Category Archives: ಸಂಪ್ರದಾಯ

ಈ ವರ್ಗದಲ್ಲಿ ನೀವು ಸಂಪ್ರದಾಯಕ್ಕೆ ಸಂಬಂಧಿಸಿರುವ ಎಲ್ಲಾ ಪೋಸ್ಟ್ ಅನ್ನು ಕನ್ನಡ ಭಾಷೆಯಲ್ಲಿ ಪಡೆಯುತ್ತೀರಿ.

ಊರ್ಧ್ವಪುಂಡ್ರ

ಶ್ರೀ‍ಮಧ್ವಾಚಾರ್ಯರು ತಮ್ಮ “ ಕೃಷ್ಣಾಮೃತ ಮಹಾರ್ಣವ ” ಎಂಬ ಗ್ರಂಥದಲ್ಲಿ ಊರ್ಧ್ವಪುಂಡ್ರದ ಬಗೆಗೆ ವಿವರಣೆ ನೀಡಿದ್ದಾರೆ.

ಆಡುಭಾಷೆಯಲ್ಲಿ ಪುಂಡ್ರ ಎಂದರೆ ದೇಹದ ಮೇಲಿರುವ ಒಂದು ಚಿಹ್ನೆ. ಈ ಚಿಹ್ನೆಯು ಅದನ್ನು ಧರಿಸಿರುವವರ ಸಂಪ್ರದಾಯವನ್ನು ಸೂಚಿಸುತ್ತದೆ. ಈ ಚಿಹ್ನೆ ಅಥವಾ ಪುಂಡ್ರದ ಮತ್ತೊಂದು ಮೂಲ ಉದ್ದೇಶವೆಂದರೆ ಅನೀತಿ ಹಾಗೂ ಅಧಾರ್ಮಿಕತೆಯನ್ನು ತೊಡೆದು ಹಾಕುತ್ತದೆ. ಇಂದು ಊರ್ಧ್ವಪುಂಡ್ರ ಧಾರಣೆಯ ಅಂತರಾರ್ಥ. ಊರ್ಧ್ವಪುಂಡ್ರಧಾರಣೆಯಿಂದ  “ಆಂತರ್ಯ ಪುಂಡತನ” ತೊಲಗಿ ಗಾಂಭೀರ್ಯ, ಸದಾಚಾರ, ಸನ್ನಡತೆಗಳು ನೆಲೆಯೂರುತ್ತವೆ. “ಪುಂಡಂ ರಾಹಯತಿ ಇತಿ ಪುಂಡ್ರಂ ” ಎಂಬುದು ವಿಗ್ರಹವಾಕ್ಯ. ನೇರವಾಗಿ ಧರಿಸುವ ಪುಂಡ್ರವನ್ನು ಊರ್ಧ್ವಪುಂಡ್ರವೆಂದೂ, ಅಡ್ಡಲಾಗಿ ಧರಿಸುವುದನ್ನು ತಿರ್ಯಕ್‍ಪುಂಡ್ರವೆಂತಲೂ ಕರೆಯಲಾಗುತ್ತದೆ.

ಗೋಪೀಚಂದನ:

ಮಾಧ್ವ ಸಂಪ್ರದಾಯದಲ್ಲಿ ಊರ್ಧ್ವಪುಂಡ್ರವನ್ನು ಗೋಪೀಚಂದನದಲ್ಲಿ ದೇಹದ ಹನ್ನೆರಡು ಕಡೆಗಳಲ್ಲಿ ಧರಿಸಲಾಗುತ್ತದೆ. ಅದರ ವಿವರಣೆ ಹೀಗಿದೆ:

  1. ಹೊಟ್ಟೆಯ ಮೇಲೆ ಮೂರು ಪುಂಡ್ರಗಳನ್ನು ಧರಿಸುವುದರಿಂದ ತ್ರಿನಾಡಿಗಳಾದ ಇಡಾ, ಪಿಂಗಳಾ, ಸುಶುಮ್ನಾ ನಾಡಿಗಳ ಕುಂಡಲಿನೀ ಶಕ್ತಿಯು ವೃದ್ಧಿ ಹೊಂದುತ್ತದೆ.
  2. ಎದೆಯ ಮೇಲೆ ಎರಡು ಸ್ತನಗಳ ಮಧ್ಯದಲ್ಲಿ ಧರಿಸುವ ಕಮಲದಳದ ಆಕಾರದ ಪುಂಡ್ರವು ಹೃದಯಕಮಲವನ್ನು ಹಿಗ್ಗಿಸುತ್ತದೆ.
  3. ಕತ್ತಿನ ಸುತ್ತಲೂ ನಾಲ್ಕು ಪುಂಡ್ರಗಳನ್ನು ಧರಿಸುವುದರಿಂದ ಅನಾಹತ ಮತ್ತು ವಿಶುದ್ಧಿ ಚಕ್ರಗಳ ಕುಂಡಲಿನೀ ಶಕ್ತಿಯು ಜಾಗೃತಗೊಂಡು ವಿಕಾಸಗೊಳ್ಳುತ್ತದೆ.
  4. ಎರಡು ಭುಜಗಳ ಮೇಲೆ ಧರಿಸುವ ಪುಂಡ್ರದಿಂದ ಕೈಗಳ ಮೂಲಕ ಹರಿಯುವ ಪ್ರಾಣಶಕ್ತಿಯನ್ನು ಉದ್ದೀಪನಗೊಳಿಸಿ ಸಕ್ರಮಗೊಳಿಸುತ್ತದೆ.
  5. ಹಣೆಯ ಮೇಲೆ ಧರಿಸುವ ಒಂದು ಪುಂಡ್ರವು ಆಜ್ಞಾಚಕ್ರದಿಂದ ಸಹಸ್ರಾರ ಚಕ್ರಕ್ಕೆ ಕುಂಡಲಿನೀ ಶಕ್ತಿಯ ಮೂಲಕ ಉದ್ದೀಪನಗೊಳಿಸುತ್ತದೆ.
  6. ಬೆನ್ನಿನ ಕೆಳಭಾಗದಲ್ಲಿ ಧರಿಸುವ ಒಂದು ಪುಂಡ್ರದಿಂದ ಮೂಲಾಧಾರದಲ್ಲಿರುವ ಕುಂಡಲಿನೀಶಕ್ತಿಯನ್ನು ಜಾಗೃತಗೊಳಿಸುತ್ತದೆ.

ಗೋಪೀಚಂದನ ಲಿಪ್ತಾಂಗೋ ಯಂ ಯಂ ಪಶ್ಯತಿ ಚಕ್ಷುಶಾ |
ತಂ ತಂ ಶುದ್ಧಂ ವಿಜಾನೀಯತಿ ನಾತ್ರ ಕಾರ್ಯಾ ವಿಚಾರಣಾ || 221 || (ಕೃ.ಮ.)

ಗೋಪೀಚಂದನವನ್ನು ಧರಿಸಿರುವವನು ತನ್ನ ಕಣ್ಣುಗಳಿಂದ ಅವಲೋಕಿಸುವ ಸಮಸ್ತ ವಸ್ತುಗಳೂ ಶುದ್ಧಗೊಳ್ಳುತ್ತವೆ. ಆತನು ನೋಡಿದ ಕೂಡಲೇ ವಸ್ತುಗಳು ಶುದ್ಧಗೊಳ್ಳುತ್ತವೆಯೆಂಬುದಕ್ಕೆ ಯಾವುದೇ ಅನುಮಾನವು ಸಲ್ಲದು. ಹೀಗಿರುವ ಗೋಪೀಚಂದನವನ್ನು ಧರಿಸಿರುವ ವ್ಯಕ್ತಿಗೆ ಲಭಿಸುವ ಪುಣ್ಯದ ಬಗ್ಗೆ ಹೇಳಬೇಕಾದ್ದೇನಿದೆ?

ಶ್ರೀಮಧ್ವಾಚಾರ್ಯರ “ಕೃಷ್ಣಾಮೃತ ಮಹಾರ್ಣವ ”ದಿಂದ ಆಯ್ದ ಕೆಲವು ಶ್ಲೋಕಗಳು ಇಂತಿವೆ:

ಅಶುಚಿರ್ಯಾ ಅಪಿ ಅನಾಚಾರೋ ಮನಸಾ ಪಾಪಂ ಆಚರೇತ್ |
ಶುಚಿರೇವ ಭವೇತ್ ನಿತ್ಯಂ ಊರ್ಧ್ವಪುಂಡ್ರಾಂಕಿತೋ ನರಃ ||217||

ಅಶುಚಿವಂತನಾದ, ಹೀನಕಾರ್ಯಗಳಲ್ಲಿ ಸದಾನಿರತನಾಗಿರುವ, ಕುತ್ಸಿತ ಮನಸ್ಸಿನವನಾಗಿದ್ದರೂ ಊರ್ಧ್ವಪುಂಡ್ರ ಧರಿಸಿದವನ ಎಲ್ಲ ಪಾಪಗಳೂ ನಿವಾರಣೆಗೊಂಡು ಆತನನ್ನು ಶುಚಿರ್ಭೂತನೆಂದು ಪರಿಗಣಿಸಬೇಕು.

ಊರ್ಧ್ವಪುಂಡ್ರ ವಿಹೀನಸ್ಯ ಸ್ಮಶಾನ ಸದೃಶಂ ಮುಖಂ |
ಅವಲೋಕ್ಯ ಮುಖಂ ತೇಷಾಂ ಆದಿತ್ಯಂ ಅವಲೋಕಯೇತ್ || 218 ||

ಊರ್ಧ್ವಪುಂಡ್ರವಿಲ್ಲದವನ ಮುಖವು ಸ್ಮಶಾನವಿದ್ದಂತೆ. ಅಂತಹವರ ಮುಖವನ್ನು ಅಕಸ್ಮಾತ್ ದರ್ಶಿಸಿದರೆ ಕೂಡಲೆ ಪ್ರಾಯಶ್ಚಿತ್ತಾರ್ಥದಲ್ಲಿ ಸೂರ್ಯನನ್ನು ಅವಲೋಕಿಸಬೇಕು.

ಯಜ್ಞೋ ದಾನಂ ತಪೋ ಹೋಮಃ ಸ್ವಾಧ್ಯಾಯಃ ಪಿತೃತರ್ಪಣಮ್ |
ವ್ಯರ್ಥಮ್ ಭವತಿ ತತ್ಸರ್ವಂ ಊರ್ಧ್ವಪುಂಡ್ರಂ ವಿನಾ ಕೃತಮ್ || 219 ||

ಯಜ್ಞ, ದಾನ, ತಪಸ್ಸು, ಹೋಮ, ಸ್ವಾಧ್ಯಾಯನ ಅಥವಾ ಪಿತೃತರ್ಪಣ ನೀಡುವ ಯಾವುದೇ ಧಾರ್ಮಿಕ ಕ್ರಿಯೆಗಳು ಊರ್ಧ್ವಪುಂಡ್ರವಿಲ್ಲದಿದ್ದರೆ ವ್ಯರ್ಥ ಅಥವಾ ಅರ್ಥಹೀನವಾಗುತ್ತವೆ.

