ತುಳಸಿ ಪೂಜೆ

ಶ್ರೀ ತುಳಸಿ ಪೂಜೆ

ಶ್ರೀ ತುಳಸಿ ಪೂಜೆ ಪ್ರತಿ ವರ್ಷ ದೀಪಾವಳಿಯ ಜೊತೆಗೂಡಿ ಬರುವ, ಆಚರಿಸಲಾಗುವ ಹಬ್ಬ. ಇದನ್ನಾಚರಿಸುವ ಉದ್ದೇಶ ವಿಷ್ಣು ಹಾಗೂ ತುಳಸಿಯ ಮದುವೆಯ ಆಚರಣೆಯಂತೆ. ಚಾಂದ್ರಮಾನ ಕಾರ್ತಿಕಮಾಸ ಶುಕ್ಲಪಕ್ಷದ ೧೨ನೇ ದಿನ ಅಂದರೆ ದ್ವಾದಶಿಯಂದು ಈ ಹಬ್ಬವನ್ನು ಉತ್ಥಾನ ದ್ವಾದಶಿ ಎಂದು ಆಚರಿಸಲಾಗುತ್ತದೆ. ತುಳಸಿಗಿಡದೊಂದಿಗೆ ಬೆಟ್ಟದನೆಲ್ಲಿಕಾಯಿ ಗಿಡವನ್ನೂ ನೆಟ್ಟು ಪೂಜಿಸುವ ರೂಢಿ ಇದೆ.ದೀಪಗಳಿಂದ ಬೃಂದಾವನವನ್ನು ಅಲಂಕರಿಸಲಾಗುತ್ತದೆ. ಈ ದಿನದಂದು ತುಳಸಿ ಕಟ್ಟೆಯನ್ನು ರಂಗೋಲೆ, ಹೂವು, ಹಾಗೂ ಮಾವಿನ ಎಲೆಗಳಿಂದ ಅಲಂಕರಿಸಿ ಕೃಷ್ಣನ ಮೂರ್ತಿಯಿರಿಸಿ ಪೂಜಿಸಲಾಗುತ್ತದೆ. ದೀಪಾವಳಿಯಂತೆ ಪಟಾಕಿಯ ಮಹಾಪೂರವೇ ಜರುಗುತ್ತದೆ.

ಪುರಾಣ:

ತುಳಸಿ, ಜಲಂಧರನ ಹೆಂಡತಿಯಾದ ವೃಂದ. ರಾಕ್ಷಸನಾದ ಜಲಂಧರನ ಕಿರುಕುಳ ತಾಳಲಾಗದೆ ದೇವತೆಗಳು ವಿಷ್ಣುವಿನ ಸಹಾಯಕ್ಕೆ ಮೊರೆ ಹೋದರಂತೆ. ಪತಿವ್ರತೆಯಾದ ವೃಂದಳ ತಪೋಶಕ್ತಿಯಿಂದ ಜಲಂಧರನು ಅತ್ಯಂತ ಶಕ್ತಿಶಾಲಿಯಾದನಂತೆ. ವಿಷ್ಣು ಜಲಂಧರನ ವೇಷ ಧರಿಸಿ ವೃಂದಳ ಪಾತಿವ್ರತ್ಯ ಶಕ್ತಿಯನ್ನು ಭಂಗ ಮಾಡಿದನಂತೆ. ಜಲಂಧರನು ರಣಭೂಮಿಯಲ್ಲಿ ಮಡಿದನಂತೆ. ವಿಷ್ಣುವಿಗೆ ಶಾಪ ನೀಡಿ ವೃಂದ ತನ್ನ ಪತಿಯ ಶವದೊಂದಿಗೆ ಬೂದಿಯಾದಳಂತೆ. ಆ ವೃಂದಳೇ ತುಳಸಿಯಾಗಿ ಪಾರ್ವತಿ ತಯಾರಿಸಿದ ಬೃಂದಾವನದಲ್ಲಿ ಹುಟ್ಟಿದಳಂತೆ. ಇವಳೇ ರುಕ್ಮಿಣಿಯಾಗಿ ಜನ್ಮ ಪಡೆದು ಕಾರ್ತಿಕ ಶುದ್ಧ ದ್ವಾದಶಿಯಂದು ಕೃಷ್ಣನನ್ನು ಮದುವೆಯಾಗುತ್ತಾಳೆಂದು ಪ್ರತೀತಿಯಿದೆ. ಇನ್ನೊಂದು ಪುರಾಣದ ಪ್ರಕಾರ ದೇವತೆಗಳೂ,ದಾನವರೂ ಕ್ಷೀರಸಾಗರವನ್ನು ಕಡೆದಾಗ ಕೊನೆಯಲ್ಲಿ ಅಮೃತಕಲಶ ಬಂತು.ಅದನ್ನು ಕೈಗೆ ತೆಗೆದುಕೊಂಡ ವಿಷ್ಣುವಿನ ಕಣ್ಣುಗಳಿಂದ ಬಂದ ಆನಂದಬಾಷ್ಪಗಳು ಆ ಕಲಶದಲ್ಲಿ ಬಿದ್ದು ಅದರಿಂದ ಒಂದು ಸಣ್ಣ ಗಿಡ ಹುಟ್ಟಿತು.ಅದಕ್ಕೆ ತುಲನೆ(ಹೋಲಿಕೆ) ಇಲ್ಲವಾದ್ದರಿಂದ,ತುಲಸಿ ಎಂದು ಹೆಸರಿಟ್ಟು, ಲಕ್ಷ್ಮಿಯೊಂದಿಗೆ ತುಲಸಿಯನ್ನೂ ವಿಷ್ಣುವು ಮದುವೆಯಾದನು.

ಸಂಪ್ರದಾಯ:

ಪ್ರತಿ ಹಿಂದೂ ಮನೆಯಲ್ಲೂ ಒಂದು ತುಳಸಿ ಗಿಡವಿರುವುದು ವಾಡಿಕೆ. ತುಳಸಿ ಗಿಡವು ಐಶ್ವರ್ಯವನ್ನೂ,ಸಂತಸವನ್ನೂ ತರುತ್ತದಲ್ಲದೆ ಅಕಾಲಿಕ ಮರಣವನ್ನು ತಡೆಯುತ್ತದೆಂದು ನಂಬಿಕೆಯಿದೆ. ತುಳಸಿ ಆಯುರ್ವೇದದಲ್ಲಿ ಪ್ರಮುಖ ಔಷಧ ಸಸ್ಯವೂ ಹೌದು. ಶ್ರೀ ತುಳಸಿ ಪೂಜೆಯನ್ನು ಮದುವೆಯಾದ ಸ್ತ್ರೀಯರು, ಸುಮಂಗಲಿಯರು, ಹೆಣ್ಣು ಮಕ್ಕಳು ಎಲ್ಲರೂ ಪ್ರತಿದಿನ ಅರಶಿನಾದಿ ಮಂಗಳ ದ್ರವ್ಯಗಳಿಂದ ಸ್ನಾನ ಮಾಡಿ ಶುಭ್ರರಾಗಿ, ಕುಂಕುಮಾದಿಗಳನ್ನು ಧರಿಸಿ ಪ್ರತಿದಿನ ತಪ್ಪದೇ ಶ್ರೀ ತುಳಸಿ ಪೂಜೆ ಮಾಡ ಬೇಕು. ಶ್ರೀ ತುಳಸಿ ವೃಂದಾವನದ ಸುತ್ತಲೂ ಚೆನ್ನಾಗಿ ಗೋಮಯದಿಂದ ಸಾರಿಸಿ ರಂಗೋಲಿ ಹಾಕಿ.

ಶ್ರೀಯಃ ಪ್ರಿಯೇ ಶ್ರಿಯಾವಾಸೇ ನಿತ್ಯಂ ಶ್ರೀಧರವಲ್ಲಭೇl

ಭಕ್ತ್ಯಾ ದತ್ತಂ ಮಯಾರ್ಘ್ಯಂ ಹಿ ತುಳಸಿ ಪ್ರತಿಗ್ರಹ್ಯತಾಮ್ll

ಮೇಲಿನ ಮಂತ್ರ ಹೇಳುತ್ತಾ ತುಳಸಿಗೆ ಅಭಿಷೇಕ ಮಾಡಿ. ನಂತರ ಅರಶಿನ ಕುಂಕುಮ ಹೂವುಗಳಿಂದ ಪೂಜೆ ಮಾಡಿ.

ಯನ್ಮೂಲೇ ಸರ್ವತೀರ್ಥಾನಿl

ಯನ್ಮಧ್ಯೇ ಸರ್ವದೇವತಾಃl

ಯದಗ್ರೇ ಸರ್ವವೇದಾಸ್ಚl

ತುಳಸೀ ತ್ವಾಂ ನಮಾಮ್ಯಹಂll

ತುಳಸಿ ಶ್ರೀಸಖಿ ಶುಭೆ ಪಾಪಹಾರಿಣಿ ಪುಣ್ಯದೇl

ನಮಸ್ತೇ ನಾರದನುತೇ ನಾರಾಯಣಮನಃ ಪ್ರಿಯೇll

ಮೇಲಿನ ಮಂತ್ರ ಹೇಳಿ ನಮಸ್ಕರಿಸಿ.

