ಪರಶುರಾಮ ಜಯಂತಿಯ ಮಹತ್ವ

0Shares

ಪರಶುರಾಮ ಜಯಂತಿ ಆಚರಣೆ ದಿನ : ಶನಿವಾರ, 22 ಏಪ್ರಿಲ್ 2023

ಲೋಕಕಂಟಕರಾಗಿ ಮುಗ್ಧ ಜನರ ಮೇಲೆ ಹಾವಳಿ ಮಾಡುತ್ತಿದ್ದ ಕ್ಷತ್ರಿಯ ಕುಲವನ್ನೇ ನಾಶಮಾಡಲು ವಿಷ್ಣು ದೇವರು ಪರಶುದೇವರ ಅವತಾರಿಯಾಗಿ ಭುವಿಯಲ್ಲಿ ಅವತರಿಸಿದ ದಿನವನ್ನು ಪರಶುರಾಮ ಜಯಂತಿ ಎಂದು ಆಚರಿಸುತ್ತಾರೆ. ವೈಶಾಖ ಮಾಸದ ಮೂರನೇ ದಿನ ಅಂದರೆ ಶುಕ್ಲ ಪಕ್ಷದ ತದಿಗೆ ತಿಥಿಯಂದು ಪರಶುರಾಮ ಜಯಂತಿ ಆಚರಿಸಲಾಗುತ್ತದೆ.

ಪರಶುರಾಮ ಜಯಂತಿ ಮಹತ್ವ

ಪರಶುರಾಮರು ಶ್ರೀಮಹಾವಿಷ್ಣುವಿನ 6 ನೇ ಅವತಾರ. ಇವರು ಜಮದಗ್ನಿ ಮಹರ್ಷಿ ಹಾಗೂ ರೇಣುಕಾದೇವಿಯರ ಸುಪುತ್ರರಾಗಿ, ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದಬಳಿಯ ಪರಶುಘಡದಲ್ಲಿ ಜನ್ಮತಾಳಿದರು ಎನ್ನಲಾಗಿದೆ. ಇವರಿಗೆ ರುಮಣ್ವಂತ, ಸುಷೇಣ, ವಸು, ವಿಶ್ವಾವಸು ಎಂಬ ನಾಲ್ಕು ಜನ ಸಹೋದರರಿದ್ದರು. ಇವರ ಮೂಲ ಹೆಸರು “ಭಾರ್ಗವರಾಮ” (ಭೃಗು ವಂಶದವನಾದ ಹಾಗೂ ಋಷಿಗಳ ಮನಸ್ಸನ್ನು ರಮಿಸುವವ).

