ನರಸಿಂಹ ಗಡ – ಗಡಾಯಿಕಲ್ಲು

0Shares

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕೆಂದರೆ ಎಲ್ಲರ ಮುಂದೆ ಮೂಡುವ ದೃಶ್ಯ ನರಸಿಂಹ ಗಡ (ಗಡಾಯಿ ಕಲ್ಲು). ಬೆಳ್ತಂಗಡಿ ತಾಲೂಕಿನಲ್ಲೇ ಅತ್ಯಂತ ಆಕರ್ಷಣೆಯ, ಚಾರಣಿಗರಿಗೆ, ಪ್ರವಾಸಿಗರಿಗೆ ಪ್ರಿಯ ತಾಣವಾಗಿ ಈ ಕಲ್ಲು ವಿರಾಜಿಸುತ್ತಿದೆ. ಕುದುರೆ ಮುಖ ರಾಷ್ಟ್ರೀಯ ಉದ್ಯಾನವನದಲ್ಲಿರುವ `ನಡ’ ಗ್ರಾಮಕ್ಕೆ ಸೇರಿರುವ  ಮತ್ತು ರಾಜ್ಯ ಹೆದ್ದಾರಿಗೆ ಸನಿಹದಲ್ಲಿರುವ ಈ ಗಡಾಯಿಕಲ್ಲು ಹಲವಾರು ಐತಿಹ್ಯಗಳನ್ನೂ ಚಾರಿತ್ರಿಕ ದಾಖಲೆಗಳನ್ನೂ ಹೊಂದಿದೆ. ಅದಮ್ಯ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಈ ಕಲ್ಲು ಪಶ್ಚಿಮ ಘಟ್ಟದ ಹಿನ್ನಲೆಯೊಂದಿಗೆ ಶೋಭಿಸುತ್ತಾ ಚಾರಣಿಗರನ್ನು, ಪ್ರಕೃತಿ ಪ್ರಿಯರನ್ನು ತನ್ನೆಡೆಗೆ ಕೈ ಬೀಸಿ ಕರೆಯುತ್ತಿದೆ.

ಗಡಾಯಿಕಲ್ಲು ನರಸಿಂಹ ಗಡ

೧ ನೇ ವೀರನರಸಿಂಹ ಬಲ್ಲಾಳನು ಬೆಳ್ತಂಗಡಿಯ ಹತ್ತಿರವಿರುವ ಬೆಟ್ಟದಲ್ಲಿ ಒಂದು ಪ್ರವಾಸಿಧಾಮ ನಿರ್ಮಿಸಲು ಯೋಚಿಸಿದನು. ಅದರಂತೆ ಆ ಬೆಟ್ಟದ ಶಿಖರದವರೆಗೆ ಮೆಟ್ಟಿಲುಗಳನ್ನು ಕಡಿಸಿ ಅದರ ಮೇಲೆ ಸುತ್ತಲೂ ಕೋಟೆಕಟ್ಟಿ ಚಾರಿತ್ರಿಕ ಗಡವಾಗಿ ಉಳಿವಂತೆ ಮಾಡಿಸಿ ಕ್ರಿಸ್ತಶಕ ೧೧೫೫ ರಲ್ಲಿ “ನರಸಿಂಹಗಡ”ವೆಂದು ತನ್ನ ಹೆಸರನ್ನು ಇಟ್ಟು ಉತ್ತಮ ಪ್ರವಾಸಿಧಾಮದ ಉದ್ಘಾಟನೆ ಕೂಡಾ ಮಾಡಿಸಿದನು. ಆ ನರಸಿಂಹ ಗಡದ ಕೆಳಗೆ ದೊಡ್ಡ ಪಟ್ಟಣದ ನಿರ್ಮಾಣವಾಯಿತು. ಎಲ್ಲಾ ಜಾತಿಯವರ ಒಂದು ಸಾವಿರ ಮನೆಗಳನ್ನು ಸುತ್ತಲೂ ಕಟ್ಟಿಸಿದನು. “ಚತುಸಂಗ ಪೇಟೆ” ಎಂದು ಕರೆದನು. ಮೈಸೂರಿನಿಂದ ಬ್ರಾಹ್ಮಣರನ್ನು ಕೂಡಾ ಅಲ್ಲಿಗೆ ಕರೆಸಿದನು. ಆ ಗಡದ ಉತ್ತರ ಈಶಾನ್ಯದಲ್ಲಿ ವನದುರ್ಗೆ, ನಾಗ ಬ್ರಹ್ಮಸ್ಥಾನಗಳು ಕೂಡಾ ಇದ್ದು ಆ ಸ್ಥಾನಗಳನ್ನು ಅಭಿವೃದ್ಧಿ ಮಾಡಿಸಿದನು. ಈ ದೇವಸ್ಥಾನದ ಕುರುಹು ಈಗಲೂ ಇದೆ. ಅಲ್ಲಿಗೆ “ಕೂಡೇಲು” ಎಂದು ಕರೆಯುತ್ತಾರೆ. ನಂತರ ವೀರನರಸಿಂಹ ಬಲ್ಲಾಳನು ದ್ವಾರ ಸಮುದ್ರಕ್ಕೆ ಹೋದನು.