ಗೋಪೀಚಂದನವೆಂದರೇನು?

ಲಭ್ಯವಿರುವ ಮಾಹಿತಿಯಂತೆ ಇಂದಿನ ಗುಜರಾತ್ ರಾಜ್ಯದಲ್ಲಿರುವ ದ್ವಾರಕಾ ನಗರದಲ್ಲಿರುವ ಗೋಪಿಕುಂಜ್ ಎಂಬ ಕೊಳದಲ್ಲಿ ಕೆಲವು ಗೋಪಿಕಾ ಸ್ತ್ರೀಯರು ಮುಳುಗಿದರು. ‘ಕುಂಜ್’ ಎಂದರೆ ಕೊಳ ಎಂದರ್ಥ. ಈ ಕೊಳದ ತಳದಲ್ಲಿರುವ ಮಣ್ಣು ಗೋಪೀ ಚಂದನದ ಮೂಲವೆಂದು ಹೇಳಲಾಗುವುದು. ಮಹಾಭಾರತ ಯುದ್ಧದಲ್ಲಿ ಕೌರವರ ವಿನಾಶವಾದನಂತರ, ಪಾಂಡವರ ವಿಜಯಕ್ಕೆ ತಾನೇ ರೂವಾರಿಯೆಂದು ಅರ್ಜುನನು ಬೀಗುತ್ತಿದ್ದನು. ಇದು ಕೃಷ್ಣನ ಗಮನಕ್ಕೆ ಬಂದಿತು.

ಅರ್ಜುನನಿಗೆ ಜ್ಞಾನವುಂಟುಮಾಡಲೆಂದು ಶ್ರೀಕೃಷ್ಣನು ತನ್ನ ಶಿಷ್ಯನಿಗೆ ಗೋಪಿಕಾಸ್ತ್ರೀಯರನ್ನು ವನವಿಹಾರಕ್ಕೆ ಕರೆದುಕೊಂಡು ಹೋಗಲು ಹೇಳಿದನು. ವನವಿಹಾರದ ಸಮಯದಲ್ಲಿ ಅರಣ್ಯವಾಸಿ ನಿಷಾದರು ಗೋಪಿಕಾ ಸ್ತ್ರೀಯರನ್ನು ಅವಹೇಳನ ಮಾಡಿದಾಗ ಅರ್ಜುನನು ಅವರನ್ನು ಹೊಡೆದೋಡಿಸಲು ಪ್ರಯತ್ನಿಸಿದನು. ಆದರೆ, ನಿಷಾದರೆದುರು ಅರ್ಜುನನ ಶೌರ್ಯ ಕೆಲಸಕ್ಕೆ ಬರಲಿಲ್ಲ. ನಿಷಾದರ ಕಿರುಕುಳದಿಂದ ತಪ್ಪಿಸಿಕೊಳ್ಳಲು ಸಮೀಪದಲ್ಲಿದ್ದ ಕೊಳವೊಂದರಲ್ಲಿ ಗೋಪಿಕಾಸ್ತ್ರೀಯರು ಹಾರಿಕೊಳ್ಳುತ್ತಾರೆ. ಈ ಕೊಳದ ತಳದಲ್ಲಿ ಹಾಗೂ ಸುತ್ತಮುತ್ತಲಿನ ಮಣ್ಣು ಗೋಪಚಂದನವೆಂದು ಪರಿಗಣಿಸಲ್ಪಟ್ಟಿದೆ.

ಗೋಪೀಚಂದನದ ಮಹತ್ವ ಮತ್ತು ಪಾವಿತ್ರ್ಯತೆಯನ್ನು ಗರುಡಪುರಾಣ, ಪದ್ಮಪುರಾಣ, ವಾಸುದೇವ ಉಪನಿಷತ್ ಮತ್ತು ಶ್ರೀಮಧ್ವಾಚಾರ್ಯರ “ಕೃಷ್ಣಾಮೃತ ಮಹಾರ್ಣವ ” ಮುಂತಾದ ಅನೇಕ ಶಾಸ್ತ್ರಗಳಲ್ಲಿ ವಿವರಿಸಲಾಗಿದೆ.

ಗುಜರಾತ್ ರಾಜ್ಯದಲ್ಲಿರುವ ದ್ವಾರಕಾನಗರದಲ್ಲಿ ದೊರೆಯುವ ಒಂದು ವಿಶಿಷ್ಟ ಮಣ್ಣನ್ನು ಗೋಪೀಚಂದನವೆಂದು ಪರಿಗಣಿಸಲಾಗುತ್ತದೆ. ಬ್ರಹ್ಮಾಂಡ ಪುರಾಣವು ಉಲ್ಲೇಖಿಸಿರುವಂತೆ ಗೋಪೀಚಂದನವು ದ್ವಾರಕಾ ಮೂಲದ ಮಣ್ಣಾಗಿರಬೇಕೆಂಬ ಯಾವುದೇ ನಿಯಮವಿಲ್ಲ. ಶುದ್ಧಗೊಳಿಸಿದ ಯಾವುದೇ ಮಣ್ಣು ಅಥವಾ ಪರಮಾತ್ಮನಿಗೆ ಅರ್ಪಿಸಲಾದ ಚಂದನವನ್ನು ಪುಂಡ್ರಕ್ಕೆಂದು ಬಳಸಬಹುದು. ಆದರೆ ಊರ್ಧ್ವಪುಂಡ್ರ ಧಾರಣೆ ಅನಿವಾರ್ಯ ಮತ್ತು ಅತ್ಯಾವಶ್ಯಕ.

ಬ್ರಹ್ಮಾಂಡಪುರಾಣವು ಗೋಪೀಚಂದನದ ಬಗ್ಗೆ ಹೆಚ್ಚಿನ ವಿವರಣೆ ನೀಡುತ್ತದೆ. ದ್ವಾರಕೆಯಲ್ಲಿ ದೊರೆಯುವ ಶ್ರೀ‍ಕೃಷ್ಣ, ಗೋಪಿಕಾಸ್ತ್ರೀಯರ ಪಾದಧೂಳಿಯಲ್ಲದೆ, ಪರ್ವತಶಿಖರಾಗ್ರ ಭಾಗದಲ್ಲಿ ದೊರೆಯುವ, ನದೀತೀರಗಳಲ್ಲಿ ದೊರೆಯುವ, ಮಾಧ್ವ ಯಾತ್ರಾಸ್ಥಳಗಳಿಂದ ತರಲಾದ, ಸಮುದ್ರತೀರದ, ಹುತ್ತದ ಅಥವಾ ಸರ್ಪಗಳ ಗೂಡಿನಿಂದ ತರುವ, ತುಳಸಿ ಸಸ್ಯದ ಬುಡದಿಂದ ತೆಗೆಯುವ ಮಣ್ಣುಗಳನ್ನೂ ಊರ್ಧ್ವಪುಂಡ್ರಕ್ಕೆ ಬಳಸಬಹುದಾಗಿದೆ.

ಕೆಲವು ಸಂದರ್ಭಗಳಲ್ಲಿ ಗೋಪೀಚಂದನವನ್ನು ಧರಿಸುವಂತಿಲ್ಲ. ಗೋಪೀಚಂದನವನ್ನು ದೈಹಿಕ ಪರಿಮಳ ಅಥವಾ ಸುಗಂಧದ್ರವ್ಯ ಸಾಧನವಾಗಿ ಸರ್ವಥಾ ಬಳಸುವಂತಿಲ್ಲ. ಯಾವುದೇ ಹುಟ್ಟು ಅಥವಾ ಸಾವಿನ ಹತ್ತುದಿನಗಳಲ್ಲಿ ಮೈಲಿಗೆ ಇರುವುದರಿಂದ ಗೋಪೀಚಂದನವನ್ನು ಬಳಸಬಾರದು. ಆದರೆ, ದೇವರಿಗೆ ಸಮರ್ಪಿಸಿದ ಗಂಧವನ್ನು ಬಳಸಬಹುದು.

ಗರ್ಗಸಂಹಿತೆಯು ಗೋಪೀಚಂದನಧಾರಣವನ್ನು ಗಂಗಾಸ್ನಾನಕ್ಕೆ ಸಮವೆಂದು ನಿರ್ದೇಶಿಸುತ್ತದೆ. ದಿನನಿತ್ಯದಲ್ಲಿ ಗೋಪೀಚಂದನವನ್ನು ಧರಿಸುವುದು ಜಗತ್ತಿನ ಎಲ್ಲ ಪವಿತ್ರ ನದೀದಡಗಳಲ್ಲಿ ಸ್ನಾನ ಮಾಡಿದಷ್ಟು ಪುಣ್ಯಕರ. ಗೋಪೀಚಂದನಧಾರಣೆಯು ಸಹಸ್ರ ಅಶ್ವಮೇಧಯಾಗ ಮತ್ತು ನೂರು ರಾಜಸೂಯ ಯಾಗಗಳನ್ನು ಮಾಡಿದ ಪುಣ್ಯಕ್ಕೆ ಸಮ. ಗೋಪೀಚಂದನವು ಗಂಗೆಯ ಒಡಲಿನಲ್ಲಿರುವ ಮಣ್ಣಿಗಿಂತ ಎರಡರಷ್ಟು ಮತ್ತು ಪಂಚವಟೀ ತೀರ್ಥದ ಮಣ್ಣಿಗಿಂತಲೂ ಹತ್ತರಷ್ಟು ಹೆಚ್ಚು ಪುಣ್ಯಕರವೆಂದು ಗರ್ಗಸಂಹಿತೆಯಲ್ಲಿ ಹೇಳಲಾಗಿದೆ. ದಿನಕ್ಕೆರಡು ಬಾರಿ ಗೋಪೀಚಂದನವನ್ನು ಶಾಸ್ತ್ರರೀತಿಯಲ್ಲಿ ಲೇಪಿಸಿಕೊಂಡರೆ ಗೋಕುಲಕ್ಕೆ ಪ್ರವೇಶ ದೊರೆಯುತ್ತದೆ. ಅಷ್ಟೇ ಅಲ್ಲದೆ, ಈ ರೀತಿಯಲ್ಲಿ ಗೋಪೀಚಂದನವನ್ನು ಲೇಪಿಸಿಕೊಳ್ಳುವವರೆಡೆಗೆ ಯಮಧರ್ಮನೂ ಸುಳಿಯಲಾರ. ಗೋಪೀಚಂದನಧಾರಣೆಯಿಂದ ಸಕಲಪಾಪಗಳೂ ನಾಶಹೊಂದುತ್ತವೆ ಎಂದು ಗರ್ಗರು ನುಡಿದಿದ್ದಾರೆ.

