ಊರ್ಧ್ವಪುಂಡ್ರ

0Shares

ಶ್ರೀ‍ಮಧ್ವಾಚಾರ್ಯರು ತಮ್ಮ “ ಕೃಷ್ಣಾಮೃತ ಮಹಾರ್ಣವ ” ಎಂಬ ಗ್ರಂಥದಲ್ಲಿ ಊರ್ಧ್ವಪುಂಡ್ರದ ಬಗೆಗೆ ವಿವರಣೆ ನೀಡಿದ್ದಾರೆ.

ಆಡುಭಾಷೆಯಲ್ಲಿ ಪುಂಡ್ರ ಎಂದರೆ ದೇಹದ ಮೇಲಿರುವ ಒಂದು ಚಿಹ್ನೆ. ಈ ಚಿಹ್ನೆಯು ಅದನ್ನು ಧರಿಸಿರುವವರ ಸಂಪ್ರದಾಯವನ್ನು ಸೂಚಿಸುತ್ತದೆ. ಈ ಚಿಹ್ನೆ ಅಥವಾ ಪುಂಡ್ರದ ಮತ್ತೊಂದು ಮೂಲ ಉದ್ದೇಶವೆಂದರೆ ಅನೀತಿ ಹಾಗೂ ಅಧಾರ್ಮಿಕತೆಯನ್ನು ತೊಡೆದು ಹಾಕುತ್ತದೆ. ಇಂದು ಊರ್ಧ್ವಪುಂಡ್ರ ಧಾರಣೆಯ ಅಂತರಾರ್ಥ. ಊರ್ಧ್ವಪುಂಡ್ರಧಾರಣೆಯಿಂದ  “ಆಂತರ್ಯ ಪುಂಡತನ” ತೊಲಗಿ ಗಾಂಭೀರ್ಯ, ಸದಾಚಾರ, ಸನ್ನಡತೆಗಳು ನೆಲೆಯೂರುತ್ತವೆ. “ಪುಂಡಂ ರಾಹಯತಿ ಇತಿ ಪುಂಡ್ರಂ ” ಎಂಬುದು ವಿಗ್ರಹವಾಕ್ಯ. ನೇರವಾಗಿ ಧರಿಸುವ ಪುಂಡ್ರವನ್ನು ಊರ್ಧ್ವಪುಂಡ್ರವೆಂದೂ, ಅಡ್ಡಲಾಗಿ ಧರಿಸುವುದನ್ನು ತಿರ್ಯಕ್‍ಪುಂಡ್ರವೆಂತಲೂ ಕರೆಯಲಾಗುತ್ತದೆ.

ಊರ್ಧ್ವಪುಂಡ್ರ

ಗೋಪೀಚಂದನ:

ಮಾಧ್ವ ಸಂಪ್ರದಾಯದಲ್ಲಿ ಊರ್ಧ್ವಪುಂಡ್ರವನ್ನು ಗೋಪೀಚಂದನದಲ್ಲಿ ದೇಹದ ಹನ್ನೆರಡು ಕಡೆಗಳಲ್ಲಿ ಧರಿಸಲಾಗುತ್ತದೆ. ಅದರ ವಿವರಣೆ ಹೀಗಿದೆ:

