ರಚನೆ: ಜಗನ್ನಾಥದಾಸರು
ಪ್ರಾಣದೇವ ನೀನಲ್ಲದೆ ಕಾಯ್ವರ ಕಾಣೆನು ಜಗದೊಳಗೆ ಮುಖ್ಯ || ಪ ||
ಪ್ರಾಣಾಪಾನ ವ್ಯಾನೋದಾನ ಸಮಾನನೆನಿಪ ಮುಖ್ಯ || ಅ.ಪ ||
ವಾಸವ ಕುಲಿಶದಿ ಘಾಸಿಸೆ ಜೀವರ ತ್ರಾಸ ನಿರೋಧಿಸಿದೆ |
ಆ ಸಮಯದಿ ಕಮಲಾಸನ ಪೇಳಲು ನೀ ಸಲಹಿದೆ ಜಗವಾ || ೧ ||
ಅಂಗದ ಪ್ರಮುಖ ಪ್ಲವಂಗರು ರಾಮನ ಅಂಗನೆಯಳ ಹುಡುಕೆ |
ತಿಂಗಳು ಮೀರಲು ಕಂಗೆಡೆ ಕಪಿವರ ಪುಂಗವ ಪಾಲಿಸಿದೇ || ೨ ||
ಪಾವಿನ ಪಾಶದಿ ರಾವಣಿ ನೀಲ ಸುಗ್ರೀವ ಮುಖ್ಯರ ಬಿಗಿಯೇ |
ಸಾವಿರಗಾವುದ ದೂರದಲ್ಲಿದ ಸಂಜೀವನವ ತಂದೆ || ೩ ||
ಪರಿಸರ ನೀನಿರೆ ಹರಿತಾನಿಪ್ಪನು ಇರದಿರೆ ತಾನಿರನು |
ಕರಣ ನಿಯಾಮಕ ಸುರರ ಗುರುವೇ ನೀ ಕರುಣಿಸೆ ಕರುಣಿಸುವಾ || ೪ ||
ಭೂತೇಂದ್ರಿಯಂಗಳಧಿನಾಥ ನಿಯಾಮಕ ನಾತೈ ಜಸಹರನ |
ತಾತನೆನಿಪ ಜಗನ್ನಾಥ ವಿಠ್ಠಲನ ಪ್ರೀತಿ ಪಾತ್ರನಾದೆ || ೫ ||