ಅಕ್ಷಯ ತೃತೀಯ | ಅಕ್ಷಯ ತದಿಗೆ ಆಚರಣೆ ದಿನ : ಬುಧವಾರ, 30 ಏಪ್ರಿಲ್ 2025
ವೈಶಾಖ ಮಾಸದ ಶುಕ್ಲಪಕ್ಷದ ತದಿಗೆಯನ್ನು ಅಕ್ಷಯ ತೃತೀಯ ಅಥವಾ ಅಕ್ಷಯ ತದಿಗೆ ಎಂದು ಆಚರಿಸುತ್ತಾರೆ. ಅಕ್ಷಯ ಎಂದರೆ ಕ್ಷಯಿಸದೆ, ವೃದ್ಧಿಯಾಗುವುದು ಎಂದು ಅರ್ಥ. ಈ ಅಕ್ಷಯ ತೃತೀಯದ ದಿನ ರವಿ ಮತ್ತು ಚಂದ್ರ ಏಕಕಾಲದಲ್ಲಿ ಅತ್ಯುಚ್ಚ ಪ್ರಮಾಣ ತಲುಪಿ ಉಚ್ಚರಾಶಿಯಲ್ಲಿ ಉಜ್ವಲತೆ ಉಂಟಾಗುವುದರಿಂದ ಎಲ್ಲಾ ಶುಭ ಕಾರ್ಯಗಳಿಗೆ ಅತ್ಯಂತ ಪ್ರಶಸ್ತವಾಗಿರುತ್ತದೆ. ರವಿ ಆತ್ಮ ಮತ್ತು ದೇಹಕಾರಕ, ಚಂದ್ರ ಮನಸ್ಸುಕಾರಕ, ದೇಹ ಮತ್ತು ಮನಸ್ಸು ಪರಿಪೂರ್ಣತೆಯನ್ನು ಹೊಂದುವ ದಿವಸವಾಗಿದೆ.
ಅಕ್ಷರಾಭ್ಯಾಸ, ಮದುವೆ,ಉಪನಯನ, ಗೃಹಪ್ರವೇಶ, ಹೊಸ ವ್ಯವಹಾರ ಆರಂಭ, ಎಲ್ಲದಕ್ಕೂ ಸುಮುಹೂರ್ತದ, ಪಂಚಾಂಗಶುದ್ಧಿಯ ದಿನವೆಂದು ಪರಿಗಣಿಸಲ್ಪಟ್ಟಿದೆ. ಈ ದಿವಸ ಯಾವುದೇ ಶುಭ ಕೆಲಸವನ್ನು ಮಾಡಿದರೆ, ಅಕ್ಷಯವಾಗಿ ಪರಿಣಮಿಸುವುದು. ಜೀವನದಲ್ಲಿ ಹೊಸದಾದ ಉತ್ತಮ ಕೆಲಸಗಳನ್ನು ಈ ದಿನ ಪ್ರಾರಂಭಿಸುವುದು ಶುಭಕರ. ಈ ತೃತೀಯ ತಿಥಿಯ ಜೊತೆ ರೋಹಿಣಿ ನಕ್ಷತ್ರವಿದ್ದರೆ, ಮಹಾ ಪುಣ್ಯಕರವೆಂದು ಪುರಾಣಗಳು ಹೇಳುತ್ತವೆ. ಈ ಶುಭ ದಿವಸದಂದು ವಿಷ್ಣು ತನ್ನ ಪತ್ನಿ ಲಕ್ಷ್ಮಿಯೊಡಗೂಡಿ ಗಂಗಾದೇವಿಗೆ ಪೂಜೆ ಸಲ್ಲಿಸಿದ್ದರಿಂದ, ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಸಕಲ ದೋಷ ಪರಿಹಾರವಾಗುತ್ತದೆಂದು ಪ್ರತೀತಿ ಇದೆ. ಈ ದಿವಸ ಮಹಾವಿಷ್ಣುವಿನ ಪೂಜೆ ಮಾಡಿದರೆ ಸಕಲ ಭವಬಂಧನಗಳಿಂದ ಮುಕ್ತಿ ದೊರೆಯುವುದೆಂಬ ನಂಬಿಕೆಯಿದೆ.
