0Shares

ಉಡುಪಿಯಲ್ಲಿ ಕೃಷ್ಣನ ಪ್ರತಿಷ್ಠಾಪನೆ: ಒಂದು ಸುದೀರ್ಘ ವೃತ್ತಾಂತ

Page Contents

ಆಚಾರ್ಯ ಮಧ್ವರ ಪರ್ಯಟನೆ ಮತ್ತು ಮಠಗಳ ಅಗತ್ಯತೆ

ಆಚಾರ್ಯ ಮಧ್ವರು ಒಮ್ಮೆ ಬದರಿಗೆ ಹೋಗಿ ಬಂದ ನಂತರ, ದಕ್ಷಿಣ ಭಾರತದಾದ್ಯಂತ ಸಂಚರಿಸಿದರು. ಈ ಪರ್ಯಟನೆಯ ಸಮಯದಲ್ಲಿ, ಜನರಿಗೆ ಒಂದು ನೆಲೆ, ಪ್ರಾರ್ಥನೆಗೆ ಒಂದು ನಿರ್ದಿಷ್ಟ ಸ್ಥಳ ಮತ್ತು ಒಂದು ಆಧ್ಯಾತ್ಮಿಕ ಕೇಂದ್ರದ ಅಗತ್ಯವಿದೆ ಎಂದು ಅವರಿಗೆ ಮನವರಿಕೆಯಾಯಿತು.

ದ್ವಾರಕೆಯಿಂದ ಉಡುಪಿಗೆ ಕೃಷ್ಣನ ಆಗಮನ ಮತ್ತು ರುಕ್ಮಿಣಿಯ ಆಸೆ

ಅದರ ಜೊತೆಗೆ, ಆಚಾರ್ಯ ಮಧ್ವರ ಮನಸ್ಸಿನಲ್ಲಿ ದ್ವಾರಕೆಯಿಂದ ಕೃಷ್ಣನೇ “ನಾನು ಅಲ್ಲಿಂದ ಇಲ್ಲಿಗೆ ಬರಬೇಕು” ಎಂದು ಕೂಗಿ ಹೇಳಿದಂತೆ ಭಾಸವಾಯಿತು. ಮೂಲತಃ ಭಾಗವತದಲ್ಲಿ ಬರುವ ಒಂದು ಕಥೆಯು ಈ ಘಟನೆಗೆ ಪೂರಕವಾಗಿದೆ.

ದೇವಕಿಯು ಕೃಷ್ಣನನ್ನು ಬಾಲ್ಯದಲ್ಲಿ ಕಂಡಿರಲಿಲ್ಲ, ಏಕೆಂದರೆ ಅವನ ಪೂರ್ವ ಬಾಲ್ಯ ಕಳೆದದ್ದು ಯಶೋದೆ ಬಳಿ. ತುಂಬು ವಯಸ್ಸಾದಾಗ ಒಮ್ಮೆ ಅವಳಿಗೆ “ಕೃಷ್ಣನನ್ನು ಬಾಲ್ಯದ ರೂಪದಲ್ಲಿ ನೋಡಿಲ್ಲ, ನಾನು ನೋಡಬೇಕು” ಎಂಬ ಆಸೆ ಮೂಡಿತು. “ಪುಟ್ಟ ರೂಪವನ್ನು ತೋರಿಸು” ಎಂದು ಕೇಳಿದಾಗ, ಕೃಷ್ಣ ಒಪ್ಪಿಕೊಂಡು ತಾನು ಇರುವಲ್ಲಿಯೇ ಪುಟ್ಟ ರೂಪದಲ್ಲಿ ಓಡಾಡಲು ಪ್ರಾರಂಭಿಸಿದ. ಈ ಮರೆಯಲ್ಲಿ, ಪಕ್ಕದ ಕೋಣೆಯಲ್ಲಿದ್ದ ರುಕ್ಮಿಣಿ ಇದನ್ನು ನೋಡಿಬಿಟ್ಟಳು. ಕೃಷ್ಣ ಪುಟ್ಟ ರೂಪದಿಂದ ಓಡಾಡುತ್ತಿರುವುದನ್ನು ನೋಡಿದಾಗ ಅವಳಿಗೆ ತುಂಬ ಸಂತೋಷವಾಯಿತು. ಹೆಣ್ಣುಮಕ್ಕಳಿಗೆ ಮಕ್ಕಳನ್ನು ನೋಡುವುದು ಸಹಜವಾದ ಇಷ್ಟ. ಅದರಲ್ಲೂ ಕೃಷ್ಣನ ಪುಟ್ಟ ರೂಪವನ್ನು ನೋಡಿದಾಗ, ಅವಳು ಮೈಮರೆತು ಹೋದಳು. ಕೃಷ್ಣನ ಬಳಿ ಹೋಗಿ, “ನಾನು ಪುಟ್ಟ ರೂಪವನ್ನು ನೋಡಿದೆ. ನನಗೆ ಅದರ ಪ್ರತಿರೂಪ ಬೇಕು. ನನಗೆ ಉಪಾಸನೆಗೆ ಒಂದು ಮೂರ್ತಿ ಬೇಕು” ಎಂದು ಕೇಳಿದಳು.

ರುಕ್ಮಿಣಿಗಾಗಿ ಕೃಷ್ಣನ ಬಾಲರೂಪದ ಪ್ರತಿಮೆ

ಕೃಷ್ಣ ಒಂದು ಕೈಯಲ್ಲಿ ಕಡಗೋಲು, ಇನ್ನೊಂದು ಕೈಯಲ್ಲಿ ಹಗ್ಗ ಹಿಡಿದು, ಕೌಪೀನ ಹಾಕಿಕೊಂಡು ಓಡಾಡುತ್ತಿದ್ದನು. ಅಂತಹ ಪ್ರತಿಮೆ ಬೇಕೆಂದು ರುಕ್ಮಿಣಿ ಕೇಳಿದಾಗ, ಕೃಷ್ಣ ವಿಶ್ವಕರ್ಮನನ್ನು ಸ್ಮರಣೆ ಮಾಡಿ ಕರೆಸಿಕೊಂಡನು. “ನನ್ನ ಈ ಬಾಲರೂಪವನ್ನು ನೀನು ಧ್ಯಾನಿಸಿ, ಅದರ ಪ್ರತಿಕೃತಿಯನ್ನು ಮಾಡಿಕೊಡು” ಎಂದು ಕೃಷ್ಣ ಹೇಳಿದನು. ಅದಕ್ಕೆ ವಿಶ್ವಕರ್ಮ ಒಪ್ಪಿ, ತಾನು ಅನುಸಂಧಾನ ಮಾಡಿ ರಚಿಸಿದ ಕೃಷ್ಣನ ಪ್ರತಿಮೆಯನ್ನು ರುಕ್ಮಿಣಿಯ ಕೈಗೆ ಕೊಟ್ಟನು.

ರುಕ್ಮಿಣಿಯಿಂದ ಪೂಜಿತ ಕೃಷ್ಣ ಮತ್ತು ‘ಶಿಖಾಬಂಧ ತ್ರಯೋಪೇತಮ್’ ವಿವಾದ

ರುಕ್ಮಿಣಿ ಆ ಕೃಷ್ಣ ಪ್ರತಿಮೆಯನ್ನು ತನ್ನ ನಿವಾಸದ ಅಂತಃಪುರದಲ್ಲಿ ನಿತ್ಯವೂ ಉಪಾಸನೆ ಮಾಡುತ್ತಿದ್ದಳು. ಹಾಗಾಗಿಯೇ ಕೃಷ್ಣನನ್ನು ಸ್ತೋತ್ರ ಮಾಡುವಾಗ ‘ಭೈಶ್ಮಿ ಮಧ್ವಕರಾರ್ಚಿತಮ್’ ಎಂಬ ಮಾತು ಬರುತ್ತದೆ. ಇಲ್ಲಿ ‘ಭೈಶ್ಮಿ’ ಎಂದರೆ ರುಕ್ಮಿಣಿ. ಅಂದರೆ, ಇದು ರುಕ್ಮಿಣಿಯಿಂದ ಪೂಜೆಗೊಂಡಂತಹ ಆಕೃತಿಯಾಗಿದೆ.

“ಶಿಖಾಬಂಧ ತ್ರಯೋಪೇತಮ್ ಭೈಶ್ಮಿ ಮಧ್ವಕರಾರ್ಚಿತಮ್” ಎಂಬ ಮಾತು ಕೂಡಾ ಉಲ್ಲೇಖಿಸಲ್ಪಟ್ಟಿದೆ. “ಶಿಖಾಬಂಧ ತ್ರಯೋಪೇತಮ್” ಎಂದು ಏಕೆ ಬಂತು ಎಂಬುದನ್ನು ನಾವು ಇದರ ಜೊತೆಗೆ ಯೋಚಿಸೋಣ. ಏಕೆಂದರೆ, ಬಹಳಷ್ಟು ಜನರು ಉಡುಪಿಯಲ್ಲಿರುವ ಕೃಷ್ಣನು ಕೃಷ್ಣನೇ ಅಲ್ಲ, ಅವನು ಸ್ಕಂದ ಅಥವಾ ಇನ್ನಾವುದೋ ರೂಪ ಎಂದು ತಮ್ಮದೇ ಆದ ತಾಂತ್ರಿಕ ಲಕ್ಷಣಗಳನ್ನು ಇಟ್ಟುಕೊಂಡು ಹೇಳುತ್ತಾರೆ. ಅವರು ಹೇಳುವಾಗ ಅದಕ್ಕೆಲ್ಲಾ ಆಧಾರಗಳನ್ನು ಕೊಟ್ಟು ಹೇಳುತ್ತಾರೆ.

