ವಾಮನ ಜಯಂತಿ ಆಚರಣೆ ದಿನ : ಮಂಗಳವಾರ, 26 ಸೆಪ್ಟೆಂಬರ್ 2023
ಭಾದ್ರಪದ ಮಾಸದ ಶುಕ್ಲ ಪಕ್ಷದ ಶುದ್ಧ ದ್ವಾದಶಿ ತಿಥಿಯಂದು ವಾಮನ ಜಯಂತಿ ಆಚರಿಸಲಾಗುತ್ತದೆ. ಪರಮಾತ್ಮನ ದಶಾವತಾರಗಳಲ್ಲಿ ಅತ್ಯಂತ ವಿಶಿಷ್ಟವಾದ ಅವತಾರ ಅದುವೇ ವಾಮನ ಅವತಾರ. ಒಂದೇ ಅವತಾರದಲ್ಲಿ ಎರಡು ರೂಪ ತೋರಿಸಿದ ಅವತಾರ ಅದುವೇ ವಾಮನಾವತಾರ. ಈ ವಾಮನ ಅವತಾರ ಎರಡನೇ ಮಹಾಯುಗ ಅಥವಾ ತ್ರೇತಾಯುಗದ ಪೂರ್ವಭಾಗದಲ್ಲಿ ಆದ ಅವತಾರ ಎಂದು ಪುರಾಣಗಳಲ್ಲಿ ನೋಡಬಹುದು.
ಪರಮಾತ್ಮನ ಅನಂತ ಅವತಾರಗಳಲ್ಲಿ ದಶಾವತಾರಗಳು ಪ್ರಮುಖ ಅದರಲ್ಲೂ ಮತ್ಸ್ಯ, ಕೂರ್ಮ, ವರಾಹ, ನರಸಿಂಹ ನಂತರದ ಮಾನವ ರೂಪದ ಪೂರ್ಣಾವತಾರ ವಾಮನಾವತಾರ. ಪರಮಾತ್ಮ ಬಾಲ ವಟುವಾಗಿ ಬಂದು ಮೂರಡಿ ಪಾದದಷ್ಟು ಭೂಮಿ ಬೇಡಿ ಕಡೆಗೆ ಮೂರುಲೋಕವನ್ನೇ ಅಳೆದು ಕಡೆಗೆ ತನ್ನ ದಿವ್ಯವಾದ ಲೀಲೆಯನ್ನೇ ತೋರಿದ ಅವತಾರ ವಾಮಾನವಾತಾರ.
|| ಅಜಿನ ದಂಡ ಕಮಂಡಲ ಮೇಖಲ, ರುಚಿರ ಪಾವನ ವಾಮನ ಮೂರ್ತಯೇ|
ಮಿತ ಜಗತ್ರಿತಯಾಯ ಜಿತಾರಯೇ , ನಿಗಮ ವಾಕ್ಪಟವೇ ವಟವೇ ನಮಃ||
ವಾಮನವತಾರದ ಹಿನ್ನೆಲೆ:
ಶ್ರೀ ಮದ್ಭಾಗವತ ಮತ್ತು ವಾಮನ ಪುರಾಣದಲ್ಲಿ ಆಧಾರವಾಗಿ ನಾವು ತಿಳಿಯುವಂತೆ ಬಲಿ ರಾಜನು ಅದ್ಭುತವಾದ ಏಕಾಗ್ರತೆ, ಗುರು ಭಕ್ತಿ ಹಾಗೂ ಗುರುಗಳು ಹೇಳಿದಂತೆ ನಡೆದುಕೊಳ್ಳುತ್ತಿದ್ದನು. ಗುರುವಿನ ಮೇಲೆ ಇರುವ ಶ್ರದ್ಧಾ ಭಕ್ತಿಯನ್ನು ಮೆಚ್ಚಿದ ಶುಕ್ರಾಚಾರ್ಯರು ಬಲಿ ರಾಜನಿಗೆ ಸದಾಕಾಲ ಹೂ ಬಿಡುವಂತಹ ಹಾರ ಹಾಗೂ ಶಂಖವನ್ನು ಉಡುಗೊರೆಯನ್ನಾಗಿ ನೀಡಿದರು. ಶುಕ್ರಾಚಾರ್ಯರ ಆಶೀರ್ವಾದದಿಂದ ಅದ್ಭುತ ಶಕ್ತಿಯನ್ನು ಪಡೆದುಕೊಂಡನು. ಈ ಹಿಂದೆ ಸಮುದ್ರ ಮಂಥನದಲ್ಲಿ ಅಮೃತವನ್ನು ಪಡೆದ ದೇವತೆಗಳು, ಅಮೃತವನ್ನು ಕುಡಿದು ಅಮರರಾಗಿದ್ದರು. ನಂತರ ಅಮರರಾದ ದೇವತೆಗಳು ಅಸುರರ ರಾಜನಾದ ವಿರೋಚನ ಸೈನ್ಯದ ಮೇಲೆ ದಾಳಿ ಮಾಡಿದರು. ನಂತರ ಇಂದ್ರ ದೇವನು ವಿರೋಚನನ್ನು ಕೊಂದಿದ್ದನು. ಅದನ್ನು ನೆನಪಿನಲ್ಲಿ ಇಟ್ಟುಕೊಂಡ ಬಲಿ ರಾಜನು ದೇವತೆಗಳ ವಿರುದ್ಧ ಹೋರಾಡಿದನು. ಆಗ ದೇವತೆಗಳನ್ನು ಬಲಿ ರಾಜನು ಸುಲಭವಾಗಿ ಸೋಲಿಸಿ, ಸ್ವರ್ಗವನ್ನು ಗೆದ್ದುಕೊಂಡನು. ಇಂದ್ರನು ಆಚಾರ್ಯ ಬಹಸ್ಪತಿಯ ಸಹಾಯದಿಂದ ಯುದ್ಧಭೂಮಿಯನ್ನು ಬಿಟ್ಟು ಓಡಿಹೋದನು. ಶುಕ್ರಾಚಾರ್ಯರು ಬಲಿ ರಾಜನಿಗೆ ಅಶ್ವಮೇಧ ಯಜ್ಞಮಾಡಲು ಆದೇಶಿಸಿದ್ದರು. ಆ ಯಾಗ ಮಾಡುವಾಗ ಬ್ರಾಹ್ಮಣರಿಗೆ ನಿಯಮಿತವಾಗಿ ದೇಣಿಗೆ ನೀಡಬೇಕು, ಎಂದಿಗೂ ಅವರನ್ನು ಬರಿಗೈಯಲ್ಲಿ ಕಳುಹಿಸಬಾರದು ಎಂದು ಹೇಳಿದ್ದರು. ಹಾಗೊಮ್ಮೆ ಬರಿಗೈಯಲ್ಲಿ ಕಳುಹಿಸಿದರೆ ಹಿಂದೆ ಪಡೆದ ಶಕ್ತಿಗಳೆಲ್ಲವೂ ನಾಶವಾಗುವುದು ಎಂದು ಹೇಳಿದ್ದರು.
ಬಲಿ ರಾಜನ ಉದಾರ ಬುದ್ಧಿ, ಗುರು ಭಕ್ತಿ ಹಾಗೂ ದಾನಗುಣದಿಂದಾಗಿ ಪ್ರಪಂಚದಾದ್ಯಂತ ಪ್ರಶಂಸೆ ಹಾಗೂ ಜನಪ್ರಿಯತೆಯನ್ನು ಪಡೆದುಕೊಂಡಿದ್ದನು. ಮಹಾನ್ ಶಕ್ತಿ ಹಾಗೂ ಆಶೀರ್ವಾದವನ್ನು ಪಡೆದ ಬಲಿಯನ್ನು ಸೋಲಿಸಲು ಸಾಧ್ಯವಿಲ್ಲ ಎನ್ನುವುದು ವಿಷ್ಣು ದೇವರು ಸಹ ತಿಳಿದಿದ್ದರು. ಬಲಿ ರಾಜನು ಯಾವುದೇ ಅನ್ಯಾಯದ ತಪ್ಪುಗಳನ್ನು ಮಾಡಿರಲಿಲ್ಲ. ದೇವರ ವಿರುದ್ಧ ಹೋರಾಡಿದಾಗಲೂ ತಮ್ಮ ನ್ಯಾಯಯುತ ಪಾಲನ್ನು ಮಾತ್ರ ಪಡೆದುಕೊಂಡಿದ್ದನು. ಬಲಿಯು ಬ್ರಾಹ್ಮಣರು ಏನೇ ಕೇಳಿದರೂ ತಿರಸ್ಕರಿಸದೆ ದಾನ ಮಾಡುತ್ತಾನೆ ಎನ್ನುವುದು ವಿಷ್ಣು ದೇವರಿಗೆ ತಿಳಿದಿತ್ತು. ಇದು ಬಲಿರಾಜನ 99 ನೇ ಯಜ್ಞ ಮತ್ತು 100 ಯಜ್ಞಗಳು ಪೂರೈಸಿದರೆ ಪುರಂದರ (ಈಗಿನ ಇಂದ್ರನ) ಸ್ಥಾನ ಬಲಿಗೆ ಕೊಡಬೇಕಾಗಿತ್ತು.
ವಾಮನವಾತಾರ:
ಇತ್ತ ನರ್ಮದಾ ನದಿ ತೀರದಲ್ಲಿ ಅದಿತಿ ಮತ್ತು ಕಶ್ಯಪರು ತಾವು ಪರಮಾತ್ಮನಲ್ಲಿ ತಪಸ್ಸನ್ನು ಆಚರಿಸಿ ಪರಮಾತ್ಮನನ್ನ ಹೋಲುವ ಅಂದರೆ ಸಾಕ್ಷಾತ್ ಪರಮಾತ್ಮನನ್ನೇ ಪುತ್ರನನ್ನಾಗಿ ಪಡೆಯುವ ವರವನ್ನು ಕೇಳಿದರು. ಇವರಿಗೆ ಸಾಕ್ಷಾತ್ ಪರಮಾತ್ಮ ಮೂಲರೂಪದಿಂದ ಬಂದು ಇವರ ಮುಂದೆ 5 ವರ್ಷದ ಹುಡುಗನಾಗಿ ನಿಂತನು, ಸ್ವತಹ ತಾವೇ ನನಗೆ ಉಪನಯನ ಮಾಡಿಯೆಂದು ಕೇಳಿದನು. ಅದಿತಿ ಕಶ್ಯಪರು ಸಂತಸದಿಂದ ಉಪನಯನ ಮಾಡಿದರು. ಆ ಸಮಯದಲ್ಲಿ ಬೃಹಸ್ಪತ್ಯಚಾರ್ಯರು ಉಪವೀತ (ಜನಿವಾರ) ವನ್ನು ತಂದು ಕೊಟ್ಟರು ಹಾಗೆ ಬ್ರಹ್ಮ ದೇವರು ತಾಳೆಯ ಗರಿಯ ಛತ್ರಿಯನ್ನು ಕೊಟ್ಟರು. ರುದ್ರಾದಿಗಳು ಕಮಂಡಲವನ್ನು ಕೊಟ್ಟರು. ಇಂದ್ರಾದಿ ದೇವತೆಗಳು ಪಾದುಕೆಗಳನ್ನು ಕೊಟ್ಟರು, ಇವೆಲ್ಲವನ್ನೂ ಧರಿಸಿದ ಪರಮಾತ್ಮ ಸಾಕ್ಷಾತ್ ಮನ್ಮಥನಿಗೂ ಮನ್ಮಥನಂತೆ ಕಂಗೊಳಿಸಿದನು.
