ಹುಣ್ಣಿಮೆ | ಪೂರ್ಣಿಮೆ

0Shares

ಹುಣ್ಣಿಮೆ ಅಥವಾ ಪೂರ್ಣಿಮೆ ಅಂದರೆ ಆಕಾಶದಲ್ಲಿ ಚಂದ್ರನು ಪೂರ್ಣ ಚಂದ್ರನಾಗಿ ಕಾಣಿಸುವ ದಿನ. ಪ್ರತಿ ತಿಂಗಳು ಚಂದ್ರನು ಆಕಾಶದಲ್ಲಿ ಒಂದು ಬಾರಿ ಪೂರ್ಣ ಚಂದ್ರನಾಗಿ ಕಾಣಿಸುತ್ತಾನೆ. ಚಂದ್ರನ ಪರಿಭ್ರಮಣೆಯ (ಚಂದ್ರ ಭೂಮಿಯು ಸುತ್ತ ಸುತ್ತುವದು) ಕಾರಣದಿಂದ ಚಂದ್ರನು ಭೂಮಿಯ ವಿವಿಧ ಸ್ಥಾನಗಳಲ್ಲಿ ಇರುತ್ತಾನೆ. ಆದ್ದರಿಂದ ಸೂರ್ಯನ ಬೆಳಕು ಚಂದ್ರನ ಮೇಲೆ ಬೀಳುವ ಭಾಗದ ಗೋಚರಿಕೆಯ ಪ್ರಮಾಣದಲ್ಲಿ ಏರುಪೇರಾಗುತ್ತದೆ. ಹಾಗಾಗಿ ಚಂದ್ರನು ವಿವಿಧ ಆಕಾರದಲ್ಲಿ ಕಾಣಿಸುತ್ತಾನೆ. ಇದನ್ನೇ ಚಂದ್ರಬಿಂಬ ಎನ್ನುವರು.

ಚಂದ್ರನ ಹಂತಗಳು

ಚಂದ್ರ ಭೂಮಿಯ ಸುತ್ತ ಸುತ್ತುವಾಗ ಸೂರ್ಯನಿಗೆ ಕೆಲವೊಮ್ಮೆ ಹತ್ತಿರವಾಗಿ ಕೆಲವೊಮ್ಮೆ ದೂರವಾಗಿ ಇರುತ್ತಾನೆ. ಚಂದ್ರ ಭೂಮಿಯ ಸುತ್ತ ಸುತ್ತುವಾಗ ಸೂರ್ಯನಿಗೆ ಕೆಲವೊಮ್ಮೆ ಹತ್ತಿರವಾಗಿ ಕೆಲವೊಮ್ಮೆ ದೂರವಾಗಿ ಇರುತ್ತಾನೆ. ಚಂದ್ರ ಸೂರ್ಯನ ಹತ್ತಿರವಾದಾಗ ಚಂದ್ರನ ಬದಿ ಭೂಮಿಗೆ ಕಾಣುವದಿಲ್ಲ. ಸೂರ್ಯನೊಂದಿಗೆ ಚಂದ್ರನ ಸಂಯೋಗಕ್ಕೆ ಅಮಾವಾಸ್ಯೆ ಎನ್ನುವುದು. ದಿನ ಕಳೆದಂತೆ ಚಂದ್ರನ ಮೇಲೆ ಸೂರ್ಯನ ಬೆಳಕು ಬೀಳುವ ಭಾಗದ ಗೋಚರಿಕೆ ಸ್ವಲ್ಪ ಸ್ವಲ್ಪವೇ ಹೆಚ್ಚುತ್ತಾ, ಒಂದು ದಿನ ಚಂದ್ರ ಪೂರ್ಣವಾಗಿ ಗೋಚರವಾಗುತ್ತಾನೆ. ಆ ದಿನ ಚಂದ್ರನು ಸೂರ್ಯನಿಂದ 180 ಡಿಗ್ರಿ ದೂರದಲ್ಲಿರುತ್ತಾನೆ. ಅದನ್ನೇ ಹುಣ್ಣಿಮೆ ಎನ್ನುವುದು.

ಹುಣ್ಣಿಮೆ ಪೂರ್ಣಿಮೆ ಚಂದ್ರ

ಚಂದ್ರನು ತನ್ನದೇ ಆದ ಬೆಳಕನ್ನು ಹೊಂದಿಲ್ಲ, ಆದ್ದರಿಂದ ಅದು ಸೂರ್ಯನ ಬೆಳಕನ್ನು ಪ್ರತಿಬಿಂಬಿಸುತ್ತದೆ. ಅದಕ್ಕಾಗಿಯೇ, ಹುಣ್ಣಿಮೆಯ ಸಮಯದಲ್ಲಿ, ನಾವು ಕಾಣುವ ಮುಖವನ್ನು ಸೂರ್ಯನ ಬೆಳಕಿನಿಂದ ಸಂಪೂರ್ಣವಾಗಿ ಬೆಳಗಿದ ಚಂದ್ರನನ್ನು ನಾವು ಪ್ರಶಂಸಿಸುತ್ತೇವೆ.

