ನಾರದ ಜಯಂತಿಯ ಮಹತ್ವ

0Shares

ನಾರದ ಜಯಂತಿ ಆಚರಣೆ ದಿನ : ಶನಿವಾರ, 6 ಮೇ 2023

ವೈಶಾಖ ಮಾಸದ ಕೃಷ್ಣ ಪಕ್ಷದ ಪಾಡ್ಯದಂದು ನಾರದ ಜಯಂತಿಯನ್ನು ಆಚರಿಸುತ್ತಾರೆ. ಜಗತ್ತಿನ ಮೊದಲ ಪತ್ರಕರ್ತ ಎಂಬ ಹೆಗ್ಗಳಿಕೆ ಪಾತ್ರರಾದವರು ಎಂದರೆ ಅದು ನಾರದ ಮುನಿಗಳು. ಪುರಾಣ ಕಾಲದಲ್ಲಿ ದೇವಲೋಕ, ಭೂಲೋಕ ಹಾಗೂ ಪಾತಾಳ ಲೋಕಗಳನ್ನು ಸುತ್ತಿ, ಸಂದೇಶಗಳನ್ನು ಮುಟ್ಟಿಸುತ್ತಿದ್ದವರು ಇವರು. ವಿಷ್ಣುವಿನ ಕಟ್ಟಾ ಭಕ್ತನಾಗಿದ್ದ ನಾರದರು, ಪ್ರತಿ ಯುಗದಲ್ಲೂ ಪ್ರಾಮುಖ್ಯತೆಯನ್ನು ಪಡೆದಿದ್ದಾರೆ. ನಾರದ ಮುನಿ ಜ್ಞಾನಗಳ ಸಾಗರ, ತ್ರಿಕಾಲ ಜ್ಞಾನಿಗಳು. ಇವರೆಂದರೆ ದೇವರಿಗೂ ಪ್ರೀತಿ, ದಾನವರಿಗೂ ಒಲವು.

ನಾರದ ಜಯಂತಿ ಮಹತ್ವ

‘ನಾರ’ ಎಂದರೆ ಮಾನವರಿಗೆ ಪ್ರಯೋಜನವಾಗುವ ಜ್ಞಾನ, ‘ದ’ ಎಂದರೆ ಕೊಡುವವರು. ನಾರದ ಎಂದರೆ ಮನುಷ್ಯನಿಗೆ ಪ್ರಯೋಜನಕಾರಿಯಾಗುವ ಜ್ಞಾನವನ್ನು ಕೊಡುವವನು ಎಂದು ಅರ್ಥ. ನಾರದರ ಪಾತ್ರ ಕೃತ, ತ್ರೇತಾ, ದ್ವಾಪರ ಹೀಗೆ ಮೂರೂ ಯುಗಗಳಲ್ಲಿ ಕಂಡು ಬರುತ್ತದೆ. ಈ ಯುಗಗಳಲ್ಲಿ ನಡೆಯುವ ಒಂದಲ್ಲೊಂದು ಕಥೆಗಳಲ್ಲಿ ನಾರದರ ಪಾತ್ರವಿದೆ.

ಕೈಯಲ್ಲಿ ವೀಣೆಯನ್ನು ಹಿಡಿದುಕೊಂಡು, ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ನಾರಾಯಣ, ನಾರಾಯಣ ಎಂಬ ನಾಮಸ್ಮರಣೆ ಮಾಡುತ್ತಾ ತ್ರಿಲೋಕದಲ್ಲಿ ಸಂಚಾರ ನಡೆಸುವ ನಾರದರ ಪಾತ್ರ ಪುರಾಣಗಳಲ್ಲಿ ಅತ್ಯಂತ ಮಹತ್ವಪೂರ್ಣವಾದದ್ದು. ನಾರದರನ್ನು ವಿನೋದ ಪ್ರಿಯ ಎಂದು ನಾವು ಅಂದುಕೊಂಡರೂ ಅವರಲ್ಲಿರುವ ವಿದ್ವತ್ ಯಾವುದೇ ಋಷಿ ಮುನಿಗಳಿಗೆ ಕಮ್ಮಿ ಇಲ್ಲ. ವೇದ, ಭಗವದ್ಗೀತೆ, ಬ್ರಹ್ಮ ಪುರಾಣ ಎಲ್ಲೆಡೆ ನಾರದ ಮುನಿಗಳ ಉಲ್ಲೇಖವಿದೆ.

ನಾರದರು ಬ್ರಹ್ಮನ ಮಾನಸ ಪುತ್ರ ಎನ್ನುತ್ತಾರೆ. ನಾರದರ ಜನ್ಮ ರಹಸ್ಯದ ಬಗ್ಗೆ ಅವರೇ ಮಹಾಭಾರತವನ್ನು ಬರೆಯುವ ಮುನ್ನ ವೇದವ್ಯಾಸರ ಬಳಿ ಹೇಳಿಕೊಂಡಿದ್ದಾರೆ. ನಾನು ನಾರದನಾಗಿ ಜನಿಸಿದ್ದು ಪೂರ್ವ ಜನ್ಮದ ಪುಣ್ಯದ ಫಲ ಎಂದಿದ್ದಾರೆ. ಹಿಂದಿನ ಜನ್ಮದಲ್ಲಿ ನಾರದರು ಋಷಿ ಮುನಿಗಳ ಆಶ್ರಮದಲ್ಲಿ ಸೇವೆ ಮಾಡುತ್ತಿದ್ದರಂತೆ. ಋಷಿಗಳು ಚಾತುರ್ಮಾಸ ಆಚರಣೆ ಮಾಡುವ ಸಂದರ್ಭದಲ್ಲಿ ಇವರು ಮಾಡಿದ ಸೇವೆಯನ್ನು ಮೆಚ್ಚಿ ‘ವಿಷ್ಣು ಸ್ತೋತ್ರ’ವನ್ನು ಉಪದೇಶ ಮಾಡುತ್ತಾರೆ. ಈ ಉಪದೇಶದ ಕಾರಣದಿಂದ ಆ ಹುಡುಗನಿಗೆ ಮಹಾವಿಷ್ಣುವಿನ ಲೀಲೆ ಹಾಗೂ ಮಹಿಮೆಯ ಪರಿಚಯವಾಗುತ್ತದೆ. ವಾಸುದೇವ, ಪ್ರದ್ಯುಮ್ನಾ, ಅನಿರುದ್ಧ ಹಾಗೂ ಸಂಕರ್ಷಣ ಎಂಬ ವಿಷ್ಣುವಿನ ನಾಲ್ಕು ಭಾವಗಳನ್ನು ಈ ಹುಡುಗ ಅರ್ಥೈಸಿಕೊಳ್ಳುತ್ತಾನೆ. ಅದೇ ಸಂದರ್ಭದಲ್ಲಿ ಅವನ ತಾಯಿ ಹಾವು ಕಚ್ಚಿ ನಿಧನ ಹೊಂದುತ್ತಾರೆ. ಇದರಿಂದ ನೊಂದ ಬಾಲಕ ದುಃಖದಿಂದ ಕಾಡಿಗೆ ಹೋಗಿ ತಪಸ್ಸು ಮಾಡುತ್ತಾನೆ. ದಿನಗಳು ಉರುಳಿದಂತೆ ಆ ಯುವಕನಿಗೆ ಅಸ್ಪಷ್ಟ ರೂಪದ ವಿಷ್ಣುವಿನ ಪ್ರತಿಬಿಂಬ ಕಾಣಿಸುತ್ತದೆ. ಎಷ್ಟು ತಪಸ್ಸು ಮಾಡಿದರೂ ಅವನಿಗೆ ಮಹಾವಿಷ್ಣುವಿನ ಸರಿಯಾದ ರೂಪ ಕಾಣಿಸುವುದಿಲ್ಲ. ಈ ಚಿಂತೆಯಲ್ಲೇ ಇರುವಾಗ ಒಂದು ಅಶರೀರವಾಣಿ ಅವನಿಗೆ ಕೇಳಿಸುತ್ತದೆ.

