ವಿಷ್ಣುವಿನ ದಶಾವತಾರ (10 ಅವತಾರಗಳು)

17Shares

ವಿಷ್ಣುವಿನ ಅತಿ ಪ್ರಸಿದ್ಧವಾದ ಅವತಾರಗಳನ್ನು ದಶಾವತಾರ ಎನ್ನಲಾಗುತ್ತದೆ. ದಶಾವತಾರ ಇದರ ಅರ್ಥ “ಹತ್ತು ಅವತಾರಗಳು“. ವಿಷ್ಣುವಿನ ದಶಾವತಾರಗಳಲ್ಲಿ  ಮೊದಲ ನಾಲ್ಕು ಅವತಾರಗಳು (ಕೃತ ಯುಗ)ಸತ್ಯ ಯುಗದಲ್ಲಿ ಆಗುತ್ತದೆ (ಹಿಂದೂ ಧರ್ಮದಲ್ಲಿನ ನಾಲ್ಕು ಯುಗಗಳಲ್ಲಿ ಮೊದಲನೆಯದು). ನಂತರದ ಮೂರು ಅವತಾರಗಳು ತ್ರೇತ ಯುಗದಲ್ಲಿ, ಎಂಟನೆಯ ಅವತಾರ ದ್ವಾಪರ ಯುಗದಲ್ಲಿ ಹಾಗು ಒಂಬತ್ತನೆಯ ಅವತಾರ ಕಲಿ ಯುಗದಲ್ಲಿ, ಹತ್ತನೇ ಅವತಾರ ಕಲ್ಕಿ, ಕಲಿ ಯುಗ ಕೊನೆಯಲ್ಲಿ ಸಂಭವಿಸುವುದಾಗಿ ಹೇಳಲಾಗುತ್ತದೆ. ಅಚಿಂತ್ಯಾತ್ಮಕವಾದ ಭಗವಂತ ವೈಕುಂಠದಲ್ಲಿರುತ್ತಾನಾದರೂ ಭೂಲೋಕಕ್ಕೆ ಭಕ್ತಾದಿಗಳ ಅನುಗ್ರಹಕ್ಕಾಗಿ ಅವತರಿಸಿ ಬರುತ್ತಾನೆ. ಧರ್ಮಕ್ಕೆ ಹಾನಿ ಸಂಭವಿಸಿದಾಗ, ಅಧರ್ಮವನ್ನು ಅಳಿಸಿ ಧರ್ಮವನ್ನು ಪುನರುಜ್ಜೀವನಗೊಳಿಸಲು ಆತ ಅವತರಿಸುತ್ತಾನೆ (ಸಾಧುಗಳ ಪರಿತ್ರಾಣಕ್ಕಾಗಿ, ದುಷ್ಕರ್ಮಗಳ ವಿನಾಶಕ್ಕಾಗಿ, ಧರ್ಮ ಸಂಸ್ಥಾಪನಾರ್ಥವಾಗಿ ಯುಗಯುಗದಲ್ಲೂ ಹುಟ್ಟಿಬರುತ್ತಾನೆ.

ವಿಷ್ಣುವಿನ ದಶಾವತಾರ

ವಿಷ್ಣುವಿನ ದಶಾವತಾರಗಳು (10 ಅವತಾರಗಳು):

1). ಮತ್ಸ್ಯಾವತಾರ:

ಮತ್ಸ್ಯಾವತಾರ

ಭಗವಂತನ ಅವತಾರಗಳಲ್ಲಿ ಮತ್ಸ್ಯಾವತಾರವು ಮೊದಲನೆಯದು ಮತ್ತು ಮೊದಲನೇ ಯುಗ ಸತ್ಯಯುಗದ ಮೊದಲ ಅವತಾರ. ಪ್ರಳಯ ಕಾಲದಲ್ಲಿ ಅಪೌರುಷೇಯಗಳಾದ ವೇದಗಳನ್ನು ನಾಶವಾಗದಂತೆ ಸಂರಕ್ಷಿಸುವ ಸಲುವಾಗಿ ಹಾಗೂ ಪ್ರಳಯಾನಂತರ ಆ ಮಹಾನ್ ವೇದಗಳನ್ನು ಋಷಿಮುನಿಗಳಿಗೆ ಪುನಾ ನೀಡುವ ಸಲುವಾಗಿ ನಾರಾಯಣನು ಎತ್ತಿದ ಅವತಾರವೇ ಮತ್ಸ್ಯಾವತಾರ.

ವಿಷ್ಣು ಯೋಗನಿದ್ರೆಯಲ್ಲಿರುವಾಗ ವಿಷ್ಣುವಿನ ಕರ್ಣಗಳಿಂದ ಅಸುರನು ಹೊರಗೆ ಬಂದು ಬ್ರಹ್ಮ ನಿಂದ ವೇದಗಳನ್ನು ಅಪಹರಿಸಿ ಸಾಗರ ತಳದಲ್ಲಿ ಅಡಗಿಸಿದ ಇದನ್ನು ಅರಿತ ಸ್ಥಿತಿಕಾರಕ ವಿಷ್ಣು ಅಸುರನನ್ನು ಸಂಹರಿಸಿ ವೇದಗಳನ್ನು ಪುನರುತ್ಥಾನಗೊಳಿಸುವ ಯೋಜನೆಯಲ್ಲಿದ್ದ. ಸತ್ಯಯುಗದಲ್ಲಿ ಸತ್ಯವ್ರತ ಮನು ಚಕ್ರವರ್ತಿ ಮಹಾ ದೈವಭಕ್ತ. ದೊಡ್ಡ ಆಪತ್ತು ಭೂಮಿಗೆ ಕಾದಿದೆ ಎಂಬ ಅನೇಕ ಮುನ್ಸೂಚನೆಗಳು ಅವನ ಮನವನ್ನು ತಲ್ಲಣಗೊಳಿಸಿತ್ತು. ತನ್ನನ್ನು ತನ್ನ ರಾಜ್ಯವನ್ನು ಪ್ರಜೆ ಪಶುಪಕ್ಷಿಗಳನ್ನು ರಕ್ಷಿಸುವಂತೆ ಅವನು ಮೌನ ಪ್ರಾರ್ಥನೆ ಸಲ್ಲಿಸುತ್ತಿದ್ದ. ತಾನು ನಂಬಿದ ದೈವ ತನ್ನನ್ನು ಖಂಡಿತವಾಗಿಯೂ ಕಾಪಾಡುತ್ತದೆಂಬ ಅಚಲ ವಿಶ್ವಾಸ ಅವನದ್ದು.

