ಏಕಾದಶಿ ಆಚರಣೆ – ವೈಜ್ಞಾನಿಕ ಮತ್ತು ಪೌರಾಣಿಕ ಮಹತ್ವ

0Shares

ಏಕಾದಶ ಈ ಸಂಸ್ಕೃತ ಪದದ ಅರ್ಥ ಹನ್ನೊಂದು(11). ಹಿಂದೂ ಪಂಚಾಂಗದ 12 ಮಾಸಗಳ ಶುಕ್ಲ ಪಕ್ಷದ ಮತ್ತು ಕೃಷ್ಣ ಪಕ್ಷದ ಹನ್ನೊಂದನೆಯ ದಿನವನ್ನು ಏಕಾದಶಿ ಎನ್ನಲಾಗುತ್ತದೆ. 5 ಕರ್ಮೇಂದ್ರಿಯ, 5 ಜ್ಞಾನೇಂದ್ರಿಯ ಮತ್ತು ಮನಸ್ಸಿನಿಂದ ಅಂದರೆ, ಧರ್ಮ, ಕರ್ಮ, ಜ್ಞಾನಸಾಧನ ಕರಣಗಳಿಂದ ಭಗವತ್‍ ಚಿಂತನೆಯಲ್ಲಿ ತೊಡಗಿಕೊಳ್ಳುವ ಕ್ರಿಯೆಯೇ ‘ಏಕಾದಶಿ’. ಈ ಏಕಾದಶಿಗೆ ಸಾಕ್ಷಾತ್ ಶ್ರೀಹರಿಯೇ ಅಭಿಮಾನಿ ದೇವರು. ಆ ಕಾರಣಕ್ಕೆ ಈ ದಿನವನ್ನು ‘ಹರಿದಿನ’ ಎಂತಲೂ ಕರೆಯುವರು. ಒಂದು ಮಾಸದಲ್ಲಿ ಎರಡು ಏಕಾದಶಿಗಳಿರುತ್ತವೆ. ಅಮವಾಸ್ಯೆಯ ನಂತರ ಬರುವ ಏಕಾದಶಿಯನ್ನು ಶುಕ್ಲ ಪಕ್ಷದ ಏಕಾದಶಿ ಎಂದು ಕರೆಯಲಾಗುತ್ತದೆ. ಹಾಗೆಯೇ ಹುಣ್ಣಿಮೆ ಬರುವ ಏಕಾದಶಿಯನ್ನು ಕೃಷ್ಣ ಪಕ್ಷದ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನದಂದು ಯಾವ ಆಹಾರವನ್ನೂ ಸೇವಿಸದೆ, ಉಪವಾಸ ಮಾಡುವ ಸಂಪ್ರದಾಯವಿದೆ. ಈ ದಿನ ಆಹಾರವನ್ನು ತ್ಯಜಿಸಿ ದೇವರ ಧ್ಯಾನದಲ್ಲಿ ತೊಡಗಿದರೆ ವಿಶೇಷ ಫಲ ದೊರೆಯುತ್ತದೆ ಎಂಬುದು ನಿಯಮ. ಈ ದಿನದಂದು ಕೆಲವರು ಅನ್ನವನ್ನು ಮಾತ್ರ ತ್ಯಜಿಸಿ ಉಪವಾಸ ಆಚರಿಸಿದರೆ,ಮತ್ತೆ ಕೆಲವರು ಹನಿ ನೀರನ್ನೂ ಕುಡಿಯದೆ,ನಿರಾಹಾರ ವ್ರತವನ್ನು ಆಚರಿಸುತ್ತಾರೆ. ದಶಮಿಯಂದು ಅಂದರೆ ಏಕಾದಶಿಯ ಹಿಂದಿನ ದಿನ ಒಂದು ಹೊತ್ತು ಮಧ್ಯಾಹ್ನ ಊಟಮಾಡಿ, ಭೋಗಗಳನ್ನು ತ್ಯಜಿಸಿ, ಮರುದಿನ ಏಕಾದಶಿ ಉಪವಾಸಮಾಡಬೇಕು. ಮಾರನೆಯ ದಿನ ಅಂದರೆ ದ್ವಾದಶಿಯಂದು ಬೆಳಿಗ್ಗೆ ೯ ಘಂಟೆಯೊಳಗಾಗಿ ನಿತ್ಯಕರ್ಮ ಮುಗಿಸಿ ಭೋಜನ ಮಾಡಬೇಕು.  ಕೆಲವರು ಏಕಾದಶಿಯಂದು ಮೌನ ವ್ರತ ಸಹ ಆಚರಿಸುತ್ತಾರೆ.