ಅವರ ಮೊದಲ ವಾದ ಏನೆಂದರೆ, ಆಚಾರ್ಯರು ಕೃಷ್ಣನ ಪ್ರತಿಷ್ಠೆ ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದು. ಎರಡನೆಯದಾಗಿ, ಅಲ್ಲಿರುವ ಕೃಷ್ಣನ ಪ್ರತಿಮೆಯು ಕೃಷ್ಣನದ್ದಲ್ಲ ಎನ್ನುವುದು. ಏಕೆಂದರೆ, ತಂತ್ರದ ಲಕ್ಷಣಗಳ ಪ್ರಕಾರ, ಕೈಯಲ್ಲಿ ಒಂದು ಕಡಗೋಲು ಮತ್ತು ಒಂದು ಹಗ್ಗ ಇರುವುದು ಸ್ಕಂದನ ಪ್ರತಿಮೆಗೆ ಸಂಬಂಧಿಸಿದ್ದು ಎಂದು ಹೇಳುತ್ತಾರೆ. ಅದಕ್ಕೆ ಒಂದು ನಿರ್ದಿಷ್ಟ ಲಕ್ಷಣವೂ ಇದೆ ಎನ್ನುತ್ತಾರೆ.

ಆದರೆ ಕೃಷ್ಣನಿಗೆ ಮೂರು ಜುಟ್ಟು ಇದೆ. ಈಗಲೂ ಅಲ್ಲಿ ನೀವು ನೋಡಿದರೆ ಅಭಿಷೇಕ ಮಾಡುವಾಗ ಮೇಲುಗಡೆ ವಿಶ್ವರೂಪದ ದರ್ಶನ ಮಾಡುವಾಗ ಕಾಣುತ್ತದೆ. ಎಡ, ಬಲ ಮತ್ತು ಮಧ್ಯದಲ್ಲೊಂದು ಜುಟ್ಟಿದೆ. ಇದು ಕೃಷ್ಣನ ವಿಶೇಷ ಪ್ರತಿಮೆ. ಅವನನ್ನು ಭಾಗವತದಲ್ಲಿ ವರ್ಣನೆ ಮಾಡುವಾಗ ಶಿಖಂಡ ಅಂದರೆ ನವಿಲುಗರಿ, ಶಿಖಂಡಿ ಎಂಬ ಹೆಸರು, ನಾವು ಇವತ್ತು ಆ ಶಬ್ದವನ್ನು ಎಲ್ಲೆಲ್ಲಿ ಉಪಯೋಗಿಸುತ್ತೇವೆ. ಆದರೆ ಶಿಖಂಡಿ ಎನ್ನುವ ಶಬ್ದ ಅದು ವಿಷ್ಣುಸಹಸ್ರನಾಮದಲ್ಲಿ ಒಂದು ಹೆಸರು ಭಗವಂತನಿಗೆ. ಶಿಖಂಡಿ ಎಂದರೆ ಅಲಂಕಾರಕ್ಕಾಗಿ ನವಿಲುಗರಿಯನ್ನು ಸಿಕ್ಕಿಸಿಕೊಂಡವ ಎಂದು ಇದರ ಅರ್ಥ. ಅವನಿಗೆ ಆ ಜುಟ್ಟಿಗಾಗಿ ಮೂರು ಕಡೆ ನವಿಲುಗರಿ ಇಟ್ಟು ಅವನನ್ನು ತಾಯಿ ಅಲಂಕಾರ ಮಾಡುತ್ತಿದ್ದಳು. ಅದೇ ರೂಪದಲ್ಲಿ ಅಲ್ಲಿ ಕೃಷ್ಣ ತನ್ನನ್ನು ತೋರಿಸಿದ್ದಾನೆ. ರುಕ್ಮಿಣಿ ಅದನ್ನು ಕೇಳಿದ್ದಾಳೆ, ವಿಶ್ವಕರ್ಮನು ಅದೇ ಪ್ರತಿಮೆಯನ್ನು ಮಾಡಿಕೊಟ್ಟಿದ್ದಾನೆ. ಅದು ಪೂಜೆಗೊಂಡಿದೆ.

ದ್ವಾರಕೆ ಮುಳುಗಿದಾಗ ಮತ್ತು ಗೋಪಿಚಂದನದ ಮಹತ್ವ

ಪೂಜೆಗೊಂಡು ಮುಗಿಯುವಾಗ, ಅಂದರೆ ಕೃಷ್ಣ ಅವತಾರ ಸಮಾಪ್ತಿಯ ಹೊತ್ತಿಗೆ ಏಳು ದಿವಸಗಳಲ್ಲಿ ತಾನು ಪ್ರಭಾಸ ಕ್ಷೇತ್ರದಲ್ಲಿ ಅವತಾರವನ್ನು ಮುಗಿಸಿದನು. ಏಳನೇ ದಿನಕ್ಕೆ ದ್ವಾರಕೆ ಮುಳುಗಿಹೋಯಿತು. (ಕೃಷ್ಣ ಹುಟ್ಟಿ 106ವರೆ ವರ್ಷಕ್ಕೆ ತನ್ನ ಅವತಾರವನ್ನು ಸಮಾಪ್ತಿ ಮಾಡುತ್ತಾನೆ. 106ವರೆ ವರ್ಷ ಬಂದ ದಿವಸ ಅವನು ಪ್ರಭಾಸ ಕ್ಷೇತ್ರದಲ್ಲಿ ಇದ್ದ.)

ಅಷ್ಟು ಜನ ಯಾದವರನ್ನು ಕರೆದುಕೊಂಡು ಬಂದಿದ್ದ, ಕೆಲವು ಹೆಣ್ಣು ಮಕ್ಕಳು ಅಲ್ಲೇ ಉಳಿದುಕೊಂಡಿದ್ದರು. ಅವರನ್ನು ಅರ್ಜುನನಿಗೆ ಹೇಳಿ, “ನೀನು ವಾಪಸ್ಸು ಹಸ್ತಿನಾವತಿಗೆ ಕರೆದುಕೊಂಡು ಹೋಗು. ನಾನು ಅವತಾರ ಸಮಾಪ್ತಿ ಮಾಡಿದ ಏಳನೇ ದಿನಕ್ಕೆ ಇಡೀ ದ್ವಾರಕ ಮುಳುಗಿ ಹೋಗುತ್ತೆ” ಎಂದು ಹೇಳಿದ ಸಂದರ್ಭದಲ್ಲಿ ದ್ವಾರಕೆ ಮುಳುಗಿತು.

ದ್ವಾರಕೆ ಮುಳುಗುವ ಹೊತ್ತಿಗೆ ಏನಾಯಿತು? ಅಲ್ಲಿ ಕೃಷ್ಣನ ಓಡಾಡಿದ ಜಾಗದ ಗೋಪಿ ತಲ್ಲು ಎನ್ನುವ ಜಾಗವಿದೆ. ಆ ಜಾಗದಲ್ಲಿ ಗೋಪಿಚಂದನದ ಗೆಡ್ಡೆಗಳನ್ನು ಎಲ್ಲಾ ವ್ಯಾಪಾರಿಗಳು ಎಲ್ಲಾ ಕಡೆಗೆ ತೆಗೆದುಕೊಂಡು ಬರುತ್ತಿದ್ದರು. ನಮ್ಮ ಇವತ್ತಿನ ಇತಿಹಾಸದಲ್ಲಿ ಭಾರತಕ್ಕೆ ದಾರಿಯನ್ನು ಕಂಡು ಹಿಡಿದರು ಎಂದು ಹೇಳುವ ವಾಸ್ಕೋಡಿ ಗಾಮನಿಗೆ ದಾರಿ ತೋರಿಸಿದವನೇ ಇದೇ ಗುಜರಾತಿ. ನಾವು ಆ ಕಥೆಯನ್ನು ಮರೆತಿರುತ್ತೇವೆ. ಅವನ ಹಡಗಿಗಿಂತ ಹತ್ತು ಪಟ್ಟು ಹೆಚ್ಚು ದೊಡ್ಡ ದೊಡ್ಡ ಹಡಗಿನಲ್ಲಿ ಅವನನ್ನು ಕರೆದುಕೊಂಡು ಬರುತ್ತಿದ್ದರು. ಅವನು ಕೇಪ್ ಟೌನ್‌ನ “ಕೇಪ್ ಆಫ್ ಗುಡ್ ಹೋಪ್” ನಲ್ಲಿ ಅವನ ನೌಕೆ ನೀರಿನಲ್ಲಿ ಬಿದ್ದು ಪುಡಿಯಾಗಿ ಹೋಗಿರುತ್ತೆ. ಅಲ್ಲಿಂದ ಕರೆದುಕೊಂಡು ಬಂದವನು ಅವನು ಆದರೆ ಇತಿಹಾಸವನ್ನು ನಮ್ಮವರು ಹೇಳುವುದಿಲ್ಲ.

