ಗುರು ಪೂರ್ಣಿಮೆ ಆಚರಣೆ ದಿನ : ಆದಿತ್ಯವಾರ, 21 ಜುಲೈ 2024
ಆಷಾಢ ಮಾಸದ ಹುಣ್ಣಿಮೆಯನ್ನು ಗುರು ಪೂರ್ಣಿಮೆ ದಿನವನ್ನಾಗಿ ಆಚರಿಸುತ್ತಾರೆ. ಈ ದಿನ ಸಾಧನೆ ಮಾಡುವವರ ಜೀವನದಲ್ಲಿ ಮಹತ್ವದ ಉತ್ಸವ. ಈ ವಿಶೇಷ ದಿನದಂದು, ಹಿಂದೂಗಳು ಮತ್ತು ಬೌದ್ಧರು ತಮ್ಮ ಗುರುವಿಗೆ ಪೂಜೆ ಸಲ್ಲಿಸುತ್ತಾರೆ. ಗುರುಪೂರ್ಣಿಮೆಯ ದಿನ ಗುರು ಸೂತ್ರದ ಪ್ರಭಾವ ಬೇರೆ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಗುರು ಅನ್ನುವ ಶಬ್ದ ಗು ಮತ್ತು ರು ಅನ್ನುವ ಮೂಲ ಪದಗಳನ್ನು ಹೊಂದಿದೆ. ಸಂಸ್ಕೃತ ಭಾಷೆಯಲ್ಲಿ ಗು ಅಂದರೆ ಅಂಧಕಾರ ಅಥವಾ ಅಜ್ಞಾನ. ರು ಅಂದರೆ ಕಳೆಯುವ ಅಥವಾ ದೂರ ಮಾಡುವ ಎಂದರ್ಥ. ಅದಕ್ಕೆ ಗುರು ಅಂದರೆ ಅಂಧಕಾರ ಅಥವಾ ಅಜ್ಞಾನವನ್ನು ದೂರ ಮಾಡುವವರು ಎಂದರ್ಥ. ಬಹುತೇಕ ಜನರು ಗುರುವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸುತ್ತಾರೆ. ಒಬ್ಬ ವ್ಯಕ್ತಿಯನ್ನು ಅಜ್ಞಾನದ ಅಂಧಕಾರದಿಂದ ಹೊರತರುವ ಮೂಲಕ ಆತನಿಗೆ ಸರಿಯಾದ ಮಾರ್ಗವನ್ನು ತೋರಿಸುವವನೇ ಗುರು. ಮನುಷ್ಯ ಜನ್ಮವನ್ನು ಸಾರ್ಥಕ ಮಾಡಿಕೊಳ್ಳುವುದಕ್ಕೆ ಹಾಗೂ ಜೀವನದ ಪ್ರಮುಖ ಹಾದಿಯನ್ನು ಹಾಕಿ ಕೊಟ್ಟಂತಹ ಗುರುಗಳಿಗೆ ನಾವು ಯಾವ ವಿಧದಲ್ಲಿ ಸೇವೆ ಮಾಡಿದರೂ ತೀರಾ ಕಮ್ಮಿ.
ಗುರು ಪೂರ್ಣಿಮೆ ಮಹತ್ವ:
ಬೌದ್ಧರು ಸಾಂಪ್ರದಾಯಿಕವಾಗಿ ಈ ಹಬ್ಬವನ್ನು ಗೌತಮ ಬುದ್ಧನ ಪ್ರಥಮ ಧರ್ಮೋಪದೇಶದ ಅಂಗವಾಗಿ ಆಚರಿಸುತ್ತಾರೆ. ಈ ದಿನ ಗೌತಮ ಬುದ್ಧನು ಉತ್ತರ ಪ್ರದೇಶದ ಸಾರನಾಥದಲ್ಲಿ ತನ್ನ ಪ್ರಥಮ ಧರ್ಮೋಪದೇಶ ನೀಡಿದ. ಯೋಗ ಸಂಪ್ರದಾಯದಲ್ಲಿ ಈ ದಿನವನ್ನು ಶಿವನು ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಧಾರೆಯೆರೆದು ಪ್ರಥಮ ಗುರು ಆದ ದಿನ ಎಂಬ ನಂಬಿಕೆಯಿಂದ ಆಚರಿಸುತ್ತಾರೆ.
ಗುರುಪೂರ್ಣಿಮೆಯನ್ನು “ವ್ಯಾಸ ಪೂರ್ಣಿಮಾ” ಎಂದೂ ಕರೆಯುತ್ತಾರೆ. ಮಹರ್ಷಿ ವೇದವ್ಯಾಸರು ಸುಲಭವಾಗಿ ಅರ್ಥಮಾಡಿಕೊಳ್ಳಲು ಏಕ ವೇದವನ್ನು 4 ವೇದಗಳಾಗಿ ವಿಂಗಡಿಸಿದ್ದಾರೆ ಮತ್ತು ವೇದಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿರುವುದರಿಂದ, ಅವರ ಕೆಲಸವನ್ನು ಗೌರವಿಸಲು, ಈ ದಿನವನ್ನು ವ್ಯಾಸ ಪೂರ್ಣಿಮಾ ಎಂದು ಆಚರಿಸಲಾಗುತ್ತದೆ. ಸನಾತನ ಧರ್ಮದಲ್ಲಿ, ಮಹರ್ಷಿ ವೇದ ವ್ಯಾಸರು ಮೊದಲ ಗುರು ಸ್ಥಾನವನ್ನು ಪಡೆದಿದ್ದಾರೆ. ಏಕೆಂದರೆ ಅವರು ಮಾನವ ಜನಾಂಗಕ್ಕೆ ವೇದಗಳನ್ನು ಕಲಿಸಿದವರಾಗಿದ್ದಾರೆ. ಇದಲ್ಲದೇ, ಮಹರ್ಷಿ ವೇದ ವ್ಯಾಸರು ಶ್ರೀಮದ್ ಭಾಗವತ, ಮಹಾಭಾರತ, ಬ್ರಹ್ಮಸೂತ್ರ, ಮೀಮಾಂಸಗಳನ್ನು ಹೊರತುಪಡಿಸಿ 18 ಪುರಾಣಗಳ ಕರ್ತೃ ಎಂದು ಪರಿಗಣಿಸಲಾಗಿದೆ. ಮಹರ್ಷಿ ವೇದವ್ಯಾಸರಿಗೆ ಆದಿ ಗುರುವಿನ ಸ್ಥಾನಮಾನ ನೀಡಲು ಮತ್ತು ಗುರು ಪೂರ್ಣಿಮೆಯ ದಿನದಂದು ಮಹರ್ಷಿ ವೇದವ್ಯಾಸರನ್ನು ವಿಶೇಷವಾಗಿ ಪೂಜಿಸಲೂ ಇದು ಕಾರಣವಾಗಿದೆ.