ಕರಿಮಣಿ ಮಾಂಗಲ್ಯದ ಮಹತ್ವ

ಹಿಂದೂ ಮದುವೆಗಳಲ್ಲಿ ತಾಳಿ ಕಟ್ಟುವಾಗ ಒಂದು ಶ್ಲೋಕ ಕೇಳಿ ಬರೋದು ಸರ್ವೇ ಸಾಮಾನ್ಯ:

ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತುನಾ |
ಕಂಠೇ ಬಧ್ನಾಮಿ ಸುಭಗೇ ಸಂಜೀವ ಶರದಃ ಶತಮ್ ||
(ಕೆಲವರು ‘ಸಂಜೀವ’ ಬದಲು ‘ತ್ವಂ ಜೀವ’ ಅಂತಾರೆ)
ಆದರೆ ಸಾಮಾನ್ಯವಾಗಿ ಇದರ ಅರ್ಥ ಯಾರಿಗೂ ಗೊತ್ತಿರಲ್ಲ. ಪುರೋಹಿತರು ಇದನ್ನ ಹೇಳಿಬಿಟ್ರೆ ಸಾಕು ಅನ್ನೋರೇ ಹೆಚ್ಚು. ತಾಳಿ ಕಟ್ಟೋರು, ಕಟ್ಟಿಸಿಕೊಳೋರು, ಕಟ್ಟಿಸೋರು ಎಲ್ಲರೂ ಈ ಮುಖ್ಯವಾದ ಶ್ಲೋಕಾನ ಅರ್ಥ ಮಾಡ್ಕೊಂಡ್ರೆ ಒಳ್ಳೇದು.

ಸಂಸ್ಕೃತದಲ್ಲಿ ಈ ಶ್ಲೋಕದ ಅನ್ವಯ ಹೀಗೆ ಮಾಡಬಹುದು:
(ಹೇ) ಸುಭಗೇ ಓ ಪ್ರೀತಿಪಾತ್ರಳೇ ಮಮ ನನ್ನ ಜೀವನ ಹೇತುನಾ ಜೀವನಹೇತುವಾಗಿರುವ, ಬದುಕಿಗೊಂದು ಮುಖ್ಯವಾದ ಕಾರಣವಾಗಿರುವ ಅನೇನ ಈ ತಂತುನಾ ನೂಲಿನಿಂದ ಕಂಠೇ ಕುತ್ತಿಗೆಗೆ ಮಾಂಗಲ್ಯಂ ಮಾಂಗಲ್ಯವನ್ನು ಬಧ್ನಾಮಿ ಕಟ್ಟುವೆ ಶತಂ ನೂರು ಶರದಃ ಶರದೃತುಗಳು, ವರ್ಷಗಳು ಸಂಜೀವ ಚೆನ್ನಾಗಿ ಬಾಳು (ತ್ವಂ ಜೀವ ಎನ್ನುವುದಾದರೆ ನೀನು ಬಾಳು ಎಂದಷ್ಟೇ ಆಗುತ್ತದೆ).

ಅಂದ್ರೆ ಒಟ್ನಲ್ಲಿ ಅರ್ಥ ಹೀಗಾಯಿತು:
ಓ ಪ್ರೀತಿಪಾತ್ರಳೇ, ನನ್ನ ಜೀವನಹೇತುವಾಗಿರುವ, ಬದುಕಿಗೊಂದು ಮುಖ್ಯವಾದ ಕಾರಣವಾಗಿರುವ, ಈ ನೂಲಿನಿಂದ ಕುತ್ತಿಗೆಗೆ ಮಾಂಗಲ್ಯವನ್ನು ಕಟ್ಟುವೆ; ನೂರು ವರ್ಷ ಚೆನ್ನಾಗಿ (ನನ್ನೊಡನೆ) ಬಾಳು! ಇದನ್ನ ಮದುವೆ ಗಂಡು (ಮಾತ್ರ) ಹೆಣ್ಣಿಗೆ (ಮಾತ್ರ) ಹೇಳಬೇಕು.

ಮಂಗಳಸೂತ್ರ:

ಅ. ಮಂಗಳಸೂತ್ರದ ಬಟ್ಟಲುಗಳು ಹೇಗಿರಬೇಕು ?
ಮಂಗಳಸೂತ್ರದ ಬಟ್ಟಲುಗಳು ಗೋಲಾಕಾರವಾಗಿರಬೇಕು ಮತ್ತು ಅವುಗಳ ಮೇಲೆ ಯಾವುದೇ ವಿನ್ಯಾಸವಿರಬಾರದು.

ಆ. ಗೋಲಾಕಾರ ಬಟ್ಟಲುಗಳ ಮಹತ್ವ
೧. ಗೋಲಾಕಾರವು ಶೂನ್ಯ, ಅಂದರೆ ಟೊಳ್ಳಿರುವ ಬ್ರಹ್ಮನಿಗೆ ಸಂಬಂಧಿಸಿರುವುದರಿಂದ ಜೀವದ ಅವಶ್ಯಕತೆಗನುಸಾರ ಆಯಾಯ ಸ್ತರದಲ್ಲಿನ ಲಹರಿಗಳನ್ನು ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆಯು ಇತರ ಆಕಾರಗಳಿಗಿಂತ ಹೆಚ್ಚಿರುತ್ತದೆ.
ಆದುದರಿಂದ ಗೋಲಾಕಾರವನ್ನು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸಲಾಗುತ್ತದೆ.
೨. ಗೋಲಾಕಾರವು (ಗೋಲವು) ಜ್ಞಾನಶಕ್ತಿಯ ಪ್ರತೀಕವಾಗಿದೆ.
೩. ಗೋಲಾಕಾರವು ಶಿವ-ಶಕ್ತಿಯರ ಸತ್ತ್ವಗುಣಕ್ಕೆ ಸಂಬಂಧಿಸಿದೆ.
೪. ಗೋಲಾಕಾರದ ಮಧ್ಯಬಿಂದುವು ಆಘಾತಾತ್ಮಕ ಶಕ್ತಿರೂಪೀ ಲಹರಿಗಳನ್ನು ಪ್ರದಾನಿಸುವುದಾಗಿದ್ದರೆ, ಬಾಹ್ಯಗೋಲವು ಶಿವರೂಪಿ ಬ್ರಹ್ಮನಿಗೆ ಸಂಬಂಧಿಸಿದೆ. –
(ಪೂ. (ಸೌ.) ಅಂಜಲಿ ಗಾಡಗೀಳ ಓರ್ವ ವಿದ್ವಾಂಸ ಅಂಕಿತನಾಮದಿಂದ ಬರೆಯುತ್ತಾರೆ. ಮಾರ್ಗಶಿರ ಕೃಷ್ಣ ಅಷ್ಟಮಿ, ಕಲಿಯುಗ ವರ್ಷ ೫೧೧೦ (೨೭.೧೦.೨೦೦೬))

ಕರಿಮಣಿ ಮಾಂಗಲ್ಯದ ಮಹತ್ವ:

ಕರಿಮಣಿ ಸರವನ್ನು ಧರಿಸುವುದರಿಂದ ಆಗುವ ಪ್ರಯೋಜನವೇನು?

ಮಾಂಗಲ್ಯ ಧರಿಸುವುದು ಕೇವಲ ಪ್ರದರ್ಶನಕ್ಕಲ್ಲ, ಅದಕ್ಕೆ ವಿಶೇಷ ಹಿನ್ನೆಲೆ ಇದೆ. ಹಿಂದೂ ಧರ್ಮದಲ್ಲಿ ಮದುವೆ-ಮುಂಜಿ ಹೀಗೆ ಹಲವು ಸಂಪ್ರದಾಯಕ್ಕೆ ಎಷ್ಟು ಮಹತ್ವ ಇದೆಯೇ ಅದೇ ರೀತಿ, ವರ-ವಧುವಿಗೆ ಕಟ್ಟುವ ಕರಿಮಣಿ ಸರಕ್ಕೂ ಅಷ್ಟೇ ಪಾಮುಖ್ಯತೆ ಇದೆ. ಮದುವೆಯ ಸಾಂಕೇತವಾಗಿ ಸ್ತ್ರಿಯರಿಗೆ ಕರಿಮಣಿ ತಾಳಿ, ಕುಂಕುಮ, ಗಾಜಿನ ಬಳೆ, ಕಾಲುಂಗರ, ಹೂವು ನೀಡಲಾಗುವುದು ಅದು ಗೃಹಿಣಿಗೆ ಸೌಭಾಗ್ಯಕರವಾದವು.

ಮಂಗಳ ಸೂತ್ರ, ತಾಳಿ, ಕಂಠಿ, ಕರಿಮಣಿ ಇತ್ಯಾದಿ ವಿವಿಧ ಹೆಸರುಗಳಿರುವ, ಅತಿ ಪಾವಿತ್ರ್ಯದ, ಅತ್ಯಂತ ಭಾವನಾತ್ಮಕವಾದ ಆಭರಣವಿದೆಯಲ್ಲ – ಅದರಲ್ಲಿ ಮಾಂಗಲ್ಯ ಯಾವುದು? ಮಾಂಗಲ್ಯ ಧಾರಣದ ಸಂಪ್ರದಾಯ ಹೇಗೆ ಬಂತು? ಬಂಗಾರದ ಒಡವೆಯಲ್ಲಿ ಕರಿಮಣಿಗಳೇಕೆ? ಕರಿಮಣಿಸರದಲ್ಲಿ ಹವಳವೇಕೆ? ಎಂಬುದನ್ನು ನೋಡೋಣ.