ಆ ರೀತಿ ದ್ವಾರಕೆಯಿಂದ ಎಲ್ಲಾ ಕಡೆಗೆ ಬೇರೆ ಬೇರೆ ಕಡೆಗೆ ವ್ಯಾಪಾರಕ್ಕೆ ಗುಜರಾತಿಗಳು ಓಡಾಡುತ್ತಿದ್ದರು. ಅದರಲ್ಲಿ ಒಂದು ಭಾಗದ ದೋಣಿ ಅಥವಾ ದೊಡ್ಡ ನೌಕೆ ದಕ್ಷಿಣದ ಕಡೆಗೆ, ಕನ್ಯಾಕುಮಾರಿಯ ಕಡೆಗೆ ಬರುವ ಹೊತ್ತಿಗೆ, ಉಡುಪಿಯ ಪರಿಸರದಲ್ಲಿ ಕರಾವಳಿಯ ತೀರದಲ್ಲಿ ಮೂರು ಪಾಂಡೇಶ್ವರಗಳಿವೆ. ಒಂದು ಮಂಗಳೂರಿನ ಪಣಂಬೂರಿನ ಹತ್ತಿರ ಇದೆ, ಇನ್ನೊಂದು ಮಲ್ಪೆಯ ಹತ್ತಿರವಿದೆ, ಇನ್ನೊಂದು ಕುಂದಾಪುರದಲ್ಲಿದೆ. ಪಾಂಡೇಶ್ವರ ಅಂದರೆ ಹಡಗು, ಆ ಜಾಗದಲ್ಲಿ ಆ ಹಡಗುಗಳನ್ನು ರಕ್ಷಣೆ ಮಾಡಲಿಕ್ಕೆ, ಬಂದರಿನ ರಕ್ಷಣೆಗೋಸ್ಕರ ಒಂದು ರುದ್ರ ದೇವರ ಗುಡಿ ಇದೆ. ಅಲ್ಲಿ ಅವರೆಲ್ಲರೂ ಬಂದು ಕಾಣಿಕೆ ಹಾಕಿ, ತಾವು ಬಂದು ಹೋಗಿದ್ದೇವೆ ಎಂದು ಸಾಕ್ಷಿ ಹೇಳಿ ಹೋಗುವ ಕ್ರಮವಿದೆ. ಇವತ್ತಿಗೂ ನೀವು ಅಲ್ಲಿ ನೋಡಿದರೆ ಕಾಣುತ್ತದೆ. ಮೀನುಗಾರರಿಗೆ ಅದೊಂದು ರಕ್ಷಣೆಯ ತಾಣ. ಅವರು ಅಲ್ಲಿ ಹೋಗಿ ಪ್ರಾರ್ಥನೆ ಮಾಡಿ ಹೊರಡುತ್ತಾರೆ. ಅಂತಹ ಮೂರು ಜಾಗಗಳಲ್ಲಿ, ಮಧ್ಯದಲ್ಲಿರುವ ಉಡುಪಿಯ ಪಾಂಡೇಶ್ವರದಲ್ಲಿ ಆ ಹಡಗು ಬಿರುಗಾಳಿಗೆ ಸಿಕ್ಕು ಒಡೆದು ಹೋಗಿ ಮುಳುಗಿತು. ಈ ಹಡಗಿನಲ್ಲಿ ಗೋಪಿಚಂದನ ಗಡ್ಡೆಯೊಳಗೆ ಕೃಷ್ಣನ ಪ್ರತಿಮೆ ಕೂಡ ಇತ್ತು. ಗಡ್ಡೆಯೊಳಗೆ ಇತ್ತು ಅನ್ನೋದು ಸರಿ. ಆದರೆ ಒಂದು ಯೋಚನೆ ಮಾಡಬೇಕು, ಎಷ್ಟೋ ದಿನಗಳ ನಂತರ ಉಪ್ಪು ನೀರಿನಲ್ಲಿ ಅದು ಎಲ್ಲೋ ಇರಬಹುದು. ಅಂದರೆ, ದ್ವಾರಕೆಯಲ್ಲಿ ಕೃಷ್ಣನ ಸ್ಪರ್ಶದಿಂದ ಗೋಪಿಚಂದನವು ಗಟ್ಟಿಯಾಗಿತ್ತು, ಅಥವಾ ಗಟ್ಟಿಯಾಗಿಯೇ ಇತ್ತು. ಗಡ್ಡೆ ಇರಲಿಲ್ಲ ಎನ್ನುವುದಿಲ್ಲ. ಆದರೆ, ಎರಡು ಗಡ್ಡೆಗಳನ್ನು ತಂದರು, ಒಂದು ಬಿತ್ತು, ಇಲ್ಲಿ ಒಡೆದು ಹೋಯಿತು, ಅಲ್ಲಿ ಬಿತ್ತು, ಅಲ್ಲಿ ಒಡೆದುಹೋಯಿತು ಎಂಬಂತಹ ಕಥೆಗಳೆಲ್ಲಾ ಇಲ್ಲ.

ಇದನ್ನು ರಘುವರ್ಯ ತೀರ್ಥರು ತಮ್ಮ ಕೃತಿಯಲ್ಲಿ ಆಚಾರ್ಯರು ಬಂದ ಇಡೀ ಘಟನೆಯನ್ನು ಅಲ್ಲಿ ಉಲ್ಲೇಖ ಮಾಡಿದ್ದಾರೆ. ಉಲ್ಲೇಖ ಮಾಡುವಾಗ, ಅದು ಹಡಗು ಒಡೆದು ಹೋದದ್ದರಿಂದ ವಡ + ಪಾಂಡ + ಈಶ್ವರಃ ಪಾಂಡವಗೆ ಬಾಂಡ ಆಯ್ತು ಅಂದರೆ ವಡಪಾಂಡೇಶ್ವರ ಅಂತ ಆಯಿತು. ಆ ಜಾಗದಲ್ಲಿ ಒಡೆದು ಹೋದ ಜಾಗಕ್ಕೆ ವಡಪಾಂಡೇಶ್ವರ ಅಂತ ಹೆಸರು ಬಂತು. ಇದು ಆಚಾರ್ಯರ ಕಾಲಕ್ಕಿಂತ ಎಷ್ಟೋ ಹಿಂದೆ ನಡೆದು ಹೋದ ಘಟನೆ, ದ್ವಾಪರದಲ್ಲಿ ನಡೆದ ಘಟನೆ.

ಆಚಾರ್ಯರು ಕೃಷ್ಣನ ಪ್ರತಿಮೆಯನ್ನು ತಂದದ್ದು

ಆಚಾರ್ಯರು ಬಂದ ಸಮಯಕ್ಕೆ ಅವರಿಗೆ ಒಂದು ಕರೆ ಬಂತು. “ದ್ವಾರಕೆಯಿಂದ ಬರುತ್ತಾ ಇದ್ದೇನೆ, ನನ್ನನ್ನು ಕರೆಸಿಕೋ. ಅಂದರೆ ನಾನು ಬಂದಿದ್ದೇನೆ, ಪ್ರತಿಷ್ಠೆಗಾಗಿ ನನ್ನನ್ನು ಕರಿ” ಎಂದು ಸೂಚಿಸಿದಂತೆ ಭಾಸವಾಯಿತು. ಆಗ ಆಚಾರ್ಯರು ಶಿಷ್ಯರನ್ನು ಕರೆದುಕೊಂಡು “ನೀವು ಇಲ್ಲೇ ಇರಿ” ಎಂದು ಹೇಳಿ, ನೇರವಾಗಿ ಸಂಕ್ರಾಂತಿಯ ದಿನ, ಮಕರ ಸಂಕ್ರಾಂತಿಯ ದಿನದಂದು ಸಮುದ್ರಕ್ಕೆ ಹೋಗಿದ್ದಾರೆ. ಏಕೆಂದರೆ ಹುಣ್ಣಿಮೆ, ಅಮಾವಾಸ್ಯೆ, ಸಂಕ್ರಾಂತಿ, ಗ್ರಹಣ ಮೊದಲಾದ ಪರ್ವ ದಿನಗಳನ್ನು ಹೊರತುಪಡಿಸಿ ಬೇರೆ ದಿನಗಳಲ್ಲಿ ಸಮುದ್ರಕ್ಕೆ ಇಳಿಯುವ ಕ್ರಮ ಆ ಊರಿನವರಿಗಿರಲಿಲ್ಲ. ಇದು ಅಲ್ಲಿನ ನಿಯಮ.

ಈಗ ನೀವು ಒಂದು ವೇಳೆ ಅಕಸ್ಮಾತ್ತಾಗಿ, ಎರಡೇ ದಿನದಲ್ಲಿ ಯಾವುದೋ ತೀರ್ಥಕ್ಷೇತ್ರಕ್ಕೆ, ದ್ವಾರಕೆಗೆ ಹೋದರೆ, ಅಲ್ಲಿ ನಿಮಗೆ ಸಮುದ್ರ ಸ್ನಾನವು ತುಂಬಾ ವಿಶಿಷ್ಟ ಮತ್ತು ವಿಶೇಷವಾಗಿರುತ್ತದೆ. ಆಗ ನೀವು ಸ್ನಾನ ಮಾಡಬಹುದು. ತೀರ್ಥಯಾತ್ರೆಗೆ ಬಂದವರಾಗಿ, ಬೇರೆ ದಿನಗಳು ಸಿಗದೆ, ಈ ಪರ್ವಕಾಲವು ಸಂಕಲ್ಪಬದ್ಧವಾಗಿ ಲಭ್ಯವಾಗದಿದ್ದರೆ ನೀವು ಸ್ನಾನ ಮಾಡಬಹುದು. ಆದರೆ ಊರೊಳಗೆ ಸುಮ್ಮನೆ ಸಮುದ್ರಕ್ಕೆ ಇಳಿಯಬಾರದು. ಇದಲ್ಲದೆ, ಈ ನಿಯಮ ಕೇವಲ ಅನುಷ್ಠಾನಶೀಲರಿಗೆ ಮಾತ್ರ. ನೀವು ಮೀನುಗಾರರಿಗೆ ಹೀಗೆ ಹೇಳಿದರೆ ಹೇಗೆ? ಅವರಿಗೆ ಈ ನಿಯಮಗಳಿಲ್ಲ, ಅದು ಅವರ ವೃತ್ತಿಧರ್ಮ, ಅವರ ಜೀವನೋಪಾಯ.

