ಶ್ರೀ ಅನಂತೇಶ್ವರ ದೇವಸ್ಥಾನ – ಉಡುಪಿ

17Shares

ಶ್ರೀ ಅನಂತೇಶ್ವರ ದೇವಸ್ಥಾನದ ಇತಿಹಾಸ

ಉಡುಪಿ ಶ್ರೀ ಅನಂತೇಶ್ವರ ದೇವಸ್ಥಾನವು ತುಳುನಾಡು ಸೃಷ್ಟಿಕರ್ತರಾದ ಪರಶುರಾಮ ದೇವರಿಗೆ(ವಿಷ್ಣುವಿನ ಅವತಾರ) ಅರ್ಪಿತವಾದ ಐತಿಹಾಸಿಕ ಹಿಂದೂ ದೇವಾಲಯವಾಗಿದೆ. ಈ ದೇವಾಲಯವು ಪರಶುರಾಮ ದೇವರನ್ನು ಲಿಂಗ ರೂಪದಲ್ಲಿ ಪೂಜಿಸುವ ವಿಶಿಷ್ಟ ದೇವಾಲಯವಾಗಿದೆ.

ಶ್ರೀ ಅನಂತೇಶ್ವರ ಪರಶುರಾಮ ದೇವರು ಉಡುಪಿ

ಈ ದೇವಾಲಯವು ತುಳುನಾಡು ಪ್ರದೇಶದಲ್ಲಿ ಅತ್ಯಂತ ಹಳೆಯದಾಗಿದೆ. ಈ ದೇವಸ್ಥಾನವು ಉಡುಪಿ ಶ್ರೀಕೃಷ್ಣ ಮಠಕ್ಕೆ ಸಮೀಪದಲ್ಲಿದೆ ಮತ್ತು ಚಂದ್ರಮೌಳೀಶ್ವರ ದೇವಸ್ಥಾನದ ಪಕ್ಕದಲ್ಲಿದೆ. ಒಂದು ದಂತಕಥೆಯ ಪ್ರಕಾರ, ಪಾಂಡವರ ವನವಾಸದ ಸಮಯದಲ್ಲಿ ಪಾಂಡವರು ರಾತ್ರಿಯಿಡೀ ಈ ದೇವಾಲಯವನ್ನು ನಿರ್ಮಿಸಿದರು. ಬೃಹತ್ ಗ್ರಾನೈಟ್ ಕಲ್ಲಿನ ಚಪ್ಪಡಿಗಳು ಮುಖ್ಯ ದೇವಾಲಯದ ಮೇಲ್ಛಾವಣಿಯನ್ನು ರೂಪಿಸುತ್ತವೆ ಮತ್ತು ಸುಣ್ಣದ ಪ್ಲಾಸ್ಟರ್ ಅನ್ನು ಹೊಂದಿದೆ.

ಶ್ರೀ ಅನಂತೇಶ್ವರ ದೇವಸ್ಥಾನ ಉಡುಪಿ

ಈ ದೇವಾಲಯವು ಈ ಗ್ರಾಮಕ್ಕೆ ಶಿವಳ್ಳಿ ಎಂದು ಹೆಸರು ಬರಲು ಕಾರಣವಾಯಿತು. ಈ ದೇವಾಲಯವನ್ನು ಕೇಂದ್ರವಾಗಿಸಿ ನೆಲೆಗೊಂಡ ಬ್ರಾಹ್ಮಣ ಸಮುದಾಯವೆ “ಶಿವಳ್ಳಿ ಬ್ರಾಹ್ಮಣರು” ಎಂದು ಪ್ರಸಿದ್ಧರಾದರು.

ಶಿವಳ್ಳಿಯ ಮೂಲರೂಪ “ಶಿವಹಳ್ಳಿ” ಎಂದು ಕೆಲವರ ಅಭಿಪ್ರಾಯ. ಪ್ರಾಚೀನ ಗ್ರಂಥಗಳಲ್ಲಿ ಇದನ್ನು “ಶಿವಬೆಳ್ಳಿ” ಎಂದು ಕರೆದಿದ್ದಾರೆ. ಈ ಮಾತೇ ಸಂಸ್ಕೃತದಲ್ಲಿ “ರೂಪ್ಯಪೀಠ”, “ರಜತಪೀಠ” ಎಂದೆಲ್ಲ ಪ್ರಸಿದ್ಧವಾಯಿತು. ಹೀಗೆ ಈ ದೇವಾಲಯದಿಂದ ಉಡುಪಿಗೆ ರೂಪ್ಯಪೀಠಪುರ ಎಂದು ಹೆಸರು ಬಂದದ್ದು.