ಶ್ರೀ ಕೃಷ್ಣ ಪರಮಾತ್ಮನೇ ಅಕ್ಷಯ ತೃತೀಯದ ಅಸಾಧಾರಣ ಮಹಿಮೆ ಗಳನ್ನು ವರ್ಣಿಸಿದ್ದಾರೆ. ಗಂಗಾ ಸ್ನಾನಕ್ಕೆ ಮತ್ತು ಶ್ರೀ ಕೃಷ್ಣನನ್ನು ಧೂಪ ದೀಪ, ಪುಷ್ಪಗಳಿಂದ ಮತ್ತು ವಿಶೇಷವಾಗಿ ಚಂದನಲೇಪದಿಂದ ಅರ್ಚನೆ ಮಾಡುವುದು ಇಂದಿನ ವಿಶೇಷ. ಈ ದಿನದಂದು ನಾವು ಆಚರಿಸುವ ಸಂಕಲ್ಪ ಪೂರ್ವಕ ಸ್ನಾನ, ಜಪ ತಪ, ಅಧ್ಯಯನ, ತರ್ಪಣ, ದಾನಾದಿಗಳೆಲ್ಲವೂ ಅಕ್ಷಯವಾದ ಫಲವನ್ನು ನೀಡುವುದರಿಂದ “ಇಂದಿನ ಶುಭ ದಿನವನ್ನು ಅಕ್ಷಯ ತೃತೀಯ”ಎಂದು ಕರೆಯಲ್ಪಡುವುದು. ಇಂದಿನ ಶುಭ ದಿನವನ್ನು ಜಪ ತಪ ದಾನಗಳಿಂದ ಗೋಮಾತೆಗೆ ಗೋಗ್ರಾಸ ನೀಡಿ ಪೂಜಿಸುವುದರಿಂದ ನಮ್ಮ ಪುಣ್ಯದ ಫಲಗಳು ಅಕ್ಷಯವಾಗಿ ಶ್ರೀ ಹರಿಯ ಮತ್ತು ಶ್ರೀ ಮಹಾಲಕ್ಷ್ಮಿ ದೇವಿಯ ಕೃಪಾಕಟಾಕ್ಷವನ್ನು ಪಡೆಯುವ ಶುಭ ದಿನ.
ಅಕ್ಷಯ ತೃತೀಯ – ಬಂಗಾರ ಕೊಂಡಿಟ್ಟುಕೊಳ್ಳಿ ಎನ್ನುತ್ತಾರೆ ಮನೆಯಲ್ಲಿ ಹಿರಿಯರು. ಏನದು ಬಂಗಾರ? ಎಂಥ ಬಂಗಾರ? ಆಭರಣದ ಬಂಗಾರವಾದರೆ – ಅದು ತಾತ್ಕಾಲಿಕ. ಇಂದು ನಮ್ಮದು, ನಾಳೆ ಮತ್ತೊಬ್ಬರದು. ಶಾಶ್ವತ, ನಾಶವಾಗದ ಬಂಗಾರ ಕೊಳ್ಳಿ ಎನ್ನುತ್ತಾರೆ ಜ್ಞಾನಿಗಳು.
‘ ರಂಗನಾಥನ ದಿವ್ಯ ಮಂಗಳ ನಾಮವೆಂಬ ಬಂಗಾರವಿಡಬಾರೆ’ ಇದು ನಿನಗೊಪ್ಪುವ ಬಂಗಾರ ಇದನ್ನೇ ಇಡು, ತೊಡು. ಶಾಶ್ವತ ಸುಖ ಸೂರಾಡು – ಎನ್ನುತ್ತಾರೆ ಪುರಂದರವಿಠಲನಿಗೆ ಅತಿ ಪ್ರಿಯದಾಸರು.
ಹರಿನಾಮ ತಂದು ಕೊಡುವಂಥ ಸುಖವೇ ನಿಜವಾದ ಬಂಗಾರದಂಥ ಸುಖ. ಅದಕ್ಕೂ ಮಿಗಿಲೂ ಹೌದು. ಯಾಕೆ?