  • ಆದಿಶಂಕರರು ರಚಿಸಿದ ಸೌಂದರ್ಯ ಲಹರಿಯಲ್ಲಿ, ಶಿವನು ಪಾರ್ವತಿಗೆ ಮಂಗಲ ಸೂತ್ರವನ್ನು ಕಟ್ಟಿದನೆಂದಿದೆ.
  • ಲಲಿತಾ ಸಹಸ್ರನಾಮ, ಸೌಂದರ್ಯ ಲಹರಿಗಳು ಚಾಲ್ತಿಯಿರುವ ಸ್ತೋತ್ರಗಳಾಗಿದ್ದು ಮಾಂಗಲ್ಯ ಧಾರಣವನ್ನು ಪ್ರಸ್ತಾಪಿಸಿವೆ.
  • ವಿವಾಹಿತ ಹೆಂಗಸಿನ ಮೇಲೆ ಕೆಟ್ಟ ದೃಷ್ಟಿ ಬೀಳದಿರಲೆಂದೇ ಮಂಗಳ ಸೂತ್ರದಲ್ಲಿ ಕಪ್ಪು ಬಣ್ಣದ ಮಣಿಗಳಿರುವುದು ಎಂಬ ನಂಬಿಕೆಯಿದೆ.
  • ಕಪ್ಪು ಮಣಿಗಳಿಗೆ ಋಣಾತ್ಮಕ ಶಕ್ತಿಕ್ಷೇತ್ರವನ್ನೆಲ್ಲ ಹೀರಿ ಕೊಂಡು ಅದು ವಧುವನ್ನು ಮತ್ತು ಅವಳ ಕುಟುಂಬವನ್ನು ತಗಲದಂತೆ ಮಾಡುವ ಗುಣವಿರುತ್ತದೆ.
  • ಕರಿಮಣಿಗಳನ್ನು ಒಂದೊಂದಾಗಿ ಪೋಣಿಸಿದಾಗ ಅದೊಂದು ಸುಂದರ ಸರಮಾಲೆ ಆಗುವುದನ್ನು, ಗಂಡಿನ ಕುಟುಂಬವೆಂಬ ಸೂತ್ರದೊಂದಿಗೆ ನವವಿವಾಹಿತ ಹೆಣ್ಣು ಅಷ್ಟೇ ಸುಲಲಿತವಾಗಿ ಹೊಂದಿ ಕೊಳ್ಳ ಬೇಕು/ ಹೊಂದಿ ಕೊಳ್ಳುತ್ತಾಳೆ ಎಂಬ ಆಶಯಕ್ಕೆ ಹೋಲಿಸುತ್ತಾರೆ.
  • ಕರಿಮಣಿ ಸರದ ಮತ್ತೊಂದು ವೈಶಿಷ್ಟ್ಯ ಏನೆಂದರೆ ಎದೆಯ ಭಾಗದಲ್ಲಿ ಉಂಟಾಗುವ ಉಷ್ಣತೆಯನ್ನು ಹೀರಿ ಕೊಳ್ಳುತ್ತದೆ.
  • ಇದರ ಅತಿ ಮುಖ್ಯವಾದ ಉಪಯುಕ್ತತೆ ಹಾಲುಣಿಸುವ ತಾಯಿಯಲ್ಲಿ ಎದೆ ಹಾಲಿನ ಉಷ್ಣತೆಯನ್ನು ಹೀರಿ ಕೊಂಡು ಎದೆ ಹಾಲು ಕೆಡದಂತೆ ಶಿಶುವಿಗೆ ಉಣ್ಣಲೂ ಅನುಕೂಲವಾದ ಸಮ ಉಷ್ಣತೆಯಲ್ಲಿರಿಸಲು ಸಹಾಯ ಮಾಡುತ್ತದೆ.

ಮಂಗಳ ಸೂತ್ರ ಅಥವಾ ತಾಳಿಯಲ್ಲಿ ಪ್ರಾದೇಶಿಕವಾಗಿ, ಮತ- ಪಂಥಗಳಿಗೆ ಅನುಸಾರವಾಗಿ ಅಲ್ಪಸ್ವಲ್ಪ ವ್ಯತ್ಯಾಸಗಳೂ ಕಂಡು ಬರುತ್ತವೆ. ಬ್ರಾಹ್ಮಣ ವರ್ಗದಲ್ಲಿ ಎರಡು ಪದಕಗಳ ತಾಳಿ, ಕಾಯಸ್ಥ / ಮರಾಠಾ ಸ್ತ್ರೀಯರಿಗೆ ಒಂದು ಪದಕದ ತಾಳಿ, ವೈಶ್ಯ ಮತ್ತು ಚಿನಿವಾರ ಪಂಗಡಗಳಲ್ಲಿ ಚಿನ್ನ ವಜ್ರ, ವೈಢೂರ್ಯಗಳಿರುವ ತಾಳಿ – ಹೀಗೆ ವೈವಿಧ್ಯಗಳು. ವೀರಶೈವ ಸ್ತ್ರೀಯರು ತಾಳಿಯೊಂದಿಗೇ ಲಿಂಗದ ಕರಂಡಕವನ್ನು ಕಟ್ಟಿ ಕೊಳ್ಳುವುದೂ ಇದೆ. ದಕ್ಷಿಣ ಭಾರತದಲ್ಲಿ ಹಿಂದುಗಳಷ್ಟೇ ಅಲ್ಲದೆ ಕ್ರಿಶ್ಚಿಯನ್‌ ಮತ್ತು ಮುಸ್ಲಿಂ ಮತಸ್ಥ ಸ್ತ್ರೀಯರೂ ವಿವಾಹದ ನಂತರ ತಾಳಿ/ ಕರಿಮಣಿ ಸರ ಧರಿಸುತ್ತಾರೆ. ಗೃಹಿಣಿಯರು ಇಂದು ಸೌಭಾಗ್ಯಕರವಾದ ಇವುಗಳನ್ನು ಧರಿಸುವುದರಲ್ಲಿ ಆಸಕ್ತಿ ವಹಿಸುತ್ತಿಲ್ಲ. ಕೆಲವರು ಕರಿಮಣಿಯನ್ನು ಆಗಾಗ ಬಿಚ್ಚಿಟ್ಟು ಹೊರಗೆ ಹೋಗುವಾಗ ಧರಿಸುತ್ತಿದ್ದಾರೆ. ಆದರೆ ಅವುಗಳಿಗಿರುವ ಮಹತ್ವವನ್ನು, ಸಂಪ್ರದಾಯವನ್ನು ಎತ್ತಿ ಹಿಡಿಯುವ ಗೌರವಾರ್ಹ ಆಗುವಂತಹ ಮಂಗಳಕರ ಆಭರಣಗಳನ್ನು ಧರಿಸುವುದರಿಂದ ನಾರಿಯು ಪೂಜನೀಯಳು ಆಗುತ್ತಾಳೆ.

ಜ್ಯೋತಿಷ್ಯ ಶಾಸ್ತ್ರ ಗ್ರಂಥಗಳಲ್ಲಿ ಯಾವ ರಾಶಿಯವರು ಎಷ್ಟೆಷ್ಟು ಕರಿಮಣಿಯನ್ನು ಸರದಲ್ಲಿ ಹಾಕಿ ಕೊಳ್ಳ ಬೇಕೆಂಬುದನ್ನು ಉಲ್ಲೇಖಿಸಲಾಗಿದೆ.

ರಾಶಿಗಳಿಗೆ ಕರಿಮಣಿಗಳ ಸಂಖ್ಯೆ:

ಮೇಷ ರಾಶಿಗೆ – 21 ಮಣಿಗಳು.
ವೃಷಭ ರಾಶಿಗೆ – 40 ಮಣಿಗಳು.
ಮಿಥುನ ರಾಶಿಗೆ – 34 ಮಣಿಗಳು.
ಕಟಕ ರಾಶಿಗೆ – 20 ಮಣಿಗಳು.
ಸಿಂಹ ರಾಶಿಗೆ – 18 ಮಣಿಗಳು.
ಕನ್ಯಾ ರಾಶಿಗೆ – 34 ಮಣಿಗಳು.
ತುಲಾ ರಾಶಿಗೆ – 40 ಮಣಿಗಳು.
ವೃಶ್ಚಿಕ ರಾಶಿಗೆ – 21 ಮಣಿಗಳು.
ಧನುಸ್ಸು ರಾಶಿಗೆ – 32 ಮಣಿಗಳು.
ಮಕರ ರಾಶಿಗೆ – 38 ಮಣಿಗಳು.
ಕುಂಭ ರಾಶಿಗೆ – 38 ಮಣಿಗಳು.
ಮೀನ ರಾಶಿಗೆ – 32 ಮಣಿಗಳು.

ಪ್ರತಿ ಹೆಣ್ಣಿನ ಆಶಯ ತಾನು ಸುಮಂಗಲಿಯಾಗಿ ಬಾಳಬೇಕೆಂಬುದು. ಮದುವೆ ಎಂಬುದು ಪವಿತ್ರ ಬಂಧನ. ದಿನ‌ ಬೆಳಿಗ್ಗೆ ಎದ್ದ ತಕ್ಷಣ ತಾಯಿ ಪಾರ್ವತಿಯನ್ನು ನೆನೆಸಿ ಪ್ರಾರ್ಥಿಸಿ ಏಕೆಂದರೆ ಪಾರ್ವತಿಯು ಅರಿಶಿನ ಕುಂಕುಮ ಶೋಭಿತೆಯ ಪ್ರತಿರೂಪ. ಮಂಗಳ ಸೂತ್ರವನ್ನು ಎಂದಿಗೂ ಯಾರಿಗೂ ಕಾಣದ ಹಾಗೆ ನೋಡಿಕೊಳ್ಳಿ ಏಕೆಂದರೆ ಅದು ಸಪ್ತ ಜನ್ಮಗಳ ಗಂಟು ಅದಕ್ಕೆ ಕೆಟ್ಟ ಶಕುನಗಳು ತಾಕಬಾರದು.
ನಿಮ್ಮ‌ಇಷ್ಟ ದೇವಿಗೆ ಪೂಜೆ ಮಾಡಿಸಿ ಐದು ಜನ ಮುತ್ತೈದೆಯರಿಗೆ ಬಾಗಿನ ನೀಡಿರಿ ಈ ಪೂಜೆ ಸಾಕ್ಷತ್ ಮಹಾದೇವಿಗೆ ಅರಿಶಿನ ಕುಂಕುಮ‌ ಕೊಟ್ಟು ನಿಮ್ಮ‌ ಸುಮಂಗಲಿತನ ಸಾಯುವರೆಗೂ ಇರಲಿ ಎಂದು ಅಶಿರ್ವಾದ ಪಡೆದಂತೆ ಸರಿ. ಎಲ್ಲದಂಕ್ಕಿಂತ ಮುಖ್ಯ ಆಧುನಿಕತೆಯ ಸುಳಿಗೆ ನಿಮ್ಮ ತಾಳಿಯನ್ನು ಯಾವಾಗ ಅಂದರೆ ಅವಾಗ ತೆಗೆಯಬೇಡಿ.

ಕೆಲ ಮಹಿಳೆಯರು ಗೊತ್ತೋ ಗೊತ್ತಿಲ್ಲದೋ ಮಂಗಳ ಸೂತ್ರಕ್ಕೆ ಸೇಫ್ಟಿ ಪಿನ್ ಅನ್ನು ಇಟ್ಟುಕೊಳ್ಳುತ್ತಾರೆ. ಇದರಿಂದ ಸೇಫ್ಟಿ ಪಿನ್ ನಲ್ಲಿರುವ ಕಬ್ಬಿಣ ಅಂಶ ಮಂಗಳ ಸೂತ್ರದಲ್ಲಿ ಋಣಾತ್ಮಕ ಶಕ್ತಿಯನ್ನು ಸೆಳೆದುಕೊಳ್ಳುತ್ತದೆ. ಹಾಗಾಗಿ ಅದರಲ್ಲಿ ಒಳ್ಳೆಯ ಶಕ್ತಿಗಳನ್ನು ಸೆಳೆದು ಮಂಗಳ ಸೂತ್ರವನ್ನು ಬಲಹೀನತೆ ಮಾಡುತ್ತದೆ. ಇದರಿಂದ ಗಂಡನ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಗಳಿದ್ದು ಅವರ ದಾಂಪತ್ಯ ಜೀವನದಲ್ಲಿ ಕಲಹಗಳು ಉಂಟಾಗುತ್ತದೆ.