೪ನೇ ಲಕ್ಷ್ಮುಮಪ್ಪನ ತರುವಾಯ ೪ ನೇ ಕಾಮಪ್ಪರಸ ಬಂಗರಾಜನಿಗೆ ಕ್ರಿಸ್ತಶಕ ೧೭೬೭ ರಲ್ಲಿ ಪಟ್ಟವಾಯಿತು. ಇತನು ಕ್ರಿಸ್ತಶಕ ೧೭೯೯ ರ ವರೆಗೆ ರಾಜ್ಯವಾಳಿದನು. ೧೭೬೮ ರಲ್ಲಿ ಇಂಗ್ಲೀಷರು ಮಂಗಳೂರನ್ನು ಹಿಡಿದಾಗ, ಇಲ್ಲಿ ರಾಜಾಳುವಿಕೆಯು ಕೈತಪ್ಪಿತು. ಬಂಗರಾಜ ಕಾಮಪ್ಪಾಸನು ಅಧಿಕಾರ ಕಳಕೊಮ್ಡು ಹೈದರಾಲಿಯಲ್ಲಿ ತನ್ನ ಕಷ್ಟವನ್ನು ಹೇಳಿಕೊಂಡಾಗ ಅವನು ೧೦೦ ವರಹ ಉತ್ಪತ್ತಿ ಬರುವ ಗದ್ದೆ ಮತ್ತು ತೋಟವನ್ನು ಅರಸನಿಗೆ ಬಿಟ್ಟುಕೊಟ್ಟು ಅದನ್ನು ಹಿಂದೆ ಪಡೆಯದಂತೆ ಶೇಖಾಲಿಗೆ ಹೇಳಿ ಹೋದನು. ಹೈದರನ ನೌಕಾಪಡೆ ೧೭೮೨ ರಲ್ಲಿ ಇಂಗ್ಲೀಷರ ವಶವಾದ ನಂತರ ಆಕಸ್ಮಾತ್ ವ್ಯಾಧಿಪೇಡಿತನಾಗಿ ಹೈದರಾಲಿ ಮರಣವಪ್ಪಿದನು. ಹೈದರನು ಕಾಲವಾದ ನಂತರ ಟಿಪ್ಪುಸುಲ್ತಾನನು ಮೈಸೂರಿನ ಸರ್ವಾಧಿಕಾರಿಯಾದನು. ೧೭೮೩ ನೇ ಇಸವಿಯಲ್ಲಿ ಮಂಗಳೂರನ್ನು ಇಂಗ್ಲೀಷರ ಸೈನ್ಯ ವಶಪಡಿಸಿಕೊಂಡಿತು. ೧೭೮೪ ರಲ್ಲಿ ಅದನ್ನು ಟಿಪ್ಪು ವಶಪಡಿಸಿಕೊಂಡನು. ಈ ಸಮಯದಲ್ಲಿ ಆತನ ತಾಯಿ ಜಮೀಲಾಬೀಬಿಗೆ ಆರೋಗ್ಯ ಕೆಟ್ಟಿತು. ಆಕೆಯನ್ನು ವಿಶ್ರಾಂತಿಗಾಗಿ ನರಸಿಂಹಗಡಕ್ಕೆ ಕರೆದೊಯ್ದನು. ಅಲ್ಲಿ ಆಕೆಯ ಆರೋಗ್ಯ ಸುಧಾರಿಸಿತು. ಆ ಸಂತೋಷಕ್ಕೆ ಆಕೆಯ ಹೆಸರನ್ನು ನರಸಿಂಹಗಡಕ್ಕೆ ಇಟ್ಟು “ಜಮಾಲಾಬಾದ್ ಕೋಟೆ” ಎಂದು ಕರೆದನು. ೧೭೮೫ ರಲ್ಲಿ ನೀಲೆಶ್ವರದ ಅರಸ ದಂಗೆ ಎದ್ದ ಕಾರಣ ಆತನನ್ನು ಹಿಡಿದು ಗಲ್ಲೀಗೆರಿಸಿದರು. ೪ನೇ ಕಾಮಪ್ಪ ಬಂಗರಾಜನ ನಂದಾವರದ ಅರಮನೆಯನ್ನು ಸ್ಯಾರೆ ಬ್ಯಾರಿಯು ಪೂರ್ವ ದ್ವೇಷದಿಂದ ಸುಲಿಗೆ ಮಾಡಿದನು. ಜಮಾಲಾಬಾದಿನಲ್ಲಿ ಟಿಪ್ಪುಸುಲ್ತಾನನ ಖಿಲ್ಲೆದಾರನೋರ್ವನು ಸ್ಯಾರೆ ಬ್ಯಾರಿಗೆ ಆಪ್ತನಾದ ಕಾರಣ ಉಪಾಯದಲ್ಲಿ ಕಾಮಪ್ಪರಸ ಬಂಗನನ್ನು ಅಲ್ಲಿಗೆ ಕರೆಸಿ ಗಲ್ಲಿಗೆ ಕೊಟ್ಟನು.