ಕಲಿಯುಗದಲ್ಲಿ ಹರಿನಾಮವೇ ಸಾಧಕ, ಮತ್ತೆ ತಾರಕ. ಶರೀರ ನಾಶವಾಗುತ್ತದೆ. ಅದಕ್ಕಾಗಿ ಶರೀರ ವಿರುವವರೆಲ್ಲಾ ಕ್ಷರರು. ಲಕ್ಷ್ಮೀದೇವಿ ಅಪ್ರಾಕೃತ ಶರೀರೆ. ನಾಶವಿಲ್ಲ ಅವಳ ಶರೀರಕ್ಕೆ. ಅವಳು ‘ಅಕ್ಷರ’ಳು. ಈ ಕ್ಷರ ಅಕ್ಷರರಿಗಿಂತ ನಾನು ಉತ್ತಮ, ಪುರುಷೋತ್ತಮ. ಎಂದು ಸರ್ವೋತ್ತಮ ಶ್ರೀ ಕೃಷ್ಣ ಗೀತೆಯಲ್ಲಿ ಸಾರುತ್ತಾನೆ. ಶ್ರೀ ಹರಿಯೇ ಕೃಷ್ಣ. ಅದಕ್ಕಾಗಿ ಹರಿನಾಮವೇ ಶ್ರೇಷ್ಠ. ಅದುವೇ ಬಂಗಾರ. ಅದಕ್ಕಾಗಿ ಈ ಬಂಗಾರ ಕೊಂಡುಕೊಳ್ಳಿ. ಹರಿನಾಮ ನಾಲಿಗೆ ಮೇಲಿರಲಿ ಎನ್ನುತ್ತಾರೆ ಹಿರಿಯರು.
ಅಕ್ಷಯ ತೃತಿಯದ ವಿಶೇಷತೆ:
- ಅಕ್ಷಯ ತೃತೀಯ ದಿನದಂದೇ ಮಹರ್ಷಿ ವೇದವ್ಯಾಸರು ಗಣಪತಿಯ ಅಮೃತಹಸ್ತದಿಂದ ಮಹಾಭಾರತ ಮಹಾಕಾವ್ಯದ ಲೇಖನ ಕಾರ್ಯವನ್ನು ಆರಂಭಿಸಿದರು.
- ಶ್ರೀ ಮಹಾವಿಷ್ಣುವು ಪರಶುರಾಮನಾಗಿ ಅವತಾರವೆತ್ತಿದ್ದು ಇದೇ ದಿನ.
- ಶ್ರೀಕೃಷ್ಣನ ಅಣ್ಣ ಬಲರಾಮ ಜನಿಸಿದ್ದು ಅಕ್ಷಯ ತೃತೀಯ ದಿನದಂದು.
- ಪಾಂಡವರು ಸೂರ್ಯ ದೇವರಿಂದ ಅಕ್ಷಯ ಪಾತ್ರೆಯನ್ನು ಪಡೆದ ದಿನ.
- ದುರ್ಯೋಧನನ ದುಷ್ಟ ಬೋಧನೆಗೆ ಒಳಗಾಗಿ ದೂರ್ವಾಸರು ತಮ್ಮ ಸಹಸ್ರಾರು ಶಿಷ್ಯರೊಂದಿಗೆ ವನವಾಸದಲ್ಲಿದ್ದ ಪಾಂಡವರಲ್ಲಿದ್ದ ಕಡೆಗೆ ಭೋಜನ ಮಾಡಲು ಅಕ್ಷಯಪಾತ್ರೆ ಸಮಯ ಮೀರಿದಮೇಲೆ ಬಂದರು. ಕೊನೆಗೆ ದ್ರೌಪತಿ ಶ್ರೀಕೃಷ್ಣ ದೇವರನ್ನ ಪ್ರಾರ್ಥನೆಮಾಡಿದಳು. ದ್ರೌಪತಿ ಕರೆದರೇ ಬಾರನೆ ? ಬಂದವನೇ ತಕ್ಷಣ ತನಗೂ ಹಸಿವೆ ಆಗಿದೆ ಏನಾದರೂ ಕೊಡು ಎಂದು ಕೇಳಿದಾಗ, ಮುಗಿದು ಹೋಗಿದೆ ಎಂದು ಹೇಳಲು ಸಂಕೋಚ ಪಡುತ್ತಿದ್ದ ಅಂತಹ ದ್ರೌಪದಿಗೆ ಪಾತ್ರೆಯ ಕೊನೆಯ ಭಾಗದಲ್ಲಿ ಇರುವಂತಹ ಒಂದೇ ಒಂದು ಅಗುಳು ಅನ್ನವನ್ನೇ ಅಕ್ಷಯವನ್ನಾಗಿ ಮಾಡಿ ದಂತಹ ಅದೇ ದಿನವೇ ಅಕ್ಷಯ ತೃತೀಯ.