ಶ್ರೀ ತುಳಸಿ ಪ್ರಾರ್ಥನೆ:

ನಮಸ್ತುಳಸಿ ಕಲ್ಯಾಣಿ ನಮೋ ವಿಷ್ಣು ಪ್ರಿಯೇ ಶುಭೆ |

ನಮೋ ಮೋಕ್ಷ ಪ್ರದಾಯಿಕೆ ದೇವೀ ನಮಃ ಸಂಪತ್ಪ್ರದಾಯಿಕೆ ||

ಶ್ರೀ ತುಳಸಿ ಧ್ಯಾನ: ಧ್ಯಾಯೇಸ್ಚ ತುಳಸಿಂ ದೇವೀಂ ಶ್ಯಾಮಂ ಕಮಲ ಲೋಚನಮ್l

ಪ್ರಸನ್ನಂ ಪದ್ಮಕಲ್ಹಾರ ವರದಾಭಯ ಚತುರ್ಭುಜಮ್ll

ಕಿರೀಟ ಹಾರ ಕೇಯೂರ ಕುಂಡಲಾದಿ ವಿಭೂಶಿತಾಮ್l

ಧವಲಾಂಕುಶ ಸಂಯುಕ್ತಾಂ ನಿಶಿದುಶೀಮ್ll

ಶ್ರೀ ತುಳಸಿ ಪ್ರಣಾಮ ವೃಂದಾಯೈ ತುಳಸಿ ದೇವ್ಯೈ ಪ್ರಿಯಾಯೈ ಕೇಶವಸ್ಯ ಚl

ಕೃಷ್ಣ ಭಕ್ತಿ ಪರದೆ ದೇವಿ ಸತ್ಯವತ್ಯೈ ನಮೋ ನಮಃll

ಶ್ರೀ ತುಳಸಿ ಪ್ರದಕ್ಷಿಣ ಮಂತ್ರ:

ಯಾನಿ ಕಾನಿ ಚ ಪಾಪನಿ ಬ್ರಹ್ಮಹತ್ಯಾದಿಕಾನಿ ಚl

ತಾನಿ ತಾನಿ ಪ್ರನಶ್ಯಂತಿ ಪ್ರದಕ್ಷಿಣಃ ಪದೇ ಪದೇl

ಅನ್ಯಥಾಂ ಶರಣಂ ನಾಸ್ತಿ ತ್ವಮೇವ ಶರಣಂ ಮಮl

ತಸ್ಮಾತ್ ಕಾರುಣ್ಯ ಭಾವೇನ ರಕ್ಷ ಮಾಮ್ ಜಗದೀಶ್ವರಿll

ಶ್ರೀ ತುಳಸಿ ನಮಸ್ಕಾರ: ಯನ್ಮೂಲೇ ಸರ್ವತೀರ್ಥಾನಿl

ಯನ್ಮಧ್ಯೇ ಸರ್ವದೇವತಾಃl

ಯದಗ್ರೇ ಸರ್ವವೇದಾಸ್ಚl

ತುಳಸೀ ತ್ವಾಂ ನಮಾಮ್ಯಹಂll

ಅಷ್ಟ ನಾಮ ಸ್ತವ (ಪದ್ಮ ಪುರಾಣ) ವೃಂದಾವನಿ ವೃಂದ ವಿಶ್ವಪೂಜಿತಾ ಪುಷ್ಪಸಾರ, ನಂದಿನಿ ಕೃಷ್ಣ ಜೀವನಿ ವಿಶ್ವ ಪಾವನಿ ತುಳಸಿ ಶ್ರೀ ತುಳಸಿ ಪೂಜೆ ಮಾಡುವಾಗ ಶ್ರೀ ತುಳಸಿ ದೇವಿಯ ಈ ಎಂಟು ನಾಮಗಳನ್ನು ಹೇಳಿದರೆ ಅಶ್ವಮೇಧದ ಫಲ ಬರುತ್ತದೆ. ಶ್ರೀ ತುಳಸಿ ದೇವಿಯ ಜನ್ಮದಿನವಾದ ಹುಣ್ಣಿಮೆಯಂದು ಈ ಎಂಟು ನಾಮಗಳಿಂದ ಪೂಜಿಸಿದರೆ ಜೀವನ್ಮೃತ್ಯು ಮತ್ತು ಎಲ್ಲಾ ಬಂಧನಗಳಿಂದ ಮುಕ್ತರಾಗಿ ವೃಂದಾವನ ಸೇರುತ್ತಾರೆ. ಈ ಹೆಸರುಗಳನ್ನು ಹೇಳುವುದರಿಂದ ಕೃಷ್ಣನ ಕೃಪೆಗೆ ಪಾತ್ರರಾಗುತ್ತಾರೆ. ಸಮಯಾವಕಾಶ ಇರುವವರು ಶ್ರೀ ತುಳಸಿ ಅಷ್ಟೋತ್ತರ ಶತನಾಮಾವಳಿಯನ್ನು ಹೇಳಿದರೆ ಉತ್ತಮ. ಭಾರತೀಯ ಸಂಸ್ಕೃತಿಯಲ್ಲಿ ತುಳಸಿಯ ಪಾತ್ರ ಮಹತ್ವದ್ದು. ತುಳಸಿ ಕಟ್ಟೆಯನ್ನು ಹೊಂದಿರದ ಹಿಂದೂಗಳ ಮನೆಯೇ ಇಲ್ಲ. ಅಂತಹ ತುಳಸಿ ಪವಿತ್ರವಾದದ್ದು ಮಾತ್ರವಲ್ಲ, ರೋಗ ನಿರೋಧಕ ಶಕ್ತಿ ಸೇರಿದಂತೆ ಆರೋಗ್ಯಕ್ಕೆ ಅನುಗುಣವಾದದ್ದು ಎಂದು ಹಲವು ಸಂಶೋಧನೆಗಳು ಹೇಳಿವೆ. ಹಿಂದೂ ಧಾರ್ಮಿಕ ಸಂಪ್ರದಾಯದ ಪ್ರಮುಖ ಅಂಗವಾಗಿರುವ ತುಳಸಿ (Ocimum Tenuiflorum) ಹಲವು ಔಷಧೀಯ ಗುಣಗಳನ್ನು ಹೊಂದಿದೆ.