ಅವನು ಒಮ್ಮೆ ಸ್ನಾನ ಮಾಡಲು ನದಿಗೆ ಹೋದಾಗ ಬೊಗಸೆಯಲ್ಲಿ ಚಿಕ್ಕ ಮೀನೊಂದು ಕಾಣುತ್ತದೆ. ಅದನ್ನು ಮತ್ತೆ ನದಿಗೆ ಚೆಲ್ಲಲು ಹೋದಾಗ ಭಯಭೀತವಾದ ಧ್ವನಿಯಲ್ಲಿ ಅದು ತನ್ನನ್ನು ನದಿಯಲ್ಲಿರುವ ಕ್ರೂರ ಮೀನು ಮೊಸಳೆಗಳಿಂದ ರಕ್ಷಿಸುವಂತೆ ಮಾತನಾಡುತ್ತದೆ. ಅದು ಮಾತನಾಡಿದ್ದು ಕಂಡು ಚಕಿತನಾದ ರಾಜ ಅದನ್ನು ತನ್ನ ಕಮಂಡಲಿನಲ್ಲಿ ಹಾಕಿ ಮನೆಗೆ ತಂದ. ಅಷ್ಟರಲ್ಲಾಗಲೇ ಅದು ಕಮಂಡಲಿನಷ್ಟಾಗಿತ್ತು. ಆಶ್ಚರ್ಯಗೊಂಡ ರಾಜ ಅದನ್ನು ಹರಿವಾಣಕ್ಕೆ ಹಾಕಿದ. ಅದೂ ತುಂಬಿತು. ಹೀಗೆ ಕೆರೆ ಸರೋವರ ಕೊನೆಗೆ ಸಾಗರಕ್ಕೆ ಹಾಕಿದ. ಸಾಗರದಲ್ಲಿ ಬಿದ್ದ ದೊಡ್ಡ ಮೀನನ್ನು ಕಂಡು ರಾಜ ದಿಗ್ಭ್ರಾಂತನಾಗಿ ನಿಂತ. ಅವನಿಗೇನೂ ಸಂಶಯ ಉಳಿಯಲಿಲ್ಲ. ಈ ಮೀನು ನಿಜಕ್ಕೂ ಶ್ರೀಹರಿಯ ಅವತಾರವೇ ಆಗಿದೆ ಎಂಬುದು ಅವನ ಅಚಲ ನಂಬಿಕೆ. ಅವನ ನಂಬಿಕೆಗೆ ಪುಷ್ಟಿಯಾಗಿ ರಾಜನೆದುರು ಬಂದ ಆ ಹೊಳೆಯುವ ಚಿನ್ನದ ಮೆರುಗಿನ, ಬೆನ್ನ ಮೇಲೆ ಕೊಂಬಿರುವ ಮೀನು ರಾಜನನ್ನು ಉದ್ದೇಶಿಸಿ, ‘ರಾಜನೇ, ಅನತಿ ಸಮಯದಲ್ಲಿ ಯುಗಾಂತ್ಯವಾಗಲಿದೆ. ಭೂಮಿಗೆ ಅಪಾಯ ಕಾದಿದೆ. ಪ್ರಳಯ ಕಾಲದಂತೆ ಭೀಕರವಾದ ಮಳೆ ಬಂದು ಜಗತ್ತನ್ನು ಮುಳುಗಿಸಲಿದೆ. ನೀನು ದೊಡ್ಡದೊಂದು ಹಡಗನ್ನು ಕಟ್ಟಿ ಅದರೊಳಗೆ ನಿನ್ನ ಪ್ರಜೆಗಳನ್ನು ಎಲ್ಲ ಪ್ರಭೇದಗಳ ಪಶುಪಕ್ಷಿಗಳನ್ನು ಸಸ್ಯಗಳನ್ನು ಬೀಜಗಳನ್ನು ತುಂಬಿ ಸಿದ್ಧನಾಗಿರು. ಆಗ ಆ ಜಲದಲ್ಲಿ ನಾನು ಕಾಣಿಸಿಕೊಳ್ಳುತ್ತೇನೆ. ನನ್ನ ಕೊಂಬಿಗೆ ವಾಸುಕಿಯನ್ನು ಕಟ್ಟು. ಆ ಮಹಾಮಳೆಯಿಂದ ತುಂಬಿದ ಸಾಗರದ ಪ್ರವಾಹದಿಂದ ನಿನ್ನ ಹಡಗನ್ನು ನಾನು ಸುರಕ್ಷಿತವಾಗಿ ದಡ ತಲುಪಿಸುತ್ತೇನೆ’ ಅಂತ ಹೇಳಿ ಅಂತರ್ಧಾನವಾಯಿತು. ಹಾಗೇ ಮಾಯವಾದ ಮೀನು ರೂಪದ ವಿಷ್ಣು ಸಾಗರದಡಿಯಲ್ಲಿ ಮುಳುಗಿ ವೇದಗಳನ್ನು ಬಚ್ಚಿಟ್ಟುಕೊಂಡಿದ್ದ ಹಯಗ್ರೀವ ಅಸುರನನ್ನು ಯುದ್ಧದಲ್ಲಿ ಸಂಹರಿಸಿ ವೇದಗಳನ್ನು ಮತ್ತೆ ಬ್ರಹ್ಮದೇವರಲ್ಲಿ ಇರಿಸಿದ.

ಈ ಮೊದಲು ಮನುವುಗೆ ಅದು ಹೇಳಿದಂತೆಯೇ ಮಳೆ ಸುರಿದು ಇಳೆ ತುಂಬಿತು. ಅಭಯವಿತ್ತಂತೆ ಬಂದ ಮೀನಿನ ಕೊಂಬಿಗೆ ವಾಸುಕಿಯನ್ನು ಕಟ್ಟಿದ ರಾಜ. ಪ್ರಕ್ಷುಬ್ಧ ಸಾಗರದಲ್ಲಿ ಹಡಗನ್ನು ತೇಲಿಸಿಕೊಂಡು ಸುತ್ತಾಡಿತು. ಆ ಸಮಯದಲ್ಲಿ ಮನುವಿಗೆ ವೇದಗಳನ್ನು ಬೋಧಿಸಿತು. ಕೊನೆಗೆ ಮನುವಿನ ಹಡಗನ್ನು ಹಿಮವತ್‌ ಪ್ರಾಂತ್ಯದಲ್ಲಿ ಸುರಕ್ಷಿತವಾಗಿ ತಲುಪಿಸಿ ಮಾಯವಾಯಿತು.

ಮತ್ಸ್ಯಾ ಜಯಂತಿ: ಚೈತ್ರ ಮಾಸದ ಮೂರನೇ ದಿನ ಶುಕ್ಲ ಪಕ್ಷದ ತದಿಗೆ ತಿಥಿಯಂದು ಮತ್ಸ್ಯಾ ಜಯಂತಿ ಆಚರಿಸಲಾಗುತ್ತದೆ.

2). ಕೂರ್ಮಾವತಾರ (ಆಮೆ):

ಕೂರ್ಮ ಅವತಾರ

ಕೂರ್ಮಾವತಾರವು ವಿಷ್ಣುವಿನ ಎರಡನೇ ಅವತಾರ ಮತ್ತು ಮೊದಲನೇ ಯುಗ ಸತ್ಯಯುಗದ ಎರಡನೇ ಅವತಾರ. ಕೂರ್ಮ ಅರ್ಥಾತ್ ಆಮೆಯ ಅವತಾರವನ್ನು ವಿಷ್ಣು ಎತ್ತಿದ್ದೂ ಲೋಕಕಲ್ಯಾಣಾರ್ಥವಾಗಿಯೇ. ಕಲ್ಪವೃಕ್ಷ, ಕಾಮಧೇನು, ಐರಾವತ, ಅಮೃತವೇ ಮೊದಲಾದ ಅತ್ಯಮೂಲ್ಯಗಳನ್ನು ಪಡೆಯಲು ಮಂದರ ಪರ್ವತವನ್ನು ಕಡೆಗೋಲು ಮಾಡಿ, ವಾಸುಕಿಯೆಂಬ ಸರ್ಪವನ್ನು ಹಗ್ಗವನ್ನಾಗಿ ಮಾಡಿಕೊಂಡು ಸಮುದ್ರ ಮಂಥನ ಮಾಡುತ್ತಿದ್ದ ಕಾಲದಲ್ಲಿ ಮಂದರ ಪರ್ವತವು ಸಮುದ್ರದಲ್ಲಿ ಮುಳುಗದಂತೆ ತಡೆಯಲು ವಿಷ್ಣು ಎತ್ತಿದ ಎರಡನೇ ಆವತಾರ ಕೂರ್ಮಾವತಾರ.  ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿನ ಕೂರ್ಮಾಯಿ ಮತ್ತು ಶ್ರೀಕೂರ್ಮಂನಲ್ಲಿ ನೆಲೆಗೊಂಡಿವೆ.