ವಾಮಂ ಕಲ್ಯಾಣಂ ನಯತಿ ಭಕ್ತಾನಿತಿ ವಾಮನ: |
ವಾಮನ ಎಂದರೆ ಸುಂದರ, ಕಲ್ಯಾಣ
ವಾಮ: ಅಭೀಷ್ಟಂ ಜಾತಂ ನಯತಿ ಇತಿ ವಾಮನ:
ವಾಮ ಎಂದರೆ ಇಷ್ಟಾರ್ಥ ಅದನ್ನು ತಂದು ಕೊಡುವವನು ವಾಮನ
ಹೀಗೆ ವಟು ರೂಪದಿಂದ ವಾಮನದೇವರು ಬಲಿರಾಜ ಮಾಡುತಿದ್ದ ಯಜ್ಞಕ್ಕೆ ಹೋದನು. ಆಗ ಬಲಿರಾಜನು ಅವನನ್ನು ಸ್ವಾಗತಿಸಿದನು. ತನಗಾಗಿ ಒಂದು ಸಹಾಯ ಮಾಡಬೇಕು ಎಂದು ಬಲಿರಾಜನಲ್ಲಿ ವಾಮನನು ಕೇಳಿದನು. ಬ್ರಾಹ್ಮಣನ ಮಾತನ್ನು ಮೀರದ ಬಲಿರಾಜ ಏನು ಬೇಕೆಂದು ಕೇಳಿದನು. ಆಗ ವಾಮನನು ತನ್ನ ಮೂರು ಅಡಿಯಷ್ಟು ಜಾಗವನ್ನು ದಾನ ಮಾಡಬೇಕು ಎಂದು ಕೇಳಿದನು. ಅದನ್ನು ಕೇಳಿದ ಬಲಿ ರಾಜನು ಅತ್ಯಂತ ಸಂತೋಷದಿಂದ ದಾನ ಮಾಡುವುದಾಗಿ ಒಪ್ಪಿಕೊಂಡನು.
ವಾಮನನಿಗೆ ನಿನಗೆ ಬೇಕಾದ ಮೂರು ಅಡಿಯನ್ನು ತೆಗೆದುಕೊಳ್ಳಲು ಅನುಮತಿ ನೀಡುತ್ತಿದ್ದಂತೆ, ವಾಮನನು ಆಕಾಶದ ಎತ್ತರಕ್ಕೆ ಬೆಳೆದನು. ಒಂದು ಹೆಜ್ಜೆಯನ್ನು ಭೂಮಿಯ ಮೇಲೆ ಇಟ್ಟನು. ನಂತರ ಇನ್ನೊಂದು ಹೆಜ್ಜೆಯನ್ನು ದೇವಲೋಕದಲ್ಲಿ ಇಡಲು ಹೇಳಿದನು. ಮೂರನೇ ಹೆಜ್ಜೆಯನ್ನು ಎಲ್ಲಿ ಇಡಬೇಕು ಎಂದು ವಾಮನ ಕೇಳಿದನು. ಆಗ ಬಲಿ ರಾಜನು ಶುಕ್ರಾಚಾರ್ಯರು ಹೇಳಿದ ಮಾತುಗಳನ್ನು ನೆನೆಸಿಕೊಂಡನು. ನಂತರ ವಾಮನನ ಮುಂದೆ ಕುಳಿತು ಕೈಗಳನ್ನು ಮುಗಿದು ತನ್ನ ತಲೆಯ ಮೇಲೆ ಇನ್ನೊಂದು ಹೆಜ್ಜೆ ಇಡುವಂತೆ ಹೇಳಿದನು. ಆಗ ವಾಮನನು ಬಲಿರಾಜನ ತಲೆಯ ಮೇಲೆ ಕಾಲನ್ನು ಇಡುತ್ತಿದ್ದಂತೆಯೇ ಪಾತಾಳಕ್ಕೆ ಹೋದನು. ಹೀಗೆ ವಾಮನ ತ್ರಿವಿಕ್ರಮನಾದನು. ಬಲಿ ರಾಜನ ಶ್ರದ್ಧೆ ಹಾಗೂ ಭಕ್ತಿಯನ್ನು ಮೆಚ್ಚಿದ ವಿಷ್ಣು ದೇವರು ಬಲಿ ರಾಜನು ಪಾತಾಳ ಲೋಕದ ಆಡಳಿತ ಮಾಡಲು ಆಶೀರ್ವದಿಸಿದನು. ನಂತರ ದೇವತೆಗಳಿಗೆ ಸ್ವರ್ಗದ ಆಡಳಿತ ಮಾಡಲು ಹೇಳಿದನು. ವಾಮನ ಅವತಾರವನ್ನು ಉಪೇಂದ್ರ ಹಾಗೂ ತ್ರಿವಿಕ್ರಮ ಎಂದು ಸಹ ಕರೆಯಲಾಗುತ್ತದೆ. ಭೂಮಿ, ಪಾತಾಳ ಹಾಗೂ ಸ್ವರ್ಗ ಲೋಕವನ್ನು ಆಳುವವನು ಎಂದು ಹೇಳಲಾಗುವುದು. ಹೀಗೆ ವಾಮನದೇವರ ಮಹಿಮೆ ಅತ್ಯಂತ ಶುಭಕರ ಮತ್ತು ಮಂಗಳಮಯವಾದದ್ದು.
ಪುರಾಣಗಳು ಮತ್ತು ನಮಗೆ ಉಪಲಬ್ಧವಿರುವ ಗ್ರಂಥಗಳಲ್ಲಿ ವಾಮನ ದೇವರ ಚಿಂತನೆ
ದಧಿಮಧ್ಯೇ ವಾಮನಂ ತು ಘೃತೇ ಕೃಷ್ಣಂ ತು ಸಂಸ್ಮರೇತ್ |
ವಾರಾಹಂ ಮೃತ್ತಿಕಾಸ್ನಾನೇ ಹ್ಯುಪೇಂದ್ರಂ ವಸ್ತ್ರಧಾರಣೇ |
ದದಿವಾಮನ ಎಂದೇ ಪ್ರಸಿದ್ಧನಾದ ವಾಮನ ದೇವರಿಗೆ ಪ್ರಿಯವಾದ ವಸ್ತು ಎಂದರೇ ಮೊಸರು, ಮೊಸರಿನಿಂದ ಮಾಡಿದ ರಸಗಳು ಮತ್ತು ಭಕ್ಷಗಳು ಪ್ರಿಯವಾದದ್ದು. ಹೇಗೆ ಕೃಷ್ಣನಿಗೆ ನವನೀತ, ವರಾಹ ದೇವರಿಗೆ ಮೃತ್ತಿಕಸ್ನಾನ ಮತ್ತು ಉಪೇಂದ್ರ ನಾಮಕ ವಿಷ್ಣು ಅಥವಾ ನಾರಾಯಣನಿಗೆ ವಸ್ತ್ರಾಲಂಕಾರ ಹೇಗೆ ಪ್ರಿಯವೋ ಹಾಗೆ ವಾಮನನಿಗೆ ಮೊಸರು ತುಂಬಾ ಇಷ್ಟ. ಮೊಸರನ್ನು ಕಡೆಯುವಾಗ ವಾಮನನ ಸ್ಮರಣೆ ಅವಶ್ಯ ಮಾಡಲೇಬೇಕು.
ಸುಮಧ್ವವಿಜಯದಲ್ಲಿ ವಾಮನದೇವರ ಚಿಂತನೆಯನ್ನು ಶ್ರೀನಾರಾಯಣ ಪಂಡಿತಾಚಾರ್ಯರು ಹೀಗೆ ಹೇಳುತ್ತಾರೆ.