ಹಿಂದೂ ಪಂಚಾಂಗದ ಪ್ರಕಾರ:

ಹಿಂದೂ ಪಂಚಾಂಗದಲ್ಲಿ ಈ ದಿನವನ್ನು ಹುಣ್ಣಿಮೆ ತಿಥಿ ಅಥವಾ ಪೂರ್ಣಿಮೆ ತಿಥಿ ಎಂದು ಹೇಳುತ್ತಾರೆ. ಹಿಂದೂ ಪಂಚಾಂಗದಲ್ಲಿ ದಿನಗಳನ್ನು ತಿಥಿಗಳೆಂದು ಕರೆಯುತ್ತಾರೆ. ತಿಥಿ ಎಂದರೆ ಚಂದ್ರನು ಭೂಮಿಯನ್ನು ಸುತ್ತಲು ಒಂದು ದಿನದಲ್ಲಿ ತೆಗೆದುಕೊಳ್ಳುವ ಅವಧಿ. ಚಂದ್ರನು ನಿತ್ಯ ಸುಮಾರು 12 ಡಿಗ್ರಿಗಳಷ್ಟು ಸಂಚರಿಸುತ್ತಾನೆ. ಒಂದು ತಿಥಿಯ ಅವಧಿ 20-27 ಗಂಟೆಗಳ ನಡುವೆ ಬದಲಾಗಬಹುದು.ಚಂದ್ರ ಭೂಮಿಯನ್ನು ಸುತ್ತಿ ಬರುವ ಪರಿಭ್ರಮಣಾವಧಿ 27.32 ದಿನಗಳು. ಆದರೆ ಅಮಾವಾಸ್ಯೆಯಿಂದ ಅಮಾವಾಸ್ಯೆಗೆ 29.53 ದಿನಗಳು.

ಚಂದ್ರನ ಹಂತ

ಹಿಂದೂ ಪಂಚಾಂಗದಲ್ಲಿ ಪ್ರತಿಯೊಂದು ಮಾಸವನ್ನು (ತಿಂಗಳು) ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷ ಎಂದು ಎರಡು ವಿಭಾಗವಾಗಿ ವಿಂಗಡಿಸಲಾಗಿದೆ. ಅಮಾವಾಸ್ಯೆಯ ಮರುದಿನದಿಂದ ಹುಣ್ಣಿಮೆಯವರೆಗಿನ ಅವಧಿಯು ಶುಕ್ಲ ಪಕ್ಷ ಮತ್ತು ಹುಣ್ಣಿಮೆಯ ಮರುದಿನದಿಂದ ಅಮಾವಾಸ್ಯೆಯವರೆಗಿನ ಅವಧಿಯು ಕೃಷ್ಣ ಪಕ್ಷ. ಸಂಸ್ಕೃತದಲ್ಲಿ ಪಕ್ಷಃ ಎಂದರೆ ಪಕ್ಕ ಅಥವಾ ಬದಿ. ಪಕ್ಷವು ಹುಣ್ಣಿಮೆ ದಿನದ ಎರಡೂ ಪಕ್ಕದಲ್ಲಿನ ಅವಧಿ. ಈ ಅವಧಿ 15 ದಿನಗಳನ್ನು ಒಳಗೊಂಡಿರುತ್ತದೆ. ಈ ಪ್ರಕಾರವಾಗಿ ತಿಂಗಳಲ್ಲಿ ೩೦ ತಿಥಿಗಳು. 30 ತಿಥಿಗಳನ್ನು ಎರಡು ಪಕ್ಷಗಳಲ್ಲಿ 15ರಂತೆ ಎಣಿಕೆ ಮಾಡಲಾಗುತ್ತದೆ. ಪಾಡ್ಯ(ಪ್ರತಿಪದೆ)ದಿಂದ ಮೊದಲುಗೊಂಡು ಹುಣ್ಣಿಮೆಯವರೆಗೆ ಬರುವ ಮೊದಲ 15 ತಿಥಿ(ದಿನ)ಗಳಿಗೆ ಶುಕ್ಲಪಕ್ಷವೆಂತಲೂ, ಪಾಡ್ಯದಿಂದ ಅಮಾವಾಸ್ಯೆಯವರೆಗೆ ಬರುವ ಮುಂದಿನ 15 ತಿಥಿ(ದಿನ)ಗಳಿಗೆ ಕೃಷ್ಣಪಕ್ಷವೆಂತಲೂ ಕರೆಯುತ್ತಾರೆ.

ಪ್ರತಿ ಮಾಸದ ಪಕ್ಷ ಮತ್ತು ತಿಥಿಗಳನ್ನು ಕೆಳಗಡೆ ನೀಡಿದ್ದೇವೆ.

ಶುಕ್ಲಪಕ್ಷ: ಪಾಡ್ಯ (1); ಬಿದಿಗೆ (2); ತದಿಗೆ (3); ಚೌತಿ (4); ಪಂಚಮಿ (5); ಷಷ್ಠಿ (6); ಸಪ್ತಮಿ (7); ಅಷ್ಟಮಿ (8); ನವಮಿ (9); ದಶಮಿ (10); ಏಕಾದಶಿ (11); ದ್ವಾದಶಿ (12); ತ್ರಯೋದಶಿ (13); ಚತುರ್ದಶಿ (14); ಹುಣ್ಣಿಮೆ (15)

See also  ನಾಗರಪಂಚಮಿ ಹಬ್ಬದ ಮಹತ್ವ ಮತ್ತು ವಿಶೇಷತೆ

ಕೃಷ್ಣಪಕ್ಷ: ಪಾಡ್ಯ (1); ಬಿದಿಗೆ (2); ತದಿಗೆ (3); ಚೌತಿ (4); ಪಂಚಮಿ (5); ಷಷ್ಠಿ (6); ಸಪ್ತಮಿ (7); ಅಷ್ಟಮಿ (8); ನವಮಿ (9); ದಶಮಿ (10); ಏಕಾದಶಿ (11); ದ್ವಾದಶಿ (12); ತ್ರಯೋದಶಿ (13); ಚತುರ್ದಶಿ (14); ಅಮಾವಾಸ್ಯೆ (15)