  1. ಹೊಟ್ಟೆಯ ಮೇಲೆ ಮೂರು ಪುಂಡ್ರಗಳನ್ನು ಧರಿಸುವುದರಿಂದ ತ್ರಿನಾಡಿಗಳಾದ ಇಡಾ, ಪಿಂಗಳಾ, ಸುಶುಮ್ನಾ ನಾಡಿಗಳ ಕುಂಡಲಿನೀ ಶಕ್ತಿಯು ವೃದ್ಧಿ ಹೊಂದುತ್ತದೆ.
  2. ಎದೆಯ ಮೇಲೆ ಎರಡು ಸ್ತನಗಳ ಮಧ್ಯದಲ್ಲಿ ಧರಿಸುವ ಕಮಲದಳದ ಆಕಾರದ ಪುಂಡ್ರವು ಹೃದಯಕಮಲವನ್ನು ಹಿಗ್ಗಿಸುತ್ತದೆ.
  3. ಕತ್ತಿನ ಸುತ್ತಲೂ ನಾಲ್ಕು ಪುಂಡ್ರಗಳನ್ನು ಧರಿಸುವುದರಿಂದ ಅನಾಹತ ಮತ್ತು ವಿಶುದ್ಧಿ ಚಕ್ರಗಳ ಕುಂಡಲಿನೀ ಶಕ್ತಿಯು ಜಾಗೃತಗೊಂಡು ವಿಕಾಸಗೊಳ್ಳುತ್ತದೆ.
  4. ಎರಡು ಭುಜಗಳ ಮೇಲೆ ಧರಿಸುವ ಪುಂಡ್ರದಿಂದ ಕೈಗಳ ಮೂಲಕ ಹರಿಯುವ ಪ್ರಾಣಶಕ್ತಿಯನ್ನು ಉದ್ದೀಪನಗೊಳಿಸಿ ಸಕ್ರಮಗೊಳಿಸುತ್ತದೆ.
  5. ಹಣೆಯ ಮೇಲೆ ಧರಿಸುವ ಒಂದು ಪುಂಡ್ರವು ಆಜ್ಞಾಚಕ್ರದಿಂದ ಸಹಸ್ರಾರ ಚಕ್ರಕ್ಕೆ ಕುಂಡಲಿನೀ ಶಕ್ತಿಯ ಮೂಲಕ ಉದ್ದೀಪನಗೊಳಿಸುತ್ತದೆ.
  6. ಬೆನ್ನಿನ ಕೆಳಭಾಗದಲ್ಲಿ ಧರಿಸುವ ಒಂದು ಪುಂಡ್ರದಿಂದ ಮೂಲಾಧಾರದಲ್ಲಿರುವ ಕುಂಡಲಿನೀಶಕ್ತಿಯನ್ನು ಜಾಗೃತಗೊಳಿಸುತ್ತದೆ.

ಗೋಪೀಚಂದನ ಲಿಪ್ತಾಂಗೋ ಯಂ ಯಂ ಪಶ್ಯತಿ ಚಕ್ಷುಶಾ |
ತಂ ತಂ ಶುದ್ಧಂ ವಿಜಾನೀಯತಿ ನಾತ್ರ ಕಾರ್ಯಾ ವಿಚಾರಣಾ || 221 || (ಕೃ.ಮ.)

ಗೋಪೀಚಂದನವನ್ನು ಧರಿಸಿರುವವನು ತನ್ನ ಕಣ್ಣುಗಳಿಂದ ಅವಲೋಕಿಸುವ ಸಮಸ್ತ ವಸ್ತುಗಳೂ ಶುದ್ಧಗೊಳ್ಳುತ್ತವೆ. ಆತನು ನೋಡಿದ ಕೂಡಲೇ ವಸ್ತುಗಳು ಶುದ್ಧಗೊಳ್ಳುತ್ತವೆಯೆಂಬುದಕ್ಕೆ ಯಾವುದೇ ಅನುಮಾನವು ಸಲ್ಲದು. ಹೀಗಿರುವ ಗೋಪೀಚಂದನವನ್ನು ಧರಿಸಿರುವ ವ್ಯಕ್ತಿಗೆ ಲಭಿಸುವ ಪುಣ್ಯದ ಬಗ್ಗೆ ಹೇಳಬೇಕಾದ್ದೇನಿದೆ?

ಶ್ರೀಮಧ್ವಾಚಾರ್ಯರ “ಕೃಷ್ಣಾಮೃತ ಮಹಾರ್ಣವ ”ದಿಂದ ಆಯ್ದ ಕೆಲವು ಶ್ಲೋಕಗಳು ಇಂತಿವೆ:

ಅಶುಚಿರ್ಯಾ ಅಪಿ ಅನಾಚಾರೋ ಮನಸಾ ಪಾಪಂ ಆಚರೇತ್ |
ಶುಚಿರೇವ ಭವೇತ್ ನಿತ್ಯಂ ಊರ್ಧ್ವಪುಂಡ್ರಾಂಕಿತೋ ನರಃ ||217||

ಅಶುಚಿವಂತನಾದ, ಹೀನಕಾರ್ಯಗಳಲ್ಲಿ ಸದಾನಿರತನಾಗಿರುವ, ಕುತ್ಸಿತ ಮನಸ್ಸಿನವನಾಗಿದ್ದರೂ ಊರ್ಧ್ವಪುಂಡ್ರ ಧರಿಸಿದವನ ಎಲ್ಲ ಪಾಪಗಳೂ ನಿವಾರಣೆಗೊಂಡು ಆತನನ್ನು ಶುಚಿರ್ಭೂತನೆಂದು ಪರಿಗಣಿಸಬೇಕು.