‘ನಿನಗೆ ಈ ಜನ್ಮದಲ್ಲಿ ನನ್ನ ರೂಪ ಕಾಣಲು ಸಿಗುವುದಿಲ್ಲ. ಆದರೆ ನಿನ್ನಲ್ಲಿ ನನ್ನ ಬಗ್ಗೆ ಭಯ, ಭಕ್ತಿ ಭಾವನೆಗಳು ತುಂಬುತ್ತವೆ. ನೀನು ಈ ಶರೀರ ತೊರೆದ ಬಳಿಕ ನಿನ್ನ ಆತ್ಮ ನನ್ನ ಬಳಿ ಬರುತ್ತದೆ’ ಎನ್ನುತ್ತದೆ ಆ ವಾಣಿ. ಇದರಿಂದ ಆ ಯುವಕನು ಪ್ರಸನ್ನನಾಗುತ್ತಾನೆ. ನಿರಂತರ ಹರಿನಾಮ ಜಪವನ್ನು ಮಾಡುತ್ತಾನೆ. ಕಡೆಗೊಮ್ಮೆ ಆ ಯುವಕನ ಆಯುಷ್ಯ ಮುಗಿದು ಅವನು ಮೃತನಾಗುತ್ತಾನೆ. ಅದು ಪ್ರಳಯದ ಸಮಯವಾಗಿತ್ತು. ಆ ಸಮಯ ಈ ಯುವಕನ ಆತ್ಮವು ಸಂಚರಿಸುತ್ತಿರುವಾಗ ಅದು ನಿದ್ರಿಸುತ್ತಿರುವ ಬ್ರಹ್ಮನ ನಾಸಿಕದ ಮೂಲಕ ಅವರ ಉಸಿರನ್ನು ಸೇರಿಕೊಳ್ಳುತ್ತದೆ.

See also  ಶ್ರೀ ಗುರುನರಸಿಂಹ ದೇವಸ್ಥಾನ - ಸಾಲಿಗ್ರಾಮ

ಹಲವಾರು ಯುಗಗಳು ಕಳೆದ ಬಳಿಕ ಬ್ರಹ್ಮ ನಿದ್ರೆಯಿಂದ ಎಚ್ಚೆತ್ತು ಮತ್ತೆ ಸೃಷ್ಟಿ ಕಾರ್ಯಕ್ಕೆ ಮುಂದಾಗುತ್ತಾನೆ. ಆ ಸಮಯದಲ್ಲಿ ಮಾರೀಚ ಮುಂತಾದ ಮುನಿಗಳ ಜೊತೆ ನಾರದರ ಆತ್ಮವೂ ಮುನಿಯ ರೂಪದಲ್ಲಿ ಜನ್ಮ ತಾಳುತ್ತದೆ. ಇದರಿಂದಾಗಿಯೇ ನಾರದರನ್ನು ಬ್ರಹ್ಮನ ಮಾನಸ ಪುತ್ರ ಎಂದು ಕರೆಯುತ್ತಾರೆ. ಹೀಗೆ ಜನ್ಮ ತಾಳಿದ ನಾರದರನ್ನು ಬ್ರಹ್ಮ ಸಕಲ ಕಲಾ ಪಾರಂಗತರನ್ನಾಗಿಸುತ್ತಾರೆ. ಕಳೆದ ಜನ್ಮದಲ್ಲಿ ವಿಷ್ಣು ನೀಡಿದ ಮಾತಿನಂತೆ ನಾರದರು ಪ್ರತೀ ಸಲ ಹರಿನಾಮ ಭಜನೆ ಮಾಡುವಾಗ ಅವರಿಗೆ ವಿಷ್ಣುವಿನ ಸ್ಪಷ್ಟವಾದ ರೂಪ ಕಣ್ಣೆದುರು ಬಂದು ನಿಲ್ಲುತ್ತದೆ. ಈ ಎಲ್ಲಾ ವಿಚಾರಗಳನ್ನು ವೇದವ್ಯಾಸರ ಬಳಿ ಹೇಳಿಕೊಳ್ಳುವ ನಾರದರು ನೀವು ಬರೆಯುವ ಮಹಾ ಗ್ರಂಥದಲ್ಲಿ ವಿಷ್ಣುವಿನ ಮಹಿಮೆಯನ್ನು ಬಹಳ ಸೊಗಸಾಗಿ ವರ್ಣಿಸಬೇಕು ಎಂದು ಬೋಧಿಸಿ ಆಶೀರ್ವದಿಸುತ್ತಾರೆ. ನಾರದರು ಅಪಾರ ಜ್ಞಾನಿಗಳೂ ಆಗಿದ್ದುದರಿಂದ ದೇವಗುರು ಬ್ರಹಸ್ಪತಿಯೂ ಇವರಿಂದ ಹಲವಾರು ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದರಂತೆ.