ಮಂಗಳ ಸೂತ್ರವನ್ನು ಒಂದು ವೇಳೆ ಬದಲಾಯಿಸಬೇಕಿದ್ದರೆ ಮೊದಲು ಅರಿಶಿಣ ದಾರದಲ್ಲಿ ಅರಿಶಿಣ ಕೊಂಬನ್ನು ಕಟ್ಟಿ ಕುತ್ತಿಗೆಗೆ ಕಟ್ಟಿಕೊಂಡ ನಂತರವೇ ಮಂಗಳ ಸೂತ್ರವನ್ನು ತೆಗೆಯಬೇಕು. ಮಂಗಳ ಸೂತ್ರವನ್ನು ಮಂಗಳವಾರ ಮತ್ತು ಶುಕ್ರವಾರ ದಿನಗಳಲ್ಲಿ ಬದಲಾಯಿಸಬಾರದು. ಕೇವಲ ಬುಧವಾರ ಮತ್ತು ಗುರುವಾರದ ದಿನಗಳಲ್ಲಿ ಮಾತ್ರ ಬದಲಾಯಿಸಬೇಕು. ಮಂಗಳ ಸೂತ್ರವನ್ನು ಸಂಜೆಯ ವೇಳೆಯಲ್ಲಿ ಬದಲಾಯಿಸಬಾರದು. ಒಳ್ಳೆಯ ದಿನ ಮತ್ತು ಒಳ್ಳೆಯ ಸಮಯದಲ್ಲಿ ಬದಲಾಯಿಸಬೇಕು. ಕೆಲ ಮಹಿಳೆಯರು ಸ್ನಾನದ ಮುಂಚೆ ಮತ್ತು ಮಲಗುವ ಮುಂಚೆ ಮಂಗಳ ಸೂತ್ರವನ್ನು ತೆಗೆಯುತ್ತಾರೆ. ಹೀಗೆ ಮಾಡಿದರೆ ತುಂಬಾ ಅಪಚಾರ ಮಾಡಿದಂತೆ ಎಂದು ಅರ್ಥ. ದುಷ್ಟ ಶಕ್ತಿಗಳಿಂದ ಸಂಸಾರವನ್ನು ರಕ್ಷಿಸಿಕೊಳ್ಳಲು ಶಕ್ತಿ ಸ್ವರೂಪಿಯಾದ ಸ್ತ್ರೀಯರ ಕುತ್ತಿಗೆಯಲ್ಲಿ ಮಂಗಳ ಸೂತ್ರವು ಇರಲೇಬೇಕು.ತನ್ನ ಗಂಡನ ಆಯಸ್ಸು ಹೆಚ್ಚಿಸುವ ಶಕ್ತಿ ಮಂಗಳ ಸೂತ್ರದಲ್ಲಿ ಇರುತ್ತದೆ ಎಂದು ನಂಬಿದ್ದಾರೆ. ಮಂಗಳ ಸೂತ್ರ ಎಂದರೆ ಒಂದು ಪವಿತ್ರ ಸಂಬಂಧಕ್ಕೆ ಒಳಗಾಗಿರುವವರು ಎಂದು ಅರ್ಥ. ಮಂಗಳ ಎಂದರೆ ಶುಭ, ಸೂತ್ರ ಎಂದರೆ ದಾರ ಎಂದು ಅರ್ಥ.

ಸರ್ವಜನ ಸುಖಿನೋಭವಂತು

ಏಕಾದಶಿ ಆಚರಣೆ – ವೈಜ್ಞಾನಿಕ ಮತ್ತು ಪೌರಾಣಿಕ ಮಹತ್ವ

ಏಕಾದಶ ಈ ಸಂಸ್ಕೃತ ಪದದ ಅರ್ಥ ಹನ್ನೊಂದು(11). ಹಿಂದೂ ಪಂಚಾಂಗದ 12 ಮಾಸಗಳ ಶುಕ್ಲ ಪಕ್ಷದ ಮತ್ತು ಕೃಷ್ಣ ಪಕ್ಷದ ಹನ್ನೊಂದನೆಯ ದಿನವನ್ನು ಏಕಾದಶಿ ಎನ್ನಲಾಗುತ್ತದೆ. 5 ಕರ್ಮೇಂದ್ರಿಯ, 5 ಜ್ಞಾನೇಂದ್ರಿಯ ಮತ್ತು ಮನಸ್ಸಿನಿಂದ ಅಂದರೆ, ಧರ್ಮ, ಕರ್ಮ, ಜ್ಞಾನಸಾಧನ ಕರಣಗಳಿಂದ ಭಗವತ್‍ ಚಿಂತನೆಯಲ್ಲಿ ತೊಡಗಿಕೊಳ್ಳುವ ಕ್ರಿಯೆಯೇ ‘ಏಕಾದಶಿ’. ಈ ಏಕಾದಶಿಗೆ ಸಾಕ್ಷಾತ್ ಶ್ರೀಹರಿಯೇ ಅಭಿಮಾನಿ ದೇವರು. ಆ ಕಾರಣಕ್ಕೆ ಈ ದಿನವನ್ನು ‘ಹರಿದಿನ’ ಎಂತಲೂ ಕರೆಯುವರು. ಒಂದು ಮಾಸದಲ್ಲಿ ಎರಡು ಏಕಾದಶಿಗಳಿರುತ್ತವೆ. ಅಮವಾಸ್ಯೆಯ ನಂತರ ಬರುವ ಏಕಾದಶಿಯನ್ನು ಶುಕ್ಲ ಪಕ್ಷದ ಏಕಾದಶಿ ಎಂದು ಕರೆಯಲಾಗುತ್ತದೆ. ಹಾಗೆಯೇ ಹುಣ್ಣಿಮೆ ಬರುವ ಏಕಾದಶಿಯನ್ನು ಕೃಷ್ಣ ಪಕ್ಷದ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನದಂದು ಯಾವ ಆಹಾರವನ್ನೂ ಸೇವಿಸದೆ, ಉಪವಾಸ ಮಾಡುವ ಸಂಪ್ರದಾಯವಿದೆ. ಈ ದಿನ ಆಹಾರವನ್ನು ತ್ಯಜಿಸಿ ದೇವರ ಧ್ಯಾನದಲ್ಲಿ ತೊಡಗಿದರೆ ವಿಶೇಷ ಫಲ ದೊರೆಯುತ್ತದೆ ಎಂಬುದು ನಿಯಮ. ಈ ದಿನದಂದು ಕೆಲವರು ಅನ್ನವನ್ನು ಮಾತ್ರ ತ್ಯಜಿಸಿ ಉಪವಾಸ ಆಚರಿಸಿದರೆ,ಮತ್ತೆ ಕೆಲವರು ಹನಿ ನೀರನ್ನೂ ಕುಡಿಯದೆ,ನಿರಾಹಾರ ವ್ರತವನ್ನು ಆಚರಿಸುತ್ತಾರೆ. ದಶಮಿಯಂದು ಅಂದರೆ ಏಕಾದಶಿಯ ಹಿಂದಿನ ದಿನ ಒಂದು ಹೊತ್ತು ಮಧ್ಯಾಹ್ನ ಊಟಮಾಡಿ, ಭೋಗಗಳನ್ನು ತ್ಯಜಿಸಿ, ಮರುದಿನ ಏಕಾದಶಿ ಉಪವಾಸಮಾಡಬೇಕು. ಮಾರನೆಯ ದಿನ ಅಂದರೆ ದ್ವಾದಶಿಯಂದು ಬೆಳಿಗ್ಗೆ ೯ ಘಂಟೆಯೊಳಗಾಗಿ ನಿತ್ಯಕರ್ಮ ಮುಗಿಸಿ ಭೋಜನ ಮಾಡಬೇಕು.  ಕೆಲವರು ಏಕಾದಶಿಯಂದು ಮೌನ ವ್ರತ ಸಹ ಆಚರಿಸುತ್ತಾರೆ.

ವರ್ಷದ ಪ್ರತಿ ತಿಂಗಳದ ಶುಕ್ಲ ಮತ್ತು ಕೃಷ್ಣ ಪಕ್ಷದಲ್ಲಿ ಬರುವ ಏಕಾದಶಿಯ ಹೆಸರುಗಳು:

ವೈದಿಕ ಮಾಸ

ಪಾಲಕ ದೇವತ ಶುಕ್ಲ ಪಕ್ಷ ಏಕಾದಶಿ

ಕೃಷ್ಣಪಕ್ಷ ಏಕಾದಶಿ

ಚೈತ್ರ (March–April)

ವಿಷ್ಣು ಕಾಮದಾ

ವರೂಥಿನಿ

ವೈಶಾಖ (April–May)

ಮಧುಸೂದನ ಮೋಹಿನೀ

ಅಪರಾ

ಜ್ಯೇಷ್ಠ (May–June)

ತ್ರಿವಿಕ್ರಮ ನಿರ್ಜಲಾ ಯೋಗಿನೀ

ಆಷಾಢ (June–July)

ವಾಮನ ಶಯನೀ/ಪ್ರಥಮಾ

ಕಾಮಿಕಾ

ಶ್ರಾವಣ (July-August)

ಶ್ರೀಧರ ಪವಿತ್ರಾ

ಅಜಾ

ಭಾದ್ರಪದ (August–September)

ಹೃಷೀಕೇಶ ಪಾರ್ಶ್ವಪರಿವರ್ತಿನೀ

ಇಂದಿರಾ

ಆಶ್ವಯುಜ (September–October)

ಪದ್ಮನಾಭ ಪಾಶಾಂಕುಶಾ

ರಮಾ

ಕಾರ್ತೀಕ (October–November)

ದಾಮೋದರ ದೇವಪ್ರಬೋಧಿನೀ ಉತ್ಪತ್ತಿಕಾ

ಮಾರ್ಗಶಿರ (November–December)

ಕೇಶವ ಮೋಕ್ಷದಾ

ಸಫಲಾ

ಪುಷ್ಯ (ಪೌಷ)(December–January)

ನಾರಾಯನಣ ಪುತ್ರದಾ

ಷಟ್ತಿಲಾ

ಮಾಘ (January–February) ಮಾಧವ ಜಯಾ

ಶ್ರೀವಿಜಯಾ

ಫಾಲ್ಗುಣ (February–March)

ಗೋವಿಂದ ಆಮಲಕೀ

ಪಾಪಮೋಚನೀ

ಅಧಿಕ (3 ವರ್ಷಕ್ಕೆ ಓಂದು ಸಾರಿ) ಪುರುಷೋತ್ತಮ ಪದ್ಮಿನೀ

ಪರಮಾ

ಮೇಲೆ ನೀಡಿರುವ ಏಕಾದಶಿಗಳ ಹೆಸರುಗಳು ಫಲ:

  1. ಚೈತ್ರ ಶುಕ್ಲ ಏಕಾದಶಿ – ಕಾಮದಾ – ಕೋರಿಕೆಗಳನ್ನು ಪೂರೈಸುತ್ತದೆ.
  2. ಚೈತ್ರ ಬಹುಳ ಏಕಾದಶಿ – ವರೂಧಿನಿ – ಸಹಸ್ರ ಗೋದಾನ ಫಲವು ಲಭಿಸುತ್ತದೆ.
  3. ವೈಶಾಖ ಶುದ್ಧ ಏಕಾದಶಿ – ಮೋಹಿನಿ – ದರಿದ್ರನು ಧನವಂತನಾಗುತ್ತಾನೆ.
  4. ವೈಶಾಖ ಬಹುಳ ಏಕಾದಶಿ – ಅಪರಾ – ರಾಜ್ಯಪ್ರಾಪ್ತಿ
  5. ಜ್ಯೇಷ್ಠ ಶುಕ್ಲ ಏಕಾದಶಿ – ನಿರ್ಜಲಾ – ಆಹಾರ ಸಮೃದ್ಧಿ
  6. ಜ್ಯೇಷ್ಠ ಬಹುಳ ಏಕಾದಶಿ – ಯೋಗಿನೀ – ಪಾಪಗಳನ್ನು ಹರಿಸುತ್ತದೆ (ಪಾಪಗಳಿಂದ ಮುಕ್ತಗೊಳಿಸುತ್ತದೆ)
  7. ಆಷಾಢ ಶುದ್ಧ ಏಕಾದಶಿ – ಶಯನೀ – ಸಂಪತ್ ಪ್ರಾಪ್ತಿ – ವಿಷ್ಣುವು ಯೋಗನಿದ್ರೆಗೆ ಜಾರುವ ದಿನ
  8. ಆಷಾಢ ಬಹುಳ ಏಕಾದಶಿ – ಕಾಮಿಕಾ – ಬೇಡಿದ ವರಗಳು ಪ್ರಾಪ್ತಿಯಾಗುತ್ತವೆ.
  9. ಶ್ರಾವಣ ಶುಕ್ಲ ಏಕಾದಶಿ – ಪವಿತ್ರಾ (ಪುತ್ರ) – ಸತ್ ಸಂತಾನ ಪ್ರಾಪ್ತಿ
  10. ಶ್ರಾವಣ ಬಹುಳ ಏಕಾದಶಿ – ಅಜಾ – ರಾಜ್ಯ, ಪತ್ನೀಪುತ್ರ ಪ್ರಾಪ್ತಿ ಮತ್ತು ಆಪತ್ ನಿವಾರಣೆ
  11. ಭಾದ್ರಪದ ಶುದ್ಧ ಏಕಾದಶಿ – ಪಾರ್ಶ್ವಪರಿವರ್ತಿನೀ (ಯೋಗ ನಿದ್ರೆಯಲ್ಲಿ ವಿಷ್ಣುವು ಪಕ್ಕಕ್ಕೆ ಹೊರಳುತ್ತಾನಂತೆ ಹಾಗಾಗಿ ಇದು ಪರಿವರ್ತನ) – ಯೋಗ ಸಿದ್ಧಿ
  12. ಭಾದ್ರಪದ ಬಹುಳ ಏಕಾದಶಿ – ಇಂದಿರಾ – ಸಂಪದಗಳು ಮತ್ತು ರಾಜ್ಯ ಪ್ರಾಪ್ತಿಯುಂಟಾಗುತ್ತದೆ.
  13. ಆಶ್ವಯುಜ ಶುಕ್ಲ ಏಕಾದಶಿ – ಪಾಶಾಂಕುಶಾ – ಪುಣ್ಯಪ್ರದವಾದುದು
  14. ಆಶ್ವಯುಜ ಬಹುಳ ಏಕಾದಶಿ – ರಮಾ – ಸ್ವರ್ಗಪ್ರಾಪ್ತಿ
  15. ಕಾರ್ತೀಕ ಶುಕ್ಲ ಏಕಾದಶಿ – ದೇವಪ್ರಬೋಧಿನೀ (ಯೋಗ ನಿದ್ರೆಯಿಂದ ವಿಷ್ಣುವು ಎಚ್ಚರಗೊಳ್ಳುವ ದಿನ) – ಜ್ಞಾನಸಿದ್ಧಿ
  16. ಕಾರ್ತೀಕ ಬಹುಳ ಏಕಾದಶಿ – ಉತ್ಪತ್ತಿಕಾ – ದುಷ್ಟ ಸಂಹಾರ (ಮುರಾಸುರನನ್ನು ಸಂಹರಿಸಿದ ಕನ್ಯೆಯು ವಿಷ್ಣುವಿನ ಶರೀರದಿಂದ ಜನಿಸಿದ ದಿನ)
  17. ಮಾರ್ಗಶಿರ ಶುಕ್ಲ ಏಕಾದಶಿ – ಮೋಕ್ಷದಾ – ಮೋಕ್ಷಪ್ರಾಪ್ತಿ (ಮಾರ್ಗಶಿರ ಶುಕ್ಲ ಏಕಾದಶಿಯು ಧನುರ್ಮಾಸದಲ್ಲಿ ಬಂದರೆ ಅದುವೇ ವೈಕುಂಠ ಏಕಾದಶಿಯಾಗುತ್ತದೆ)
  18. ಮಾರ್ಗಶಿರ ಬಹುಳ ಏಕಾದಶಿ – ಸಫಲಾ (ವಿಮಲಾ) – ಅಜ್ಞಾನ ನಿವೃತ್ತಿ
  19. ಪುಷ್ಯ(ಪೌಷ) ಶುಕ್ಲ ಏಕಾದಶಿ – ಪುತ್ರದಾ – ಪುತ್ರಪ್ರಾಪ್ತಿ (ಪುಷ್ಯ ಶುಕ್ಲ ಏಕಾದಶಿಯು ಧನುರ್ಮಾಸದಲ್ಲಿ ಬಂದರೆ ಅದುವೇ ವೈಕುಂಠ ಏಕಾದಶಿಯಾಗುತ್ತದೆ)ವೈಕುಂಠ ಏಕಾದಶಿ ಮಾರ್ಗಶಿರ ಅಥವಾ ಪುಷ್ಯ ಮಾಸದಲ್ಲಿ ಬರುತ್ತದೆಂದು ಈ ಮುಂಚೆಯೇ ಹೇಳಿದೆ.
  20. ಪುಷ್ಯ (ಪೌಷ) ಕೃಷ್ಣ ಏಕಾದಶಿ –  ಷಟ್ತಿಲಾ (ಕಲ್ಯಾಣೀ) – ಶಾರೀರಿಕ ಬಾಧೆಗಳಿಂದ ಮುಕ್ತಿ
  21. ಮಾಘ ಶುಕ್ಲ ಏಕಾದಶಿ – ಜಯಾ – ಶಾಪವಿಮುಕ್ತಿ
  22. ಮಾಘ ಕೃಷ್ಣ ಏಕಾದಶಿ – ಶ್ರೀವಿಜಯಾ – ಸಕಲ ಕಾರ್ಯ ವಿಜಯ (ಇದು ಭೀಷ್ಮೈಕಾದಶಿ ಎಂದು ಪ್ರಸಿದ್ಧಿಯಾಗಿದೆ)
  23. ಫಾಲ್ಗುಣ ಶುಕ್ಲ ಏಕಾದಶಿ – ಆಮಲಕೀ – ಆರೋಗ್ಯ ಪ್ರಾಪ್ತಿ
  24. ಫಾಲ್ಗುಣ ಕೃಷ್ಣ ಏಕಾದಶಿ – ಪಾಪಮೋಚನೀ (ಸೌಮ್ಯಾ) – ಪಾಪ ವಿಮುಕ್ತಿ
  25. ಅಧಿಕ ಮಾಸ ಶುಕ್ಲ ಏಕಾದಶಿ – ಕಾಮದಾ ಏಕಾದಶಿ – ಮನುಷ್ಯನ ಕಾಮನೆಗಳು, ಆಸೆ, ಆಕಾಂಕ್ಷೆಗಳನ್ನು ಈಡೇರಿಸುತ್ತದೆ. ‌ ‌
  26. ಅಧಿಕ ಮಾಸ ಕೃಷ್ಣ ಏಕಾದಶಿ – ಕಮಲ ಏಕಾದಶಿ – ಶ್ರೀ ಮಹಾಲಕ್ಷ್ಮಿಯ ಪ್ರಸನ್ನತೆಗಾಗಿ, ಶ್ರೀಮಂತ ರಾಗಲು.

ಪುರಾಣ:

ಪುರಾಣಗಳ ಪ್ರಕಾರ ಮನುಷ್ಯರ ಒಂದು ವರ್ಷ ದೇವತೆಗಳಿಗೆ ಒಂದು ದಿನ ಎನ್ನುತ್ತಾರೆ. ಅದರಲ್ಲಿ, ಆಷಾಡದ ಮೊದಲಿನಿಂದ ಧನುರ್ ಮಾಸದವರೆಗೆ ಉಳ್ಳ ಆರು ತಿಂಗಳು ಕಾಲ ದೇವತೆಗಳಿಗೆ ರಾತ್ರಿ ಸಮಯವೇ ದಕ್ಷಿಣಾಯನ ಉಂಟಾಗುತ್ತದೆ. ದೇವತೆಗಳ ದಕ್ಷಿಣಾಯನ ಮುಗಿಯುವ ಸಮಯ ಬ್ರಹ್ಮ ಮುಹೂರ್ತ ಸಮಯವಾದ ಮುಂಜಾವಿನ ಸಮಯವೇ ಧನುರ್. ಈ ಧನುರ್ ಮಾಸದಲ್ಲಿ, ಮಹಾವಿಷ್ಣು ಗಾಢ ನಿದ್ದೆಯಿಂದ ಎಚ್ಚರಗೊಳ್ಳುವ ಆ ಒಂದು ಗಳಿಗೆಯೇ ಏಕಾದಶಿ. ಭಗವಂತ ಕಣ್ಣು ತೆರೆದು ಎಲ್ಲರನ್ನೂ ದಯಪಾಲಿಸುತ್ತಾನೆ ಎಂಬುದನ್ನು ಸೂಚಿಸುವುದಕ್ಕೆ ಏಕಾದಶಿ, ಉಳಿದ ಎಲ್ಲಕ್ಕಿಂತಲೂ ಹೆಚ್ಚು ಮಹತ್ವ ಪಡೆಯುತ್ತದೆ.

