ಬುದ್ಧ ಪೂರ್ಣಿಮೆಯ ಮಹತ್ವ

0Shares

ಬುದ್ಧ ಪೂರ್ಣಿಮೆ ಆಚರಣೆ ದಿನ : ಶುಕ್ರವಾರ, 5 ಮೇ 2023

ವಿಷ್ಣುವು ಬುದ್ಧನ ಅವತಾರದಲ್ಲಿ ಅವತರಿಸಿದ ದಿನವನ್ನು ಬುದ್ಧ ಪೂರ್ಣಿಮೆ ಅಥವಾ ಬುದ್ಧ ಜಯಂತಿ ಎಂದು ಆಚರಿಸಲಾಗುತ್ತದೆ. ವೈಶಾಖ ಮಾಸದ ಹುಣ್ಣಿಮೆ ದಿನದಂದು ಬುದ್ಧ ಪೂರ್ಣಿಮೆ ಆಚರಿಸಲಾಗುತ್ತದೆ. ಬುದ್ಧ ಪೂರ್ಣಿಮೆಯನ್ನು ಹಿಂದೂ ಧರ್ಮದಲ್ಲಿ ಮತ್ತು ಬೌದ್ಧ ಧರ್ಮದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಬುದ್ಧ ಪೂರ್ಣಿಮಾ ಹಬ್ಬವನ್ನು ಹಿಂದೂ ಧರ್ಮದಲ್ಲಿ ಪ್ರಮುಖವೆಂದು ಪರಿಗಣಿಸಲಾಗಿದೆ. ಕೆಲವು ದೇಶಗಳ ಬುದ್ಧನ ಅನುಯಾಯಿಗಳು ಈ ದಿನವನ್ನು ವೆಸೆಕ ಎಂದು ಕರೆಯುತ್ತಾರೆ. ವೆಸೆಕ ಎಂದರೆ ಏಪ್ರಿಲ್- ಮೇ ತಿಂಗಳ ಪವಿತ್ರ ದಿನ ಎಂದರ್ಥ.

ಬುದ್ಧ ಪೂರ್ಣಿಮೆ ಮಹತ್ವ

ಬೌದ್ಧ ಧರ್ಮದ ಸ್ಥಾಪಕ:

ಕಪಿಲವಸ್ತುವಿನಲ್ಲಿ ರಾಜ ಶುದ್ದೋಧನ ಹಾಗೂ ಮಾಯಾದೇವಿಗೆ (ಸಾಕುತಾಯಿ ಪ್ರಜಾಪತಿದೇವಿ) ವೈಶಾಖ ಶುದ್ಧ ಪೂರ್ಣಿಮೆಯಂದು (ಕ್ರಿಸ್ತಪೂರ್ವ 557 – 447) ಮಗನಾಗಿ ಸಿದ್ಧಾರ್ಥ ಜನಿಸಿದ. ಜಾತಕದ ಪ್ರಕಾರ ಮಹಾ ಚಕ್ರವರ್ತಿ ಅಥವಾ ಮಹಾನ್ ಯೋಗಿ ಆಗಬಹುದು ಎಂದಿದ್ದರಿಂದ ಅವನಿಗೆ ಲೌಕಿಕ ಕಷ್ಟಗಳು ತಿಳಿಯದಂತೆ ಬೆಳೆಸಲಾಯಿತು. ಕಷ್ಟಕಾರ್ಪಣ್ಯಗಳ ಅರಿವಿಲ್ಲದೆ ಸುಖವಾಗಿ ಅರಮನೆಯಲ್ಲಿ ಬದುಕುತ್ತಿದ್ದ ಸಿದ್ಧಾರ್ಥ ಒಂದು ದಿನ ಸೇವಕನ ಜತೆಗೂಡಿ ಹೊರ ಸಂಚಾರಕ್ಕಾಗಿ ಹೋಗಿದ್ದಾಗ ವೃದ್ಧ, ಶವ ಹಾಗೂ ರೋಗಿಯನ್ನು ಕಂಡು ಮರುಗಿದ. ಅದುವೇ ಆತನ ಯೋಚನಾ ಪರಿಧಿಯ ಬದಲಾವಣೆಗೆ ಪ್ರೇರಣೆಯಾಯಿತು. ಅರಸೊತ್ತಿಗೆಯನ್ನು ತ್ಯಜಿಸಿ, ರಾತ್ರೋರಾತ್ರಿ ಹೆಂಡತಿ, ಮಗನನ್ನು ಬಿಟ್ಟು ಲೋಕ ಸಂಚಾರಕ್ಕೆ ಹೊರಟ. ಮುಂದೆ ಜ್ಞಾನೋದಯವಾಗಿ ಬುದ್ಧನಾದ. ಕಾಲಾನಂತರದಲ್ಲಿ ಬೌದ್ಧ ಧರ್ಮವನ್ನು ಸ್ಥಾಪಿಸಿದ.