ಚಂದ್ರನ ಗುರುತ್ವಾಕರ್ಷಣೆಯ ಪ್ರಭಾವ:

ಸೂರ್ಯನ ಹಾಗೆ, ಚಂದ್ರನ ಗುರುತ್ವಾಕರ್ಷಣೆಯ ಪ್ರಭಾವವೂ ಪೃಥ್ವಿಯ ಮೇಲಾಗುತ್ತದೆ. ಹುಣ್ಣಿಮೆ ಮತ್ತು ಅಮಾವಾಸ್ಯೆಗೆ ಈ ಪ್ರಭಾವವು ಹೆಚ್ಚಿರುತ್ತದೆ. ಆದುದರಿಂದ ಈ ದಿನಗಳಲ್ಲಿ ಪೃಥ್ವಿಯ ಮೇಲಿರುವ ಪಂಚ ತತ್ತ್ವಗಳು (ಪೃಥ್ವಿ ತತ್ತ್ವ, ಆಪ ತತ್ತ್ವ, ತೇಜ ತತ್ತ್ವ, ವಾಯು ತತ್ತ್ವ ಮತ್ತು ಆಕಾಶ ತತ್ತ್ವ) ಚಂದ್ರನತ್ತ ಆಕರ್ಷಿಸಲ್ಪಡುತ್ತವೆ. ಇದರಿಂದಾಗಿ, ವಾಯುಮಂಡಲದಲ್ಲಿ ಒಂದು ರೀತಿಯ ಸೂಕ್ಷ್ಮ ಸ್ತರದ ಒತ್ತಡ ನಿರ್ಮಾಣವಾಗುತ್ತದೆ. ಸ್ಥೂಲದಲ್ಲಿ ನೋಡುವುದಾದರೆ ನೀರಿನ ಸೂಕ್ಷ್ಮ ಕಣಗಳು ವಾಯುಮಂಡಲದ ಈ ಸೂಕ್ಷ್ಮ ಒತ್ತಡದ ಪ್ರದೇಶವನ್ನು ಸೇರುತ್ತವೆ. ಇದೇ ರೀತಿ ಬಹುತಾಂಶ ಕೆಟ್ಟ ಶಕ್ತಿಗಳು ಸೂಕ್ಷ್ಮವಾಗಿರುವುದರಿಂದ ಈ ಒತ್ತಡದ ಪ್ರದೇಶದಲ್ಲಿ ಸೆಳೆಯಲ್ಪಡುತ್ತವೆ. ಈ ರೀತಿ ಹೆಚ್ಚಿನ ಸಂಖ್ಯೆಯಲ್ಲಿ ಕೆಟ್ಟ ಶಕ್ತಿಗಳು ಒಂದು ಕಡೆ ಸೇರುವುದರಿಂದ ಅವು ಹೆಚ್ಚಿನ ಪ್ರಮಾಣದಲ್ಲಿ ಕೆಟ್ಟ ಪ್ರಭಾವಗಳನ್ನು ಮನುಷ್ಯರ ಮೇಲೆ ಬೀರುತ್ತವೆ. ಈ ಪ್ರಕ್ರಿಯೆಯು ಹುಣ್ಣಿಮೆ ಅಥವಾ ಅಮಾವಾಸ್ಯೆಗೆ 2 ದಿನ ಮುಂಚೆ ಪ್ರಾರಂಭವಾಗಿ 2 ದಿನ ನಂತರ ಕೊನೆಗೊಳ್ಳುತ್ತದೆ.

ಹುಣ್ಣಿಮೆಯ ಚಂದ್ರನ ಪ್ರಭಾವ:

ಹುಣ್ಣಿಮೆಯಂದು ಚಂದ್ರನ ಬೆಳಕು ಹೆಚ್ಚಿರುವುದರಿಂದ ರಜ ತಮ ಸ್ಪಂದನಗಳ ಪ್ರಭಾವವು ಕಡಿಮೆ ಇರುತ್ತದೆ. ಆದರೆ ಚಂದ್ರನ ಸ್ಪಂದನಗಳು ಹೆಚ್ಚು ಕಾರ್ಯರತವಾಗಿರುವುದರಿಂದ ನಮ್ಮ ಮನಸ್ಸಿನ ಮೇಲೆ ಚಂದ್ರನ ಸ್ಪಂದನಗಳು ಪ್ರಭಾವ ಬೀರುತ್ತವೆ. ಮನಸ್ಸಿನಲ್ಲಿ ಯಾವ ಸಂಸ್ಕಾರಗಳು ಪ್ರಬಲವಾಗಿವೆಯೋ, ಅದಕ್ಕೆ ಅನುರೂಪವಾಗಿ ವಿಚಾರಗಳ ಪ್ರಮಾಣವೂ ಹೆಚ್ಚಾಗುತ್ತದೆ.

ಮನುಷ್ಯರ ಮೇಲಾಗುವ ಹುಣ್ಣಿಮೆಯ ಚಂದ್ರನ ಪರಿಣಾಮ:

ಹುಣ್ಣಿಮೆಯಂದು ರಜ ತಮ ಸ್ಪಂದನಗಳ ಪ್ರಭಾವವು ಕಡಿಮೆ ಇರುವುದರಿಂದ ಕೆಟ್ಟ ಶಕ್ತಿಗಳಿಗೆ ಇದರ ಲಾಭ ಆಗುವುದಿಲ್ಲ. ಆದರೆ ಚಂದ್ರನ ಗುರುತ್ವಾಕರ್ಷಣೆಯ ಲಾಭ ಪಡೆದುಕೊಂಡು ಕೆಟ್ಟ ಶಕ್ತಿಗಳು ತೊಂದರೆಯನ್ನು ನೀಡುತ್ತವೆ.

