ಬಯಲು ಗಣಪನ ಆಲಯ ಸೌತಡ್ಕದ ಪುರಾಣ:
ಸುಮಾರು 8೦೦ ವರ್ಷಗಳ ಹಿಂದೆ ಈ ಪ್ರದೇಶದ ಸಮೀಪದಲ್ಲಿ ರಾಜವಂಶಕ್ಕೊಳಪಟ್ಟ ದೇವಾಲಯವು ಸಂಗ್ರಾಮವೊಂದರಲ್ಲಿ ಅರೆಸೊತ್ತಿಗೆ ನಾಶವಾಗಿ ದೇವಾಲಯ ಧ್ವಂಸವಾಗಿತ್ತು. ಈ ದೇವಾಲಯದಲ್ಲಿ ಪೂಜಿಸಲಾಗುತ್ತಿದ್ದ ಈ ಗಣಪತಿ ವಿಗ್ರಹವು ದನಗಳನ್ನು ಕಾಯುತ್ತಿದ್ದ ಗೋಪಾಲ ಬಾಲಕರಿಗೆ ಗೋಚರವಾಯ್ತು. ಈ ಬಾಲಕರೆಲ್ಲರೂ ಸೇರಿಕೊಂಡು ಗಣಪತಿ ವಿಗ್ರಹವನ್ನು ಎತ್ತಿಕೊಂಡು ದಾರಿಯುದ್ದಕ್ಕೂ ಭಜನೆ ಪೂಜೆಗಳನ್ನು ಮಾಡುತ್ತಾ ಈಗ ಇರುವ ಮರದ ಬುಡದಲ್ಲಿ ಕಾಟುಕಲ್ಲುಗಳ ಕಟ್ಟೆ ಇಟ್ಟು ತಾವು ಬೆಳೆಯುತ್ತಿರುವ ಸೌತೆ ಮಿಡಿಗಳನ್ನು ಪ್ರತಿ ದಿನ ನೈವೇದ್ಯವನ್ನಾಗಿ ಅರ್ಪಿಸಿ ಭಜನೆ ಪೂಜೆಗಳನ್ನು ಮಾಡತೊಡಗಿದರು. ಅಂದಿನಿಂದ ಈ ಕ್ಷೇತ್ರಕ್ಕೆ ಸೌತಡ್ಕ ಎಂದು ಹೆಸರು ಬಂತು. (ಸೌತೆ + ಅಡ್ಕ : ಅಡ್ಕ ಎಂದರೆ ಬಯಲು ಎಂದರ್ಥ)
ದೇವಸ್ಥಾನಗಳು ವಾಸ್ತು ಶಿಲ್ಪಕ್ಕನುಗುಣವಾಗಿ ಗೋಪುರ ಗರ್ಭ ಗುಡಿಗಳನ್ನು ರಚಿಸಿ ಪೂರ್ವಾಭಿಮುಖವಾಗಿ ದೇವರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವ ಪೂರ್ವ ಸಂಪ್ರದಾಯ ನಿಯಮವಿದ್ದು, ಸೌತಡ್ಕ ಗಣಪನು ಈ ಎಲ್ಲಾ ಸಂಪ್ರಾದಯಗಳನ್ನು ತಿರಸ್ಕರಿಸಿ, ಪ್ರಕೃತಿ ಸಂದರ ತಾಣದಲ್ಲಿ ಅಗ್ನೇಯ ಮುಖವಾಗಿ, ಬಯಲೇ ಆಲಯಾವಾಗಿರಿಸಿಕೊಂಡು ಬಡವ ಶ್ರೀಮಂತರೆಂಬ ತಾರತಮ್ಯವಿಲ್ಲದೆ, ಜಾತಿ, ಮತ ಬೇಧವೆಣಿಸದೆ ಮಾನವರಿಗೂ, ಸಕಲ ಜೀವ ರಾಶಿಗಳಿಗೂ ಅಭಯ ಹಸ್ತನಾಗಿ ಹಗಲು ರಾತ್ರಿ ಅನುಗ್ರಹಿಸುತ್ತಾ ರಕ್ಷಿಸಿಕೊಂಡು ಬರುತ್ತಿರುವುದು ಸೌತಡ್ಕ ಮಹತ್ವ ಮೂಡಿಸುವ ವಿಶಿಷ್ಟ ಸಂಪ್ರದಾಯವಾಗಿರುತ್ತದೆ.
