0Shares

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯವು ಸುಮಾರು ಹನ್ನೊಂದು ಅಥವಾ ಹನ್ನೆರಡನೇ ಶತಮಾನಕ್ಕೆ ಸೇರಿದ್ದು ಎಂದು ಹೇಳಲಾಗಿದ್ದು, ಈ ದೇವಾಲಯದ ಸುತ್ತಮುತ್ತ ಆನೆ ಬರುವ ಹಾಗಿಲ್ಲವಂತೆ. ಹಾಗೇನಾದರೂ ಅಪ್ಪಿತಪ್ಪಿ ಬಂದಲ್ಲಿ ಅವುಗಳಿಗೆ ಸಾವು ಖಚಿತವೆಂಬ ಪ್ರತೀತಿ ಇದೆ. ಇದಕ್ಕೊಂದು ಪೌರಾಣಿಕ ಇತಿಹಾಸವಿದೆ. ಒಮ್ಮೆ ಗೋವಿಂದ ಭಟ್ಟ ಎಂಬ ಬ್ರಾಹ್ಮಣ ಪೂಜೆ ಮಾಡಲೆಂದು ತಂದ ಶಿವಲಿಂಗವನ್ನು ಈಗಿನ ಮಹಾಲಿಂಗೇಶ್ವರ ನೆಲೆಸಿರುವ ಸ್ಥಳದಲ್ಲಿ ಮರೆತು ನೆಲದ ಮೇಲಿಟ್ಟು ಬಿಟ್ಟರು. ಭೂಮಿಯನ್ನು ಸ್ಪರ್ಶಿಸಿದ ಈ ಮಹಾಲಿಂಗವು ಏನೇ ಮಾಡಿದರೂ ಮೇಲೆತ್ತಲಾಗಲಿಲ್ಲ. ಶಿವಲಿಂಗವನ್ನು ಎತ್ತಲೇಬೇಕೆಂಬ ಕಾರಣಕ್ಕಾಗಿ ಭಟ್ಟರು ಆನೆಯನ್ನು ಕರೆಯಿಸಿ ಶಿವಲಿಂಗಕ್ಕೆ ಹಗ್ಗ ಕಟ್ಟಿ ಎಳೆಸುತ್ತಾರೆ. ಆನೆಯು ಶಿವಲಿಂಗವನ್ನು ಎಳೆಯುತ್ತಿದಂತೆ ಶಿವಲಿಂಗವೇ ಬೆಳೆಯುತ್ತಾ ಹೋಗುತ್ತದೆ. ಈ ಶಿವಲಿಂಗವೇ ಈಗ ಪೂಜಿಸಲ್ಪಡುತ್ತಿರುವ ಮಹಾಲಿಂಗೇಶ್ವರ. ಆನೆಯು ಮತ್ತೂ ಬಲವಾಗಿ ಶಿವಲಿಂಗವನ್ನು ಎಳೆಯುತ್ತಿದ್ದಂತೆ ಆನೆಯೇ ಛಿದ್ರ ಛಿದ್ರವಾಗಿ ಎಲ್ಲೆಡೆ ಸಿಡಿದು ಬೀಳುತ್ತದೆ. ಆನೆಯ ಒಂದೊಂದು ಅಂಗಗಳು ಬಿದ್ದ ಒಂದೊಂದು ಸ್ಥಳಕ್ಕೆ ಒಂದೊಂದು ಹೆಸರು ಹುಟ್ಟಿಕೊಂಡಿದೆ ಎಂಬ ಪ್ರತೀತಿ ಇದೆ. ಕೊಂಬು ಬಿದ್ದೆಡೆ ಕೊಂಬೆಟ್ಟು, ತಲೆ ಬಿದ್ದೆಡೆ ತಾಳೆಪ್ಪಾಡಿ, ಕೈ ಬಿದ್ದೆಡೆ ಕೇಪಳ ಮತ್ತು ಬಾಲ ಬಿದ್ದೆಡೆ ಬೀದಿಮಜಲು ಎಂಬ ಹೆಸರು ಬಂದಿದೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ

ಶಿವಲಿಂಗದ ಈ ಅದ್ಬುತವನ್ನು ಕಂಡ ಅಂದಿನ ಬಂಗರಾಜರು ದೇವರಿಗೆ ಗುಡಿಯನ್ನು ಕಟ್ಟಿಸುತ್ತಾರೆ. ಈ ದೇವಾಲಯದ ಎದುರು ಭಾಗದಲ್ಲಿ ಮೂರು ಕಾಲುಳ್ಳ ನಂದಿ ಇರುವುದು ಇಲ್ಲಿನ ವಿಶೇಷತೆ. ಈ ನಂದಿಯ ಹಿಂದೆ ಒಂದು ವಿಶೇಷ ಕಥೆ ಇದೆ. ಈ ಪ್ರದೇಶದ ಜನರು ಬೆಳೆಯುತ್ತಿದ್ದ ಭತ್ತದ ಪೈರನ್ನು ಪ್ರತೀ ಬಾರಿಯೂ ಒಂದು ಬಸವತಿಂದು ನಾಶ ಮಾಡುತ್ತಿದ್ದು, ಕಾದು ಕುಳಿತ ರೈತರು ಬಸವನ ಕಾಲಿಗೆ ಹೊಡೆದಾಗ ಬಸವನ ಕಾಲು ಮುರಿಯುತ್ತದೆ. ಕಾಲು ಮುರಿದ ಬಸವ ಕಣ್ಣೀರಿಡುತ್ತಾ ಮಹಾಲಿಂಗೇಶ್ವರನ ಮುಂದೆ ಬಂದು ನಿಲ್ಲುತ್ತದೆ. ಬಸವನ ಕಣ್ಣೀರು ಕಂಡ ಈಶ್ವರ ಮುಂದೆ ನಿನಗೆ ಯಾರಿಂದಲೂ ತೊಂದರೆ ಆಗದಿರಲು ಹಾಗೂ ನಿನ್ನನ್ನು ಎಲ್ಲರೂ ಪೂಜಿಸುವಂತಾಗಲಿ ಎಂದು ಬಸವನನ್ನು ಕಲ್ಲಾಗಿ ಮಾಡುತ್ತಾನೆ. ಈಗ ನಾವು ನೋಡುತ್ತಿರುವ ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದ ಮುಂದೆ ಇರುವ ನಂದಿಯ ಒಂದು ಕಾಲು ಮುರಿದಿರುವುದನ್ನು ಕಾಣಬಹುದು. ಮುರಿದ ಬಸವನ ಕಾಲು ಈಗಲೂ ಪಕ್ಕದ ಪೈರಿನ ಹೊಲದ ಮಧ್ಯೆ ಇದೆ ಎಂಬ ನಂಬಿಕೆ ಇದೆ.

ಮುಂದಿನ ದಿನಗಳಲ್ಲಿ ಮಹಾಲಿಂಗೇಶ್ವರನ ಪರಿವಾರ ದೇವತೆಗಳಾದ ಪಾರ್ವತಿ, ಸುಬ್ರಹ್ಮಣ್ಯ, ಗಣೇಶ ಹಾಗೂ ಇತರ ದೈವಗಳನ್ನು, ದೇವಾಲಯದ ಮುಂಭಾಗದಲ್ಲಿ ನಾಗರಾಜ, ಅಯ್ಯಪ್ಪ ಮತ್ತು ನವಗ್ರಹಗಳ ಗುಡಿಯನ್ನು ಕಟ್ಟಲಾಯಿತು. ಅವುಗಳಿಗೆ ಶಾಸ್ತ್ರೋಕ್ತವಾಗಿ ಪೂಜೆಯನ್ನು ಮಾಡಲಾಗುತ್ತಿದೆ. ಈ ದೇವಾಲಯದ ಹಿಂಭಾಗದಲ್ಲಿ ನಿತ್ಯ ಹಸಿರು ಬಣ್ಣಗಳಿಂದ ಕಂಗೊಳಿಸುವ ನೀರಿನಿಂದ ತುಂಬಿದ ಕೆರೆಯೊಂದು ಇದೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕೆರೆ

ಪ್ರತೀ ವರ್ಷ ಕಾರ್ತಿಕ ಮಾಸದ ಸಂದರ್ಭದಲ್ಲಿ ಕೆರೆಯ ಸುತ್ತಲೂ ದೀಪಗಳನ್ನು ಹಚ್ಚಿ ಲಕ್ಷ ದೀಪೋತ್ಸವವನ್ನು ಆಚರಿಸಲಾಗುತ್ತದೆ. ಈ ಕೆರೆಯಲ್ಲಿ ಹಿಂದಿನ ಕಾಲದಲ್ಲಿ ನವರತ್ನಗಳಲ್ಲೊಂದಾದ ಮುತ್ತನ್ನು ಬೆಳೆಯಲಾಗುತ್ತಿತ್ತು ಎಂಬ ಐತಿಹ್ಯವಿದೆ. ಕೆರೆಯ ನಿರ್ಮಾಣದ ಸಂದರ್ಭದಲ್ಲಿ ಎಷ್ಟೇ ಆಳಕ್ಕೆ ಕೆರೆಯನ್ನು ಅಗೆದರೂ ನೀರೇ ಸಿಗದಿದ್ದಾಗ ವರುಣದೇವನ ಪೂಜೆಯನ್ನು ಮಾಡಿ, ಕೆರೆಯಲ್ಲಿ ಬ್ರಾಹ್ಮಣರಿಗೆ ಅನ್ನ ಸಂತರ್ಪಣೆಯನ್ನು ಮಾಡುತ್ತಾರೆ. ಬ್ರಾಹ್ಮಣರು ಊಟ ಮಾಡುತ್ತಾ ಅವರ ಹೊಟ್ಟೆ ತುಂಬುತ್ತಿದ್ದಂತೆ ಕೆರೆಯಲ್ಲಿ ನೀರು ತುಂಬಲಾರಂಭಿಸುತ್ತದೆ. ನೀರನ್ನು ಕಂಡ ಅವರು ಊಟವನ್ನು ಬಿಟ್ಟು ಓಡಲಾರಂಭಿಸುತ್ತಾರೆ. ಅವರು ಊಟ ಮಾಡಿದ ಎಲೆಯಲ್ಲಿದ್ದ ಅನ್ನದ ಅಗುಳುಗಳು ಮುತ್ತುಗಳಾಗಿ ಪರಿವರ್ತನೆಗೊಂಡವೆಂದು ಪುರಾಣವು ತಿಳಿಸುತ್ತದೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೇಲಿನ ನೋಟ

ಮುತ್ತು ದೊರೆಯುವ ಸ್ಥಳವು ಮುತ್ತೂರು ಆಗಿ ಬದಲಾಗಿ ಕಾಲಕ್ರಮೇಣ ಪುತ್ತೂರು ಎಂದು ಬದಲಾಗಿದೆ ಎಂದು ಸ್ಥಳ ಪುರಾಣ ತಿಳಿಸುತ್ತದೆ. ಭಕ್ತ ವತ್ಸಲನಾದ ಪುತ್ತೂರು ಮಹತೋಭಾರ ಮಹಾಲಿಂಗೇಶ್ವರನ ಮುಂದೆ ಭಕ್ತರು ಕೈ ಮುಗಿದು ಬೇಡಿದರೆ ಅವರ ಬೇಡಿಕೆಯನ್ನು ಈಡೇರಿಸುತ್ತಾನೆ ಎಂದೇ ಭಕ್ತರು ನಂಬಿದ್ದಾರೆ.

0Shares

ನಿಮ್ಮದೊಂದು ಉತ್ತರ