ಆಷಾಢ ಶುಕ್ಲ ಪಕ್ಷದ ಏಕಾದಶಿಯಿಂದ ಕಾರ್ತಿಕ ಶುಕ್ಲ ಪಕ್ಷದ ಏಕಾದಶಿಯವರೆಗೆ ನಾಲ್ಕು ತಿಂಗಳುಗಳ ಕಾಲಾವಧಿಗೆ ‘ಚಾತುರ್ಮಾಸ’ ಎನ್ನುತ್ತಾರೆ. ಮನುಷ್ಯರ ಒಂದು ವರ್ಷ ದೇವತೆಗಳಿಗೆ ಒಂದು ದಿನ. ದೇವತೆಗಳಿಗೆ ಉತ್ತರಾಯಣದ ಆರು ತಿಂಗಳು ಹಗಲು ದಕ್ಷಿಣಾಯಣದ ಆರು ತಿಂಗಳು ರಾತ್ರಿ. ಆರು ತಿಂಗಳ ರಾತ್ರಿಯಲ್ಲಿ ನಾಲ್ಕು ತಿಂಗಳು ನಿದ್ರಾಕಾಲ. ಆಷಾಢ ಮಾಸ ಶುಕ್ಲ ಪಕ್ಷದ ಏಕಾದಶಿಯಂದು ಭಗವಂತನು ಮಲಗುವುದರಿಂದ ಈ ಏಕಾದಶಿಯನ್ನು ಶಯನೀ ಏಕಾದಶಿ ಎಂದು ಕರೆಯುವರು. ಈ ನಾಲ್ಕು ತಿಂಗಳುಗಳಿಗೆ ಚಾತುರ್ಮಾಸವೆಂದೂ ಈ ತಿಂಗಳಲ್ಲಿ ಆಚರಿಸುವ ವ್ರತಕ್ಕೆ ಚಾತುರ್ಮಾಸ್ಯ ವ್ರತವೆಂದೂ ಹೆಸರು.
ಇಂದಿನಿಂದ ಒಂದೊಂದು ತಿಂಗಳು ಒಂದೊಂದು ವ್ರತವನ್ನು ಆಚರಿಸಬೇಕು. ಈ ನಾಲ್ಕು ತಿಂಗಳು ಮಳೆಗಾಲದಿಂದ ಕೂಡಿವೆ. ಆಷಾಢ ಹಾಗೂ ಶ್ರಾವಣ ಮಾಸದಲ್ಲಿ ಗ್ರೀಷ್ಮ ಮತ್ತು ವರ್ಷ ಋತುಗಳ ಸಮಾಗಮ. ಈ ವೇಳೆ ಮಳೆ ಹೆಚ್ಚು. ಪುರಾತನ ಕಾಲದಲ್ಲಿ ಮನೆ, ಮಠಗಳಿಂದ ಹೊರಗೆ ಕಾಲಿಡಲಾರದಷ್ಟು ಮಳೆ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದವು. ಯತಿಗಳ ಸಂಚಾರಕ್ಕೆ ಇದು ಅಡ್ಡಿಯಾಗುತ್ತಿತ್ತು. ಇದಲ್ಲದೇ ಮಳೆಗಾಲದಲ್ಲಿ ಸಣ್ಣ ಕ್ರಿಮಿ, ಕೀಟಗಳ ಉತ್ಪತ್ತಿಯೂ ಜೋರು. ಹೊರಗೆ ಸಂಚರಿಸುವಾಗ ಯತಿಗಳು ಕಾಲಿಗೆ ಹಾಕಿಕೊಳ್ಳುತ್ತಿದ್ದ ಮರದ ಹಾವುಗೆ(ಪಾದುಕೆ)ಗಳಿಗೆ ಸಿಕ್ಕ ಕೀಟಗಳು ಸಾಯುವ ಸಾಧ್ಯತೆ ಹೆಚ್ಚು. ಅಹಿಂಸೆಯೇ ಪರಮಧರ್ಮ ಎಂದರಿತಿದ್ದ ಯತಿಗಳು ಕೀಟಗಳ ಸಾವಿಗೆ ಕಾರಣರಾಗುತ್ತಿರಲಿಲ್ಲ. ಹಾಗಾಗಿ ಹೊರಗೆ ಸಂಚರಿಸುತ್ತಿರಲಿಲ್ಲ. (ಇದು ಹಿಂದೂ ಧರ್ಮೀಯ ಯತಿಗಳಷ್ಟೇ ಅಲ್ಲ ಜೈನ, ಬೌದ್ಧ ಧರ್ಮ ಸೇರಿದಂತೆ ಹಲವಾರು ಧರ್ಮೀಯ ಯತಿಗಳು ಪಾಲಿಸುತ್ತಾರೆ.)