ಹಾಗೆಯೇ ಆಚಾರ್ಯರು ಸಂಕ್ರಾಂತಿಯ ಕಾಲದಲ್ಲಿ ಅಲ್ಲಿ ಹೋಗಿ ಮುಳುಗಿ ಅದನ್ನು ಹೊತ್ತು ತಂದರು. ಹೊತ್ತು ತಂದ ದಿನ, ಹಿಂದಿನ ದಿನ ಅಲ್ಲಿ ತಂದು ಸಮುದ್ರದಿಂದ ಭಜನೆ ಮಾಡುತ್ತಾ ಬಂದಿದ್ದಾರೆ. ಮಧ್ವ ಸರೋವರದಲ್ಲಿ ಮುಳುಗಿಸಿದಾಗ, ಆಗ ಅದು ‘ವಸುಧಾ ಮಧ್ವ ಸರೋವರ’ ಎಂಬ ಹೆಸರಿನಿಂದ ಇರಲಿಲ್ಲ. ಅದಕ್ಕೆ ‘ಅನಂತ ಸರೋವರ’ ಎಂದು ಹೆಸರಿತ್ತು. ಏಕೆಂದರೆ ಅದು ಅನಂತಾಸನಕ್ಕೆ ಸಂಬಂಧಪಟ್ಟ ಸರೋವರ. ಅದರ ಇತಿಹಾಸ ನೋಡಿದರೆ ಅದು ಇನ್ನೂ ದೊಡ್ಡದಿತ್ತು ಎಂದು ಹೇಳುತ್ತಾರೆ, ತುಂಬಾ ವಿಸ್ತಾರವಾಗಿತ್ತು. ಈಗ ನಾವು ನೋಡುವ ಚಂದ್ರಮೌಳೀಶ್ವರ ಇದೆಯಲ್ಲ, ಅದು ಕೂಡ ಸರೋವರದ್ದೇ ಒಂದು ಭಾಗವಂತೆ. ಆ ಚಂದ್ರಮೌಳೀಶ್ವರ ಸೇರಿ ಅಷ್ಟು ಭಾಗ ಒಂದು ಸರೋವರವಿತ್ತು. ಕೊನೆಗೆ ಅದು ಚಂದ್ರಮೌಳೀಶ್ವರ ಆಗಬೇಕಾದ ಏನೋ ಒಂದು ಪ್ರಸಂಗ ಬಂದು, ಅಲ್ಲಿ ಚಂದ್ರಮೌಳೀಶ್ವರ ನಂತರ ನಿರ್ಮಾಣವಾಯಿತು.

ಮಧ್ವಾಚಾರ್ಯರು ಮಧ್ವ ಸರೋವರದಲ್ಲಿ ಕೃಷ್ಣನ ಪ್ರತಿಮೆ ಹಿಡಿದ ಕಾಲ್ಪನಿಕ ಚಿತ್ರ
ಮಧ್ವಾಚಾರ್ಯರು ಮಧ್ವ ಸರೋವರದಲ್ಲಿ ಕೃಷ್ಣನ ಪ್ರತಿಮೆ ಹಿಡಿದ ಕಾಲ್ಪನಿಕ ಚಿತ್ರ

ಕೃಷ್ಣನ ಪ್ರತಿಷ್ಠಾಪನೆ ಮತ್ತು ಅದರ ವೈಶಿಷ್ಟ್ಯ

ಆಚಾರ್ಯರು ಕೃಷ್ಣನನ್ನು ನೇರವಾಗಿ ಕರೆತಂದು, ಹುಡುಗರ ಜೊತೆಗೆ ಹಾಡುತ್ತಾ ಬಂದರು. ಅನಂತಾಸನನ ಒಪ್ಪಿಗೆಯನ್ನು ಪಡೆದು, ವಾದ್ಯಗಳ ಸಹಿತ ಮಧ್ವ ಸರೋವರದಲ್ಲಿ ಮುಳುಗಿಸಿ, ಪ್ರತಿಷ್ಠಾಪಿಸಿದರು. ಆಗ ಹುಡುಗರೇ ಅದನ್ನು ಎತ್ತಿ ತಂದಿದ್ದರು. ಆಚಾರ್ಯರ ಕೈಯಿಂದ ತೆಗೆದುಕೊಂಡಾಗ “ಎಷ್ಟು ಚೆನ್ನಾಗಿದೆ, ಮುದ್ದಾಗಿದೆ!” ಎಂದು ಹೇಳುತ್ತಿದ್ದರು. ನೀವು 40 ವರ್ಷದ ಹಿಂದಿನ ಕೃಷ್ಣನ ಫೋಟೋ ನೋಡಿದರೆ, ಆ ಮುಖದಲ್ಲಿರುವ ಮಂದಹಾಸ ಮತ್ತು ಮೃದು ಸೌಂದರ್ಯವನ್ನು ನಾರಾಯಣ ಪಂಡಿತರು “ಮಂದಹಾಸ ಮೃದು ಸುಂದರನಂ” ಎಂದು ವರ್ಣಿಸುತ್ತಾರೆ. “ಸಿದ್ಧಿ ವಿಘ್ನ ಮುಖ ದೋಷಭೇಷ” – ಒಂಬತ್ತನೆಯ ಸರ್ಗದ 40ರಿಂದ 46ನೇ ಶ್ಲೋಕದ ತನಕ ಕೃಷ್ಣನ ಪ್ರತಿಷ್ಠೆಯ ಬಗ್ಗೆ ಸ್ಪಷ್ಟವಾದ ಮಾತಿದೆ. “ಸನ್ನಿಧಾಪಯತ್, ಆಸ್ಥಾಪ್ಯ, ಸಂಸ್ಥಾಪ್ಯ” ಈ ಶಬ್ದಗಳು ಮೂರು ನಾಲ್ಕು ಕಡೆ ಉಲ್ಲೇಖಗೊಂಡಿವೆ. ಆಚಾರ್ಯರು ಪ್ರತಿಷ್ಠಾಪಿಸಿದ್ದನ್ನು ನಾರಾಯಣ ಪಂಡಿತರು ತಮ್ಮ ‘ಪ್ರಮೇಯ ನವ ಮಾಲಿಕಾ’ ಎಂಬ ಕೃತಿಯಲ್ಲಿ “ಕಾರ್ಷ್ಣೀಂ ಅರ್ಚಾಂ ಅಚಾಲ್ಯಂ” (ಯಾರಿಂದಲೂ ಚಲಿಸಲಾಗದ) ಮತ್ತು “ತ್ರಿದಶಕ ತರುಣೈಃ” (ಮೂವತ್ತು ಹುಡುಗರು) ಎಂದು ವರ್ಣಿಸುತ್ತಾರೆ.

ಮಧ್ವ ಸರೋವರದ ಮೇಲ್ನೋಟ - ಶ್ರೀ ಕೃಷ್ಣ ಮಠ ಉಡುಪಿ
ಮಧ್ವ ಸರೋವರದ ಮೇಲ್ನೋಟ – ಶ್ರೀ ಕೃಷ್ಣ ಮಠ ಉಡುಪಿ

ಇಲ್ಲಿ ಅಧಿವಾಸ ಹಾಗೂ ಜಲಾಧಿವಾಸದಂತಹ ಉಲ್ಲೇಖಗಳಿವೆ. ನೀರಿನಲ್ಲಿ ಮುಳುಗಿಸಿಟ್ಟು ಆಚಾರ್ಯರು ಮುಟ್ಟಿ, ಅದರಲ್ಲಿ ಸನ್ನಿಧಾನವನ್ನು ಸಂಕಲ್ಪ ಮಾಡಿದ ಮೇಲೆ, ಗಟ್ಟಿಮುಟ್ಟಾದ ಆಚಾರ್ಯರ ಶಿಷ್ಯರು 30 ಹುಡುಗರು ಒಟ್ಟಿಗೆ ಬಂದು ಅದನ್ನು ಎತ್ತಲು ಪ್ರಯತ್ನಿಸಿದರು, ಆದರೆ ಅದನ್ನು ಎತ್ತಲಿಕ್ಕೆ ಆಗಲಿಲ್ಲವಂತೆ. ಹಿಂದಿನ ದಿನ ಅವರೇ ಬಂದಿದ್ದರೂ, ಅದೇ 30 ಹುಡುಗರು ಮರುದಿನ ಕೈ ಹಾಕಿದರೆ ಎತ್ತಲಿಕ್ಕೆ ಆಗಲಿಲ್ಲ. ಆಚಾರ್ಯರು ಲೀಲೆಯಿಂದ ಅದನ್ನು ಅತ್ಯಂತ ಆನಂದದಿಂದ ಎತ್ತಿಕೊಂಡು ಹೋಗಿ, ಕೃಷ್ಣನನ್ನು ಪಶ್ಚಿಮಾಭಿಮುಖವಾಗಿ, ಇವತ್ತು ಹೇಗಿದೆಯೋ ಹಾಗೆಯೇ ಪ್ರತಿಷ್ಠಾಪನೆ ಮಾಡಿದರು.

ಕನಕನ ಕಿಂಡಿಯ ಐತಿಹ್ಯ ಮತ್ತು ಉಡುಪಿ ಕೃಷ್ಣ ದರ್ಶನ

ಕನಕನ ಕಿಂಡಿಯ ಐತಿಹ್ಯವನ್ನು ಅರ್ಥಮಾಡಿಕೊಳ್ಳಲು, ನೀವು ಉಡುಪಿಯ ಕೃಷ್ಣ ಮಠದ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸಬೇಕು. ನೀವು ಕೃಷ್ಣನ ದರ್ಶನಕ್ಕೆ ಹೋದ ತಕ್ಷಣ ಒಂದು ಬಾಗಿಲು ಕಾಣುತ್ತದೆ. ಮಧ್ವ ಸರೋವರದಿಂದ ಮೇಲೆ ಬಂದ ಕೃಷ್ಣನ ಮುಖಕ್ಕೆ ನೇರವಾಗಿ ಒಂದು ಬಾಗಿಲು ಕಾಣಿಸುತ್ತದೆ. ಅಲ್ಲಿ ಒಂದು ಚೆನ್ನಕೇಶವನ ಪ್ರತಿಮೆಯಿದೆ. ಒಂದು ಸಣ್ಣ ಕಂಬಿಯ ಬಳಿ ಒಂದು ಬಾಗಿಲಿದೆ. ಇದು ವಾಸ್ತವವಾಗಿ ಕೃಷ್ಣನಿಗೆ ನೀರನ್ನು ತರಲಿಕ್ಕಾಗಿ ತೆಗೆದ ಬಾಗಿಲು.