ಊರ್ಧ್ವಪುಂಡ್ರ ವಿಹೀನಸ್ಯ ಸ್ಮಶಾನ ಸದೃಶಂ ಮುಖಂ |
ಅವಲೋಕ್ಯ ಮುಖಂ ತೇಷಾಂ ಆದಿತ್ಯಂ ಅವಲೋಕಯೇತ್ || 218 ||

ಊರ್ಧ್ವಪುಂಡ್ರವಿಲ್ಲದವನ ಮುಖವು ಸ್ಮಶಾನವಿದ್ದಂತೆ. ಅಂತಹವರ ಮುಖವನ್ನು ಅಕಸ್ಮಾತ್ ದರ್ಶಿಸಿದರೆ ಕೂಡಲೆ ಪ್ರಾಯಶ್ಚಿತ್ತಾರ್ಥದಲ್ಲಿ ಸೂರ್ಯನನ್ನು ಅವಲೋಕಿಸಬೇಕು.

ಯಜ್ಞೋ ದಾನಂ ತಪೋ ಹೋಮಃ ಸ್ವಾಧ್ಯಾಯಃ ಪಿತೃತರ್ಪಣಮ್ |
ವ್ಯರ್ಥಮ್ ಭವತಿ ತತ್ಸರ್ವಂ ಊರ್ಧ್ವಪುಂಡ್ರಂ ವಿನಾ ಕೃತಮ್ || 219 ||

ಯಜ್ಞ, ದಾನ, ತಪಸ್ಸು, ಹೋಮ, ಸ್ವಾಧ್ಯಾಯನ ಅಥವಾ ಪಿತೃತರ್ಪಣ ನೀಡುವ ಯಾವುದೇ ಧಾರ್ಮಿಕ ಕ್ರಿಯೆಗಳು ಊರ್ಧ್ವಪುಂಡ್ರವಿಲ್ಲದಿದ್ದರೆ ವ್ಯರ್ಥ ಅಥವಾ ಅರ್ಥಹೀನವಾಗುತ್ತವೆ.

ಗೋಪೀಚಂದನವೆಂದರೇನು?

ಲಭ್ಯವಿರುವ ಮಾಹಿತಿಯಂತೆ ಇಂದಿನ ಗುಜರಾತ್ ರಾಜ್ಯದಲ್ಲಿರುವ ದ್ವಾರಕಾ ನಗರದಲ್ಲಿರುವ ಗೋಪಿಕುಂಜ್ ಎಂಬ ಕೊಳದಲ್ಲಿ ಕೆಲವು ಗೋಪಿಕಾ ಸ್ತ್ರೀಯರು ಮುಳುಗಿದರು. ‘ಕುಂಜ್’ ಎಂದರೆ ಕೊಳ ಎಂದರ್ಥ. ಈ ಕೊಳದ ತಳದಲ್ಲಿರುವ ಮಣ್ಣು ಗೋಪೀ ಚಂದನದ ಮೂಲವೆಂದು ಹೇಳಲಾಗುವುದು. ಮಹಾಭಾರತ ಯುದ್ಧದಲ್ಲಿ ಕೌರವರ ವಿನಾಶವಾದನಂತರ, ಪಾಂಡವರ ವಿಜಯಕ್ಕೆ ತಾನೇ ರೂವಾರಿಯೆಂದು ಅರ್ಜುನನು ಬೀಗುತ್ತಿದ್ದನು. ಇದು ಕೃಷ್ಣನ ಗಮನಕ್ಕೆ ಬಂದಿತು.