ಅಪಿ ವಾಮನೋ ಲಲಿತಬಾಲ್ಯವಾನಯಂ ಪ್ರತಿಭಾಬಲೇನ ಕೃತದೈತ್ಯಕೌತುಕ: |
ಉಪಧೇರಧ: ಕೃತಬಲೀಂದ್ರಶಾತ್ರವ: ಸ್ವಜನಾಯ ಕೇವಲಮದಾತ್ ಪರಂ ಪದಂ |
ನಾರಾಯಣ ಅತಿ ಸುಂದರನಾದ ವಾಮನ ರೂಪಧರಿಸಿ ಮತ್ತು ಅತಿ ಬುದ್ದಿವಂತಿಕೆಯಿಂದ ರಸಾತಳ ಲೋಕಕ್ಕೆ ತಳ್ಳಿ ಪುನಃ ಇಂದ್ರನಿಗೆ ಅಮರವತಿಯನ್ನು ಕೊಟ್ಟು ಸ್ವರ್ಗಾಧಿಪತ್ಯವನ್ನು ಕೊಟ್ಟವನು.
ಇನ್ನು ದ್ವಾದಶ ಸ್ತೋತ್ರಗಳಲ್ಲಿ ಆಚಾರ್ಯರು ಹೀಗೆ ವರ್ಣಿಸುತ್ತಾರೆ.
ವಾಮನ ವಾಮನ ಭಾಮನ ವಂದೇ ಸಾಮನ ಸೀಮನ ಶಾಮನ ಸಾನೋ |
ಶ್ರೀಧರ ಶ್ರೀಧರ ಶಂಧರ ವಂದೇ ಭೂಧರ ವಾರ್ಧರ ಕಂದರಧಾರೀನ್ ||
ವಾಮನ ವಾಮನ ಮಾಣವವೇಷ ದೈತ್ಯವರಾಂತಕ ಕಾರಣ ರೂಪ |
ಬಲಿಮುಖದಿತಿಸುತವಿಜಯವಿನಾಶನ ಜಗದವನಾಜಿತ ಭವ ಮಮ ಶರಣಂ |
ಶುಭತಮಕಥಾಶಯ ಪರಮಸದೋದಿತ ಜಗದೇಕಕಾರಣ ರಾಮ ರಮಾರಮಣ ||
ಯಾದವಾರ್ಯರು ತಮ್ಮ ಕರಾವಲಂಭನಾ ಸ್ತೋತ್ರದಲ್ಲಿ ಹೀಗೆ ಚಿಂತಿಸುತ್ತಾರೆ.