ಈ ಬಾಗಿಲನ್ನು ವರ್ಷದಲ್ಲಿ ಕೇವಲ ಒಂದು ದಿನ ಮಾತ್ರ ತೆರೆಯಲಾಗುತ್ತದೆ; ಅದು ಉದ್ವಾರ್ಚನೆಯ ದಿನ, ಪ್ರಥಮ ಏಕಾದಶಿಗಿಂತ ಮೊದಲು. ಅಂದು ಇಡೀ ಕೃಷ್ಣನ ಪರಿಸರವನ್ನು ಶುದ್ಧಿ ಮಾಡಲಾಗುತ್ತದೆ. ಇದು ಎಲ್ಲ ಸ್ವಾಮಿಗಳೇ ಮಾಡಬೇಕಾದ ಕಾರ್ಯವಾಗಿದ್ದು, ಅವರು ಅಂದು ಅಲ್ಲಿಗೆ ಆಗಮಿಸುತ್ತಾರೆ. ಆ ಸಮಯದಲ್ಲಿ ಆ ಬಾಗಿಲನ್ನು ತೆರೆಯುತ್ತಾರೆ. ಅದು ಬಿಟ್ಟರೆ, ಆ ಬಾಗಿಲನ್ನು ತೆರೆಯುವ ಬೇರೆ ಯಾವುದೇ ಕ್ರಮವಿಲ್ಲ.

ನೀವು ಆ ಬಾಗಿಲಿನ ಒಳಗೆ ಹೋದರೆ, ಅದು ಸ್ವಾಮಿಗಳೆಲ್ಲ ತರ್ಪಣಕ್ಕೆ ಕೊಡುವ ಜಾಗವೇ ಹೊರತು, ಕೃಷ್ಣ ಇರುವ ಜಾಗವಲ್ಲ. ಒಂದು ವೇಳೆ ನೀವು ಅದು ಕೃಷ್ಣ ಇರುವ ಜಾಗ ಎಂದು ಹೇಳುವುದಾದರೆ, ಕೃಷ್ಣ ಈ ಕೋಣೆಯಿಂದ ಭಕ್ತರಿಗೋಸ್ಕರ ಆ ಕೋಣೆಗೆ ಹಾರಬೇಕಾಗುತ್ತದೆ. ಆದರೆ ಕೃಷ್ಣನ ವಿಗ್ರಹ ತಿರುಗಿದ್ದಲ್ಲ. ಅದು ತಿರುಗಿದ್ದಾದರೆ, ಅವನು ಅಲ್ಲೇ ಇದ್ದಾನೆ ಎಂದರ್ಥ, ಆದರೆ ಅದು ತಿರುಗಿಲ್ಲ.

ಕನಕನ ಕಿಂಡಿಯ ಐತಿಹ್ಯ ಮತ್ತು ಮಹತ್ವ

ವಾದಿರಾಜರು ಕಿಂಡಿ ಒಡೆದದ್ದು ಎಂಬ ಕಥೆಯನ್ನು ಉಲ್ಲೇಖಿಸುತ್ತಾರೆ. ಇದರ ಪ್ರಕಾರ, ಕೃಷ್ಣನಿಗೆ ಎದುರಾಗಿರುವ ನವಗ್ರಹ ಕಿಂಡಿಯು ಮೊದಲಿನಿಂದಲೂ ಹಾಗೆಯೇ ಪ್ರತಿಷ್ಠಾಪನೆಗೊಂಡಿತ್ತು. ಇಲ್ಲಿ ‘ನವಗ್ರಹ’ ಎಂದರೆ ಒಂಬತ್ತು ಗ್ರಹಗಳಲ್ಲ, ಬದಲಿಗೆ ಕೃಷ್ಣನು ‘ನವದ್ವಾರೇ ಪುರೇ ದೇಹೀ ನೈವ ಕುರ್ವನ್ನ ಕಾರಯನ್’ ಎಂದು ಹೇಳಿದಂತೆ, ನಮ್ಮ ದೇಹದಲ್ಲಿರುವ ಒಂಬತ್ತು ದ್ವಾರಗಳನ್ನು (ಚಿದ್ರಗಳನ್ನು) ಇದು ಸೂಚಿಸುತ್ತದೆ. ಇದರ ಮೂಲಕ, ಆ ಎಲ್ಲಾ ದ್ವಾರಗಳಲ್ಲಿಯೂ ಭಗವಂತನನ್ನು ಕಾಣುವಷ್ಟು ಶುದ್ಧಿಯನ್ನು ನಾವು ಕಾಪಾಡಿಕೊಳ್ಳಬೇಕು ಎಂದು ಹೇಳಲಾಗಿದೆ.

ನವಗ್ರಹ ಕಿಂಡಿ - ಶ್ರೀ ಕೃಷ್ಣ ಮಠ ಉಡುಪಿ
ನವಗ್ರಹ ಕಿಂಡಿ – ಶ್ರೀ ಕೃಷ್ಣ ಮಠ ಉಡುಪಿ

ಆ ಕಿಂಡಿಯು ಹೊರಗೆ ಬಂದದ್ದು ನಂತರ. ಅಲ್ಲಿ ಈಗಲೂ ಕನಕದಾಸರ ಪ್ರತಿಮೆ ಇರುವ ಒಂದು ಜಾಗವಿದೆ. ವಾಸ್ತವವಾಗಿ, ಆ ಜಾಗದಲ್ಲಿ ಒಂದು ಮನೆ ಇತ್ತು. ಅಲ್ಲಿ ನಿರಂತರವಾಗಿ ಪಾಠ-ಪ್ರವಚನಗಳು ನಡೆಯುತ್ತಿದ್ದು, ಬಂದವರಿಗೆಲ್ಲಾ ಆಶ್ರಯವೂ ದೊರೆಯುತ್ತಿತ್ತು. ಕನಕದಾಸರು ಅಲ್ಲಿಯೇ ಉಳಿದುಕೊಂಡಿದ್ದರು. ಅವರು ಪ್ರತಿದಿನ ಕೃಷ್ಣನನ್ನು ಭಜನೆ ಮಾಡುತ್ತಿದ್ದರು, ಮಾತನಾಡುತ್ತಿದ್ದರು, ಮತ್ತು ಒಳಗೆ ಹೋಗಿ ಬರುತ್ತಿದ್ದರು ಎಂದು ಹೇಳಲಾಗುತ್ತದೆ. ಸಿನಿಮಾಗಳಲ್ಲಿ ತೋರಿಸಿದಂತೆ ಅಸ್ಪೃಶ್ಯತೆಯು ಕೇವಲ ಕಥೆ. ಆದರೆ, ‘ಒಂದು ಚೂರು ದೂರ ಇರಿ’ ಎಂದು ಹೇಳುವವರು ಎಲ್ಲಾ ಕಾಲದಲ್ಲೂ ಇದ್ದೇ ಇರುತ್ತಾರೆ. ಇಂತಹ ಮಾತುಗಳನ್ನು ಎಲ್ಲರಿಗೂ ಹೇಳುತ್ತಾರೆ; ಕೆಲವರನ್ನು ಮಾತ್ರ ನೋಡಿ ಹೇಳುವುದಲ್ಲ. ಹಾಗಾಗಿ, ವ್ಯಾಸರಾಯರು ಹೇಗೆ ಕನಕದಾಸರನ್ನು ಚೆನ್ನಾಗಿ ಗಮನಿಸಿದರೋ, ಹಾಗೆಯೇ ವಾದಿರಾಜರು ಕೂಡ ಅವರನ್ನು ಬಹಳ ಗೌರವದಿಂದ ಕಂಡಿದ್ದಾರೆ. ಅದಕ್ಕೆ ಸಾಕ್ಷಿಯೇ ಇದು.

ಕನಕನ ಕಿಂಡಿ - ಶ್ರೀ ಕೃಷ್ಣ ಮಠ ಉಡುಪಿ
ಕನಕನ ಕಿಂಡಿ – ಶ್ರೀ ಕೃಷ್ಣ ಮಠ ಉಡುಪಿ

ಕನಕದಾಸರ ನಿತ್ಯ ನೈವೇದ್ಯ ಮತ್ತು ಕಿಂಡಿ ರೂಪುಗೊಂಡ ಬಗೆ

ಒಂದು ದಿನ ರಾತ್ರಿ, ಕನಕದಾಸರು ಪ್ರತಿದಿನ ದೇವರಿಗೆ ನೈವೇದ್ಯ ಮಾಡುತ್ತಿದ್ದರು. ಈಗ ನಾವು ಕನಕನ ಕಿಂಡಿ ಎಂದು ನೋಡುವ ಜಾಗದ ಪಕ್ಕದಲ್ಲೇ ಕೃಷ್ಣನಿಗೆ ನೈವೇದ್ಯವಾಗುವ ಪಾಕಶಾಲೆ ಇದೆ. ಆ ಪಾಕಶಾಲೆಯಲ್ಲಿ ಮೈ, ಕೈ, ಕಾಲು ತೊಳೆಯಲು ಅಥವಾ ಮುಖ ತೊಳೆಯಲು ಯಾವುದೇ ವ್ಯವಸ್ಥೆ ಇರಲಿಲ್ಲ. ಕೇವಲ ದೇವರ ಪಾತ್ರೆಗಳನ್ನು ತೊಳೆಯುವ ಅಥವಾ ಗಂಜಿಯನ್ನು ಬಸಿಯುವ ಜಾಗವದು. ಆ ಬಸಿಯುವ ಜಾಗದಲ್ಲಿ ಕನಕದಾಸರು ಗಂಜಿಯನ್ನು ಇಟ್ಟು, ತಮ್ಮಲ್ಲಿದ್ದ ರೊಟ್ಟಿ ಹಿಟ್ಟನ್ನು ತಟ್ಟಿ ಒಂದು ರೊಟ್ಟಿ ಮಾಡಿ, ಕೃಷ್ಣನಿಗೆ ನಿತ್ಯ ಅಂಬಲಿಯನ್ನು ನೈವೇದ್ಯ ಮಾಡುತ್ತಿದ್ದರು. ಈ ಪ್ರಸಾದ ಪ್ರತಿಯೊಬ್ಬರಿಗೂ ಸಿಗುತ್ತಿತ್ತು.