ಈ ತೊಂದರೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಸಲು – ಹುಣ್ಣಿಮೆ ಮತ್ತು ಅಮಾವಾಸ್ಯೆಯ ಚಂದ್ರನಿಂದ ಮನುಷ್ಯರ ಮೇಲಾಗುವ ಪ್ರಭಾವವು ಸೂಕ್ಷ್ಮ ಮತ್ತು ಆಧ್ಯಾತ್ಮಿಕ ಸ್ತರದ್ದಾಗಿದೆ. ಆದುದರಿಂದ ಈ ತೊಂದರೆಗಳಿಂದ ರಕ್ಷಿಸಿಕೊಳ್ಳಲು ಆಧ್ಯಾತ್ಮಿಕ ಉಪಾಯಗಳನ್ನು ಮತ್ತು ಆಧ್ಯಾತ್ಮಿಕ ಸಾಧನೆಯನ್ನು ಮಾಡಬೇಕಾಗುತ್ತದೆ.

ವರ್ಷದಲ್ಲಿ ಬರುವ ಹುಣ್ಣಿಮೆಗಳು:

  1. ಆಟಿ ಹುಣ್ಣಿಮೆ: ಆಷಾಢ ಮಾಸದಲ್ಲಿ ಬರುವ ಶುಕ್ಲಪಕ್ಷ ಹುಣ್ಣಿಮೆಯನ್ನು ಆಟಿ ಹುಣ್ಣಿಮೆ, ತುಳುವರಲ್ಲಿ ಆಟಿದ ಪುಣ್ಣಮೆ, ಹೊಸಿಲು ಹುಣ್ಣಿಮೆ ಎಂದು ಕರೆಯುತ್ತಾರೆ. ಇದು ಹೆಣ್ಣು ಮಕ್ಕಳು ವಿಶೇಷವಾಗಿ ಆಚರಿಸುವ ಹಬ್ಬ. ಇದನ್ನು ರೈತಾಪಿ ವರ್ಗಕ್ಕೆ ಸಂಬಂಧಿಸಿದ ಆಚರಣೆ ಭಾರತದ ಉತ್ತರಭಾಗದಲ್ಲಿ ಬೈಸಾಕಿ(Baisakhi) ಎಂದು ದಕ್ಷಿಣದಲ್ಲಿ ಪೊಂಗಲ್ , ದಕ್ಷಿಣ ಕನ್ನಡದಲ್ಲಿ ಮಂಗಳೂರು ಉಡುಪಿ ವಿಭಾಗದಲ್ಲಿ ಆಟಿ ಹುಣ್ಣಿಮೆಯಂದು ಆಚರಿಸಲ್ಪಡುತ್ತದೆ.ಆಚರಣೆಯ ದಿನಗಳಲ್ಲಿ ವ್ಯತ್ಯಾಸವಷ್ಟೆ.
  2. ಗುರು ಪೂರ್ಣಿಮೆ: ಆಷಾಢ ಮಾಸದಲ್ಲಿ ಬರುವ ಶುಕ್ಲಪಕ್ಷ ಹುಣ್ಣಿಮೆಯನ್ನು  ಗುರು ಪೂರ್ಣಿಮೆ ಎಂದು ಕರೆಯುತ್ತಾರೆ. ಗುರು ಪೂರ್ಣಿಮೆಯಂದು ಭಕ್ತರು ತಮ್ಮ ಗುರುವಿನ ಪೂಜೆ ಮಾಡುತ್ತಾರೆ. ಇದು ವ್ಯಾಸ ಪೂರ್ಣಿಮೆ ಎಂದು ಸುಪರಿಚಿತವಾಗಿದೆ. ಈ ದಿನ ಮಹಾಭಾರತದ ಪ್ರಖ್ಯಾತ ಲೇಖಕರಾದ ವ್ಯಾಸರ ಹುಟ್ಟುಹಬ್ಬ.
  3. ಶೀಗಿ ಹುಣ್ಣಿಮೆ: ಆಶ್ವಯುಜ ಮಾಸದ ಶುಕ್ಲಪಕ್ಷ ಹುಣ್ಣಿಮೆಯನ್ನು ಭೂಮಿ ಹುಣ್ಣಿಮೆ (ಶೀಗಿ ಹುಣ್ಣಿಮೆ )ಅಥವಾ ಸೀಗೆ ಹುಣ್ಣಿಮೆ. ಈ ದಿನದಂದು ರೈತರು ಹೊಲದಲ್ಲಿ ಬೆಳೆದು ನಿಂತ ಫಸಲಿಗೆ ಪೂಜೆ ಸಲ್ಲಿಸಿ, ಉತ್ತಮ ಬೆಳೆಗಾಗಿ ಪ್ರಾರ್ಥಿಸುತ್ತಾರೆ. ಮಲೆನಾಡು ಮತ್ತು ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧಿಯಲ್ಲಿರುವ ಈ ಹಬ್ಬದ ದಿನ ಕುಟುಂಬದವರೆಲ್ಲ ಒಟ್ಟಾಗಿ ತಮ್ಮ ಹೊಲಗಳಿಗೆ ಹೋಗಿ ಒಟ್ಟಿಗೆ ಊಟ ಮಾಡುವ ಪದ್ದತಿ ಇದೆ.
