ರಾಮೇಶ್ವರಂನಿಂದ 13 ಕಿಮೀ ದೂರದಲ್ಲಿದೆ ಈ ವಿಭೀಷಣನ ದೇಗುಲ. ಸುತ್ತಲೂ ಬಂಗಾಳಕೊಲ್ಲಿಯಿಂದ ಆವೃತವಾಗಿರುವ ಈ ದೇಗುಲ ಕಡಲಿನಲ್ಲಿ ತೇಲುತ್ತಿರುವಂತೆ ಭಾಸವಾಗುತ್ತದೆ. ರಾಮೇಶ್ವರಂ ಹಾಗೂ ಧನುಷ್ಕೋಡಿ ದಾರಿಯಲ್ಲಿ ಮುಖ್ಯ ರಸ್ತೆಯಿಂದ ಸುಮಾರು 1 ಕಿಮೀ ಎಡಕ್ಕೆ ಚಲಿಸಿದರೆ ಈ ದೇಗುಲ ಸಿಗುತ್ತದೆ. ಇಲ್ಲಿಂದ ಶ್ರೀಲಂಕಾ ಹೋಗಲು ದಾರಿ ಇದೆ ಎಂದು ಹೇಳಲಾಗುತ್ತದೆ. ಹಾಗೂ ರಾಮ ಸೇತು ಇಲ್ಲಿಂದಲೇ ಪ್ರಾರಂಭವಾಯಿತು ಎಂದೂ ಹೇಳಲಾಗುತ್ತದೆ. ಈ ದೇವಾಲಯದ ವಾಸ್ತುಶಿಲ್ಪ ವಿಶಿಷ್ಟವಾಗಿದೆ. ಸುಮಾರು ಸಾವಿರ ವರ್ಷಗಳಷ್ಟು ಹಳೆಯದಾದ ಈ ದೇವಸ್ಥಾನ 1964 ರ ಸುನಾಮಿಯನ್ನು ತಡೆದುಕೊಂಡು ಸ್ವಲ್ಪ ಮಟ್ಟಿನ ಹಾನಿಗೊಳಗಾಗಿ ಅಚಲವಾಗಿ ನಿಂತಿದೆ. 1978ರಲ್ಲಿ ರಾಮೇಶ್ವರಂ ರಾಮೇಶ್ವರ ದೇಗುಲದ ಕಮಿಟಿಯವರು ವಿಶಿಷ್ಟ ಶೈಲಿಯಲ್ಲಿ ನಿರ್ಮಿಸಿ ಕುಂಭಾಭಿಷೇಕ ನಡೆಸಿದರು.
ಇಲ್ಲಿನ ಮೂಲ ದೇವರು ರಾಮನಾಗಿದ್ದು ತನ್ನ ಬಿಲ್ಲು ಕೋದಡಂ ನ ಸಮೇತ ನೆಲೆಗೊಂಡಿರುವುದರಿಂದ ಈ ದೇಗುಲವನ್ನು ಕೋದಂಡರಾಮ ಆಲಯವೆಂದೂ , ರಾಮ ,ಲಕ್ಷಣ, ಸೀತೆಯರನ್ನು ಸೇವಿಸಲು ಆಂಜನೇಯನ ಜೊತೆಗೆ ವಿಭೀಷಣನು ಇಲ್ಲಿ ಇರುವದರಿಂದ ವಿಭೀಷಣನ ದೇಗುಲವೆಂದೂ ಕರೆಯುತ್ತಾರೆ ಇವರುಗಳಿಗೆಲ್ಲಾ ನಿತ್ಯಪೂಜೆಗಳು ಸಾಂಗೋಪಾಂಗವಾಗಿ ನೆರವೇರಿಸುತ್ತಾರೆ. ಈ ದೇಗಲದ ಬಗೆಗೆ ಇರುವ ಪೌರಾಣಿಕ ಕಥೆಯಿದೆ, ವಿಭೀಷಣನು ಇಲ್ಲಿಯೇ ರಾಮನ ಸೈನ್ಯವನ್ನು ಸೇರುತ್ತಾನೆ, ಹಾಗೂ ರಾಮ ರಾವಣರ ಯುದ್ಧ ಮುಗಿದ ನಂತರ ಇದೇ ಸ್ಥಳದಲ್ಲಿ ವಿಭೀಷಣನಿಗೆ ರಾಮನು ಪಟ್ಟಾಭಿಷೇಕ ನೆರವೇರಿಸುತ್ತಾನೆ.
