0Shares

ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಮತ್ತು ವರ್ಧಂತಿ ಆಚರಣೆಗಳು  12-ಮಾರ್ಚ್-2024 ರಿಂದ 16-ಮಾರ್ಚ್-2024

ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಪಟ್ಟಾಭಿಷೇಕ ಮಹೋತ್ಸವವು ಫಾಲ್ಗುಣಮಾಸದ ಶುಕ್ಲಪಕ್ಷದ ಬಿದಿಗೆಯಂದು ಆಚರಿಸಲಾಗುತ್ತದೆ. ಶ್ರೀ ಮಂತ್ರಾಲಯಂ ಹಾಗೂ ಕುಂಭಕೋಣಂ ಒಳಗೊಂಡಂತೆ ದೇಶಾದ್ಯಂತ ಪಸರಿಸಿರುವ ಶ್ರೀ ರಾಘವೇಂದ್ರ ಮಠಗಳಲ್ಲಿ ಅವರ ಪಟ್ಟಾಭಿಷೇಕ ಮಹೋತ್ಸವವನ್ನು ವೈಭವೋಪೇತವಾಗಿ ಆಚರಿಸಲಾಗುತ್ತದೆ. (ಪಟ್ಟಾಭಿಷೇಕ ಮಹೋತ್ಸವವನ್ನು ತಂಜಾವೂರಿನಲ್ಲಿಯೂ ಅತ್ಯಂತ ವಿಜೃಭಣೆಯಿಂದ ಆಚರಿಸಲಾಗುತ್ತದೆ. ಏಕೆಂದರೆ, ಶ್ರೀ ರಾಯರು ತಂಜಾವೂರಿನಲ್ಲೇ ಪಟ್ಟಾಭಿಷಿಕ್ತರಾದರೆಂದು ಹೇಳಲಾಗಿದೆ.)

ಶ್ರೀ ರಾಘವೇಂದ್ರ ಗುರು ಸಾರ್ವಭೌಮ ಪಟ್ಟಾಭಿಷೇಕ ವರ್ಣನೆ

ಶ್ರೀ ರಾಘವೇಂದ್ರ ಗುರುಗಳ ಶಿಷ್ಯರಾಗಿದ್ದ ಶ್ರೀ ನಾರಾಯಣಚಾರ್ಯರು ರಚಿಸಿರುವ “ಶ್ರೀ ರಾಘವೇಂದ್ರ ವಿಜಯ” ಎಂಬ ಕೃತಿಯ ಪ್ರಕಾರ ಶ್ರೀ ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮದ ಹೆಸರು ವೆಂಕಟನಾಥ. ಇವರು, ಅಂದಾಜು ೧೬೦೦ನೇ ಇಸವಿ, ಅಂದರೆ ದುರ್ಮತಿನಾಮ ಸವ್ಸತರದ ಶಿಶಿರ ಋತು ಫಾಲ್ಗುಣ ಮಾಸ ಶುಕ್ಲ ಪಕ್ಷ ಸಪ್ತಮಿಯಂದು ತಿಮ್ಮಣ್ಣ ಭಟ್ಟ ಮತ್ತು ಗೋಪಿಕಾಂಬ ಎಂಬ ದಂಪತಿಗಳ ಮಗನಾಗಿ ಚಿದಂಬರಂ ಸಮೀಪದ ಭುವನಗಿರಿ ಎಂಬಲ್ಲಿ ಜನ್ಮತಾಳಿದರು. ತಮ್ಮ ಹದಿನಾರನೇ ವಯಸ್ಸಿನಲ್ಲಿ ಸರಸ್ವತಿ ಎಂಬ ಕನ್ಯೆಯೊಂದಿಗೆ ವಿವಾಹವಾದರು.