ಇದರ ಜತೆಗೆ ಪುಣ್ಯ ಸಂಚಯನ ಮಾಡುವ ದಕ್ಷಿಣಾಯಣ ಪುಣ್ಯಕಾಲ ಕೂಡಿರುತ್ತಿದ್ದ ಕಾರಣ ಯತಿಗಳು ಒಂದೆಡೆ ವ್ರತಕ್ಕೆ ಕೂರುತ್ತಿದ್ದರು. ಇನ್ನು ಇವರ ಶಿಷ್ಯರು ಶ್ರದ್ಧಾವಂತರಾದ ಕಾರಣ ಗುರುಗಳ ಮಾರ್ಗ ಅನುಸರಿಸಿ ಅವರೂ ವ್ರತಕ್ಕೆ ಕೂರುತ್ತಿದ್ದರು.
ಮೊದಲ ತಿಂಗಳು ಶಾಕವ್ರತ. ಈ ತಿಂಗಳಲ್ಲಿ ತರಕಾರಿ, ಬಾಳೆಹಣ್ಣು, ಕೇಸರಿ, ಪಚ್ಚಕರ್ಪೂರ ಇತ್ಯಾದಿ ಸುಗಂಧ ದ್ರವ್ಯಗಳನ್ನು ಬಳಸುವಂತಿಲ್ಲ. ಮಾವಿನ ಹಣ್ಣಿನ ಹೊರತಾಗಿ ಬೇರೆ ಹಣ್ಣುಗಳನ್ನು ದೇವರಿಗೆ ಸಮರ್ಪಿಸುವಂತಿಲ್ಲ. ಇದಕ್ಕೆ ವೈಜ್ಞಾನಿಕ ಕಾರಣವಿದೆ. ಹಿಂದೆ ವ್ಯಾಪಾರ ದೃಷ್ಠಿಯಿಂದ ತರಕಾರಿ ಬೆಳೆಯುತ್ತಿರಲಿಲ್ಲ. ಜನರು ಅವರ ಅಗತ್ಯಕ್ಕೆ ತಕ್ಕ ಹಾಗೆ ಹಿತ್ತಲು ಹಾಗೂ ಕೈತೋಟದಲ್ಲಿ ತರಕಾರಿ ಬೆಳೆದುಕೊಳ್ಳುತ್ತಿದ್ದರು. ಮಳೆಗಾಲದ ಆರಂಭದ ದಿನಗಳಲ್ಲಿ ಭೂಮಿಯಲ್ಲಿ ಅಮಿತ ಉಷ್ಣಾಂಶವಿರುತ್ತದೆ. ಈ ಕಾಲದಲ್ಲಿ ಬೆಳೆದ ತರಕಾರಿಯಲ್ಲೂ ಈ ಉಷ್ಣಾಂಶ ಇರುವುದರಿಂದ ತರಕಾರಿ ಬಳಕೆ ಉತ್ತಮವಲ್ಲವೆಂದು ನಿಷೇಧಿಸಲಾಗಿತ್ತು.
ಇದಲ್ಲದೆ ಜೋರು ಮಳೆಗಾಲವಾದ ಕಾರಣ ಹಣ್ಣುಗಳು ಕೆಡುತ್ತವೆ ಜತೆಗೆ ನಾವು ಸೇವಿಸಿದರೆ ಸರಿಯಾಗಿ ಜೀರ್ಣವಾಗುವುದಿಲ್ಲ. ಆಗೆಲ್ಲಾ ಈಗಿನಂತೆ ಸಂಚರಿಸಲು ವಾಹನಗಳಿರಲಿಲ್ಲ. ಮಳೆಯ ಕಾರಣ ಕೂತ ಕಡೆಯೇ ಹೆಚ್ಚು ಕಾಲ ಕಳೆಯುತ್ತಿದ್ದ ಜನರ ದೇಹದಲ್ಲಿ ಅಗತ್ಯಕಿಂತ ಪೋಷಕಾಂಶಗಳು ಹೆಚ್ಚಾಗಿ ಬೊಜ್ಜು, ಮತ್ತಿತರ ಅನಾರೋಗ್ಯ ಉಂಟಾಗುತ್ತಿತ್ತು.
