ರಥಸಪ್ತಮಿ ಮಹತ್ವ ಮತ್ತು ಆಚರಣೆ

15Shares

ಮಾಘಮಾಸ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಸೂರ್ಯನ ಜನ್ಮದಿನ. ಅಲ್ಲದೆ ಸಪ್ತಮಿ ತಿಥಿಯ ಅದಿದೇವತೆಯು ಸೂರ್ಯನೇ ಆಗಿರುವುದರಿಂದ ಈ ದಿನವನ್ನು ಸೂರ್ಯ ಆರಾಧನೆಯ ರಥಸಪ್ತಮಿ ದಿನವೆಂದು ಆಚರಿಸಲಾಗುತ್ತದೆ. ಸೂರ್ಯನು ಉತ್ತರಾಯಣನಾಗಿ ಸಪ್ತಾಶ್ವಗಳ ರಥವನ್ನೇರಿ, ಉತ್ತರದಿಕ್ಕಿನ ಮಾರ್ಗದಲ್ಲಿ ಹೊರಡುವ ಪರ್ವಕಾಲವೇ ಈ ರಥಸಪ್ತಮಿ. ಅವನ ರಥದ ಸಾರಥಿ ಅರುಣ. ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿಯನ್ನು ರಥಸಪ್ತಮಿ ಅಥವಾ ಅಚಲಸಪ್ತಮಿ ಎಂದು ಕರೆಯಲಾಗುತ್ತದೆ.  ಪುರಾಣಗಳ ಪ್ರಕಾರ ಸೂರ್ಯನಿಗೆ ಇಬ್ಬರು ಪತ್ನಿಯರು – ಸಂಜನಾ ಮತ್ತು ಛಾಯಾ. ಅವನ ಮಕ್ಕಳಲ್ಲಿ ಪ್ರಮುಖರೆಂದರೆ, ಮನು, ನವಗ್ರಹಗಳಲ್ಲಿ ಶನಿ ಹಾಗೂ ಅಷ್ಟದಿಕ್ಪಾಲಕರಲ್ಲಿ ಯಮ, ಯಮುನಾ, ಕರ್ಣ, ಸುಗ್ರೀವ ಇತ್ಯಾದಿ. ಶ್ರೀ ರಾಮನು ಸೂರ್ಯನ ವಂಶಸ್ತನು.

ರಥಸಪ್ತಮಿ ಮಹತ್ವ ಆಚರಣೆ

ಸೂರ್ಯನ ರಥದ ಏಳು ಕುದುರೆಗಳು:

  1. ಗಾಯತ್ರಿ
  2. ಬೃಹತೀ
  3. ಉಷ್ಣಿಕ್
  4. ಜಗತೀ
  5. ತ್ರಿಷ್ಟುಪ್
  6. ಅನುಷ್ಟುಪ್
  7. ಪಂಕ್ತಿ

ಪೌರಾಣಿಕ ಹಿನ್ನೆಲೆ:

  1. ದ್ವಾಪರಯುಗದಲ್ಲಿ ಶ್ರೀ ಕೃಷ್ಣನು ಧರ್ಮರಾಜನಿಗೆ ರಥಸಪ್ತಮಿ ಬಗ್ಗೆ ಹೇಳಿದ ಕಥೆಯಿದೆ. ಯಶೋವರ್ಮನೆಂಬ ರಾಜನಿಗೆ ಹುಟ್ಟಿದ ಮಗನು ಹುಟ್ಟಿನಿಂದಲೇ ರೋಗಿಷ್ಠನಾಗಿದ್ದ. ಈ ಬಗ್ಗೆ ಜ್ಯೋತಿಷಿಗಳಿಂದ ವಿವರ ಪಡೆದು ಸಂಚಿತ ಕರ್ಮದಿಂದ ಬಂದಿರುವ ಈ ಖಾಯಿಲೆಗೆ ರಥಸಪ್ತಮಿ ವ್ರತ ಆಚರಿಸಲು ಹೇಳಿದ್ದರು. ಅದರಂತೆ ರಥಸಪ್ತಮಿಯ ದಿನ ಸೂರ್ಯಾರಾಧನೆ ಮಾಡಲಾಗಿ ರಾಜಪುತ್ರನು ಆರೋಗ್ಯವಂತನೂ, ಪ್ರಭಾವಶಾಲಿಯು ಆದನು.
  2. ಪಾಂಡವರು ವನವಾಸದ ಅವಧಿಯಲ್ಲಿ ಶ್ರೀಕೃಷ್ಣನ ಆದೇಶದಂತೆ ಸೂರ್ಯಾರಾಧನೆ ಮಾಡಿ ಆತನಿಂದ “ಅಕ್ಷಯ ಪಾತ್ರೆ” ಪಡೆದಿದ್ದರು .
  3. ಶ್ರೀ ರಾಮಚಂದ್ರ ರಾವಣನ ವಿರುದ್ಧ ಯುದ್ಧ ಪೂರ್ವದಲ್ಲಿ ಅಗಸ್ತ್ಯರಿಂದ ಉಪದೇಶ ಪಡೆದು ಆದಿತ್ಯ ಹೃದಯ ಮೂಲಕ ಸೂರ್ಯಾರಾಧನೆಯ ಮಾಡಿದನು.
  4. ಸತ್ರಾಜಿತ ಸೂರ್ಯಾರಾಧನೆ ಮಾಡಿ ಚಿನ್ನ ನೀಡುವ ಸ್ಯಮಂತಕಮಣಿ ಪಡೆದಿದ್ದ.
  5. ಮಯೂರನೆಂಬ ಕವಿ ಶಿಸೂರ್ಯಶತಕಷಿವೆಂಬ ಗ್ರಂಥ ಬರೆದು ಕಳೆದುಕೊಂಡ ಕಣ್ಣನ್ನು ಮತ್ತೆ ಪಡೆದನೆಂದು ಹೇಳುತ್ತಾರೆ.

ಆಚರಣೆಗಳು:

  1. ಬೆಳಗಿನ ಜಾವದಲ್ಲಿ ತಲೆ, ಭುಜ, ಕತ್ತು, ಕಂಕುಳು, ತೊಡೆ, ಪಾದ ಇತ್ಯಾದಿಗಳ ಮೇಲೆ ಎಕ್ಕದ ಎಲೆಯನ್ನು ಇಟ್ಟುಕೊಂಡು ಸ್ನಾನ ಮಾಡಿ, ಪೂರ್ವಾಭಿಮುಖವಾಗಿ ಸೂರ್ಯನಿಗೆ ನಮಸ್ಕರಿಸುವುದು ರೂಢಿಯಲ್ಲಿದೆ.
  2. ಇಂದು ವೇದ ಮಂತ್ರಗಳ ಭಾಗವಾದ ಕೃಷ್ಣ ಯಜುರ್ವೇದ ತೈತ್ತಿರೀಯಾರಣ್ಯಕದಲ್ಲಿ ಪ್ರಸ್ತಾಪಿಸಿರುವ ಅರುಣಪ್ರಶ್ನ ರೀತ್ಯಾ ಸೂರ್ಯ ನಮಸ್ಕಾರಗಳನ್ನು ಮಾಡುವುದು ಪದ್ಧತಿ.
  3. ಸೂರ್ಯನ ೧೦೮ ಹೆಸರುಗಳನ್ನು ಉಚ್ಚರಿಸಿ ನಮಸ್ಕಾರಗಳನ್ನು ಮಾಡುವರು. ಮನೆಯ ಒಂದು ಕೋಣೆಯಲ್ಲಿ ಪೂರ್ಣವಾಗಿ ಒಂದು ಸುತ್ತು ಪ್ರದಕ್ಷಿಣೆ ಹಾಕುತ್ತಾ ಅರುಣ ಪ್ರಶ್ನದ ಮಂತ್ರ ಪಠಿಸಿ ನಮಸ್ಕಾರ ಮಾಡುವರು. ಹೀಗೆ ೧೦೮ ನಮಸ್ಕಾರಗಳನ್ನು ಮಾಡುವರು. ೧೦೮ ಆಗದಿದ್ದವರು ೧೨ ನಾಮಗಳನ್ನು ಜಪಿಸಿ ನಮಸ್ಕಾರ ಮಾಡುವರು. ಅವಾವುದೆಂದರೆ  ಇಂದ್ರ, ಧಾತ, ಪರ್ಜನ್ಯ, ತ್ವಷ್ಟ, ಪುಷ, ಆರ್ಯಮ, ಭಾಗ, ವಿವಸ್ವನ, ವಿಷ್ಣು, ಅಂಶುಮಾನ, ವರುಣ ಮತ್ತು ಮಿತ್ರ. ಈ ಹನ್ನೆರಡು ಹೆಸರುಗಳು ಹನ್ನೆರಡು ತಿಂಗಳುಗಳ ಸೂಚಕ. ಇದೇ ತರಹ ಸೂರ್ಯನಿಗೆ ಇನ್ನೂ ಹನ್ನೆರಡು ಹೆಸರುಗಳಿವೆ. ಅವುಗಳು ಯಾವುವೆಂದರೆ, ಆದಿತ್ಯ, ಸವಿತಾ, ಸೂರ್ಯ, ಮಿಹಿರ, ಅರ್ಕ, ಪ್ರಭಾಕರ, ಮಾರ್ತಾಂಡ, ಭಾಸ್ಕರ, ಭಾನು, ಚಿತ್ರಭಾನು, ದಿವಾಕರ ಮತ್ತು ರವಿ.
  4. ೧೨ ಜನ ಋತ್ವಿಕರನ್ನು ಮನೆಗೆ ಕರೆಯಿಸಿ ನಮಸ್ಕಾರ ಮಾಡಿಸುವುದೂ ರೂಢಿಯಲ್ಲಿದೆ. ಆ ಹನ್ನೆರಡು ಜನ ಋತ್ವಿಕರ ಅರುಣ ಪ್ರಶ್ನ್ಯ ರೀತ್ಯಾ ಒಂದು ನಮಸ್ಕಾರವನ್ನು ೧೨ ಎಂದು ಲೆಕ್ಕಕ್ಕೆ ತೆಗೆದುಕೊಳ್ಳುವರು. ಆ ಸಂದರ್ಭದಲ್ಲಿ ಸೂರ್ಯನಿಗೆ ಪ್ರಿಯವಾದ ರವೆಯ ಪಾಯಸವನ್ನು ನೈವೇದ್ಯಕ್ಕಿರಿಸಿ, ಅದನ್ನು ಪ್ರಸಾದವಾಗಿ ಋತ್ವಿಕರಿಗೆ ಕೊಡುವರು ಮತ್ತು ಇತರರೂ ಸೇವಿಸುವರು.
  5. ರಥಸಪ್ತಮಿ ದಿವಸ ರೋಗ ನಿವಾರಣೆಯನ್ನು, ದೇಹದಾರ್ಢ್ಯ ಹಾಗೂ ಆರೋಗ್ಯವನ್ನು ಬಯಸುವವರು ಸೂರ್ಯನ ಆರಾಧನೆ ಮಾಡಬೇಕೆಂಬ ನಿಯಮವಿದೆ. ರೋಗಾಣುಗಳನ್ನು ನಾಶ ಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿವೆ. ಬೆಳಗಿನ ಹಾಗೂ ಸಂಜೆಯ ಸೂರ್ಯ ಕಿರಣಗಳಿಂದ ಆರೋಗ್ಯ ವರ್ಧನೆಯಾಗುತ್ತದೆ. ರೋಗದಿಂದ ನರಳುವವರು ಈ ದಿವಸ ಸೂರ್ಯಾರಾಧನೆಯನ್ನು ಮಾಡಿದರೆ ಬೇಗ ಗುಣಹೊಂದುತ್ತಾರೆ.