ಶಾಲಿವಾಹನ ಶಕೆ 1543ನೇ ದುರ್ಮತಿ ಸಂವತ್ಸರ ಫಾಲ್ಗುಣ ಶುಕ್ಲ ಬಿದಿಗೆಯಂದು( ಕ್ರಿ. ಶ. 1621) ಶ್ರೀಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧಿಪತಿಗಳೂ, ಜ್ಞಾನಿನಾಯಕರೂ ಆದ ಶ್ರೀಸುದೀಂದ್ರತೀರ್ಥರು ಶ್ರೀವೆಂಕಟನಾಥಾಚಾರ್ಯರಿಗೆ ತಂಜಾವೂರಿನಲ್ಲಿ ಸನ್ಯಾಸಾಶ್ರಮ ಸ್ವೀಕರಿಸಲು ಆಜ್ಞಾಪಿಸಿ ಫಲ ಮಂತ್ರಾಕ್ಷತೆ ಅನುಗ್ರಹಿಸಿದರು. ಗುರುಗಳ ಅಪ್ಪಣೆಯಂತೆ ವೆ೦ಕಟನಾಥಾಚಾರ್ಯರು ತ೦ಜಾವೂರಿನಲ್ಲಿ ಕಾವೇರಿ ನದಿಯ ತೀರ ಪ್ರದೇಶವೊಂದರಲ್ಲಿ (ವಡವಾರು, ತಂಜಾವೂರು) ವೈದಿಕವಿಧಿ ಸ೦ಪ್ರದಾಯದ೦ತೆ ಸನ್ಯಾಸಾಶ್ರಮವನ್ನು ಸ್ವೀಕರಿಸಿದರು. ನೂತನ ಯತಿಗಳಿಗೆ ಶ್ರೀಸುಧೀಂದ್ರತೀರ್ಥರು ಮಂತ್ರಮುದ್ರಾಧಾರಣ, ಗುರೂಪದೇಶ, ಮಹಾಮಂತ್ರಗಳ ಉಪದೇಶಮಾಡಿ “ಶ್ರೀ ರಾಘವೇಂದ್ರ ತೀರ್ಥರು” ಎಂಬ ಅಭಿಧಾನದಿಂದ ಶಿಷ್ಯರಿಗೆ ಸಾಮ್ರಾಜ್ಯ ಪಟ್ಟಾಭಿಷೇಕ ಮಾಡಿ ಅನುಗ್ರಹಿಸಿದರು. ಇದು ಜಗನ್ಮಂಗಳ ಕಾರ್ಯ ಇತಿಹಾಸ ಪ್ರಸಿದ್ಧವಾದ ವಿಚಾರವಾಗಿದೆ.

ಶ್ರೀನಾರಾಯಣಾಚಾರ್ಯರು ವಿರಚಿತ “ಶ್ರೀ ರಾಘವೇಂದ್ರ ವಿಜಯ ಷಷ್ಠ ಸರ್ಗ”

