ಬ್ರಹ್ಮಕಲಶದ ಪರಿಣಾಮ ಏನು?

0Shares

ಉಡುಪಿ ಮತ್ತು ದಕ್ಷಿಣ ಕನ್ನಡ ಅವಿಭಜಿತ ಜಿಲ್ಲೆಯಲ್ಲಿ ಬಹಳಷ್ಟು ದೇವಸ್ಥಾನ, ದೈವಸ್ಥಾನಗಳಲ್ಲಿ ಬ್ರಹ್ಮಕಲಶ ನಡೆಸುತ್ತಿರುವುದನ್ನು ನಾವು ನೋಡಿದ್ದೇವೆ. ಬ್ರಹ್ಮಕಲಶ ಯಾಕೆ ಮಾಡಬೇಕು? ಇದರಿಂದ ಪ್ರಯೋಜನ ಏನು? ಇದು ಯಾವ ಕಾಲದಿಂದ ನಡೆದುಕೊಂಡು ಬಂದಿದೆ ಎಂದು ಯೋಚನೆ ಮಾಡುವವರು ಯಾರೂ ಇಲ್ಲ.

ಬ್ರಹ್ಮಕಲಶ

ಬ್ರಹ್ಮಕಲಶ ಎಂಬ ಪದದಲ್ಲಿ ಎರಡು ಶಬ್ದಗಳಿವೆ. ಬ್ರಹ್ಮ ಮತ್ತು ಕಲಶ. ಎರಡೂ ಶಬ್ದಗಳ ಅರ್ಥ ತಿಳಿಯಬೇಕಾಗುತ್ತದೆ. ದೇವರ ಹೆಸರು ಹಲವು ಇರಬಹುದು. ಆದರೆ ದೇವರು ಒಬ್ಬರೇ. ಬ್ರಹ್ಮ ಎಂದರೆ ಎಲ್ಲದಕ್ಕೂ ಅಧಿಪತಿ. ಬ್ರಹ್ಮದೇವರಿಂದಲೇ ಎಲ್ಲವೂ ಬ್ರಹ್ಮ ದೇವರನ್ನು ವೇದದಲ್ಲಿ ಬೇರೆ ಬೇರೆ ಹೆಸರಿನಿಂದ ನಾವು ಕರೆಯುತ್ತೇವೆ. ನಾವು ಹಲವು ಪೂಜೆಗಳನ್ನು ದೇವರ ಹೆಸರು ಹೇಳಿ ಮಾಡುತ್ತೇವೆ. ಇದಕ್ಕೆ ಎಲ್ಲಾ ಫಲ ಕೊಡುವುದು ಪರಮಾತ್ಮನೇ. ಪೂಜೆಯ ಕೊನೆಯಲ್ಲಿ ಪೂಜೆ ಮಾಡಿದವರು ಬ್ರಹ್ಮಾರ್ಪಣವನ್ನು ನಮ್ಮಿಂದ ಮಾಡಿಸುತ್ತಾರೆ. ಆದುದರಿಂದ ಎಲ್ಲಾ ಪೂಜೆಗೂ ಬ್ರಹ್ಮ ತತ್ವವೇ ಮುಖ್ಯ. ಬಹ್ಮ ಕಲಶ ಇದರಲ್ಲಿ ಬ್ರಹ್ಮ ಎಂದರೆ ಏನೆಂದು ಹೇಳಿದಂತೆ ಕಲಶ ಎಂಬುದಕ್ಕೂ ಒಂದು ಅರ್ಥ ಇದೆ. ಎಲ್ಲಾ ಪೂಜೆಗೂ ಕಲಶ ಇದ್ದೇ ಇರುತ್ತದೆ. ದೈವದ ಕೆಲಸದಲ್ಲಿಯೂ ಕಲಶ ಇರುತ್ತದೆ. ಇದನ್ನು ದೈವದ ಅರ್ಚಕರು ಅಥವಾ ಪಾತ್ರಿಗಳು ಮಾಡುವುದು ನಮಗೆ ತಿಳಿದಿದೆ. ಆದರೆ ಕಲಶವನ್ನು ಇಡುವುದರ ನಿಜವಾದ ಅರ್ಥವೇನೆಂದರೆ ಕಲಶದ ಒಳಗೆ ಇರುವ ನೀರು ಪವಿತ್ರ. ದೇವರಿಗೆ ಕೈ ತೊಳೆಯಲು ನೀರು, ಕಾಲು ತೊಳೆಯಲು ನೀರು, ಕುಡಿಯಲು ಪಾನೀಯ, ಸ್ನಾನ, ಅಭಿಷೇಕ ಈ ಐದು ಕ್ರಿಯೆಗೆ ಬೇರೆ ಬೇರೆ ಕಲಶಗಳಲ್ಲಿ ಅನೇಕ ಮಂತ್ರಗಳಿಂದ ಬೇರೆ ಬೇರೆ ದೇವತೆಯನ್ನು ಕರೆಯುವುದು ಕಲಶದ ವಿಶೇಷತೆ. ಪವಿತ್ರವಾದ ರತ್ನ, ದರ್ಭೆ, ಅಕ್ಷತೆ, ತುಳಸಿಗಳನ್ನು ಇಡುವುದು, ಫಲ ವಸ್ತುಗಳನ್ನು ಇಡುವುದನ್ನು ನಾವು ಕಂಡಿದ್ದೇವೆ. ಪ್ರಧಾನ ದೇವತೆಯನ್ನು ಕರೆಯಿಸಿ, ಪೂಜೆ ಮಾಡಿದಾಗ ಅದು ಬ್ರಹ್ಮ ಕಲಶವೆನಿಸುತ್ತದೆ. ಬ್ರಹ್ಮ ಕಲಶ ಎಂದರೆ ಮಹತ್ತರವಾದ ಒಂದು ಕ್ರಿಯೆ. ಇದು ಲೋಕದ ಜನರ ಹಿತ ದೃಷ್ಟಿಯಿಂದ ಇರುತ್ತದೆ.

ಕಟೀಲು ಬ್ರಹ್ಮಕಲಶ

ಯಾವುದೇ ಕ್ರಿಯೆಯನ್ನು ಸರಿಯೆಂದು ಒಪ್ಪಲು ಅದು ವೇದದಲ್ಲಿ ಇರಬೇಕು. ಇಲ್ಲದಿದ್ದರೆ ಅದನ್ನು ಒಪ್ಪುವುದಕ್ಕೆ ಸಾಧ್ಯ ಇಲ್ಲ. ಅಗ್ನಿಗೆ ಎರಡು ಮುಖಗಳು. ವೇದ ಮತ್ತು ತಂತ್ರ. ಈ ಎರಡು ದಾರಿಗಳಲ್ಲಿ ಭಗವಂತನನ್ನು ಆರಾಧಿಸಬಹುದು. ನಾವು ದೇವಸ್ಥಾನದಲ್ಲಿ ಅರ್ಚಕರು ಪೂಜೆ ಮಾಡುವಾಗ ವೈದಿಕ – ತಾಂತ್ರಿಕ ಎಂಬ ಎರಡು ಪ್ರಕ್ರಿಯೆಗಳನ್ನು ಒಳಗೊಂಡಿರುವುದನ್ನು ನೋಡುತ್ತೇವೆ. ವೇದಗಳಲ್ಲಿ ಎರಡು ಕಾಂಡಗಳಿವೆ. ಕರ್ಮ ಕಾಂಡ ಮತ್ತು ಜ್ಞಾನ ಕಾಂಡ.