ಹಿಂದೆ ಈ ಪರಿಸರದ ಶ್ರೀಮಂತ ಬ್ರಾಹ್ಮಣ ಭಕ್ತರೊಬ್ಬರು ಗಣೇಶನಿಗೆ ದೇವಸ್ಥಾನ ನಿರ್ಮಿಸಲು ತೀರ್ಮಾನಿಸಿ ಕೆಲಸ ಪ್ರಾರಂಭ ಮಾಡುವಷ್ಟರಲ್ಲಿ ಗಣಪತಿಯು ದನ ಕಾಯುವ ಹುಡುಗನ ರೂಪದಲ್ಲಿ ಆ ಬ್ರಾಹ್ಮಣನಿಗೆ ಕನಸಿನಲ್ಲಿ ಕಾಣಿಸಿಕೊಂಡು ದೇಗುಲ ನಿರ್ಮಿಸುವುದಾದರೆ, ಅದರ ಗೋಪುರವು ರಾತ್ರಿ ಬೆಳಗಾಗುವುದರೊಳಗೆ ತಂದೆಯಾದ ಕಾಶಿ ವಿಶ್ವನಾಥನಿಗೆ ಕಾಣುವಷ್ಟು ಎತ್ತರದಲ್ಲಿರಬೇಕೆಂದು ಕಟ್ಟಾಜ್ಞೆ ನೀಡಿರುವುದರಿಂದ ಆ ಬ್ರಾಹ್ಮಣನಿಗೆ ಆ ಸವಾಲನ್ನು ಎದುರಿಸಲು ತೀರ ಅಸಾಧ್ಯವೆಂದು ಮನಗಂಡು ದೇಗುಲ ನಿರ್ಮಾಣದ ಯೋಜನೆಯನ್ನು ಕೈ ಬಿಡಲಾಯಿತು.
ಅಪಟಲ ಪ್ರೇಮ ಪಟಲಮ್ (ಮನೆಯೊಲ್ಲದವನ ಪ್ರೀತಿಯ ನೆಲೆ) ಎಂದು ಕವಿಗಳು ವರ್ಣಿಸಿರುವಂತೆ, ಗಣೇಶನು ಯಾವುದೇ ಆಡಂಬರಗಳನ್ನು ಸ್ವೀಕರಿಸುವುದಿಲ್ಲ, ಪ್ರಕೃತಿಯ ಮಡಿಲಲ್ಲಿ ಬೆಳೆದು ನಿಂತಿರುವ ಗಿಡ ಮರಗಳ ನೆರಳೇ ಆಸರೆ, ತಂಪಾದ ವನ ಸಿರಿಯ ಮಧ್ಯೆ ಚಿಲಿಪಿಲಿಗುಟ್ಟುವ ಪಕ್ಷಿಗಳ ಹಾಡು, ಗಾನ ಕೋಗಿಲೆಯ ನಾದ ಸ್ವರ, ಹಚ್ಚ ಹಸುರಿನ ಎಲೆಗಳ ಮೇಲೆ ಸೂರ್ಯ ಕಿರಣಕ್ಕೆ ಚಿನ್ನದ ಮೊಗ್ಗೆಯಂತೆ ಮಿನುಗುವ ಇಬ್ಬನಿಯ ತುಣುಕುಗಳು, ಸುತ್ತಲಿನ ಬಯಲಿನಲ್ಲಿ ಸಂತಸದಿ ಕುಣಿದಾಡುತ್ತಿರುವ ಗೋವುಗಳು, ಹೀಗೆ ಹತ್ತು ಹಲವು ಪ್ರಕೃತಿ ಸೌಂದರ್ಯ ರಾಶಿಗಳ ಮಧ್ಯೆ ಗೋಪಾಲ ಬಾಲಕರು ನೈವೇಧ್ಯವಾಗಿ ತಂದೊಪ್ಪಿಸುವ ಸೌತೆ ಮಿಡಿಗಳನ್ನು ಸ್ವೀಕರಿಸುತ್ತಾ ಸಂತಸದಿಂದ ನೆಲೆಯಾಗಿರುವ ಗಣೇಶನು ಸೌತಡ್ಕ ಪುಣ್ಯ ಕ್ಷೇತ್ರದಲ್ಲಿ ಹೊರತು ಬೇರೆಲ್ಲಿಯೂ ಕಾಣಸಿಗಲಾರದು.
