ದಕ್ಷಿಣ ಕನ್ನಡ ಜಿಲ್ಲೆ (ಅವಿಭಜಿತ) ಇತಿಹಾಸ, ಪ್ರಾಚೀನ ಸಂಸ್ಕೃತಿ, ಮತ್ತು ಹಲವೊಂದು ವೈಶಿಷ್ಟ್ಯಗಳಿಂದ ಕೂಡಿ ಪರಶುರಾಮ ಸೃಷ್ಟಿಯಾದ ನಮ್ಮೀ ತುಳುನಾಡು ಪ್ರಸಿದ್ಧವಾಗಿ ಸೃಷ್ಟಿ, ಸಂಪತ್ ಸೌಂದರ್ಯದ ಸಿರಿತನಕ್ಕೆ ನೆಲೆವೀಡಾಗಿದೆ. ಇತಿಹಾಸ ಪ್ರಸಿದ್ಧವಾದ ತುಳುನಾಡು ಹಲವಾರು ದೇವಸ್ಥಾನ ಮತ್ತು ಬ್ರಹ್ಮಸ್ಥಾನಾದಿಗಳೊಡನೆ ಹಿರಿಮೆಯಿಂದ ಮೆರೆಯುತ್ತಿರುವ ಸ್ಥಳಗಳಲ್ಲಿ ಪಡುಬಿದ್ರಿ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನವೂ ಒಂದಾಗಿದೆ.
ಈ ಕಾಲದಲ್ಲಿ ಕ್ಷಿಪ್ರಪ್ರಸಾದಿಗಳಾಗಿ ಕಾಮಧೇನು,ಕಲ್ಪವೃಕ್ಷಗಳಂತೆ ಭಕ್ತಾದಿಗಳ ಇಷ್ಟಾರ್ಥಗಳನ್ನು ಅನುಗ್ರಹಿಸಿ, ಭಕ್ತಾದಿಗಳನ್ನು ಅಭಿವೃದ್ಧಿ ಗೊಳಿಸುವ ಶಕ್ತಿಗಳೆಂದರೆ ದುರ್ಗಾದೇವಿ ಮತ್ತು ವಿನಾಯಕ. ಈ ಎರಡು ಶಕ್ತಿಗಳು ಉಡುಪಿಯಿಂದ 24ಕಿ.ಮೀ .ದೂರದಲ್ಲಿರುವ, ಮಂಗಳೂರಿನಿಂದ 35ಕಿ.ಮೀ. ದೂರದಲ್ಲಿಯೂ ಪೈರು ಪಚ್ಚೆಗಳಿಂದ ಕೂಡಿದ ಪಡುಬಿದ್ರಿ(ಪಾದಪ್ರಸ್ಥ ಪುರಿ)ಯಲ್ಲಿ ಒಂದೆಡೆ ದೇವಸ್ಥಾನದಲ್ಲಿ ಮಹಾಲಿಂಗೇಶ್ವರನೊಂದಿಗೆ ನೆಲೆಸಿರುವ ವಿಶ್ವಂಭರೂತಿಯಾದ ಮಹಾಗಣಪತಿಯು ಭಕ್ತ ಸಮೂಹದ ಹರಕೆ ಕಾಣಿಕೆಗಳನ್ನು ಸ್ವೀಕರಿಸಿ, ಅತೀ ಶೀಘ್ರವಾಗಿ ಇಷ್ಟಾರ್ಥಗಳನ್ನು ಈಡೇರಿಸಿ, ಮಹಾಶಕ್ತಿಪ್ರಭಾವಶಾಲಿ ಎಂದು ಪ್ರಸಿಧ್ಧನಾಗಿರುವನು.