See also  ಕದಿರಿ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ - ಅನಂತಪುರ

ಕೂರ್ಮ ಜಯಂತಿ: ವೈಶಾಖ ಮಾಸದ ಶುಕ್ಲ ಪಕ್ಷದ ಹುಣ್ಣಿಮೆ ತಿಥಿಯಂದು ಕೂರ್ಮ ಜಯಂತಿ ಆಚರಿಸಲಾಗುತ್ತದೆ.

3). ವರಾಹಾವತಾರ:

ವರಾಹ ಅವತಾರ

ವರಾಹಾವತಾರವು ವಿಷ್ಣುವಿನ ಮೂರನೇ ಅವತಾರ ಮತ್ತು ಮೊದಲನೇ ಯುಗ ಸತ್ಯಯುಗದ ಮೂರನೇ ಅವತಾರ. ಭೂದೇವಿಯ ರಕ್ಷಣೆಗಾಗಿ ಮಹಾ ವಿಷ್ಣುವು ಅವತರಿಸಿದ ಅವತಾರ. ಹಂದಿಯ ರೂಪದಲ್ಲಿ ಕೋರೆಗಳಿಂದ ಭೂದೇವಿಯನ್ನು ರಕ್ಷಿಸಿದನು. ದಾನವನಾದ ಹಿರಣ್ಯಾಕ್ಷ ಅತೀ ದೈವದ್ವೇಷಿ. ಭೂಮಿಯಲ್ಲಿ ಭಗವಂತನನ್ನು ಆರಾಧಿಸವವರೇ ಇರಬಾರದು. ಭೂಮಿಯಿದ್ದರಲ್ಲವೆ? ಭಕ್ತರಿರುವುದು. ಇಡೀ ಭೂಮಿಯನ್ನೇ ಇಲ್ಲದಂತೆ ಮಾಡಿಬಿಟ್ಟರೆ ಭಕ್ತರೇ ಇರುವುದಿಲ್ಲ. ಭಗವಂತನ ಆರಾಧನೆಯೇ ನಡೆಯುವುದು ನಿಂತುಬಿಡುತ್ತದೆ. ಹೀಗೆ ಯೋಚಿಸಿ ಸಮುದ್ರದಡಿಯಲ್ಲಿ ಭೂಮಿಯನ್ನು ಮುಚ್ಚಿಟ್ಟ. ಈ ಸಂದರ್ಭದಲ್ಲಿ ಭೂದೇವಿಯನ್ನು ರಕ್ಷಿಸುವ ಸಲುವಾಗಿ ಹಾಗೂ ದುಷ್ಟನಾಗಿದ್ದ ಹಿರಣ್ಯಾಕ್ಷನ ಸಂಹರಿಸುವ ಸಲುವಾಗಿ ವಿಷ್ಣು ಎತ್ತಿದ ಅವತಾರ ವರಹಾವತಾರ.

ಭೂವರಾಹ ಜಯಂತಿ: ಭಾದ್ರಪದ ಮಾಸದ ಐದನೇ ದಿನ ಅಂದರೆ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಭೂವರಾಹ ಜಯಂತಿ ಆಚರಿಸಲಾಗುತ್ತದೆ.

4). ನರಸಿಂಹಾವತಾರ:

ನರಸಿಂಹ ಅವತಾರ

ನರಸಿಂಹಾವತಾರವು ವಿಷ್ಣುವಿನ ನಾಲ್ಕನೇ ಅವತಾರ ಮತ್ತು ಮೊದಲನೇ ಯುಗ ಸತ್ಯಯುಗದ ನಾಲ್ಕನೇ ಅವತಾರ. ಅರ್ಧ ದೇಹ ಮನುಷ್ಯನಂತೆ ಮತ್ತು ಇನ್ನರ್ಧ ಭಾಗ ಸಿಂಹ ರೂಪದಲ್ಲಿರುವುದರಿಂದ ನರಸಿಂಹ ಎಂಬ ಹೆಸರು ಬಂದಿದೆ. ಹಿರಣಾಕ್ಷನ ಸೋದರನಾದ ಹಿರಣ್ಯಕಶಿಪು ವರಬಲದಿಂದ ಹಾಗೂ ಭುಜಬಲದಿಂದ ನರರನ್ನೂ ದೇವಾನು ದೇವತೆಗಳನ್ನೂ ಕಾಡಿ, ಮಹಾ ಗರ್ವಿಷ್ಠನಾಗಿ, ಧರ್ಮವನ್ನೇ ಮರೆತು ದುರಾಚಾರಿಯಾದಾಗ, ಆತನ ಮಗ ಪರಮ ವಿಷ್ಣುಭಕ್ತನಾದ ಬಾಲ ಪ್ರಹ್ಲಾದನ ಮೊರೆಗೆ ಕಂಬದಿಂದವತರಿಸಿ, ಹಿರಣ್ಯ ಕಶಿಪುವನ್ನು ಸಂಹರಿಸಲು ವಿಷ್ಣು ಎತ್ತಿದ ಅವರಾತ ನರಸಿಂಹಾವತಾರ.

ಅಗ್ನಿಲೋಚನ…ಬೆಂಕಿಯನ್ನೇ ಹೊಂದಿರುವ ಕಣ್ಣುಳ್ಳವನು. ಭೈರವಾಡಂಬರ…ಭೀಕರ ಧ್ವನಿಯಿಂದ ಘರ್ಜಿಸುವನು. ಕರಾಳ…ಅಗಲ ಬಾಯಿಯಲ್ಲಿ ಚಾಚಿದ ಕೋರೆದಾಡಿಗಳುಳ್ಳವನು. ಹಿರಣ್ಯಕಶಿಪು ಧ್ವಂಸ…ಹಿರಣ್ಯಕಶಿಪುವನ್ನು ಸಂಹರಿಸಿದವನು. ನಖಾಸ್ತ್ರ…ಕೈ ಉಗುರುಗಳನ್ನೇ ಆಯುಧವಾಗುಳ್ಳವನು. ಸಿಂಹವದನ….ಸಿಂಹದ ಮುಖವುಳ್ಳವನು. ಮೃಗೇಂದ್ರ….ಮೃಗಗಳ ರಾಜನಾದ ಸಿಂಹರೂಪಿ. ಬಲದೇವ…ವಿಶಿಷ್ಟವಾದ ಶಕ್ತಿಯುಳ್ಳವನು. ಹೀಗೆ ಈ ಅಷ್ಟರೂಪ ಸ್ಮರಣೆ ಮಾಡಿದರೆ ನಮಗೊದಗಿದ ಭಯಗಳಿಂದ ಪಾರು ಮಾಡುತ್ತಾನಂತೆ.

ನರಸಿಂಹ ಜಯಂತಿ: ನರಸಿಂಹ ಜಯಂತಿ ವೈಶಾಖ ಮಾಸದ ಹುಣ್ಣಿಮೆಗೆ ಒಂದು ದಿನ ಮೊದಲು ಅಂದರೆ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ನರಸಿಂಹ ಜಯಂತಿ ಆಚರಿಸಲಾಗುತ್ತದೆ.

5). ವಾಮನಾವತಾರ:

ವಾಮನ ಅವತಾರ

ವಾಮನಾವತಾರ ವಿಷ್ಣುವಿನ ಐದನೆಯ ಅವತಾರ ಮತ್ತು ಎರಡನೇ ಯುಗ ತ್ರೇತಾಯುಗದ ಮೊದಲ ಅವತಾರ. ಇಂದ್ರಪದವಿಯ ಮೇಲೆ ಕಣ್ಣಿಟ್ಟಿದ್ದ ದಾನವಾಸುರನಾದ ಬಲಿಚಕ್ರವರ್ತಿಯಿಂದ ಮೂರು ಅಡಿ ಜಾಗವನ್ನು ದಾನವಾಗಿ ಪಡೆದು, ಒಂದು ಅಡಿಯಲ್ಲಿ ಭೂಮಿಯನ್ನೂ ಮತ್ತೊಂದು ಅಡಿಯಲ್ಲಿ ಆಕಾಶವನ್ನೂ ಅಳೆದ ವಾಮನ ಮೂರನೇ ಅಡಿಯನ್ನು ಬಲಿಯ ತಲೆಯಮೇಲಿಟ್ಟು ಪಾತಳಕ್ಕೆ ತುಳಿದ. ಬಲಿಯ ಸಂಹಾರಕ್ಕಾಗಿ ವಿಷ್ಣು ಎತ್ತಿದ ಅವತಾರ ವಾಮನಾವತಾರ.