  4. ಶರದ್ ಹುಣ್ಣಿಮೆ: ಆಶ್ವಯುಜ ಮಾಸದ ಶುಕ್ಲಪಕ್ಷ ಹುಣ್ಣಿಮೆಯನ್ನು ಶರದ್ ಹುಣ್ಣಿಮೆ ಅಥವಾ ಕೋಜಗರಿ ಹುಣ್ಣಿಮೆ ಎಂದು ಕರೆಯಲಾಗುತ್ತದೆ. ಹುಣ್ಣಿಮೆ ಪೂರ್ತಿಯಾಗುವ ದಿನದಂದು ನವಾನ್ನ ಹುಣ್ಣಿಮೆಯನ್ನು ಆಚರಿಸಲಾಗುತ್ತದೆ. ಕೊಜಗಿರಿ ಪೂರ್ಣಿಮಾ ಸುಗ್ಗಿಯ ಹಬ್ಬವಾಗಿದ್ದು ಇದನ್ನು ಶರದ್ ಪೂರ್ಣಿಮಾ ಅಥವಾ ಕುಮಾರ್ ಪೂರ್ಣಿಮಾ ಎಂದೂ ಕರೆಯುತ್ತಾರೆ. ಈ  ಹುಣ್ಣಿಮೆಯು ಶರದ್ ಋತುವಿನಲ್ಲಿ ಬರುತ್ತದೆ, ಆದುದರಿಂದ ಇದಕ್ಕೆ ಶರದ್ ಹುಣ್ಣಿಮೆ ಎಂಬ ಹೆಸರೂ ಇದೆ.ಈ ಹುಣ್ಣಿಮೆಯಂದು ತಡ ರಾತ್ರಿ ಲಕ್ಷ್ಮೀ ದೇವಿಯು ‘ಕೋ ಜಾಗರ್ತಿ’ ಅಂದರೆ ‘ಯಾರು ಎಚ್ಚರವಾಗಿದ್ದರೆ’ ಎಂದೂ ವಿಚಾರಿಸಲು ಬರುತ್ತಾಳೆ; ಆದುದರಿಂದ ಈ ಹುಣ್ಣಿಮೆಯನ್ನು ಕೋಜಾಗರಿ ಹುಣ್ಣಿಮೆ ಎಂದೂ ಕರೆಯುತ್ತಾರೆ. ಈ ಹುಣ್ಣಿಮೆಯಂದು ರೈತರು ನಿಸರ್ಗದ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಹೊಸ ಧಾನ್ಯವನ್ನು ಪೂಜಿಸಿ ಅದರ ನೈವೇದ್ಯವನ್ನು ಮಾಡುತ್ತಾರೆ. ಆದುದರಿಂದ ಈ ಹುಣ್ಣಿಮೆಯನ್ನು ನವಾನ್ನ ಹುಣ್ಣಿಮೆ ಎಂದೂ ಕರೆಯುತ್ತಾರೆ. ಶರದ್ ಪೂರ್ಣಿಮಾವನ್ನು ಗುಜರಾತ್‌ನಲ್ಲಿ ಶರದ್ ಪೂನಂ ಎಂದು ಕರೆಯಲಾಗುತ್ತದೆ. ಇದನ್ನು ಬ್ರಿಜ್ ಪ್ರದೇಶಗಳಲ್ಲಿ ರಾಸ್ ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಕೆಲವು ಭಾಗಗಳಲ್ಲಿ, ಶರದ್ ಪೂರ್ಣಿಮಾವನ್ನು ಕೋಜಾಗರ ಪೂರ್ಣಿಮಾ ಎಂದು ಕರೆಯಲಾಗುತ್ತದೆ ಮತ್ತು ಇಲ್ಲಿ ಇಡೀ ದಿನ ಕೋಜಾಗರ ವ್ರತ ಅಥವಾ ಕೌಮುದಿ ವ್ರತವನ್ನು ಆಚರಿಸಲಾಗುತ್ತದೆ. ಕೋಜಗರಿ ಪೂರ್ಣಿಮಾವನ್ನು ಕೋಜಗರಿ ಲಕ್ಷ್ಮಿ ಪೂಜೆ ಎಂದೂ ಕರೆಯುತ್ತಾರೆ, ಅದು ಮಹಾಲಕ್ಷ್ಮಿ ದೇವಿಯ ಆರಾಧನೆಯಾಗಿದೆ. ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮಿ ದೇವಿಗೆ ನಾವು ಗೌರವ ಸಲ್ಲಿಸುತ್ತೇವೆ. ಕೊಜಗರಿ ಲಕ್ಷ್ಮಿ ಪೂಜೆಯ ಸಂಪ್ರದಾಯದ ಸಮಯದಲ್ಲಿ, ಲಕ್ಷ್ಮಿ ದೇವಿಗೆ ಮತ್ತು ಒಂಬತ್ತು ಗ್ರಹಗಳಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತದೆ ಮತ್ತು ಎಲ್ಲಾ ಕುಟುಂಬ ಸದಸ್ಯರ ಆಶೀರ್ವಾದ ಮತ್ತು ಅದೃಷ್ಟವನ್ನು ಬಯಸುತ್ತಾರೆ. ಈ ದಿನದಂದು ಎಲ್ಲರಿಗೂ ಚಂದ್ರನ ಕಿರಣಗಳಿಂದ ಆತ್ಮಶಕ್ತಿರೂಪೀ (ತೇಜಸ್ಸು) ಆನಂದ, ಆತ್ಮಾನಂದ, ಬ್ರಹ್ಮಾನಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ; ಆದರೆ ಈ ಅಮೃತಪ್ರಾಶನ ಮಾಡಲು ‘ಕೋ ಜಾಗ್ರತಿ?’, ಅಂದರೆ ‘ಯಾರು ಜಾಗೃತರಾಗಿದ್ದಾರೆ? ಯಾರು ಎಚ್ಚರಿಕೆಯಿಂದ ಇದ್ದಾರೆ? ಯಾರು ಇದರ ಮಹತ್ವವನ್ನು ಅರಿತಿದ್ದಾರೆ? ಯಾರು ಜಾಗೃತ ಮತ್ತು ಎಚ್ಚರಿಕೆಯಿಂದಿದ್ದಾರೆಯೋ ಮತ್ತು ಯಾರಿಗೆ ಇದರ ಮಹಾತ್ಮೆಯು ತಿಳಿದಿದೆಯೋ, ಅವರಿಗೆ ಮಾತ್ರ ಈ ಅಮೃತಪ್ರಾಶನದ ಲಾಭ ದೊರೆಯುತ್ತದೆ ಎಂದು ಋಷಿಗಳು ಹೇಳುತ್ತಾರೆ!’.
  5. ಬನದ ಹುಣ್ಣಿಮೆ: ಪುಷ್ಯ ಮಾಸದ ಶುಕ್ಲಪಕ್ಷ ಹುಣ್ಣಿಮೆಯನ್ನು ಬನದ ಹುಣ್ಣಿಮೆ ಅಥವಾ ಬನಶಂಕರಿ ಹುಣ್ಣಿಮೆ ಎಂದೂ ಕರೆಯುತ್ತಾರೆ. ಅಷ್ಟಮಿಯಿಂದ ಹುಣ್ಣಿಮೆಯವರೆಗೂ ದುರ್ಗೆಯ ವಿವಿಧ ಅವತಾರಗಳನ್ನು ಪೂಜಿಸಲಾಗುತ್ತದೆ. ಬನದ ಹುಣ್ಣಿಮೆಯಂದು ರಾಜ್ಯದ ಎಲ್ಲಾ ಬನಶಂಕರಿ ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳು ಸೇರಿದಂತೆ ಬನಶಂಕರಿ ರಥೋತ್ಸವವೂ ನಡೆಯುತ್ತದೆ. ಈ ತಿಂಗಳಲ್ಲಿ ಕೆಲವೆಡೆ ಪುಷ್ಯ ಮಾಸದ ಶುಕ್ಲಪಕ್ಷದ ಅಷ್ಟಮೀ ದಿನದಿಂದ ಬನದ ಹುಣ್ಣಿಮೆಯ ನವರಾತ್ರಿಯನ್ನು ಆಚರಿಸುತ್ತಾರೆ. ಬನಶಂಕರಿ ಅಥವಾ ಶಾಕಾಂಬರಿ – ಇದು ದುರ್ಗಾ ಮಾತೆಯ ಮತ್ತೊಂದು ಹೆಸರು. ಪುಷ್ಯಮಾಸದ ಶುದ್ಧ ಚತುರ್ದಶಿ ಮತ್ತು ಪೂರ್ಣಿಮೆಯಂದು ಬನಶಂಕರಿ ಪೂಜೆಯನ್ನು ಮಾಡುವ ಸಂಪ್ರದಾಯವಿದೆ. ಈ ಪೂಜೆಯು ೭ ದಿನಗಳ ಪರ್ಯಂತ ವಿಶೇಷವಾಗಿ ನಡೆಯುತ್ತದೆ – ಅಂದರೆ ಪುಷ್ಯ ಶುದ್ಧ ಅಷ್ಟಮಿಯಿಂದ ಹುಣ್ಣಿಮೆ ಪರ್ಯಂತ ಜರುಗುತ್ತದೆ. ಈ ಸಂದರ್ಭದಲ್ಲಿ ಪ್ರತಿಯೊಂದು ದಿನವೂ ನಿಷಿದ್ದವಲ್ಲದ ಒಂದೊಂದು ತರಕಾರಿ ಪಲ್ಯವನ್ನು ದುರ್ಗಾಮಾತೆಗೆ ನಿವೇದಿಸಲಾಗುತ್ತದೆ. ಆದ್ದರಿಂದಲೇ ಈ ವ್ರತಕ್ಕೆ ಶಾಕಾಂಬರಿ ವ್ರತವೆಂದು ಹೆಸರು. ಶಾಕ + ಅಂಬರಿ = ಶಾಕಾಂಬರಿ – ಯಾರು ಧರಿಸುತ್ತಾರೋ ಅವರೇ ಶಾಕಾಂಬರಿ. ಚತುರ್ದಶಿ – ಸರ್ವ ತರಕಾರಿಗಳನ್ನು ಸಮರ್ಪಿಸಲಾಗುತ್ತದೆ. ಬನದ ಹುಣ್ಣಿಮೆ, ಜಾತ್ರೆ ವಿಶೇಷವಾಗಿ ನಡೆಸಲಾಗುತ್ತದೆ. ಈ ಉತ್ಸವವನ್ನು ಕರ್ನಾಟಕ, ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ರಾಜಾಸ್ಥಾನಗಳಲ್ಲಿ ಆಚರಿಸಲಾಗುತ್ತದೆ. ಪ್ರಮುಖ ಪ್ರಾಚೀನ ಶಾಕಾಂಬರಿ ದೇವಸ್ಥಾನಗಳು ಕರ್ನಾಟಕದ ಬಾದಾಮಿ ಮತ್ತು ಬೆಂಗಳೂರಿನಲ್ಲೂ, ಮಹಾರಾಷ್ಟ್ರದ ನಾಗೇವಾಡಿ, ಪುಣೆಯಲ್ಲೂ, ಉತ್ತರಪ್ರದೇಶದ ಶಹ್ರಾನ್ಪುರದಲ್ಲೂ, ರಾಜಸ್ಥಾನದ ಸಂಭಾರಿನಲ್ಲೂ, ಮತ್ತೂ ಜಾರ್ಖಂಡಿನಲ್ಲೂ ಕಾಣಬಹುದು. ಚತುರ್ದಶಿ ಮತ್ತು ಹುಣ್ಣಿಮೆಯಂದು ೧೦೮ ತರಕಾರಿಗಳನ್ನು ಸಮರ್ಪಿಸುವ ಸಂಪ್ರದಾಯವಿದೆ. ಈದಿನ ಶಾಕಾಂಬರಿ ಹುಟ್ಟಿದ ದಿನ. ಸಾವಿರಾರು ವರ್ಷಗಳ ಹಿಂದೆ ದುರ್ಗಾಮಾಸುರನೆಂಬ ದೈತ್ಯನನ್ನು ಸಂಹರಿಸಲು, ಯಜ್ಞದಲ್ಲಿ ಉತ್ಪನ್ನಳಾದ ಶಕ್ತಿ ದೇವತೆಯೇ ಶಾಕಾಂಬರಿ. ಆ ಕಾಲದಲ್ಲಿ ಬಹಳ ದುರ್ಭಿಕ್ಷೆಯಿದ್ದರಿಂದ ತಾನು ಬರುವಾಗ ಹಲವಾರು ತರಕಾರಿಗಳನ್ನು ತಂದು ಜನರನ್ನು ಉದ್ಧರಿಸಿದ್ದಳು. ಆದ್ದರಿಂದ ಶಾಕಾಂಬರಿಯಾದಳು. ಈ ಹುಣ್ಣಿಮೆಯಂದು ದೀಪೋತ್ಸವ, ದೀಪದಾನಕ್ಕೆ ವಿಶೇಷ ಪ್ರಾಶಸ್ತ್ಯವನ್ನು ನೀಡಲಾಗಿದೆ.
  6. ದೊಡ್ಡ ಗೌರಿ ಹುಣ್ಣಿಮೆ: ಕಾರ್ತಿಕ ಮಾಸದ ಶುಕ್ಲಪಕ್ಷ ಹುಣ್ಣಿಮೆಯನ್ನು ಗೌರಿ ಹುಣ್ಣಿಮೆ ಅಥವಾ ದೊಡ್ಡ ಗೌರಿ ಹುಣ್ಣಿಮೆ ಎಂದು ಕರೆಯಲಾಗುತ್ತದೆ. ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಆಚರಿಸಲ್ಪಡುವ ಈ ಹಬ್ಬವು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಸಕ್ಕರೆಯಿಂದ ತಯಾರಿಸಲ್ಪಟ್ಟ ಲಕ್ಷ್ಮೀ, ಗೌರಿ, ಈಶ್ವರ, ಬಸವಣ್ಣ, ಗಣಪತಿ, ಆನೆ, ಕುದುರೆ, ಹುಲಿಗಳೇ ಮುಂತಾದ ಬೊಂಬೆಗಳನ್ನು ಒಳಗೊಂಡ ಆರತಿಯನ್ನು ತಾಯಿ ಗೌರಿಗೆ ಬೆಳಗುವುದು ಈ ಹಬ್ಬದ ವಿಶೇಷ. ಈ ದಿನ ರಾತ್ರಿ ಸಗಣಿಯಿಂದ ಗೌರಿಯ ಪ್ರತಿಮೆಯನ್ನು ತಯಾರಿಸಿ, ಸಂಕಲ್ಪ ಸಹಿತ ಪ್ರತಿಷ್ಠಾಪಿಸಿ, ಪೂಜಿಸಲಾಗುತ್ತದೆ. ಪೂಜೆಯ ಕೊನೆಯಲ್ಲಿ ಮನೆಯ ಹೆಣ್ಣುಮಕ್ಕಳು ತಟ್ಟೆಯೊಂದರಲ್ಲಿ ಸಕ್ಕರೆ ಬೊಂಬೆಗಳನ್ನಿಟ್ಟು, ತಾಯಿಗೆ ಆರತಿಯನ್ನು ಬೆಳಗಿದ ನಂತರ ಮನೆಯ ಹೊಸ್ತಿಲಿಗೆ ಆರತಿಯನ್ನು ಬೆಳಗಲಾಗುತ್ತದೆ. ಹೆಣ್ಣುಮಕ್ಕಳು ಮನೆಯ ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ.