ಏಕಾದಶಿ

ವರ್ಷದ ಪ್ರತಿ ತಿಂಗಳದ ಶುಕ್ಲ ಮತ್ತು ಕೃಷ್ಣ ಪಕ್ಷದಲ್ಲಿ ಬರುವ ಏಕಾದಶಿಯ ಹೆಸರುಗಳು:

ವೈದಿಕ ಮಾಸ

ಪಾಲಕ ದೇವತ ಶುಕ್ಲ ಪಕ್ಷ ಏಕಾದಶಿ

ಕೃಷ್ಣಪಕ್ಷ ಏಕಾದಶಿ

ಚೈತ್ರ (March–April)

ವಿಷ್ಣು ಕಾಮದಾ

ವರೂಥಿನಿ

ವೈಶಾಖ (April–May)

ಮಧುಸೂದನ ಮೋಹಿನೀ

ಅಪರಾ

ಜ್ಯೇಷ್ಠ (May–June)

ತ್ರಿವಿಕ್ರಮ ನಿರ್ಜಲಾ ಯೋಗಿನೀ

ಆಷಾಢ (June–July)

ವಾಮನ ಶಯನೀ/ಪ್ರಥಮಾ

ಕಾಮಿಕಾ

ಶ್ರಾವಣ (July-August)

ಶ್ರೀಧರ ಪವಿತ್ರಾ

ಅಜಾ

ಭಾದ್ರಪದ (August–September)

ಹೃಷೀಕೇಶ ಪಾರ್ಶ್ವಪರಿವರ್ತಿನೀ

ಇಂದಿರಾ

ಆಶ್ವಯುಜ (September–October)

ಪದ್ಮನಾಭ ಪಾಶಾಂಕುಶಾ

ರಮಾ

ಕಾರ್ತೀಕ (October–November)

ದಾಮೋದರ ದೇವಪ್ರಬೋಧಿನೀ ಉತ್ಪತ್ತಿಕಾ

ಮಾರ್ಗಶಿರ (November–December)

ಕೇಶವ ಮೋಕ್ಷದಾ

ಸಫಲಾ

ಪುಷ್ಯ (ಪೌಷ)(December–January)

ನಾರಾಯನಣ ಪುತ್ರದಾ

ಷಟ್ತಿಲಾ

ಮಾಘ (January–February) ಮಾಧವ ಜಯಾ

ಶ್ರೀವಿಜಯಾ

ಫಾಲ್ಗುಣ (February–March)

ಗೋವಿಂದ ಆಮಲಕೀ

ಪಾಪಮೋಚನೀ

ಅಧಿಕ (3 ವರ್ಷಕ್ಕೆ ಓಂದು ಸಾರಿ) ಪುರುಷೋತ್ತಮ ಪದ್ಮಿನೀ

ಪರಮಾ

ಮೇಲೆ ನೀಡಿರುವ ಏಕಾದಶಿಗಳ ಹೆಸರುಗಳು ಫಲ:

