ರಚನೆ: ಪುರಂದರದಾಸರು
ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ |
ವಿಠ್ಠಲನಾಮವ ತುಪ್ಪವ ಬೆರಸಿ ಬಾಯ ಚಪ್ಪರೀಸಿರೋ || ಪ ||
ಒಮ್ಮಾನ ಗೋಧಿಯ ತಂದು ವೈರಾಗ್ಯ ಕಲ್ಲಲಿ ಬೀಸಿ |
ಸುಮ್ಮಾನೆ ಸಜ್ಜಿಗೆಯ ತೆಗೆದು ಸಣ್ಣ ಶಾವಿಗೆಯ ಮಾಡಿರೋ || ೧ ||
ಹೃದಯವೆಂಬೊ ಪಾತ್ರದಲ್ಲಿ ಭಾವವೆಂಬ ಎಸರನಿಕ್ಕಿ |
ಬುದ್ಧಿಯಿಂದ ಪಾಕ ಮಾಡಿ ಅನಿರುದ್ಧ ಹರಿಯ ನೆನೆಯಿರೊ || ೨ ||
ಆನಂದೋ ಆನಂದವೆಂಬ ತೇಗು ಬಂತು ಕಾಣಿರೊ |
ಆನಂದ ಮೂರುತಿ ನಮ್ಮ ಪುರಂದರ ವಿಠ್ಠಲನ ನೆನೆಯಿರೊ || ೩ ||