ಕುಚ್ಚಲಕ್ಕಿ ಪುಂಡಿಗಟ್ಟಿ ಕಡಿಮೆ ಖರ್ಚಿನಲ್ಲಿ ಕುಚ್ಚಲಕ್ಕಿಯಲ್ಲಿ ಮಾಡಬಹುದಾದ ಒಂದು ರುಚಿಕರವಾದ ತಿಂಡಿ. ಈ ಕುಚ್ಚಲಕ್ಕಿ ಕರಾವಳಿ ಭಾಗದಲ್ಲಿ ಹೆಚ್ಚಾಗಿ ಬಳಸಲ್ಪಡುವ ಪೌಷ್ಠಿಕವಾದ ಆಹಾರವಾಗಿದೆ. ಕುಚ್ಚಲಕ್ಕಿಯು ಆರೋಗ್ಯದ ಹಿತದೃಷ್ಟಿಯಿಂದ ಬಿಳಿ ಅಕ್ಕಿಗಿಂತ ಅಧಿಕವಾದ ಪೌಷ್ಠಿಕವಾದ ಅಂಶಗಳನ್ನು ಒಳಗೊಂಡಿದೆ. ಈ ಕುಚ್ಚಲಕ್ಕಿಯು ಬೆಳೆಯುವ ಮಕ್ಕಳಿಗೆ ಜ್ಞಾಪಕ ಶಕಿಯನ್ನು ಹೆಚ್ಚಿಸುವಲ್ಲಿ ತುಂಬಾ ಉಪಕಾರಿಯಾಗಿದೆ. ಅಂತಹ ಪೌಷ್ಟಿಕ ಅಂಶಗಳನ್ನೊಳಗೊಂಡ ಕುಚ್ಚಲಕ್ಕಿಯಿಂದ ಮಾಡಬಹುದಾದ ಒಂದು ಅಡುಗೆ ಕುಚ್ಚಲಕ್ಕಿ ಪುಂಡಿ. ಕರಾವಳಿ ಪ್ರದೇಶದಲ್ಲಿನ ಜನರು ಹೆಚ್ಚಾಗಿ ಮಾಡುವ ತಿಂಡಿಗಳಲ್ಲಿ ಇದು ಕೂಡ ಒಂದು.
ಬೇಕಾಗುವ ಸಾಮಗ್ರಿಗಳು:
- ಕುಚ್ಚಲಕ್ಕಿ – 1 1⁄2 ಕಪ್
- ತೆಂಗಿನಕಾಯಿ – 1⁄2 ಹೋಳು (1 ತೆಂಗಿನಕಾಯಿ 1⁄4 ಭಾಗ)
- ಉಪ್ಪು – 1 1⁄4 ಚಮಚ
- ಜೀರಿಗೆ – 1⁄2 ಚಮಚ
ಕುಚ್ಚಲಕ್ಕಿ ಪುಂಡಿಗಟ್ಟಿ ಮಾಡುವ ವಿಧಾನ:
- ಹಿಂದಿನ ದಿನ ರಾತ್ರಿ ಕುಚ್ಚಲಕ್ಕಿಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆ ಹಾಕಬೇಕು.
- ಮರುದಿನ ಬೆಳಗ್ಗೆ ನೀರನ್ನು ಬಸಿದು ಅದಕ್ಕೆ ಕುದಿಯುವ ನೀರನ್ನು ಹಾಕಿ 1/2 ಅಥವಾ 3/4 ಗಂಟೆಗಳ ಕಾಲ ಮುಚ್ಚಿಡಬೇಕು.
- ನಂತರ ನೀರನ್ನು ಹಾಕದೆ ಸಣ್ಣ ಸಣ್ಣ ಸರಿಯಾಗಿ ರುಬ್ಬಬೇಕು. (ಪುಡಿ ಮಾಡಬೇಕು)
- ನಂತರ ತೆಂಗಿನಕಾಯಿಯನ್ನು ಪುಡಿ ಮಾಡಬೇಕು, ಪುಡಿ ಮಾಡಿದ ಅಕ್ಕಿ ಮತ್ತು ತೆಂಗಿನಕಾಯಿ ಹಾಗೂ ಉಪ್ಪು ಮತ್ತು ಜೀರಿಗೆ ಸೇರಿಸಿ ಮಿಶ್ರಣ ಮಾಡಿ ಮಧ್ಯಗಾತ್ರದ ಉಂಡೆಯನ್ನು ಮಾಡಿ ಹಬೆಯಲ್ಲಿ ಬೇಯಿಸಿ.
- ಚಟ್ನಿ, ಸಾಂಬಾರ್ ಅಥವಾ ತೆಂಗಿನಎಣ್ಣೆ ಮತ್ತು ಮಿಡಿ ಉಪ್ಪಿನಕಾಯಿಯೊಂದಿಗೆ ಸವಿಯಿರಿ.
ಸಲಹೆಗಳು (ಟಿಪ್ಸ್):
- ಖಾರಕ್ಕೆ 1 ರಿಂದ 2 ಹಸಿ ಮೆಣಸನ್ನು ತೆಂಗಿನಕಾಯಿಯೊಂದಿಗೆ ರುಬ್ಬುವಾಗ ಹಾಕಬಹುದು.
- ಈರುಳ್ಳಿಯನ್ನು ಹಾಕಲಿಚ್ಛಿಸುವವರು ಈರುಳ್ಳಿಯನ್ನು ಸಣ್ಣವಾಗಿ ಹೆಚ್ಚಿ ರುಬ್ಬಿದ ಮಿಶ್ರಣಕ್ಕೆ ಬೆರೆಸಿ.
ಕೃಪೆ: ರಮ