ದೇವೇಂದ್ರರಾಜ್ಯಹರದಾನವರಾಜಯಜ್ಞ-ಶಾಲಾರ್ಥಿರೂಪಧರ ವಜ್ರಧರಾರ್ಥಿಹಾರಿನ್ |
ಯಾಂಚಾಮಿಷಾದಸುರವಂಚಕ ವಾಮನೇಶ ವಾಸಿಷ್ಠ ಕೃಷ್ಣ ಮಮ ದೇಹಿ ಕರಾವಲಂಬಂ |
ಶ್ರೀವಾದಿರಾಜ ತೀರ್ಥರು ದಶಾವತಾರ ಸ್ತುತಿಯಲ್ಲಿ ಹೀಗೆ ಚಿಂತಿಸುತ್ತಾರೆ
ಪಿಂಗಾಕ್ಷವಿಕ್ರಮತುರಂಗಾದಿ ಸೈನ್ಯ ಚತುರಂಗಾವಲಿಪ್ತದನುಜಾ-
ಸಾಂಗಾಧ್ವರಸ್ಥಬಲಿಸಾಂಗಾವಪಾತಹೃಷಿತಾಂಗಾಮರಾಲಿನುತ ತೇ |
ಶೃಂಗಾರಪಾದನಖತುಂಗಾಗ್ರಭಿನ್ನ ಕನಕಾಂಗಾಂಡ ಪಾತಿತಟಿನೀ-
ತುಂಗಾತಿಮಂಗಲ ತರಂಗಾಭಿಭೂತ ಭಜಕಾಂಗಾಂಘವಾಮನ ನಮ:
ಶ್ರೀ ಆಚಾರ್ಯ ಮಧ್ವರು ತಮ್ಮ ತಂತ್ರಸಾರ ಸಂಗ್ರಹದಲ್ಲಿ ಕೊಟ್ಟಿರುವ ವಾಮನ ದೇವರ ಧ್ಯಾನ ಶ್ಲೋಕ
ಧ್ಯಾಯೇತ್ ಸುಶುಕ್ಲಮರವಿಂದ ದಲಾಯತಾಕ್ಷಂ
ಸೌವರ್ಣಪಾತ್ರ ದಧಿ ಭೋಜ್ಯಮಥಾಮೃತಂ ಚ |
ದೋರ್ಭ್ಯಾಂ ದಧಾನಮಖಿಲೈಶ್ಚ ಸುರೈ: ಪರೀತಂ |
ಶೀತಾಂಶುಮಂಡಲಗತಂ ರಮಯಾ ಸಮೇತಂ |
ಉದ್ಯದ್ರವಿಪ್ರಭಮರೀಂದ್ರದರೌ ಗದಾಂ ಚ ಜ್ಞಾನಂ ಚ ವಿಭ್ರತಮಜಂ ಪ್ರಿಯಯಾ ಸಮೇತಂ |
ವಿಶ್ವಾವಕಾಶಮಭಿತ: ಪ್ರತಿಪೂರಯಂತಂ ಭಾಸಾ ಸ್ವಯಾ ಸ್ಮರತ ವಿಷ್ಣುಮಜಾದಿವಂದ್ಯಂ |
ಬಂಗಾರದ ಬಟ್ಟಲಲ್ಲಿರುವ ಮೊಸರನ್ನವನ್ನು, ಅಮೃತವನ್ನು ತನ್ನೆರಡು ಕೈಗಳಿಂದ ಹಿಡಿದುಕೊಂಡಿರುವ, ತನ್ನ ಸಮಸ್ತ ದೇವತಾ ಪರಿವಾರದೊಡನೆ, ರಮಾದೇವಿಯೊಡನೆ, ಚಂದ್ರಮಂಡಲದಲ್ಲಿ ಕುಳಿತಿರುವ, ಕಮಲದಂತೆ ವಿಶಾಲವಾದ ಕಣ್ಣುಗಳಿಂದ ಪ್ರಕಾಶಿಸುತ್ತಿರುವ ವಾಮನನನ್ನು ಧ್ಯಾನಿಸಬೇಕು. ಆಗ ತಾನೇ ಉದಯಿಸುತ್ತಿರುವ ಸೂರ್ಯನಂತೆ ಬೆಳಗುವ ತನ್ನ ಚತುರ್ಭುಜಗಳಲ್ಲಿ ಚಕ್ರ ಶಂಖ ಗದಾ ಜ್ಞಾನಮುದ್ರೆಗಳನ್ನು ಧರಿಸಿರುವ, ತನ್ನ ಪ್ರಭೆಯಿಂದ ಜಗತ್ತನ್ನೆಲ್ಲ ವ್ಯಾಪಿಸುತ್ತಿರುವ, ಬ್ರಹ್ಮ ರುದ್ರಾದಿ ದೇವತೆಗಳಿಂದಲೂ ವಂದ್ಯನಾದ, ರಮಾದೇವಿ ಸಹಿತನಾದ ವಾಮನನನ್ನು ಧ್ಯಾನಿಸಬೇಕು.