ಕನಕದಾಸರು ಪ್ರತಿದಿನ ಹೊರಗಿನಿಂದಲೇ ಒಳಗಡೆ ಏನಿದೆ ಎಂದು ತಮ್ಮ ಒಳಗಣ್ಣಿನಿಂದ ಕಾಣುತ್ತಿದ್ದರು. ‘ಒಳಗಣ್ಣು’ ಎಂದರೆ ದಿವ್ಯ ದೃಷ್ಟಿ ಅಥವಾ ಆಂತರಿಕ ಒಳನೋಟ. ಯಾರಿಗೆ ಒಳಗಣ್ಣು ಇರುವುದಿಲ್ಲವೋ, ಅವರಿಗೆ ಬಾಗಿಲು ಬೇಕು. ಆದರೆ, ಕನಕದಾಸರಿಗೆ ಒಳಗಣ್ಣು ಇದ್ದುದರಿಂದಾಗಿ, ಈ ಬಾಗಿಲು ಅಥವಾ ಹೊರಗಿನ ಗೋಡೆ ಅವರಿಗೆ ಅಡ್ಡಿಯಾಗಿರಲಿಲ್ಲ. ಆದರೂ, ವಾದಿರಾಜರಿಗೂ ಕನಕದಾಸರು ಇಷ್ಟು ಶ್ರದ್ಧೆಯಿಂದ ದಿನವೂ ಅಲ್ಲಿ ನಿಂತು ಪೂಜೆ ಮಾಡಿ, ನೈವೇದ್ಯ ಮಾಡಿ ದೇವರನ್ನು ಪ್ರೀತಿಸುತ್ತಾರೆ ಎಂದು ಅನಿಸಿತು.

ಅದೇ ಸಮಯಕ್ಕೆ ಜೋರಾಗಿ ಸಿಡಿಲು ಬಡಿದು ಆ ಗೋಡೆಯಲ್ಲಿ ಒಂದು ಬಿರುಕು ಮೂಡಿತು. ಅದು ಸರಿಯಾಗಿ ಕೃಷ್ಣ ಕಾಣುವ ಜಾಗದಲ್ಲೇ ಬಿರುಕು ಬಿಟ್ಟು, ಕನಕದಾಸರಿಗೆ ಕೃಷ್ಣನ ದರ್ಶನ ದೊರೆಯಿತು. ಆಗ ವಾದಿರಾಜರಿಗೆ ಆಶ್ಚರ್ಯವಾಯಿತು: “ಇಡೀ ಗೋಡೆಯಲ್ಲಿ ಬೇರೆ ಎಲ್ಲೂ ಬಿರುಕು ಬಿಡದೆ, ಸರಿಯಾಗಿ ಆ ಜಾಗದಲ್ಲೇ ಬಿರುಕು ಮೂಡಿದೆ.” ಈ ಘಟನೆಯನ್ನು ನೆನಪಿಸುವ “ಯಾಕೆ ಭೂತಾಯಿ ನೀ ಬಿರುಕು ಬಿಟ್ಟೆ” ಎಂಬ ಹಾಡೂ ಇದೆ. ಆ ಹಾಡಿನಲ್ಲಿರುವಂತೆ, ಗೋಡೆ ಒಡೆದ ಆ ಜಾಗವನ್ನು ವಾದಿರಾಜರು ಕೊನೆಗೆ, ಕನಕದಾಸರ ಮೇಲಿನ ವಿಶೇಷ ಗೌರವದಿಂದ ಅದನ್ನು ‘ಕಿಂಡಿ’ ಎಂದು ಮಾಡಿಸಿ, “ಇದು ಕನಕನ ಕಿಂಡಿ” ಎಂದು ಹೆಸರಿಸಿದರು. ಅವರ ಕಾಲದಿಂದಲೂ ಬಂದವರು ಅದೇ ಹೆಸರಿನಿಂದ ಅದನ್ನು ಕರೆಯತೊಡಗಿದರು.

ಕನಕ ಗೋಪುರ ಮತ್ತು ನಂದಾ ದೀಪ

ಮುಂದೆ ಒಂದು ಗೋಪುರವಿತ್ತು, ನಂತರ ಎಲ್ಲರೂ ಅದನ್ನು ‘ಕನಕ ಗೋಪುರ’ ಎಂದು ಕರೆದುಕೊಂಡರು; ಇದು ಕನಕನ ಕಿಂಡಿ ಮೇಲೆ ಇರುವ ಗೋಪುರ. ಆದರೆ ಅದಕ್ಕೆ ವಾಸ್ತವವಾಗಿ ‘ಕನಕ ಗೋಪುರ’ ಎಂಬ ಹೆಸರಿರಲಿಲ್ಲ.

ಕನಕ ಗೋಪುರ - ಶ್ರೀ ಕೃಷ್ಣ ಮಠ ಉಡುಪಿ
ಕನಕ ಗೋಪುರ – ಶ್ರೀ ಕೃಷ್ಣ ಮಠ ಉಡುಪಿ

ಕೊರೋನಾ ಸಮಯದಲ್ಲಿ ಎಲ್ಲಾ ದೇವಸ್ಥಾನಗಳು ಮುಚ್ಚಿ ಹೋಗಿದ್ದವು. ಆದರೆ ಉಡುಪಿಯ ಕೃಷ್ಣನ ದರ್ಶನ ಮಾತ್ರ ಸಿಗುತ್ತಿತ್ತು. ಕೃಷ್ಣ ಇಪ್ಪತ್ತನಾಲ್ಕು ಗಂಟೆ ಎಲ್ಲರಿಗೂ ದರ್ಶನ ನೀಡುತ್ತಿದ್ದ. ಅದು ಒಳಗಿನಿಂದ ಹೊಳೆಯುವ ನಂದಾ ದೀಪ. ಆಚಾರ್ಯರು ಆ ದಿನ ಹಚ್ಚಿದ ದೀಪ ಅದು, ಎಂಟು ನೂರು ವರ್ಷದಿಂದ ಇವತ್ತಿಗೂ ಅದು ಆರಿಲ್ಲ. ಇದೇ ದೀಪವನ್ನು ಕೊಂಡೊಯ್ದು ಬದರಿಯಲ್ಲಿ ಇಟ್ಟರು ಎಂದು ಅಲ್ಲಿ ಇತಿಹಾಸವನ್ನು ಹೇಳುತ್ತಾರೆ.

ತುಂಬಾ ಕಡೆ ಈ ಉಲ್ಲೇಖ ಬರುತ್ತದೆ: “ಇಲ್ಲಿಂದ ದೀಪ ತೆಗೆದುಕೊಂಡು ಹೋದರು, ಅಲ್ಲಿಂದ ದೀಪ ತೆಗೆದುಕೊಂಡು ಹೋದರು” ಅಂತ. ಹಾಗೆಯೇ ಆಚಾರ್ಯರ ಕಾಲದಿಂದ ಆ ದೀಪದ ಬೆಳಕಿನಲ್ಲಿ ಕೃಷ್ಣನನ್ನು ನೋಡುವಂತಹ ಒಂದು ವಿಶೇಷ ಅವಕಾಶ ವಾದಿರಾಜರ ಕಾಲದಲ್ಲಿ ಸಾರ್ವಜನಿಕರಿಗೆ ಸಿಕ್ಕಿತು. ಅಲ್ಲಿ ತನಕ ಒಳಗೆ ಬಂದರೆ ಮಾತ್ರ ಕಾಣಿಸುತ್ತಿತ್ತು. ಈಗ ಬಹುಶಃ ಆ ಕಾಲದಲ್ಲಿ ಇಷ್ಟು ಗಟ್ಟಿಯಾದ ಪೌಳಿ ವ್ಯವಸ್ಥೆಗಳು ಹೇಗಿದ್ದವು ಎಂದು ಗೊತ್ತಿಲ್ಲ. ಆದರೆ ಬದಲಾವಣೆಗಳು ಆಗಿವೆ. ಆದದ್ದನ್ನ ಈ ಕಿಂಡಿ ಮಾತ್ರ ವಾದಿರಾಜರ ನಂತರ ಗಟ್ಟಿಯಾಗಿ ಹಾಗೆಯೇ ಉಳಿದು ಬಂತು ಎಂದು ನಮಗೆ ಅರ್ಥವಾಗುತ್ತದೆ.

ಉಡುಪಿ ಅಷ್ಟ ಮಠಗಳ ಉಗಮ ಮತ್ತು ಬೆಳವಣಿಗೆ

ಹೀಗೆಯೇ ಕನಕದಾಸರ ಗುರುತನ್ನು ಕೃಷ್ಣನ ಪ್ರತಿಷ್ಠಾಪನೆಯೊಂದಿಗೆ ಉಳಿಸಿಕೊಂಡು, ಕೃಷ್ಣನಿಗೆ ಹದಿನಾಲ್ಕು ವಿಶಿಷ್ಟವಾದ ಪೂಜೆಗಳು ನಡೆಯುತ್ತವೆ. ಆ ಕಾರಣಕ್ಕಾಗಿ ಒಂದು ವ್ಯವಸ್ಥೆ ಮಾಡಿದರು.