ಅರ್ಜುನನಿಗೆ ಜ್ಞಾನವುಂಟುಮಾಡಲೆಂದು ಶ್ರೀಕೃಷ್ಣನು ತನ್ನ ಶಿಷ್ಯನಿಗೆ ಗೋಪಿಕಾಸ್ತ್ರೀಯರನ್ನು ವನವಿಹಾರಕ್ಕೆ ಕರೆದುಕೊಂಡು ಹೋಗಲು ಹೇಳಿದನು. ವನವಿಹಾರದ ಸಮಯದಲ್ಲಿ ಅರಣ್ಯವಾಸಿ ನಿಷಾದರು ಗೋಪಿಕಾ ಸ್ತ್ರೀಯರನ್ನು ಅವಹೇಳನ ಮಾಡಿದಾಗ ಅರ್ಜುನನು ಅವರನ್ನು ಹೊಡೆದೋಡಿಸಲು ಪ್ರಯತ್ನಿಸಿದನು. ಆದರೆ, ನಿಷಾದರೆದುರು ಅರ್ಜುನನ ಶೌರ್ಯ ಕೆಲಸಕ್ಕೆ ಬರಲಿಲ್ಲ. ನಿಷಾದರ ಕಿರುಕುಳದಿಂದ ತಪ್ಪಿಸಿಕೊಳ್ಳಲು ಸಮೀಪದಲ್ಲಿದ್ದ ಕೊಳವೊಂದರಲ್ಲಿ ಗೋಪಿಕಾಸ್ತ್ರೀಯರು ಹಾರಿಕೊಳ್ಳುತ್ತಾರೆ. ಈ ಕೊಳದ ತಳದಲ್ಲಿ ಹಾಗೂ ಸುತ್ತಮುತ್ತಲಿನ ಮಣ್ಣು ಗೋಪಚಂದನವೆಂದು ಪರಿಗಣಿಸಲ್ಪಟ್ಟಿದೆ.

ಗೋಪೀಚಂದನದ ಮಹತ್ವ ಮತ್ತು ಪಾವಿತ್ರ್ಯತೆಯನ್ನು ಗರುಡಪುರಾಣ, ಪದ್ಮಪುರಾಣ, ವಾಸುದೇವ ಉಪನಿಷತ್ ಮತ್ತು ಶ್ರೀಮಧ್ವಾಚಾರ್ಯರ “ಕೃಷ್ಣಾಮೃತ ಮಹಾರ್ಣವ ” ಮುಂತಾದ ಅನೇಕ ಶಾಸ್ತ್ರಗಳಲ್ಲಿ ವಿವರಿಸಲಾಗಿದೆ.

ಗುಜರಾತ್ ರಾಜ್ಯದಲ್ಲಿರುವ ದ್ವಾರಕಾನಗರದಲ್ಲಿ ದೊರೆಯುವ ಒಂದು ವಿಶಿಷ್ಟ ಮಣ್ಣನ್ನು ಗೋಪೀಚಂದನವೆಂದು ಪರಿಗಣಿಸಲಾಗುತ್ತದೆ. ಬ್ರಹ್ಮಾಂಡ ಪುರಾಣವು ಉಲ್ಲೇಖಿಸಿರುವಂತೆ ಗೋಪೀಚಂದನವು ದ್ವಾರಕಾ ಮೂಲದ ಮಣ್ಣಾಗಿರಬೇಕೆಂಬ ಯಾವುದೇ ನಿಯಮವಿಲ್ಲ. ಶುದ್ಧಗೊಳಿಸಿದ ಯಾವುದೇ ಮಣ್ಣು ಅಥವಾ ಪರಮಾತ್ಮನಿಗೆ ಅರ್ಪಿಸಲಾದ ಚಂದನವನ್ನು ಪುಂಡ್ರಕ್ಕೆಂದು ಬಳಸಬಹುದು. ಆದರೆ ಊರ್ಧ್ವಪುಂಡ್ರ ಧಾರಣೆ ಅನಿವಾರ್ಯ ಮತ್ತು ಅತ್ಯಾವಶ್ಯಕ.

ಬ್ರಹ್ಮಾಂಡಪುರಾಣವು ಗೋಪೀಚಂದನದ ಬಗ್ಗೆ ಹೆಚ್ಚಿನ ವಿವರಣೆ ನೀಡುತ್ತದೆ. ದ್ವಾರಕೆಯಲ್ಲಿ ದೊರೆಯುವ ಶ್ರೀ‍ಕೃಷ್ಣ, ಗೋಪಿಕಾಸ್ತ್ರೀಯರ ಪಾದಧೂಳಿಯಲ್ಲದೆ, ಪರ್ವತಶಿಖರಾಗ್ರ ಭಾಗದಲ್ಲಿ ದೊರೆಯುವ, ನದೀತೀರಗಳಲ್ಲಿ ದೊರೆಯುವ, ಮಾಧ್ವ ಯಾತ್ರಾಸ್ಥಳಗಳಿಂದ ತರಲಾದ, ಸಮುದ್ರತೀರದ, ಹುತ್ತದ ಅಥವಾ ಸರ್ಪಗಳ ಗೂಡಿನಿಂದ ತರುವ, ತುಳಸಿ ಸಸ್ಯದ ಬುಡದಿಂದ ತೆಗೆಯುವ ಮಣ್ಣುಗಳನ್ನೂ ಊರ್ಧ್ವಪುಂಡ್ರಕ್ಕೆ ಬಳಸಬಹುದಾಗಿದೆ.