ಇನ್ನೊಂದೆಡೆ ದೇವಸ್ಥಾನದ ಉತ್ತರಕ್ಕೂ, ಅರಬ್ಬೀ ಸಮುದ್ರದ ಪೂರ್ವಕ್ಕೂ 400 ಮೀಟರ್ ದೂರದಲ್ಲಿ ಬ್ರಹ್ಮಸ್ಥಾನವೆಂಬ (ಪಾದಪ್ರಸ್ಥಾರಣ್ಯ) ಕದಂಬವನದಲ್ಲಿ ಸ್ವಯಂ ಉದ್ಭವಳಾಗಿ ನನಗೆ ಆಲಯವೂ ಬೇಡ, ನಿತ್ಯ ಪೂಜೆಯೂ ಬೇಡ. ಮಕ್ಕಳ ಭಕ್ತಿ ವಿಶ್ವಾಸಗಳೇ ಸಾಕು, ಭಕ್ತಿ, ವಿಶ್ವಾಸಗಳಿಂದ ಪೂಜಿಸುವ ಮಕ್ಕಳ ಕಷ್ಟ ಪರಿಹಾರಕ್ಕಾಗಿಯೇ ಇರುವೆನೆಂದೂ, ದುಷ್ಟರಲ್ಲಿ ಕಷ್ಟಕಾರ್ಪಣ್ಯವನ್ನೂ, ಭಕ್ತರಲ್ಲಿ ಕಾರುಣ್ಯವನ್ನೂ ಕ್ಷಣ ಕ್ಷಣಕ್ಕೂ ಪ್ರದರ್ಶಿಸುವ ನವದುರ್ಗಾ ಸ್ವರೂಪಳಾದ ಖಡ್ಗೇಶ್ವರಿಯು ನಾಗಬ್ರಹ್ಮಾದಿಗಳಿಂದ ನೆಲೆಯಾಗಿ ಸಾಧು ಸಂಪನ್ನರಾದ ಭಕ್ತಾದಿಗಳು ತಮ್ಮ ತಮ್ಮ ಕಷ್ಟನಿಷ್ಟಗಳನ್ನು ಪರಿಹರಿಸಬೇಕೆಂದು ದೀನರಾಗಿ ಬೇಡಲು ಅವರ ಹರಕೆಗಳನ್ನು ಮಾತೃ ಸ್ನೇಹದಿಂದ ಸ್ವೀಕರಿಸಿ, ಪರಮಾನುಗ್ರಹವನ್ನು ಕರುಣಿಸುವ “ ಶ್ರೀ ಖಡ್ಗೇಶ್ವರಿಯು ” ಯಾವ ಕಾಲದಲ್ಲಿ ನಾಗಬ್ರಹ್ಮಾದಿಗಳೊಂದಿಗೆ ನೆಲೆಯಾದಳು ಎಂಬುದನ್ನು ನಿಷ್ಕರ್ಷಿಸಿ ಹೇಳುವಂತಿಲ್ಲವಾದರೂ ಬಹು ಪುರಾತನವಾಗಿರುವವಳು ಎಂಬುದು ಹಿರಿಯ ಅನುಭವಿಗಳ ಸಿದ್ಧಾಂತ.
ಇದಕ್ಕೆ ಆಧಾರವಾಗಿ ಶಿಲಾ ಶಾಸನಗಳು ಇಲ್ಲವಾದರೂ ಊರ ಹಿರಿಯರ ಹೇಳಿಕೆಗಳಿಂದ ಪುರಾಣ ಹಿನ್ನೆಲೆಯನ್ನನುಸರಿಸಿ ಬರೆಯಲು ಅನುಗ್ರಹಿಸಿದ ಕರುಣಾಮಯಿ ಅಭಯಹಸ್ತಳಾದ ಶ್ರೀ ಖಡ್ಗೇಶ್ವರಿ ದೇವಿಯ ಕಾರಣೀಕ ಪ್ರಭಾವಗಳಿಂದಾದ ಘಟನೆಗಳನ್ನು (ಇತ್ತೀಚೆಗೆ ನಡೆದದ್ದು) ವರ್ಣಿಸಲು ಸಾಧ್ಯಳಾಗಿರುವ ಶ್ರೀ ಖಡ್ಗೇಶ್ವರಿಯು ಈ ಕದಂಬವನದಲ್ಲಿ ನೆಲೆಯಾದ ಪುರಾಣವು ಅತಿ ಪ್ರಾಚೀನವಾದುದು.
