ಸಾಹಿತ್ಯ : ದ.ರಾ.ಬೇಂದ್ರೆ
ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವ
ವಾರದಾಗ ಮೂರುಸರತಿ ಬಂದು ಹೋದಂವಾ ||ಪ.||
ಭಾರಿ ಜರದ ವಾರಿ ರುಮ್ಮಾಲ ಸುತ್ತಿಕೊಂಡಂವಾ
ತುಂಬ-ಮೀಸಿ ತೀಡಿಕೋತ ಹುಬ್ಬು ಹಾರಸಾಂವಾ
ಮಾತುಮಾತಿಗೆ ನಕ್ಕುನಗಿಸಿ ಆಡಿಸ್ಯಾಡಾಂವಾ
ಏನೋ ಅಂದರ ಏನೋ ಕಟ್ಟಿ ಹಾsಡಾ ಹಾಡಂವಾ ||೧||
ತಾಳೀಮಣಿಗೆ ಬ್ಯಾಳಿಮಣಿ ನಿನಗೆ ಬೇಕೇದಾಂವಾ
ಬಂಗಾರ-ಹುಡೀಲೇ ಭಂಡಾರನ ಬೆಳೆಸೇನಂದಾಂವಾ
ಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾ
ಜೋಗತೇರಿಗೆ ಮೂಗುತಿ ಅಂತ ನನsಗ ಅಂದಾಂವಾ ||೨||
ಇರು ಅಂದರ ಬರತೇನಂತ ಎದ್ದು ಹೊರಡಾಂವಾ
ಮಾರೀ ತೆಳಗ ಹಾಕಿತೆಂದರೆ ಇದ್ದು ಬಿಡಾಂವಾ
ಹಿಡಿ ಹೀಡೀಲೆ ರೊಕ್ಕಾ ತೆಗದು ಹಿಡಿ ಹಿಡಿ ಅನ್ನಾಂವಾ
ಖರೆ ಅಂತ ಕೈಮಾಡಿದರ ಹಿಡs; ಬಿಡಾಂವಾ ||೩||
ಚಾಹಾದ ಜೋಡಿ ಚೂಡಾಧಾಂಗ ನೀ ನನಗಂದಾಂವಾ
ಚೌಡಿಯಲ್ಲ ನೀ ಚೂಡಾಮಣಿಯಂತ ರಮಿsಸ ಬಂದಾಂವಾ
ಬೆರಳಿಗುಂಗುರಾ ಮೂಗಿನಾಗ ಮೂಗುಬಟ್ಟಿಟ್ಟಾಂವಾ
ಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾಂವಾ ||೪||
ಹುಟ್ಟಾಯಾಂವಾ ನಗಿಕ್ಯಾದಿಗೀ ಮೂಡಸಿಕೊಂದಾಂವಾ
ಕಂಡ ಹೆಣ್ಣಿಲೆ ಪ್ರೀತಿ ವೀಳ್ಯ ಮಡಿಚಿಕೊಂದಾಂವಾ
ಜಲ್ಮಕ ಜಲ್ಮಕ ಗೆಣ್ಯಾ ಆಗಿ ಬರತೇನೆಂದಾಂವಾ
ಎದಿಮ್ಯಾಗಿನ ಗೆಣತಿನ ಮಾಡಿ ಇಟ್ಟಕೊಂಡಾಂವಾ ||೫||
ಸೆಟ್ಟರ ಹುಡುಗ ಸೆಟಗೊಂಢೋದಾ ಅಂತ ನನ್ನ ಜೀಂವಾ
ಹಾದೀಬೀದಿ ಹುಡುಕುತೈತ್ರೆ ಬಿಟ್ಟ ಎಲ್ಲ ಹ್ಯಾಂವಾ
ಎಲ್ಲೀ! ಮಲ್ಲೀ! ಪಾರೀ! ತಾರೀ! ನೋಡೀರೇನವ್ವಾ
ನಿಂಗೀ! ಸಂಗೀ! ಸಾವಂತರೀ! ಎಲ್ಲಾನ ನನ್ನಾಂವಾ ||೬||