  1. ಚೈತ್ರ ಶುಕ್ಲ ಏಕಾದಶಿ – ಕಾಮದಾ – ಕೋರಿಕೆಗಳನ್ನು ಪೂರೈಸುತ್ತದೆ.
  2. ಚೈತ್ರ ಬಹುಳ ಏಕಾದಶಿ – ವರೂಧಿನಿ – ಸಹಸ್ರ ಗೋದಾನ ಫಲವು ಲಭಿಸುತ್ತದೆ.
  3. ವೈಶಾಖ ಶುದ್ಧ ಏಕಾದಶಿ – ಮೋಹಿನಿ – ದರಿದ್ರನು ಧನವಂತನಾಗುತ್ತಾನೆ.
  4. ವೈಶಾಖ ಬಹುಳ ಏಕಾದಶಿ – ಅಪರಾ – ರಾಜ್ಯಪ್ರಾಪ್ತಿ
  5. ಜ್ಯೇಷ್ಠ ಶುಕ್ಲ ಏಕಾದಶಿ – ನಿರ್ಜಲಾ – ಆಹಾರ ಸಮೃದ್ಧಿ
  6. ಜ್ಯೇಷ್ಠ ಬಹುಳ ಏಕಾದಶಿ – ಯೋಗಿನೀ – ಪಾಪಗಳನ್ನು ಹರಿಸುತ್ತದೆ (ಪಾಪಗಳಿಂದ ಮುಕ್ತಗೊಳಿಸುತ್ತದೆ)
  7. ಆಷಾಢ ಶುದ್ಧ ಏಕಾದಶಿ – ಶಯನೀ – ಸಂಪತ್ ಪ್ರಾಪ್ತಿ – ವಿಷ್ಣುವು ಯೋಗನಿದ್ರೆಗೆ ಜಾರುವ ದಿನ
  8. ಆಷಾಢ ಬಹುಳ ಏಕಾದಶಿ – ಕಾಮಿಕಾ – ಬೇಡಿದ ವರಗಳು ಪ್ರಾಪ್ತಿಯಾಗುತ್ತವೆ.
  9. ಶ್ರಾವಣ ಶುಕ್ಲ ಏಕಾದಶಿ – ಪವಿತ್ರಾ (ಪುತ್ರ) – ಸತ್ ಸಂತಾನ ಪ್ರಾಪ್ತಿ
  10. ಶ್ರಾವಣ ಬಹುಳ ಏಕಾದಶಿ – ಅಜಾ – ರಾಜ್ಯ, ಪತ್ನೀಪುತ್ರ ಪ್ರಾಪ್ತಿ ಮತ್ತು ಆಪತ್ ನಿವಾರಣೆ
  11. ಭಾದ್ರಪದ ಶುದ್ಧ ಏಕಾದಶಿ – ಪಾರ್ಶ್ವಪರಿವರ್ತಿನೀ (ಯೋಗ ನಿದ್ರೆಯಲ್ಲಿ ವಿಷ್ಣುವು ಪಕ್ಕಕ್ಕೆ ಹೊರಳುತ್ತಾನಂತೆ ಹಾಗಾಗಿ ಇದು ಪರಿವರ್ತನ) – ಯೋಗ ಸಿದ್ಧಿ
  12. ಭಾದ್ರಪದ ಬಹುಳ ಏಕಾದಶಿ – ಇಂದಿರಾ – ಸಂಪದಗಳು ಮತ್ತು ರಾಜ್ಯ ಪ್ರಾಪ್ತಿಯುಂಟಾಗುತ್ತದೆ.
  13. ಆಶ್ವಯುಜ ಶುಕ್ಲ ಏಕಾದಶಿ – ಪಾಶಾಂಕುಶಾ – ಪುಣ್ಯಪ್ರದವಾದುದು
  14. ಆಶ್ವಯುಜ ಬಹುಳ ಏಕಾದಶಿ – ರಮಾ – ಸ್ವರ್ಗಪ್ರಾಪ್ತಿ
  15. ಕಾರ್ತೀಕ ಶುಕ್ಲ ಏಕಾದಶಿ – ದೇವಪ್ರಬೋಧಿನೀ (ಯೋಗ ನಿದ್ರೆಯಿಂದ ವಿಷ್ಣುವು ಎಚ್ಚರಗೊಳ್ಳುವ ದಿನ) – ಜ್ಞಾನಸಿದ್ಧಿ