  6. ಯೋಗಾಸನಗಳಲ್ಲಿ ಮೊದಲ ಪ್ರಾಶಸ್ತ್ಯ ಸೂರ್ಯ ನಮಸ್ಕಾರಕ್ಕೆ ನೀಡಬಹುದು. ಏಕೆಂದರೆ ಈ ಅಭ್ಯಾಸವು ಮನಸ್ಸು, ದೇಹ ಮತ್ತು ಉಸಿರಾಟ ವ್ಯವಸ್ಥೆಗಳಿಗೆ ವಿಶೇಷವಾಗಿ ಪರಿಣಾಮಕಾರಿಯಾಗಿದೆ. ಭೂಮಿಯಲ್ಲಿನ ಸಕಲ ಜೀವರಾಶಿಗಳ ಚಟುವಟಿಕೆಗಳು ಸೂರ್ಯನಿಂದ ನಡೆಯುತ್ತಿವೆ. ಸೂರ್ಯನಿಲ್ಲದೆ ಜೀವನ ಅಸ್ತಿತ್ವ ಇರಲು ಸಾಧ್ಯವಿಲ್ಲ.
  7. ರಥಸಪ್ತಮಿ ಸೂರ್ಯೋದಯಕ್ಕೆ ಸರಿಯಾಗಿ ನದಿ, ಸಮುದ್ರ, ಸರೋವರ, ಸಂಗಮ ಮುಂತಾದೆಡೆ ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯ ನೀಡಿದರೆ ಪೂರ್ವ ಜನ್ಮದ ಪಾಪಗಳು ಹಾಗೂ ಈ ಜನ್ಮದ ಸಕಲ ದುಃಖಗಳು ಪರಿಹಾರವಾಗುತ್ತವೆ. ಸೂರ್ಯೋದಯಕ್ಕೆ ಮಾಡುವ ಮಾಘಸ್ನಾನ ತುಂಬಾ ಪುಣ್ಯಪ್ರದವಾದುದು. ಆಯುಷ್ಯ, ಆರೋಗ್ಯಸಂಪತ್ತು ಲಭಿಸುವುದಲ್ಲದೇ, ಸೂರ್ಯನ ಅನುಗ್ರಹ ಪ್ರಾಪ್ತಿಯಾಗುತ್ತದೆಂದು ಪುರಾಣದಲ್ಲಿದೆ.
  8. ಸೂರ್ಯನ ಆರಾಧನೆ ಋಗ್ವೇದದ ಕಾಲದಿಂದಲೂ ಪ್ರಚಲಿತದಲ್ಲಿದೆ. ಪ್ರಾಚೀನ ವೈದಿಕ ಧರ್ಮದಲ್ಲಿ ಸೂರ್ಯನಿಗೆ ಅತ್ಯಂತ ಪ್ರಾಮುಖ್ಯತೆ ಇತ್ತು. ಆತನ ಆರಾಧನೆಯಿಂದಲೇ ಸೌರ ಪಂಥ ಹುಟ್ಟಿದ್ದು. ಕಾಲ ಗಣನೆಯಲ್ಲಿ ಸೌರಮಾನ ಎಣಿಕೆ ಇಂದಿಗೂ ಇದೆ. ಗಾಯತ್ರಿ ಮಂತ್ರದಲ್ಲಿನ ಪ್ರತಿಶಬ್ದವು ಸೂರ್ಯನ ಸಾಮರ್ಥ್ಯಗಳನ್ನು ಕೊಂಡಾಡುವ ಉದ್ದೇಶದಿಂದಲೇ ಬಳಸಲಾಗಿದೆ.
  9. ನಿಯಮಬದ್ಧವಾದ ಉದಯ ಹಾಗೂ ಅಸ್ತಗಳ ಮೂಲಕ ನಮಗೆ ಶಿಸ್ತು ಬದ್ಧವಾದ ಕರ್ತವ್ಯ ಪ್ರಜ್ಞೆಯನ್ನು, ಚೈತನ್ಯವನ್ನು ತುಂಬುವ ಸೂರ್ಯನ ಪೂಜೆಯೇ ಈ ದಿವಸದ ಮುಖ್ಯ ಆಚರಣೆಯಾಗಿದೆ. ಈ ದಿನದಲ್ಲಿ ನಡೆಯುವ ಕೆಲಸ ಕಾರ್ಯಗಳು, ಕೋರಿಕೆಗಳು ಫಲಪ್ರದವಾಗಿರುತ್ತವೆ. ಸೂರ್ಯನ ಪ್ರಕಾಶ ಹೆಚ್ಚುತ್ತಿರುವುದರಿಂದ ಚಳಿಗಾಲದ ಚಳಿ ಮುದುಡಿಕೊಂಡು ಮೈಯಲ್ಲಿ ನವಚೇತನ ತುಂಬಿದಂತೆನಿಸುತ್ತದೆ. ಅಂಗಾಂಗಗಳಲ್ಲಿ ಕಾರ್ಯಕ್ಷಮವಾಗುತ್ತಿವೆ. ಈ ಉಪಕಾರಕ್ಕಾಗಿ ಸೂರ್ಯನನ್ನು ಪೂಜಿಸುವುದು ರೂಡಿಯಲ್ಲಿದೆ. ‌ ಆಹಾರಕ್ಕಾಗಿ, ರೋಗ ನಿವಾರಣೆಗಾಗಿ ಸೂರ್ಯೋಪಾಸನೆ ಮಾಡಬೇಕೆಂದು ಸ್ಕಂದ, ವರಾಹ ಪುರಾಣಗಳಲ್ಲಿ ಹೇಳಿದೆ.
See also  ಉಡುಪಿ ಪರ್ಯಾಯ ಉತ್ಸವ

