸಮಯದಲ್ಲಿ ಆಹಾರ ಸೇವಿಸುವುದು), ವೇದ ಮಂತ್ರ ಪುರಾಣ, ಭಗವದ್ಗೀತೆ, ವ್ರತ ಕಥೆ ವಿಧಾನಗಳು, ಪುಣ್ಯ ಕಥೆಗಳು ಹೀಗೆ ನಿತ್ಯವೂ ಎಲ್ಲ ವಿಚಾರದಲ್ಲೂ ಕ್ರಮಬದ್ಧವಾಗಿ ನಡೆದುಕೊಳ್ಳುತ್ತಾರೆ.

ಇಷ್ಟು ಕಟ್ಟು ನಿಟ್ಟುಗಳನ್ನು ಪಾಲಿಸುವವರು ಬ್ರಾಹ್ಮಣರು. ಆದ್ದರಿಂದ ಯುಗ ಯುಗಾಂತರಗಳಿಂದಲೂ ಬ್ರಾಹ್ಮಣರೆ ಪೌರೋಹಿತ್ಯ ಮಾಡುತ್ತಾ ಬಂದಿದ್ದಾರೆ. ಹಾಗಂತ ದೇವಸ್ಥಾನದಂಥ ಪವಿತ್ರ ಕ್ಷೇತ್ರಕ್ಕೆ ಬರುವವರೆಲ್ಲಾ ಸ್ನಾನ ಮಾಡಿ ಶುಭ್ರ ಬಟ್ಟೆ ಧರಿಸಿ, ನಿಯಮಾನುಸಾರವಾಗಿಯೇ ಬರುತ್ತಾರೆ. ಗರ್ಭಗುಡಿ ಒಳಗೆ ನಮ್ಮನ್ನು ಬಿಟ್ಟರೆ ಒಂದೇ ಒಂದು ಸಲ ನಾವು ಭಗವಂತನ ಪಾದಸ್ಪರ್ಶ ಮಾಡಬಹುದು ಎಂದು ಅನಿಸುತ್ತದೆ ಅದು ಸಹಜ. ಈ ಕಾರಣಕ್ಕಾಗಿಯೇ ಪಂಚವರ್ಣದ ಪಂಚ ಗೋಪುರವಿರುವ ಭಗವಂತನೇ ಪಾದ ಇಡುವ ಸಾಧನದ ಚಿಹ್ನೆಯಂತಿರುವ ಹಾಗೂ ಮಹಾಲಕ್ಷ್ಮಿ ಪಾದ ಇಡುವ ಕಮಲದಂತೆ ಆಕಾರವಿರುವ ‘ಶಟಗೋಪ’ ವನ್ನು ಪಂಚಲೋಹದಿಂದ ತಯಾರಿಸಿದ್ದಾರೆ.
ಷಡಾರಿ ಶಟಗೋಪ ಷಡಾರಿ ಶಟಗೋಪ ವಿಷ್ಣುಪಾದ
ಪ್ರಮುಖವಾಗಿ ಬೆಳ್ಳಿ ಹಾಗೆ ಕಂಚು, ತಾಮ್ರ, ಬಂಗಾರ ಮತ್ತು ಹಿತ್ತಾಳೆ ಇವು ಪಂಚಲೋಹ. ಹೀಗೆ ತಯಾರಿಸಿದ ಶಟಗೋಪುರಕ್ಕೆ ದೇವಾಲಯದ ಗೋಪುರದ ಶಕ್ತಿಯನ್ನು ಶೇಖರಣೆ ಮಾಡಿದ ‘ಷಡಾರಿ’ಯಲ್ಲಿ ಮಹಾವಿಷ್ಣು ತನ್ನ ಪಾದವನ್ನು ಇಟ್ಟಿರುವ ಪಾದದ ಗುರುತು ಇರುತ್ತದೆ. ಈ ಷಡಾರಿಯನ್ನು ಪಾದದ ಹತ್ತಿರ ಇಟ್ಟಿರುತ್ತಾರೆ. ಹಾಗೆ ನಿತ್ಯ ದೇವರಿಗೆ ಅಭಿಷೇಕ, ಅಲಂಕಾರ ಪೂಜೆ, ಅಷ್ಟೋತ್ತರ, ನೈವೇದ್ಯ, ಮಂಗಳಾರತಿ, ಎಲ್ಲಾ ಮಾಡುವಾಗ ಭಗವಂತನ ಪಾದದ ಕೆಳಗೆ ಇರುವುದರಿಂದ ಭಗವಂತನಿಗೆ ಸಲ್ಲುವ ಪೂಜೆಗಳು ಈ ಶಟಗೋಪರಕ್ಕೂ ಮಾಡಿರುತ್ತಾರೆ. ಇಂಥ ಪವಿತ್ರ ಷಡಾರಿಯನ್ನು ಮಂಗಳಾರತಿ ತೀರ್ಥ ಪ್ರಸಾದದ ಜೊತೆ ಭಕ್ತರ ತಲೆಯ ಮೇಲೆ ಸ್ಪರ್ಶಿಸುತ್ತಾರೆ. ಅದು ಭಗವಂತನ ಪಾದ ಸ್ಪರ್ಶ ಆದಂತೆ ಆಗುತ್ತದೆ.