ಹಾಗಾಗಿ ಈ ಪದಾರ್ಥಗಳನ್ಬು ನಿಷೇಧಿಸಿದ್ದರು ಈಗಲೂ ನಾವು ಗಮನಿಸಬಹುದು, ಈ ಆಚರಣೆ ಮಾಡುವ ಎಲ್ಲ ಯತಿಗಳು ಒಂದು ದಿನವೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದಿಲ್ಲ. ಇದು ಸಕಾಲದಲ್ಲಿ ಮಾಡುವ ಆಚರಣೆಯ ಮಹತ್ವ.
ಎರಡನೇ ತಿಂಗಳು ದಧಿವ್ರತ, ಈ ತಿಂಗಳಲ್ಲಿ ಮೊಸರು ಬಳಸುವಂತಿಲ್ಲ. ಈ ತಿಂಗಳು ಜಿಟಿಪಿಟಿ ಮಳೆಗಾಲ, ಮೊಸರು ದೇಹಕ್ಕೆ ಒಗ್ಗುವುದಿಲ್ಲ. ಬದಲಿಗೆ ಶೀತವಾಗಿ ಕಾಡುತ್ತದೆ. ಹಾಗಾಗಿ ಮೊಸರಿಗೆ ನಿಷೇಧವಿದೆ.
ಮೂರನೆಯ ತಿಂಗಳು ಕ್ಷೀರ ವ್ರತ. ಈ ತಿಂಗಳು ಹಾಲು ಬಳಸುವಂತಿಲ್ಲ. ಈ ತಿಂಗಳಲ್ಲಿ ಮಳೆಯೂ ಉಂಟು ಬಿಸಿಲೂ ಉಂಟು. ಹಾಲು ಸೇವಿಸಿದರೆ ಶ್ವಾಸಕೋಶದಲ್ಲಿ ಕಫ ಕಟ್ಟುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ ಈ ತಿಂಗಳು ಹಾಲು ಬಳಕೆ ನಿಷೇಧಿಸಲಾಗಿದೆ.
ಕೊನೆಯ ತಿಂಗಳು ದ್ವಿದಳ ಧಾನ್ಯ ವ್ರತ. ಈ ತಿಂಗಳಲ್ಲಿ ರಾಗಿ, ಭತ್ತ, ಜೋಳ, ತೆಂಗು, ಬಾಳೆ ಇತ್ಯಾದಿ ಏಕದಳ ಪದಾರ್ಥಗಳನ್ನು ಬಳಸಬಹುದು. ದ್ವಿದಳ ಧಾನ್ಯಗಳಾದ ತೊಗರಿ, ಅಲಸಂದೆ, ಎಳ್ಳು, ಕಡಲೇ, ಹೆಸರು, ಉದ್ದು ಇತ್ಯಾದಿ ಧಾನ್ಯಗಳನ್ನು ಬಳಸುವಂತಿಲ್ಲ. ಮುಂಗಾರಿನಲ್ಲಿ ಬೆಳೆದ ಈ ದ್ವಿದಳ ಧಾನ್ಯಗಳಲ್ಲಿ ಉಷ್ಣಾಂಶ ಹೆಚ್ಚಿರುತ್ತದೆ. ಹಾಗಾಗಿ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಭಾವನೆಯಿಂದ ನಿಷೇಧ ಹೇರಲಾಗಿದೆ. ಈ ಆಚರಣೆಗಳನ್ನು ನಮ್ಮ ಪೂರ್ವಿಕರು ಧಾರ್ಮಿಕ ಹಿನ್ನೆಲೆಯಲ್ಲಿ ಆಚರಣೆಗೆ ತಂದರಾದರೂ ಇವುಗಳಲ್ಲಿ ವೈಜ್ಞಾನಿಕ ನೆಲೆಗಟ್ಟಿದೆ. ಧರ್ಮ ಹಾಗೂ ವಿಜ್ಞಾನ ಒಂದಕ್ಕೊಂದು ಬೆಸೆದುಕೊಂಡಿವೆ.
ಇಂತಹ ಧಾರ್ಮಿಕ ಹಾಗೂ ವೈಜ್ಞಾನಿಕವಾಗಿ ನಮ್ಮನ್ನು ಕಾಯುವ ಈ ಆಚರಣೆಗಳನ್ನು ನಾವು ಪಾಲಿಸೋಣ.