ದೇವಸ್ಥಾನಗಳಲ್ಲಿ ವೈದಿಕ ಮಂತ್ರಗಳು ತಾಂತ್ರಿಕ ಮಂತ್ರಗಳು ಎರಡೂ ಸಮಾನವಾಗಿ ಉಪಯೋಗಿಸಲ್ಪಡುತ್ತದೆ. ಇದು ವೈದಿಕ ಮತ್ತು ತಾಂತ್ರಿಕ ಎಂಬ ಎರಡು ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ದೇವರ ವಿಷಯವನ್ನು ತಿಳಿದು ದೇವರ ಸೇವೆ, ದೇವರ ನಾಮಸ್ಮರಣೆ, ದೇವರ ಮಹಿಮಾತಿಶಯದ ಜ್ಞಾನ, ದೇವರ ಭಕ್ತಿ ಇವೆಲ್ಲಾ ಅವಶ್ಯ ಕರ್ತವ್ಯವೆಂದು ವೇದವು ತಿಳಿಸುತ್ತದೆ. ರಾಮಾಯಣ, ಭಾಗವತಾದಿ ಪುರಾಣಗಳಲ್ಲಿ ಸೀತೆ, ರುಕ್ಮುಣಿ ದೇವಸ್ಥಾನಕ್ಕೆ ಹೋಗರುವುದನ್ನು ವಿವರಿಸಿದ್ದಾರೆ. ಆದುದರಿಂದ ಪುರಾತನ ಕಾಲದಲ್ಲಿಯೂ ದೇವಸ್ಥಾನಗಳಿದ್ದವು ಎಂದು ತಿಳಿಯುತ್ತದೆ. ವೇದ ಹೋಮಗಳು ಮನೆಯಲ್ಲಿ ನಡೆಯುವುದು, ತಾಂತ್ರಿಕ ವಿಧಾನಗಳು ದೇವಸ್ಥಾನದಲ್ಲಿ ನಡೆಯುವುದನ್ನು ನಾವು ನೋಡುತ್ತೇವೆ. ದೇವರು ಇಡೀ ವಿಶ್ವದಲ್ಲಿರುವುದನ್ನು ತಿಳಿದಿದ್ದೇವೆ.

ದೇವರು ಕೊಟ್ಟದ್ದನ್ನು ಪ್ರಸಾದವೆಂದು ತಿಳಿಯಬೇಕು. ಇನ್ನೂ ಬೇಕೆಂದು ಆಸೆ ಪಡುವುದು ತಪ್ಪು. ದೇವರು ನಮಗೆ ಪಂಚಭೂತ ಸಮುದಾಯದ ವಸ್ತುಗಳನ್ನು ಉಪಯೋಗಿಸಿಕೊಂಡು ನಾವು ಚೆನ್ನಾಗಿ ಬದುಕುವಂತೆ ಅನುಗ್ರಹಿಸುತ್ತಾನೆ. ದೇವರು ನಮಗಾಗಿ ಸೃಷ್ಟಿ ಮಾಡಿದ ಪಂಚಭೂತ ಸಮುದಾಯದ ವಸ್ತುಗಳನ್ನು ಬಹಳ ಶ್ರದ್ಧೆಯಿಂದ, ಪವಿತ್ರದಲ್ಲಿಡುವಂತೆ ಪ್ರಯತ್ನ ಮಾಡುವುದು ನಮ್ಮ ಕರ್ತವ್ಯವಾಗಿದೆ. ಪಂಚ ಭೂತಗಳೆಂದರೆ ಭೂಮಿ, ಜಲ, ಅಗ್ನಿ, ವಾಯು, ಆಕಾಶ. ಭೂಮಿಗೆ ಅನುಗುಣವಾಗಿ ಗಂಧ. ಜಲಭೂತದ ಪ್ರತೀಕವಾಗಿ ಹೋಮ, ದೀಪಗಳು. ವಾಯುಭೂತದ ಪ್ರತೀಕವಾಗಿ ಧೂಪ, ಆಕಾಶಭೂತದ ಪ್ರತೀಕವಾಗಿ ಪುಷ್ಪ, ವೇದ ಘೋಷ, ನಾಮಸ್ಮರಣ, ಶಂಖ, ವಾದ್ಯಗಳು. ಭೂಮಿಯ ಪ್ರತೀಕವಾಗಿ ಗಂಧವನ್ನು ಹಚ್ಚಿಕೊಳ್ಳುತ್ತೇವೆ. ಜಲಭೂತದ ಪ್ರತೀಕವಾಗಿ ತೀರ್ಥವನ್ನು ಕುಡಿಯುತ್ತೇವೆ. ಅಗ್ನಿ ಭೂತದ ಪ್ರತೀಕವಾಗಿ ಭಸ್ಮವನ್ನು ಹಚ್ಚಿಕೊಳ್ಳುತ್ತೇವೆ. ದೇವಸ್ಥಾನಕ್ಕೆ ಪ್ರದಕ್ಷಿಣೆ ಬರುವಾಗ ಸುತ್ತಮುತ್ತಲಿನ ಗಾಳಿ ನಮ್ಮನ್ನು ಪವಿತ್ರಗೊಳಿಸುತ್ತದೆ.