  16. ಕಾರ್ತೀಕ ಬಹುಳ ಏಕಾದಶಿ – ಉತ್ಪತ್ತಿಕಾ – ದುಷ್ಟ ಸಂಹಾರ (ಮುರಾಸುರನನ್ನು ಸಂಹರಿಸಿದ ಕನ್ಯೆಯು ವಿಷ್ಣುವಿನ ಶರೀರದಿಂದ ಜನಿಸಿದ ದಿನ)
  17. ಮಾರ್ಗಶಿರ ಶುಕ್ಲ ಏಕಾದಶಿ – ಮೋಕ್ಷದಾ – ಮೋಕ್ಷಪ್ರಾಪ್ತಿ (ಮಾರ್ಗಶಿರ ಶುಕ್ಲ ಏಕಾದಶಿಯು ಧನುರ್ಮಾಸದಲ್ಲಿ ಬಂದರೆ ಅದುವೇ ವೈಕುಂಠ ಏಕಾದಶಿಯಾಗುತ್ತದೆ)
  18. ಮಾರ್ಗಶಿರ ಬಹುಳ ಏಕಾದಶಿ – ಸಫಲಾ (ವಿಮಲಾ) – ಅಜ್ಞಾನ ನಿವೃತ್ತಿ
  19. ಪುಷ್ಯ(ಪೌಷ) ಶುಕ್ಲ ಏಕಾದಶಿ – ಪುತ್ರದಾ – ಪುತ್ರಪ್ರಾಪ್ತಿ (ಪುಷ್ಯ ಶುಕ್ಲ ಏಕಾದಶಿಯು ಧನುರ್ಮಾಸದಲ್ಲಿ ಬಂದರೆ ಅದುವೇ ವೈಕುಂಠ ಏಕಾದಶಿಯಾಗುತ್ತದೆ)ವೈಕುಂಠ ಏಕಾದಶಿ ಮಾರ್ಗಶಿರ ಅಥವಾ ಪುಷ್ಯ ಮಾಸದಲ್ಲಿ ಬರುತ್ತದೆಂದು ಈ ಮುಂಚೆಯೇ ಹೇಳಿದೆ.
  20. ಪುಷ್ಯ (ಪೌಷ) ಕೃಷ್ಣ ಏಕಾದಶಿ –  ಷಟ್ತಿಲಾ (ಕಲ್ಯಾಣೀ) – ಶಾರೀರಿಕ ಬಾಧೆಗಳಿಂದ ಮುಕ್ತಿ
  21. ಮಾಘ ಶುಕ್ಲ ಏಕಾದಶಿ – ಜಯಾ – ಶಾಪವಿಮುಕ್ತಿ
  22. ಮಾಘ ಕೃಷ್ಣ ಏಕಾದಶಿ – ಶ್ರೀವಿಜಯಾ – ಸಕಲ ಕಾರ್ಯ ವಿಜಯ (ಇದು ಭೀಷ್ಮೈಕಾದಶಿ ಎಂದು ಪ್ರಸಿದ್ಧಿಯಾಗಿದೆ)
  23. ಫಾಲ್ಗುಣ ಶುಕ್ಲ ಏಕಾದಶಿ – ಆಮಲಕೀ – ಆರೋಗ್ಯ ಪ್ರಾಪ್ತಿ
  24. ಫಾಲ್ಗುಣ ಕೃಷ್ಣ ಏಕಾದಶಿ – ಪಾಪಮೋಚನೀ (ಸೌಮ್ಯಾ) – ಪಾಪ ವಿಮುಕ್ತಿ
  25. ಅಧಿಕ ಮಾಸ ಶುಕ್ಲ ಏಕಾದಶಿ – ಕಾಮದಾ ಏಕಾದಶಿ – ಮನುಷ್ಯನ ಕಾಮನೆಗಳು, ಆಸೆ, ಆಕಾಂಕ್ಷೆಗಳನ್ನು ಈಡೇರಿಸುತ್ತದೆ. ‌ ‌
  26. ಅಧಿಕ ಮಾಸ ಕೃಷ್ಣ ಏಕಾದಶಿ – ಕಮಲ ಏಕಾದಶಿ – ಶ್ರೀ ಮಹಾಲಕ್ಷ್ಮಿಯ ಪ್ರಸನ್ನತೆಗಾಗಿ, ಶ್ರೀಮಂತ ರಾಗಲು.
See also  ವಿಷ್ಣುವಿನ ದಶಾವತಾರ (10 ಅವತಾರಗಳು)

ಪುರಾಣ:

ಪುರಾಣಗಳ ಪ್ರಕಾರ ಮನುಷ್ಯರ ಒಂದು ವರ್ಷ ದೇವತೆಗಳಿಗೆ ಒಂದು ದಿನ ಎನ್ನುತ್ತಾರೆ. ಅದರಲ್ಲಿ, ಆಷಾಡದ ಮೊದಲಿನಿಂದ ಧನುರ್ ಮಾಸದವರೆಗೆ ಉಳ್ಳ ಆರು ತಿಂಗಳು ಕಾಲ ದೇವತೆಗಳಿಗೆ ರಾತ್ರಿ ಸಮಯವೇ ದಕ್ಷಿಣಾಯನ ಉಂಟಾಗುತ್ತದೆ. ದೇವತೆಗಳ ದಕ್ಷಿಣಾಯನ ಮುಗಿಯುವ ಸಮಯ ಬ್ರಹ್ಮ ಮುಹೂರ್ತ ಸಮಯವಾದ ಮುಂಜಾವಿನ ಸಮಯವೇ ಧನುರ್. ಈ ಧನುರ್ ಮಾಸದಲ್ಲಿ, ಮಹಾವಿಷ್ಣು ಗಾಢ ನಿದ್ದೆಯಿಂದ ಎಚ್ಚರಗೊಳ್ಳುವ ಆ ಒಂದು ಗಳಿಗೆಯೇ ಏಕಾದಶಿ. ಭಗವಂತ ಕಣ್ಣು ತೆರೆದು ಎಲ್ಲರನ್ನೂ ದಯಪಾಲಿಸುತ್ತಾನೆ ಎಂಬುದನ್ನು ಸೂಚಿಸುವುದಕ್ಕೆ ಏಕಾದಶಿ, ಉಳಿದ ಎಲ್ಲಕ್ಕಿಂತಲೂ ಹೆಚ್ಚು ಮಹತ್ವ ಪಡೆಯುತ್ತದೆ.