See also  ಮಳಖೇಡ ಕೋಟೆ - ಗುಲ್ಬರ್ಗ

ಗಡಾಯಿಕಲ್ಲು ಫಿರಂಗಿ ತೋಪು

ಗಡಾಯಿಕಲ್ಲು ದ್ವಾರ

ಗಡಾಯಿಕಲ್ಲು ಮೇಲಿನ ನೋಟ

ಗಡಾಯಿಕಲ್ಲು ಮೇಲಿನ ನೋಟ

ಗಡಾಯಿಕಲ್ಲು ಮೇಲಿನ ನೋಟ

ಕ್ರಿಸ್ತಶಕ ೧೭೯೯ ನೇ ಶತಮಾನದಲ್ಲಿ ಟಿಪ್ಪು ಸುಲ್ತಾನನನ್ನು ಇಂಗ್ಲೀಷರು ಶ್ರೀರಂಗಪಟ್ಟಣದಲ್ಲಿ ಕೊಂದರು. ಕರ್ನಾಟಕವು ಇಂಗ್ಲೀಷರ ಪಾಲಿಗೆ ಬಂತು. ಈ ಸಮಯದಲ್ಲಿ ಟಿಪ್ಪು ಸುಲ್ತಾನನ ಸ್ವಾಮಿ ನಿಷ್ಠ ಸೇವಕರು ಬ್ರಿಟಿಷರ ವಿರುದ್ದ ದಂಗೆ ಏಳಲು ಸಂಚು ಹೂಡಿದರು. ಟಿಪ್ಪುವಿನ ಉಪ ಪತ್ನಿಯ ಮಗನಾದ ಫಟೇ ಹೈದರನು ಕಣ್ಣಾನೂರಿಗೆ ಹೋಗಿ ಕೆಲವು ಮುಸ್ಲಿಂ ಯುವಕರಿಗೆ ಯುದ್ಧದ ತರಬೇತಿ ನೀಡಿ ಸಣ್ಣ ಸೈನ್ಯ ಕಟ್ಟಿಕೊಂಡು ತುಳುನಾಡಿಗೆ ಬಂದನು. ಇತ್ತ ಬೇಕಲಕೋಟೆಯಲ್ಲಿ ಟಿಪ್ಪುವಿನ ದಳಪತಿಯಾಗಿದ್ದ ತಿಮ್ಮ ನಾಯಕನು ಇನ್ನೂರು ಮಂದಿ ಸೈನಿಕರೊಡನೆ ಬೆಳ್ತಂಗಡಿ ಹತ್ತಿರದ ನರಸಿಂಹಗಡಕ್ಕೆ ಬಂದನು. ಫಟೇ ಹೈದರ ಮತ್ತು ತಿಮ್ಮ ನಾಯಕ ಈ ಕೋಟೆ ಹತ್ತಿ ಸೈನಿಕರಿಗೆ ತರಬೇತಿ ನೀಡುತ್ತಾ ಇಂಗ್ಲೀಷರೊಡನೆ ಹೋರಾಡಲು ಸಂಚು ಮಾಡಿದರು. ಕೊಯಮುತ್ತೂರಿನಲ್ಲಿ ಟಿಪ್ಪುವಿನ ಕರಣಿಕನಾಗಿದ್ದ ಪತ್ತುಮುಡಿ ಸುಬ್ರಾಯನೆಂಬವನು ಆಂಗ್ಲರ ವಿರುದ್ಧ ಹೋರಾಡಲು ತನ್ನ ಆಪ್ತರಾದ ನೂರು ಮಂದಿ ಅನುಯಾಯಿಗಳೊಂದಿಗೆ ಆಂಗ್ಲರಿಂದ ನೇಮಿಸಲ್ಪಟ್ಟ ಅವರ ಅಧಿಕಾರಿಗಳನ್ನು ಹೊಡೆದೊಡಿಸುವ ಸಂಚನ್ನು ರೂಪಿಸುತ್ತಾ ಸಂಪಾಜೆ ಘಾಟಿ ಮಾರ್ಗವಾಗಿ ಉಪ್ಪಿನಂಗಡಿಗೆ ಬಂದನು.

