Page Contents
ದೇವರನ್ನು ನಾವು ಆಶ್ರಯಿಸುವುದನ್ನು ಮೂರು ರೀತಿಯಾಗಿ ವಿಭಾಗಿಸ ಬಹುದು.
1). ಮಾರ್ಜಾಲ ಕಿಶೋರ ನ್ಯಾಯ
2). ಮರ್ಕಟ ಕಿಶೋರ ನ್ಯಾಯ
3). ಮತ್ಸ್ಯ ಕಿಶೋರ ನ್ಯಾಯ
ಮಾರ್ಜಾಲ ಕಿಶೋರ ನ್ಯಾಯ:
ಬೆಕ್ಕು ತನ್ನ ಮರಿಯನ್ನು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸಾಗಿಸುವಾಗ ಅದರ ಕತ್ತನ್ನು ಕಚ್ಚಿಕೊಂಡು ಉಪಾಯವಾಗಿ ಕೊಂಡೊಯ್ಯುತ್ತದೆ. ಆದರೆ ಮರಿಗೆ ಚೂರಾದರೂ ನೋವಾಗುವುದಿಲ್ಲ. ಹಾಗೆ ಭಗವಂತನನ್ನು ಆಶ್ರಯಿಸಿದವರಿಗೆ ಕರ್ಮಗಳನ್ನು ಕಳೆಯುತ್ತಾನೆ. ಆಗ ಮನುಷ್ಯ ಕಷ್ಟಗಳಲ್ಲಿ ತೊಳಲಾಡುತ್ತಾನೆ. ಅದರಿಂದ ಭಗವಂತ ಭಕ್ತನ ವಿಶ್ವಾಸಕ್ಕೆ ಚೂರೂ ಧಕ್ಕೆ ಬರದ ಹಾಗೆ ಕಾಪಾಡುತ್ತಾನೆ.
ಮರ್ಕಟ ಕಿಶೋರ ನ್ಯಾಯ:
ಕೋತಿ ತನ್ನ ಮರಿಯನ್ನು ಹಿಡಿದು ಕೊಳ್ಳುವುದೇ ಇಲ್ಲ. ಏಕೆಂದರೆ ಕೋತಿಯ ಮರಿ ಅಮ್ಮನನ್ನು ಎಷ್ಟು ಗಟ್ಟಿಯಾಗಿ ಹಿಡಿದು ಕೊಳ್ಳುತ್ತದೆಂದರೆ ತಾಯಿಗೆ ತಲೆ ಕೆಡಿಸಿ ಕೊಳ್ಳುವ ಅಗತ್ಯವೇ ಇಲ್ಲ. ಅದು ತನ್ನ ಪಾಡಿಗೆ ಸಲೀಸಾಗಿ ಹಾರಾಡುತ್ತದೆ. ಹಾಗೇ ಇಲ್ಲಿ ಭಕ್ತ ಭಗವಂತನನ್ನು ಎಷ್ಟು ಗಟ್ಟಿಯಾಗಿ ಆಶ್ರಯಿಸುತ್ತಾನೆಂದರೆ ಯಾವುದೇ ಕಷ್ಟಗಳು ಯಾವುದೇ ಪರಿಸ್ಥಿತಿಯೂ ಅವನ ನಂಬಿಕೆಯನ್ನು ಕದಲಿಸಲಾರದು. ಇದು ಅತ್ಯಂತ ಕಠಿಣ, ಅಷ್ಟೇ ಶ್ರೇಷ್ಠವಾದುದು.
ಮತ್ಸ್ಯ ಕಿಶೋರ ನ್ಯಾಯ:
ಮೀನಿನ ಮರಿ ಕೋಟ್ಯಾಂತರ ಮೈಲಿ ದೂರದಲ್ಲಿದ್ದರೂ ಅದು ತಾಯಿಯನ್ನು ನೆನೆದರೆ ಸಾಕು ಮರುಕ್ಷಣ ತಾಯಿ ಕಣ್ಣಮುಂದೆ ಇರುತ್ತದೆ. ಹಾಗೆ ಭಗವಂತನನ್ನು ಸರಿಯಾಗಿ ನೆನೆಸಿ ಕೊಳ್ಳುವ ಕಲೆ ಗೊತ್ತಿದ್ದರೆ ನಮ್ಮ ಮನಸು ಸದಾ ಅವನಲ್ಲಿಲ್ಲದಿದ್ದರೂ ಕರೆದೊಡನೆ ಬರುತ್ತಾನೆ.