Page Contents
ಮರಳು ಪ್ರಸಾದ:
ಬ್ರಹ್ಮಸ್ಥಾನದಲ್ಲಿ ಯಾರಿಗೂ ಕುಳಿತು ಕೊಳ್ಳಲು ಎಂದು ಯಾವುದೇ ಆಸನವಿರುವುದಿಲ್ಲ. ಬಂದವರೆಲ್ಲಾ ಮರಳಿನ ಮೇಲೆಯೇ ಕುಳಿತುಕೊಳ್ಳಬೇಕು. ವಿಶೇಷವೆಂದರೆ ಇತರ ದೇವಳಗಳಂತೆ ಇಲ್ಲಿ ಪ್ರಸಾದವು ಇರುವುದಿಲ್ಲ. ನೆಲದಲ್ಲಿರುವ ಮರಳೇ ಇಲ್ಲಿನ ಪ್ರಮುಖ ಪ್ರಸಾದ. ಅದನ್ನು ಭಕ್ತರೇ ತೆಗೆದುಕೊಳ್ಳುವುದು.
ದೊಂದಿಯ ಬೆಳಕು:
ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನ ಇಂದಿಗೂ ದಟ್ಟ ವನದೊಳಗಿದ್ದು ಇಲ್ಲಿ ಯಾವುದೇ ವಿದ್ಯುದ್ಧೀಪಗಳನ್ನು ಬಳಸುವಂತಿಲ್ಲ. ಮುಖ್ಯವಾಗಿ ದೊಂದಿ ಬೆಳಕಿನಲ್ಲಿಯೇ ಧಾರ್ಮಿಕ ವಿಧಿ ವಿಧಾನಗಳು ಜರುಗುತ್ತದೆ( ಇತ್ತೀಚೆಗೆ ಗ್ಯಾಸ್ ಲೈಟ್ ಗಳನ್ನು ಉಪಯೋಗಿಸಲಾಗುತ್ತದೆ).
ಪ್ರಕೃತಿ ಜನ್ಯ ಅಲಂಕಾರ:
ಬ್ರಹ್ಮಸ್ಥಾನದಲ್ಲಿ ಅಲಂಕಾರಕ್ಕೆ ಕೃತಕ ಹೂಗಳನ್ನು ಬಳಸುವಂತಿಲ್ಲ. ತಾಜಾ ಹೂವು, ಹಣ್ಣುಹಂಪಲು, ತಾಳೆ, ಬಾಳೆ, ಅಡಿಕೆ, ಬಿದಿರು ಮತ್ತು ಅಡಿಕೆ ಮರಗಳನ್ನು ಅಲಂಕಾರಕ್ಕೆ ಬಳಸಲಾಗುತ್ತದೆ.
ಮೊಬೈಲ್, ಕ್ಯಾಮರಾ ಬಳಕೆ ಸಂಪೂರ್ಣ ನಿಷೇಧ:
ಬ್ರಹ್ಮಸ್ಥಾನದಲ್ಲಿ ಇಂದಿಗೂ ಪ್ರಾಚೀನ ಪದ್ಧತಿಯನ್ನು ಉಳಿಸಿಕೊಂಡು ಬರಲಾಗಿದೆ. ಧ್ವನಿವರ್ಧಕ, ವಿದ್ಯುತ್ ಸಂಪರ್ಕ, ಬ್ಯಾಂಡ್, ಪೋಟೋ, ಮೊಬೈಲ್ ಬಳಕೆ ಸಂಪೂರ್ಣವಾಗಿ ನಿಷಿದ್ಧವಾಗಿದೆ.
ಮೂಲಪ್ರಸಾದ:
ಕರ್ಕಾಟಕ ಮಾಸದ ೧೬ ನೇ ದಿನ ಸಮುದ್ರದಾಳದಿಂದ ತಂದ ಶುದ್ಧ ಮರಳನ್ನು ದೇವರ ಗುಂಡದೊಳಗೆ ಹಾಕಲಾಗುತ್ತಿದ್ದು ಇದನ್ನೇ ಮೂಲಪ್ರಸಾದವಾಗಿ ನೀಡುವುದು ಪದ್ಧತಿ.