- ಶ್ರೀ ಕೃಷ್ಣ ಪರಮಾತ್ಮನ ಸ್ನೇಹಿತನಾದ ಕುಚೇಲನು ತನ್ನಲ್ಲಿರುವ ಸ್ವಲ್ಪವೇ ಅವಲಕ್ಕಿಯನ್ನು ತನ್ನ ಪ್ರೀತಿ ಪಾತ್ರ ಸ್ನೇಹಿತನಿಗಾಗಿ ತೆಗೆದುಕೊಂಡು ಹೋಗಿ ಸಮರ್ಪಿಸಿದ ದಿನ . ಅಂದು ಶ್ರೀಕೃಷ್ಣ ಪರಮಾತ್ಮ ಕುಚೇಲನು ನೀಡಿದ ಹಿಡಿ ಅವಲಕ್ಕಿಯನ್ನು ಸ್ವೀಕರಿಸಿ ಅವನಿಗೆ ಐಶ್ವರ್ಯಗಳು ಪ್ರಾಪ್ತಿಯಾಗಿ ಸುಧಾಮನಾದ.
- ಭಗೀರಥನ ಪ್ರಯತ್ನದಿಂದ ಈಶ್ವರನ ಜಟೆಯಲ್ಲಿ ಇದ್ದಂತಹ ಗಂಗಾಮಾತೆಯು ಪವಿತ್ರನದಿಯಾಗಿ ಸ್ವರ್ಗದಿಂದ ಧರೆಗಿಳಿದ ದಿನವಿದು.
- ಸಂಪತ್ತಿನ ಒಡೆಯ, ದೇವತೆಗಳಲ್ಲಿಯೇ ಅತಿ ಶ್ರೀಮಂತ, ಅಷ್ಟದಿಕ್ಪಾಲಕರಲ್ಲಿ ಒಬ್ಬನಾದ ಯಕ್ಷರಾಜನಾದ ಕುಬೇರನು ಮಹಾಲಕ್ಷ್ಮಿಯನ್ನು ಪೂಜಿಸುವ ಶುಭದಿನ ಅಕ್ಷಯ ತೃತೀಯ.
- ತ್ರೇತಾಯುಗ ಆರಂಭವಾದುದು ಇದೇ ದಿನದಂದು ಎಂಬ ನಂಬಿಕೆ ಜನಮಾನಸದಲ್ಲಿದೆ.
- ಪರಮ ಪವಿತ್ರಳಾದ ಸೀತಾದೇವಿಯ ಅಗ್ನಿ ಪರೀಕ್ಷೆಯಿಂದ ಬಾಹ್ಯವಾಗಿಯೂ ತಾನು ಪರಿಶುದ್ಧಳು ಎಂಬುದನ್ನು ಜಗತ್ತಿಗೆ ಪ್ರಕಟಿಸಿದ್ದೂ ಅಕ್ಷಯ ತೃತೀಯ ದಿನ.
- ಮಹಾಲಕ್ಷ್ಮಿಯನ್ನು ಆರಾಧಿಸಿ ಕುಬೇರನು ಅಕ್ಷಯ ತೃತೀಯ ದಿನವೇ ಅಷ್ಟೈಶ್ವರ್ಯವ ಪಡೆದನು.
- ಲಂಕಾನಗರವು ಯಾರದು? ಎಂದು ಕೕೆಳಿದರೆ ಸಾಮಾನ್ಯವಾಗಿ ಎಲ್ಲರೂ ಕೊಡುವ ಉತ್ತರ ರಾವಣ, ಎಂದು. ವಾಸ್ತವವೆಂದರೆ ಲಂಕೆಯನ್ನು ನಿರ್ಮಿಸಿದವನು ಕುಬೇರ, ರಾವಣನ ಅಣ್ಣ. ರಾವಣ ಅಣ್ಣನಿಂದ, ಲಂಕಾನಗರವನ್ನು ವಶಪಡಿಸಿಕೊಂಡು, ಕುಬೇರನನ್ನು ಉತ್ತರದಿಕ್ಕಿಗೆ ಓಡಿಸಿ ತಾನು ಲಂಕೇಶನಾದ. ಕುಬೇರನು ಲಂಕಾನಗರವನ್ನು ನಿರ್ಮಾಣ ಮಾಡಿಸುವಾಗ ಅಕ್ಷಯ ತೃತಿಯದಂದು ಸುವರ್ಣ ವಿಶ್ವಕರ್ಮರಿಂದ ಭೂಮಿಪೂಜೆಯನ್ನು ಮಾಡಿಸಿದ್ದನು. ಇದರಿಂದ ಲಂಕಾನಗರವು ಸ್ವರ್ಣಲಂಕೆಯಾಯಿತು ಎಂದು ರಾಮಯಣದಲ್ಲಿ ಹೇಳಿದೆ.