ಹಿಂದೂಗಳು ಇದನ್ನು ಅತ್ಯಂತ ಪವಿತ್ರವಾಗಿ ಕಾಣುತ್ತಾ ಪೂಜೆ ಮಾಡುವುದು ಸಾಮಾನ್ಯ. ತುಳಸಿಯನ್ನು ಸ್ಪರ್ಶಿಸುವುದರಿಂದ ಪಾಪಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಮಾತ್ರವಲ್ಲ, ಹಲವು ರೋಗಗಳು ಶಮನವಾಗುತ್ತದೆ ನಾಶವಾಗುತ್ತದೆ ಎಂಬ ನಂಬಿಕೆಯೂ ಬೆಳೆದು ಬಂದಿದೆ. ಮುಖ್ಯವಾಗಿ ತುಳಸಿಯಲ್ಲಿ ಎರಡು ವಿಧಗಳಿವೆ. ಕರಿ ಅಥವಾ ಶ್ಯಾಮ ವರ್ಣದ ಕೃಷ್ಣ ತುಳಸಿ ಮತ್ತು ತಿಳಿಬಣ್ಣದ ರಾಮ ತುಳಸಿ. ಸಾಮಾನ್ಯವಾಗಿ ಪೂಜೆಗೆ ಬಳಸುವ ಕೃಷ್ಣ ತುಳಸಿಯು ಹಲವು ವೈದ್ಯಕೀಯ ಗುಣಗಳನ್ನು ಹೊಂದಿವೆ. ಹಲವಾರು ಕಾಯಿಲೆಗಳಿಗೆ ಮನೆಮದ್ದಾಗಿರುವ ತುಳಸಿ ಎಲ್ಲ ವಾತಾವರಣಕ್ಕೂ ಒಳ್ಳೆಯದು. ಹೆಚ್ಚು ಖರ್ಚಿಲ್ಲದೆ ಬೆಳೆಸ ಬಹುದಾದ ತುಳಸಿಯಿಂದ ನಾನಾ ಪ್ರಯೋಜನಗಳನ್ನು ಪಡೆಯ ಬಹುದು. ಈ ಗಿಡಮೂಲಿಕೆಯು ಶೀತ, ತಲೆನೋವು, ಅಜೀರ್ಣ, ಮಲೇರಿಯಾ ಮತ್ತು ಹೃದಯ ಸಂಬಂಧದ ಸಮಸ್ಯೆಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ. ಅಲ್ಲದೆ ಶರೀರದಲ್ಲಿರುವ ಹಲವು ವಿಷಕ್ರಿಮಿಗಳನ್ನು ಇವು ನಾಶ ಮಾಡುತ್ತದೆ. ದೇವಸ್ಥಾನ, ಯಾತ್ರಾಸ್ಥಳ ಮತ್ತು ಸಂಪ್ರದಾಯಸ್ಥ ಹಿಂದೂ ಕುಟುಂಬದಲ್ಲಿ ಇವುಗಳು ಹೆಚ್ಚಾಗಿ ಕಾಣ ಸಿಗುತ್ತದೆ. ಇವುಗಳಿಗೆ ಒತ್ತಡ ನಿವಾರಿಸುವ ಶಕ್ತಿಯು ಇದೆ. ತುಳಸಿಯ ಎಲೆಗಳನ್ನು ಹಸಿಯಾಗಿ ಅಥವಾ ಒಣಗಿಸಿ ಪುಡಿಯ ರೂಪದಲ್ಲಿ ಅಥವಾ ಪಾನೀಯ ರೂಪದಲ್ಲಿ ಕುಡಿಯಲಾಗುತ್ತಿದೆ. ಹಂದಿಜ್ವರಕ್ಕೂ ರಾಮಬಾಣ. ಆಯುರ್ವೇದ ಪ್ರಕಾರ ಹಂದಿಜ್ವರ ನಿವಾರಣೆಗೆ ತುಳಸಿ ರಾಮಬಾಣವಂತೆ. ಇದರಲ್ಲಿರುವ ಔಷಧೀಯ ಗುಣಗಳು ಎಚ್1ಎನ್1 ರೋಗಾಣುಗಳು ಶರೀರಕ್ಕೆ ಪ್ರವೇಶಿಸದಂತೆ ರಕ್ಷಿಸುತ್ತದೆಯಂತೆ. ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ತುಳಸಿ ವೃದ್ಧಿ ಪಡಿಸುತ್ತದೆ. ಅಲ್ಲದೆ ಹಂದಿಜ್ವರ ರೋಗಾಣುಗಳನ್ನು ಹತ್ತಿಕ್ಕುವ ಗುಣ ತುಳಸಿಯಲ್ಲಿದೆ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯ ಪಡುತ್ತಾರೆ. ತುಳಸಿ ಎಲೆಗಳು ಹಂದಿಜ್ವರ ಬರದಂತೆ ತಡೆಗಟ್ಟುತ್ತದೆ. ಹಾಗೆಯೇ ರೋಗ ಪೀಡಿತರು ಶೀಘ್ರದಲ್ಲೇ ಗುಣಮುಖವಾಗಲು ನೆರವಾಗುತ್ತದೆ ಎಂದು ವೈದ್ಯರು ಅಭಿಪ್ರಾಯ ಪಡುತ್ತಾರೆ. ಆರೋಗ್ಯದ ದೃಷ್ಟಿಕೋನದಿಂದ ಪ್ರತಿದಿನ 7ರಿಂದ 8 ತುಲಸಿ ಎಲೆಗಳನ್ನು ತಿನ್ನುವುದು ಉತ್ತಮ. ಇದರಿಂದ ರೋಗ ನಿರೋಧಕ ಶಕ್ತಿ ವೃದ್ದಿಯಾಗುವುದಲ್ಲದೆ ಬಾಯಿಯ ದುರ್ಗಂಧವು ಕೂಡಾ ನಿವಾರಣೆ ಆಗುತ್ತದೆ. ದಿನನಿತ್ಯ ತುಳಸಿ ಸೇವನೆಯಿಂದ ಅಡ್ಡ ಪರಿಣಾಮಗಳೇನು ಇಲ್ಲ. ಜ್ವರ, ವಿಷಮ ಶೀತ, ಶ್ವಾಸಕೋಶದ ಸೋಂಕು, ಕೆಮ್ಮು ಮತ್ತು ನೆಗಡಿ ಹೋಗಾಡಿಸಲು ಇದರಿಂದ ಸಾಧ್ಯ. ತುಳಸಿ ಕಷಾಯ ಕುಡಿದರೆ ದೇಹ ಸದೃಢವಾಗುವುದರೊಂದಿಗೆ ಹೊಟ್ಟೆ ಸಂಬಂಧಿ ರೋಗಳನ್ನು ದೂರವಿರಿಸ ಬಹುದು.