ಆದರ್ಶಗಳ ಪ್ರೇರಕ ಶಕ್ತಿ:

ಸಮಾಜದಲ್ಲಿ ತುಳಿತಕ್ಕೊಳಗಾದವರ ಕಣ್ಣೀರು ಒರೆಸಿದ. ದ್ವೇಷ, ಅಸೂಯೆಗಳನ್ನು ನಿರ್ನಾಮ ಮಾಡಿ ಸಮಾಜದಲ್ಲಿ ಪ್ರೀತಿಯ ಚಿಲುಮೆಯನ್ನು ಉಕ್ಕಿಸಿದ. ಮನುಷ್ಯನನ್ನು ಅತಿಯಾಗಿ ಪ್ರೀತಿಸಿದ ನಿಜವಾದ ವಿಶ್ವಮಾನವ ಬುದ್ಧ. ಹುಟ್ಟು ಮತ್ತು ಸಾವು ಈ ಎರಡು ಬಂಧನಗಳಲ್ಲಿ ನಾವು ಗಳಿಸಬೇಕಾದದ್ದು ಅಪ್ರತಿಮವಾದದ್ದು ಪ್ರೀತಿಯೊಂದೇ. ಮನುಕುಲ ಅನುಭವಿಸುತ್ತಿರುವ ಕಷ್ಟಗಳಿಗೆ ಸ್ಪಂದಿಸುವುದೇ ಧರ್ಮದ ನಿಜವಾದ ಅರ್ಥ. ಧರ್ಮವು ಒಬ್ಬರ ಕಷ್ಟಗಳಿಗೆ ಇನ್ನೊಬ್ಬರು ಸ್ಪಂದಿಸುವುದೇ ಆಗಿರುತ್ತದೆ ಎಂದು ಬೋಧಿಸಿದ. ಬುದ್ದಚಿಂತನೆಗಳಿಗೆ ಮಾರು ಹೋಗದವರೇ ಇಲ್ಲ. ಸ್ವಾಮಿ ವಿವೇಕಾನಂದ, ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್ ಮೊದಲಾದವರ ವೈಚಾರಿಕ ಚಿಂತನೆಗಳಿಗೆ ಬುದ್ಧನ ತತ್ವ, ಆದರ್ಶಗಳು ಮೂಲ ಪ್ರೇರಕ ಶಕ್ತಿಯಾಗಿದ್ದವು.

ಬುದ್ಧ ಅಹಿಂಸೆಯನ್ನು ಪ್ರತಿಪಾದಿಸಿದನು. ನಾವು ನಮ್ಮ ದೇಹ, ಪ್ರಾಣವನ್ನು ಪ್ರೀತಿಸುವಂತೆ ಇತರೆ ಪ್ರಾಣಿಗಳನ್ನು ಪ್ರೀತಿಸಬೇಕೆಂದು ಹೇಳಿ ನಿಜಪ್ರೀತಿಯ ಅಂತಃಕರಣದ ಬೋಧನೆಯನ್ನು ಮಾಡುತ್ತಾನೆ. ಬುದ್ಧನು ತನ್ನ ಸ್ವಸಾಮರ್ಥ್ಯದಿಂದ ಅತ್ಯುನ್ನತ ಜ್ಞಾನ ಪಡೆದು ಜಗತ್ತಿನ ಪರಮ ಸತ್ಯವನ್ನು ಬೋಧಿಸಿದ. ಸಾಗರದಷ್ಟು ದುಃಖ ಅನುಭವಿಸುವ ಜನರೇ ಹೆಚ್ಚಿರುವ ಈ ಜಗತ್ತಿನಲ್ಲಿ ಬುದ್ಧನ ಉಪದೇಶಗಳನ್ನು ಒಮ್ಮೆ ಓದಿದರೆ ಸಾಕು ಬದುಕಿನ ನಿಜವಾದ ಅರ್ಥ ತಿಳಿಯುತ್ತದೆ.