ಹಿರಣ್ಯಕಶಿಪುವಿನ ಮರಿಮೊಮ್ಮಗನಾದ ಬಲಿ ಚಕ್ರವರ್ತಿಯು ಇಂದ್ರನನ್ನು ಗೆದ್ದು ಮೂರು ಲೋಕಗಳ ಅಧಿಪತಿಯಾಗುತ್ತಾನೆ. ಇದರಿಂದ ಬೆದರಿದ ದೇವತೆಗಳು ಶ್ರೀಮಾನ್ ಮಹಾವಿಷ್ಣುವಿನ ಮೊರೆ ಹೋಗುತ್ತಾರೆ. ದಾನ ಶೂರನಾದ ಬಲಿ ಚಕ್ರವರ್ತಿಯು ಒಂದು ಯಜ್ಞ ಮಾಡುತ್ತಿರುವಾಗ, ಶ್ರೀಮಾನ್ ಮಹಾವಿಷ್ಣುವು ಒಬ್ಬ ಕುಬ್ಜ ಬ್ರಾಹ್ಮಣ ಬಾಲಕನಾಗಿ ಯಜ್ಞ ಮಾಡುತ್ತಿರುವ ಸ್ಥಳಕ್ಕೆ ಬರುತ್ತಾನೆ. ಅಲ್ಲಿಗೆ ಬಂದ ವಾಮನನು ಮೂರು ಅಡಿಗಳಷ್ಟು ಬಲಿಯ ರಾಜ್ಯವನ್ನು ದಾನವಾಗಿ ಕೇಳಿದನು. ಆ ಬಾಲಕನನ್ನು ನೋಡಿ ಬಲಿ ಚಕ್ರವರ್ತಿ ಬಹಳ ಸಂತೋಷದಿಂದ ಕೇಳಿದನ್ನು ದಾನವಾಗಿ ಕೊಡಲು ಒಪ್ಪಿದನು. ಕೂಡಲೇ ವಾಮನನು ತ್ರಿವಿಕ್ರಮನಾಗಿ ಬೆಳೆದು ನಿಂತನು. ತ್ರಿವಿಕ್ರಮನ ಮೊದಲ ಹೆಜ್ಜೆಯಲ್ಲಿ ಆಕಾಶವು, ಎರಡನೇ ಹೆಜ್ಜೆಯಲ್ಲಿ ಭೂಮಿಯು ಆವರಿಸಲ್ಪಟ್ಟಿತು. ಮೂರನೇ ಹೆಜ್ಜೆಯನ್ನು ಎಲ್ಲಿ ಇಡಬೇಕೆಂದು ತ್ರಿವಿಕ್ರಮನು ಬಲಿ ಚಕ್ರವರ್ತಿಯನ್ನು ಕೇಳಿದಾಗ, ಬಲಿ ಚಕ್ರವರ್ತಿಯು ವಾಮನ ರೂಪದಲ್ಲಿ ಬಂದಿದ್ದು ಶ್ರೀಮಾನ್ ಮಹಾವಿಷ್ಣುವೇ ಎಂದು ಕಂಡುಕೊಂಡು, ತನ್ನ ಶಿರವನ್ನೇ ಮೂರನೇ ಹೆಜ್ಜೆ ಇಡಲು ಜಾಗವಾಗಿ ಕೊಟ್ಟನು. ಆಗ ತ್ರಿವಿಕ್ರಮನು ತನ್ನ ಮೂರನೇ ಹೆಜ್ಜೆಯನ್ನು ಬಲಿಯ ತಲೆಯ ಮೇಲೆ ಇಟ್ಟು ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ಕಳುಹಿಸಿದನು. ಬಲಿ ಚಕ್ರವರ್ತಿಯ ಭಕ್ತಿಗೆ ಮೆಚ್ಚಿದ ಶ್ರೀಹರಿಯು ಬಲಿಯನ್ನು ಅಮರನನ್ನಾಗಿ ಮಾಡಿ ಪಾತಾಳ ಲೋಕಕ್ಕೆ ಚಕ್ರವರ್ತಿಯನ್ನಾಗಿ ನೇಮಿಸಿದನು.

ವಾಮನ ಜಯಂತಿ: ಭಾದ್ರಪದ ಮಾಸದ ಶುಕ್ಲ ಪಕ್ಷದ ಶುದ್ಧ ದ್ವಾದಶಿ ತಿಥಿಯಂದು ವಾಮನ ಜಯಂತಿ ಆಚರಿಸಲಾಗುತ್ತದೆ.

6). ಪರಶುರಾಮಾವತಾರ:

ಪರಶುರಾಮ ಅವತಾರ

ಪರಶುರಾಮ ವಿಷ್ಣುವಿನ ಆರನೆಯ ಅವತಾರ ಮತ್ತು ಎರಡನೇ ಯುಗ ತ್ರೇತಾಯುಗದ ಎರಡನೇ ಅವತಾರ. ಲೋಕಕಂಟಕರಾಗಿ ಮುಗ್ಧ ಜನರ ಮೇಲೆ ಹಾವಳಿ ಮಾಡುತ್ತಿದ್ದ ಕ್ಷತ್ರಿಯ ಕುಲವನ್ನೇ ನಾಶಮಾಡಲು ವಿಷ್ಣು ಎತ್ತಿದ ಅವತಾರ ಪರಶುರಾಮಾವತಾರ. ಈ ಅವತಾರದಲ್ಲಿ ಪರಶುರಾಮರು 21 ಬಾರಿ ಭೂ ಪ್ರದಕ್ಷಿಣೆ ಮಾಡಿ ದುಷ್ಟರಾದ ಎಲ್ಲ ಕ್ಷತ್ರಿಯರನ್ನೂ ಸಂಹರಿಸುವ ಮೂಲಕ ಧರ್ಮ ಸಂಸ್ಥಾಪನೆ ಮಾಡಿದರು. ಪರಶುರಾಮರ ಜನ್ಮಸ್ಥಳ ರೇಣುಕಾ ತೀರ್ಥವೆಂದು ಹೇಳಲಾಗುತ್ತಿದೆ(ಈಗಿನ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡ). ಅವರು ರೇಣುಕಾ ಹಾಗೂ ಜಮದಗ್ನಿಯ ಪುತ್ರ ಮತ್ತು  ಬ್ರಹ್ಮನ ವಂಶಸ್ಥ ಹಾಗೂ ಶಿವನ ಶಿಷ್ಯ. ಆಧುನಿಕ ಮಹೇಶ್ವರದಲ್ಲಿ ಅವರ ವಂಶಾವಳಿ ನಡೆಯಿತು ಎಂಬುದಾಗಿ ಪ್ರಸ್ತಾಪಿಸಲಾಗಿದೆ. ಅವರು ತ್ರೇತಾಯುಗದ ಕೊನೆಯಲ್ಲಿ ಜೀವಿಸಿದ್ದರು ಮತ್ತು  ಹಿಂದೂ ಧರ್ಮದ ಏಳು ಚಿರಂಜೀವಿಗಳ ಪೈಕಿ ಇವರು ಒಬ್ಬರು.