ಏಕೆಂದರೆ, ಉಡುಪಿಯ ಕೃಷ್ಣ ಬಾಲಕೃಷ್ಣ. ಶ್ರೀನಿವಾಸನು ಗೃಹಸ್ಥ ಕೃಷ್ಣ. ಇನ್ನು ಅನಂತಶಯನ ಪೂರ್ತಿ ಅವನು ತನ್ನೆಲ್ಲಾ ಜವಾಬ್ದಾರಿ ಮುಗಿದ ಮೇಲೆ ಯೋಗನಿದ್ರೆಗೆ ಹೊರಟ ಕೃಷ್ಣ. ಹೀಗೆ ನಾವು ಮೂರು ತರಹದ ಕೃಷ್ಣನನ್ನು ಪರಿಚಯ ಮಾಡಿಕೊಂಡರೆ, ಉಡುಪಿಯದ್ದು ಬಾಲಕೃಷ್ಣ. ಪಂಢರಪುರದ ಕೃಷ್ಣ ಇದಕ್ಕಿಂತಲೂ ಇನ್ನೂ ಚಿಕ್ಕವನು. ಅದರ ನಂತರ ಉಡುಪಿಯ ಕೃಷ್ಣ, ತದನಂತರ ತಿಮ್ಮಪ್ಪ (ಶ್ರೀನಿವಾಸ). ಹೀಗೆ ಮೂರು ಕೃಷ್ಣರು. ಶ್ರೀನಿವಾಸ ಎಂದರೆ ಬೇರೆ ಅವತಾರವಲ್ಲ.

ಆದ್ದರಿಂದ ಕೃಷ್ಣನ ಈ ಸನ್ನಿಧಾನದಲ್ಲಿ ನಿಷ್ಠೆಯಿಂದ ಪೂಜೆಯಾಗಬೇಕು ಎಂದು ಬ್ರಹ್ಮಚಾರಿಗಳನ್ನೇ ಮನಸ್ಸಿನಲ್ಲಿಟ್ಟುಕೊಂಡು (ವ್ಯವಸ್ಥೆಯನ್ನು ರೂಪಿಸಿದರು). ಅಂದರೆ, ಪೂಜೆಗೆ ಸನ್ಯಾಸಿಗಳು ಪ್ರಧಾನವಾಗಿ ಬೇಕು. ಉಳಿದವರಿಗೆಲ್ಲಾ ಈಗ ಉಪಾಸನೆ ಮಾಡುವಾಗ ರುಕ್ಮಿಣಿ, ಸತ್ಯಭಾಮೆ ಸಹಿತರಾದ ಕೃಷ್ಣನನ್ನು ಪೂಜೆ ಮಾಡುವ ಕ್ರಮವಿದೆ. ಆದರೆ, ಸನ್ಯಾಸಿಗಳಿಗೆ ಬಾಲಕೃಷ್ಣನನ್ನು ಕೊಟ್ಟರೆ ಅವರ ಧರ್ಮಕ್ಕೆ ಅದು ವಿಶೇಷ ಫಲವನ್ನು ಕೊಡುತ್ತದೆ ಎಂಬ ದೃಷ್ಟಿಯಿಂದ ಆ ಪರಂಪರೆ ಬೆಳೆಯಿತು ಎಂದು ನಾವು ಭಾವಿಸಬಹುದು.

ಆದರೆ, ಉಡುಪಿಯ ಪ್ರದೇಶದಲ್ಲಿ ಆಚಾರ್ಯರು ಅಷ್ಟು ಮಠಗಳನ್ನು ಸ್ಥಾಪಿಸಲಿಲ್ಲ. ಅವರು ಎಂಟು ಸನ್ಯಾಸಿಗಳಿಗೆ ದೀಕ್ಷೆ ಕೊಟ್ಟರು. ಕಾಲಾಂತರದಲ್ಲಿ ಆ ಸನ್ಯಾಸಿಗಳ ಬದ್ಧತೆ, ಅವರಿಗೆ ಎದುರಾಗುವ ಸಮಸ್ಯೆಗಳು ಅಥವಾ ಅಗತ್ಯಗಳನ್ನು ಗಮನಿಸಿ, ಆಯಾ ರಾಜರು ಅವರಿಗೆ ಉಂಬಳಿ ಕೊಟ್ಟರು. ಈಗ ಏನು ಮಠಗಳ ಹೆಸರುಗಳು ಬಂದಿವೆ, ಅವು ಕೂಡ ಆಚಾರ್ಯರ ನಂತರ ಬಂದವು. ಕಾಣಿಯೂರು, ಸೋದೆ, ಪುತ್ತಿಗೆ, ಅದಮಾರು, ಪೇಜಾವರ, ಪಲಿಮಾರು, ಕೃಷ್ಣಾಪುರ, ಶೀರೂರು ಎಂಬ ಹೆಸರುಗಳು ಇವೆ. ಇದು ಒಂದೊಂದು ಊರಿನ ಹೆಸರು. ಆ ಊರಿನ ರಾಜರು ಅಥವಾ ಅಲ್ಲಿಯ ಪಾಳೇಗಾರರು ಅವರಿಗೆ ಸ್ಥಳ ಮಾಡಿಕೊಟ್ಟರು.

ಮಠಗಳ ಗುರುತಿಸುವಿಕೆ ಮತ್ತು ಸನ್ಯಾಸ ಧರ್ಮ

ಆಮೇಲೆ, ಎಂಟು ಜನ ಸನ್ಯಾಸಿಗಳನ್ನು ಹೇಗೆ ಗುರುತಿಸುವುದು ಎಂಬ ಪ್ರಶ್ನೆ ಬಂದಾಗ, ಅವರನ್ನು ಆಯಾ ಊರಿನ ಹೆಸರಿನಿಂದ ಗುರುತಿಸಲು ಆರಂಭಿಸಲಾಯಿತು. ಆಚಾರ್ಯರ ಕಾಲದಲ್ಲಿ ಈ ಸನ್ಯಾಸಿಗಳಿಗೆ ಕೇವಲ ಪ್ರತಿಮೆ ಮತ್ತು ಜೋಳಿಗೆಯನ್ನು ಮಾತ್ರ ನೀಡಲಾಗುತ್ತಿತ್ತು.  “ಪಂಚವಾ ಸಪ್ತ ಸದಾನಿ ಗಚ್ಛೇತ್” ಎಂಬ ನಿಯಮದಂತೆ, ಐದರಿಂದ ಏಳು ಮನೆಗಳಿಗೆ ಹೋಗಿ ಭಿಕ್ಷೆ ಬೇಡಿ ಊಟ ಮಾಡುವ ಕೆಲಸಕ್ಕೆ ಅವರನ್ನು ಸನ್ಯಾಸ ದೀಕ್ಷೆಗೆ ನಿಯೋಜಿಸಲಾಗಿತ್ತು.

ಸನ್ಯಾಸಿಗಳಿಗೆ ನೆಲೆಯ ಅಗತ್ಯತೆ

ಸ್ವಾಮಿಗಳು ಸಂಚಾರ ಮಾಡುತ್ತಿದ್ದಂತೆ, ಅವರಿಗೆ ಒಂದು ಖಾಯಂ ನೆಲೆಯ ಅಗತ್ಯ ಕಂಡುಬಂತು. ಏಕೆಂದರೆ, ಎಲ್ಲ ಕಾಲದಲ್ಲೂ ಒಂದೇ ರೀತಿಯ ಆಶ್ರಯ ದೊರೆಯುವುದು ಕಷ್ಟ, ಎಲ್ಲರೂ ಆಶ್ರಯ ನೀಡಲು ಸಾಧ್ಯವಾಗುವುದಿಲ್ಲ. ಹಿಂದೆ, ಕೃಷ್ಣ ಮಠದ ಮೇಲ್ಭಾಗದಲ್ಲಿ ಎಂಟು ಮಂದಿ ಸನ್ಯಾಸಿಗಳಿಗೆ ಪ್ರತ್ಯೇಕ ಕೋಣೆಗಳಿದ್ದವು. ಚಂದ್ರಶಾಲೆಯಿಂದ ಎಡಭಾಗಕ್ಕೆ, ಹಾಗೂ ಉಪ್ಪರಿಗೆಯ ಮೇಲ್ಭಾಗಕ್ಕೆ ಹೀಗೆ ಒಂದೊಂದು ಕೋಣೆಗಳಿದ್ದವು. ಆದರೆ, ಈಗ ಅವೆಲ್ಲವೂ ಇಲ್ಲವಾಗಿವೆ.

ಉಡುಪಿ ಮಠಗಳ ವಿಸ್ತರಣೆ

ಆ ಸಮಯದಲ್ಲಿ ಆ ಎಂಟು ಮಂದಿ ಸನ್ಯಾಸಿಗಳಿಗೆ ಉಳಿದುಕೊಳ್ಳಲು ಬೇರೆ ಯಾವುದೇ ಸ್ಥಳವಿರಲಿಲ್ಲ; ಮಠದ ಆವರಣವೇ ಅವರಿಗೆ ಆಶ್ರಯವಾಗಿತ್ತು. ನಂತರ, ಕಾಲಾಂತರದಲ್ಲಿ ಅವರಿಗೆ ಉಂಬಳಿ (ಭೂಮಿ ಅಥವಾ ಆಸ್ತಿ) ದೊರೆತು, ಕೃಷ್ಣ ಮಠದ ಪರಿಸರದಲ್ಲಿ ಹಾಗೂ ಅನಂತಾಸನ ರಥಬೀದಿಯ ಸುತ್ತಮುತ್ತ ಎಂಟು ಪ್ರತ್ಯೇಕ ಸ್ಥಳಗಳನ್ನು ಸ್ವೀಕರಿಸಿದರು. ಈ ಎಂಟು ಮೂಲ ಮಠಗಳಲ್ಲದೆ, ಅಲ್ಲಿ ಬಹಳ ನಂತರದಲ್ಲಿ ಶ್ರೀಪಾದರಾಜರ ಮಠ, ವ್ಯಾಸರಾಜರ ಮಠ, ಅಣ್ಣಯಾಚಾರ್ಯರ ಮಠ, ಉತ್ತರಾದಿ ಮಠ, ರಾಘವೇಂದ್ರ ಮಠ ಸೇರಿದಂತೆ ಇನ್ನೂ ಅನೇಕ ಮಠಗಳು ಅನಂತಾಸನ ಸನ್ನಿಧಾನದ ಆಸುಪಾಸಿನಲ್ಲಿ ಕಾಲಕ್ರಮೇಣ ಬೆಳೆದುಬಂದವು.