ಬಾಲ್ಯದಲ್ಲೇ ಕ್ಷಾತ್ರ ವಿದ್ಯೆ ಸೇರಿದಂತೆ ಸಕಲ ವಿದ್ಯೆಗಳನ್ನು ಕಲಿತಿದ್ದರು. ನಂತರ ತಪಸ್ಸು ಮಾಡಿ, ತನ್ನ ಮೂಲರೂಪವಾದ ಮಹಾವಿಷ್ಣುವಿನಿಂದ “ಪರಶು” (ಕೊಡಲಿ) ಪಡೆಯುತ್ತಾರೆ. ಅಂದಿನಿಂದ ಪರಶುರಾಮ ಎಂದು ಕರೆಯಲಾಗುತ್ತದೆ. ಹಿಂದೂ ಧರ್ಮದ ಏಳು ಚಿರಂಜೀವಿಗಳ ಪೈಕಿ ಇವರು ಒಬ್ಬರು.
ಒಮ್ಮೆ ಪರಶುರಾಮನ ತಾಯಿ ರೇಣುಕಾದೇವಿ ನೀರು ತರಲು ನದಿಗೆ ಹೋಗಿದ್ದಾಗ, ಗಂಧರ್ವ ರಾಜ ಚಿತ್ರರಥನು ಅಪ್ಸರೆಯರೊಂದಿಗೆ ಅಲ್ಲಿ ಇರುತ್ತಾನೆ. ಒಂದು ಕ್ಷಣ ಮೈಮರೆತು ತನಗೂ ಆ ವೈಭೋಗ ಇದ್ದಿದ್ದರೆ ಚೆನ್ನಾಗಿತ್ತು ಎಂದುಕೊಳ್ಳುತ್ತಾರೆ. ಅದು ಜಮದಗ್ನಿಗಳಿಗೆ ದಿವ್ಯ ದೃಷ್ಟಿಗೆ ತಿಳಿದು ಅವರು ಕೋಪಗೊಳ್ಳುತ್ತಾರೆ. ತಮ್ಮ ಮಕ್ಕಳನ್ನು ಕರೆದು ನಿಮ್ಮ ತಾಯಿಯನ್ನು ಕೊಲ್ಲಿ’ ಎಂದು ಆದೇಶಿಸುತ್ತಾರೆ. ಮಾತೃ ಹತ್ಯೆ ಮಾಡುವುದೇ? ಅಂತಹ ಪಾಪ ಮಾಡಲಾರೆ’ ಎಂದು ಎಲ್ಲ ಮಕ್ಕಳೂ ಹೇಳಲು, ಜಮದಗ್ನಿಯು ಆಗ ತನ್ನ ಆಜ್ಞೆಯನ್ನು ಉಲ್ಲಂಘಿಸಿದ ತನ್ನ ಮಕ್ಕಳನ್ನು ಮತ್ತು ಹೆಂಡತಿಯನ್ನು ಕೊಲ್ಲಲು ತನ್ನ ಕೊನೆಯ ಮಗನಾದ ಪರಶುರಾಮನಿಗೆ ಆದೇಶಿಸುತ್ತಾರೆ. ತನ್ನ ತಂದೆಯ ಶಕ್ತಿಯನ್ನು ಅರಿತ ಪರಶುರಾಮನು ತನ್ನ ತಾಯಿ ಮತ್ತು ತನ್ನ ಅಣ್ಣಂದಿರನ್ನು ತಕ್ಷಣ ಕೊಲ್ಲುತ್ತಾನೆ. ಜಮದಗ್ನಿಯು ಸಂತಸಗೊಂಡು, ಮಗನಿಗೆ ವರವನ್ನು ಕೇಳು ನೀಡುವೆ ಎನ್ನುತ್ತಾರೆ. ಪರಶುರಾಮನು ತನ್ನ ತಾಯಿ ಮತ್ತು ಸಹೋದರರು ಮತ್ತೆ ಬದುಕಲಿ ಮತ್ತು ನನ್ನಿಂದ ಹತರಾಗಿರುವುದು ಅವರ ಸ್ಮರಣೆಗೆ ಬಾರದಿರಲಿ ಎಂದು ವರವನ್ನು ಕೇಳಿದನು. ಆಗ ಪರಶುರಾಮನ ತಾಯಿ ಮತ್ತು ಸಹೋದರರು ಗಾಢ ನಿದ್ರೆಯಿಂದ ಎದ್ದಂತೆ ಆನಂದದಿಂದ ಎದ್ದು ನಿಂತರು.