ದೇವಸ್ಥಾನಗಳಿಗೆ ಹೋದಾಗ ಮೊದಲು ಗೋಪುರ ದರ್ಶನ ಮಾಡಬೇಕು ಭಗವಂತನ ದರ್ಶನ ಮಾಡಿದಷ್ಟೇ ಪುಣ್ಯ ಬರುತ್ತದೆ. ದೇವಸ್ಥಾನಕ್ಕೆ ಹೋದಾಗ ಒಂದು ಪಕ್ಷ ಬಾಗಿಲು ಹಾಕಿದ್ದರು ಗೋಪುರ ದರ್ಶನ ಮಾಡಿ ನಮಸ್ಕರಿಸಿ ಬರುವ ಪದ್ಧತಿ ಇದೆ. ದೇವಸ್ಥಾನದ ಗೋಪುರಕ್ಕೆ ಶಟಗೋಪ ಸಮನಾಗಿದೆ. ತಿರುಪತಿಗೆ ಹೋದಾಗ ಮೊದಲು ಭಗವಂತನ ಪಾದ ದರ್ಶನ ಮಾಡಿ ನಂತರ ಭಗವಂತನಿಗೆ ಮಾಡಿದ ಹೂವಿನ ಅಲಂಕಾರ, ಉಡುಗೆ- ತೊಡುಗೆ ಪ್ರತಿಯೊಂದನ್ನು ಕಣ್ತುಂಬಿ ಕೊಳ್ಳುತ್ತಾ ಮುಖದರ್ಶನ ಮಾಡಬೇಕು. ರಾಮಾಯಣದಲ್ಲಿ ರಾಮನ ಪಾದುಕೆಯನ್ನು ಸಹೋದರ ಭರತನು ಭಕ್ತಿಯಿಂದ ತೆಗೆದುಕೊಂಡು ರೇಷ್ಮೆ ವಸ್ತ್ರದಲ್ಲಿ ಸುತ್ತಿ ತನ್ನ ತಲೆಯ ಮೇಲೆ ಇಟ್ಟುಕೊಂಡು ಬಂದು ಸಿಂಹಾಸದ ಮೇಲೆ ಇಟ್ಟು ನಿತ್ಯವೂ ದರ್ಶನ ಮಾಡುತ್ತಾ ರಾಮನ ಹೆಸರಿನಲ್ಲಿ ರಾಜ್ಯಭಾರ ಮಾಡಿದನು. ಭ್ರಾತೃ ವಾತ್ಸಲ್ಯದಲ್ಲಿ ಭರತನನ್ನು ಮೀರಿಸುವವರೇ ಇಲ್ಲ ಎಂಬುದು ಹಾಸು ಹೊಕ್ಕಾಗಿದೆ.

ಪಂಚ ಲೋಹದಿಂದ ತಯಾರಿಸಿದ ಶಟಗೋಪದ ಮೇಲೆ ವಿಷ್ಣುವಿನ ಪಾದಗಳು ಇರುತ್ತದೆ. ಇದನ್ನು ತಲೆಯ ಮೇಲೆ ಇಟ್ಟಾಗ ಇದರಲ್ಲಿರುವ ಲೋಹಗಳ ಶಕ್ತಿ ದೇಹದಲ್ಲಿನ ಉಷ್ಣತೆಗೆ ಸೇರುತ್ತದೆ. ಹೆಚ್ಚಿನ ಉಷ್ಣಾಂಶವು ದೇಹದಿಂದ ಹೊರ ಹೋಗುತ್ತದೆ ದೇಹದ ಉಷ್ಣತೆ ತಗ್ಗಿದಾಗ, ಆತಂಕ ಹೆಚ್ಚಿನ ಒತ್ತಡ ಕೋಪ ಇದೆಲ್ಲ ಕಡಿಮೆಯಾಗುತ್ತದೆ. ‘ಶಟಗೋಪ’ ಎಂದರೆ ಅತ್ಯಂತ ರಹಸ್ಯ ಅಂತ ಅರ್ಥ. ಮನಸ್ಸಿನಲ್ಲಿ ನಮ್ಮ ಆಸೆಯನ್ನು ಬೇಡಿಕೊಂಡಾಗ ಅದು ಶಟಗೋಪುರದ ಮೂಲಕ ದೇವರಿಗೆ ತಲುಪುತ್ತದೆ ಎಂದು ನಂಬಿಕೆ ಇದೆ. ಆದ್ದರಿಂದ ದೇವಸ್ಥಾನಗಳಿಗೆ ಹೋದಾಗ, ನಮ್ಮಲ್ಲಿರುವ ಕಾಮ, ಕ್ರೋಧ, ಲೋಭ, ಮೋಹ, ಮದ ಮಾತ್ಸರ್ಯಾ ಇವುಗಳನ್ನು ನಿಗ್ರಹಿಸುವ ಶಕ್ತಿಯನ್ನು ಕೊಡು ಭಗವಂತ ಎಂದು ಗುಟ್ಟಾಗಿ ಭಕ್ತಿಯಿಂದ ಕೇಳಿಕೊಳ್ಳುವುದರ ಮೂಲಕ ಸಂಕಲ್ಪ ಮಾಡಿಕೊಳ್ಳಬೇಕು. ಇಂಥ ಪ್ರಾಮಾಣಿಕ ಭಕ್ತಿಗೆ ಮೆಚ್ಚಿ ಭಗವಂತ ಎಲ್ಲರಿಗೂ ಅನುಗ್ರಹಿಸುತ್ತಾನೆ ಎಂಬ ನಂಬಿಕೆಯು ಇದೆ.
0Shares
See also  ಶ್ರೀ ವಿಷ್ಣುಮೂರ್ತಿ ದೇವಸ್ಥಾನ - ಆರೂರು

Leave a Reply

error: Content is protected !!