ಲಗ್ನೇ ಲಗ್ನಗುಣೇ ನಿಲಿಂಪಗುರುಣಾ ದೃಷ್ಟೇ ವಿಮೃಷ್ಟೇ ದ್ವಿಜೈ

ರೇನ೦ ಸ೦ಮದಭಾಗಧೀಹಿ ಭಗವೋ ಬ್ರಹ್ಮೇತ್ಯುದೀರ್ಯ ಸ್ಥಿತಮ್ |

ಆಲೋಕ್ಯೋಪದಿದೇಶ ದೇಶಿಕವರಸ್ತಸ್ಮೈ ಸ ತಾರ೦ ಪುರಾ

ಸ್ವಪ್ನೇಽಸ್ವಪ್ನದುರಾಪವೈಭವನಿಧಿರ್ಲಬ್ಧಾ೦ ದದೌ ಚಾಭಿಧಾಮ್ || 70 ||

“ಜ್ಯೋತಿಶ್ಯಾಸ್ತ್ರಜ್ಞರಾದ ಬ್ರಾಹ್ಮಣರು ಚೆನ್ನಾಗಿ ವಿಮರ್ಶಿಸಿ ಪ೦ಚೇಷ್ಟಿಕಾ ಮುಂತಾದ ಲಗ್ನದ ಗುಣಗಳಿ೦ದ ಕೂಡಿದ ಹಾಗೂ ಲಗ್ನಕ್ಕೆ ಗುರು ದೃಷ್ಟಿಯುಳ್ಳ ಒಂದು ಉತ್ತಮವಾದ ಲಗ್ನವನ್ನು ನಿರ್ಧರಿಸಿದರು. ಶ್ರೀ ವೆಂಕಟನಾಥಚಾರ್ಯರು ಸನ್ಯಾಸಕ್ಕೆ ಪೂರ್ವಭಾವಿಯಾದ ವಿಧಿವಿಧಾನಗಳನ್ನೆಲ್ಲಾ ಮುಗಿಸಿದರು. ಶ್ರೀಸುಧೀ೦ದ್ರತೀರ್ಥರು ತಮ್ಮ ಮನೋರಥವು ಈಡೇರಿತೆ೦ದು ಸ೦ತೋಷದಿ೦ದ ಕುಳಿತಿದ್ದರು. ಶ್ರೀವೆ೦ಕಟಾರ್ಯರು “ಪರಮ ಪೊಜ್ಯರೇ ! ಪರಬ್ರಹ್ಮನ ಮುಖ್ಯವಾಚಕವಾದ ಪ್ರಣವ ಮ೦ತ್ರವನ್ನು ಉಪದೇಶಿಸಿರಿ” ಎ೦ದು ಕೈಜೋಡಿಸಿ ಗುರುಗಳ ಎದುರು ಬ೦ದು ಕುಳಿತುಕೊ೦ಡರು. ಸಿದ್ಧರಾಗಿ ಎದುರಿನಲ್ಲಿ ವಿನಯದಿ೦ದ ಕುಳಿತಿರುವ ಶ್ರೀವೆ೦ಕಟಾರ್ಯರಿಗೆ ಶ್ರೀಸುಧೀ೦ದ್ರತೀರ್ಥರು ಸಾ೦ಗೋಪಾ೦ಗವಾಗಿ ಓ೦ಕಾರ ಮ೦ತ್ರವನ್ನು ಉಪದೇಶಿಸಿದರು. ಅವರಿಗೆ ಈ ಹಿ೦ದೆಯೇ ಸ್ವಪ್ನದಲ್ಲಿ ದೇವತೆಯಿ೦ದ ಉಪದಿಷ್ಟವಾದ “ಶ್ರೀರಾಘವೇ೦ದ್ರತೀರ್ಥರು” ಎ೦ಬ ಆಶ್ರಮನಾಮವನ್ನು ಶ್ರೀವೆ೦ಕಟಾರ್ಯರಿಗೆ ಕೊಟ್ಟರು. ಮು೦ದೆ ಶ್ರೀವೆ೦ಕಟಾರ್ಯರು ತಮ್ಮ ಆಶ್ರಮನಾಮದಿ೦ದದೇ ಪ್ರಸಿದ್ಧರಾದರು”.

ತಸ್ಯ ನಾಮ ಸ ದದೇ ಸದಾಶಿಷಾ

ರಾಜರಾಜ ಇವ ರಾಜಿತಃ ಶ್ರಿಯಾ |

ರಾಮಭದ್ರ ಇವ ಭದ್ರಭಾಜನ೦

ತತ್ಕೃಪೇವ ಜಗತಾ೦ ಹಿತೇ ರತಃ || 71 ||

“ಶ್ರೀ ಸುಧೀ೦ದ್ರತೀರ್ಥರು ಸ೦ಪತ್ತಿನಿ೦ದ ಕುಬೇರನ೦ತೆ ಶೋಭಾಯನಮಾನರಾಗಿದ್ದರು. ಶ್ರೀರಾಮಚ೦ದ್ರನ೦ತೆ ಸಮಸ್ತ ಮ೦ಗಳಗಳಿಗೂ ಆಶ್ರಯರಾಗಿದ್ದರು. ಶ್ರೀರಾಮಚ೦ದ್ರನ ಕೃಪೆಯ೦ತೆ ಸಮಸ್ತ ಜಗತ್ತಿನಲ್ಲಿರುವ ಸಾತ್ತ್ವಿಕ ಜನತೆಗೆ, ಅನುಕೂಲತೆಯನ್ನೂ, ಪ್ರಿಯ ಕಾರ್ಯವನ್ನೂ ಮಾಡುವವರಾಗಿದ್ದರು. ಅವರು ತನ್ನಿ೦ದ ಪ್ರಣವೋಪದೇಶವನ್ನು ಹೊ೦ದಿದ ಶ್ರೀವೆ೦ಕಟಾರ್ಯರಿಗೆ ಮ೦ಗಳಕರವಾದ ಉತ್ತಮವಾದ ಆಶೀರ್ವಾದವನ್ನು ಮಾಡಿ “ಶ್ರೀರಾಘವೇ೦ದ್ರ” ಎ೦ಬ ಆಶ್ರಮನಾಮವನ್ನು ಕೊಟ್ಟರು”.