ಇಲ್ಲಿಗೆ ಬರುವ ಭಕ್ತರು ತಮ್ಮ ಇಚ್ಚೆಗಳನ್ನು ಹೇಳಿಕೊಂಡು ಇಲ್ಲಿ ಒಂದು ಗಂಟೆ ಕಟ್ಟಿದರೆ 45 ದಿನಗಳ ಒಳಗಾಗಿ ಅವರ ಇಚ್ಛೆ ಪೂರ್ಣಗೊಳ್ಳುವುದು ಎಂಬ ನಂಬಿಕೆ ಭಕ್ತರದು. ಈ ಗಂಟೆ ಹರಕೆಯೇ ಇಲ್ಲಿಯ ವಿಶೇಷ. ಆ ಕಾರಣದಿಂದ ಈ ಗಣಪತಿಯ ವಿಗ್ರಹದ ಎದುರಿಗೆ ಸುತ್ತಮುತ್ತಲೂ ಸಾಕಷ್ಟು ವಿವಿಧ ಗಾತ್ರದ ಗಂಟೆಗಳನ್ನು ನಾವು ವೀಕ್ಷಿ$ಸಬಹುದಾಗಿದೆ. ಧನವನ್ನು ಅರಸಿ ಬರುವವರಿಗೆ ಧನ, ಸಂತಾನ ಭಾಗ್ಯ ಅರಸಿ ಬರುವವರಿಗೆ ಸಂತಾನ ಭಾಗ್ಯ ಕರುಣಿಸುವ ಈ ಗಣಪತಿಯ ಸನ್ನಿಧಾನದಲ್ಲಿ 10,000 ಮಂತ್ರಗಳಿಂದ ಕೂಡಿದ ಅಥರ್ವಶಿರ್ಷಹವನ ಮಾಡುವುದರಿಂದ ಎಲ್ಲಾ ಇಷ್ಟಾರ್ಥಗಳು ಪೂರ್ಣಗೊಳ್ಳುತ್ತವೆ ಎನ್ನುವ ನಂಬಿಕೆ ಇದೆ. ಇಲ್ಲಿರುವ ಗಣಪನಿಗೆ ದರ್ಬೆಯಿಂದ ಪೂಜಿಸಿದರೆ ಅವನು ಪ್ರಸನ್ನನಾಗುತ್ತಾನೆ. ಇನ್ನು ಇಲ್ಲಿ ಬರುವ ಭಕ್ತರು ಗಣಪತಿಗೆ ಸೌತೇಕಾಯಿಯ ನೇವೆದ್ಯವನ್ನೂ ಅರ್ಪಿಸುತ್ತಾರೆ. ಇನ್ನು ಇಲ್ಲಿಗೆ ಬರುವ ಭಕ್ತರಿಗೆ ಎಲ್ಲಾ ದಿನಗಳಲ್ಲಿಯೂ ಅನ್ನದಾನದ ವ್ಯವಸ್ಥೆ ಕೂಡ ಇದೆ. ಹಾಗೆ ಪ್ರಸಾದದ ರೂಪದಲ್ಲಿ ಸಿಹಿಯಾದ ಅವಲಕ್ಕಿಯನ್ನು ಗಣಪತಿಗೆ ನೈವೆದ್ಯ ಮಾಡಿ ಅದನ್ನೇ ಭಕ್ತಾದಿಗಳಿಗೆ ಹಂಚಲಾಗುತ್ತದೆ.
ಪ್ರತಿ ವರ್ಷ ಜನವರಿ ತಿಂಗಳಲ್ಲಿ ಈ ದೇವಸ್ಥಾನದಲ್ಲಿ ಮಹಾಪೂಜೆ ನಡೆಯುತ್ತದೆ. ಆ ಸಮಯದಲ್ಲಿ ಸಾಕಷ್ಟು ಭಕ್ತರು ಆಗಮಿಸಿ ಮಹಾಗಣಪತಿಗೆ ಹರಕೆ ತೀರಿಸಿ ಅವನ ದರ್ಶನ ಪಡೆದು ಧನ್ಯರಾಗುತ್ತಾರೆ. ಇನ್ನು ಹತ್ತಿರದಲ್ಲಿಯೇ ಕಪಿಲಾ ನದಿ ತೀರ ವಿರುವುದರಿಂದ ಈ ಪ್ರದೇಶ ಸದಾಕಾಲ ಸೊಂಪಾಗಿ ಹಸಿರಿನಿಂದ ಕೂಡಿದ್ದು ಪ್ರಕೃತಿ ಸೌಂದರ್ಯ ಎಲ್ಲರ ಮನಸ್ಸಿಗೆ ಶಾಂತಿ ನೆಮ್ಮದಿ ನೀಡುತ್ತದೆ.
ತಲುಪುವ ಮಾರ್ಗ:
ಧರ್ಮಸ್ಥಳದಿಂದ 16 ಕಿ.ಮೀ, ಸುಬ್ರಹ್ಮಣ್ಯದಿಂದ 45 ಕಿ.ಮೀ, ಮಂಗಳೂರಿನಿಂದ 82 ಕಿ.ಮೀ ಮತ್ತು ಕೊಕ್ಕಡದಿಂದ ಕೇವಲ 2 ಕಿ.ಮೀ ಅಂತರದಲ್ಲಿರುವ ಈ ಕ್ಷೇತ್ರಕ್ಕೆ ಸಾಕಷ್ಟು ಸಾರಿಗೆ ಬಸ್‌ಗಳ ವ್ಯವಸ್ಥೆ ಇದೆ.