ನಾರದರು ಅಲೆಮಾರಿಯಂತೆ ತ್ರಿಲೋಕ ಸುತ್ತುವುದು ಏಕೆ? ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದಲ್ಲವೇ? ಅದಕ್ಕೊಂದು ಕಥೆಯಿದೆ.

ದಕ್ಷ ಪ್ರಜಾಪತಿ ಒಮ್ಮೆ ತನ್ನ ಮಕ್ಕಳಿಗೆ ತಪಸ್ಸು ಮಾಡಿ, ದೇವರಿಂದ ವರ ಪಡೆದು ನಂತರ ಮದುವೆಯಾಗಿ ಎಂದು ಹೇಳಿ ಕಳುಹಿಸುತ್ತಾನೆ. ಹೀಗೆ ದಕ್ಷನ ಮಕ್ಕಳು ಉಗ್ರ ತಪಸ್ಸು ಮಾಡುತ್ತಿರುವ ಸಮಯದಲ್ಲಿ ನಾರದರು ಅಲ್ಲಿಗೆ ತೆರಳಿ ‘ನೀವು ಯಾಕೆ ತಪಸ್ಸು ಮಾಡುತ್ತೀರಿ? ಮದುವೆಯಾದರೆ ವೃಥಾ ಕಿರಿ ಕಿರಿ. ಸುಮ್ಮನೇ ಸಂಸಾರದ ಬಂಧನಕ್ಕೆ ಬೀಳಬೇಡಿ’ ಎಂದು ಉಪದೇಶಿಸಿ ಅವರ ತಪಸ್ಸು ಭಂಗ ಮಾಡಿ ಮರಳಿ ಕಳುಹಿಸುತ್ತಾನೆ.

ಇವರ ಉಪದೇಶದಿಂದ ದಕ್ಷನ ಮಕ್ಕಳು ಮದುವೆಯ ಯೋಚನೆಯನ್ನೇ ಬಿಟ್ಟರಂತೆ. ಅದರಿಂದ ನೊಂದ ದಕ್ಷ ತನ್ನ ಇನ್ನುಳಿದ ಕೆಲವು ಮಕ್ಕಳನ್ನು ಕರೆದು ಈ ರೀತಿಯಾಗಿ ತಪಸ್ಸು ಮಾಡಲು ಕಳುಹಿಸಿದಾಗ ಅವರಿಗೂ ಇದೇ ರೀತಿಯ ಬೋಧನೆ ಮಾಡಿ ಸಂಸಾರದಿಂದ ವಿರುಕ್ತರಾಗುವಂತೆ ಮಾಡುತ್ತಾರೆ ನಾರದರು. ಇದರಿಂದ ತೀವ್ರವಾಗಿ ಕೋಪಗೊಂಡ ದಕ್ಷನು ನಾರದನಿಗೆ ಶಾಪ ಕೊಡುತ್ತಾರೆ “ನಾರದ, ನಿನಗೆ ಬೇರೆ ಯಾವ ಕೆಲಸವೂ ಇಲ್ಲವೆಂದು ಕಾಣಿಸುತ್ತದೆ. ಹೀಗಾಗಿ ನೀನು ಅಲೆಮಾರಿಯಾಗಿ ಸಂಚರಿಸುತ್ತಲೇ ಇರು” ಎಂಬ ಶಾಪದಿಂದಾಗಿ ನಾರದರು ಈಗಲೂ ತ್ರಿಲೋಕ ಸಂಚಾರ ಮಾಡುತ್ತಲೇ ಇದ್ದಾರೆ ಎನ್ನುತ್ತದೆ ಪುರಾಣ ಕಥೆಗಳು.

