ನೀರುದೋಸೆಯ ಭಿನ್ನರುಚಿ!

0Shares

ಕೇಸರಿ-ಬಿಳುಪು-ಹಸಿರು ಬಣ್ಣದ ಈ ಮೂರೂ ದೋಸೆಗಳು ನೀರುದೋಸೆಯ ವಿವಿಧ ಅವತರಣಿಕೆಗಳು. ಬಿಳಿ ಬಣ್ಣದ್ದು ಸಾದಾ ನೀರು ದೋಸೆ. ಇದನ್ನು ತಯಾರಿಸುವ ವಿಧಾನ ಬಲು ಸರಳ.

ನೀರುದೋಸೆ ಭಿನ್ನರುಚಿ

2 ಕಪ್ ಬೆಳ್ತಿಗೆ ಅಕ್ಕಿಯನ್ನು 2-3 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ಇದಕ್ಕೆ 2 ಚಮಚೆಯಷ್ಟು ತೆಂಗಿನಕಾಯಿ ತುರಿ ಹಾಕಿ ನುಣ್ಣಗೆ ರುಬ್ಬಿ. ಈ ಹಿಟ್ಟಿಗೆ ಸಾಕಷ್ಟು ನೀರೆರೆದು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಕಾದ ಕಾವಲಿ ಮೇಲೆ, ಅರ್ಧ ಚಮಚ ಅಡುಗೆಎಣ್ಣೆ ಹಚ್ಚಿ. ತಯಾರಿಸಿಟ್ಟುಕೊಂಡ ಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ‘ಎರಚಿ’, ದೋಸೆ ತಯಾರಿಸಿ. ಕಾವಲಿಯನ್ನು ಮುಚ್ಚಿ ಒಂದೆರಡು ನಿಮಿಷ ಬೇಯಿಸಿ. ತೆಳ್ಳನೆಯ ನೀರುದೋಸೆ ಸಿದ್ಧ.

(ನೀರು ದೋಸೆಯ ಹಿಟ್ಟನ್ನು ತಯಾರಿಸಿದ ಕೂಡಲೇ ಬಳಸಿದರೆ ಉತ್ತಮ. ಹುದುಗು ಬರಿಸಬಾರದು. ಹಿಟ್ಟನ್ನು ಕಾವಲಿಯ ಮೇಲೆ ಸ್ವಲ್ಲ ಎತ್ತರದಿಂದ ಎರಚಿದರೆ ಮಾತ್ರ ದೋಸೆ ತೆಳ್ಳಗಾಗುತ್ತದೆ. ತೆಳ್ಳಗಿರುವ ಈ ದೋಸೆಯನ್ನು ಮಗುಚಿ ಹಾಕಿ ಎರಡೂ ಕಡೆ ಬೇಯಿಸುವ ಅಗತ್ಯವಿಲ್ಲ.)

2 ಕಪ್ ನೆನೆಸಿದ ಅಕ್ಕಿಗೆ, 2 ಕಪ್ ಸಿಪ್ಪೆ ಸಮೇತ ಹೆಚ್ಚಿದ ಸೌತೆಕಾಯಿ ಹಾಕಿ. 2 ಚಮಚ ತೆಂಗಿನಕಾಯಿ ತುರಿ, ಬೇಕಿದ್ದಷ್ಟು ಉಪ್ಪು ಸೇರಿಸಿ ನೀರುದೋಸೆಯಂತೆ ತಯಾರಿಸಿದರೆ ತಿಳಿಹಸಿರು ಬಣ್ಣದ ‘ಸೌತೆಕಾಯಿ ದೋಸೆ‘ಯಾಗುತ್ತದೆ.

ಸೌತೆಕಾಯಿಯ ಬದಲು 2 ಕಪ್ ಹೆಚ್ಚಿದ ಕ್ಯಾರೆಟ್ ಅನ್ನು ಸೇರಿಸಿ ರುಬ್ಬಿದರೆ ಕಿತ್ತಳೆ ಬಣ್ಣದ ‘ಕ್ಯಾರೆಟ್ ದೋಸೆ‘ಯಾಗುತ್ತದೆ.

ಬಣ್ಣ-ರುಚಿ-ಸುವಾಸನೆ ಹೊಂದಿರುವ ಈ ದೋಸೆಗಳು ಆರೋಗ್ಯಕರ. ತರಕಾರಿ ತಿನ್ನಲು ತಕರಾರು ಮಾಡುವ ಮಕ್ಕಳು ಬಣ್ಣದ ದೋಸೆಗಳನ್ನು ಇಷ್ಟಪಟ್ಟು ತಿನ್ನುತ್ತಾರೆ ಮತ್ತು ಅವರಿಗೆ ಗೊತ್ತಾಗದಂತೆ ತರಕಾರಿ ಅವರ ಹೊಟ್ಟೆ ಸೇರುತ್ತದೆ.

ಈ ದೋಸೆಗಳಿಗೆ ನೆಂಚಿಕೊಳ್ಳಲು ಸಿಹಿ ಬಯಸುವವರಿಗೆ ಕಾಯಿ-ಬೆಲ್ಲ, ಖಾರ ಪ್ರಿಯರಿಗೆ ಚಟ್ನಿ, ಯಾವುದೇ ಸಾಂಬಾರ್, ಮೊಸರು ಚೆನ್ನಾಗಿರುತ್ತದೆ. ಇವು ಯಾವುದೂ ಲಭ್ಯವಿಲ್ಲವಾದರೆ ವಿವಿಧ ಚಟ್ನಿಪುಡಿಗಳು, ಉಪ್ಪಿನಕಾಯಿಗಳು ಕೂಡ ನೀರುದೋಸೆಯೊಂದಿಗೆ ಬೆರೆಯುತ್ತವೆ. ಅಷ್ಟರ ಮಟ್ಟಿಗೆ ಸರಳ ಮತ್ತು ನಿರಾಡಂಬರ ತಿನಿಸು ಕರಾವಳಿಯ ನೀರುದೋಸೆ!

ಇದು ಬೆಳಗಿನ ತಿಂಡಿಗೂ ಸರಿ. ಮಕ್ಕಳ ಊಟದ ಡಬ್ಬಿಗೂ ಪರವಾಗಿಲ್ಲ. ಹಸಿವಾದರೆ ಸಂಜೆಯ ಸ್ನಾಕ್ಸ್ ಗೂ ಸೈ. ರುಚಿ ಹೆಚ್ಚಿಸಲು ಕೆಲವರು ಸಾದಾ ನೀರುದೋಸೆಗೆ ಈರುಳ್ಳಿ, ಹಸಿರುಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು..ಇತ್ಯಾದಿ ಸೇರಿಸುವುದೂ ಇದೆ.

ಕೃಪೆ: ಹೇಮ ಮಾಲ

0Shares

Leave a Reply

error: Content is protected !!