ಭಕ್ತ ಅಂಬರೀಷ ಕಥೆ:

ಭಾಗವತ ಪುರಾಣದ ಉಲ್ಲೇಖದಂತೆ, ವಿಷ್ಣು ಭಕ್ತನಾದ ಅಂಬರೀಷ, ರಘುವಂಶದ ರಾಜನಾಗಿ ಅಯೋಧ್ಯೆಯನ್ನು ಆಳುತ್ತಿದ್ದ. ಮಹಾವಿಷ್ಣುವಿನ ಪರಮ ಭಕ್ತನಾದ ಅಂಬರೀಷನ ರಾಜ್ಯ ಸದಾ ಸುಭಿಕ್ಷ ವಾಗಿರಲು ವಿಷ್ಣು ವಿನ ಕೃಪಾಕಟಾಕ್ಷವಿರುತ್ತದೆ. ಪ್ರತಿ ಏಕಾದಶಿಯ ದಿನ ಅಂಬರೀಷನು ಉಪವಾಸ ಮಾಡಿ, ದ್ವಾದಶಿಯ ದಿನ ಅನ್ನದಾನ ಮಾಡುವ ವೃತ ನಡೆಸಿರುತ್ತಾನೆ. ಇಂಥ ಒಂದು ಏಕಾದಶಿಯ ದಿನ, ಉಪವಾಸ ಮುಗಿವ ಸಮಯದಲ್ಲಿ ದೂರ್ವಾಸ ಮುನಿ, ಅಂಬರೀಷನ ಬಳಿ ಆಗಮಿಸುತ್ತಾನೆ. ಮುನಿಯನ್ನು ಬರಮಾಡಿಕೊಂಡು, ಊಟಕ್ಕೆ ಆಹ್ವಾನಿಸಿದಾಗ ಊಟಕ್ಕೆ ಮುನ್ನ ತಾನು ಸ್ನಾನ ಮುಗಿಸಿ ಬರುವುದಾಗಿ, ಅಲ್ಲಿಯವರೆಗೆ ತಡೆಯಬೇಕೆಂದು ನದಿಗೆ ಸ್ನಾನಕ್ಕೆ ಹೋಗುತ್ತಾರೆ . ದೂರ್ವಾಸ ಮುನಿ ಸ್ನಾನ ಮುಗಿಸಿ ಉಪವಾಸ ಮುರಿವ ಸಮಯವಾದರೂ ಬರುವದಿಲ್ಲ.

ಕುಲಗುರು ವಸಿಸ್ಠರ ಬಳಿ ಸಲಹೆ ಕೇಳಿದಾಗ, ವಸಿಶ್ಠರು ಒಂದು ಹನಿ ನೀರು ಮತ್ತು ತುಳಸಿ ದಳವನ್ನು ಭುಂಜಿಸಿ ಉಪವಾಸ ಮುರಿದು, ತದ ನಂತರ ದೂರ್ವಾಸ ಮುನಿಯ ದಾರಿ ಕಾಯುವಂತೆ ಸಲಹೆ ನೀಡುತ್ತಾರೆ. ತಾನು ಬರುವವರೆಗೆ ಕಾಯದೆ, ಅಂಬರೀಷನು ಉಪವಾಸ ಮುರಿದ್ದದ್ದನ್ನು ತಿಳಿದು ತಮಗೆ ಅವಮಾನಿಸಿದನೆಂದು ದೂರ್ವಾಸರು ಹತ್ತು ಜನ್ಮ ಪಡೆಯೆಂದು ಶಾಪ ಕೊಡುತ್ತಾರೆ ಆದರೆ ಏಕಾದಶಿ ಉಪವಾಸ ವ್ರತ ಮಾಡುತ್ತಿದ್ದ ಅಂಬರೀಷನ ಭಕ್ತಿಗೆ ಮೆಚ್ಚಿದ ಶ್ರೀ ನಾರಾಯಣನು ತಾನೇ ಆ ಶಾಪವನ್ನು ತೆಗೆದುಕೊoಡು 10 ಅವತಾರವೆತ್ತುತ್ತಾನೆ. ತನ್ನ ಭಕ್ತನ ರಕ್ಷಣೆಗಾಗಿ ತನ್ನ ಸುದರ್ಶನ ಚಕ್ರವನ್ನೆ ಕಳಿಸಿದ ಸುದರ್ಶನ ಚಕ್ರ ದೂರ್ವಾಸರ ಕಡೆಗೆ ಹೋದಾಗ, ಅಂಬರೀಷನೆ ಬೇಡಿಕೊoಡು ಅದು ತಿರುಗಿ ವಿಷ್ಣುವಿನ ಕಡೆಗೆ ಹೋಗುವಂತೆ ಮಾಡಬೇಕಾಯಿತು.