ಕೆಲವು ಸಂದರ್ಭಗಳಲ್ಲಿ ಗೋಪೀಚಂದನವನ್ನು ಧರಿಸುವಂತಿಲ್ಲ. ಗೋಪೀಚಂದನವನ್ನು ದೈಹಿಕ ಪರಿಮಳ ಅಥವಾ ಸುಗಂಧದ್ರವ್ಯ ಸಾಧನವಾಗಿ ಸರ್ವಥಾ ಬಳಸುವಂತಿಲ್ಲ. ಯಾವುದೇ ಹುಟ್ಟು ಅಥವಾ ಸಾವಿನ ಹತ್ತುದಿನಗಳಲ್ಲಿ ಮೈಲಿಗೆ ಇರುವುದರಿಂದ ಗೋಪೀಚಂದನವನ್ನು ಬಳಸಬಾರದು. ಆದರೆ, ದೇವರಿಗೆ ಸಮರ್ಪಿಸಿದ ಗಂಧವನ್ನು ಬಳಸಬಹುದು.

ಗರ್ಗಸಂಹಿತೆಯು ಗೋಪೀಚಂದನಧಾರಣವನ್ನು ಗಂಗಾಸ್ನಾನಕ್ಕೆ ಸಮವೆಂದು ನಿರ್ದೇಶಿಸುತ್ತದೆ. ದಿನನಿತ್ಯದಲ್ಲಿ ಗೋಪೀಚಂದನವನ್ನು ಧರಿಸುವುದು ಜಗತ್ತಿನ ಎಲ್ಲ ಪವಿತ್ರ ನದೀದಡಗಳಲ್ಲಿ ಸ್ನಾನ ಮಾಡಿದಷ್ಟು ಪುಣ್ಯಕರ. ಗೋಪೀಚಂದನಧಾರಣೆಯು ಸಹಸ್ರ ಅಶ್ವಮೇಧಯಾಗ ಮತ್ತು ನೂರು ರಾಜಸೂಯ ಯಾಗಗಳನ್ನು ಮಾಡಿದ ಪುಣ್ಯಕ್ಕೆ ಸಮ. ಗೋಪೀಚಂದನವು ಗಂಗೆಯ ಒಡಲಿನಲ್ಲಿರುವ ಮಣ್ಣಿಗಿಂತ ಎರಡರಷ್ಟು ಮತ್ತು ಪಂಚವಟೀ ತೀರ್ಥದ ಮಣ್ಣಿಗಿಂತಲೂ ಹತ್ತರಷ್ಟು ಹೆಚ್ಚು ಪುಣ್ಯಕರವೆಂದು ಗರ್ಗಸಂಹಿತೆಯಲ್ಲಿ ಹೇಳಲಾಗಿದೆ. ದಿನಕ್ಕೆರಡು ಬಾರಿ ಗೋಪೀಚಂದನವನ್ನು ಶಾಸ್ತ್ರರೀತಿಯಲ್ಲಿ ಲೇಪಿಸಿಕೊಂಡರೆ ಗೋಕುಲಕ್ಕೆ ಪ್ರವೇಶ ದೊರೆಯುತ್ತದೆ. ಅಷ್ಟೇ ಅಲ್ಲದೆ, ಈ ರೀತಿಯಲ್ಲಿ ಗೋಪೀಚಂದನವನ್ನು ಲೇಪಿಸಿಕೊಳ್ಳುವವರೆಡೆಗೆ ಯಮಧರ್ಮನೂ ಸುಳಿಯಲಾರ. ಗೋಪೀಚಂದನಧಾರಣೆಯಿಂದ ಸಕಲಪಾಪಗಳೂ ನಾಶಹೊಂದುತ್ತವೆ ಎಂದು ಗರ್ಗರು ನುಡಿದಿದ್ದಾರೆ.

0Shares

Leave a Reply

error: Content is protected !!