ಭಕ್ತ ಅಂಬರೀಷ ಕಥೆ:

ಭಾಗವತ ಪುರಾಣದ ಉಲ್ಲೇಖದಂತೆ, ವಿಷ್ಣು ಭಕ್ತನಾದ ಅಂಬರೀಷ, ರಘುವಂಶದ ರಾಜನಾಗಿ ಅಯೋಧ್ಯೆಯನ್ನು ಆಳುತ್ತಿದ್ದ. ಮಹಾವಿಷ್ಣುವಿನ ಪರಮ ಭಕ್ತನಾದ ಅಂಬರೀಷನ ರಾಜ್ಯ ಸದಾ ಸುಭಿಕ್ಷ ವಾಗಿರಲು ವಿಷ್ಣು ವಿನ ಕೃಪಾಕಟಾಕ್ಷವಿರುತ್ತದೆ. ಪ್ರತಿ ಏಕಾದಶಿಯ ದಿನ ಅಂಬರೀಷನು ಉಪವಾಸ ಮಾಡಿ, ದ್ವಾದಶಿಯ ದಿನ ಅನ್ನದಾನ ಮಾಡುವ ವೃತ ನಡೆಸಿರುತ್ತಾನೆ. ಇಂಥ ಒಂದು ಏಕಾದಶಿಯ ದಿನ, ಉಪವಾಸ ಮುಗಿವ ಸಮಯದಲ್ಲಿ ದೂರ್ವಾಸ ಮುನಿ, ಅಂಬರೀಷನ ಬಳಿ ಆಗಮಿಸುತ್ತಾನೆ. ಮುನಿಯನ್ನು ಬರಮಾಡಿಕೊಂಡು, ಊಟಕ್ಕೆ ಆಹ್ವಾನಿಸಿದಾಗ ಊಟಕ್ಕೆ ಮುನ್ನ ತಾನು ಸ್ನಾನ ಮುಗಿಸಿ ಬರುವುದಾಗಿ, ಅಲ್ಲಿಯವರೆಗೆ ತಡೆಯಬೇಕೆಂದು ನದಿಗೆ ಸ್ನಾನಕ್ಕೆ ಹೋಗುತ್ತಾರೆ . ದೂರ್ವಾಸ ಮುನಿ ಸ್ನಾನ ಮುಗಿಸಿ ಉಪವಾಸ ಮುರಿವ ಸಮಯವಾದರೂ ಬರುವದಿಲ್ಲ.

ಕುಲಗುರು ವಸಿಸ್ಠರ ಬಳಿ ಸಲಹೆ ಕೇಳಿದಾಗ, ವಸಿಶ್ಠರು ಒಂದು ಹನಿ ನೀರು ಮತ್ತು ತುಳಸಿ ದಳವನ್ನು ಭುಂಜಿಸಿ ಉಪವಾಸ ಮುರಿದು, ತದ ನಂತರ ದೂರ್ವಾಸ ಮುನಿಯ ದಾರಿ ಕಾಯುವಂತೆ ಸಲಹೆ ನೀಡುತ್ತಾರೆ. ತಾನು ಬರುವವರೆಗೆ ಕಾಯದೆ, ಅಂಬರೀಷನು ಉಪವಾಸ ಮುರಿದ್ದದ್ದನ್ನು ತಿಳಿದು ತಮಗೆ ಅವಮಾನಿಸಿದನೆಂದು ದೂರ್ವಾಸರು ಹತ್ತು ಜನ್ಮ ಪಡೆಯೆಂದು ಶಾಪ ಕೊಡುತ್ತಾರೆ ಆದರೆ ಏಕಾದಶಿ ಉಪವಾಸ ವ್ರತ ಮಾಡುತ್ತಿದ್ದ ಅಂಬರೀಷನ ಭಕ್ತಿಗೆ ಮೆಚ್ಚಿದ ಶ್ರೀ ನಾರಾಯಣನು ತಾನೇ ಆ ಶಾಪವನ್ನು ತೆಗೆದುಕೊoಡು 10 ಅವತಾರವೆತ್ತುತ್ತಾನೆ. ತನ್ನ ಭಕ್ತನ ರಕ್ಷಣೆಗಾಗಿ ತನ್ನ ಸುದರ್ಶನ ಚಕ್ರವನ್ನೆ ಕಳಿಸಿದ ಸುದರ್ಶನ ಚಕ್ರ ದೂರ್ವಾಸರ ಕಡೆಗೆ ಹೋದಾಗ, ಅಂಬರೀಷನೆ ಬೇಡಿಕೊoಡು ಅದು ತಿರುಗಿ ವಿಷ್ಣುವಿನ ಕಡೆಗೆ ಹೋಗುವಂತೆ ಮಾಡಬೇಕಾಯಿತು.

ಈ ನಂಬಿಕೆಯ ಹಿಂದಿನ ಪೌರಾಣಿಕ ಹಿನ್ನೆಲೆ ಹೀಗಿದೆ:

ಚಂದ್ರಾವತಿ ಎಂಬ ನಗರದಲ್ಲಿ ಜಂಗಾಸುರ ಎಂಬ ಅಸುರ ಅವನ ಮಗ ಮರುವಾಸುರ ದೇವತೆಗಳಿಗೆ ಉಪಟಳ ನೀಡುತ್ತಿರುತ್ತಾರೆ. ಅಸುರರಿಂದ ತಾವು ಪಡುವ ಹಿಂಸೆಯನ್ನು ದೇವತೆಗಳು ಭಗವಂತನ ಬಳಿ ಮೊರೆಯಿಡಲು ಮಹಾವಿಷ್ಣು ಆ ಅಸುರರ ಮೇಲೆ ಯುದ್ದ ಹೂಡುತ್ತಾನೆ. ಆ ಯುದ್ಧ ಹಲವು ವರ್ಷಗಳು ಮುಂದುವರೆದಿದ್ದರಿಂದ, ದಣಿದು ಸೊರಗಿ ಹೋದ ಭಗವಂತನು ಸಿಂಹಾವತಿ ಎಂಬ ಗುಹೆಯಲ್ಲಿ ವಿಶ್ರಾಂತಿ ಪಡೆಯಲು ನಿದ್ದೆಮಾಡುತ್ತಾನೆ. ಆಗ ಶ್ರೀಮನ್ ನಾರಾಯಣನ ಮನಸ್ಸಿನಲ್ಲಿ, ಅಸುರರನ್ನು ಸೋಲಿಸಲು ಉಂಟಾದ ಆಲೋಚನೆಗಳು, ಯೋಜನೆಗಳು ಎಲ್ಲವೂ ರೂಪಾತಾಳಿ ‘ಏಕಾದಶಿ’ ಎಂಬ ಒಂದು ಸ್ತ್ರೀಶಕ್ತಿಯಾಗಿ ಆ ಅಸುರರನ್ನು ಸೋಲಿಸುತ್ತದೆ. ಅಸುರರನ್ನು ಜಯಿಸಿದ ಮೇಲೆ ತನ್ನ ಬಳಿಯೇ ಮರಳಿದ ಏಕಾದಶಿಗೆ, ತನ್ನ ಕೆಲಸವನ್ನು ಅವಳು ವಹಿಸಿಕೊಂಡು ಅದನ್ನು ಉತ್ತಮವಾಗಿ ಮಾಡಿ ಮುಗಿಸಿದ್ದನ್ನು ಮೆಚ್ಚಿಕೊಂಡು ವರ ನೀಡಲು ತಯಾರಾದ ಭಗವಂತನ ಬಳಿ ಬಂದು, “ಭಗವಂತ, ನಿನ್ನ ಪ್ರೀತಿ ಪಾತ್ರಳಾಗಿ ನಾನು ಸದಾ ಇರಬೇಕು, ನಾನು ಹುಟ್ಟಿದ ಈ ದಿನ ಉಪವಾಸ ಇರುವವರಿಗೆ ಎಲ್ಲ ಸಿದ್ಧಿಸುವಂತೆ ಮಾಡಬೇಕು..!” ಎಂದು ಏಕಾದಶಿ ಬೇಡಿಕೊಳ್ಳುತ್ತಾಳೆ. ಬೇಡಿದ ವರ ನೀಡಿದ ವರದನು, ತನ್ನಿಂದ ಸೃಷ್ಟಿಯಾದ ಏಕಾದಶಿಯನ್ನು ತನ್ನೊಳಗೆ ಮತ್ತೆ ಐಕ್ಯಮಾಡಿಕೊಳ್ಳುತ್ತಾನೆ. ಹೀಗೆ ಭಗವಂತನಿಂದ ಸೃಷ್ಟಿಯಾದ ಏಕಾದಶಿ ಎಂಬ ಶಕ್ತಿಯಾದವಳು, ವರ್ಷಕ್ಕೆ 24 ಅಥವಾ 25 ಸಲ ಬರುತ್ತಾಳೆ. ಎಲ್ಲ ವ್ರತಗಳಿಗೂ ಮೇಲಾಗಿ, ಏಕಾದಶಿ ವ್ರತ ಇರುವುದು ಅತಿ ಶ್ರೇಷ್ಠ ಎನ್ನುತ್ತವೆ ಪುರಾಣಗಳು. ವರ್ಷ ಪೂರ್ತಿ ಏಕಾದಶಿ ವ್ರತ ಇರಲಾಗದವರು, ಧನುರ್ ತಿಂಗಳಲ್ಲಿ ಬರುವ ವೈಕುಂಠ ಏಕಾದಶಿಯಲ್ಲಾದರೂ ವ್ರತ ಆಚರಿಸುವುದು ಉತ್ತಮ. ಈ 24 ಏಕಾದಶಿಯಲ್ಲೂ ವ್ರತ ಇರುವ ಮೊತ್ತ ಫಲವನ್ನೂ ವೈಕುಂಠ ಏಕಾದಶಿ ಕೊಡುತ್ತದೆ ಎಂಬುದೇ ಇದರ ವಿಶೇಷತೆ.

