ರಚನೆ: ವಿದ್ಯಾಪ್ರಸನ್ನತೀರ್ಥರು
ರಾಮ ಭಜನೆ ಮಾಡೋ
ರಾಮ ಭಜನೆ ಮಾಡೋ ಮನುಜಾ
ರಾಮ ಭಜನೆ ಮಾಡೋ || ಪ ||
ರಾಮ ರಾಮ ಜಯ ರಾಘವ ಸೀತಾ
ರಾಮನೆಂದು ಸುಸ್ವರದಲಿ ಪಾಡುತ
ರಾಮ ಭಜನೆ ಮಾಡೋ ಮನುಜಾ
ರಾಮ ಭಜನೆ ಮಾಡೋ || ಅ.ಪ ||
ತಾಳವನು ಬಿಡಬೇಡ ಮೇಳವನು ಮರೆಬೇಡ
ತಾಳಮೇಳಗಳ ಬಿಟ್ಟು ನುಡಿದರೆ
ತಾಳನುನಮ್ಮ ಇಳಾಸುತೆಯರಸನು
ರಾಮ ಭಜನೆ ಮಾಡೋ ಮನುಜಾ
ರಾಮ ಭಜನೆ ಮಾಡೋ || ೧ ||
ಚಿತ್ತವನು ಚಲಿಸದಿರು ಭೃತ್ಯ ಮನೋಭಾವದಲಿ
ಸತ್ಯ ಜ್ಞಾನ ಅನಂತ ಬ್ರಹ್ಮನು
ಹೃದ್ಗತೆನೆಂದರಿಯುತ ಭಕುತಿಯಲಿ
ರಾಮ ಭಜನೆ ಮಾಡೋ ಮನುಜಾ
ರಾಮ ಭಜನೆ ಮಾಡೋ || ೨ ||
ಭಲರೆ ಭಲರೆಯೆಂದು ತಲೆದೂಗುವ ತೆರದಿ
ಕಲಿಯುಗದಿ ವರ ಕೀರ್ತನೆಯಿಂದಲಿ
ಸುಲಭದಿ ಹರಿಯ ಪ್ರಸನ್ನತೆ ಪಡೆಯಲು
ರಾಮ ಭಜನೆ ಮಾಡೋ ಮನುಜಾ
ರಾಮ ಭಜನೆ ಮಾಡೋ || ೩ ||
ಭಾವಾರ್ಥ :
ರಾಮನೆಂದು ಸುಸ್ವರದಲಿ ಪಾಡುತ :
ಶ್ರೀರಾಮನಾಮವನು ಅಂತಃ ಶುದ್ಧಿಯೊಳಗೊಂಡ ಸ್ವರದಲಿ ಹಾಡುತ
ತಾಳವನು ಬಿಡಬೇಡ
ಶ್ರೀರಾಮನು ನಮ್ಮೊಳು ಕೂತು ಹಾಕುವ ತಾಳ,
ಅಂದರೆ ಸನ್ಮಾರ್ಗದ ಸೂಚನೆಗಳೆಂಬ ತಾಳಕೆ ಹೆಜ್ಜೆಯ ಹಾಕುವುದನು ತ್ಯಜಿಸದಿರು
ಮೇಳವನು ಮರಿಬೇಡ
ಶ್ರೀರಾಮನು ತೋರಿದ ಸಜ್ಜನರ ಸಂಗವ ಮರೆಯದಿರು
ತಾಳ ಮೇಳಗಳ ಬಿಟ್ಟು ನುಡಿದರೆ
ತಾಳನು ನಮ್ಮಿಳಾಸುತೆಯರಸನು
ಶ್ರೀರಾಮನು ತೋರಿದ ಸನ್ಮಾರ್ಗ, ಸಜ್ಜನರ ಸಂಗಗಳನು ತೊರೆದು ನುಡಿದು ನಡೆದರೆ
ನಿನ್ನೊಳಗಿನ ಶ್ರೀರಾಮನೇ ಯಮನಾಗುವನು
ನಮ್ಮಿಳಾಸುತೆಯರಸನು = ನಮ್ಮ+ಇಳಾಸುತೆ+ಅರಸನು
ಇಳಾಸುತೆ = ಇಳೆಯ + ಸುತೆ
ಇಳೆ : ಭೂದೇವಿ, ಭೂಮಿ ತಾಯಿ
ಸುತೆ : ಮಗಳು
ಇಳಾಸುತೆ : ಸೀತಾಮಾತೆ
ಚಿತ್ತವನು ಚಲಿಸದಿರು ಭೃತ್ಯ ಮನೋಭಾವದಲಿ
” ಮನವೆಂಬುದು ಮರ್ಕಟದಂತೆ ”
ನಿನ್ನ ಚಿತ್ತ, ಅಂದರೆ ನಿನ್ನ ಮನವು ಮರ್ಕಟನ ಭಂಟನಾದರೆ,
ಎಲ್ಲಿಯ ಏಕಾಗ್ರತೆ, ಎಲ್ಲಿಯ ಸಾಧನೆ, ಎಲ್ಲಿಯ ಸಾರ್ಥಕತೆ.