ಗಡಾಯಿಕಲ್ಲು ಮೇಲಿನ ನೋಟ

ಈ ಸಮಯದಲ್ಲಿ ದಕ್ಷಿಣ ಜಿಲ್ಲೆಯ ಕಲೆಕ್ಟರ್ ಕ್ಯಾಪ್ಟನ್ ಮುನ್ರೋವಿನ ಆದೇಶದಂತೆ ಕಡಬದ ತಹಶೀಲ್ದಾರನ ಮುಖಂಡತ್ವದಲ್ಲಿ ಇನ್ನೂರು ಮಂದಿ ಆಂಗ್ಲ ಸೈನಿಕರು ಸುಬ್ರಾಯನೊಡನೆ ಹೋರಾಟಕ್ಕೆ ಎದುರಾದರು. ಆಗ ಊರವರು ಯಾರೂ ಸುಬ್ರಾಯನಿಗೆ ಸಹಕಾರ ನೀಡಲಿಲ್ಲ. ಸುಬ್ರಾಯನು ಅವರೊಡನೆ ಕಾದಾಟ ಮಾಡಲಾಗದೆ ಶಿಶಿಲೆಯಲ್ಲಿ ಆಶ್ರಯ ಪಡೆದನಂತೆ. ನರಸಿಂಹಗಡವನ್ನು ಕಾಯುತ್ತಿರುವ ಇಂಗ್ಲೀಷ್ ಸೈನಿಕರನ್ನು ಫಟೇ ಹೈದರ ಮತ್ತು ತಿಮ್ಮ ನಾಯಕರು ಕೊಂದು ಹಾಕಿದರು. ಪತ್ತುಮುಡಿ ಸುಬ್ರಾಯನು ಉಗ್ಗೆ ಹಳ್ಳಿಗೆ ಹೋಗಿ ಅಲ್ಲಿಯ ಪಾಳೇಗಾರರ ನೆರವು ಪಡೆದು ಐಗೂರು ಕೃಷ್ಣಪ್ಪ ನಾಯಕನೊಡನೆ ಜಮಾಲಾಬಾದ್ ಕೋಟೆಗೆ ಬಂದು ಫಟೇ ಹೈದರ ಮತ್ತು ತಿಮ್ಮ ನಾಯಕನನ್ನು ಕೂಡಿಕೊಂಡು ಆಂಗ್ಲರ ವಿರುದ್ಧ ಹೋರಾಡಲು ಸಿದ್ಧತೆ ಮಾಡಿದರು. ಈ ವಿಚಾರವರಿತ ಕಡಬದ ತಹಶಿಲ್ದಾರನು ತನ್ನ ಇಂಗ್ಲೀಷ್ ಸೈನಿಕರೊಡನೆ ಬೆಳ್ತಂಗಡಿಗೆ ಬಂದು ಚಂದ್ಕೂರಿನಲ್ಲಿ ಪಾಳ್ಯ ಬಿಟ್ಟು ಶತ್ರುಗಳ ನಾಶಕ್ಕೆ ಹೊಂಚು ಹಾಕಿದನು. ಈ ಸಮಯದಲ್ಲಿ ಊರಿನ ಕೆಲವು ಮುಖಂಡರು ಜಮಲಾಬಾದಿನಲ್ಲಿ ಇರುವ ಶಸ್ತ್ರಾಗಾರ ಮದ್ದಿನ ಮನೆಗಳ ಗುಟ್ಟನ್ನು ಹೇಳಿ ಇಂಗ್ಲೀಷರಿಗೆ ನೆರವು ನೀಡಿದರು. ಇಂಗ್ಲೀಷರು ಫಿರಂಗಿಗಳನ್ನು ಸಿಡಿಸಿ. ಮದ್ದಿನ ಮನೆಯನ್ನು ಸುಟ್ಟರು. ಈ ಸಮಯದಲ್ಲಿ ಕೋಟೆಯಲ್ಲಿದ್ದ ಫಟೇ ಹೈದರ, ತಿಮ್ಮ ನಾಯಕರು ತಪ್ಪಿಸಿಕೊಂಡು ಹೋದರು. ಪತ್ತುಮುಡಿ ಸುಬ್ರಾಯನನ್ನು ಬ್ರಿಟಿಷರು ಕೊಂದು ಹಾಕಿದರು. ಇಂಗ್ಲೀಷರು ಬಹಳ ಪ್ರಯತ್ನದಿಂದ ಕೋಟೆಯನ್ನು ಸ್ವಾಧೀನ ಮಾಡಿಕೊಂಡರು. ಆದರೆ ಫಟೇ ಹೈದರ , ತಿಮ್ಮ ನಾಯಕರಿಗೆ ಆ ಸಮಯದಲ್ಲಿ ತುಳುವರಾರೂ ಸಹಕಾರ ನೀಡದಿರುವುದರಿಂದ ಅವರು ಇಂಗ್ಲೀಷರ ಸೆರೆಯಾಳಾದರು. ಅವರನ್ನು ಬೇಕಲಕೋಟೆಯಲ್ಲಿ ಗಲ್ಲಿಗೇರಿಸಿದರು. ಸ್ವಾತಂತ್ರ್ಯ ಸಮರದ ಕಾಲದಲ್ಲಿ ವೀರನರಸಿಂಹ ಬಲ್ಲಾಳ ಕಟ್ಟಿದ ಕೋಟೆ ಪ್ರಸಿದ್ಧಿ ಪಡೆದಿತ್ತು.

0Shares

Leave a Reply

error: Content is protected !!