See also  ಪರಶುರಾಮ ಜಯಂತಿಯ ಮಹತ್ವ

ಬ್ರಾಹ್ಮಣರಾದ ಪರಶುರಾಮರಿಗೆ ಕ್ಷತ್ರಿಯರ ಆಕ್ರಮಶೀಲತೆ ಮತ್ತು ಧೈರ್ಯ ಇದ್ದುದರಿಂದ ಬ್ರಹ್ಮ ಕ್ಷತ್ರಿಯನೆಂಬ ಹೆಸರನ್ನೂ ಪಡೆದುಕೊಂಡಿದ್ದಾರೆ. ಯುದ್ಧ ವಿದ್ಯಾ ಪರಿಣಿತನಾಗಿದ್ದ ಪರಶುರಾಮ ಭ್ರಷ್ಟ ಯೋಧರಿಗೆ ಸಿಂಹಸ್ವಪ್ನ ಎಂದೆನಿಸಿದ್ದರು. ಕೇರಳದ ಕಲರಿಪಯಟ್ಟುವಿನ ಜನಕ. ಪರಶು ಎಂಬುದರ ಅರ್ಥ ಕೊಡಲಿ. ಪರಶುರಾಮ ಎಂಬ ಹೆಸರು ಈ ಅರ್ಥವನ್ನು ಹೊಂದಿರುವುದರಿಂದ ಕೊಡಲಿಯನ್ನು ಹೊಂದಿರುವ ರಾಮ ಎಂಬ ಹೆಸರಿನಿಂದ ಕೂಡ ಪರಶುರಾಮ ಜನಜನಿತರಾಗಿದ್ದರು. ತಂದೆಯ ಆನತಿ ಮೇಲೆ ತಾಯಿಯ ಶಿರವನ್ನೇ ಕಡಿದು, ತಂದೆಯನ್ನು ಒಲಿಸಿಕೊಂಡು ತಾಯಿಯನ್ನು ಬದುಕಿಸಿಕೊಂಡ ಇವರ ಚಾಣಾಕ್ಷಕ್ಕೆ ಎಣೆಯು೦ಟೇ..?!

ಪರಶುರಾಮ ಜಯಂತಿ: ವೈಶಾಖ ಮಾಸದ ಮೂರನೇ ದಿನ ಅಂದರೆ ಶುಕ್ಲ ಪಕ್ಷದ ತದಿಗೆ ತಿಥಿಯಂದು ಪರಶುರಾಮ ಜಯಂತಿ ಆಚರಿಸಲಾಗುತ್ತದೆ.

7). ರಾಮಾವತಾರ:

ರಾಮ ಅವತಾರ

ರಾಮ ಮಹಾ ವಿಷ್ಣುವಿನ ಏಳನೆಯ ಅವತಾರ ಮತ್ತು ಎರಡನೇ ಯುಗ ತ್ರೇತಾಯುಗದ ಮೂರನೇ ಅವತಾರ. ಏಕಪತ್ನೀ ವ್ರತಸ್ಥನೂ, ಮರ್ಯಾದಾ ಪುರುಷೋತ್ತಮನೂ ಆದ ಶ್ರೀರಾಮನು, ತನ್ನ ಪತ್ನಿಯನ್ನೇ ಅಪಹಿರಿಸದ ದುಷ್ಟ ರಾವಣ ಹಾಗೂ ಆತನ ಸೋದರ ಕುಂಭಕರ್ಣರ ಸಂಹಾರ ಮಾಡಲು ಮತ್ತು ಭೂಮಂಡಲವನ್ನು ಸಂರಕ್ಷಿಸಲು ಎತ್ತಿದ ಅವತಾರವೇ ರಾಮಾವತಾರ. ಶ್ರೀ ರಾಮಚಂದ್ರ ಸೂರ್ಯ ವಂಶದವನು.

ಭಾರತದಲ್ಲಿ ರಾಮನ ಆಳ್ವಿಕೆಯ ಕಾಲ ಅತ್ಯಂತ ಸುಭಿಕ್ಷವಾಗಿದ್ದು, ನ್ಯಾಯ, ನೀತಿಗಳಿಂದ ಕೂಡಿದ್ದವೆಂದು ತಿಳಿದು ಬರುತ್ತದೆ. ಅಯೋಧ್ಯೆಯ ರಾಜನಾಗಿದ್ದ ದಶರಥನ ನಾಲ್ಕು ಜನ ಮಕ್ಕಳಲ್ಲಿ ಹಿರಿಯನು ರಾಮ. ಆತನ ತಾಯಿ ಕೌಸಲ್ಯೆ. ಲಕ್ಷ್ಮಣ, ಭರತ, ಶತ್ರುಘ್ನರು ಆತನ ತಮ್ಮಂದಿರು. ಭರತನ ತಾಯಿ ಕೈಕೇಯಿ. ಲಕ್ಷ್ಮಣ ಶತ್ರುಘ್ನರ ತಾಯಿ ಸುಮಿತ್ರೆ. ಸೀತೆ ರಾಮನ ಹೆಂಡತಿ. ರಾಮನಿಗೆ ಲವ ಮತ್ತು ಕುಶ ಎಂಬ ಇಬ್ಬರು ಮಕ್ಕಳು. ರಾಮನ ಜೀವನ ಚರಿತ್ರೆಯನ್ನು ತಿಳಿಸುವ ಮಹಾಕಾವ್ಯವೇ ರಾಮಾಯಣ. ಶ್ರೀರಾಮಚಂದ್ರ ಕ್ರಿ.ಪೂ.5114 ರ ಜನವರಿ 10 ರಂದು ಜನಿಸಿದನು. ಶ್ರೀರಾಮನು ತಂದೆ ಮಾತಿಗೆ ಬೆಲೆ ಕೊಟ್ಟು ಸೀತಾ ಮತ್ತು ಲಕ್ಷ್ಮಣರೊಂದಿಗೆ ವನವಾಸಕ್ಕೆ ಹೋಗುವನು 13 ವರ್ಷಗಳ ವನವಾಸ ನಿರಾತಂಕವಾಗಿ ನಡೆಯುವುದು. ಆದರೆ ಶೂರ್ಪನಕಿ ಎಂಬ ರಾಕ್ಷಸಿ ಬಂದು ಇವರ ನೆಮ್ಮದಿಗೆ ಭಂಗ ತರುತ್ತಾಳೆ. ನಂತರ ಆಕೆಯ ಮೂಗು, ಕಿವಿಯನ್ನು ಲಕ್ಷ್ಮಣ ಕೊಯ್ಯುವನು. ಆಗ ಆಕೆ ತನ್ನ ಅಣ್ಣ ಲಂಕಾಧಿಪತಿ ರಾವಣನಿಗೆ ದೂರು ನೀಡಿ ಸೀತೆಯು ಸುಂದರಿಯೆಂದು ಆಕೆಯನ್ನು ನೀನು ವರಿಸಿದರೆ ಬಹಳ ಚೆಂದವೆಂದು ಹೇಳುವಳು. ಆಗ ರಾವಣ ಮಾಯಾವೇಷ ಧರಿಸಿ ಸೀತೆಯನ್ನು ಅಪಹರಿಸುವನು. ಶ್ರೀರಾಮ-ಲಕ್ಷ್ಮಣರು ಸೀತೆಯನ್ನು ಅರಸುತ್ತಾ ವಾನರರ ಸಹಾಯ ಪಡೆದು, ಶ್ರೀರಾಮನು ರಾವಣನನ್ನು ಸಂಹರಿಸಿದನು. ರಾಮನು ಸೀತಾ, ಲಕ್ಷ್ಮಣ ಸಮೇತನಾಗಿ ಅಯೋಧ್ಯೆಯನ್ನು ಪ್ರವೇಶಿಸಿ, ರಾಜ್ಯವನ್ನು ಆಳಿದನು.

ರಾಮ ನವಮಿ: ರಾಮ ಹುಟ್ಟಿದ ದಿನ. ಚೈತ್ರ ಮಾಸದ ಒಬ್ಬತ್ತನೆ ದಿನ ಅಂದರೆ ಶುಕ್ಲ ಪಕ್ಷದ ನವಮಿ ತಿಥಿಯಂದು ರಾಮನವಮಿ  ಆಚರಿಸಲಾಗುತ್ತದೆ.