ಈ ನಂಬಿಕೆಯ ಹಿಂದಿನ ಪೌರಾಣಿಕ ಹಿನ್ನೆಲೆ ಹೀಗಿದೆ:

ಚಂದ್ರಾವತಿ ಎಂಬ ನಗರದಲ್ಲಿ ಜಂಗಾಸುರ ಎಂಬ ಅಸುರ ಅವನ ಮಗ ಮರುವಾಸುರ ದೇವತೆಗಳಿಗೆ ಉಪಟಳ ನೀಡುತ್ತಿರುತ್ತಾರೆ. ಅಸುರರಿಂದ ತಾವು ಪಡುವ ಹಿಂಸೆಯನ್ನು ದೇವತೆಗಳು ಭಗವಂತನ ಬಳಿ ಮೊರೆಯಿಡಲು ಮಹಾವಿಷ್ಣು ಆ ಅಸುರರ ಮೇಲೆ ಯುದ್ದ ಹೂಡುತ್ತಾನೆ. ಆ ಯುದ್ಧ ಹಲವು ವರ್ಷಗಳು ಮುಂದುವರೆದಿದ್ದರಿಂದ, ದಣಿದು ಸೊರಗಿ ಹೋದ ಭಗವಂತನು ಸಿಂಹಾವತಿ ಎಂಬ ಗುಹೆಯಲ್ಲಿ ವಿಶ್ರಾಂತಿ ಪಡೆಯಲು ನಿದ್ದೆಮಾಡುತ್ತಾನೆ. ಆಗ ಶ್ರೀಮನ್ ನಾರಾಯಣನ ಮನಸ್ಸಿನಲ್ಲಿ, ಅಸುರರನ್ನು ಸೋಲಿಸಲು ಉಂಟಾದ ಆಲೋಚನೆಗಳು, ಯೋಜನೆಗಳು ಎಲ್ಲವೂ ರೂಪಾತಾಳಿ ‘ಏಕಾದಶಿ’ ಎಂಬ ಒಂದು ಸ್ತ್ರೀಶಕ್ತಿಯಾಗಿ ಆ ಅಸುರರನ್ನು ಸೋಲಿಸುತ್ತದೆ. ಅಸುರರನ್ನು ಜಯಿಸಿದ ಮೇಲೆ ತನ್ನ ಬಳಿಯೇ ಮರಳಿದ ಏಕಾದಶಿಗೆ, ತನ್ನ ಕೆಲಸವನ್ನು ಅವಳು ವಹಿಸಿಕೊಂಡು ಅದನ್ನು ಉತ್ತಮವಾಗಿ ಮಾಡಿ ಮುಗಿಸಿದ್ದನ್ನು ಮೆಚ್ಚಿಕೊಂಡು ವರ ನೀಡಲು ತಯಾರಾದ ಭಗವಂತನ ಬಳಿ ಬಂದು, “ಭಗವಂತ, ನಿನ್ನ ಪ್ರೀತಿ ಪಾತ್ರಳಾಗಿ ನಾನು ಸದಾ ಇರಬೇಕು, ನಾನು ಹುಟ್ಟಿದ ಈ ದಿನ ಉಪವಾಸ ಇರುವವರಿಗೆ ಎಲ್ಲ ಸಿದ್ಧಿಸುವಂತೆ ಮಾಡಬೇಕು..!” ಎಂದು ಏಕಾದಶಿ ಬೇಡಿಕೊಳ್ಳುತ್ತಾಳೆ. ಬೇಡಿದ ವರ ನೀಡಿದ ವರದನು, ತನ್ನಿಂದ ಸೃಷ್ಟಿಯಾದ ಏಕಾದಶಿಯನ್ನು ತನ್ನೊಳಗೆ ಮತ್ತೆ ಐಕ್ಯಮಾಡಿಕೊಳ್ಳುತ್ತಾನೆ. ಹೀಗೆ ಭಗವಂತನಿಂದ ಸೃಷ್ಟಿಯಾದ ಏಕಾದಶಿ ಎಂಬ ಶಕ್ತಿಯಾದವಳು, ವರ್ಷಕ್ಕೆ 24 ಅಥವಾ 25 ಸಲ ಬರುತ್ತಾಳೆ. ಎಲ್ಲ ವ್ರತಗಳಿಗೂ ಮೇಲಾಗಿ, ಏಕಾದಶಿ ವ್ರತ ಇರುವುದು ಅತಿ ಶ್ರೇಷ್ಠ ಎನ್ನುತ್ತವೆ ಪುರಾಣಗಳು. ವರ್ಷ ಪೂರ್ತಿ ಏಕಾದಶಿ ವ್ರತ ಇರಲಾಗದವರು, ಧನುರ್ ತಿಂಗಳಲ್ಲಿ ಬರುವ ವೈಕುಂಠ ಏಕಾದಶಿಯಲ್ಲಾದರೂ ವ್ರತ ಆಚರಿಸುವುದು ಉತ್ತಮ. ಈ 24 ಏಕಾದಶಿಯಲ್ಲೂ ವ್ರತ ಇರುವ ಮೊತ್ತ ಫಲವನ್ನೂ ವೈಕುಂಠ ಏಕಾದಶಿ ಕೊಡುತ್ತದೆ ಎಂಬುದೇ ಇದರ ವಿಶೇಷತೆ.