ಶ್ರೀಸುರೇ೦ದ್ರವದಯ೦ ತಪಸ್ಯಯಾ

ಶ್ರೀಜಯೀ೦ದ್ರ ಇವ ಕೀರ್ತಿಸ೦ಪದಾ |

ವಿಶ್ರುತೋಽಹಮಿವ ವಾದಸ೦ಗರೇ

ರಾಘವೇ೦ದ್ರ ಯತಿರಾಟ್ ಸಮೇಧತಾಮ್ || 72 ||

“ನಮ್ಮ ಪರಮ ಗುರುಗಳಾದ ಶ್ರೀ ಸುರೇ೦ದ್ರತೀರ್ಥರು ಕಠಿಣವಾದ ವ್ರತಚರ್ಯೆಯಿ೦ದ ತಮ್ಮ ಜೀವನ ನಡೆಸುತ್ತಿದ್ದರು. ನಮ್ಮ ಗುರುಗಳಾದ ಶ್ರೀ ವಿಜಯೀ೦ದ್ರತೀರ್ಥರು ಅತ್ಯ೦ತ ಕೀರ್ತಿಸ೦ಪತ್ತಿನಿ೦ದ ಸಮೃದ್ಧರಾಗಿದ್ದರು. ನಾವು ವಾದಯುದ್ಧದಲ್ಲಿ ಎಲ್ಲರನ್ನೂ ಜಯಿಸಿ ಪ್ರಸಿದ್ಧರಾಗಿದ್ದೇವೆ. ನಮ್ಮ ಕರಕಮಲಸ೦ಜಾತರಾದ ಈ ಶ್ರೀರಾಘವೇ೦ದ್ರ ಯತಿಚಕ್ರವರ್ತಿಗಳು ತಪಸ್ಸಿನಲ್ಲಿ ಶ್ರೀಸುರೇ೦ದ್ರರ೦ತೆಯೂ, ಕೀರ್ತಿ ಸಮೃದ್ಧಿಯಲ್ಲಿ ನಮ್ಮ ಗುರುಗಳಾದ ಶ್ರೀವಿಜಯೀ೦ದ್ರರ೦ತೆಯೂ, ವಾದಯುದ್ಧದಲ್ಲಿ ನಮ್ಮ೦ತೆಯೂ ಪ್ರಸಿದ್ಧರಾಗಿ ಅಭಿವೃದ್ಧಿಯನ್ನು ಹೊ೦ದಲಿ” ಎ೦ದು ಶ್ರೀ ಸುಧೀ೦ದ್ರತೀರ್ಥರು ಹರಸಿದರು.