ಮನದಿ ಸರ್ವೋತ್ತಮನಾದ ಶ್ರೀರಾಮನ ರೂಪವ ನೆಲೆಯಾಗಿಸಿ,
ಜೀವೋತ್ತಮನಾದ ವಾಯುದೇವನನು ಶ್ವಾಸ-ನಿಶ್ವಾಸದಿ ಗಮನಿಸಿ ಧ್ಯಾನಗೈದು ಏಕಾಗ್ರಚಿತ್ತನಾಗು
ಭೃತ್ಯ : ಭಂಟ
ಮರ್ಕಟ : ಕೋತಿ, ಮಂಗ : ಈ ಸಂದರ್ಭಕ್ಕೆ “ಚಂಚಲತೆ” ಎಂದರ್ಥ
ಸತ್ಯ ಜ್ಞಾನ ಅನಂತ ಬ್ರಹ್ಮನು
ಹೃದ್ಗತನೆಂದರಿಯುತ ಭಕುತಿಯಲಿ
ಹೃದ್ಗತ = ಹೃತ್ + ಗತ
ಹೃತ್ : ಹೃದಯ
ಗತ : ಒಳಗಿರುವ
ಹೃದ್ಗತ : ಹೃದಯದಲ್ಲಿ ನೆಲಸಿಹ
ಪರಮಸತ್ಯ ಜ್ಞಾನಸಾಗರ ಅನಂತಾನಂತ
ಸಕಲಲೋಕಾಧೀಶ ಶ್ರೀರಾಮನು
ನಮ್ಮೊಳಗಿನ ಹೃದಯವೆಂಬ ಗರ್ಭಗುಡಿಯಲಿ ನೆಲಸಿಹನು
ಎಂದರಿಯುತ, ಭಕ್ತಿಯಿಂದ ಅವನ ನಾಮಸ್ಮರಣೆ ಮಾಡು
ಭಲರೆ ಭಲರೆಯೆಂದು ತಲೆದೂಗುವ ತೆರದಿ
ಕಲಿಯುಗದಿ ವರ ಕೀರ್ತನೆಯಿಂದಲಿ
ಸುಲಭದಿ ಹರಿಯ ಪ್ರಸನ್ನತೆ ಪಡೆಯಲು
ಶ್ರೀರಾಮರ ಮಹಿಮೆಯನರಿತು, ಭಲೇ, ಧನ್ಯ, ಧನ್ಯೋಸ್ಮಿ
ಎಂದು ಮೈಮರೆತು ತಲೆದೂಗುತ, ಕಲಿಯುಗದಲಿ
ಹರಿದಾಸರ ಕೀರ್ತನೆಗಳನು ಅಂತಃಶುದ್ಧಿಯೊಳು ಪಾಡಿ,
ಪೊಗಳಿ ಶ್ರೀರಾಮರ ಕೃಪೆಯನು ಸುಲಭವಾಗಿ ಪಡೆದು
ಕೃತಾರ್ಥರಾಗಿ ಎಂದು ಶ್ರೀ ವಿದ್ಯಾಪ್ರಸನ್ನತೀರ್ಥರು ಸಂಬೋಧಿಸಿದ್ದಾರೆ.