ಶ್ರೀ ವಿಷ್ಣುಮೂರ್ತಿ ದೇವಸ್ಥಾನ – ಆರೂರು

0Shares

ಶ್ರೀ ವಿಷ್ಣುಮೂರ್ತಿ ದೇವಸ್ಥಾನವು ಉಡುಪಿ ಜಿಲ್ಲೆಯ ಅರೂರು ಎಂಬ ಗ್ರಾಮದಲ್ಲಿದೆ. ಉಡುಪಿಯಲ್ಲಿರುವ ಪ್ರಮುಖ ದೇವಾಲಯಗಳಲ್ಲಿ ಈ ದೇವಾಲಯವು ಒಂದು. ಈ  ದೇವಾಲಯವು ಉಡುಪಿಯಿಂದ 16 km ಹಾಗೂ ಬ್ರಹ್ಮಾವರದಿಂದ 6 km ದೂರದಲ್ಲಿದೆ.

ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಆರೂರು

ದೇವಳದ ಪೌರಾಣಿಕ ಹಾಗೂ ಚಾರಿತ್ರಿಕ ಹಿನ್ನಲೆ:

ಆರೂರು ಎಂಬ (ತುಳುಭಾಷೆಯಲ್ಲಿ ಆಜೂರು) ಈ ಪುಟ್ಟ ಗ್ರಾಮದಲ್ಲಿ ಶ್ರೀ ಮಹಾವಿಷ್ಣುವು ಪ್ರತಿಷ್ಠೆಗೊಂಡು ಸುಮಾರು ಸಾವಿರ ವರ್ಷಗಳೇ ಸಂದಿವೆ ಎಂಬುದು ಇತಿಹಾಸಜ್ಞರ ಮತ ! ಹಿಂದೆ ಇದು ಕಾನನಗಳೇ ದಟ್ಟವಾಗಿದ್ದು ವನ್ಯ ಪ್ರಾಣಿಗಳಿಂದ ತುಂಬಿದ ಭೂಭಾಗವಾಗಿತ್ತು. ಜನವಸತಿ ಇಲ್ಲಿ ತೀರಾ ವಿರಳವಾಗಿತ್ತು. ಕೆಲವೇ ಕುಟುಂಬ ಮನೆತನಗಳಷ್ಟೇ ಇದ್ದು ಕೆಲಭಾಗಗಳಲ್ಲಿ ಜೈನಕುಟುಂಬಗಳು ನೆಲೆಸಿದ್ದವು ಎಂಬುದಕ್ಕೆ ಆಧಾರವಿದೆ. ಯಾವುದೇ ಶಾಸನ ಬರಹಗಳ ಉಪಲಬ್ಧಿ ಇಲ್ಲದಿದ್ದರೂ ತಲೆತಲಾಂತರವಾಗಿ ಬಂದ ಮೌಖಿಕ ಸಂದೇಶಗಳೇ ಆಧಾರವೆನಿಸುತ್ತವೆ. ದೇವಳದಲ್ಲಿ ಬಿಂಬ ಪ್ರತಿಷ್ಠೆಯು ಮಹರ್ಷಿ ಗಾಲವ ಮುನಿಗಳಿಂದ ನಡೆದಿತ್ತೆಂಬುದು ಪುರಾಣೇತಿಹಾಸಜ್ಞರ ಅಭಿಮತ. ಇದಕ್ಕೆ ಪುಷ್ಠಿಕೊಡುವಂತೆ ಆರೂರಿನ ಪಕ್ಕದಲ್ಲಿರುವ ನೀಲಾವರ ಶ್ರೀ ಮಹಿಷಮರ್ದಿನಿ ದೇವಿಯ ಪ್ರತಿಷ್ಠಾಪನೆಯೂ ಶ್ರೀ ಗಾಲವ ಮಹರ್ಷಿಗಳಿಂದ ನಡೆದಿತ್ತು ಎಂಬುದು ಜನಜನಿತವಾದ ವಿಚಾರ. ಶಾಪಾನುಗ್ರಹ ಸಮರ್ಥರಾಗಿದ್ದ ಶ್ರೀ ಗಾಲವ ಮುನಿಗಳು ಸಾಮಾನ್ಯ ಋಷಿಗಳಲ್ಲ ! ಮುಂಬರುವ ಎಂಟನೇ ಮನ್ವಂತರದಲ್ಲಿ ಸಾವರ್ಣ ಎಂಬವರು ಮನುವಾಗಿರುವಾಗ ಸಪ್ತರ್ಷಿಗಳಲ್ಲಿ ಈ ಗಾಲವರೂ ಒಬ್ಬರಾಗುವರು ಎಂಬುದು ಭಾರತೀಯ ವಿಚಾರಧಾರೆಯಲ್ಲಿ ಶ್ರೀ ಮದ್ಭಾಗವತವನ್ನು ಉಲ್ಲೇಖಿಸಿ ಪ್ರಸ್ತಾಪಿಸಲ್ಪಟ್ಟಿದೆ. ಮುಂದಕ್ಕೆ ಈ ದೇವಳವು ಪ್ರಖ್ಯಾತಿಗೆ ಬಂದಂತೆ ಈ ಆರೂರಿಗೆ ಪೂಜಾ ಕೈಂಕರ್ಯಕ್ಕಾಗಿ ಉಡುಪಿ ತಾಲೂಕಿಗೆ ಸೇರಿದ ಸೀಮಂತೂರು ಎಂಬಲ್ಲಿಂದ ಭಾಗವತ ಸಂಪ್ರದಾಯಕ್ಕೆ ಸೇರಿದ ಬ್ರಾಹ್ಮಣ ಕುಟುಂಬಗಳು ಬಂದು ನೆಲೆಸಿದವು. ದ್ವೈತ ಮತ ಪ್ರವರ್ತಕರಾದ ಶ್ರೀ ಮನ್ಮಧ್ವಾಚಾರ್ಯರೂ ಈ ಪ್ರದೇಶಕ್ಕೆ ಭೇಟಿ ನೀಡಿರಬಹುದೆಂಬುದಕ್ಕೆ ಕುರುಹಾಗಿ ಈ ಭಾಗಗಳಲ್ಲಿ ವಿರಳವಾಗಿಯೇ ಆಚರಿಸಲ್ಪಡುವ ಮಧ್ವಾಚಾರ್ಯರ ಪುಣ್ಯದಿನವಾದ ಮಧ್ವ ನವಮಿ ಉತ್ಸವವು ಈಗಲೂ ಈ ದೇವಳದಲ್ಲಿ ಆಚರಣೆಯಲ್ಲಿದೆ. ಯತಿಗಳೂ, ಮಠಾಧೀಶರುಗಳು, ಸಾಧುಸಂತರು ನಿರಂತರವಾಗಿ ಅನೇಕ ಸಂದರ್ಭಗಳಲ್ಲಿ, ಇಲ್ಲಿಗೆ ಭೇಟಿನೀಡಿ ಭಕ್ತಜನರನ್ನು ಆಶೀರ್ವದಿಸುವ ಸಂಪ್ರದಾಯವಿದೆ.

ಮುಂಭಾಗ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಆರೂರು

ಮುಂಭಾಗ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಆರೂರು

ಒಳಾಂಗಳ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಆರೂರು

ಒಳಾಂಗಳ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಆರೂರು

ಉತ್ಸವಗಳು:

ಯುಗಾದಿ ಹಬ್ಬ:

ಸೌರಯುಗಾದಿಯಂದು ಸಾಯಂಕಾಲ 4 ಗಂಟೆಗೆ ಪಂಚಾಂಗ ಶ್ರವಣ, ವಸಂತ ಪೂಜೆ

See also  ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

ವರ್ಷಾವಧಿ ರಥೋತ್ಸವ:

ಉತ್ಸವ ರಥ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಆರೂರು

ಉತ್ಸವ ರಥ

ಉತ್ಸವ ಮೂರ್ತಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಆರೂರು

ಉತ್ಸವ ಮೂರ್ತಿ

ವೈಶಾಖ ಶು.2 ರಂಗಪೂಜೆ : ಮುಹೂರ್ತ ಬಲಿ
ವೈಶಾಖ ಶು.3 (ಅಕ್ಷಯ ತದಿಗೆ) ಧ್ವಜಾರೋಹಣ: ರಂಗಪೂಜೆ, ಸಂತರ್ಪಣೆ
ವೈಶಾಖ ಶು.4 ಮಹಾರಂಗ ಪೂಜೆ, ಸಂತರ್ಪಣೆ
ವೈಶಾಖ ಶು.5 ರಥಾರೋಹಣ, ಶ್ರೀ ಮನ್ಮಹಾರಥೋತ್ಸವ, ಸಂತರ್ಪಣೆ
ವೈಶಾಖ ಶು.6 ಕವಾಟೋದ್ಘಾಟನೆ, ತುಲಾಭಾರ, ಸೇವೆಗಳು, ಅವಭೃತ ಸ್ನಾನ, ಕಟ್ಟೆಪೂಜೆ
ವೈಶಾಖ ಶು.7 ಸಂಪ್ರೋಕ್ಷಣೆ, ರಾತ್ರಿ ಮಾರಿ ಪೂಜೆ

ಜೇಷ್ಠ ಶುದ್ಧ 15:

ರಾತ್ರಿ ಉತ್ಸವ ಬಲಿ

ಸಿಂಹ ಸಂಕ್ರಮಣ ಸೋಣೇ ಆರ್ತಿ:

ಉತ್ಸವ ಬಲಿ

ದೀಪಾವಳಿ ಹಬ್ಬ:

ಬಲೀಂದ್ರ ಪೂಜೆ

ಕಾರ್ತಿಕ ಬಹುಳ 13:

ತುಳಸೀ ಪೂಜೆ : ದೀಪೋತ್ಸವ : ಕೆರೆದೀಪ

ಸೇವೆ ಆಟ:

ಮಂದಾರ್ತಿ ಮೇಳ ಹೊರಟ 2ನೇ ದಿನ

ಪುನಃ ಪ್ರತಿಷ್ಠಾವರ್ಧಂತಿ:

ರಂಗಪೂಜೆ, ಮಾಘ ಶು|| ಪಂಚಮಿ

ರಥ ಸಪ್ತಮಿ:

ರಂಗಪೂಜೆ, ಸಣ್ಣ ರಥೋತ್ಸವ

ಮಧ್ವನವಮಿ ಮಹಾರಂಗಪೂಜೆ:

ಸಣ್ಣ ರಥೋತ್ಸವ

ನಾಗಮಂಡಲೋತ್ಸವ ದಿನ:

ವಟು ಬ್ರಾಹ್ಮಣ ಸುಹಾಸಿನೀ ಆರಾಧನೆ

ರಾಶಿ ಪೂಜಾ ವರ್ಧಂತಿ:

ರಂಗ ಪೂಜೆ

ಮಾರಿ ಪೂಜೆಗಳು:

1. ಮೇಷ : ಉತ್ಸವಾ ನಂತರ ಸಂಪ್ರೋಕ್ಷಣೆ ದಿನ
2. ಕರ್ಕಾಟಕ : ಪ್ರಥಮ ಮಂಗಳವಾರ
3. ವೃಶ್ಚಿಕ – ದೀಪೋತ್ಸವ ನಂತರ ಮಂಗಳವಾರ
(ನಿಷಿದ್ಧ ದಿನ ಬಂದರೆ ನಂತರದ ದಿನ)

ಶಿವರಾತ್ರಿ ಭಜನೆ:

ಭಜನಾ ಮಂಡಳಿ ವತಿಯಿಂದ

ದೇವಾಲಯದ ಸಮಯ:

ಸೋಮವಾರದಿಂದ ರವಿವಾರದವರೆಗೆ

ಬೆಳಿಗ್ಗೆ 5.30 ರಿಂದ – ಮಧ್ಯಾಹ್ನ 12.30 ರವರೆಗೆ

ಸಂಜೆ 5:00 ರಿಂದ –  ರಾತ್ರಿ 7:30 ರವರೆಗೆ

0Shares

Leave a Reply

error: Content is protected !!