ವೈಜ್ಞಾನಿಕ ಹಿನ್ನೆಲೆ:

ಖಗೋಳ ಶಾಸ್ತ್ರದ ಪ್ರಕಾರ ಚಂದ್ರನು ಭೂಮಿಯ ಸುತ್ತ ಸುತ್ತುವಾಗ 24 ಗಂಟೆಗಳ ಅವಧಿಯ ಅಂತರದಲ್ಲಿ 12 ಡಿಗ್ರಿಗಳಷ್ಟು ಸಂಚರಿಸುತ್ತಾನೆ. ಇದನ್ನೇ ಒಂದು ತಿಥಿ ಎನ್ನುವುದು. ಹೀಗೆ ಪೂರ್ಣಿಮೆ ಅಥವಾ ಅಮಾವಾಸ್ಯೆಯ ದಿನದಿಂದ ದಶಮಿ (10ನೇ ದಿನದ) ಹೊತ್ತಿಗೆ 120 ಡಿಗ್ರಿಗಳಷ್ಟು ಚಂದ್ರ ಸಂಚರಿಸಿರುತ್ತಾನೆ. ಅಂದರೆ ಏಕಾದಶಿಯ ಹೊತ್ತಿಗೆ ಚಂದ್ರನು 120 ಡಿಗ್ರಿಗೆ ಬಂದು 132 ಡಿಗ್ರಿ ಕೋನದಲ್ಲಿರುತ್ತಾನೆ. ಆಹೊತ್ತಿನಲ್ಲಿ ಭೂಮಿಯ ಮೇಲೆ ಚಂದ್ರನ ಆಕರ್ಷಣೆ ಹೆಚ್ಚು. ಈ ಅವಧಿಯಲ್ಲಿ ಚಂದ್ರನ ಆಕರ್ಷಣೆಯ ಪ್ರಭಾವ ಭೂಮಿಯ ಮೇಲೂ, ಜಲವರ್ಗಗಳ ಮೇಲೂ ಹೆಚ್ಚಾಗಿ ಉಂಟಾಗಿರುತ್ತದೆ. ಚಂದ್ರನು ಈ ಅವಧಿಯಲ್ಲಿ ಜಲ, ನೆಲ, ಗಾಳಿ, ಬೆಂಕಿ, ಆಕಾಶ ಎಂಬ ಪಂಚಭೂತಗಳಿಂದ ಆದ ಮಾನವನ ಶರೀರದ ಮೇಲೂ ಪರಿಣಾಮ ಉಂಟು ಮಾಡುತ್ತಾನೆ. ಮಾನವನ ಜೀರ್ಣಾಂಗಗಳು ಈ ಅವಧಿಯಲ್ಲಿ ಪ್ರಭಾವಕ್ಕೊಳಗಾಗಿರುತ್ತವೆ.ಹಿಗಾಗಿ ಏಕಾದಶಿಯಂದು ಉಪವಾಸ ಮಾಡುವುದರಿಂದ ಮಾನವನ ಆರೋಗ್ಯ ಸಮೃದ್ಧಿಯಾಗಿರುತ್ತದೆ. ಅಂದು ಊಟ ಮಾಡುವುದರಿಂದ ಚಂದ್ರ ಪ್ರಭಾವಕ್ಕೆ ಒಳಗಾದ ಜೀರ್ಣಾಂಗಗಳಿಂದಾಗಿ ಅಜೀರ್ಣ ಸಂಬಂಧಿತ ಕಾಯಿಲೆಗಳು ಬರುತ್ತವೆ ಎನ್ನುತ್ತಾರೆ ಅವರು. ಹುಣ್ಣಿಮೆಯ ದಿನ ಚಂದ್ರನ ಆಕರ್ಷಣೆಗೆ ಸಾಗರದಲ್ಲಿ ಅಲ್ಲಕಲ್ಲೋಲಗಳುಂಟಾಗಿ, ಉಬ್ಬರದ ಅಲೆಗಳು ಮೂಡುವುದನ್ನು ನೀವು ಒಪ್ಪುವುದಾದರೆ, ಜೀರ್ಣಾಂಗಗಳ ಮೇಲೂ ಚಂದ್ರ ಪ್ರಭಾವ ಇರುತ್ತದೆ ಎಂಬುದನ್ನು ಒಪ್ಪಲೇ ಬೇಕು ಎನ್ನುತ್ತಾರೆ ಅವರು. ಏಕಾದಶಿಯ ದಿನ ಉಪವಾಸ ಮಾಡುವುದರಿಂದ, ನಿದ್ರೆ ಕಡಿಮೆ ಆಗುತ್ತದೆ. (ಹಸಿದಾಗ ನಿದ್ದೆ ಬಾರದು ಎಂಬುದು ಸಾಬೀತಾಗಿರುವ ಸಿದ್ಧಾಂತ) ಜಾಗರಣೆ, ಉಪವಾಸ ಈ ಎರಡರಿಂದ ದೇಹದಲ್ಲಿ ಉಷ್ಣತೆ ಹೆಚ್ಚುತ್ತದೆ. ಈ ಅತಿ ಉಷ್ಣದಿಂದ ದೇಹದಲ್ಲಿರುವ ರೋಗಾಣುಗಳು (ವೈರಸ್‌ – ಬ್ಯಾಕ್ಟೀರಿಯಾ) ಸಾವನ್ನಪ್ಪಿ. ಆರೋಗ್ಯ ವರ್ಧಿಸುತ್ತದೆ ಎಂಬುದು ಅವರ ವಿಶ್ಲೇಷಣೆ.

ಉಪವಾಸದ ಅರ್ಥ:

‘ಉಪ’ಎಂದರೆ ಹತ್ತಿರ, ‘ವಾಸ’ ಎಂದರೆ ಇರುವುದು. ಅಂದರೆ ಭಗವಂತನ ಸಮೀಪ ವಾಸಿಸುವುದೇ ಉಪವಾಸದ ಅರ್ಥ. ಆ ದಿನ ಯಾರು ಧ್ಯಾನ, ಭಜನೆ, ವಿಷ್ಣು ಸಹಸ್ರನಾಮ, ಪೂಜೆ ಮಾಡಿ ಜಾಗರಣೆಯನ್ನು ಮಾಡುತ್ತಾರೋ ಅವರಿಗೆ ಭಗವಂತ ಎಲ್ಲ ಸೌಭಾಗ್ಯಗಳನ್ನು ಕೊಟ್ಟು ಅಂತ್ಯದಲ್ಲಿ ಮೋಕ್ಷವನ್ನು ಕರುಣಿಸುವನು. ಉಪವಾಸ ವ್ರತ ಮಾಡುವುದರಿಂದ ಶಾಂತಿ, ತಾಳ್ಮೆ ದೊರೆಯುವುದಲ್ಲದೆ, ರಕ್ತದೊತ್ತಡ, ರಕ್ತಹೀನತೆ ಸೇರಿದಂತೆ ಅನೇಕ ರೋಗಗಳು ನಿವಾರಣೆ ಆಗುವುವು.

ಮೂಗುತಿ ಧರಿಸುವುದರಿಂದಾಗುವ ಲಾಭಗಳು

ಹಿಂದೂ ಧರ್ಮದಲ್ಲಿ ಪ್ರತಿಯೊಂದು ಆಚಾರದಲ್ಲಿ ಕೂಡ ಮಹತ್ವ ಇದೆ. ಅದೇ ರೀತಿ ಸ್ತ್ರೀಯರಿಗೆ ಮಾತ್ರ ಮೂಗುತಿ ಹಾಕಲು ಹೇಳಿರುವುದರ ಹಿಂದೆಯೂ ಕೂಡ ಶಾಸ್ತ್ರವಿದೆ. ಹಿರಿಯರು ಅನುಸರಿಸಿಕೊಂಡು ಬಂದಿರುವ ಪ್ರತಿ ಆಚಾರದಲ್ಲೂ ಅದಕ್ಕೆ ಆದ ಒಂದು ಮಹತ್ವ ಅಥವಾ ಅರ್ಥ ಇದೆ.

ಹಿಂದೂ ಧರ್ಮವು ಪ್ರತಿಯೊಂದು ವಿಷಯದಿಂದ ಅಂದರೆ ಆಚಾರಧರ್ಮದಿಂದ ಮಾನವನಿಗೆ ಆಧ್ಯಾತ್ಮಿಕ, ಶಾರೀರಿಕ ಮತ್ತು ಮಾನಸಿಕವಾಗಿ ಯೋಗ್ಯವಾದ ಕೃತಿಯನ್ನೇ ಮಾಡಲು ಕಲಿಸುತ್ತದೆ. ಮನುಷ್ಯನಿಗೆ ಅದರ ಶಾಸ್ತ್ರ ತಿಳಿಯದಿದ್ದರೂ, ಶ್ರದ್ಧೆಯಿಂದ ಅದೇ ರೀತಿ ಪಾಲನೆ ಮಾಡಿದರೆ ಅವನ ಐಹಿಕ ಮತ್ತು ಪಾರಮಾರ್ಥಿಕ ಜೀವನವು ಆನಂದದಲ್ಲಿರುವುದು. ಇದಕ್ಕೆ ಸಂದೇಹವೇ ಇಲ್ಲ.

೧. ಮೂಗುತಿಯನ್ನು ಧರಿಸುವುದರಿಂದ ಮೂಗಿನ ಬಿಂದುವಿನ ಮೇಲೆ ಒತ್ತಡವು ನಿರ್ಮಾಣವಾಗಿ ‘ಬಿಂದುಒತ್ತಡದ (ಆಕ್ಯುಪ್ರೆಶರ್)’ ಉಪಚಾರವಾಗುವುದರಿಂದ ಅಲ್ಲಿನ ಕಪ್ಪು ಶಕ್ತಿಯು ಕಡಿಮೆಯಾಗುತ್ತದೆ.

೨. ಕೆಟ್ಟ ಶಕ್ತಿಗಳಿಂದ ಉಸಿರಾಟದ ಮಾರ್ಗದಿಂದ ಹಲ್ಲೆಯಾಗದಂತೆ ಮೂಗುತಿಯು ಮೂಗು ಮತ್ತು ಶ್ವಾಸಮಾರ್ಗವನ್ನು ರಕ್ಷಿಸುತ್ತದೆ.

೩. ಮೂಗುತಿಯಲ್ಲಿರುವ ಸಾತ್ತ್ವಿಕತೆ ಮತ್ತು ಚೈತನ್ಯದಿಂದ ಮೂಗಿನ ಸುತ್ತಲೂ ಚೈತನ್ಯದ ವಲಯವು ನಿರ್ಮಾಣವಾಗುತ್ತದೆ ಮತ್ತು ಮೂಗಿನ ಸುತ್ತಲಿನ ವಾಯುಮಂಡಲವು ಶುದ್ಧವಾಗುತ್ತದೆ. ಇದರಿಂದ ಶ್ವಾಸಮಾರ್ಗದಿಂದ ಶುದ್ಧಗಾಳಿಯು ದೇಹವನ್ನು ಪ್ರವೇಶಿಸಬಲ್ಲದು.

ಸ್ತ್ರೀಯರಿಗೆ ಮಾತ್ರ ಮೂಗುತಿ ಹಾಕಲು ಹೇಳಿರುವುದರ ಹಿಂದೆಯೂ ಶಾಸ್ತ್ರವಿದೆ. ಸ್ತ್ರೀಯರ ಮನಸ್ಸು ಚಂಚಲವಾಗಿರುತ್ತದೆ. ಮೂಗುತಿಯನ್ನು ಧರಿಸುವುದರಿಂದ ಸ್ತ್ರೀಯರ ಚಂದ್ರನಾಡಿ ಕಾರ್ಯನಿರತವಾಗಿ ಮನಸ್ಸು ಸ್ಥಿರವಾಗುತ್ತದೆ. ಸ್ತ್ರೀಯರು ಯಾವುದೇ ಕಾರ್ಯವನ್ನು ಮಾಡುವಾಗ ಯೋಗ್ಯ ನಿರ್ಣಯ ತೆಗೆದುಕೊಳ್ಳಲು ಅನುಕೂಲವಾಗುತ್ತದೆ. ಇದರಿಂದಲೇ ಹಿಂದೂ ಧರ್ಮದ ಮಹಾನತೆಯು ಗಮನಕ್ಕೆ ಬರುತ್ತದೆ.