ಪೆರ್ಡೂರು – ಇದು ಪುಣ್ಯಭೂಮಿ. ಹುಲಿ-ಹಸು ಎಂದಿನ ವೈರ ಮರೆತು ಜತೆಯಾಗಿದ್ದ ನಿರ್ವೈರ ಸ್ಥಳವಿದು. ಹಿಂಡಿನಲ್ಲಿ ಕಾಣದಾಗಿದ್ದ ಹಸುವನ್ನು ಹುಡುಕುತ್ತಾ ಬಂದ ಯುವಕನೋರ್ವ ಹುತ್ತಕ್ಕೆ ಹಾಲು ಸುರಿಸುತ್ತಾ ನಿಂತಿದ್ದ ಕಪಿಲೆ ಹಸುವನ್ನು ಕಂಡು ಸಂತೋಷಾತಿರೇಕದಿಂದ ‘ಪೇರ್ ಉಂಡು, ಪೇರ್ ಉಂಡು’ (ಹಾಲಿದೆ, ಹಾಲಿದೆ) ಎಂದು ಕೂಗಿದ ತಾಣವಿದು. ಹುತ್ತವಿದ್ದ ಜಾಗದಲ್ಲಿಯೆ ಅನಂತಪದ್ಮನಾಭ ಸ್ವಾಮಿಯ ಪ್ರತಿಷ್ಠೆಯಾಗಿ ಭಕ್ತಜನರಿಂದ ನಿತ್ಯಪೂಜೆಗೊಳ್ಳುತ್ತಿರುವ ದಿವ್ಯಕ್ಷೇತ್ರವಿದು.
ಹುತ್ತದೊಳಗಿಂದ ಹುಟ್ಟಿ ಅಂದರೆ ಅನಂತದಿಂದ ಆವಿರ್ಭವಿಸಿ ಅನಂತಪದ್ಮನಾಭನೆಂದು ಕರೆಸಿಕೊಂಡು ಪ್ರಕೃತಿಯ ಎಲ್ಲ ಶಕ್ತಿಯನ್ನೂ ಮೈಗೂಡಿಸಿಕೊಂಡ ಈ ಸ್ವಾಮಿ ಪ್ರತೀ ತಿಂಗಳು ಸಂಕ್ರಮಣದ ಪರ್ವದಿನದಂದು ವಿಶೇಷವಾಗಿ ಪೂಜೆಗೊಳ್ಳುತ್ತಿದ್ದಾನೆ.
ಉಡುಪಿ ಜಿಲ್ಲೆಯ ಉಡುಪಿ ತಾಲೂಕಿನಲ್ಲಿದೆ ಪೆರ್ಡೂರು ಗ್ರಾಮ. ಶ್ರೀಕ್ಷೇತ್ರಸ್ವಾಮಿ ಅನಂತಪದ್ಮನಾಭ ದೇವಸ್ಥಾನದಿಂದಾಗಿಯೇ ಈ ಊರು ಅಂದೂ-ಇಂದೂ ನಾಡಿನ ಜನರಿಗೆ ಚಿರಪರಿಚಿತವಾಗಿರುವುದು. ಪೂರ್ವದಲ್ಲಿ ಸಹ್ಯಾದ್ರಿಯ ಪರ್ವತಶ್ರೇಣಿ, ದಕ್ಷಿಣದಲ್ಲಿ ಸುವರ್ಣ ನದಿ, ಪಶ್ಚಿಮದಲ್ಲಿ ಮಡಿಸಾಲು ನದಿ, ಉತ್ತರದಲ್ಲಿ ಸೀತಾನದಿಯೇ ಮೇರೆಯಾಗಿರುವ ಶ್ರೀಕ್ಷೇತ್ರ ಒಂದು ಕಾಲದಲ್ಲಿ ವ್ಯಾಪಾರಕೇಂದ್ರವೂ ಆಗಿತ್ತು. ಶಿವಮೊಗ್ಗ – ತೀರ್ಥಹಳ್ಳಿ ಪಟ್ಟಣಗಳನ್ನು ಹಾದು ಆಗುಂಬೆ ಘಾಟಿ ಇಳಿದು ಬಂದಾಗ ಸಿಗುತ್ತಿದ್ದ ದೊಡ್ಡ ಪಟ್ಟಣ ಪೆರ್ಡೂರು. ಹಾಗೆಯೇ ಈ ಕಡೆಯಿಂದ ಉಡುಪಿ ಪಟ್ಟಣ ದಾಟಿದರೆ ಬಳಿಕ ಪೆರ್ಡೂರೇ ದೊಡ್ಡ ಪಟ್ಟಣವೆನಿಸಿತ್ತು. ಸೇತುವೆಗಳಿಲ್ಲದ ಆ ಕಾಲದಲ್ಲಿ ಮೂರು ಕಡೆಯೂ ಶ್ರೀಕ್ಷೇತ್ರವನ್ನು ನದಿಗಳೇ ಸುತ್ತುವರಿದಿದ್ದರಿಂದ ಆಸುಪಾಸಿನ ಗ್ರಾಮದವರೆಲ್ಲ ದೋಣಿಯಲ್ಲಿಯೇ ಈ ಪಟ್ಟಣಕ್ಕೆ ಬರುತ್ತಿದ್ದರು. ವಾರದ ಸಂತೆಗಳೇ ಇರದಿದ್ದ ಆ ಕಾಲದಲ್ಲಿ ಪೆರ್ಡೂರಿನಲ್ಲಿ ತಿಂಗಳಿಗೊಂದು ಸಂಕ್ರಮಣ ಉತ್ಸವ ಜರಗುತ್ತಿತ್ತು. ಮಾರುವ-ಕೊಳ್ಳುವ ಜನರಿಂದ ಗಿಜಿಗಿಜಿಗುಟ್ಟುತ್ತಿತ್ತು. ಪರಿಸರದ ಹಳ್ಳಿ ಜನರೆಲ್ಲ ಅಂದು ದೇವರ ದರ್ಶನದೊಂದಿಗೆ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಿದ್ದರು. ವೃಷಭ ಸಂಕ್ರಮಣದಂದು ಮಳೆಗಾಲದ ಎಲ್ಲ ಅವಶ್ಯಕತೆಗಳನ್ನೂ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಪ್ರಾಕೃತಿಕ ವಿಶೇಷಗಳಿಂದ, ಶ್ರೀಸ್ವಾಮಿಯ ದಿವ್ಯ ಸಾನ್ನಿಧ್ಯದಿಂದ ಶ್ರೀಕ್ಷೇತ್ರ ಧಾರ್ಮಿಕ – ವ್ಯಾಪಾರ ಕೇಂದ್ರವಾಗಿಯೂ ಬೆಳೆದಿತ್ತು.
ಉಡುಪಿಯಿಂದ 20 ಕಿ.ಮೀ. ದೂರದಲ್ಲಿ ಆಗುಂಬೆಗೆ ಹೋಗುವ ರಾಜ್ಯ ರಸ್ತೆಯಲ್ಲಿ ಹಾಗೆಯೇ ಆಗುಂಬೆಯಿಂದ 32 ಕಿ.ಮೀ. ದೂರದಲ್ಲಿ ಉಡುಪಿಗೆ ಹೋಗುವ ದಾರಿಯಲ್ಲಿ ಸಿಗುತ್ತದೆ ಈ ಪುಣ್ಯಕ್ಷೇತ್ರ ಪೆರ್ಡೂರು. ಉಡುಪಿ ತಾಲೂಕಿನಲ್ಲಿ ಗಾತ್ರದಲ್ಲಿ ಅತೀ ದೊಡ್ಡ ಗ್ರಾಮವಾದ ಪೆರ್ಡೂರು ಬ್ರಹ್ಮಾವರ ವಿಧಾನಸಭಾ ಚುನಾವಣಾ ಕ್ಷೇತ್ರಕ್ಕೂ ಉಡುಪಿ ಲೋಕಸಭಾ ಚುನಾವಣಾ ಕ್ಷೇತ್ರಕ್ಕೂ ಸೇರಿದ ಗ್ರಾಮ.
ಉಡುಪಿ – ಮಣಿಪಾಲ – ಹಿರಿಯಡ್ಕ – ಪೆರ್ಡೂರು – ಹೆಬ್ರಿ ; ಶಿವಮೊಗ್ಗ – ಆಗುಂಬೆ – ಹೆಬ್ರಿ – ಪೆರ್ಡೂರು – ಉಡುಪಿ ; ಅಜೆಕಾರು – ದೊಂಡೇರಂಗಡಿ – ಹರಿಖಂಡಿಗೆ – ಪೆರ್ಡೂರು ; ಉಡುಪಿ – ಕಲ್ಯಾಣಪುರ ಸಂತೆಕಟ್ಟೆ – ಕೊಳಲಗಿರಿ – ಹಾವಂಜೆ – ಕುಕ್ಕೆಹಳ್ಳಿ – ಪೆರ್ಡೂರು – ಹೀಗೆ ನಾಲ್ಕು ಮಾರ್ಗಗಳಲ್ಲೂ ಬಸ್ಸುಗಳು ಓಡಾಡುತ್ತಿದ್ದು ಇಲ್ಲಿಗೆ ಉತ್ತಮ ವಾಹನ ಸಂಪರ್ಕ ಸೌಲಭ್ಯವಿದೆ.