ಪರಶುರಾಮ ಅವತಾರ
ಒಮ್ಮೆ ರಾಜ ಕಾರ್ತವೀರ್ಯಾರ್ಜುನ ತನ್ನ ಪರಿವಾರದೊಂದಿಗೆ ಜಮದಗ್ನಿ ಆಶ್ರಮಕ್ಕೆ ಬಂದಾಗ, ಮಹಾ ಋಷಿಯು ತನ್ನ ಅತಿಥಿಗಳನ್ನು ಸತ್ಕರಿಸುತ್ತಾರೆ. ಇಷ್ಟೆಲ್ಲಾ ಮಾಡಲು ಹೇಗೆ ಸಾಧ್ಯವಾಯಿತು ಎಂದು ವಿಚಾರಿಸಿದಾಗ, ಜಮದಗ್ನಿಗಳ ಬಳಿ ಇರುವ ಕಾಮಧೇನುವೇ ಕಾರಣ ಎಂದು ತಿಳಿಯಿತು. ಕಾರ್ತವೀರ್ಯಾರ್ಜುನ ತನಗೇ ಆ ಕಾಮಧೇನುವನ್ನು ಕೊಡಲು ಕೇಳಿದಾಗ, ಜಮದಗ್ನಿಯು ಸಾಧ್ಯವಿಲ್ಲವೆನ್ನುತ್ತಾರೆ. ಆಗ ಕಾರ್ತವೀರ್ಯಾರ್ಜುನ ಕಾಮಧೇನುವನ್ನು ಕದ್ದು ಒಯ್ಯುತ್ತಾನೆ. ಒಯ್ದ ವಿಷಯ ಪರಶುರಾಮನಿಗೆ ತಿಳಿಯುತ್ತದೆ. ಕಾಮಧೇನುವನ್ನು ರಕ್ಷಿಸುವೆ’ ಎಂದು ತನ್ನ ಕೊಡಲಿ, ಬಿಲ್ಲು ಬಾಣ ಹಿಡಿದು ದೊರೆಯ ಬೆನ್ನಟ್ಟುತ್ತಾನೆ. ರಾಜ ಮತ್ತು ಪರಶುರಾಮನ ಮಧ್ಯೆ ಭೀಕರ ಕಾಳಗ ನಡೆಯುತ್ತದೆ. ರಾಜನನ್ನು ಕೊಲ್ಲುತ್ತಾನೆ. ಅನಂತರ ಪರಶುರಾಮ ಕಾಮಧೇನುವನ್ನು ಆಶ್ರಮಕ್ಕೆ ವಾಪಸು ತರುತ್ತಾನೆ. ಅಂತೂ ಕಾಮಧೇನು ವಾಪಸಾದಳು. ಜಮದಗ್ನಿಯು ಪರಶುರಾಮನ ಕೃತ್ಯ ಸರಿಯಲ್ಲ ಎಂದು ವಿವರಿಸುತ್ತಾರೆ. ಬ್ರಾಹ್ಮಣರು ಕ್ಷಮಾ ಗುಣ ಹೊಂದಿರಬೇಕು’ ಎಂದು ಹೇಳುತ್ತಾರೆ. ಪಾಪ ಪರಿಹಾರಕ್ಕೆ ತೀರ್ಥಯಾತ್ರೆಗೆ ಹೋಗು’ ಎನ್ನುತ್ತಾರೆ. ತಂದೆಯ ಸೂಚನೆಯಂತೆ ಪರಶುರಾಮ ಯಾತ್ರೆ ಹೊರಡುತ್ತಾನೆ.
ಇತ್ತ ರಾಜನ ಮಕ್ಕಳು ಕುಪಿತರಾಗಿ, ಅವರೆಲ್ಲ ಜಮದಗ್ನಿ ಆಶ್ರಮಕ್ಕೆ ಬಂದು ಜಮದಗ್ನಿಯ ಕೊಂದು ಅವರ‌ ಶಿರವನ್ನು ಒಯ್ಯುತ್ತಾರೆ. ತೀರ್ಥಯಾತ್ರೆಯಿಂದ ಹಿಂತಿರುಗಿದ ಪರಶುರಾಮನಿಗೆ ತನ್ನ ತಂದೆಯನ್ನು ಕೊಂದಿರುವುದು ತಿಳಿಯುತ್ತದೆ. ಇದರಿಂದ ಅವನಿಗೆ ತುಂಬ ಕೋಪ ಉಂಟಾಗಿ ಕ್ಷತ್ರಿಯರನ್ನೆಲ್ಲಾ ‘ಕೊಲ್ಲುವೆ’ ಎಂದು ವೀರಾವೇಶದಿಂದ ಹೊರಡುತ್ತಾನೆ. 