ಎಕ್ಕದೆಲೆಗಳಿಂದ ಸ್ನಾನ ರಥಸಪ್ತಮಿ ದಿನ ವಿಶೇಷ:

ಎಕ್ಕದ ಎಲೆಯ ಸ್ನಾನದ ಮಹತ್ವ:

ಎಕ್ಕಗಿಡದ ಎಲೆಗಳನ್ನು ತಲೆಯ ಮೇಲಿಟ್ಟುಕೊಂಡು, ಈ ದಿನ ಅರುಣೋದಯಕ್ಕೆ ಎದ್ದು, ಬಿಳಿ ಎಕ್ಕದ ಒಂದು ಎಲೆಯನ್ನು ನೆತ್ತಿಯ ಮೇಲೆ, ಎರಡನ್ನು ಭುಜಗಳ ಮೇಲೆ, ಒಂದನ್ನು ಎದೆಯ ಮೇಲೆ, ಒಂದನ್ನು ಬೆನ್ನಿನ ಮೇಲೆ, ಒಂದನ್ನು ಹಣೆಯ ಮೇಲೆ, ಒಂದನ್ನು ಹೊಟ್ಟೆಯ ಮೇಲೆ. ಹೀಗೆ ಶರೀರದ ಮೇಲೆ ಎಕ್ಕದ ಎಲೆಗಳನ್ನು ಇರಿಸಿ ಸ್ನಾನ ಮಾಡಿದರೆ ಏಳು ಲೋಕಗಳಲ್ಲೂ ಮಾಡಿರುವ ಪಾಪಶೇಷಗಳು ಹೋಗಿ ಶುಭವುಂಟಾಗುವುದು. ಅಲ್ಲದೆ ಹಿಂದಿನ ಜನ್ಮಗಳಲ್ಲಿನ ಪಾಪ, ಸಪ್ತವ್ಯಾಧಿಗಳು, ಮಾತು, ಮನಸ್ಸು, ದೇಹದಿಂದ ಮಾಡಿದ ಅಪರಾಧಗಳು ನಾಶ ಹೊಂದಿ, ಮುಕ್ತಿ ಲಭ್ಯವಾಗುವುದು.

ರಥಸಪ್ತಮಿ ಸ್ನಾನ ಮಂತ್ರ – ಸ್ನಾನ ಮಾಡುವಾಗ ಹೇಳುವ ಧ್ಯಾನಶ್ಲೋಕ ಮತ್ತು ಮಂತ್ರಗಳು:

ರಥ ಸಪ್ತಮಿಯು ಯಾವಾಗಲೂ ಅರುಣುದೋಯ ವ್ಯಾಪಿನಿಯಾಗಿರುವುದರಿಂದ ಸರಿಯಾಗಿ ಸೂರ್ಯೋದಯಕ್ಕೆ ಆಚರಣೆ ಮಾಡಬೇಕು. ರಥಸಪ್ತಮಿಯಂದು ಸೂರ್ಯೋದಯ ಕಾಲಕ್ಕೆ ಸ್ನಾನ ಮಾಡಬೇಕು. ಏಳು ಎಕ್ಕೆಯ ಎಲೆಯನ್ನು ತಲೆ, ಹೆಗಲು, ಮೊಣಕಾಲು ಮತ್ತು ಪಾದಗಳ ಮೇಲೆ ಇಟ್ಟುಕೊಂಡು ಸ್ನಾನಮಾಡುವುದು ವಿಶೇಷ.