ತುಳಸಿ ಎಲೆಯ ರಸವನ್ನು ಎಣ್ಣೆಯಲ್ಲಿ ಕಾಯಿಸಿ ತಲೆಗೆ ಹಚ್ಚುವುದರಿಂದ ತಲೆಯಲ್ಲಿನ ಹೇನು, ಹೊಟ್ಟು ಬರುವಿಕೆ ಕೂಡಾ ನಿವಾರಣೆಯಾಗುತ್ತದೆ. ಹಾಗೆಯೇ ಹಲವು ವಿಧದ ಚರ್ಮ ಸಂಬಂಧಿ ರೋಗಗಳಿಂದಲೂ ನಿವಾರಣೆ ಮಾಡುತ್ತದೆ. ಇದರಿಂದ ಚರ್ಮ ಮೃದುವಾಗುವುದಲ್ಲದೆ ಅಂದವಾಗುತ್ತದೆ. ಮನೆ ಪರಿಸರದಲ್ಲಿ ತುಳಸಿ ಗಿಡಗಳನ್ನು ಬೆಳೆಸುವ ಮೂಲಕ ಸೊಳ್ಳೆಗಳನ್ನು ದೂರವಿರಿಸ ಬಹುದು. ಒಟ್ಟಿನಲ್ಲಿ ಉತ್ತಮ ಆರೋಗ್ಯಕ್ಕಾಗಿ ತುಳಸಿ ಸೇವನೆ ಉತ್ತಮ. ನಿಯಮಿತವಾಗಿ ನಿತ್ಯ ತುಳಸಿ ಎಲೆಗಳು ಸೇವಿಸುವುದರಿಂದ ಬುದ್ಧಿಶಕ್ತಿ ಚುರುಕುಗೊಳ್ಳುತ್ತದೆ. ತುಳಸಿ ಉದರ ಬಾಧೆಗಳನ್ನು ನಿವಾರಿಸಿ ಶರೀರಕ್ಕೆ ಶಕ್ತಿ ಕೊಡುತ್ತದೆ. ಇದರ ಎಲೆಗಳನ್ನು ಚಹಾದೊಂದಿಗೆ ಕುದಿಸಿ ಕುಡಿಯುವುದರಿಂದ ಮಲೇರಿಯಾ, ಡೆಂಗ್ಯೂ ಜ್ವರ ಉಪಶಮನವಾಗುತ್ತದೆ. ತುಳಸಿಯ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸುವುದರಿಂದ ನೆಗಡಿ, ಶೀತ, ಕೆಮ್ಮು, ಗಂಟಲು ನೋವು ನಿವಾರಣೆಯಾಗುತ್ತದೆ. ತುಳಸಿ ರಸವನ್ನು ಗಂಧದೊಂದಿಗೆ ತೇಯ್ದು ನೆತ್ತಿಗೆ ಹಚ್ಚುವುದರಿಂದ ತಲೆನೋವು ಉಪಶಮನವಾಗುತ್ತದೆ. ತುಳಸಿ ರಸವನ್ನು ಜೇನಿನೊಂದಿಗೆ ನಿಯಮಿತವಾಗಿ 6 ತಿಂಗಳು ತೆಗೆದು ಕೊಂಡರೆ ಕಿಡ್ನಿ ಸ್ಟೋನ್ ಬಾಧೆ ಕಡಿಮೆಯಾಗುತ್ತದೆ. ಗಂಟಲ ನೋವು ಇದ್ದಾಗ, ಸ್ವರ ಕಳೆದಾಗ ತುಳಸಿಯ ಎಲೆಹಾಕಿ ನೀರನ್ನು ಕುದಿಸಿ ಬಾಯಿ ಮುಕ್ಕಳಿಸ ಬೇಕು. ಎಲ್ಲ ಬಗೆಯ ಜ್ವರದ ಪೀಡೆಗೆ ತುಳಸಿಯ ಕಷಾಯ ಪರಿಣಾಮಕಾರಿಯಾಗಿದೆ. ಉರಿಮೂತ್ರದ ತೊಂದರೆಗೆ ತುಳಸಿಯ ರಸವನ್ನು ಹಾಲು, ಸಕ್ಕರೆಯೊಂದಿಗೆ ಬೆರೆಸಿ ಕುಡಿಯ ಬೇಕು. ಚರ್ಮರೋಗಕ್ಕೆ (ಇಸಬು, ಗಜಕರ್ಣಕ್ಕೆ) ತುಳಸಿಯ ಎಲೆಯನ್ನು ಉಪ್ಪಿನೊಂದಿಗೆ ಬೆರೆಸಿ ಅರೆದು ಲೇಪಿಸ ಬೇಕು, ತುಳಸಿ ಕಷಾಯ ಕುಡಿಯ ಬೇಕು. ಮಕ್ಕಳಿಗೆ ಕಫ ಕೂಡಿದ ಕೆಮ್ಮು ಬಂದಾಗ ತುಳಸಿಯ ದಳ ಜೇನಿನಲ್ಲಿ ಅದ್ದಿ ತಿನ್ನಿಸ ಬೇಕು. ಯಕೃತ್ತಿನ(ಲಿವರ್) ತೊಂದರೆಗೆ ತುಳಸಿ ಕಷಾಯ ಉಪಶಮನಕಾರಿ. ಕಿವಿಯ ನೋವಿಗೆ ತುಳಸಿಯ ರಸ ಕಿವಿಯಲ್ಲಿ ಹಾಕ ಬೇಕು. ರಸದ ಶುದ್ಧಿಯ ಬಗ್ಗೆ ಗಮನವಿರಬೇಕು. ರೋಗನಿರೋಧಕ ಶಕ್ತಿ ಹೆಚ್ಚಿಸಲು ಖಾಲಿಹೊಟ್ಟೆಯಲ್ಲಿ 5ರಿಂದ 10 ತುಳಸಿಯ ದಳ ತಿನ್ನ ಬೇಕು. ವಾಂತಿಭೇದಿ ಆದಾಗ ತುಳಸಿಯ ಬೀಜ ಬಳಸ ಬೇಕು. ಕುತ್ತಿಗೆಯಲ್ಲಿ ತುಳಸಿಯ ಮಾಲೆಯನ್ನು ಧರಿಸುವುದರಿಂದ ಜೀವನಶಕ್ತಿ ಹೆಚ್ಚಾಗುತ್ತದೆ. ಅವಶ್ಯಕವಾದ ಆಕ್ಯುಪ್ರೆಶರ್ ಬಿಂದುಗಳ ಮೇಲೆ ಒತ್ತಡ ಬಿದ್ದು, ಇದರಿಂದಾಗಿ ಮಾನಸಿಕ ಒತ್ತಡಗಳಲ್ಲಿ ಲಾಭವಾಗುತ್ತದೆ. ಸಾಂಕ್ರಾಮಿಕ ರೋಗಗಳಿಂದ ರಕ್ಷಣೆಯಾಗುತ್ತದೆ ಹಾಗೂ ಶರೀರದ ಸ್ವಾಸ್ಥ್ಯ ಸುಧಾರಿಸಿ, ದೀರ್ಘಾಯು ಪ್ರಾಪ್ತಿಯಾಗುತ್ತದೆ. ಇದನ್ನು ಧರಿಸುವುದರಿಂದ ಶರೀರದಲ್ಲಿ ವಿದ್ಯುತ್ ಶಕ್ತಿಯ ಪ್ರವಾಹವು ಬೆಳೆಯುತ್ತದೆ ಹಾಗೂ ಜೀವ ಕೋಶಗಳ ಮುಖಾಂತರ ಧಾರಣ ಶಕ್ತಿಯ ಸಾಮರ್ಥ್ಯ ವೃದ್ಧಿಯಾಗುತ್ತದೆ. ಕುತ್ತಿಗೆಯಲ್ಲಿ ಹಾರವನ್ನು ಧರಿಸುವುದರಿಂದ ವಿದ್ಯುತ್ತಿನ ಅಲೆಗಳು ಹೊರ ಬಿದ್ದು ರಕ್ತ ಸಂಚಾರ ಯಾವುದೇ ಅಡಚಣೆ ಆಗದಂತೆ ನೋಡಿ ಕೊಳ್ಳುತ್ತವೆ. ಪ್ರಬಲ ವಿದ್ಯುತ ಶಕ್ತಿಯಿಂದಾಗಿ ಧರಿಸುವವರ ಮೇಲೆ ಚುಂಬಕೀಯ ಮಂಡಲವು ಚಾಲನೆಯಲ್ಲಿರುತ್ತದೆ. ತುಳಸಿ ಮಾಲೆ ಧರಿಸುವುದರಿಂದ ಧ್ವನಿಯು ಸುಮಧುರವಾಗುತ್ತದೆ, ಗಂಟಲಿನ ರೋಗಗಳಾಗುವುದಿಲ್ಲ, ಮುಖವು ಬೆಳ್ಳಗೆ ಗುಲಾಬಿ ವರ್ಣದ್ದಾಗಿರುತ್ತದೆ.