8). ಕೃಷ್ಣಾವತಾರ:

ಕೃಷ್ಣ ಅವತಾರ

ಶ್ರೀಕೃಷ್ಣ ಮಹಾವಿಷ್ಣುವಿನ ಎಂಟನೇಯ ಅವತಾರ ಮತ್ತು ಮೂರನೇ ಯುಗ ದ್ವಾಪರಯುಗದ ಮೊದಲನೇ ಅವತಾರ. ಕಂಸ ಸಂಹಾರ ಮತ್ತು ಲೋಕೋದ್ಧಾರಕ್ಕಾಗಿ ವಿಷ್ಣು ಶ್ರೀಕೃಷ್ಣನ ಅವತಾರವನ್ನೆತ್ತಿದ. ಮಥುರಾ ನಗರದಲ್ಲಿ ರಾಜನಾಗಿದ್ದ ಉಗ್ರಸೇನನ ಮಗ ಕಂಸ ತನ್ನ ತಂದೆಯನ್ನೇ ಬಂಧನದಲ್ಲಿಟ್ಟು ತಾನು ರಾಜನಾಗುತ್ತಾನೆ. ತನ್ನ ತಂಗಿ ದೇವಕಿಯ ಗರ್ಭದಲ್ಲಿ ಹುಟ್ಟಿದ ಶಿಶುವಿನಿಂದ ತನಗೆ ಮೃತ್ಯು ಎಂದು ಅಶರೀರವಾಣಿಯಿಂದ ತಿಳಿದು, ಕಂಸ ದೇವಕಿ ಮತ್ತು ಅವಳ ಪತಿ ವಸುದೇವ ಇಬ್ಬರನ್ನೂ ಕಾರಾಗೃಹದಲ್ಲಿ ಬಂಧಿಸುತ್ತಾನೆ. ಇವರಿಗೆ ಹುಟ್ಟಿದ ಮಕ್ಕಳನ್ನು ಕಂಸ ನಿರ್ದಯೆಯಿಂದ ಕೊಲ್ಲುತ್ತಾನೆ. ಎಂಟನೇ ಮಗುವಾಗಿ ಹುಟ್ಟಿದ ಶ್ರೀಕೃಷ್ಣನನ್ನು ಬುಟ್ಟಿಯಲ್ಲಿ ಹೊತ್ತು ತಂದೆ ವಸುದೇವ ಗುಟ್ಟಾಗಿ ರಾತ್ರೋರಾತ್ರಿ ಕಾರಾಗೃಹದಿಂದ ತಪ್ಪಿಸಿಕೊಂಡು ನೆರೆಯ ಗೋಕುಲಕ್ಕೆ ಬರುತ್ತಾನೆ. ಅಲ್ಲಿ ಯಶೋದೆ ಮತ್ತು ನಂದಗೋಪರ ಶಿಶುವಿನ ಸ್ಥಾನದಲ್ಲಿ ಕೃಷ್ಣನನ್ನು ಮಲಗಿಸಿ ಆ ಶಿಶುವನ್ನು ತಾನು ಎತ್ತಿಕೊಂಡು ಕಾರಾಗೃಹಕ್ಕೆ ಮರಳುತ್ತಾನೆ. ಕಂಸ ಯಥಾಪ್ರಕಾರ ದೇವಕಿಗೆ ಹುಟ್ಟಿದ ಶಿಶು ಎಂದು ಭ್ರಮಿಸಿ ಮಗುವನ್ನು ಕೊಲ್ಲಲು ಪ್ರಯತ್ನಿಸುತ್ತಾನೆ. ಆಗ ಒಂದು ಪವಾಡ ನಡೆಯುತ್ತದೆ. ಶಿಶು “ನಿನ್ನನ್ನು ಸಂಹಾರ ಮಾಡುವವನು ಈಗಾಗಲೇ ಭೂಮಿಯ ಮೇಲೆ ಜನ್ಮ ತಳೆದಾಗಿದೆ” ಎಂದು ಹೇಳಿ ಅಂತರ್ಧಾನವಾಗುತ್ತದೆ. ಕಂಸ ಅಕ್ಕಪಕ್ಕದ ಹಳ್ಳಿಗಳಲ್ಲಿ ಹುಟ್ಟಿದ ನವಜಾತ ಶಿಶುಗಳನ್ನು ಕೊಲ್ಲಲು ಅನೇಕ ರಾಕ್ಷಸರನ್ನು ಕಳಿಸುತ್ತಾನೆ. ಇವರಾರಿಗೂ ಶ್ರೀಕೃಷ್ಣನನ್ನು ಕೊಲ್ಲಲು ಸಾಧ್ಯವಾಗುವುದಿಲ್ಲ. ಮುಂದೆ ಕೃಷ್ಣನು ತನ್ನ ಅಣ್ಣ ಬಲರಾಮನೊಂದಿಗೆ ಮಥುರಾ ನಗರಕ್ಕೆ ಬಂದು ಕಂಸ ಮತ್ತು ಚಾಣೂರರನ್ನು ಮಲ್ಲಯುದ್ಧದಲ್ಲಿ ಸಂಹಾರ ಮಾಡುತ್ತಾನೆ. ಉಗ್ರಸೇನ ಮಹಾರಾಜನನ್ನು ಸೆರೆಯಿಂದ ಮುಕ್ತಗೊಳಿಸಿ ಅವನಿಗೆ ಫಟ್ಟಾಭಿಷೇಕ ಮಾಡುತ್ತಾನೆ.

ಶ್ರೀಕೃಷ್ಣನ ಬಾಲ್ಯದ ಅನೇಕ ರೋಚಕ ಕಥೆಗಳು ಭಾಗವತದಲ್ಲಿವೆ. ಶಕಟಾಸುರನ ವಧೆ, ಪೂತನಿಯ ವಧೆ, ಗೋಪಿಕಾ ಸ್ತ್ರೀಯರ ವಸ್ತ್ರಾಪಹರಣ, ಕಾಳಿಂಗಮರ್ದನ, ಗೋವರ್ಧನ ಗಿರಿಯ ರಕ್ಷಣೆ ಮೊದಲಾದ ಅನೇಕ ಕತೆಗಳಿವೆ. ಭಕ್ತರಾದ ಕವಿಗಳು ಮತ್ತು ದಾಸರುಗಳು ಈ ಕತೆಗಳನ್ನು ಆಧರಿಸಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಇವರಲ್ಲಿ ಸೂರದಾಸರು, ಪುರಂದರದಾಸರು, ಕನಕದಾಸರು, ಮೀರಾಬಾಯಿ, ಇತ್ಯಾದಿ ಭಕ್ತರು.