ಆಚಾರ್ಯ ಮಧ್ವರ ತಂದೆ ಈ ದೇವಸ್ಥಾನದ ಅರ್ಚಕರಾಗಿದ್ದರು ಎಂದು ಐತಿಯ್ಯ. ಅವರು ಇಲ್ಲಿಂದ ಪಾಜಕಕ್ಕೆ ಹೋಗಿ ನೆಲೆಸಿದಾಗ ಈ ಅಧಿದೈವತದ ನೆನಪಿಗಾಗಿ ಒಂದು ಅನಂತ ಪದ್ಮನಾಭನ ಪ್ರತೀಕವನ್ನು ತಮ್ಮ ಉಪಾಸ್ಯಮೂರ್ತಿಯಾಗಿ ಪಾಜಕದಲ್ಲಿ ತಂದಿಟ್ಟುಕೊಂಡರು. ಆ ವಿಗ್ರಹ ಈಗಲೂ ಅಲ್ಲಿ ಪೂಜೆಗೊಳ್ಳುತ್ತಿದೆ. ಆಚಾರ್ಯರ ಪೂರ್ವದಲ್ಲೆ ಅಲ್ಲಿ ವಿಷ್ಣುವಿನ ಆರಾಧನೆ ನಡೆಯುತ್ತಿತ್ತು ಎನ್ನುವುದಕ್ಕೆ ಇದೂ ಒಂದು ಸಾಕ್ಷಿ. ಈ ಅಧಿದೈವತದ ಸೇವೆಯನ್ನು ನಡಿಲ್ಲಾಯ ದಂಪತಿಗಳು ಹರಕೆಹೊತ್ತು ನಡೆಸಿದ ಫಲವಾಗಿಯೆ ಆಚಾರ್ಯ ಮಧ್ವರ ಅವತಾರವಾಯಿತು ಎಂದು “ಮಧ್ವವಿಜಯ” ಹೇಳುತ್ತದೆ.

ಈ ದೇವಾಲಯದ ಪ್ರಾಚೀನ ಹೆಸರು ಪಡು ದೇವಾಲಯ. ಪಡು ದೇವಾಲಯದ ಮಹಾದೇವರು ಎಂದು ಪ್ರಾಚೀನ ಶಾಸನಗಳಲ್ಲಿ ಉಲ್ಲೇಖ ಉಂಟು. ಅದರ ಪೂರ್ವದಲ್ಲಿರುವ ಚಂದ್ರೇಶ್ವರನ ಮಂದಿರವೇ ಮೂಡು ದೇವಾಲಯ.

ಆಚಾರ್ಯ ಮಧ್ವರು ತನ್ನ ಶಿಷ್ಯರಿಗೆ ಪ್ರವಚನ ನಡೆಸುತ್ತಿದ್ದದ್ದು ಈ ದೇವಾಲಯದ ಒಳ ಆವರಣದಲ್ಲಿ. ಆಚಾರ್ಯರು ಇಲ್ಲಿ ಐತರೇಯ ಪ್ರವಚನ ಮಾಡುತ್ತಿದ್ದಾಗ ಮುಗಿಲಿನಿಂದ ಪುಷ್ಪವೃಷ್ಟಿಯಾದ ಪ್ರಸಂಗವನ್ನೂ ಮಧ್ವವಿಜಯ ಉಲ್ಲೇಖಿಸುತ್ತದೆ. ಆಚಾರ್ಯರು ಪ್ರವಚನ ಮಾಡುವಾಗ ಕೂಡುತ್ತಿದ್ದ ಶಿಲಾಫಲಕ ಈಗಲೂ ಅಲ್ಲಿ ಪೂಜೆಗೊಳ್ಳುತ್ತಿದೆ. ಆ ಫಲಕದ ಮೇಲೆ ಬೇರೆ ವಿಗ್ರಹವಿಲ್ಲ. ಶಿಲಾಫಲಕಕ್ಕೆ ಪೂಜೆ. ಅದರಲ್ಲಿ ಆಚಾರ್ಯ ಮಧ್ವರು ಸದಾ ಸನ್ನಿಹಿತರಾಗಿದ್ದಾರೆ ಎಂದು ಶ್ರೀ ವಾದಿರಾಜರು ಬಣ್ಣಿಸಿದ್ದಾರೆ. ಈ ದೇವಾಲಯದ ವಾಸ್ತುವೂ ಇದರ ಪ್ರಾಚೀನತೆಗೆ ಸಾಕ್ಷಿ. ಗಜಪೃಷ್ಠಾಕಾರದ ಗರ್ಭ ಗೃಹ ಇದರ ಪುರಾತನತೆಯನ್ನು ಸಾರುತ್ತದೆ.

See also  ಕುರುಕ್ಷೇತ್ರ ಯುದ್ಧ ಸ್ಥಳ ಮತ್ತು ಸೈನ್ಯದ ವಿವರ
17Shares

Leave a Reply

error: Content is protected !!