See also  ಪರಶುರಾಮ ಜಯಂತಿಯ ಮಹತ್ವ

ಏಷ್ಯಾದ ಬೆಳಕು ಎಂದೇ ಪ್ರಸಿದ್ಧನಾದ ಬುದ್ಧ:

ಬುದ್ಧನ ಅನೇಕ ಬೋಧನೆಗಳು ಪ್ರೀತಿಯ ಮಹತ್ವ ಹಾಗೂ ಜಾಗೃತ ಮನಸ್ಥಿತಿಯ ಬಗ್ಗೆ ತಿಳಿವಳಿಕೆ ನೀಡುತ್ತವೆ. ಬುದ್ಧ ಎಂದರೆ ನಿದ್ದೆಯಿಂದ ಎದ್ದವನು ಜಾಗೃತನಾದವನು, ಜ್ಞಾನಿ, ವಿಕಸಿತ ಎಂದು ಅರ್ಥ. ಬೌದ್ದ ಧರ್ಮದ ಮೂಲಕ ವಿಶ್ವಕ್ಕೆ ಜ್ಞಾನ, ಮಾನವೀಯತೆ ಹಾಗೂ ಶಾಂತಿಯ ಸಂದೇಶ ನೀಡಿ ಏಷ್ಯಾದ ಬೆಳಕು ಎಂದೇ ಪ್ರಸಿದ್ಧನಾದ ಬುದ್ಧ. ಬುದ್ಧ ಭೂಮಿಯಲ್ಲಿಯೇ ಇದ್ದು, ಇಲ್ಲಿನ ಜನರ ಕಷ್ಟಗಳನ್ನು ಅರಿತು ಅವುಗಳಿಗೆ ಪರಿಹಾರ ಹುಡುಕಿದಾತ. ಇಂತಹವರ ಜೀವನವನ್ನು ಅರಿಯುವುದು, ಸಾಧನೆಯ ಬಗ್ಗೆ ತಿಳಿಯುವುದು ಅತ್ಯಗತ್ಯ. ಪ್ರಸ್ತುತ ಪ್ರಕ್ಷುಬ್ಧ ವಾತಾವರಣದಲ್ಲಿ ಬುದ್ಧನ ಆಚಾರ, ವಿಚಾರಗಳು ಹೆಚ್ಚು ಪ್ರಸ್ತುತ ಹಾಗೂ ಅನಿವಾರ್ಯವೂ ಹೌದು.

ಬುದ್ಧ ಪೂರ್ಣಿಮೆಯ ದಿನದಂದು ಗಂಗಾ ಸ್ನಾನದ ಮಹತ್ವ:

ಹಿಂದೂ ಧರ್ಮದಲ್ಲಿ , ಪ್ರತಿ ತಿಂಗಳ ಹುಣ್ಣಿಮೆಯನ್ನು ಭಗವಾನ್ ವಿಷ್ಣುವಿಗೆ ವಿಶೇಷವೆಂದು ಪರಿಗಣಿಸಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ವೈಶಾಖ ಮಾಸದಲ್ಲಿ ಬರುವ ಹುಣ್ಣಿಮೆಯಂದು , ಸೂರ್ಯನು ಮೇಷ ರಾಶಿಯ ಉತ್ಕೃಷ್ಟ ಚಿಹ್ನೆಯಲ್ಲಿದ್ದಾನೆ ಮತ್ತು ಚಂದ್ರನು ತುಲಾ ರಾಶಿಯಲ್ಲಿಯೂ ಇರುತ್ತಾನೆ. ಬುದ್ಧ ಪೂರ್ಣಿಮಾ ದಿನದಂದು ಗಂಗಾ ಸ್ನಾನ ಮಾಡುವುದರಿಂದ ಅನೇಕ ಜನ್ಮಗಳ ಪಾಪಗಳು ನಾಶವಾಗುತ್ತವೆ ಎಂದು ನಂಬಲಾಗಿದೆ .

0Shares

Leave a Reply

error: Content is protected !!