See also  ವಾಮನ ಜಯಂತಿಯ ಮಹತ್ವ

ಶ್ರೀಕೃಷ್ಣನಿಗೆ ಬಾಲ್ಯದಲ್ಲಿ ರಾಧೆ ಎಂಬ ಪ್ರೇಯಸಿ ಇದ್ದಳು. ಶ್ರೀಕೃಷ್ಣ ಗೋಕುಲವನ್ನು ತೊರೆದು ಮಥುರಾ ನಗರಕ್ಕೆ ಹೊರಟಾಗ ರಾಧೆಯನ್ನೂ ತೊರೆಯಬೇಕಾಗುತ್ತದೆ. ಆದರೆ ಭಾರತದಲ್ಲಿ, ವಿಶೇಷವಾಗಿ ಉತ್ತರಭಾರತದಲ್ಲಿ, ಇಂದಿಗೂ ಶ್ರೀಕೃಷ್ಣನ ಜೊತೆ ರಾಧೆಗೇ ಪೂಜೆ ಸಲ್ಲುತ್ತದೆ. ರುಕ್ಮ ಎಂಬ ರಾಜನ ತಂಗಿ ರುಕ್ಮಿಣಿಯು ಶ್ರೀಕೃಷ್ಣನನ್ನೇ ಮದುವೆಯಾಗಲು ಬಯಸುತ್ತಾಳೆ. ರುಕ್ಮಿಣಿ ಅಣ್ಣ ರುಕ್ಮನಿಗೆ ಶ್ರೀಕೃಷ್ಣನನ್ನು ಕಂಡರೆ ದ್ವೇಷ. ಹೀಗಾಗಿ ಅವನು ರುಕ್ಮಿಣಿಯನ್ನು ಶಿಶುಪಾಲನಿಗೆ ಮದುವೆ ಮಾಡಿ ಕೊಡಲು ನಿಶ್ಚಯಿಸಿರುತ್ತಾನೆ. ರುಕ್ಮಿಣಿಯ ಕರೆಯ ಮೇರೆಗೆ ಕೃಷ್ಣನು ರುಕ್ಮಿಣಿಯನ್ನು ಅಪಹರಿಸಿ ಮದುವೆಯಾದನು. ಶ್ರೀಕೃಷ್ಣನಿಗೆ ರುಕ್ಮಿಣಿ, ಜಾಂಬವತಿ, ಸತ್ಯಭಾಮೆ ಮೊದಲಾದ ಅಷ್ಟಮಹಿಷಿಯರು ಮತ್ತು ೧೬೦೦೦(16,000) ರಾಜಕುಮಾರಿಗಳ ಜೊತೆ ವಿವಾಹವಾಗಿತ್ತು.

ಕೃಷ್ಣ ಜನ್ಮಾಷ್ಟಮಿ: ಶ್ರಾವಣ ಕೃಷ್ಣ ಅಷ್ಟಮಿಯ ಮಧ್ಯರಾತ್ರಿಯಂದು, ರೋಹಿಣಿ ನಕ್ಷತ್ರದಲ್ಲಿ. ಈ ಯೋಗಕ್ಕೆ ಜಯಂತಿ ಯೋಗ ಎನ್ನುತ್ತಾರೆ. ಶ್ರಾವಣ ಮಾಸದ ಕೃಷ್ಣಪಕ್ಷದ ಅಷ್ಟಮಿ ತಿಥಿಯಂದು, ಮಧ್ಯರಾತ್ರಿಯಲ್ಲಿ ಚಂದ್ರೋದಯದ ವೇಳೆಗೆ ರೋಹಿಣಿ ನಕ್ಷತ್ರವಿದ್ದರೆ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತದೆ.

9). ಬೌದ್ಧಾವತಾರ:

ಬುದ್ಧ ಅವತಾರ

ಬೌದ್ಧಾವತಾರ ಮಹಾವಿಷ್ಣುವಿನ ಒಂಭತ್ತನೇಯ ಅವತಾರ ಮತ್ತು ನಾಲ್ಕನೇ ಯುಗ ಕಲಿಯುಗದ ಮೊದಲನೇ ಅವತಾರ. ಬೌದ್ಧಾವತಾರದಲ್ಲಿ ಮಹಾವಿಷ್ಣು ಸಿದ್ಧಾರ್ಥನಾಗಿ ಅವತರಿಸುತ್ತಾನೆ. ದೈವತ್ವವನ್ನು ಮರೆತು, ಸ್ವಾರ್ಥ ಸಾಧಕರಾಗುತ್ತಿದ್ದ ಮನುಕುಲಕ್ಕೆ, ಸನ್ಮಾರ್ಗವನ್ನು ತೋರಲು ವಿಷ್ಣು ಎತ್ತಿದ ಅವತಾರವೇ ಬೌದ್ಧಾವತಾರ. ರಾಜ್ಯ, ಕೋಶ, ಅರಮನೆಯೆಲ್ಲವನ್ನೂ ತ್ಯಜಿಸಿ ಸನ್ಯಾಸಿಯಾಗಿ, ಆಸೆಯೇ ದುಃಖಕ್ಕೆ ಕಾರಣ ಎಂದು ಸಾರಿದ ಬುದ್ಧ , ಅಹಿಂಸೆಯೇ ಪರಮೋಧರ್ಮ ಎಂಬ ಮೂಲಭೂತ ತತ್ವಗಳನ್ನು ಸಾರಲು ನರರಲ್ಲಿ ನರನಾಗಿ ಹುಟ್ಟಿದ ಶ್ರೀಮನ್ನಾರಾಯಣ. ಬೌದ್ಧ ಧರ್ಮದ ಸಂಸ್ಥಾಪಕನಾದ ಗೌತಮ ಬುದ್ಧ, ಜನರು ತಮ್ಮ ದುಃಖವನ್ನು ಕೊನೆಗೊಳಿಸಿಕೊಳ್ಳಲು 8 ಮಾರ್ಗವನ್ನು ಸೂಚಿಸಿದ್ದಾರೆ.

ಬೌದ್ಧಾವತಾರದಲ್ಲಿ ಸಿದ್ಧಾರ್ಥನಾಗಿ ಅವತರಿಸುವ ಮಹಾವಿಷ್ಣುವು ಆಸೆಯೇ ದುಃಖಕ್ಕೆ ಕಾರಣ ಎನ್ನುವ ತತ್ವ ಬೋಧಿಸುತ್ತಾನೆ. ಮೇಲ್ನೋಟಕ್ಕೆ ಸಾಧಾರಣ ಉಪದೇಶ ಎನಿಸಿದರೂ ಅದರೊಳಗೆ ವಿಶೇಷ ಆಧ್ಯಾತ್ಮಿಕ ಅರ್ಥವನ್ನು ತಿಳಿಸುತ್ತಿದೆ. ಕಾಮವೇ ಜೀವನಕ್ಕೆ ಮೂಲಾಧಾರ. ಕಾಮವೆಂದರೆ ಬಯಕೆ ಎಂಬ ಅರ್ಥವಿದೆ. ಆದರೆ ಕಾಮವೇ ಜೀವನವಲ್ಲ! ಇದು ಅಡುಗೆಗೆ ಉಪ್ಪು ಇದ್ದಂತೆ. ಪ್ರಜ್ಞೆಯೆಂಬ ಧರ್ಮದ ಚೌಕಟ್ಟಿನಲ್ಲಿ ಹಿತಮಿತವಾದ ಯೋಗ್ಯ ಬಯಕೆ ಇರಬೇಕೆ ಹೊರತು ಅತಿಯಾಸೆಯಲ್ಲ. ಸಮತ್ವ ಸಾಧನೆ ಅಹಾರದಿಂದಲೇ ಪ್ರಾರಂಭವಾಗಿ, ವಿಹಾರ, ಕರ್ಮ, ನಿದ್ರೆ, ಇತ್ಯಾದಿಗಳಿಗೆ ವಿಸ್ತರಿಸಬೇಕು. ಹಾಗೆಯೇ, ಕಾಮವೆಂಬ ಮೂಲದಿಂದ ಪ್ರಾರಂಭವಾಗಿ ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರಗಳ ಮೇಲೂ ಪ್ರಭುತ್ವ ಸಾಧಿಸಿದಾಗ ಜೀವನ ಶ್ರೇಯೋದಾಯಕ ಆಗಿದೆ ಎಂಬುದೇ ಇದರ ಸಾರಾಂಶ.

ಬುದ್ಧ ಜಯಂತಿ: ಆಶ್ವಯುಜ ಮಾಸದ ಹತ್ತನೇ ದಿನ ಅಂದರೆ ಶುಕ್ಲ ಪಕ್ಷದ ದಶಮಿ ತಿಥಿಯಂದು ಬುದ್ಧ ಜಯಂತಿ ಆಚರಿಸಲಾಗುತ್ತದೆ.