  7. ಪೂರ್ಣಸಿದ್ಧಿ ಹುಣ್ಣಿಮೆ: ಪುಷ್ಯ ಮಾಸದ ಶುಕ್ಲಪಕ್ಷ ಹುಣ್ಣಿಮೆ (ಮಕರ ಸಂಕ್ರಾಂತಿಯ ನಂತರದ ಮೊದಲ ಹುಣ್ಣಿಮೆ) ತೈಪೂಸಂ ಸಾಂಪ್ರದಾಯಕವಾದ, ಮಂಗಳಕರ ಮತ್ತು ಅನುಗ್ರಹದ ದಿನವೆಂದು ಪರಿಗಣಿಸಲಾಗುತ್ತದೆ, ಈ ದಿನವನ್ನು ನಿಮ್ಮ ಯೋಗಕ್ಷೇಮಕ್ಕಾಗಿ ಬಳಸಿಕೊಳ್ಳಬಹುದು. ಈ ದಿನವನ್ನು “ಧನ್ಯ ಪೂರ್ಣಿಮಾ” ಅಥವಾ “ಪೂರ್ಣಸಿದ್ಧಿ ಹುಣ್ಣಿಮೆ” ಎಂದು ಕರೆಯುತ್ತಾರೆ. ಈ ದಿನದಂದು ಅನೇಕ ಸಿದ್ದರು, ದಾರ್ಶನಿಕರು ಮತ್ತು ಯೋಗಿಗಳು ಪರಮೋತ್ಕೃಷ್ಟವಾದುದನ್ನು ಸಾಧಿಸಿದ್ದಾರೆ.
  8. ಹೋಳಿ ಹುಣ್ಣಿಮೆ: ಶಿಶಿರ ಋತುವಿನ ಫಾಲ್ಗುಣ ಮಾಸದಲ್ಲಿ ಬರುವ ಕೃಷ್ಣಪಕ್ಷದ ಹುಣ್ಣಿಮೆ ದಿನವನ್ನು ಕಾಮನ ಹುಣ್ಣಿಮೆ, ವಸಂತ ಹುಣ್ಣಿಮೆ ಅರ್ಥಾತ್ ಹೋಳಿ/ಹೋಲಿ ಹಬ್ಬ ಎಂದು ಅಚರಿಸುತ್ತಾರೆ. ಈ ಹಬ್ಬವು ವಸಂತ ಮಾಸವನ್ನು ಸ್ವಾಗತಿಸುವುದಷ್ಟೇ ಅಲ್ಲ ಏಕತೆಯನ್ನು ಬಿಂಬಿಸಿ ಹೊಸದನ್ನು ಸ್ವಾಗತಿಸುವ ಹಬ್ಬ. ಬಣ್ಣಗಳನ್ನು ಎರೆಚಾಡಿ ಸಂಭ್ರಮಿಸುವುದಕ್ಕಷ್ಟೇ ಈ ಹಬ್ಬವು ಸೀಮಿತವಾಗಿಲ್ಲ. ಬಡವ-ಬಲ್ಲಿದ, ಜಾತಿ ಧರ್ಮದ ಎಲ್ಲೆಯನ್ನು ಮೀರಿ ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ತಾತ್ವಿಕ ನಿಲುವನ್ನು ಅಕ್ಷರಶಃ ಆಚರಣೆಗೆ ತರುವುದೇ ಈ ಹೋಳಿ ಹುಣ್ಣಿಮೆ. ಈ ದಿನದ ಆಚರಣೆಯೇ ಕಾಮನ ಹಬ್ಬ. ಗ್ರಾಮೀಣ ಭಾಗಗಳಲ್ಲಿ ಅವಲಗಿಡ, ಅಡಿಕೆ ಗಿಡ, ಕಬ್ಬು , ಬೆರಣಿಯನ್ನು ಸೇರಿಸಿ ಜೊತೆಗೆ ಒಣ ಕಟ್ಟಿಗೆ ಸೇರಿಸಿ ಊರ ಮುಖಂಡರು ಅದನ್ನು ಪೂಜಿಸಿ ನೈವೇದ್ಯ ಮಾಡಿ ನಂತರ ಅದಕ್ಕೆ ಬೆಂಕಿ ಇಡುವರು. ನಂತರ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸುವುದು ವಾಡಿಕೆ. ಬಣ್ಣ ಬಣ್ಣಗಳ ಎರಚಾಟ, ಕಾಮ ದಹನ, ಹೋಲಿಕಾ ದಹನ ಈ ಆಚರಣೆಗಳಲ್ಲಿದೆ. ಎಲ್ಲರೂ ಒಟ್ಟುಗೂಡಿ ದೀಪೋತ್ಸವವನ್ನು ಮಾಡಿ ಆ ದೀಪಗಳ ಮುಂದೆ ತಮ್ಮ ತಪ್ಪುಗಳನ್ನು ಕ್ಷಮಿಸುವಂತೆ ಭಗವಂತನಲ್ಲಿ ಪ್ರಾರ್ಥಿಸುವರು. ಮತ್ತೆ ಕೆಲವು ಕಡೆ ಮತ್ತು ತರಿಸುವ ಭಾಂಗ್ ಪಾನೀಯವನ್ನು ಸೇವಿಸುವ ರೂಢಿಯೂ ಇದೆ. ಈ ಹಬ್ಬವನ್ನು ಇಡೀ ಭಾರತದಲ್ಲಿ ಆಚರಿಸುತ್ತಾರೆ. ಅಲ್ಲದೆ ನೇಪಾಳ, ಬಾರ್ಸಿಲೋನ್, ಮಾರಿಷಸ್, ಫಿಜಿ, ಗಾನಾ, ಫಿಲಿಫೈನ್ , ಯುಎಸ್ಎ ಮತ್ತು ಯುಕೆ ದೇಶಗಳಲ್ಲೂ ಆಚರಿಸುತ್ತಾರೆ.
See also  27 ನಕ್ಷತ್ರಗಳು ಮತ್ತು ಅದರ ಗಾಯತ್ರೀ ಮಂತ್ರಗಳು
0Shares

Leave a Reply

error: Content is protected !!