ಆದರೆ, ಮೊದಲು ಈ ಎಂಟು ಮಠಗಳಿಗೆ ಸ್ಥಳಾವಕಾಶ ದೊರೆಯಿತು. ಇದರ ಭಾಗವಾಗಿ, ನಾವು ಈಗ ಆ ಎಂಟು ಮಠಗಳನ್ನು ಅವುಗಳ ಊರುಗಳ ಹೆಸರಿನಿಂದ ಪೇಜಾವರ ಮಠ, ಅದಮಾರು ಮಠ, ಕಾಣಿಯೂರು ಮಠ, ಕೃಷ್ಣಾಪುರ ಮಠ, ಸೋದೆ ಮಠ ಇತ್ಯಾದಿ ಎಂದು ಕರೆಯುತ್ತೇವೆ.

ಆಚಾರ್ಯರು ನೀಡಿದ ದೀಕ್ಷೆ ಮತ್ತು ಉಪಾಸನಾ ಕ್ರಮ

ಆಚಾರ್ಯರು ಮಠಗಳನ್ನು ಸ್ಥಾಪಿಸಿಲ್ಲ. ಬದಲಾಗಿ, ಅವರು ಸನ್ಯಾಸಿಗಳಿಗೆ ದೀಕ್ಷೆಯನ್ನು ನೀಡಿದರು, ಆರಾಧನೆಗಾಗಿ ಪ್ರತಿಮೆಗಳನ್ನು ನೀಡಿದರು ಮತ್ತು ಅವರಿಗೆ ಉಪಾಸನಾ ಅಕ್ಷರಗಳನ್ನು ಕಲಿಸಿದರು. ಓಂಕಾರದ ‘ಅ’, ‘ಉ’, ‘ಮ’, ಮತ್ತು ‘ನಾದ’ಕ್ಕೆ ಸಂಬಂಧಿಸಿದ ನಾಲ್ಕು ರೂಪಗಳ ದೇವತೆಗಳ ಉಪಾಸನೆಗೆ ಪ್ರೋತ್ಸಾಹಿಸಿದರು:

  • ರಾಮ
  • ಕೃಷ್ಣ (ಇವರು ವಿಠ್ಠಲನಿಂದ ಭಿನ್ನರಲ್ಲ, ವಿಠ್ಠಲನೇ ಕೃಷ್ಣ)
  • ನರಸಿಂಹ
  • ಭುವರಾಹ

ಹೀಗೆ ಆಚಾರ್ಯರು ಈ ನಾಲ್ಕು ದೇವತೆಗಳ ಪ್ರತಿಮೆಗಳನ್ನು ಉಪಾಸನೆಗಾಗಿ ನೀಡಿದರು.

ಆಚಾರ್ಯರು ನೀಡಿದ ದೀಕ್ಷೆ ಮತ್ತು ಮಠಗಳ ಆರಂಭ

ಆ ಉಪಾಸನೆಯಿಂದ ವಾಸ್ತವವಾಗಿ ಒಂಬತ್ತು ಜನರಿಗೆ ದೀಕ್ಷೆ ನೀಡಲಾಗಿದೆ, ಕೇವಲ ಎಂಟು ಜನರಿಗಲ್ಲ. ಅವರಲ್ಲಿ ಪದ್ಮನಾಭತೀರ್ಥರು (ನಾನು ಉತ್ತರದ ಕಡೆಗೆ ಹೋಗುತ್ತೇನೆ) ಒಬ್ಬರು. ಪದ್ಮನಾಭತೀರ್ಥರಿಗೆ ಆಶ್ರಮ ನೀಡಿದ್ದೂ ಕೂಡ ಮಧ್ವಾಚಾರ್ಯರೇ. ಆದರೆ, ಅದನ್ನು ಉಡುಪಿಯಲ್ಲಿಯೇ ನೀಡಲಾಯಿತೇ ಎಂಬುದಕ್ಕೆ ಸ್ಪಷ್ಟವಾದ ಉಲ್ಲೇಖ ಇಲ್ಲ. ಆದರೂ, ಅವರೆಲ್ಲ ಒಟ್ಟಿಗೆ ಇದ್ದದ್ದು ಗೊತ್ತಾಗುತ್ತದೆ.

ಆಚಾರ್ಯರು ನೀಡಿದ ದೀಕ್ಷೆ ಮತ್ತು ಮಠಗಳ ಆರಂಭ

ಆ ಉಪಾಸನೆಯಿಂದ ವಾಸ್ತವವಾಗಿ ಒಂಬತ್ತು ಜನರಿಗೆ ದೀಕ್ಷೆ ನೀಡಲಾಗಿದೆ, ಕೇವಲ ಎಂಟು ಜನರಿಗಲ್ಲ. ಅವರಲ್ಲಿ ಪದ್ಮನಾಭತೀರ್ಥರು (ನಾನು ಉತ್ತರದ ಕಡೆಗೆ ಹೋಗುತ್ತೇನೆ) ಒಬ್ಬರು. ಪದ್ಮನಾಭತೀರ್ಥರಿಗೆ ಆಶ್ರಮ ನೀಡಿದ್ದೂ ಕೂಡ ಮಧ್ವಾಚಾರ್ಯರೇ. ಆದರೆ, ಅದನ್ನು ಉಡುಪಿಯಲ್ಲಿಯೇ ನೀಡಲಾಯಿತೇ ಎಂಬುದಕ್ಕೆ ಸ್ಪಷ್ಟವಾದ ಉಲ್ಲೇಖ ಇಲ್ಲ. ಆದರೂ, ಅವರೆಲ್ಲ ಒಟ್ಟಿಗೆ ಇದ್ದದ್ದು ಗೊತ್ತಾಗುತ್ತದೆ.

ಆಚಾರ್ಯ ಮಧ್ವರು ಉಡುಪಿಯ ಪ್ರಾಂತದಲ್ಲಿ ಶೋಭನ ಭಟ್ಟರು ಎಂಬುವರನ್ನು ಗೋದಾವರಿ ತೀರದಲ್ಲಿ ಭೇಟಿಯಾದರು. ಇದೇ ರೀತಿ, ಶಾಮಾ ಶಾಸ್ತ್ರಿಗಳು ಕಳಿಂಗ ದೇಶದಲ್ಲಿ ವಾದ ಮಾಡಲು ಹೋದಾಗ, ಅಲ್ಲಿ ನರಹರಿ ತೀರ್ಥರು ಸಿಕ್ಕಿದರು. ಹಾಗೆಯೇ ಗೋದಾವರಿ ತೀರದಲ್ಲಿ ಶೋಭನ ಭಟ್ಟರು ಸಿಕ್ಕಿದರು. ಅವರಿಗೆ ಅಲ್ಲೇ ದೀಕ್ಷೆ ನೀಡಿದರೋ ಇಲ್ಲವೋ ಎಂಬ ಬಗ್ಗೆ ನೇರ ಉಲ್ಲೇಖವಿಲ್ಲದಿದ್ದರೂ, ಆಚಾರ್ಯರು ಅವರಿಗೆ ದೀಕ್ಷೆ ನೀಡಿದ್ದು ಸತ್ಯ.

ಆದರೆ, ಆಚಾರ್ಯರು ಮೊದಲು ದೀಕ್ಷೆ ನೀಡಿದ್ದು ಹೃಷಿಕೇಶ ತೀರ್ಥರಿಗೆ. ಇದು ಮಧ್ವವಿಜಯದಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಎಲ್ಲರಿಗೂ ಇಲ್ಲ.

ಆಚಾರ್ಯ ಮಧ್ವರ ಶಿಷ್ಯ ಪರಂಪರೆ ಮತ್ತು ದೀಕ್ಷೆಗಳು

ಆಚಾರ್ಯರು ಎಲ್ಲಿಗೆ ಹೋದರೂ, ಹೃಷಿಕೇಶ ತೀರ್ಥರು ಹಾಡಲು ಅವರ ಜೊತೆಯಲ್ಲೇ ಇರುತ್ತಿದ್ದರು. ಆಚಾರ್ಯರು ಸ್ವತಃ ಉಪನ್ಯಾಸ, ಗಾಯನ ಮತ್ತು ವಾಚನದಲ್ಲಿ ನಿಪುಣರಾಗಿದ್ದರು ಮತ್ತು ತುಂಬಾ ಚೆನ್ನಾಗಿ ಹಾಡುತ್ತಿದ್ದರು ಎಂದು ಹೇಳಲಾಗುತ್ತದೆ. ಅವರಿಗೆ ಶಿಷ್ಯನನ್ನು ಸಂಗೀತದ ಹಿನ್ನೆಲೆಯಲ್ಲಿ ಬೆಳೆಸುವ ಉದ್ದೇಶವಿತ್ತು. ಹೃಷಿಕೇಶ ತೀರ್ಥರ ನಂತರ, ಪದ್ಮನಾಭ ತೀರ್ಥರು, ವಿಷ್ಣು ತೀರ್ಥರು, ರಾಮ ತೀರ್ಥರು ಹೀಗೆ ಅನೇಕರು ಆಚಾರ್ಯರ ಶಿಷ್ಯರಾದರು.

ಮಾಹಿತಿ : ವಿದ್ವಾನ್ ಕೃಷ್ಣರಾಜ ಕುತ್ಪಾಡಿ

0Shares

ನಿಮ್ಮದೊಂದು ಉತ್ತರ