  • ಹೃದಯದ ಮೇಲೆ ನೇತಾಡುವ ತುಳಸಿ ಮಾಲೆಯು ಶ್ವಾಸ ಕೋಶ ಹಾಗೂ ಹೃದಯ ರೋಗಗಳಿಂದ ರಕ್ಷಿಸುತ್ತದೆ.
  • ತುಳಸಿ ಮಾಲೆ ಧರಿಸುವವರಲ್ಲಿ ಸಾತ್ವಿಕ ಸ್ವಭಾವದ ಸಂಚಾರವಾಗುತ್ತದೆ.
  • ಯಾವ ಮನುಷ್ಯ ತುಳಸಿ ಕಟ್ಟಿಗೆಯಿಂದ ತಯಾರಾದ ಮಾಲೆಯನ್ನು ಭಗವಾನ್ ವಿಷ್ಣುವಿಗೆ ಅರ್ಪಿಸಿ ಪ್ರಸಾದ ರೂಪವಾಗಿ ಭಕ್ತಿಯಿಂದ ಧರಿಸುತ್ತಾನೆಯೋ ಅವನ ಅಪರಾಧಗಳು ನಷ್ಟವಾಗುತ್ತವೆ. ಮಣಿಕಟ್ಟಿನಲ್ಲಿ ತುಳಸಿಯ ಮಾಲೆಯನ್ನು ಧರಿಸುವುದರಿಂದ ನಾಡಿಮಿಡಿತ ತಪ್ಪುವದಿಲ್ಲ, ಕೈಗಳು ಮರಗಟ್ಟುವುದಿಲ್ಲ ಹಾಗೂ ಭುಜಗಳಿಗೆ ಶಕ್ತಿ ಬರುತ್ತದೆ.
  • ತುಳಸಿಯ ಬೇರುಗಳನ್ನು ಸೊಂಟಕ್ಕೆ ಕಟ್ಟುವುದರಿಂದ ಅದರಲ್ಲೂ ವಿಶೇಷವಾಗಿ ಗರ್ಭಿಣಿಯರಿಗೆ ವಿಶೇಷ ಲಾಭವಾಗುತ್ತದೆ. ಪ್ರಸವ ವೇದನೆ ಕಡಿಮೆಯಾಗುತ್ತದೆ ಹಾಗೂ ಸುಲಭವಾಗಿ ಆಗುತ್ತದೆ.
  • ಸೊಂಟಕ್ಕೆ ತುಳಸಿಯ ಉಡುದಾರವನ್ನು ಕಟ್ಟುವುದರಿಂದ ಪಾರ್ಶ್ವವಾಯು ಸಂಭವಿಸುವುದಿಲ್ಲ, ಸೊಂಟ, ಯಕೃತ್ತು, ಪ್ಲೀಹ, ಅಮಾಶಯ ಹಾಗೂ ಸೊಂಟದ ಭಾಗದಲ್ಲಿರುವ ಅಂಗಗಳ ವಿಕಾರಗಳು ಉಂಟಾಗುವುದಿಲ್ಲ.
  • ತುಳಸಿಯ ಮಾಲೆಯಿಂದ ಜಪವನ್ನು ಮಾಡುವುದರಿಂದ ಬೆರಳುಗಳಲ್ಲಿರುವ ಅಕ್ಯುಪ್ರೆಶರ್ ಬಿಂದುಗಳಿಗೆ ಒತ್ತಡ ಬೀಳುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.
  • ತುಳಸಿಯನ್ನು ನಿಯಮಿತವಾಗಿ ಸೇವಿಸಿದಲ್ಲಿ ತುಂಡಾಗಿರುವ ಎಲುಬುಗಳು ಮರು ಜೋಡಣೆಯಲ್ಲಿ ಸಹಾಯಕವಾಗುತ್ತದೆ.
  • ತುಳಸಿಯ ಹತ್ತಿರ ಓದುವುದು, ಸತ್ಚಿಂತನೆ ಮಾಡುವುದು, ದೀಪವನ್ನು ಹಚ್ಚುವುದು ಹಾಗೂ ತುಳಸಿ ಗಿಡದ ಸುತ್ತ ಪ್ರದಕ್ಷಿಣೆ ಹಾಕುವುದರಿಂದ ಐದು ಇಂದ್ರೀಯಗಳ ವಿಕಾರಗಳು ದೂರವಾಗುತ್ತವೆ. ಶ್ರೀಕೃಷ್ಣ ತುಲಾಭಾರದ ಸಮಯದಲ್ಲಿ ಸತ್ಯಭಾಮಾ ದೇವಿಯು ಖಜಾನೆಯಲ್ಲಿದ್ದ ನಗ ನಾಣ್ಯವನ್ನೆಲ್ಲಾ ಹಾಕಿದರೂ, ಕೃಷ್ಣನ ತೂಕಕ್ಕೆ ಅದು ಸರಿ ಹೊಂದುವುದಿಲ್ಲ. ಆದರೆ ರುಕ್ಮಿಣಿ ಮಾತೆ, ಭಕ್ತಿ ಭಾವದಿಂದ ಹಾಕುವ ಒಂದೇ ಒಂದು ದಳ ತುಳಸಿ, ಶ್ರೀಕೃಷ್ಣನ ತೂಕಕ್ಕೆ ಸಮನಾಗುತ್ತದೆ. ಇದು ತುಳಸಿಯ ಹಿರಿಮೆ ಸಾರುವ ಒಂದು ದೃಷ್ಟಾಂತ. ತುಳಸಿ ಕೇವಲ ಹಿಂದೂಗಳಿಗೆ ಮಾತ್ರ ಪವಿತ್ರವಲ್ಲ. ತುಳಸಿಯ ಬಗ್ಗೆ ಕ್ರೈಸ್ತರು, ಮುಸಲ್ಮಾನರಿಗೂ ಪೂಜ್ಯ ಭಾವನೆಯಿದೆ. ಕ್ರೈಸ್ತರು ತುಳಸಿ ಗಿಡವನ್ನು ಚರ್ಚ್ಗೆ ತೆಗೆದು ಕೊಂಡು ಹೋಗಿ ಪೂಜಿಸಿ, ನಂತರ ಮನೆಯಂಗಳದಿ ನೆಟ್ಟು, ತಮ್ಮ ಮುಂದಿನ ಬದುಕು, ಸುಖ, ಶಾಂತಿ ಹೊಂದಿರಲೆಂದು ಪ್ರಾರ್ಥಿಸುತ್ತಾರೆ. ಸೂಫಿ ಪಂಥದಲ್ಲಿಯೂ ತುಳಸಿಯ ಪೂಜಿಸಲಾಗುತ್ತದೆ. ಅವರೂ ತುಳಸಿಗೆ ಮಾನ್ಯತೆ ನೀಡುತ್ತಾರೆ. ಜೈನರೂ ಪೂಜೆಗೆ ತುಳಸಿಯ ದಳ ಬಳಸುತ್ತಾರೆ. ಹಿಂದೂ ದೇವಾಲಯಗಳಲ್ಲಿ ತುಳಸಿ ಮಾಲೆಯಿಂದ ದೇವರನ್ನು ಅರ್ಚಿಸುತ್ತಾರೆ.

Leave a Reply Cancel reply