10). ಕಲ್ಕಿ ಅವತಾರ:

ಕಲ್ಕಿ ಅವತಾರ

ಕಲ್ಕಿ ಮಹಾವಿಷ್ಣುವಿನ ಹತ್ತನೆಯ ಹಾಗೂ ಕೊನೆಯ ಅವತಾರ ಮತ್ತು ನಾಲ್ಕನೇ ಯುಗ ಕಲಿಯುಗದ ಎರಡನೇ ಅವತಾರ. ಕಲಿಯುಗದ ಕೊನೆಯಲ್ಲಿ ಆಗಲಿದೆ. ಈ ಅವತಾರದ ಮೂಲ ಉದ್ದೇಶವೂ ದುಷ್ಟ ಶಿಕ್ಷಣೆ – ಶಿಷ್ಠ ರಕ್ಷಣೆಯೇ. ಕಲಿಮಹಾಪುರುಷನ ಪ್ರಭಾವದಿಂದ ಜನರಲ್ಲಿ ಧರ್ಮ, ದಯೆ ಮೊದಲಾದ ಗುಣಗಳು ಅಳಿದು ಅಧರ್ಮ ಅತಿ ಹೆಚ್ಚಿದಾಗ ವಿಷ್ಣು ಕಲ್ಕಿಯಾಗಿ ಅವತರಿಸಿ ಅಶ್ವಾರೂಢನಾಗಿ, ಖಡ್ಗ ಹಿಡಿದು ಹೊರಟು ಮ್ಲೇಚ್ಛ ಸಮೂಹವನ್ನು ಸಂಹರಿಸಿ, ಜಗತ್ತಿನಲ್ಲಿ ಧರ್ಮಸಂರಕ್ಷಣೆ ಮಾಡಿ ಶಾಂತಿಸೌಖ್ಯಗಳನ್ನು ನೆಲೆಗೊಳಿಸುತ್ತಾನೆಂದು ನಂಬಿಕೆ. ಅವನು ಈಗ ಇರುವ, ಅಸತ್ಯ, ಅಧರ್ಮ ಮತ್ತು ಅನ್ಯಾಯಗಳಿಂದ ಕೂಡಿದ ಕಲಿಯುಗವನ್ನು ಕೊನೆಗೊಳಿಸಿ ಸತ್ಯ, ಧರ್ಮ, ನ್ಯಾಯಗಳ ಕೃತಯುಗ ಅಂದರೆ ಸತ್ಯಯುಗವನ್ನು ಸ್ಥಾಪಿಸುವನು. ಬೌದ್ಧಧರ್ಮದಲ್ಲಿ ಶಾಂಭಲಾ ರಾಜ್ಯದ ೨೫ ಜನ ಅರಸರು ಕಲ್ಕಿ ಎಂಬ ಬಿರುದನ್ನು ಹೊಂದಿರುತ್ತಾರೆ.

ಗರುಡಪುರಾಣದಲ್ಲಿ ಹತ್ತು ಅವತಾರಗಳನ್ನು ಹೇಳಿದ್ದು ಕಲ್ಕಿ ಹತ್ತನೆಯ ಅವತಾರವಾಗಿದೆ. ಭಾಗವತ ಪುರಾಣದಲ್ಲಿ ಒಟ್ಟು ಇಪ್ಪತ್ತನಾಲ್ಕು ಅವತಾರಗಳನ್ನು ಹೇಳಿದೆ….ಕಲ್ಕಿಯವತಾರದಲ್ಲಿ ಅವನು ರೆಕ್ಕೆಗಳುಳ್ಳ ದೇವದತ್ತ ಎಂಬ ಹೆಸರಿನ ಬಿಳಿಯ ಬಣ್ಣದ ಕುದುರೆಯ ಮೇಲೆ ಕೈಯಲ್ಲಿ ಖಡ್ಗವನ್ನು ಹಿಡಿದುಕೊಂಡು ಕಲಿಯುಗವನ್ನು ಕೊನೆಗೊಳಿಸಲು ಬರುತ್ತಾನೆ ಎಂದು ಅವನನ್ನು ಕಲ್ಪಿಸಲಾಗಿದೆ. ವಿಷ್ಣುಪುರಾಣ, ಅಗ್ನಿಪುರಾಣ ಗಳಲ್ಲೂ ಕಲ್ಕಿಯ ಬಗ್ಗೆ ಸೂಚಿಸಲಾಗಿದೆ.

ಕಲ್ಕಿಪುರಾಣದಲ್ಲಿ ಕಲ್ಕಿಯ ಅವತಾರ ಯಾವಾಗ ಹೇಗೆ ಆಗುವುದು, ಅವನು ಏನು ಮಾಡುತ್ತಾನೆ ಎಂಬ ಬಗ್ಗೆ ವಿವರಗಳಿವೆ.

ಕಲ್ಕಿ ಜಯಂತಿ: ಶ್ರಾವಣ ಮಾಸದ ಐದನೇ ದಿನ ಅಂದರೆ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಕಲ್ಕಿ ಜಯಂತಿ ಆಚರಿಸಲಾಗುತ್ತದೆ.

ಪುರಂದರದಾಸರು ವಿಷ್ಣುವಿನ ದಶಾವತಾರ ಮೇಲೆ ರಚಿಸಿರುವ ಜಯಮಂಗಳಂ ಹಾಡು:

ಹಲವಾರು ದಾಸರು ಹಲವಾರು ಕೀರ್ತನೆಗಳಿಂದ ಈ ದಶಾವತಾರವನ್ನು ವರ್ಣಿಸಿದ್ದಾರೆ. ಎಲ್ಲರಿಗೂ ಮಂಗಳವಾಗಲಿ ಎಂದು ಆಶಿಸುತ್ತ, ಅದರಲ್ಲಿ ಪುರಂದರದಾಸರು ರಚಿಸಿರುವ ಒಂದು ದಶಾವತಾರ ಜಯಮಂಗಳಂ ಕೃತಿಯನ್ನು ಇಲ್ಲಿ ಉಲ್ಲೇಖಿಸಿದ್ದೇನೆ.

ಚಲಿಸುವ ಜಲದಲಿ ಮತ್ಸ್ಯನಿಗೆ
ಗಿರಿಯ ಬೆನ್ನಲಿ ಪೊತ್ತ ಕೂರ್ಮನಿಗೆ
ಧರೆಯನುದ್ಧರಿಸಿದ ವರಾಹವತಾರಗೆ
ತರಳನ ಕಾಯ್ದ ಶ್ರೀ ನರಸಿಂಹಗೆ
ಮಂಗಳಂ ಜಯ ಜಯ ಮಂಗಳಂ ||೧||

ಭೂಮಿಯ ದಾನವ ಬೇಡಿದಗೆ
ಆ ಮಹಾಕ್ಷತ್ರಿಯರ ಗೆಲಿದವಗೆ
ರಾಮಚಂದ್ರನೆಂಬ ದಶರಥಸುತನಿಗೆ
ಸತ್ಯಭಾಮೆಯರಸ ಗೋಪಾಲಕೃಷ್ಣಗೆ
ಮಂಗಳಂ ಜಯ ಜಯ ಮಂಗಳಂ ||೨||

ಬತ್ತಲೆ ನಿಂತಿಹ ಬೌದ್ಧನಿಗೆ
ಉತ್ತಮ ಹಯವೇರಿದ ಕಲ್ಕಿಗೆ
ಹತ್ತವತಾರದಿ ಭಕ್ತರ ಸಲಹುವ
ಕರ್ತೃ ಶ್ರೀ ಪುರಂದರ ವಿಠಲನಿಗೆ
ಮಂಗಳಂ ಜಯ ಜಯ ಮಂಗಳಂ ನಿತ್ಯ ಶುಭ ಮಂಗಳಂ ||೩||

17Shares

Leave a Reply

error: Content is protected !!