ಕೃತ ಯುಗದಲ್ಲಿ ಯಾರಿಗೂ ಸ್ವಾರ್ಥ ಎಂಬುವುದೇ ಇರಲಿಲ್ಲ. ಪರಮಾತ್ಮನ ಆರಾಧನೆಯನ್ನು ಅವರು ಸದಾಕಾಲ ಮಾಡುತ್ತಿದ್ದರು. ದೇವರ ಆರಾಧನೆಗೆ ಇನ್ನೊಬ್ಬರ ಒತ್ತಡ ಇರಲಿಲ್ಲ. ಅವರು ತಪಸ್ಸಿನಿಂದಲೇ ಜೀವಮಾನ ಕಳೆಯುತ್ತಿದ್ದರು. ತ್ರೇತಾಯುಗ ಆರಂಭವಾದ ನಂತರ ಜನರಿಗೆ ಸ್ವಾರ್ಥವು ಆರಂಭವಾಯಿತು. ಇದರಿಂದ ದೇವರ ಆರಾಧನೆಗೆ ಯಜ್ಞ ಯಾಗಾದಿಗಳು ಹುಟ್ಟಿಕೊಂಡಿತು. ನಂತರ ದ್ವಾಪರ ಯುಗದಲ್ಲಿ ಸ್ವಾರ್ಥವು ಮತ್ತೂ ಜಾಸ್ತಿಯಾಯಿತು. ಈ ಕಾಲದಲ್ಲಿ ದೇವರ ವಿಷಯ, ಧರ್ಮದ ವಿಷಯದಲ್ಲಿ ಸಂಶಯವು ಜಾಸ್ತಿಯಾಯಿತು. ಸಂಶಯದ ನಿವಾರಣೆಗಾಗಿ ಕೃತಿಗಳು, ಪುರಾಣಗಳು ಹುಟ್ಟಿಕೊಂಡವು. ನಂತರ ಬಂದ ಯುಗ ಕಲಿಯುಗ. ಕಲಿ ಎಂದರೆ ಕಲಹ. ಕಲಿಯುಗದಲ್ಲಿ ಕಲಹವೇ ಜನರ ಸ್ವಭಾವವಾಯಿತು. ಕಲಿಯುಗದಲ್ಲಿ ಸ್ವಾರ್ಥವೇ ಮುಖ್ಯವಾಗಿ ಲೋಕದಲ್ಲಿ ಅಧರ್ಮಗಳೇ ಜಾಸ್ತಿಯಾಯಿತು. ಇದರಿಂದ ಸಮಾಜದಲ್ಲಿ ಶಾಂತಿ ಇಲ್ಲದಂತಾಯಿತು. ಇದರಿಂದ ಜನರು ಒಟ್ಟು ಸೇರಿ ದೇವಸ್ಥಾನ ನಿರ್ಮಾಣ ಮಾಡಿದರು. ದೇವರ ಪ್ರತಿಷ್ಠಾಪನೆಗೆ ವಿಧಿ ವಿಧಾನಗಳು ಆಗಬೇಕಾಗಿರುವುದರಿಂದ ವೈದಿಕರು ಬ್ರಹ್ಮ ಕಲಶ, ಉತ್ಸವ, ಪ್ರತಿಷ್ಠಾಪನೆ, ನಿತ್ಯ ಪೂಜೆ ನಡೆಸಲು ಹೇಳಿ ಕೊಟ್ಟರು. ಜನರು ದೇವಾಲಯವನ್ನು ಜನರ ಹಿತಕ್ಕೆ, ಶಾಲೆ, ಆಸ್ಪತ್ರೆ, ವಿಹಾರಕೇಂದ್ರವನ್ನಾಗಿ ಮಾಡಿದರು.