ಕಾಣಿಕೆ ಡಬ್ಬಿ ರಹಿತ ಕ್ಷೇತ್ರ:
ಈ ಕ್ಷೇತ್ರದ ಮತ್ತೊಂದು ವಿಶೇಷವೆಂದರೆ ಈ ಕ್ಷೇತ್ರದಲ್ಲಿ ಯಾವುದೇ ಕಾಣಿಕೆ ಡಬ್ಬಿಗಳಿರುವುದಿಲ್ಲ ಅಥವಾ ದಾನ ದಕ್ಷಿಣೆಗಳ ಕ್ರಮ ಇರುವುದಿಲ್ಲ. ದೇವರಿಗೆ ಇಲ್ಲಿ ಮುಖ್ಯವಾಗಿ ಹಿಂಗಾರ ಮತ್ತು ಸೀಯಾಳವನ್ನು ಕಾಣಿಕೆಯಾಗಿ ಸಮರ್ಪಿಸಲಾಗುತ್ತದೆ.
ಢಕ್ಕೆಬಲಿ ಸೇವೆ:
ಪ್ರತಿ ೨ ವರ್ಷಗಳಿಗೊಮ್ಮೆ (ಪರ್ಯಾಯವಿಲ್ಲದ ವರ್ಷ) ಇಲ್ಲಿ ನಡೆಯುವ ಢಕ್ಕೆಬಲಿ ಸೇವೆಯು ಇಲ್ಲಿಯ ವಿಶೇಷ ಸೇವೆಯಾಗಿದೆ. ಮಂಡಲ ರಚನೆ ಎಂಬ ವಿಧಿಯೊಂದಿಗೆ ಈ ಆರಾಧನೆ ಆರಂಭವಾಗುತ್ತದೆ. ಆರಾಧನೆ ಇದ್ದಷ್ಟು ಕಾಲ ಗ್ರಾಮದ ಮಿತಿಯೊಳಗೆ ಯಾವುದೇ ಶುಭ ಸಮಾರಂಭ, ಗ್ರಾಮದ ಇತರ ದೈವ ದೇವಸ್ಥಾನಗಳಲ್ಲಿ ಧಾರ್ಮಿಕ ಉತ್ಸವ ನಡೆಸುವಂತಿಲ್ಲ ಎಂಬ ನಿಯಮವೂ ಚಾಲ್ತಿಯಲ್ಲಿದೆ. ಢಕ್ಕೆಬಲಿ ಸೇವೆಯು ಮಕರ ಮಾಸದಿಂದ ಆರಂಭವಾಗಿ ಕುಂಭ ಮಾಸದ ಅಂತ್ಯದವರೆಗೆ ನಿಗದಿತ ದಿನಗಳಲ್ಲಿ ನಡೆಯುತ್ತದೆ.
ಢಕ್ಕೆಬಲಿ ದಿನ ಬೆಳಿಗ್ಗೆ ಪುಣ್ಯಾಹ, ಪಂಚಾಮೃತ ಪುರಸ್ಸರ ಅಭಿಷೇಕ, ಸ್ಥಳಶುದ್ಧಿ, ಮಧ್ಯಾಹ್ನ ಬ್ರಾಹ್ಮಣಾರಾಧನೆ, ಬಳಿಕ ಸಾಯಂಕಾಲ ವಿಜೃಂಭಣೆಯಿಂದ ಸಕಲ ಬಿರುದಾವಳಿ ಸಹಿತ ಹೊರೆಕಾಣಿಕೆ ಮೆರವಣಿಗೆ ಸನ್ನಿಧಿಗೆ ಸಾಗಿ ಬರುತ್ತದೆ. ದೇವತಾ ಪ್ರಾರ್ಥನೆಯಾಗಿ ಊರ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರ ಸಮಕ್ಷಮ ಹೊರೆಕಾಣಿಕೆಯನ್ನು ಶ್ರೀ ವನದುರ್ಗೆಗೆ ಒಪ್ಪಿಸಲಾಗುವುದು. ಬಳಿಕ ಊರ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರು ಇಡೀ ಬನವನ್ನು ಹೂವು, ಹಿಂಗಾರ, ಹಣ್ಣುಹಂಪಲಿನಿಂದ ಹೂವಿನ ಅರಮನೆಯಂತೆ ಸಿಂಗರಿಸುತ್ತಾರೆ.