ಸ್ನಾನಕಾಲಕ್ಕೆ ಪಠಿಸಬೇಕಾದ ಮಂತ್ರಗಳು:

ಸಪ್ತ ಸಪ್ತ ಮಹಾಸಪ್ತ ಸಪ್ತದ್ವೀಪಾ ವಸುಂಧರಾ |

ಸಪಾರ್ಕಪರ್ಣಮಾದಾಯ ಸಪ್ತಮ್ಯಾಂಸ್ನಾನ ಮಾಚರೇತ್ ||

ಪ್ರಣವಸ್ಯ ಪರಬ್ರಹ್ಮಋಷಿ: ಪರಮಾತ್ಮಾ ದೇವತಾ., ……… ಶುಭೇಶೋಭನ ಮುಹೂರ್ತೇ ಅದ್ಯಬ್ರಹ್ಮಣ: ದ್ವಿತೀಯಪರಾರ್ಧೇ ಶ್ರೀಶ್ವೇತವರಾಹಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮಪಾದೇ ಭರತವರ್ಷೇ ದಂಡಕಾರಣ್ಯೇ ಗೋದಾವರ್ಯಾ: ದಕ್ಷಿಣೇತೀರೇ ಶಾಲೀವಾಹನಶಖೇ, ಬೌದ್ಧಾವತಾರೇ, ರಾಮಕ್ಷೇತ್ರೇ/ಪರಶುರಾಮಕ್ಷೇತ್ರೇ, ಅಸ್ಮಿನ್ ವರ್ತಮಾನೇ ಚಾಂದ್ರಮಾನೇನ ಶ್ರೀ _____ ಸಂವತ್ಸರೇ, ಉತ್ತರಾಯಣೇ, ಶಿಶಿರಋತೌ, ಮಾಘಮಾಸೇ, ಶುಕ್ಲಪಕ್ಷೇ ಸಪ್ತಮ್ಯಾಂ ಶುಭತಿಥೌ, ರಥಸಪ್ತಮೀ ಪ್ರಯುಕ್ತ, ಲಕ್ಷ್ಮೀ ವೆಂಕಟೇಶ/ನರಸಿಂಹ ಪ್ರೀತ್ಯರ್ಥಂ ಸ್ನಾನಮಹಂ ಕರಿಷ್ಯೇ.

ಯದ್ಯಜ್ಜನ್ಮಕೃತಂ ಪಾಪಂ ಮಯಾ ಸಪ್ತಸು ಜನ್ಮಸು |
ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ |
ಏತಜ್ಜನ್ಮಕೃತಂ ಪಾಪಂ ಜಚ್ಚ ಜನ್ಮಾಂತರಾರ್ಜಿತಂ |
ಮನೋವಾಕ್ಕಾಯಜಂ ಯಚ್ಚ ಜ್ಞಾತಾಜ್ಞಾತಂ ಚ ಯತ್ಪುನ: |
ಇತಿ ಸಪ್ತವಿಧಂ ಪಾಪಂ ಸ್ನಾನಾನ್ಮೇ ಸಪ್ತ ಸಪ್ತಕೇ |
ಸಪ್ತವ್ಯಾಧಿಸಮಾಯುಕ್ತಂ ಹರ ಮಾಕರಿ ಸಪ್ತಮಿ |
Surya ಅರ್ಘ್ಯ ಮಂತ್ರ –
ಸಪ್ತಸಪ್ತಿವಹಪ್ರೀತ ಸಪ್ತಲೋಕಪ್ರದೀಪನ |
ಸಪ್ತಮೀ ಸಹಿತೋ ದೇವ ಗೃಹಾಣಾರ್ಘ್ಯಂ ದಿವಾಕರ |

ಹೀಗೆ ಯಾರು ಈ ಮೂರು ಮಂತ್ರೋಚ್ಚಾರಣ ಪೂರಕ ಸ್ನಾನ ಮಾಡಿ ಸೂರ್ಯ ಮತ್ತು ಕೇಶವನ ದರ್ಶನವನ್ನು ಮಾಡುತ್ತಾರೋ, ಅವರು ಕ್ಷಣಮಾತ್ರದಲ್ಲಿ ಪಾಪಗಳಿಂದ ಮುಕ್ತರಾಗುವರು. (ನಿರ್ಣಯ ಸಿಂಧು)

ಸ್ನಾನಾನಂತರ ಸೂರ್ಯ ಮತ್ತು ಸಪ್ತಮಿ ತಿಥಿಗೆ ಅರ್ಘ್ಯ:

ಒಂದು ತಾಮ್ರದ ಕಲಶದಲ್ಲಿ (ತಂಬಿಗೆ) ಶುದ್ಧವಾದ ಜಲ, ಅಕ್ಷತೆ, ಚಂದನ, ಬಿಳಿಬಣ್ಣದ ಹೂವುಗಳು, ಗರಿಕೆ, ಎಕ್ಕೆಯ ಎಲೆಗಳನ್ನು ತುಂಬಿಸಿ, ಮುಂದಿನ ಮಂತ್ರಗಳಿಂದ ಸೂರ್ಯ ಮತ್ತು ಸೂರ್ಯ ಜನನೀಯಾದ ಸಪ್ತಮಿ ತಿಥಿಗೂ ಸಹ ಅರ್ಘ್ಯವನ್ನು ಕೊಡಬೇಕು.

ಸೂರ್ಯಾರ್ಘ್ಯ ಮಂತ್ರ:

ಸಪ್ತಸಪ್ತಿವಹ ಪ್ರೀತ ಸಪ್ತಲೋಕಪ್ರದೀಪನ |
ಸಪ್ತಮೀ ಸಹಿತೋ ದೇವ ಗೃಹಾಣಾರ್ಘ್ಯಂ ದಿವಾಕರ ||
ಎಂದು ಸೂರ್ಯನಿಗೆ ಅರ್ಘ್ಯವನ್ನು ಕೊಡಬೇಕು.

See also  ಹುಣ್ಣಿಮೆ | ಪೂರ್ಣಿಮೆ

ಸಪ್ತಮಿ ಅರ್ಘ್ಯಮಂತ್ರ:

ಜನನೀ ಸರ್ವಲೋಕಾನಾಂ ಸಪ್ತಮೀ ಸಪ್ತಸಪ್ತಿಕೇ |
ಸಪ್ತವ್ಯಾಹೃತಿಕೇ ದೇವಿ ನಮಸ್ತೇ ಸೂರ್ಯಮಂಡಲೇ ||

ಎಂದು ಸಪ್ತಮೀತಿಥಿಯ ಕುರಿತು ಅರ್ಘ್ಯ ಕೊಡಬೇಕು. ‌

ರಥಸಪ್ತಮಿಯ ಪರ್ವ ಎಲ್ಲಾ ರಾಶಿಯವರಿಗೂ ವಿಶೇಷ ಫಲಪ್ರದ. ಸೂರ್ಯನು ಯಾವುದೇ ಜಾತಕದಲ್ಲಿ ಆತ್ಮರೂಪಿಯಾಗಿ ಇರುತ್ತಾನೆ, ಆದ್ದರಿಂದ ಅವನ ಪ್ರೀತ್ಯರ್ಥ ಪೂಜಾಕಾರ್ಯ ಆರೋಗ್ಯ, ಸಂಪತ್ತು ಮತ್ತು ಆನಂದಪ್ರದ. ಇದು ರಥಸಪ್ತಮಿ ಮಾತ್ರವಲ್ಲ: ಆರೋಗ್ಯಸಪ್ತಮಿ.

ಭಾರತದಲ್ಲಿರುವ ಪ್ರಮುಖ ಸೂರ್ಯನ ದೇವಸ್ಥಾನಗಳು:

  1. ಒರಿಸ್ಸಾ ರಾಜ್ಯದಲ್ಲಿನ ಕೊನಾರ್ಕದ ಸೂರ್ಯನ ದೇವಸ್ಥಾನ
  2. ಗಯಾದ ದಕ್ಷಿಣಾರ್ಕ ದೇವಸ್ಥಾನ, ರಾಜಸ್ಥಾನದ ರಾನಕ್ಪುರ
  3. ಗುಜರಾತ್ ರಾಜ್ಯದ ಮೊಧೆರಾ, ಮಧ್ಯಪ್ರದೇಶದ ಉನಾವು
  4. ಅಸ್ಸಾಮಿನ ಗೋಲ್ಪರ, ಆಂಧ್ರಪ್ರದೇಶದ ಅರಸವಲ್ಲಿ
  5. ತಮಿಳುನಾಡಿನ ಕುಂಭಕೋಣಂನ ಸೂರ್ಯನ ದೇವಸ್ಥಾನ

( ಚರ್ಮ ರೋಗಗಳ ನಿವಾರಣೆಗಾಗಿ ಜನರು ಇಲ್ಲಿಗೆ ಹೋಗುವರು)

15Shares

Leave a Reply

error: Content is protected !!