ನಾರದರು ಅಪಾರ ಜ್ಞಾನ ಉಳ್ಳವರು. ಅವರು ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ. ವೇದ ಉಪನಿಷತ್ತುಗಳಲ್ಲೂ ನಾರದರ ಉಲ್ಲೇಖವಿದೆ. ನಾರದಸ್ಮೃತಿ ಎಂಬ ಗ್ರಂಥವಿದೆ. ನಾರದಾಶಿಕ್ಷಾ ಎಂಬ ಗ್ರಂಥವನ್ನು ಇವರು ರಚನೆ ಮಾಡಿದ್ದಾರೆ. ಪ್ರಸಿದ್ಧ ‘ನಾರದ ಪುರಾಣ’ ವೂ ನಾರದರ ಅಮೂಲ್ಯ ಕೃತಿ. ಇವುಗಳಲ್ಲದೇ ನಾರದ ಭಕ್ತಿ ಸೂತ್ರ, ಪಾಂಚರಾತ್ರ ಮುಂತಾದ ಗ್ರಂಥಗಳನ್ನು ರಚಿಸಿದ್ದಾರೆ.

ನಾರದ ಮುನಿಗಳು ದೂರ್ವಾಸ ಮುನಿಯ ಗರ್ವಭಂಗ ಮಾಡಿದ ಕಥೆಯನ್ನು ಕೇಳಿರುವಿರಾ?

ಒಮ್ಮೆ ಏನಾಯಿತೆಂದರೆ ಕೈಲಾಸದಲ್ಲಿ ಈಶ್ವರನ ಸಭೆ ನಡೆಯುತ್ತಿತ್ತು. ಈ ಸಭೆಯಲ್ಲಿ ನಾರದ ಮುನಿಗಳೂ ಪಾಲ್ಗೊಂಡಿದ್ದರು. ದೂರ್ವಾಸ ಮುನಿಯ ಬಗ್ಗೆ ಸರ್ವರಿಗೂ ಗೊತ್ತಲ್ಲ. ವಿಪರೀತ ಕೋಪಿಷ್ಟ ಮುನಿ ಇವರು. ಇವರು ಈ ಸಭೆಗೆ ಹಲವಾರು ಧರ್ಮಗ್ರಂಥಗಳ ದೊಡ್ಡ ಹೊರೆಯನ್ನು ಹೊತ್ತು ಕೊಂಡು ಬಂದರು. ಹೀಗೆ ಬಂದವರು ನೇರವಾಗಿ ಹೋಗಿ ಈಶ್ವರನ ಹತ್ತಿರವೇ ಹೋಗಿ ಕುಳಿತುಕೊಂಡರು. ಶಿವನು ಮನದಲ್ಲೇ ನಕ್ಕು ‘ ದೂರ್ವಾಸರೇ , ನಿಮ್ಮ ಅಧ್ಯಯನಗಳೆಲ್ಲಾ ಹೇಗೆ ನಡೆಯುತ್ತಿದೆ? ‘ ಎಂದು ಪ್ರಶ್ನೆ ಮಾಡಿದನು. ಆಗ ದೂರ್ವಾಸರು ಅಹಂಕಾರದಿಂದ ತಾನು ಹೊತ್ತು ತಂದಿದ್ದ ಗ್ರಂಥಗಳ ಹೊರೆಯನ್ನು ತೋರಿಸಿ ‘ಇವುಗಳನ್ನೆಲ್ಲಾ ಅಧ್ಯಯನ ಮಾಡಿದ್ದೇನೆ. ಇವೆಲ್ಲವೂ ನನಗೆ ಕಂಠಪಾಠ’ ಎಂದರು. ಅವರ ಮಾತಿನಲ್ಲಿ ದರ್ಪವಿತ್ತು. ಕೂಡಲೇ ನಾರದರು ‘ ನೀವು ಈ ಗ್ರಂಥವನ್ನು ಹೊತ್ತುಕೊಂಡಿರುವ ಒಂದು ಕತ್ತೆ’ ಎಂದರು.