ಅದರ ದ್ಯೋತಕವಾಗಿ ಈ ದೇಗುಲ ನಿರ್ಮಿಸಲಾಗಿದೆ. ಇದರ ಬಳಿ ಬಹಳ ಹಳೆಯದಾದ ಅತ್ತಿಮರ ಎಲ್ಲರ ಗಮನ ಸೆಳೆಯುತ್ತದೆ ಇಲ್ಲಿ ಭೃಂಗಿ ತೀರ್ಥವೂ ಇದೆ. ದೇಗುಲದ ಪಕ್ಕದಲ್ಲೇ ನಂದನವನಂ ಎಂಬ ಸ್ಥಳವಿದ್ದು ರಾಮಾಯಣದ ಕಾಲದಲ್ಲಿ ಇಲ್ಲಿನ ಭೃಂಗಿ ಆಶ್ರಮದಲ್ಲಿ ರಾಮರು ಕೆಲಕಾಲ ತಂಗಿದ್ದರೆಂದು ಹೇಳಲಾಗುತ್ತದೆ. ದೇಗುಲದ ಒಳಗೆ ಗೋಡೆಗಳ ಮೇಲೆ ರಾಯಣದ ಕಥೆಯನ್ನು ಚಿತ್ರಿಸುವ ಅಧ್ಭುತ ವರ್ಣ ಚಿತ್ರಗಳು ಇವೆ. ರಾವಣನು ಸೀತೆಯನ್ನು ಅಪಹರಿಸಿದ ನಂತರ ವಿಭೀಷಣನು ತನ್ನಣ್ಣ ರಾವಣನಿಗೆ ಪರಸ್ತ್ರೀಯನ್ನು ಅಪಹರಿಸಿ ಈ ರೀತಿ ಹಿಂಸಿಸುವುದು ಸರಿಯಲ್ಲ ಎಂದು ಅಣ್ಣನಿಗೆ ಬುದ್ದಿ ಹೇಳುತ್ತಾನೆ. ಇದರಿಂದ ಕೋಪಗೊಂಡ ರಾವಣನು ವಿಭೀಷಣನನ್ನು ಕಾಲಿನಿಂದ ಒದೆಯುತ್ತಾನೆ ಈ ಸನ್ನಿವೇಶದ ಚಿತ್ರವನ್ನು ಇಲ್ಲಿ ಪ್ರದರ್ಶಿಸಲಾಗಿದೆ.
ಇಲ್ಲಿ ಗರುಡ ಹಾಗೂ ರಾಮಾನುಜಾಚಾರ್ಯರಿಗೂ ಸಣ್ಣ ಸಣ್ಣ ಗುಡಿಳಿವೆ. ವಿವೇಕಾನಂದರು ಅಮೆರಿಕದ ಸರ್ವಧರ್ಮ ಸಮ್ಮೇಳನ ಮುಗಿಸಿ ವಾಪಸ್ ಭಾರತಕ್ಕೆ ಬಂದಾಗ ಹಡಗಿನಲ್ಲಿ ಬಂದ ಅವರು ಇಲ್ಲಿಗೆ ಭೇಟಿ ನೀಡಿ ದೇಗುಲ ದರ್ಶನ ಪಡೆದಿದ್ದರಂತೆ. ಕಡಲ ನಡುವಿನ ಪುಟ್ಟ ದ್ವೀಪದಲ್ಲಿನ ದೇಗುಲ ಮನ ಸೆಳೆಯುತ್ತದೆ ರಾಮೇಶ್ವರಂಗೆ ಹೋದಾಗೊಮ್ಮೆ ಭೇಟಿ ನೀಡಿ.