ಪರಮಾತ್ಮನು ಸರ್ವ ವ್ಯಾಪಿಯಾಗಿದ್ದಾನೆ. ಆದರೆ ಜನರಿಗೆ ಯಾವಾಗಲೂ ದೇವರನ್ನು ಪೂಜಿಸುವ ಅವಕಾಶ ಇದೆ. ಇದರಿಂದ ದೇವಸ್ಥಾನದಲ್ಲಿ ಯಾವಾಗಲೂ ವಿವಿಧ ದೇವರ ಪೂಜೆಯನ್ನು ಮಾಡುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯೂ ವ್ಯವಸ್ಥಿತ ರೀತಿಯಲ್ಲಿ ದೇವರನ್ನು ಧ್ಯಾನಿಸಲು ವೇದದಲ್ಲಿ ವಿಧಿ ಇದ್ದರೂ, ಕಲಿಯುಗದಲ್ಲಿ ಅದು ಎಲ್ಲರಿಗೂ ಸಾಧ್ಯವಿಲ್ಲ. ಏಕೆಂದರೆ ವಿಧಿ ವಿಧಾನವನ್ನು ಮೈಗೂಡಿಸಿಕೊಂಡವರು ಕಡಿಮೆ. ಇದಕ್ಕೆ ಸಮಯ ಸಿಗುವುದಿಲ್ಲ. ನಮ್ಮ ಶರೀರದಲ್ಲಿ ಅಗಾಧವಾದ ಶಕ್ತಿಯು ತುಂಬಿ ತುಳುಕುತ್ತಿದೆ. ಧ್ಯಾನ ಧಾರಣೆಗಳಿಂದ ನಮ್ಮ ಮನಸ್ಸಿನ ಏಕಾಗ್ರತೆಯನ್ನು ಸಂಪಾದಿಸಿದರೆ ದೇವರು ನಮಗೆ ಕೊಟ್ಟಿರುವ ಅದ್ಭುತ ಶಕ್ತಿಯನ್ನು ನಾವು ಲೋಕ ಶಾಂತಿಗಾಗಿ ಉಪಯೋಗಿಸಬಹುದು. ಬ್ರಹ್ಮ ಕಲಶಾದಿ ಸಂದರ್ಭಗಳಲ್ಲಿ ನಾವು ಗಂಟೆಗಟ್ಟಲೆ ದೇವರಲ್ಲೇ ನಮ್ಮ ಮನಸ್ಸನ್ನು ಸಂಪೂರ್ಣವಾಗಿ ಕೇಂದ್ರೀಕರಿಸಿ ಆ ದೇವರ ವಿಶೇಷ ಸನ್ನಿಧಾನವನ್ನು ಮೊದಲು ತಮ್ಮ ಹೃದಯದಲ್ಲಿ ತುಂಬಿಸಿಕೊಳ್ಳುವುದಕ್ಕೆ ಅವಕಾಶ ಇದೆ.

0Shares

Leave a Reply

error: Content is protected !!