21 ಬಾರಿ ಭೂ ಪ್ರದಕ್ಷಿಣೆ ಮಾಡಿ ದುಷ್ಟರಾದ ಎಲ್ಲ ಕ್ಷತ್ರಿಯರನ್ನೂ ಸಂಹರಿಸುವ ಮೂಲಕ ಧರ್ಮ ಸಂಸ್ಥಾಪನೆ ಮಾಡಿದನು. ಪರಶುರಾಮನು ತಂದೆಯ ಶಿರ ತಂದು ದೇಹದೊಂದಿಗೆ ಜೋಡಿಸುತ್ತಾನೆ . ಜಮದಗ್ನಿಗೆ ಪುನಃ ಜೀವ ಬರುತ್ತದೆ.
ಪರಶುರಾಮನ ಧ್ಯೇಯವು ಭಕ್ತರನ್ನು ಕಾಪಾಡುವುದು. ಪಾಪಿಷ್ಠರನ್ನು ನಾಶಪಡಿಸುವುದು. ವಿಷ್ಣುವು ಪರಶುರಾಮನ ಅವತಾರದಲ್ಲಿ 21 ಬಾರಿ ಕ್ಷತ್ರಿಯರನ್ನು ಕೊಲ್ಲುತ್ತಾನೆ. ಆದರೆ ಯಾವ ಕ್ಷತ್ರಿಯ ರಾಜನು ಬ್ರಾಹ್ಮಣರಿಗೆ ವಿಧೇಯರಾಗಿರುತ್ತಾರೋ ಅವರನ್ನು ಕೊಲ್ಲುತ್ತಿರಲಿಲ್ಲ. ಅವನು ಬ್ರಾಹ್ಮಣ ವರ್ಣಕ್ಕೆ ಸೇರಿದ್ದರೂ ಸನ್ನಿವೇಶ ಕಾರಣ ಕ್ಷತ್ರಿಯನಂತೆ ಕೆಲಸ ಮಾಡಬೇಕಾಗುತ್ತದೆ. ಆ ಕರ್ತವ್ಯ ಮುಗಿದ ಮೇಲೆ ಅವನು ಪುನಃ ಬ್ರಾಹ್ಮಣನಾಗಿ ಮಹೇಂದ್ರ ಗಿರಿಗೆ ಹೋಗಿ ತಪಸ್ಸಿನಲ್ಲಿ ತೊಡಗುತ್ತಾನೆ. ಪರಶುರಾಮನು ಪ್ರಾಜ್ಞ ಬ್ರಾಹ್ಮಣನಾಗಿ ಈಗಲೂ ಮಹೇಂದ್ರ ಗಿರಿಯಲ್ಲಿ ತಪಸ್ಸು ಮಾಡುತ್ತಿದ್ದಾನೆಂದು ಹೇಳುತ್ತಾರೆ.
ಇಂತಹ ಶ್ರೀಪರಶುರಾಮ ದೇವರು, ಪ್ರಜೆಗಳಿಗೆ ಸಂತಸವೀಯಲಿ. ನಮ್ಮಲ್ಲಿರುವ ಅರಿಷಡ್ವರ್ಗಗಳನ್ನು ಹಾಗೂ ದುಃಖ ದುಮ್ಮಾನಗಳನ್ನು ಹೋಗಲಾಡಿಸಿ ಸುಖ ಸಂತೋಷ ಕರುಣಿಸಲಿ ಎಂದು ಬೇಡೋಣ.
ಅಂಗಾರವರ್ಣಮಭಿತೋಂಡಬಹಿ: ಪ್ರಭಾಭಿರ್ವ್ಯಾಪ್ತಂ ಪರಶ್ವಧಧನುರ್ಧರಮೇಕವೀರಂ | ಧ್ಯಾಯೇದಜೇಶಪುರುಹೂತಮುಖೈಸ್ತುವದ್ಭಿರಾವೀತಮಾತ್ಮಪದವೀಂ ಪ್ರತಿಪಾದಯಂತಮ್ ||
0Shares
See also  ಬುದ್ಧ ಪೂರ್ಣಿಮೆಯ ಮಹತ್ವ

Leave a Reply

error: Content is protected !!