ಪರ್ಜನ್ಯ ಎಂಬುದು ಮೂಲತ: ಸಂಸ್ಕ್ರತ ಪದ. ಪರ್ಜನ್ಯ ಹೋಮ ಎಂಬುದು ಮಳೆಗಾಗಿ ಮಳೆಯ ದೇವತೆಯನ್ನು ಆರಾದಿಸುವ ಒಂದು ಪೂಜಾ ಕ್ರಮ. ಹಿಂದೂ ಪುರಾಣಗಳಲ್ಲಿ ಪರ್ಜನ್ಯದ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ. ಹಿಂದೂ ಪುರಾಣಗಳ ಪ್ರಕಾರ ಮಳೆಯ ಅದಿದೇವತೆ ವರುಣ. ಆತ ನೀರಿನ, ಮಳೆಯ, ಆಗಸದ ದೇವತೆ. ಹಾಗಾಗಿ, ದೇಶದ ಯಾವುದಾದರೂ ಒಂದು ಪ್ರದೇಶದಲ್ಲಿ ಬರಗಾಲ ಸಂಭವಿಸಿದಾಗ, ಮಳೆಯ ತೀವ್ರ ಕೊರತೆ ಉಂಟಾದಾಗ ಅಥವಾ ಸಕಾಲಕ್ಕೆ ಬರಬೇಕಾದ ಮಳೆ ಬಾರದೇ ಇದ್ದಾಗ ಆಸ್ತಿಕರು ಪರ್ಜನ್ಯದ ಮೊರೆ ಹೋಗುತ್ತಾರೆ. ತಮ್ಮ ನೆಚ್ಚಿನ ದೇವರಿಗೆ ಪರ್ಜನ್ಯ ನೆರವೇರಿಸುವ ಮೂಲಕ ಮಳೆಗಾಗಿ ಪ್ರಾರ್ಥಿಸುತ್ತಾರೆ. ಪರ್ಜನ್ಯ ನಡೆಸುವ ವಿಧಾನ, ಶಾಸ್ತ್ರ, ಪದ್ಧತಿಗಳು ಸಾಧಾರಣವಾಗಿ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತವೆ. ಅದೇ ರೀತಿ ಜನರ ಆಚರಣೆಯ ಪದ್ಧತಿಯೂ ವಿಭಿನ್ನ.
ಕೆಲವು ಪ್ರದೇಶಗಳಲ್ಲಿ ಭಕ್ತರು ತಮ್ಮ ಇಷ್ಟದೇವರಿಗೆ ಪ್ರಿಯವಾದ ಮಂತ್ರ ಪಠಿಸುತ್ತಾ, ತಲೆ ಮೇಲಿಂದ ನೀರು, ಇನ್ನಿತರ ದ್ರವ್ಯಗಳಿಂದ ಅಭಿಷೇಕ ಮಾಡುತ್ತಾರೆ. ಹೀಗೆ ಅಭಿಷೇಕ ಮಾಡಿದ ನೀರು ದೇವರ ತಲೆ ಮೇಲಿಂದ ಹರಿದು ಬಂದು ಸಮೀಪದ ಕೆರೆ, ನದಿಗಳನ್ನು ಸೇರಿದರೆ ದೇವ ಸಂಪ್ರೀತನಾಗಿ ಮಳೆ ಸುರಿಸುತ್ತಾನೆ ಎಂಬುದು ನಂಬಿಕೆ. ಗುಜರಾತ, ಮದ್ಯಪ್ರದೇಶ ಸೇರಿದಂತೆ ದೇಶದ ಇನ್ನಿತರ ಕೆಲವು ಭಾಗಗಳಲ್ಲಿ ಪರ್ಜನ್ಯದ ಆಚರಣೆ ಸ್ವಲ್ಪ ವಿಭಿನ್ನ. ದೊಡ್ಡ ತಾಮ್ರದ ಪಾತ್ರೆಯಲ್ಲಿ ಪನ್ನೀರನ್ನು ತುಂಬಿ, ಅದಕ್ಕೆ ಹೂವು, ಗಂಧ, ಕುಂಕುಮ, ಅರಿಷಿಣಗಳನ್ನು ಹಾಕಿ ಪೂಜಿಸುತ್ತಾರೆ. ನಂತರ ಆ ನೀರಿನಲ್ಲಿ ಕೂರುವ ವೈದಿಕರು ವರುಣದೇವನನ್ನು ಸ್ತುತಿಸುತ್ತಾರೆ. ಈ ಪೂಜೆಯಿಂದ ಸಂಪ್ರೀತನಾಗುವ ವರುಣದೇವ ಮಳೆ ಸುರಿಸುತ್ತಾನೆ ಎಂಬುದು ಭಕ್ತರ ನಂಬಿಕೆ.