See also  ವೈಕುಂಠ ಏಕಾದಶಿ ಹಿನ್ನೆಲೆಯ ಮಹತ್ವ

ವೈಜ್ಞಾನಿಕ ಹಿನ್ನೆಲೆ:

ಖಗೋಳ ಶಾಸ್ತ್ರದ ಪ್ರಕಾರ ಚಂದ್ರನು ಭೂಮಿಯ ಸುತ್ತ ಸುತ್ತುವಾಗ 24 ಗಂಟೆಗಳ ಅವಧಿಯ ಅಂತರದಲ್ಲಿ 12 ಡಿಗ್ರಿಗಳಷ್ಟು ಸಂಚರಿಸುತ್ತಾನೆ. ಇದನ್ನೇ ಒಂದು ತಿಥಿ ಎನ್ನುವುದು. ಹೀಗೆ ಪೂರ್ಣಿಮೆ ಅಥವಾ ಅಮಾವಾಸ್ಯೆಯ ದಿನದಿಂದ ದಶಮಿ (10ನೇ ದಿನದ) ಹೊತ್ತಿಗೆ 120 ಡಿಗ್ರಿಗಳಷ್ಟು ಚಂದ್ರ ಸಂಚರಿಸಿರುತ್ತಾನೆ. ಅಂದರೆ ಏಕಾದಶಿಯ ಹೊತ್ತಿಗೆ ಚಂದ್ರನು 120 ಡಿಗ್ರಿಗೆ ಬಂದು 132 ಡಿಗ್ರಿ ಕೋನದಲ್ಲಿರುತ್ತಾನೆ. ಆಹೊತ್ತಿನಲ್ಲಿ ಭೂಮಿಯ ಮೇಲೆ ಚಂದ್ರನ ಆಕರ್ಷಣೆ ಹೆಚ್ಚು. ಈ ಅವಧಿಯಲ್ಲಿ ಚಂದ್ರನ ಆಕರ್ಷಣೆಯ ಪ್ರಭಾವ ಭೂಮಿಯ ಮೇಲೂ, ಜಲವರ್ಗಗಳ ಮೇಲೂ ಹೆಚ್ಚಾಗಿ ಉಂಟಾಗಿರುತ್ತದೆ. ಚಂದ್ರನು ಈ ಅವಧಿಯಲ್ಲಿ ಜಲ, ನೆಲ, ಗಾಳಿ, ಬೆಂಕಿ, ಆಕಾಶ ಎಂಬ ಪಂಚಭೂತಗಳಿಂದ ಆದ ಮಾನವನ ಶರೀರದ ಮೇಲೂ ಪರಿಣಾಮ ಉಂಟು ಮಾಡುತ್ತಾನೆ. ಮಾನವನ ಜೀರ್ಣಾಂಗಗಳು ಈ ಅವಧಿಯಲ್ಲಿ ಪ್ರಭಾವಕ್ಕೊಳಗಾಗಿರುತ್ತವೆ.ಹಿಗಾಗಿ ಏಕಾದಶಿಯಂದು ಉಪವಾಸ ಮಾಡುವುದರಿಂದ ಮಾನವನ ಆರೋಗ್ಯ ಸಮೃದ್ಧಿಯಾಗಿರುತ್ತದೆ. ಅಂದು ಊಟ ಮಾಡುವುದರಿಂದ ಚಂದ್ರ ಪ್ರಭಾವಕ್ಕೆ ಒಳಗಾದ ಜೀರ್ಣಾಂಗಗಳಿಂದಾಗಿ ಅಜೀರ್ಣ ಸಂಬಂಧಿತ ಕಾಯಿಲೆಗಳು ಬರುತ್ತವೆ ಎನ್ನುತ್ತಾರೆ ಅವರು. ಹುಣ್ಣಿಮೆಯ ದಿನ ಚಂದ್ರನ ಆಕರ್ಷಣೆಗೆ ಸಾಗರದಲ್ಲಿ ಅಲ್ಲಕಲ್ಲೋಲಗಳುಂಟಾಗಿ, ಉಬ್ಬರದ ಅಲೆಗಳು ಮೂಡುವುದನ್ನು ನೀವು ಒಪ್ಪುವುದಾದರೆ, ಜೀರ್ಣಾಂಗಗಳ ಮೇಲೂ ಚಂದ್ರ ಪ್ರಭಾವ ಇರುತ್ತದೆ ಎಂಬುದನ್ನು ಒಪ್ಪಲೇ ಬೇಕು ಎನ್ನುತ್ತಾರೆ ಅವರು. ಏಕಾದಶಿಯ ದಿನ ಉಪವಾಸ ಮಾಡುವುದರಿಂದ, ನಿದ್ರೆ ಕಡಿಮೆ ಆಗುತ್ತದೆ. (ಹಸಿದಾಗ ನಿದ್ದೆ ಬಾರದು ಎಂಬುದು ಸಾಬೀತಾಗಿರುವ ಸಿದ್ಧಾಂತ) ಜಾಗರಣೆ, ಉಪವಾಸ ಈ ಎರಡರಿಂದ ದೇಹದಲ್ಲಿ ಉಷ್ಣತೆ ಹೆಚ್ಚುತ್ತದೆ. ಈ ಅತಿ ಉಷ್ಣದಿಂದ ದೇಹದಲ್ಲಿರುವ ರೋಗಾಣುಗಳು (ವೈರಸ್‌ – ಬ್ಯಾಕ್ಟೀರಿಯಾ) ಸಾವನ್ನಪ್ಪಿ. ಆರೋಗ್ಯ ವರ್ಧಿಸುತ್ತದೆ ಎಂಬುದು ಅವರ ವಿಶ್ಲೇಷಣೆ.

ಉಪವಾಸದ ಅರ್ಥ:

‘ಉಪ’ಎಂದರೆ ಹತ್ತಿರ, ‘ವಾಸ’ ಎಂದರೆ ಇರುವುದು. ಅಂದರೆ ಭಗವಂತನ ಸಮೀಪ ವಾಸಿಸುವುದೇ ಉಪವಾಸದ ಅರ್ಥ. ಆ ದಿನ ಯಾರು ಧ್ಯಾನ, ಭಜನೆ, ವಿಷ್ಣು ಸಹಸ್ರನಾಮ, ಪೂಜೆ ಮಾಡಿ ಜಾಗರಣೆಯನ್ನು ಮಾಡುತ್ತಾರೋ ಅವರಿಗೆ ಭಗವಂತ ಎಲ್ಲ ಸೌಭಾಗ್ಯಗಳನ್ನು ಕೊಟ್ಟು ಅಂತ್ಯದಲ್ಲಿ ಮೋಕ್ಷವನ್ನು ಕರುಣಿಸುವನು. ಉಪವಾಸ ವ್ರತ ಮಾಡುವುದರಿಂದ ಶಾಂತಿ, ತಾಳ್ಮೆ ದೊರೆಯುವುದಲ್ಲದೆ, ರಕ್ತದೊತ್ತಡ, ರಕ್ತಹೀನತೆ ಸೇರಿದಂತೆ ಅನೇಕ ರೋಗಗಳು ನಿವಾರಣೆ ಆಗುವುವು.

0Shares

Leave a Reply

error: Content is protected !!