ಮ೦ತ್ರೈಃ ಪೂತೈರ್ವಾರಿಜಾದ್ಯೈಃ ಪ್ರಸೂನೈ

ರ್ಮುಕ್ತಾಮುಖ್ಯೈ ರತ್ನಜಾಲೈರುಪೇತೈಃ |

ವಾರ್ಭಿಃ ಶ೦ಖಾಪೂರಿತೈಃ ಸೋಽಭಿಷಿಚ್ಯ

ಪ್ರಾಜ್ಞ೦ ವಿದ್ಯಾರಾಜ್ಯರಾಜ೦ ವಿತೇನೇ || 73 ||

ಕಮಲ ಮೊದಲಾದ ಹೂವುಗಳಿ೦ದಲೂ, ಮುತ್ತು ಮೊದಲಾದ ರತ್ನಗಳಿ೦ದಲೂ ಸಹಿತವಾಗಿ, ಶ೦ಖದಲ್ಲಿ ಪವಿತ್ರವಾದ ಜಲವನ್ನು ತು೦ಬಿ ಋಗಾದಿ ವೇದಮ೦ತ್ರಗಳನ್ನು ಉಚ್ಚರಿಸುತ್ತಾ ಶ್ರೀಸುಧೀ೦ದ್ರತೀರ್ಥರು ತಮ್ಮ ಕರಕಮಲ ಸ೦ಜಾತವರಕುಮಾರಕರಾದ ಶ್ರೀರಾಘವೇ೦ದ್ರತೀರ್ಥರಿಗೆ, ಆ ಜಲದಿ೦ದ ಅಭಿಷೇಚನ ಮಾಡಿದರು, ಅವರನ್ನು ವೇದಾ೦ತ ವಿದ್ಯಾರಾಜ್ಯದ ಚಕ್ರವರ್ತಿಗಳನ್ನಾಗಿ ಮಾಡಿದರು.

ಫಾಲ್ಗುಣ ಬಿದಿಗೆಯೆಂದು ಆರಂಭವಾಗುವ ಶ್ರೀ ರಾಯರ ಪಟ್ಟಾಭಿಷೇಕ ಮಹೋತ್ಸವವು ಫಾಲ್ಗುಣ ಶುದ್ಧ ಸಪ್ತಮಿಯವರೆಗೂ ಮುಂದುವರೆಯುತ್ತದೆ. ಏಕೆಂದರೆ ಅಂದು ಅವರ ವರ್ಧಂತಿಯಾಗಿರುತ್ತದೆ.

ಪ್ರತ್ಯಾಕ್ಷರ ಅರ್ಥ

ರಾ’ ಎಂದರೆ ಸರ್ವ ಪಾಪಗಳು ನಾಶ ಹೊಂದುತ್ತವೆ.
’ ಎಂದರೆ ಪರಮ ಜ್ಞಾನ ಲಭಿಸುತ್ತದೆ.
ವೇಂ’ ಅಕ್ಷರವು ಜನನ-ಮರಣಗಳಿಂದ ವಿಮುಕ್ತಿ ನೀಡುತ್ತದೆ.
ದ್ರಾ’ ಎಂಬುದು ಪರಮಾತ್ಮನ ದರ್ಶನವನ್ನು ನೀಡುತ್ತದೆ.
’ ಎಂಬುದು ದೀರ್ಘಾಯುಷ್ಯವನ್ನು ಕರುಣಿಸುತ್ತದೆ ಅಲ್ಲದೇ ಶಕ್ತಿ, ಸಾಮರ್ಥ್ಯಗಳನ್ನು ನೀಡುತ್ತದೆ.
’ ಎಂಬ ಅಕ್ಷರವು ಪ್ರಾಂಪಚಿಕ ಸುಖ, ಭೋಗ ಮತ್ತು ಶಾಂತಿಗಳನ್ನು ನೀಡುತ್ತದೆ.
’ ಎಂದರೆ ಪಾಪ-ಕೂಪದಿಂದ ವಿಮುಕ್ತಿ.
’ ಎಂದರೆ ಯಮಧರ್ಮನು ಸುಳಿಯಲಾರ.

|| ಶ್ರೀರಾಘವೇಂದ್ರತೀರ್ಥಗುರುವಂತರ್ಗತ ಶ್ರೀಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು ||

ಮಾಹಿತಿ ಕೃಪೆ: ವಿದ್ವಾನ್ ಶ್ರೀ ಎಸ್.ವಿ. ಭೀಮಭಟ್ಟರು, ಶ್ರೀ ರಾಘವೇಂದ್ರ ಸ್ವಾಮಿಮಠ, ಮಂತ್ರಾಲಯ.

ಆಧಾರ : ಶ್ರೀನಾರಾಯಣಾಚಾರ್ಯರುವಿರಚಿತ “ಶ್ರೀ ರಾಘವೇಂದ್ರ ವಿಜಯ ”

” ಶ್ರೀ ಮೂಲ ರಾಮೋ ವಿಜಯತೇ “

0Shares

ನಿಮ್ಮದೊಂದು ಉತ್ತರ