See also  ಶ್ರೀ ಗುರುನರಸಿಂಹ ದೇವಸ್ಥಾನ - ಸಾಲಿಗ್ರಾಮ

ಅದನ್ನು ಕೇಳಿದ ಎಲ್ಲರೂ ನಕ್ಕರು. ಇದರಿಂದ ದೂರ್ವಾಸರು ವಿಪರೀತ ಕೋಪಗೊಂಡರು. ನಾರದರಿಗೆ ಇನ್ನೇನು ಶಾಪ ನೀಡಬೇಕು ಎನ್ನುವಷ್ಟರಲ್ಲಿ ನಾರದರೇ ಹೇಳಿದರು “ಮುನಿಗಳೇ, ಇಷ್ಟೆಲ್ಲಾ ಓದಿದರೂ ನಿಮ್ಮ ಕೋಪ ಹೋಗಲಿಲ್ಲ. ಅಹಂಕಾರ ನೀಗಲಿಲ್ಲ. ಸಭೆಯ ಮರ್ಯಾದೆಯನ್ನು ಲೆಕ್ಕಿಸದೇ ನೇರವಾಗಿ ಹೋಗಿ ಶಿವನ ಪಕ್ಕ ಕೂತಿರಿ. ಇಂತಹ ಶಿಕ್ಷಣ ನೀಡಿದ ಓದಿನಿಂದ ಪ್ರಯೋಜನವಾದರೂ ಏನು? ಅದಕ್ಕೇ ನಾನು ಕತ್ತೆಯ ಮೇಲಿನ ಹೊರೆ ಎಂದೆ” ಅಂದರು. ಇದರಿಂದ ದೂರ್ವಾಸರ ಗರ್ವಭಂಗವಾಯಿತು. ಏನೂ ಮಾತನಾಡದೇ ಮೌನವಾಗಿ ಸಭೆಯಿಂದ ನಿರ್ಗಮಿಸಿದರು.

ನಾರದರ ಬಗ್ಗೆ ಮಹಾಭಾರತದ ಆದಿಪರ್ವದಲ್ಲಿ ವ್ಯಾಸರು ಉಲ್ಲೇಖಿಸಿದ್ದಾರೆ. ಅವರ ಪ್ರಕಾರ ನಾರದರು ವೇದ ಶಾಸ್ತ್ರದಲ್ಲಿ ಪಾರಂಗತರು, ಮಹಾ ತೇಜಸ್ವಿಗಳು, ನೀತಿವಂತರು, ಮಹಾ ತಪಸ್ವಿಗಳು, ಮೃದು ಸ್ವಭಾವದವರು, ಎಲ್ಲರೊಂದಿಗೆ ಬೆರೆಯುವವರು, ಬುದ್ದಿ ಶಕ್ತಿಯಲ್ಲಿ ಬ್ರಹಸ್ಪತಿಗೆ ಸಮಾನರು ಎಂಬ ವರ್ಣನೆ ಇದೆ. ಇವರು ಕಲಹ ಮಾಡಿಸುವ ಉದ್ದೇಶವೆಂದರೆ ಎಲ್ಲೆಡೆ ಅಧರ್ಮ ನಾಶವಾಗಿ ಧರ್ಮ ರಾರಾಜಿಸಬೇಕು ಎಂದು. ಅಹಂಕಾರಿಗಳಿಗೆ ಬುದ್ಧಿ ಬಂದು ಒಳ್ಳೆಯವರಾಗಿ ಬದುಕಲಿ ಎಂಬುವುದೇ ನಾರದ ತತ್ವ.

ನಾರದ ಮುನಿಯ ಪುಸ್ತಕಗಳು:

ನಾರದ ಮುನಿಯ ವಿಚಾರವಾಗಿ ಎರಡು ಪುಸ್ತಕಗಳಿವೆ. ಒಂದು ‘ನಾರ ಪುರಾಣ‘ ಇನ್ನೊಂದು ನಾರದ ಸೂಕ್ತಿ‘.

ನಾರದ ದೇಗುಲ:

ನಾರದ ಮುನಿಗಳಿಗೆ ಮೀಸಲಾಗಿ ಒಂದು ದೇವಾಲಯವಿದೆ. ಇದು ಕರ್ನಾಟಕದ ಕಷ್ಣಾನದಿಯಲ್ಲಿ ಕೂರ್ವಾ ಎಂಬ ಸಣ್ಣ ದ್ವೀಪವಿದೆ. ಈ ದ್ವೀಪದಲ್ಲಿ ನಾರದ ದೇವಸ್ಥಾನವಿದೆ. ಇದನ್ನು ‘ನರದ್ಗದ್ದೆ’ ಎಂದು ಕರೆಯಲಾಗುತ್ತದೆ.

ವೀಣೆ:

ನಾರದ ಮಹರ್ಷಿಗಳು ಕೈಯಲ್ಲಿರುವ ವೀಣೆಯ ಹೆಸರು – ಮಹತಿ

0Shares

Leave a Reply

error: Content is protected !!