- ೧೨ನೇ ಶತಮಾನದ ಮಹಾಪುರುಷ ಜಗಜ್ಯೋತಿ ಬಸವೇಶ್ವರರು ಜನಿಸಿದ್ದು ಇದೇ ದಿನದಂದು.
ಅಕ್ಷಯ ತೃತೀಯದಂದು ದಾನ ಮಾಡುವುದರಿಂದ ಸಿಗುವ ಫಲಗಳು:
- ಅರಿಶಿನ ಕುಂಕುಮ ಹಾಗೂ ತಾಂಬೂಲವನ್ನು ದಾನ ಮಾಡಿದರೆ ರಾಜಯೋಗ ಪ್ರಾಪ್ತಿ ಆಗುತ್ತದೆ.
- ಕುಂಕುಮವನ್ನು ದಾನ ಮಾಡುವುದರಿಂದ ಪತಿಗೆ ಆಯುಷ್ಯ ಹಾಗೂ ಉನ್ನತ ಪದವಿ.
- ಚಂದನವನ್ನು ದಾನ ಮಾಡುವುದರಿಂದ ಶತ್ರುಗಳಿಂದ ಹಾಗೂ ವಾಹನಗಳಿಂದ ಅಪಾಯ ಇಲ್ಲ
- ನಾರಿ ಕೇಳವನ್ನು ದಾನ ಮಾಡುವುದರಿಂದ ಕೊನೆಯ ಏಳು ಪಿತೃ ಗಳಿಗೆ ನರಕದಿಂದ ವಿಮುಕ್ತಿ.
- ಹೊಸ ಬಟ್ಟೆ ದಾನ ಮಾಡಿದರೆ ಆರೋಗ್ಯ ವೃದ್ಧಿಯಾಗುತ್ತದೆ.
- ಹಾಸಿಗೆ ದಾನ ಮಾಡಿದರೆ ಜೀವನದ ಉದ್ದಕ್ಕೂ ಬರುವ ಸಂಕಷ್ಟಗಳು ನೀಗಿ ಸುಖ ಸಂತೋಷಗಳು ಪ್ರಾಪ್ತಿಯಾಗುತ್ತದೆ.
- ತಾವರೆ ಹೂವು ದಾನ ಮಾಡಿದರೆ ಮಹಾ ವಿಷ್ಣುವಿನ ಕೃಪೆಯಾಗುತ್ತದೆ
- ಮಜ್ಜಿಗೆಯನ್ನು ದಾನ ಮಾಡುವುದರಿಂದ 64 ವಿದ್ಯೆಗಳಲ್ಲಿ ನಮಗೆ ಅವಶ್ಯವಿರುವ ವಿದ್ಯೆ ಸುಸೂತ್ರವಾಗಿ ಒಲಿಯುತ್ತದೆ
- ನವದಾನ್ಯವನ್ನು ದಾನ ಮಾಡುವುದರಿಂದ ಮೃತ್ಯು, ಅಫಘಾತ, ಅಪಾಯದಿಂದ ಪಾರು.
- ಮೊಸರನ್ನವನ್ನು ದಾನ ಮಾಡುವುದರಿಂದ ಆಯುಷ್ಯ ವೃದ್ಧಿ.
- ಗೋವಿಗೆ ಪೂಜಿಸಿ ಬಾಳೆ ಎಲೆಯಲ್ಲಿ ಸಿಹಿ ತಿನ್ನಿಸುವುದರಿಂದ ವಿವಾಹ ಸಂಬಂಧಿ ದೋಷಗಳು ದೂರವಾಗುತ್ತವೆ.