ರಾತ್ರಿ ಸುಮಾರು ೧೦ ಗಂಟೆ ವೇಳೆಗೆ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡು ಪುಣ್ಯಾಹವಾಚನ, ಶುದ್ಧೀಕರಣ, ಶ್ರೀ ಖಡ್ಗೇಶ್ವರಿ, ನಾಗದೇವರ ಸನ್ನಿಧಿ ಅಲಂಕಾರ (ಅರ್ಚಕರಿಂದ) ನಡೆಯುತ್ತದೆ. ನಂತರ ಸನ್ನಿದಾನದ ಪಾತ್ರಿಗಳು ಊರವರ ಪರವಾಗಿ ಗುರಿಕಾರರಲ್ಲಿ ಕೇಳಿ ಸ್ಥಾನಕ್ಕೆ ತೆರಳುತ್ತಾರೆ. ನಂತರ ನಾಗ ದೇವರಿಗೆ ಪೂಜೆ ನಡೆಯುತ್ತದೆ. ನಂತರ ಮಿಂದು ಸನ್ನಿಧಿಗೆ ಬರುವ ಪಾತ್ರಿಗಳಿಗೆ ಊರವರಲ್ಲಿ ಕೇಳಿ “ದಳ್ಯ” (ಬಿಳಿ ವಸ್ತ್ರ) ಕೊಡುತ್ತಾರೆ. ದಳ್ಯ ಉಟ್ಟ ಪಾತ್ರಿಗಳು ಆಚಮನಾದಿಗಳನ್ನು ಮಾಡಿ ದೇವರ ನಡೆಗೆ ಬರುತ್ತಾರೆ ಆ ಸಮಯದಲ್ಲಿ ವೈದ್ಯರೆಂದು ಕರೆಯಲ್ಪಡುವ ಢಕ್ಕೆಯವರ ಆಗಮನವಾಗುತ್ತದೆ. ಆ ಬಳಿಕ ದೇವರಿಗೆ ಮಹಾಪೂಜೆ ನಡೆದು ತಂಬಿಲ ಸೇವೆ ಜರಗುತ್ತದೆ. ನಂತರ ವೈದ್ಯರು ತೆಂಗಿನ ಗರಿಗಳಿಂದ ಮಂಡಲದ ಚಪ್ಪರದ ಶೃಂಗಾರ ಮಾಡುತ್ತಾರೆ. ಪಂಚವರ್ಣದ ಹುಡಿಗಳಿಂದ ಮಂಡಲವನ್ನು ರಚಿಸುತ್ತಾರೆ. ಇದಾದ ಬಳಿಕ ಸುಮಾರು ೧.೩೦ ಗಂಟೆ ವೇಳೆಗೆ ಮಂಡಲ ಸೇವೆ ಪ್ರಾರಂಭವಾಗುತ್ತದೆ. ಅರ್ಧನಾರಿ ವೇಷ ತೊಟ್ಟು ಬರುವ ವೈದ್ಯರು ಪಾತ್ರಿಗಳಿಗೆ ಅವೇಶ ಬರಿಸಿ ಮಂಡಲದತ್ತ ಕರೆತರುತ್ತಾರೆ. ನಂತರ ವೈದ್ಯರಿಂದ ಹಾಡು ನೃತ್ಯ ಸಹಿತ ಮಂಡಲ ಸುತ್ತ ಪ್ರದಕ್ಷಿಣೆ ಬರುತ್ತಾರೆ. ಆನಂತರ ಪ್ರತ್ಯೇಕವಾಗಿ ಪಾತ್ರಿಗಳಿಂದ ವಾದ್ಯಘೋಷಗಳ ನಡುವೆ ಹಿಂಗಾರ ಸ್ನಾನವಾಗುತ್ತದೆ ನಂತರ ಮುಂಜಾವದ ವೇಳೆ ಪ್ರಸಾದ ವಿತರಣೆಯಾಗಿ ಆವೇಶ ಬಿಡುಗಡೆಯಾಗುತ್ತದೆ. ಈ ರೀತಿಯಾಗಿ ಢಕ್ಕೆಬಲಿ ಸೇವೆಯು ಶ್ರಿ ದೇವರಿಗೆ ಸಲ್ಲಿಸಲಾಗುತ್ತದೆ.