ಸಾಧಾರಣವಾಗಿ ಆಯಾ ದೇವತೆಗಳಿಗೆ ಇಷ್ಟವೆಂದು ವೈದಿಕ ಪುರಾಣಗಳಲ್ಲಿ ಉಲ್ಲೇಖವಾಗಿರುವ ಮಂತ್ರಗಳನ್ನೇ ವೈದಿಕರು ಪಠಿಸುತ್ತಾರೆ. ಉದಾಹರಣೆಗೆ ಶಿವನಿಗೆ ರುದ್ರಪಠಣ, ದೇವಿಗೆ ಶ್ರೀ ಸೂಕ್ತ, ದುರ್ಗಾ ಸೂಕ್ತ ಹಾಗೂ ದೇವಿ ಸೂಕ್ತ. ವಿಷ್ಣುವಿಗೆ ಪುರುಷ ಸೂಕ್ತ, ಗಣಪತಿಗೆ ಉಪನಿಷತ್ತು ಇತ್ಯಾದಿ.
ಹಿಂದಿನ ವೇದ, ಪುರಾಣಗಳ ಕಾಲದಿಂದಲೂ ಪರ್ಜನ್ಯದ ಆಚರಣೆ ಅಸ್ತಿತ್ವದಲ್ಲಿದೆ. ಶತ, ಶತಮಾನಗಳಿಂದ ಈ ಆಚರಣೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ವಿವಿಧ ಶಾಸ್ತ್ರ, ಪುರಾಣಗಳು ಪರ್ಜನ್ಯಕ್ಕೆ ವಿವಿಧ ರೀತಿಯ ಅರ್ಥ, ವ್ಯಾಖ್ಯಾನ ನೀಡಿವೆ. ಋಗ್ವೇದದ ಪ್ರಕಾರ, ಪರ್ಜನ್ಯವೆಂದರೆ ಮಳೆಯ ದೇವರು ಎಂದರ್ಥ. ಮಳೆಗಾಗಿ ವರುಣದೇವನನ್ನು ಪ್ರಾರ್ಥಿಸುವ ಮಂತ್ರಗಳು ಅಥರ್ವಣ ವೇದದಲ್ಲಿ ನಮಗೆ ಕಾಣ ಸಿಗುತ್ತವೆ.
ಐದನೇ ಮನ್ವಂತರದ ಪ್ರಕಾರ ಪರ್ಜನ್ಯ ಎಂಬಾತ ಸಪ್ತ ಋಷಿಗಳಲ್ಲಿ ಒಬ್ಬ. ಹರಿವಂಶ ಹೇಳುವಂತೆ ಈತ ಒಬ್ಬ ಗಂಧರ್ವ. ೭೨ ರಶ್ಮಿಗಳ ಪೈಕಿ ಪರ್ಜನ್ಯ ಕೂಡ ಒಂದು ಹಾಗೂ ಇದು ಶ್ರವಣ ತಿಂಗಳಿನಲ್ಲಿ ಪ್ರಕಾಶಿಸುತ್ತದೆ. ವಿಷ್ಣು ಪುರಾಣದ ಪ್ರಕಾರ, ಈತ ೧೨ ಮಾಸಗಳಲ್ಲಿ ಒಂದಾದ ಕಾರ್ತಿಕದ ಪೋಷಕನಾದ ಆದಿತ್ಯ. ಪರ್ಜನ್ಯನನ್ನು ಪೃಥ್ವಿಯ ಪತಿ ಎಂದೂ ಸಾಂಕೇತಿಕವಾಗಿ ಗುರುತಿಸಲಾಗುತ್ತದೆ. ಈತ ಲೋಕರಕ್ಷಕನಾದ ಲೋಕಪಾಲನೂ ಹೌದು.